ಕಳೆದ ವರ್ಷ ಅಂದರೆ 2005ರ ಜುಲೈ ತಿಂಗಳಲ್ಲಿ ಲಂಡನ್ ಸ್ಫೋಟ ಸಂಭವಿಸಿತು. ಈ ಘಟನೆಯ ನಂತರ ಬ್ರೆಜಿಲ್ ನ ಯುವಕನೊಬ್ಬನನ್ನು ಲಂಡನ್ ಪೊಲೀಸರು 'ತಪ್ಪಾಗಿ' ಕೊಂದು ಬಿಟ್ಟರು. ಇದೇ ಹೊತ್ತಿಗೆ ಕಾಶ್ಮೀರದಲ್ಲೂ ಸೇನಾ ಪಡೆಗಳು ಮಕ್ಕಳನ್ನು ಉಗ್ರಗಾಮಿಗಳೆಂದು ಭಾವಿಸಿ ಕೊಂದ ಘಟನೆಯೂ ನಡೆದಿತ್ತು. ಆಗ ಬರೆದ ಲೇಖನ ಇದು.
ಪ್ರಾಗ್‌ನ ಇಂಜಿನಿಯರ್ ಒಬ್ಬನಿಗೆ ಲಂಡನ್‌ನಲ್ಲಿ ಏರ್ಪಾಡಾಗಿದ್ದ ಇಂಜಿನಿಯರಿಂಗ್‌ಗೆ ಸಂಬಂಧಪಟ್ಟ ಸಮ್ಮೇಳನವೊಂದರ ಆಹ್ವಾನ ಬಂತು. ಆತ ಲಂಡನ್‌ಗೆ ಹೋದ. ಸಮ್ಮೇಳನದಲ್ಲಿ ಭಾಗವಹಿಸಿದ. ಅದು ಮುಗಿದ ನಂತರ ಪ್ರಾಗ್‌ಗೆ ಹಿಂತಿರುಗಿದ. ಮಾಮೂಲಿನಂತೆ ಕಚೇರಿಗೂ ಹೋದ. ಕಚೇರಿಯಲ್ಲಿರುವಾಗಲೇ ಆತನಿಗೆ ದೇಶವನ್ನಾಳುತ್ತಿದ್ದ ಪಕ್ಷದ ಮುಖವಾಣಿ `ರೂದ್ ಪ್ರಾವ್' ಕಾಣಸಿಕ್ಕಿತು. ಅದನ್ನೆತ್ತಿಕೊಂಡು ಕಣ್ಣಾಡಿಸಿದಾಗ ಅಲ್ಲೊಂದು ಸುದ್ದಿ…
ಲಂಡನ್‌ನಲ್ಲಿ ನಡೆದ ಸಮ್ಮೇಳನವೊಂದಕ್ಕೆ ಹೋಗಿದ್ದ ಝೆಕ್ ಇಂಜಿನಿಯರ್ ತನ್ನ ದೇಶದ ಸಮಾಜವಾದೀ ಆಡಳಿತವನ್ನು ನಿಂದಿಸಿ ಪಾಶ್ಚಾತ್ಯ ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದಾನಲ್ಲದೆ ತನಗೆ ಆ ದೇಶಕ್ಕೆ ಹೋಗಲು ಇಷ್ಟವಿಲ್ಲದಿರುವುದರಿಂದ ಬ್ರಿಟನ್ ರಾಜಕೀಯ ಆಶ್ರಯ ನೀಡಬೇಕು ಎಂದು ಕೋರಿದ್ದಾನೆ.'
