ಅನುಕೂಲಸಿಂಧು ರಾಜಕಾರಣದ ಸಂಕೇತ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಂಕೇತಿಕವಾದ ಕ್ರಿಯೆಗಳಿಗೂ ಒಂದು ಮಹತ್ವವಿದೆ. ಅಭಿವೃದ್ಧಿ ಕಾಮಗಾರಿಗಳನ್ನು ಮುಖ್ಯಮಂತ್ರಿ ಖುದ್ದಾಗಿ ಪರಿಶೀಲಿಸಲು ಹೊರಡುವುದರಿಂದ ಆರಂಭಿಸಿ ರಾಜಧಾನಿಯ ಹೊರಗೆ ಸಂಪುಟ ಸಭೆ ಮತ್ತು ವಿಧಾನಸಭಾ ಅಧಿವೇಶನಗಳನ್ನು ನಡೆಸುವ ತನಕದ ಅನೇಕ ಕೆಲಸಗಳು ಈ ಸಾಂಕೇತಿಕ ಕ್ರಿಯೆಗಳ ಪರಿಧಿಯಲ್ಲಿ ಬರುತ್ತವೆ. ಚಾಮರಾಜ
ನಗರಕ್ಕೆ ಭೇಟಿ ನೀಡಿದವರೆಲ್ಲಾ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಭ್ರಮೆ ವ್ಯಾಪಕವಾಗಿರುವಾಗ ಮುಖ್ಯಮಂತ್ರಿಯೊಬ್ಬ ಚಾಮರಾಜ ನಗರಕ್ಕೆ ಭೇಟಿ ನೀಡುವುದು ನಿಜಕ್ಕೂ ಮುಖ್ಯವಾಗುತ್ತದೆ. ರಾಜಧಾನಿಯಿಂದ ದೂರವಿರುವ ಪ್ರದೇಶವೊಂದು ಅಭಿವೃದ್ಧಿಯಿಂದಲೂ ದೂರವಿದ್ದಾಗ ಅಲ್ಲೊಂದು ವಿಧಾನಸಭಾ ಅಧಿವೇಶನ ನಡೆಸುವುದು ಇಲ್ಲವೇ ಸಂಪುಟ ಸಭೆಯನ್ನು
ನಡೆಸುವುದು ಬಹಳ ಮುಖ್ಯವಾಗುತ್ತದೆ. ಸರ್ಕಾರ ತಮ್ಮ ಬಳಿಗೆ ಬಂತು ಎಂಬ ಭರವಸೆಯನ್ನು ಆ ಪ್ರದೇಶದ ಜನರಲ್ಲಿ ಮೂಡಿಸುವುದಕ್ಕೆ ಈ ಸಾಂಕೇತಿಕ ಕ್ರಿಯೆ ಸಹಾಯ ಮಾಡುತ್ತದೆ. Read more »
- Add new comment
- 914 reads
`ಜ್ಞಾನಾಧಾರಿತ ಆರ್ಥಿಕತೆ'ಯಲ್ಲಿ ಜ್ಞಾನದ ಪ್ರಶ್ನೆ
ಜ್ಞಾನ ಸಮಾಜ, ಜ್ಞಾನಾಧಾರಿತ ಆರ್ಥಿಕತೆ ಎಂಬ ಪದಪುಂಜಗಳನ್ನು ಇತ್ತೀಚಿನ ವರ್ಷಗಳಲ್ಲಿ ಮತ್ತೆ ಮತ್ತೆ ಕೇಳುತ್ತಿದ್ದೇವೆ. ರಾಷ್ಟ್ರೀಯ ಜ್ಞಾನ ಆಯೋಗವಂತೂ ತನ್ನ ವರದಿಗೆ `ಜ್ಞಾನಾಧಾರಿತ ಸಮಾಜದತ್ತ' ಎಂಬ ಶೀರ್ಷಿಕೆಯನ್ನು ಕೊಟ್ಟಿದೆ. ಕರ್ನಾಟಕದಲ್ಲಿ ಇತ್ತೀಚೆಗಷ್ಟೇ ಸ್ಥಾಪನೆಯಾದ ಜ್ಞಾನ ಆಯೋಗ ಕೂಡ ಜ್ಞಾನಾಧಾರಿತ ಆರ್ಥಿಕತೆಯ ಬಗ್ಗೆ, ಜ್ಞಾನ ಸಮಾಜದ ಬಗ್ಗೆ ಹೇಳುತ್ತಿದೆ. ಭಾರತವನ್ನು ಜ್ಞಾನಾಧಾರಿತ ಆರ್ಥಿಕತೆಯನ್ನಾಗಿ ಬೆಳೆಸುವುದರ ಬಗ್ಗೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಕೂಡಾ ಹೇಳುತ್ತಾರೆ. ಇದೇ ಮಾತುಗಳನ್ನು ಹಣಕಾಸು ಸಚಿವರು ಇನ್ನಷ್ಟು ಸಂಕೀರ್ಣ ಪದಪುಂಜಗಳನ್ನು ಬಳಸಿ ವಿವರಿಸುತ್ತಾರೆ.
