ನಳಿನಿ ಜಮೀಲಾ-ಒಂದು ಪರಿಚಯ

`ನನಗೀಗ ಐವತ್ತೊಂದು ವರ್ಷ ವಯಸ್ಸು. ನನಗೀಗಲೂ ಲೈಂಗಿಕ ವೃತ್ತಿಯನ್ನು ಮುಂದುವರಿಸಬೇಕೆಂಬ ಆಸಕ್ತಿ ಇದೆ.' ನಳಿನಿ ಜಮೀಲಾರ `ಲೈಂಗಿಕ ವೃತ್ತಿ ನಿರತಳೊಬ್ಬಳ ಆತ್ಮಕತೆ'ಯ ಮೊದಲ ಸಾಲುಗಳಿವು. ಸಮಾಜ ದ್ವಿಮುಖ ನೀತಿ ಗಳನ್ನು ತಣ್ಣಗೆ ತರಾಟೆಗೆ ತೆಗೆದುಕೊಳ್ಳುತ್ತಾ ಹೋಗುವ ಈ ಪುಸ್ತಕ 2005ರಲ್ಲಿ ಮಾರುಕಟ್ಟೆ ಬಂದ ಹತ್ತೇ ದಿನಗಳಲ್ಲಿ ಖಾಲಿಯಾಯಿತು. ಮತ್ತೆ ಮರು ಮುದ್ರಣ ಗಳ ಸರಣಿ. ಅದು ಈಗಲೂ ಮುಂದುವರಿದಿದೆ.

ನಳಿನಿ ಎಂಬ 24 ವರ್ಷದ ವಿಧವೆ ಈ ವೃತ್ತಿಗೆ ಬಂದದ್ದು ತನ್ನೆರಡು ಮಕ್ಕಳ ಹೊಟ್ಟೆಗಾಗಿ. ಆ ಹೊತ್ತಿನಲ್ಲಿ ತಾನು ಆರಿಸಿಕೊಳ್ಳುತ್ತಿರುವ ವೃತ್ತಿಯ ಪರಿಣಾಮಗಳೇನನ್ನೂ ಆಕೆ ಯೋಚಿಸಿರಲಿಲ್ಲ. ಆಕೆಯೇ ಬರೆದಂತೆ `ತ್ರಿಶೂರ್‌ನ ಹತ್ತಿರವಿದ್ದ ಹೆಂಚಿನ ಕಾರ್ಖಾನೆಯೊಂದರಲ್ಲಿ ನಾನು ದಿನಕ್ಕೆ ನಾಲ್ಕೂವರೆ ರೂಪಾಯಿ ಸಂಪಾದಿಸುತ್ತಿದ್ದೆ. ಒಂದು ದಿನ ನನ್ನ ಅತ್ತೆ ಸುಗ್ರೀವಾಜ್ಞೆ ಹೊರಡಿಸಿದಳು-ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ನೀನು ನನಗೆ ದಿನಕ್ಕೆ ಐದು ರೂಪಾಯಿ ಕೊಡು ಇಲ್ಲವೇ ಮನೆ ಬಿಟ್ಟು ಹೊರಡು. ನನ್ನ ಕಷ್ಟವನ್ನು ಗೆಳತಿಯೊಬ್ಬಳಿಗೆ ಹೇಳಿದೆ. ಆಕೆ ನನ್ನನ್ನು ರೋಸ್‌ಚೇಚಿಗೆ ಪರಿಚಯಿಸಿದಳು. ದಿನಕ್ಕೊಬ್ಬ ಗಂಡಸಿನ ಜತೆ ಕಳೆದರೆ ಐವತ್ತು ರೂಪಾಯಿ ಕೊಡುತ್ತೇನೆಂಬ ಭರವಸೆ ರೊಸ್‌ ಚೇಚಿಯಿಂದ ಬಂತು. ಐವತ್ತು ರೂಪಾಯಿ ಎಂದಾಕ್ಷಣ ನನಗೆ ನೆನಪಿಗೆ ಬಂದದ್ದು ಹತ್ತು ದಿನಗಳು ನನ್ನ ಮಕ್ಕಳು ಸುರಕ್ಷಿತ ಎಂಬುದು. ನಾನಾಕೆಯೊಂದಿಗೆ ತ್ರಿಶೂರ್‌ನ ರಾಮನಿಲಯಂ ಗೆಸ್ಟ್‌ ಹೌಸ್‌ಗೆ ಹೋದೆ. ಅಲ್ಲಿ ವಿಐಪಿ ರಾಜಕಾರಣಿಗಳಿಗೆ ಸೇವೆ ಒದಗಿಸಬೇಕಿತ್ತು. ಅಲ್ಲೊಬ್ಬ ಹಿರಿಯ ಪೊಲೀಸ್‌ ಅಧಿಕಾರಿಯಿದ್ದರು. ಆತನಿಗೆ ವರ್ಗಾವಣೆಯಾದುದಕ್ಕೆ ಅಲ್ಲೊಂದು `ಬೀಳ್ಕೊಡುಗೆ ಸಮಾರಂಭ' ನಡೆಯುತ್ತಿತ್ತು. ನಾನು ಆತನಿಗೆ ಒಂದು ಉಡುಗೊರೆಯಾಗಿದ್ದೆ. ಆತ ನನಗೆ ಬಟ್ಟೆ ಬಿಚ್ಚಲು ಹೇಳಿದ. ನನಗದು ಸಾಧ್ಯವಿಲ್ಲ ಎಂದೆ. ನನಗೆ ನಗ್ನಳಾಗಿ ಆತನ ಮುಂದೆ ನಿಲ್ಲುವುದು ನನ್ನ ಊಹೆಗೂ ನಿಲುಕದ ವಿಷಯವಾಗಿತ್ತು. ರೋಸ್‌ ಚೇಚಿ ಆತನನ್ನು ಸಮಾಧಾನ ಪಡಿಸಿ ಈಕೆ ಹೊಸಬಳು. ಹಳ್ಳಿಯಿಂದ ಬಂದವಳು. ಇದೇ ಮೊದಲ ಬಾರಿಗೆ ವೃತ್ತಿಗೆ ಇಳಿಯುತ್ತಿದ್ದಾಳೆ ಎಂದಳು. ಇದನ್ನು ಕೇಳಿ ಆತನಿಗೆ ಥ್ರಿಲ್‌ ಆಯಿತು. ಆತ ಮುಗಿಸಿದ ನಂತರ ಡ್ರೈವರ್‌ಗೂ ನಾನು ಬೇಕನಿಸಿತ್ತು. ಆದರೆ ನಾವದಕ್ಕೆ ಒಪ್ಪಲಿಲ್ಲ...'