ಅನಧಿಕೃತ ವಲಸೆಯ ಜತೆಗೆ ಸರಕಾರವನ್ನೂ ಟೀಕಿಸಿದರೆ ಅದೇನು ಕಡಿಮೆಯ ಅಪರಾಧವೇ. ಝೆಕ್ ಕಾನೂನುಗಳಂತೆ ಕನಿಷ್ಠ ಇಪ್ಪತ್ತು ವರ್ಷಗಳ ಜೈಲು ಗ್ಯಾರಂಟಿ. ಇಂಜಿನಿಯರ್‌ಗೆ ಜಂಘಾಬಲವೇ ಉಡುಗಿ ಹೋಯಿತು. ವಿವರಗಳನ್ನು ಓದುತ್ತಾ ಹೋದಂತೆ ಲೇಖನದಲ್ಲಿ ಹೇಳಿರುವ ಇಂಜಿನಿಯರ್ ತಾನೇ ಎಂಬುದರಲ್ಲಿ ಅವನಿಗೆ ಯಾವ ಸಂಶಯವೂ ಉಳಿಯಲಿಲ್ಲ.
ಹೊತ್ತಿಗೆ ಕಚೇರಿಗೆ ಬಂದ ಆತನ ಸೆಕ್ರಟರಿ: `ಓಹ್ ನೀವು ಬಂದಿದ್ದೀರಾ-ಅವರು ಬರೆದಿರುವುದು…?' ಎಂದು ಕಂಗಾಲಾಗುತ್ತಾಳೆ. ಇಂಜಿನಿಯರ್‌ನನ್ನು ಭಯ ಆಕ್ರಮಿಸಿಕೊಳ್ಳತೊಡಗುತ್ತದೆ.
ಇದ್ದ ಅಲ್ಪ ಸ್ವಲ್ಪ ಧೈರ್ಯವನ್ನು ಕೂಡಿಸಿಕೊಂಡು ಆತ ಸೀದಾ ಹೋದದ್ದು ರೂದ್ ಪ್ರಾವ್ ಕಚೇರಿಗೆ. ಸುದ್ದಿ ಪ್ರಕಟಿಸಿದ ಸಂಪಾದಕನನ್ನು ಭೇಟಿಯಾಗುತ್ತಾನೆ. ಇಂಜಿನಿಯರ್‌ನ ಅಹವಾಲು ಕೇಳಿದ ಸಂಪಾದಕ ತನ್ನದೇನೂ ತಪ್ಪಿಲ್ಲ. ಗೃಹ ಸಚಿವಾಲಯ ಕಳುಹಿಸಿದ ಪತ್ರಿಕಾ ಟಿಪ್ಪಣಿ ಆಧರಿಸಿ ಸುದ್ದಿಯನ್ನು ಬರೆಯಲಾಗಿದೆ ಎಂದು ಕೈಚೆಲ್ಲಿದ.
ಇಂಜಿನಿಯರ್ ಅಲ್ಲಿಂದ ಗೃಹ ಸಚಿವಾಲಯಕ್ಕೆ ಹೋದ. ಅವರೂ ತಪ್ಪಾಗಿದೆ ಎಂಬುದನ್ನು ಒಪ್ಪಿದರು. ಆದರೆ `ಈ ತಪ್ಪು ನಮ್ಮದಲ್ಲ. ಲಂಡನ್‌ನಲ್ಲಿರುವ ರಾಯಭಾರ ಕಚೇರಿಯಿಂದ ಕಳುಹಿಸಿದ ಗುಪ್ತಚರ ವರದಿಯ ಆಧಾರದಲ್ಲಿ ಪತ್ರಿಕಾ ಟಿಪ್ಪಣಿ ಸಿದ್ಧಪಡಿಸಲಾಯಿತು' ಎಂದು ಸ್ಪಷ್ಟೀಕರಿಸಿದರು.