ಜ್ಞಾನ ಸಮಾಜದ ಕುರಿತಂತೆ ಯು.ಕೆ.ಯ ಸಸೆಕ್ಸ್ ವಿಶ್ವವಿದ್ಯಾಲಯದ ಸ್ಟೆಪ್ಸ್ ಕೇಂದ್ರ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಹಾಗೂ ಇನ್ನಿತರ ಸಂಸ್ಥೆಗಳ ಸಹಯೋಗದಲ್ಲಿ ಎರಡು ದಿನಗಳ ಕಾರ್ಯಕ್ರಮವೊಂದನ್ನು ಬೆಂಗಳೂರಿನಲ್ಲಿ ಸಂಘಟಿಸಿತ್ತು. ವಿವಿಧ ವಿಷಯಗಳ ತಜ್ಞರು `ಜ್ಞಾನ ಸಮಾಜ'ವೆಂಬ ಪರಿಕಲ್ಪನೆಯ ಸುತ್ತ ಚರ್ಚೆ ನಡೆಸಿದರು. ದೇಶ-ವಿದೇಶಗಳ ತಜ್ಞರು ಭಾಗವಹಿಸಿದ್ದ `ರೌಂಡ್ ಟೇಬಲ್' ಪರಿಕಲ್ಪನೆಯ ಸಂಕೀರ್ಣ ಸಮಸ್ಯೆಗಳನ್ನು ಚರ್ಚಿಸಿದರೆ ಮರುದಿನ ಏರ್ಪಾಡಾಗಿದ್ದ ಸಾರ್ವಜನಿಕ ಚರ್ಚೆ ಹಿಂದಿನ ದಿನದ ಚರ್ಚೆಗಳ ಸಾರವನ್ನು ಸಾರ್ವಜನಿಕ ಮಟ್ಟದಲ್ಲಿ ಚರ್ಚಾ ವಿಷಯವನ್ನಾಗಿಸಲು ಪ್ರಯತ್ನಿಸಿತು.
ರಾಷ್ಟ್ರೀಯ ಜ್ಞಾನ ಆಯೋಗದಿಂದ ಆರಂಭಿಸಿ ರಾಜ್ಯ ಜ್ಞಾನ ಆಯೋಗದ ತನಕ, ಪ್ರಧಾನಿಯಿಂದ ಆರಂಭಿಸಿ ಮುಖ್ಯಮಂತ್ರಿಗಳ ತನಕ, ಉದ್ಯಮಿಗಳಿಂದ ಆರಂಭಿಸಿ ವಿದ್ವಾಂಸರ ತನಕ ಎಲ್ಲರೂ ಚರ್ಚಿಸುತ್ತಿರುವ ಈ `ಜ್ಞಾನ ಸಮಾಜ' ಎಂದರೆ ಏನು? ಈ ಪ್ರಶ್ನೆಗೆ ಸದ್ಯಕ್ಕೆ ದೊರೆಯುವ ಉತ್ತರ ವಿಕಿಪಿಡಿಯಾದ ವ್ಯಾಖ್ಯೆ ಮಾತ್ರ. ಜ್ಞಾನವನ್ನು ಉತ್ಪಾದನೆಯ ಪ್ರಾಥಮಿಕ ಸಂಪನ್ಮೂಲವಾಗಿಟ್ಟುಕೊಂಡಿರುವ ಸಮಾಜವನ್ನು `ಜ್ಞಾನ ಸಮಾಜ' ಎನ್ನಬಹುದು. `ಉತ್ಪಾದನೆಯ ಪ್ರಾಥಮಿಕ ಸಂಪನ್ಮೂಲವಾಗಿರುವ ಜ್ಞಾನ' ಯಾವುದು? ಈ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ಹೊರಟರೆ `ಜ್ಞಾನ ಸಮಾಜ'ವೆಂಬ ಆಧುನಿಕ ಪರಿಕಲ್ಪನೆಯ ಮಿತಿಗಳು ಅರ್ಥವಾಗತೊಡಗುತ್ತವೆ. Read more »
- Add new comment
- 910 reads
ಮುಖ್ಯಮಂತ್ರಿಗಳೇ ನೆನಪಿದೆಯೇ ನಿಮ್ಮ ಪ್ರಣಾಳಿಕೆ
ಕರ್ನಾಟಕದ ಬಿಜೆಪಿ ಸರ್ಕಾರ ಹೆಚ್ಚು ಸುಭದ್ರವಾಗಿದೆ. ಪಕ್ಷೇತರ ಶಾಸಕರನ್ನು ಯಾರಾದರೂ ಖರೀದಿಸಿಬಿಟ್ಟರೆ ಸರ್ಕಾರ ಉರುಳಬಹುದೆಂಬ ಭಯ ಅದಕ್ಕಿಲ್ಲ. ಇನ್ನು ಮುಂದೆ ಅದಕ್ಕೆ ತಾನು ಮಾಡಿದ `ಸಂಕಲ್ಪ'ಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲು ಯಾವ ಅಡ್ಡಿಯೂ ಇಲ್ಲ. ಆದ್ದರಿಂದ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಪಕ್ಷದ ಪ್ರಣಾಳಿಕೆಯನ್ನು ಮತ್ತೊಮ್ಮೆ ಓದಿಕೊಳ್ಳಲು ಇದು ಸಕಾಲ.