ನಳಿನಿ ವೃತ್ತಿಯಾರಂಭಿಸಿದ ಮೊದಲ ದಿನವೇ ಕಾನೂನು ಮತ್ತು ಸಮಾಜದ ದ್ವಿಮುಖ ಧೋರಣೆಯ ಅನುಭವವೂ ಆಯಿತು. ಬೆಳಿಗ್ಗೆ ಗೆಸ್ಟ್‌ ಹೌಸ್‌ನಿಂದ ರೋಸ್‌ ಚೇಚಿ ಮತ್ತು ನಳಿನಿ ಹೊರಟಾಗ ಬಂದ ಪೊಲೀಸರು ಇಬ್ಬರನ್ನೂ ಬಂಧಿಸಿ ಠಾಣೆಗೆ ಕರೆದೊಯ್ದರು. ಎಲ್ಲ ಪೊಲೀಸ್‌ ಠಾಣೆಗಳಂತೆ ಅಲ್ಲಿಯೂ ಥಳಿತ ಆರಂಭವಾಯಿತು. ನಳಿನಿ ನೋವು ತಡೆಯಲಾರದೆ `ರಾತ್ರಿ ಮಲಗಲು ಪೊಲೀಸರಿಗೆ ನಾವೇ ಬೇಕು. ಹಗಲು ಹೊಡೆಯುವುದಕ್ಕೂ ನಾವೇ...' ಎಂದು ಕಿರುಚಿದರೆ ಪೆಟ್ಟಿನ ತೀಕ್ಷ್ಣತೆ ಹೆಚ್ಚಿತೇ ಹೊರತು ಬೇರೇನೂ ಸಂಭವಿಸಲಿಲ್ಲ.
ಈ ಘಟನೆಯಿಂದಾಗಿ ನಳಿನಿಯನ್ನು ಊರವರು ಬಹಿಷ್ಕರಿಸಿಬಿಟ್ಟರು. ಮತ್ತೆ ಮನೆಗೆ ಹಿಂದಿರುಗಲಾಗದೆ, ಇರಲೊಂದು ಮನೆಯೂ ಇಲ್ಲದೆ ಲೈಂಗಿಕ ವೃತ್ತಿಯನ್ನು ಮುಂದುವರಿಸುವ ಅನಿವಾರ್ಯತೆ ಸೃಷ್ಟಿಯಾಯಿತು. ರೋಸ್‌ಚೇಚಿಯೊಂದಿಗೆ ಮನೆ ಮಾಡುವುದರೊಂದಿಗೆ ವೃತ್ತಿಯಲ್ಲೊಂದು ಸ್ಥಾನವನ್ನೂ ದೊರಕಿಸಿಕೊಂಡಾಗ ಸಂಪಾದನೆ ಹೆಚ್ಚಿತು. ಅತ್ತೆಗೆ ಗುಟ್ಟಿನಲ್ಲಿ ಹಣ ಕಳುಹಿಸಿ ಮಕ್ಕಳನ್ನು ಸಾಕುವುದಕ್ಕೂ ಸಾಧ್ಯವಾಯಿತು.