ಕೊನೆಗೂ ತಪ್ಪು ಎಲ್ಲಿ ಸಂಭವಿಸಿತು ಎಂಬುದನ್ನು ಕಂಡುಹಿಡಿದ ಸಂತೋಷದಲ್ಲಿ ಇಂಜಿನಿಯರ್ ಗೃಹ ಸಚಿವಾಲಯ ಈ ಬಗ್ಗೆ ಪತ್ರಿಕೆಗಳಿಗೊಂದು ಸ್ಪಷ್ಟೀಕರಣ ನೀಡಬೇಕೆಂದು ಕೇಳಿಕೊಂಡ. ಆದರೆ ಗೃಹ ಸಚಿವಾಲಯ `ಸ್ಪಷ್ಟೀಕರಣ ನೀಡಲು ಸಾಧ್ಯವಿಲ್ಲ. ಆದರೆ ಇದರಿಂದ ನಿಮಗೇನೂ ತೊಂದರೆಯಾಗುವುದಿಲ್ಲ, ನೀವು ಭಯಪಡಬೇಡಿ' ಎಂಬ ಭರವಸೆ ನೀಡಿತು.
ಆದರೆ ಇಂಜಿನಿಯರ್‌ನ ಭಯ ಹೆಚ್ಚುತ್ತಲೇ ಹೋಯಿತು. ತನ್ನ ಮೇಲೆ ನಿಗಾ ಇರಿಸಲಾಗಿದೆ. ತನ್ನ ದೂರವಾಣಿ ಕರೆಗಳನ್ನು ಕದ್ದಾಲಿಸಲಾಗುತ್ತಿದೆ, ಬೀದಿಯಲ್ಲಿ ಹೋಗುವಾಗ ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂಬ ಭಯಗಳಿಂದ ಆತ ನರಳತೊಡಗಿದ. ನಿದ್ರೆ ಆತನ ಹತ್ತಿರವೂ ಸುಳಿಯದಂತಾಯಿತು. ನಿದ್ರೆ ಬಂದರೂ ಭಯಂಕರ ಕನಸುಗಳು ಆತನ ಬೆನ್ನು ಹತ್ತಿದವು. ಈ ಒತ್ತಡವನ್ನು ತಾಳಲಾರದೆ ಕೊನೆಗೊಂದು ದಿನ ಆತ ಎಲ್ಲಾ ಕಾನೂನುಗಳನ್ನೂ ಉಲ್ಲಂಘಿಸಿ ಕಳ್ಳ ಹಾದಿಯಲ್ಲಿ ದೇಶ ಬಿಟ್ಟು ಓಡಿ ಹೋದ.
ಇದು ಜೋಸೆಫ್ ಸ್ಕ್ವೊರೆಸ್ಕಿ ಎಂಬ ಲೇಖಕ ಬರೆದ ಒಂದು ಸತ್ಯ ಕಥೆ. ಇದನ್ನು ಕುಂದೇರ ತನ್ನ ಆರ್ಟ್ ಆಫ್ ನಾವೆಲ್‌ನಲ್ಲಿ ಉಲ್ಲೇಖಿಸುತ್ತಾನೆ. ಕುಂದೇರ ಈ ಕಥೆಯನ್ನು ಉಲ್ಲೇಖಿಸುವುದು ಒಂದು `ಕಾಫ್ಕನ್ ಸ್ಥಿತಿ' ಎಂಬ ಕುತೂಹಲಕರ ವಿದ್ಯಮಾನವನ್ನು ವಿವರಿಸಲು.
ಈ ಕಾಫ್ಕನ್ ಸ್ಥಿತಿಯ ಬಗ್ಗೆ ಸಾಹಿತ್ಯದ ವಿದ್ಯಾರ್ಥಿಗಳಿಗೆ ಗೊತ್ತಿದೆ. ಪ್ರಾಗ್‌ನ ಇಂಜಿನಿಯರ್‌ನ ಕತೆಯಂಥವಕ್ಕೆ ಅವರು `ಕಾಫ್ಕಯಿಸ್ಕ್' ಕತೆಗಳು ಎಂಬ ಹಣೆಪಟ್ಟಿ ಹಚ್ಚುವುದೂ ಇದೆ. ಇಷ್ಟಕ್ಕೂ ಏನೀ ಕಾಫ್ಕನ್ ಸ್ಥಿತಿ?