2008ರ ಕರ್ನಾಟಕ ವಿಧಾನಸಭಾ ಚುನಾವಣೆಯ ಬಿಜೆಪಿ ಪ್ರಣಾಳಿಕೆಯ ಪುಟ-62ರ ಕೊನೆಯ ಸಾಲುಗಳಲ್ಲಿರುವಂತೆ `ಭ್ರಷ್ಟಾಚಾರವನ್ನು ತಡೆಗಟ್ಟುವುದು-ಲೋಕಾಯುಕ್ತವನ್ನು ಹೆಚ್ಚು ಬಲಪಡಿಸುವುದು' ಸಮೃದ್ಧ ಕರ್ನಾಟಕಕ್ಕಾಗಿ ಬಿಜೆಪಿ ಮಾಡಿರುವ ಸಂಕಲ್ಪಗಳಲ್ಲಿ ಒಂದು. ಇಂಥದ್ದೇ ಸಂಕಲ್ಪವನ್ನು 2004ರ ಲೋಕಸಭಾ ಚುನಾವಣೆಯ ಸಂದರ್ಭದ ಪ್ರಣಾಳಿಕೆಯೂ ಮಾಡಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರದ ವಿರುದ್ಧ ಯುದ್ಧ ನಡೆಸುವ ಭರವಸೆಯನ್ನು ಈ ಪ್ರಣಾಳಿಕೆ ನೀಡುತ್ತದೆ. ಆ ಸಾಲುಗಳು ಹೀಗಿವೆ: `ಭಾರತದ ಅಭಿವೃದ್ಧಿ ಪಥದ ಅತಿದೊಡ್ಡ ಅಡ್ಡಿಯೆಂದರೆ ಭ್ರಷ್ಟಾಚಾರದ ಎಂದು ಬಿಜೆಪಿ ಭಾವಿಸುತ್ತದೆ. ಭ್ರಷ್ಟಾಚಾರವು ನಮ್ಮ ಸಮಾಜ ಮತ್ತು ರಾಜಕಾರಣದ ನೈತಿಕತೆಯನ್ನೇ ದುರ್ಬಲಗೊಳಿಸಿದೆ. ಬಹುಕಾಲದ ಕಾಂಗ್ರೆಸ್ ಆಳ್ವಿಕೆ ಸೃಷ್ಟಿ ಮಾಡಿರುವ ಆಡಳಿತ ವ್ಯವಸ್ಥೆಯಲ್ಲಿ ಸ್ವಹಿತಕ್ಕಾಗಿ ಅಧಿಕಾರದ ದುರ್ಬಳಕೆಯೇ ಹೆಚ್ಚಾಗಿದೆ. ಲಂಚ ಕೊಡದೆ ಸರ್ಕಾರಿ ಕಚೇರಿಗಳಲ್ಲಿ ಯಾವ ಕೆಲಸವನ್ನೂ ಮಾಡಿಸಿಕೊಳ್ಳಲು ಆಗದ ತೊಂದರೆಯನ್ನು ಜನರು ಅನುಭವಿಸುತ್ತಿದ್ದಾರೆ. ಭ್ರಷ್ಟಾಚಾರವೆಂಬ ಪಿಡುಗನ್ನು ತೊಡೆಯಲು ಎಲ್ಲಾ ಹಂತಗಳಲ್ಲಿಯೂ ಹೋರಾಟ ನಡೆಸಬೇಕೆಂದು ಬಿಜೆಪಿ ಭಾವಿಸುತ್ತದೆ'.
ಸನ್ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಈ ಸಾಲುಗಳನ್ನು ಖಂಡಿತ ಮರೆಯಲು ಸಾಧ್ಯವಿಲ್ಲ. ಅವರು ವಿರೋಧ ಪಕ್ಷದಲ್ಲಿರುವಾಗ ಸದನದಲ್ಲಿ ಅವರು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದನ್ನು ಕರ್ನಾಟಕ ಮರೆತಿಲ್ಲ. ಆದರೆ ಇದೇ ಯಡಿಯೂರಪ್ಪನವರ ಸರ್ಕಾರ ಇತ್ತೀಚೆಗೆ ಕೈಗೊಂಡಿದೆ ಎನ್ನಲಾದ ನಿರ್ಧಾರವೊಂದು ಪತ್ರಿಕೆಗಳ ಮೂಲಕ ಕನ್ನಡ ನಾಡಿಗೆ ತಿಳಿಯಿತು.
ಆ ಸುದ್ದಿ ಹೀಗಿದೆ. Read more »
- Add new comment
- 924 reads
ಶಿಕ್ಷಣ ಸಚಿವರ ಪಠ್ಯ ಬದಲಾವಣೋತ್ಸಾಹ
ಮನುಷ್ಯನನ್ನು ಪ್ರಾಣಿಗಳಿಂದ ಭಿನ್ನವಾಗಿಸುವ ಮುಖ್ಯ ಲಕ್ಷಣಗಳ ಲ್ಲೊಂದು ಭಾಷೆ. ಹಾಗಿದ್ದರೆ ಪ್ರಾಣಿಗಳಿಗೆ ಭಾಷೆ ಇಲ್ಲವೇ? ಅವುಗಳೂ ತಮ್ಮದೇ ಆದ ರೀತಿಯಲ್ಲಿ ಸದ್ದುಗಳನ್ನು ಸೃಷ್ಟಿಸುವ ಮೂಲಕ ಪರಸ್ಪರ ಸಂವಹನವನ್ನು ಸಾಧಿಸುತ್ತವೆಯಲ್ಲವೇ ಎಂಬ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಈ ಪ್ರಶ್ನೆಗಳು ಸರಿಯಾಗಿಯೇ ಇವೆ. ಆದರೆ ಇವು ಮನುಷ್ಯನ ಭಾಷೆಯ ವೈಶಿಷ್ಟ್ಯವನ್ನು ಅರಿಯದೇ ಇರುವುದರಿಂದ ಹುಟ್ಟಿರುವ ಪ್ರಶ್ನೆಗಳು.
ಪ್ರಾಣಿಗಳ ಭಾಷೆಯೆಂದರೆ ನಿರ್ದಿಷ್ಟ ಸಂಖ್ಯೆಯ ಸಂಜ್ಞೆಗಳು ಮಾತ್ರ. ಹಸಿವಾದಾಗ ಒಂದು ಸಂಜ್ಞೆ, ಶತ್ರುವನ್ನು ನೋಡಿದಾಗ ಮತ್ತೊಂದು ಸಂಜ್ಞೆ, ಮಿಲನಕ್ಕೆ ಅಣಿಯಾಗುವುದಕ್ಕೆ ಇನ್ನೊಂದು ಸಂಜ್ಞೆ ಹೀಗೆ. ಇದನ್ನು ಒಂದು ಸರಳ ಉದಾಹರಣೆಯ ಮೂಲಕ ವಿವರಿಸಬಹುದು. ಮನೆಯ ನಾಯಿ ಅದಕ್ಕೆ ಅಸಹಜ ಎನಿಸಿದ್ದನ್ನು ಕಂಡಾಗ ಬೊಗಳುತ್ತದೆ. ಈ ಬೊಗಳುವಿಕೆಯ ತೀವ್ರತೆಯನ್ನು ಅನುಸರಿಸಿ ಅದೆಷ್ಟು ಕೋಪಗೊಂಡಿದೆ ಯೆಂದು ಊಹಿಸಬಹುದಾದರೂ ಅದು ನಿರ್ದಿಷ್ಟವಾಗಿ ಏನನ್ನು ನೋಡಿದೆ ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ. ಲಂಗೂರ್ ಕೋತಿಗಳು ಕಾಡಿನಲ್ಲಿ ಹುಲಿ, ಚಿರತೆಯಂಥ ಪ್ರಾಣಿಗಳನ್ನು ಕಂಡಾಗ ಸದ್ದು ಮಾಡುತ್ತವೆ. ಈ ಸದ್ದನ್ನು ಕೇಳಿ ಅದು ಹುಲಿಯನ್ನು ನೋಡಿತೇ ಚಿರತೆಯನ್ನು ನೋಡಿತೇ ಎಂದು ನಿರ್ಧರಿಸಲಾಗದು.