ಇಂಥ ಬಹಳಷ್ಟು ವಿವರಗಳಿಂದ ತುಂಬಿರುವ ನಳಿನಿ ಜಮೀಲಾರ ಪುಸ್ತಕ ಕೇರಳದ ಲೈಂಗಿಕ ವೃತ್ತಿ ನಿರತರಾದದ್ದು ಸಂಘಟಿರಾದುದರ ಚರಿತ್ರೆಯೂ ಇದೆ. ಗೋಪಿನಾಥ್‌ ಎಂಬ ಪತ್ರಕರ್ತರೊಬ್ಬರಿಗೆ ಹೇಳಿ ಬರೆಯಿಸಿದ ಈ ಪುಸ್ತಕ ಈಗ ಇಂಗ್ಲಿಷ್‌ ಸೇರಿದಂತೆ ಅನೇಕ ಭಾಷೆಗಳಿಗೆ ಅನುವಾದಗೊಂಡಿದೆ. ವೇಶ್ಯೆ ಬರೆಯಿಸಿದ ಪುಸ್ತಕ ಎಂಬ ಕಾರಣಕ್ಕೆ ಇದರಲ್ಲಿ ಕಾಮ ಪ್ರಚೋದಕವಾದುದನ್ನು ಹುಡುಕುವವರಿಗೆ ನಿರಾಶೆಯಾಗಬಹುದು. ಆದರೆ ಸಮಾಜದ ಕ್ರೌರ್ಯದ ಚಿತ್ರಣ ಮಾತ್ರ ಖಚಿತ. ಈ ಪುಸ್ತಕಕ್ಕೆ ಸಂಬಂಧಿಸಿದಂತೆ ನಡೆದಿರುವ ವಿವಾದಗಳೂ ಅನೇಕ. ಪುಸ್ತಕದಿಂದಾಗಿ ನಳಿನಿ ಜಮೀಲಾಗೆ ಸಮಾಜದಲ್ಲೊಂದು ಒಳ್ಳೆಯ ಸ್ಥಾನ ದೊರೆತಿರುವುದಂತೂ ಖಚಿತ.

ನಳಿನಿ ಜಮೀಲಾ ಹುಟ್ಟಿದ್ದು 1954ರ ಆಗಸ್ಟ್‌ 18ರಂದು. ತ್ರಿಶೂರ್‌ ಜಿಲ್ಲೆಯ ಕಲ್ಲೂರು ಆಕೆಯ ಹುಟ್ಟೂರು. ಕಲ್ಲೂರು ಸರಕಾರೀ ಶಾಲೆಯಲ್ಲಿ ಮೂರನೇ ತರಗತಿಯವರೆಗೆ ಶಿಕ್ಷಣ ಪಡೆದ ಶಿಕ್ಷಣವನ್ನು ಹೊರತು ಪಡಿಸಿದರೆ ಉಳಿದದ್ದೆಲ್ಲಾ ಬದುಕೇ ಕಲಿಸಿದ ಪಾಠಗಳು. 2000ದಲ್ಲಿ  ಲೈಂಗಿಕ ವೃತ್ತಿ ನಿರತರ ಸಂಘಟನೆಯಾದ ಕೇರಳ ಸೆಕ್ಸ್‌ ವರ್ಕರ್ಸ್‌ ಫೋರಂ ಸೇರಿ 2001ರಿಂದ ಅದರ ಸಂಚಾಲಕಿಯಾಗಿದ್ದಾರೆ.

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.