ನೂರಾ ಇಪ್ಪತ್ತೆರಡು ವರ್ಷಗಳ ಹಿಂದೆ ಜುಲೈ ತಿಂಗಳ ಮೂರನೇ ತಾರೀಕಿನಂದು ಆಗಿನ ಆಸ್ಟ್ರೋ ಹಂಗರಿಯನ್ ಸಾಮ್ರಾಜ್ಯದ ವ್ಯಾಪ್ತಿಯಲ್ಲಿ ಬರುತ್ತಿದ್ದ ಪ್ರಾಗ್ ನಗರದಲ್ಲಿ ಫ್ರಾಂಜ್ ಕಾಫ್ಕಾ ಹುಟ್ಟಿದ. ಕಾಫ್ಕಾನ ಮನೆ ಮಾತು ಜರ್ಮನ್. ಆದರೆ ದಕ್ಷಿಣ ಬೊಹೆಮಿಯಾದಿಂದ ಪ್ರಾಗ್‌ಗೆ ವಲಸೆ ಬಂದಿದ್ದ ಪ್ರಾಂಜ್ ಕಾಫ್ಕಾನ ತಂದೆ ಹರ್ಮನ್ ಕಾಫ್ಕಾನಿಗೆ ಮಗ ಜರ್ಮನ್ ಹಾಗೂ ಝೆಕ್ ಭಾಷೆಗಳೆರಡರಲ್ಲೂ ಪರಿಣತಿ ಹೊಂದಬೇಕೆಂಬ ಆಸೆಯಿತ್ತು. ಹಾಗಾಗಿ ಫ್ರಾಂಜ್ ಕಾಫ್ಕಾ ಝೆಕ್ ಭಾಷೆಯನ್ನೂ ಕಲಿತ.
ಫ್ರಾಂಜ್ ಕಾಫ್ಕಾ ಎಷ್ಟು ಭಾಷೆಯನ್ನು ಕಲಿತ ಎಂಬುದಕ್ಕಿಂತ ಆತ ತನ್ನ ಬರೆಹಗಳಲ್ಲಿ ಅನಾವರಣಗೊಳಿಸಿದ ವ್ಯವಸ್ಥೆಯ ಕರಾಳ ರೂಪ ಆತನಿಗೆ ಸಾಹಿತ್ಯ ಚರಿತ್ರೆಯಲ್ಲಿ ಒಂದು ಶಾಶ್ವತ ಸ್ಥಾನವನ್ನು ಕಲ್ಪಿಸಿಕೊಟ್ಟಿತು. ಕಾಫ್ಕಾನ ಕೃತಿಗಳು ವ್ಯವಸ್ಥೆಗೊಂದು ಭಾಷ್ಯ ಬರೆಯುತ್ತವೆ.
ಈ ಭಾಷ್ಯ ಬಹಳ ಸರಳ. ಪ್ರಾಗ್‌ನ ಇಂಜಿನಿಯರ್‌ನ ಕತೆಯನ್ನೇ ಇದಕ್ಕೆ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಅವನಿಗೆ ಎದುರಾಗಿರುವುದು ಗಡಿಯೇ ಇಲ್ಲದ ಚಕ್ರವ್ಯೂಹದಂಥಾ ಒಂದು ವ್ಯವಸ್ಥೆ. ಈ ಚಕ್ರವ್ಯೂಹದ ಹೃದಯಕ್ಕೆ ಆತನಿಗೆ ಪ್ರವೇಶಿಸಲು ಸಾಧ್ಯವೇ ಇಲ್ಲ. ತನ್ನ ವಿರುದ್ಧ ರಾಜದ್ರೋಹದ ಆರೋಪ ಹೊರಿಸಿದವರಾರು ಎಂಬುದನ್ನು ಅರಿಯಲು ಆತನಿಗೆ ಸಾಧ್ಯವಿಲ್ಲ. ಇದು ನ್ಯಾಯಾಲಯದ ಕಟೆಕಟೆಯಲ್ಲಿ ನಿಂತಿರುವ ಕಾಫ್ಕಾನ `ಟ್ರಯಲ್'ನಲ್ಲಿರುವ ಜೋಸೆಫ್ ಕೆ.ಯಂಥದ್ದೇ ಸ್ಥಿತಿ. ದುರ್ಗದೆದುರು ನಿಂತಿರುವ `ಕ್ಯಾಸ್ಲ್'ನ ಮಿಸ್ಟರ್ ಕೆ.ಯ ಸ್ಥಿತಿಯೂ ಇದೇ.