ಮನುಷ್ಯನ ಭಾಷೆ ಹೀಗಲ್ಲ. ಅದು ಅನಂತ ಸಂಖ್ಯೆಯ ಅಭಿವ್ಯಕ್ತಿ ಗಳಿಗೆ ಅವಕಾಶವಿರುವ ಭಾಷೆ. ಈ ಕಾರಣದಿಂದಾಗಿಯೇ ಮನುಷ್ಯ ಪ್ರಾಣಿಗಳಿಗಿಂತ ಭಿನ್ನನಾಗುತ್ತಾನೆ. ಪ್ರಾಣಿಗಳ ಭಾಷೆ ಹುಟ್ಟಿಕೊಳ್ಳುವುದು ಅವುಗಳ ಮೆದುಳು ಬಳ್ಳಿಯಲ್ಲಿ. ಮನುಷ್ಯನ ಭಾಷೆ ಹುಟ್ಟಿಕೊಳ್ಳುವುದು ಅವನ ಮೆದುಳಿನ ಎಡ ಗೋಳಾರ್ಧದ ಮೇಲ್ಭಾಗದಲ್ಲಿ. ಮೆದುಳು ಬಳ್ಳಿಯಿಂದ ಉತ್ಪತ್ತಿಯಾಗುವ ಸಂದೇಶಗಳೆಲ್ಲವೂ ಭಾವನಾತ್ಮಕ ತುರ್ತಿನವು. ಈ ಕುರಿತಂತೆ ನಾವೆಲ್ಲರೂ ಹೈಸ್ಕೂಲ್ ಮಟ್ಟದ ಪಠ್ಯ ಪುಸ್ತಕಗಳಲ್ಲೇ ಓದಿರುತ್ತೇವೆ. ಪರಾವರ್ತಿತ ಪ್ರತಿಕ್ರಿಯೆಗಳು ಮೆದುಳು ಬಳ್ಳಿಯಿಂದಲೇ ಹುಟ್ಟಿಕೊಳ್ಳುತ್ತವೆ. ಉದಾಹರಣೆಗೆ ಬಿಸಿಯಾದ ಕೆಂಡವನ್ನು ಮುಟ್ಟಿದರೆ ತಕ್ಷಣ ಕೈಯನ್ನು ಹಿಂದಕ್ಕೆ ತೆಗೆದುಕೊಳ್ಳುವಂಥ ಪ್ರತಿಕ್ರಿಯೆಗಳಿವು. ಇಲ್ಲಿ ತರ್ಕ, ಕಾರಣಗಳಿಗೆ ಅವಕಾಶವಿಲ್ಲ. ಇವೆಲ್ಲಾ ತಕ್ಷಣದ ರಕ್ಷಣಾ ಕ್ರಿಯೆ ಗಳು. ಪ್ರಾಣಿಗಳ ಭಾಷೆ ಹುಟ್ಟಿಕೊಳ್ಳುವುದು ಇಂಥ ಕಾರಣಗಳಿಂದ. Read more »
- 2 comments
- 1378 reads
ನೀಚ ಬುದ್ಧಿಯ ಬಿಡು ನಾಲಿಗೆ
`ದೊಡ್ಡ ಮರವೊಂದು ಉರುಳುವಾಗ ಸುತ್ತಲಿನ ಭೂಮಿ ಅದುರುತ್ತದೆ' ಸಾಮಾನ್ಯ ಸಂದರ್ಭದಲ್ಲಿ ಒಂದು ನಾಣ್ನುಡಿಯಷ್ಟೇ ಆಗಬಹುದಾಗಿದ್ದ ಈ ಹೇಳಿಕೆಗೆ ಕ್ರೌರ್ಯವನ್ನು ಲೇಪಿಸಿದ್ದು ಭಾರತದ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ. ಇಂದಿರಾ ಹತ್ಯೆ ನಂತರ ದಿಲ್ಲಿಯಲ್ಲಿ ನಡೆದ ಸಿಕ್ಖರ ನರಮೇಧವನ್ನು ಸಮರ್ಥಿಸಿಕೊಳ್ಳಲು ರಾಜೀವ್ ಈ ನಾಣ್ನುಡಿ ಬಳಸಿಕೊಂಡಿದ್ದರು.
ಖ್ಯಾತ ಭೌತ ವಿಜ್ಞಾನಿ ಐಸಾಕ್ ನ್ಯೂಟನ್ ಪ್ರತಿಪಾದಿಸಿದ ಬಲ ವಿಜ್ಞಾನದ ಸಿದ್ಧಾಂತಗಳಲ್ಲಿ ಮೂರನೆಯದ್ದು `ಪ್ರತಿಯೊಂದು ಕ್ರಿಯೆಗೂ ಒಂದು ಸಮಾನ ಮತ್ತು ವಿರುದ್ಧ ದಿಕ್ಕಿನ ಪ್ರತಿಕ್ರಿಯೆ ಇರುತ್ತದೆ'. ಭೌತಶಾಸ್ತ್ರದ ಈ ಮಹತ್ವದ ಹೇಳಿಕೆ ಗುಜರಾತ್ನ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಗೋಧ್ರಾ ನಂತರದ ನರಮೇಧವನ್ನು ಸಮರ್ಥಿಸಿಕೊಳ್ಳುವ ಹೇಳಿಕೆಯಾಗಿಬಿಟ್ಟಿತು.ಬಲ ವಿಜ್ಞಾನದ ಇತಿಹಾಸದಲ್ಲಿ ಮಹತ್ತರವಾದ ಸ್ಥಾನವನ್ನು ಪಡೆದಿದ್ದ ಈ ಹೇಳಿಕೆ ಭಾರತದ ರಾಜಕೀಯ ಇತಿಹಾಸದಲ್ಲಿ ಒಂದು ಕ್ರೌರ್ಯಕ್ಕೆ ಸಂವಾದಿಯಾಗಿಬಿಟ್ಟಿತು. Read more »
- Add new comment
- 1389 reads
ಕರ್ನಾಟಕ ರಾಜಕಾರಣದ ದುರಂತ ನಾಯಕರು
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನ ಆರ್.ವಿ.ದೇಶಪಾಂಡೆಯವರಿಗೆ ದೊರೆತಿದೆ. ಪರಿಣಾಮವಾಗಿ ಸಿದ್ದರಾಮಯ್ಯ ಬೆಂಬಲಿಗರಿಗೆ ಸಿಟ್ಟು ಬಂದಿದೆ. ಈಗವರು `ಅಹಿಂದ'ದ ಮೂಲಕ ರಣಕಹಳೆ ಮೊಳಗಿಸಲಿದ್ದಾರೆ. ಸಿದ್ದರಾಮಯ್ಯನವರೂ ಇದಕ್ಕೆ ಓಗೊಟ್ಟು ಭಾವುಕರಾಗಿ ಮಾತನಾಡುತ್ತಾರೆ. ಇದು ಈ ಹಿಂದೆಯೂ ಸಂಭವಿಸಿತ್ತು. ಆಗ ಸಿದ್ದರಾಮಯ್ಯ ಸೆಕ್ಯುಲರ್ ಜನತಾದಳದಲ್ಲಿದ್ದರು. ಆಗ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿ ಹೋಗಿತ್ತೆಂಬ ಅಸಮಾಧಾನವಿತ್ತು. ಅಷ್ಟು ಸಾಲದೆಂಬಂತೆ ದೇವೇಗೌಡರ ಮಗ ಎಚ್.ಡಿ.ಕುಮಾರಸ್ವಾಮಿ ಸರಕಾರವನ್ನು ತಮ್ಮ ಅಂಕೆಯಲ್ಲಿಟ್ಟುಕೊಳ್ಳಲು ಬೇಕಾದ ಎಲ್ಲವನ್ನೂ ಮಾಡುತ್ತಿದ್ದರು. ಇದನ್ನು ಪ್ರತಿಭಟಿಸಲು ಸಿದ್ದರಾಮಯ್ಯ `ಅಹಿಂದ' ವೇದಿಕೆ ಬಳಸಿಕೊಂಡರು. ದೇವೇಗೌಡರು ಸಿದ್ದರಾಮಯ್ಯನವರಿಗಿದ್ದ ಉಪ ಮುಖ್ಯಮಂತ್ರಿ ಹುದ್ದೆಯನ್ನೂ ಕಿತ್ತುಕೊಂಡರು.
ಈಗ ಸಿದ್ದರಾಮಯ್ಯ ಕಾಂಗ್ರೆಸ್ಸಿನಲ್ಲಿದ್ದಾರೆ. ಸೆಕ್ಯುಲರ್ ಜನತಾದಳದಿಂದ ದೂರವಾದ ಹೊಸತರಲ್ಲಿ ಎಲ್ಲರಿಗೂ ಕೇಳಿಸುವಂತೆ `ಅಹಿಂದ' ಜಪ ಮಾಡುತ್ತಿದ್ದ ಸಿದ್ದರಾಮಯ್ಯನವರು ಕಾಂಗ್ರೆಸ್ಗೆ ಹತ್ತಿರವಾಗುತ್ತಾ ಹೋದಂತೆ `ಅಹಿಂದ' ಜಪದ ಧ್ವನಿಯನ್ನು ಮೆತ್ತಗಾಗಿಸಿ ಕೊನೆಗೊಮ್ಮೆ ಮೌನ ಜಪಕ್ಕೆ ಶರಣಾಗಿಬಿಟ್ಟರು. ಈಗ ಮತ್ತೆ `ಅಹಿಂದ' ಜಪದ ಧ್ವನಿಯನ್ನು ಸಿದ್ದರಾಮಯ್ಯ ತಾರಕಕ್ಕೆ ಏರಿಸಿದ್ದಾರೆ. ಇದನ್ನು ಕೇಳಿ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದವರೆಲ್ಲಾ ತಮ್ಮ ಕೈ ಹಿಡಿದು ಮೇಲೆತ್ತುತ್ತಾರೆ ಎಂಬ ಭಾವನೆ ಸಿದ್ಧರಾಮಯ್ಯನವರಿಗೂ ಅವರ ತಥಾಕಥಿತ ಬೆಂಬಲಿಗರಿಗೂ ಇರುವಂತೆ ಕಾಣಿಸುತ್ತದೆ. Read more »
- 1250 reads
ವಿರೋಧಿಗಳದ್ದೇ 'ರಾಜ್ಯಭಾರ'ವಾದರೆ ಸರಕಾರವೇಕೆ?
ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪನವನವರು ಅಧಿಕಾರ ಸ್ವೀಕರಿಸುವುದಕ್ಕೆ ಸರಿಯಾಗಿ ಹನ್ನೊಂದು ದಿನಗಳ ಮೊದಲು ಕರ್ನಾಟಕದಲ್ಲೊಂದು ಕಳ್ಳಭಟ್ಟಿ ದುರಂತ ಸಂಭವಿಸಿತು. ಕರ್ನಾಟಕದಲ್ಲೇ ನೂರಕ್ಕೂ ಹೆಚ್ಚು ಮಂದಿ ಬಲಿಯಾದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಯೋಜಿತ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಈ ಘಟನೆಯ ಹಿಂದೆ ತಮ್ಮ ವಿರೋಧಿಗಳ ಕೈವಾಡವನ್ನು ಸಂಶಯಿಸಿದ್ದರು. ಇದನ್ನವರು ಬೇರೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸಿದ್ದರು. ಇದಕ್ಕೆ ತಕ್ಕಂತೆ ಸಾರಾಯಿ ನಿಷೇಧವನ್ನು ತೀವ್ರ ಟೀಕೆಗೆ ಒಳಪಡಿಸಿದ್ದ ಕಾಂಗ್ರೆಸ್ ನಾಯಕರಾದ ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿಯವರಂಥ ಹೇಳಿಕೆಗಳೂ ಇದ್ದವು.