ಕಾಫ್ಕಾನಿಗಿಂತ ಮೊದಲು ಬರೆದ ಲೇಖಕರೆಲ್ಲರೂ ವ್ಯವಸ್ಥೆಯನ್ನು ವಿವಿಧ ಆಸಕ್ತಿಗಳ ನಡುವಣ ಸಂಘರ್ಷದ ವೇದಿಕೆ ಎನ್ನುವಂತೆ ಚಿತ್ರಿಸಿದ್ದರು. ಆದರೆ ಕಾಫ್ಕಾನ ಗ್ರಹಿಕೆ ಸಂಪೂರ್ಣ ಭಿನ್ನ. ಆತನ ದೃಷ್ಟಿಯಲ್ಲಿ ವ್ಯವಸ್ಥೆ ಕೇವಲ ಒಂದು ವೇದಿಕೆಯಲ್ಲ. ಇದೊಂದು ದೊಡ್ಡ ಯಂತ್ರ. ತಾನೇ ಸೃಷ್ಟಿಸಿಕೊಂಡ ನಿಯಮಗಳನ್ನು ಪಾಲಿಸುವ ಯಂತ್ರ. ಈ ನಿಯಮಗಳನ್ನು ಯಾರು ಮತ್ತು ಯಾವಾಗ ರೂಪಿಸಿದರು ಎಂದು ಈಗ ಯಾರಿಗೂ ಗೊತ್ತಿಲ್ಲ. ಈ ನಿಯಮಗಳಿಗೆ ಮನುಷ್ಯನ ಸಮಸ್ಯೆಗಳೇನು ಎಂಬುದು ಅರ್ಥವಾಗುವುದಿಲ್ಲ. ಅಷ್ಟೇಕೆ ಇವು ಮೂರ್ಖ ನಿಯಮಗಳು ಎಂಬುದೂ ವ್ಯವಸ್ಥೆಗೆ ತಿಳಿಯದು.
ಹೌದು, ವ್ಯವಸ್ಥೆಗಳಿರುವುದೇ ಹಾಗೆ. ಇದನ್ನು ಅರ್ಥ ಮಾಡಿಕೊಳ್ಳಲು ಸಾಹಿತ್ಯ ಕೃತಿಗಳೇ ಬೇಕೆಂದೇನೂ ಇಲ್ಲ. ಒಂದೆರಡು ದಿನಗಳ ಹಿಂದಷ್ಟೇ ನಡೆದ ಎರಡು ಘಟನೆಗಳನ್ನು ನೋಡೋಣ. ಒಂದು: ಬ್ರೆಜಿಲ್ ಮೂಲದ ಜೀನ್ ಚಾರ್ಲ್ಸ್ ಡಿ ಮಿನೆಜಸ್ ಎಂಬ ಇಲೆಕ್ಟ್ರೀಷಿಯನ್‌ನ ಕೊಲೆ. ಎರಡು: ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಳ್ಳಿಯೊಂದರಲ್ಲಿ ಮದುವೆ ಮುಗಿಸಿ ಮನೆಗೆ ಹಿಂದಿರುಗುತ್ತಿರುವಾಗ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ನಾಲ್ಕು ಮಂದಿ ಮಕ್ಕಳು.