ಯಡಿಯೂರಪ್ಪನವರು ಅಧಿಕಾರ ಸ್ವೀಕರಿಸಿದ ಹತ್ತೇ ದಿನಗಳಲ್ಲಿ ಗೊಬ್ಬರ ಕೊರತೆಯಿಂದ ರೊಚ್ಚಿಗೆದ್ದು ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಗೋಲಿಬಾರ್ ನಡೆಯಿತು. ಗುಂಡು ತಗುಲಿದ ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಈ ಸಂದರ್ಭದಲ್ಲಿಯೂ ಯಡಿಯೂರಪ್ಪನವರು ಸಂಶಯಿಸಿದ್ದು ವಿರೋಧಿ ಗಳ ಕೈವಾಡವನ್ನೇ. ಇದಕ್ಕೆ ತಕ್ಕಂತೆ ಕೇಂದ್ರ ಸರಕಾರ ಗೊಬ್ಬರ ಬಿಡುಗಡೆ ಮಾಡಿರಲಿಲ್ಲ. ಗೊಬ್ಬರದ ಲಾರಿಗಳನ್ನೇ ಹಿಡಿದು ನಿಲ್ಲಿಸುವಷ್ಟರ ಮಟ್ಟಿಗೆ ಪ್ರತಿಭಟನೆಗಳು ತೀವ್ರಗೊಂಡಿದ್ದವು. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವಷ್ಟು ಹಿಂಸಾತ್ಮಕ ಪ್ರತಿಭಟನೆಗಳೂ ನಡೆಯುತ್ತಿದ್ದವು.
ಸರಕಾರಕ್ಕೆ ನೂರು ದಿನ ತುಂಬಿದ ಕೆಲವೇ ದಿನಗಳಲ್ಲಿ ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ಕ್ರೈಸ್ತರ ಪ್ರಾರ್ಥನಾ ಮಂದಿರಗಳ ಮೇಲೆ ತಥಾಕಥಿತ `ಹಿಂದೂ ಪರ' ಸಂಘಟನೆಗಳು ದಾಳಿ ನಡೆಸಿದವು. ದಾವಣಗೆರೆಯಲ್ಲಿ ಆರಂಭಗೊಂಡ ಈ ದಾಳಿಯ ಸರಣಿ ಮಂಗಳೂರಿಗೆ ತಲುಪುವ ಹೊತ್ತಿಗೆ ಪಡೆದುಕೊಂಡ ಸ್ವರೂಪವೇ ಬೇರೆ. ಅಲ್ಲಿಯ ತನಕವೂ `ನ್ಯೂ ಲೈಫ್ ಫೆಲೋಷಿಪ್' ಎಂಬ ಕ್ರೈಸ್ತ ಧರ್ಮ ಪ್ರಸಾರದ ಸಂಘಟನೆಗೆ ಸೇರಿದ ಪ್ರಾರ್ಥನಾ ಮಂದಿರಗಳ ಮೇಲೆ ನಡೆಯುತ್ತಿದ್ದ ದಾಳಿಗಳು ಕೆಥೋಲಿಕ್ ಕ್ರೈಸ್ತರ ಚರ್ಚ್ಗಳಿಗೂ ವ್ಯಾಪಿಸಿದವು. ಶಿಲುಬೆಯನ್ನು ಮುರಿಯುವ, ಯೇಸುವಿನ ಪ್ರತಿಮೆಯನ್ನು ಭಗ್ನಗೊಳಿಸುವ, ಪರಮಪ್ರಸಾದವನ್ನು ನಾಶಪಡಿಸುವ, ಗರ್ಭಿಣಿಯ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೆ ಹೋದವು.
ಮಂಗಳೂರಿನಲ್ಲಿ ಕ್ರೈಸ್ತರು ಈ ದಾಳಿಗಳ ವಿರುದ್ಧ ಪ್ರತಿಭಟನೆ ಹಿಂಸಾತ್ಮಕ ಸ್ವರೂಪವನ್ನೂ ಪಡೆಯಿತು. ಈ ಹಿಂಸೆಗೆ ಪೊಲೀಸರೇ ಕಾರಣರು ಎಂಬ ವಾದ ಒಂದೆಡೆಗಿದ್ದರೆ ಪ್ರತಿಭಟನೆಕಾರರ ಹಿಂಸೆ ಪೊಲೀಸರನ್ನು ರೊಚ್ಚಿಗೆಬ್ಬಿಸಿತು ಎಂಬುದು ಮತ್ತೊಂದು ವಾದ. ದಕ್ಷಿಣ ಕನ್ನಡದ ಪೊಲೀಸರು ಕೋಮು ಸೂಕ್ಷ್ಮ ಪರಿಸ್ಥಿತಿಯನ್ನು ಈ ತನಕ ನಿರ್ವಹಿಸಿರುವುದನ್ನು ನೋಡಿದರೆ ತಪ್ಪು ಎರಡೂ ಕಡೆಯೂ ಇರಬಹು ದೆಂದು ಕಾಣಿಸುತ್ತದೆ. ಪರಿಸ್ಥಿತಿ ಹಿಂಸಾತ್ಮಕ ತಿರುವು ಪಡೆದುಕೊಳ್ಳುವ ವರೆಗೂ ಪೊಲೀಸರು ಸರಿಯಾದ ಕ್ರಮ ಕೈಗೊಳ್ಳುವುದಿಲ್ಲ ಎಂಬುದು ಈವರೆಗಿನ ಅನೇಕ ಉದಾಹರಣೆಗಳಿಂದ ಸಾಬೀತಾಗಿದೆ. Read more »
- Add new comment
- 1299 reads
ದೇಶ ಸ್ಫೋಟಿಸುವಾಗ ಸೂಟ್ ಬದಲಾಯಿಸಿದವರು!
`ರೋಮ್ ಹೊತ್ತಿ ಉರಿಯುತ್ತಿದ್ದಾಗ ದೊರೆ ನೀರೋ ಪಿಟೀಲು ನುಡಿಸುತ್ತಿದ್ದ' ಸಂಗತಿ ನಮಗೆಲ್ಲಾ ಗೊತ್ತಿದೆ. ನೀರೋ ಪಿಟೀಲು ನುಡಿಸುತ್ತಿದ್ದನೇ ಇಲ್ಲವೇ ಎಂಬುದರ ಬಗ್ಗೆ ಅನೇಕ ಚರ್ಚೆಗಳಿವೆ. ಕಾರಣ ಆಗ ಪಿಟೀಲು ಎಂಬ ವಾದ್ಯವೇ ಇರಲಿಲ್ಲ. ನಮ್ಮ ಈಗಿನ ಗಿಟಾರ್ನ ಮೂಲ ರೂಪವಾಗಿದ್ದ Lyre ವಾದ್ಯವನ್ನು ನೀರೋ ನುಡಿಸುತ್ತಿದ್ದ ಎಂದು ರೋಮಿನ ಇತಿಹಾಸಕಾರರಲ್ಲಿ ಒಬ್ಬನಾಗಿರುವ ಕ್ಯಾಸಿಯಸ್ ಹೇಳಿದ್ದಾನೆ. ನೀರೋ ಪಿಟೀಲು ನುಡಿಸುತ್ತಿದ್ದನೇ ಇಲ್ಲವೇ ಎಂಬುದರಷ್ಟೇ ಮುಖ್ಯವಾದ ಮತ್ತೊಂದು ಪ್ರಶ್ನೆ ರೋಮ್ಗೆ ಬೆಂಕಿ ಹತ್ತಿಕೊಂಡದ್ದು ಹೇಗೆ ಎಂಬುದು? ಇದಕ್ಕೆ ಸಂಬಂಧಿಸಿದಂತೆ ಹಲವು ಅಭಿಪ್ರಾಯಗಳಿವೆ. ಕೆಲವರು ಇದನ್ನು ಒಂದು ಆಕಸ್ಮಿಕ ಎಂದು ಹೇಳಿದ್ದಾರೆ. ಇನ್ನು ಕೆಲವರು ಕ್ರೈಸ್ತರು ಬೆಂಕಿ ಹಚ್ಚಿದರು ಎನ್ನುತ್ತಾರೆ. ನೀರೋನ ಕಾಲದ ದಾಖಲೆಗಳನ್ನು ಇಟ್ಟುಕೊಂಡು ಈ ಬೆಂಕಿಗೂ ನೀರೋನೇ ಕಾರಣನಾಗಿದ್ದನೆಂದು ಕ್ಯಾಸಿಯಸ್ನಂಥ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.
ನೀರೋ ಕಾಲದಲ್ಲಿ ಮನೆಗಳನ್ನು ಮರದಿಂದ ನಿರ್ಮಿಸಲಾಗುತ್ತಿತ್ತು. ಗೋಡೆಗಳೂ ಮರದದಿಂದಲೇ ರೂಪುಗೊಳ್ಳುತ್ತಿದ್ದವು. ಕ್ಯಾಸಿಯಸ್ ದಾಖಲಿಸಿರುವಂತೆ `ನಗರವನ್ನು ನಾಶಮಾಡುವ ಅಭೀಪ್ಸೆಯಿಂದ ಉತ್ತೇಜಿತನಾದ ನೀರೋ ಕುಡುಕರಂತೆ ನಟಿಸಿ ನಗರಕ್ಕೆ ಕೊಳ್ಳಿ ಇಡಲು ಜನರನ್ನು ಕಳುಹಿಸಿದ. ಪಾಲಾಟೈನ್ ಬೆಟ್ಟದ ಮೇಲಿದ್ದ ತನ್ನ ಅರಮನೆಯಲ್ಲಿ ಉರಿಯುವ ರೋಮ್ ಅನ್ನು ನೋಡುತ್ತಾ ನೀರೋ Lyre ನುಡಿಸುತ್ತಾ ಹಾಡಿದ'. Read more »
- Add new comment
- 1164 reads
ವಿರೋಧ ಪಕ್ಷದ ನೂರು ದಿನಗಳ ಸಾಧನೆ
ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ನೂರು ದಿನ ತುಂಬಿವೆ. ಇದನ್ನು ಸರಕಾರ ಸ್ವಲ್ಪ ಹೆಚ್ಚೇ ಅನ್ನಿಸುವಷ್ಟು ವಿಜೃಂಭಣೆಯಿಂದಲೇ ಆಚರಿಸುತ್ತಿದೆ. ದಕ್ಷಿಣ ಭಾರತದಲ್ಲಿ ಆಡಳಿತಕ್ಕೇರಿದ ಮೊದಲ ಬಿಜೆಪಿ ಸರಕಾರ ಎಂಬುದೂ ಸೇರಿದಂತೆ ಈ ಆಚರಣೆಗೆ ಹಲವು ಕಾರಣಗಳನ್ನು ಆಡಳಿತಾರೂಢರು ಕಂಡುಕೊಂಡಿದ್ದಾರೆ. ಅವರ ದೃಷ್ಟಿಯಲ್ಲಿ ಇದು ಸರಿಯಾಗಿಯೂ ಇದೆ. ಇದೇ ವೇಳೆ ಸರಕಾರದ ನೂರು ದಿನಗಳ ಆಡಳಿತವನ್ನು ವಿರೋಧ ಪಕ್ಷಗಳು ತೀವ್ರವಾಗಿ ಟೀಕೆಗೆ ಗುರಿಪಡಿಸುತ್ತಿವೆ. ವಿರೋಧ ಪಕ್ಷಗಳು ಇದನ್ನು ಮಾಡುವುದು ಸಹಜ. ಈ ಟೀಕೆಯಷ್ಟೇ ವಿರೋಧ ಪಕ್ಷಗಳ ಕೆಲಸವೇ? ಸರಕಾರ ಸರಿದಾರಿಯಲ್ಲಿ ಇಲ್ಲದಿದ್ದರೆ ಅದನ್ನು ಹಳಿಯ ಮೇಲೆ ತರುವಂಥ ಒಂದು ಸಂಸದೀಯ ಜವಾಬ್ದಾರಿಯೂ ವಿರೋಧ ಪಕ್ಷಕ್ಕಿಲ್ಲವೇ? ಈ ದೃಷ್ಟಿಯಲ್ಲಿ ಕಳೆದ ನೂರು ದಿನಗಳ ಅವಧಿಯಲ್ಲಿ ವಿರೋಧ ಪಕ್ಷಗಳ ಸಾಧನೆಯೇನು ಎಂಬ ಮೌಲ್ಯ ಮಾಪನದ ಅಗತ್ಯವೂ ಇದೆಯಲ್ಲವೇ?