ಚಾರ್ಲ್ಸ್ ಮಿನೆಜೆಸ್ ಆಗಲೀ ಕುಪ್ವಾರದ ಮಕ್ಕಳಾಗಲೀ ವ್ಯವಸ್ಥೆ ಹೇಳುವ ಯಾವ ನಿಯಮಗಳ ಪ್ರಕಾರವೂ ತಪ್ಪು ಮಾಡಿಲ್ಲ. ಆದರೆ ವ್ಯವಸ್ಥೆ ಅವರನ್ನು ಕೊಂದಿದೆ. ಚಾರ್ಲ್ಸ್ ಮಿನೆಜಸ್ ಕಳೆದ ನಾಲ್ಕು ವರ್ಷಗಳಿಂದ ಲಂಡನ್‌ನಲ್ಲಿ ಎಲ್ಲಾ ದಾಖಲೆ ಪತ್ರಗಳೊಂದಿಗೆ ಅಧಿಕೃತವಾಗಿ ವಾಸಿಸುತ್ತಿರುವ ವ್ಯಕ್ತಿ. ವೃತ್ತಿಯಲ್ಲಿ ಇಲೆಕ್ಟ್ರೀಶಿಯನ್. ಆಗಸ್ಟ್ 21ರ ಗುರುವಾರದಂದು ನಡೆದ ವಿಫಲ ಬಾಂಬ್ ಸ್ಫೋಟ ಪ್ರಕರಣದ ನಂತರ ಈತನ ವಸತಿಯ ಮೇಲೆ ಪೊಲೀಸರು ಒಂದು ಕಣ್ಣಿಟ್ಟಿದ್ದರು. ಶುಕ್ರವಾರ ಆತ ಎಂದಿನಂತೆ ಮನೆಯಿಂದ ಹೊರಗೆ ಹೊರಟಾಗಲೂ ಮಫ್ತಿಯಲ್ಲಿದ್ದ ಪೊಲೀಸರು ಆತನನ್ನು ಹಿಂಬಾಲಿಸಿದರು. ಸ್ಟಾಕ್‌ವೆಲ್ ಟ್ಯೂಬ್ ಸ್ಟೇಷನ್‌ನಲ್ಲಿ (ಭೂಗತ ರೈಲು ನಿಲ್ದಾಣ) ರೈಲು ಹತ್ತಲು ಹೊರಟಿದ್ದ ಚಾರ್ಲ್ಸ್ ಮಿನೆಜಸ್‌ನ ಮೇಲೆ ಮುಗಿಬಿದ್ದ ಪೊಲೀಸರು ಆತನ ಮೈಗೆ ಕನಿಷ್ಠ ಐದು ಗುಂಡುಗಳನ್ನು ಹೊಡೆಯುವ ಮೂಲಕ ಕೊಂದರು.
ಲಂಡನ್‌ನ ಈ ಎರಡೂ ಸ್ಫೋಟಗಳ ಹಿಂದಿರುವುದು ಒಸಾಮಾ ಬಿನ್ ಲಾಡೆನ್ ಅಲ್‌ಖೈದಾ ಜಾಲವಂತೆ. ಈ ಜಾಲದಲ್ಲಿರುವುದೆಲ್ಲಾ ಮುಸ್ಲಿಂ ಮೂಲಭೂತವಾದಿಗಳಂತೆ. ಚಾರ್ಲ್ಸ್ ಮುಸ್ಲಿಮನಲ್ಲ. ಈತ ಕ್ಯಾಥೊಲಿಕ್. ಈತ ಮುಸ್ಲಿಂ ಮೂಲಭೂತವಾದಿಗಳ ಸ್ವರ್ಗವೆಂದು ಪಶ್ಚಿಮದವರು ಬಣ್ಣಿಸುವ ಏಷ್ಯಾ ಅಥವಾ ಆಫ್ರಿಕಾ ಖಂಡಗಳ ಯಾವ ದೇಶಕ್ಕೂ ಸೇರಿದವನಲ್ಲ. ಈತ ದಕ್ಷಿಣ ಅಮೆರಿಕ ಖಂಡದ ಬ್ರೆಜಿಲ್‌ನವನು. ಆದರೂ ಈತನ ಮೇಲೆ ಏಕೆ ಪೊಲೀಸರು ಒಂದು ಕಣ್ಣಿರಿಸಿದ್ದರು? ಕಣ್ಣಿರಿಸಿದ್ದರೆ ಮನೆಯಿಂದ ಹೊರಗೆ ಹೊರಡದಂತೆ ಅಲ್ಲಿಯೇ ಬಂಧಿಸಿ ಯಾಕೆ ವಿಚಾರಣೆ ನಡೆಸಲಿಲ್ಲ? ಒಂದು ವೇಳೆ ಈತನ ಚಲನವಲವನ್ನು ಗಮನಿಸುವುದೇ ಇವರ ಉದ್ದೇಶವಾಗಿದ್ದರೆ ಆತ ಟ್ಯೂಬ್ ಸ್ಟೇಷನ್ ತಲುಪುವ ಮೊದಲೇ ತಡೆಯಬಹುದಿತ್ತಲ್ಲವೇ?