- Add new comment
- 1037 reads
ಭಯೋತ್ಪಾದನೆಯ ಮತ್ತೊಂದು ಮುಖ
ಇತ್ತೀಚೆಗೆ ಬೆಂಗಳೂರು, ಅಹಮದಾಬಾದ್ಗಳಲ್ಲಿ ಸರಣಿ ಸ್ಫೋಟಗಳು ಸಂಭವಿಸಿದಾಗ ಅದಕ್ಕೆ ಸಂಬಂಧಿಸಿದಂತೆ ಬಂದ ಎರಡು ಮುಖ್ಯ ಪ್ರತಿಕ್ರಿಯೆಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿಲ್ಲ. ಮೊದಲನೆಯದ್ದು ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರದ್ದು. ಸ್ಫೋಟಗಳೆಲ್ಲವೂ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ ನಡೆಯುತ್ತಿದೆ. ಸಂಸತ್ನಲ್ಲಿ ನಡೆದ ವೋಟಿಗಾಗಿ ನೋಟು ಹಗರಣದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಕಾಂಗ್ರೆಸ್ ಈ ಸ್ಫೋಟಗಳನ್ನು ಸಂಘಟಸಿದ್ದಿರಬೇಕು ಎಂಬ ಅರ್ಥದಲ್ಲಿ ಅವರು ಮಾತನಾಡಿದ್ದರು. ಈ ಪ್ರತಿಕ್ರಿಯೆ ಹೊರಬಿದ್ದ ದಿನವೇ ಸಫ್ದರ್ ಹಷ್ಮಿ ಮೆಮೋರಿಯಲ್ ಟ್ರಸ್ಟ್ನ ಶಬ್ನಂ ಹಶ್ಮಿ `ಪ್ರಭುತ್ವ ತನ್ನ ಉಳಿದೆಲ್ಲಾ ಸೇವೆಗಳನ್ನೂ ಖಾಸಗೀಕರಿಸಿರುವುದರಿಂದ ಅದಕ್ಕೆ ಉಳಿದಿರುವುದು ಭದ್ರತೆಯ ಕೆಲಸ ಮಾತ್ರ. ಇದನ್ನು ಜನರಿಗೆ ಆಗಾಗ ನೆನಪು ಮಾಡಿ ಕೊಡದೇ ಹೋದರೆ ಪ್ರಭುತ್ವವೇ ಅಪ್ರಸ್ತುತವಾಗಿಬಿಡುವ ಸಾಧ್ಯತೆ ಇದೆ. ಸರಣಿ ಸ್ಫೋಟಗಳನ್ನು ಈ ಹಿನ್ನೆಲೆಯಲ್ಲೂ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ' ಎಂದಿದ್ದರು.
ನಗರ ಮಧ್ಯೆ ದೊಡ್ಡ ಪಟಾಕಿ ಸಿಡಿದರೂ ಅದರ ಹಿಂದೆ ಇಸ್ಲಾಮಿಕ್ ಭಯೋತ್ಪಾದನೆಯಿದೆ ಎಂದು ಹೇಳುವುದು ಬಿಜೆಪಿಗೆ ಅಭ್ಯಾಸವಾಗಿ ಹೋಗಿದೆ. ಅಂತಹ ಪಕ್ಷದ ಪ್ರಮುಖ ನಾಯಕಿಯೊಬ್ಬರು ಬಾಂಬ್ ಸ್ಫೋಟದ ಹಿಂದೆ ಮತ್ತೊಂದು ರಾಜಕೀಯ ಪಕ್ಷದ ಕೈವಾಡದ ಬಗ್ಗೆ ಆರೋಪಿಸಿದ್ದು ಸ್ವಲ್ಪ ಮಟ್ಟಿಗೆ ವಿಚಿತ್ರವಾಗಿಯೂ ವಿಶಿಷ್ಟವಾಗಿಯೂ ಇದೆ. ಅಷ್ಟೇ ಅಲ್ಲ ಅವರು ಸ್ಫೋಟಗಳನ್ನು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷವೇ ಮಾಡಿಸಲು ಕಾರಣವಾದ ಅಂಶದ ಬಗ್ಗೆಯೂ ಹೇಳಿದ್ದರು. ಆದರೆ ಅದನ್ನು ಸ್ವತಃ ಬಿಜೆಪಿ ಸೇರಿದಂತೆ ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಮಾಧ್ಯಮಗಳೂ ಅಷ್ಟೇ. `ಸ್ಫೋಟಗಳ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಪಾಲಿಸಬೇಕಾದ ನೀತಿ ಸಂಹಿತೆ'ಯ ಬಗ್ಗೆಯಷ್ಟೇ ಮಾತನಾಡಿ ಸುಮ್ಮನಾಗಿಬಿಟ್ಟವು. Read more »
- 1 comment
- 1296 reads
Recent comments
37 weeks 2 days ago
38 weeks 2 days ago
44 weeks 20 hours ago
44 weeks 2 days ago
48 weeks 6 days ago
49 weeks 1 day ago
49 weeks 4 days ago
50 weeks 4 days ago
1 year 1 week ago
1 year 1 week ago