ಪ್ರಶ್ನೆಗಳಿಗೆಲ್ಲಾ ಲಂಡನ್‌ನ ಪೊಲೀಸರು ನೀಡುವ ಉತ್ತರಗಳು ಪ್ರಾಗ್‌ನ ಇಂಜಿನಿಯರ್‌ಗೆ ದೊರೆತ ಉತ್ತರಗಳಂತೆಯೇ ಇವೆ. `ನಾವು ಆತನನ್ನು ನಿಲ್ಲುವಂತೆ ಹೇಳಿದೆವು', `ಆತ ರೈಲು ಹತ್ತಲು ಪ್ರಯತ್ನಿಸಿದ', `ಆತ ಓಡಿದ'. ಸಾಮಾನ್ಯ ಜ್ಞಾನವಿರುವ ಯಾರು ಬೇಕಾದರೂ ನಡೆದದ್ದೇನು ಎಂಬುದನ್ನು ಊಹಿಸಬಹುದು. ಯಾರಾದರೊಬ್ಬ ಸಾಮಾನ್ಯ ಮನುಷ್ಯನನ್ನು ನಾಲ್ಕು ಮಂದಿ ದಡಿಯರು ಹಿಂಬಾಲಿಸಿದರೆ ಆತನ ತಕ್ಷಣದ ಪ್ರತಿಕ್ರಿಯೆ ಏನಾಗಿರಬಹುದು? ಯಾರೋ ತನ್ನನ್ನು ದೋಚಲು ಬರುತ್ತಿದ್ದಾರೆ ಎಂದು ಭಾವಿಸಿ ಸುರಕ್ಷಿತ ಸ್ಥಳಕ್ಕೆ ಆತ ಧಾವಿಸುತ್ತಾನೆ. ಚಾರ್ಲ್ಸ್ ವಿಷಯದಲ್ಲಿ ಆಗಿರುವುದು ಅಷ್ಟೇ. ಮಫ್ತಿಯಲ್ಲಿರುವ ಪೊಲೀಸರನ್ನು ಆತ ಪೊಲೀಸರೆಂದು ಗುರುತಿಸಲು ಸಾಧ್ಯವೇ? ಅವರ ಕೈಯಲ್ಲಿರುವ ಪಿಸ್ತೂಲು ನೋಡಿ ಇವರ್ಯಾರೋ ಸಶಸ್ತ್ರ ದರೋಡೆಕೋರ ತಂಡ ಎಂದು ಆತ ಭಾವಿಸಿದರೆ ಅದು ಅವನ ತಪ್ಪೇ? ಇಷ್ಟಾಗಿಯೂ ಓಡದೇ ಇರಲು ಆತ ಏಜೆಂಟ್ 007 ಆಗಿರಬೇಕಷ್ಟೆ.
ಕುಪ್ವಾರ ಜಿಲ್ಲೆಯ ಬಂಗಾರ್‌ಗುಡ್‌ನಲ್ಲಿ ನಡೆದ ಘಟನೆಯೂ ಅಷ್ಟೇ. ತಡರಾತ್ರಿ ಮದುವೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ನಾಲ್ಕು ಮಂದಿ ಮಕ್ಕಳನ್ನು ಭದ್ರತಾ ಪಡೆಯವರು ಭಯೋತ್ಪಾದಕರೆಂದು ಭಾವಿಸಿದರು ಮತ್ತು ಗುಂಡು ಹಾರಿಸಿದರು. ಈ ಮಕ್ಕಳ ಬಳಿ ಬಂದೂಕಿರಲಿಲ್ಲ. ಅಷ್ಟೇಕೆ ಒಂದು ಗಟ್ಟಿಯಾದ ಕಟ್ಟಿಗೆ ತುಂಡೂ ಇರಲಿಲ್ಲ. ಆದರೂ ಅವರು ಹೇಗೆ ಭಯೋತ್ಪಾದಕರಂತೆ ಕಾಣಿಸಿದರು?
ವ್ಯವಸ್ಥೆಯ ಯಾಂತ್ರಿಕತೆಗೆ ಗಡಿಗಳೇನೂ ಇಲ್ಲ. ಲಂಡನ್‌ನ `ಬುದ್ಧಿವಂತ' ಪೊಲೀಸರು ಹಾಗೂ ಭಾರತದ `ಅತ್ಯುತ್ಸಾಹೀ' ಭದ್ರತಾ ಪಡೆಗಳ ಮಧ್ಯೆ ವ್ಯತ್ಯಾಸಗಳೇನೂ ಇಲ್ಲ ಎಂಬುದನ್ನು ಎರಡೂ ಘಟನೆಗಳು ಸಾಬೀತು ಮಾಡುತ್ತವೆ. ಜುಲೈ ಏಳರ ದಾಳಿಯ ನಂತರ ಲಂಡನ್ ಪೊಲೀಸರ ನಿಯಮಗಳು ಬದಲಾಗಿವೆ. ಪೊಲೀಸರಿಗೆ ಯಾರಾದರೂ ಮಾನವ ಬಾಂಬ್‌ನಂತೆ ಕಾಣಿಸಿದರೆ ಆತ/ಆಕೆಯ ತಲೆಗೆ ಗುಂಡು ಹಾರಿಸಬೇಕೆಂದು ಈ ನಿಯಮ ಹೇಳುತ್ತದೆ. ಕಾಲು, ಎದೆ, ಸೊಂಟಗಳಿಗೆ ಗುಂಡು ಹಾರಿಸಿದರೆ ಆತ ಬಾಂಬ್ ಸಿಡಿಸುವ ಸಾಧ್ಯತೆ ಇರುವುದರಿಂದ ನೇರ ತಲೆಗೇ ಗುಂಡು ಹೊಡೆಯಲು ಪೊಲೀಸರಿಗೆ ನಿರ್ದೇಶಿಸಲಾಗಿದೆ. ನಿಯಮವೇನೋ ಬಹಳ ತಾರ್ಕಿಕವಾಗಿದೆ. ಆದರೆ ಪೊಲೀಸರು ಸಂಶಯಿಸಿದ ವ್ಯಕ್ತಿ ಮಾನವ ಬಾಂಬ್ ಆಗದಿದ್ದರೆ?
ಇದು ಭಾರತದ ವಿಷಯದಲ್ಲೂ ಸರಿ. ಪೊಲೀಸರು ಸಂಶಯಿಸಿದ ವ್ಯಕ್ತಿ ಭಯೋತ್ಪಾದಕನಾಗದೇ ಇದ್ದರೆ?
ವ್ಯವಸ್ಥೆ ಒಂದು ಯಂತ್ರ. ಅದು ತಾನೇ ರೂಪಿಸಿಕೊಂಡ ನಿಯಮಗಳಂತೆ ನಡೆಯುತ್ತದೆ. ಈ ನಿಯಮಗಳನ್ನು ಯಾರು ಮತ್ತು ಯಾಕೆ ರೂಪಿಸಿದರು ಎಂಬುದು ಈಗ ಯಾರಿಗೂ ಗೊತ್ತಿಲ್ಲ!