ತೇಜಸ್ವಿಯವರ ಕಿರಗೂರಿನ ಗಯ್ಯಾಳಿಗಳು ಕತೆಯ ಆರಂಭದ ಸಾಲುಗಳು ಹೇಳುವಂತೆ `ಎಲ್ಲಾ ಶುರುವಾಗಿದ್ದು ಕಿರಗೂರಿನ ಮೇಲೆ ಮೂರು ರಾತ್ರಿ, ಮೂರು ಹಗಲು ಇದ್ದಕ್ಕಿದ್ದಂತೆ ಬೀಸಿದ ಬಿರುಗಾಳಿಯ ದೆಸೆಯಿಂದ’. ನನಗೂ ತೇಜಸ್ವಿ ಪರಿಚಯವಾಗಿದ್ದು ಹೀಗೆಯೇ. ಅವರದ್ದೇ ಭಾಷೆಯನ್ನು ಬಳಸಿ ಹೇಳುವುದಾದರೆ ಎಲ್ಲಾ ಶುರುವಾಗಿದ್ದು `ಜನವಾಹಿನಿ’ಯಲ್ಲಿ ನಾನು ಅನಗತ್ಯವಾಗಿ ಮಾಡಿಕೊಂಡ ಜಗಳಗಳಿಂದ!
ಮಂಗಳೂರಿನಲ್ಲಿದ್ದ ನಾನು ಚಿಕ್ಕಮಗಳೂರಿಗೆ ಜಿಲ್ಲಾ ವರದಿಗಾರನಾಗಿ ಬಂದಾಗ ಕಾಫಿಗೆ ರೇಟು ಕುಸಿದಿತ್ತು. ಏಲಕ್ಕಿ ಮಾರುಕಟ್ಟೆಯ ಕುರಿತು ಚರ್ಚೆಗಳೇ ನಿಂತು ಹೋಗಿದ್ದವು. ಕಾಳು ಮೆಣಸಿನ ಬೆಲೆ ರೈತರನ್ನು ಸೂಜಿಗಲ್ಲಿನಷ್ಟು ಆಕರ್ಷಣೀಯವಾಗಿತ್ತು. ಈ ಬೆಲೆಗಳ ಏರಿಳಿತದ ಮರ್ಮವನ್ನು ಅರಿಯಲು ತೇಜಸ್ವಿಯವರಿಗೊಂದು ಫೋನ್ ಮಾಡಲು ನಿರ್ಧರಿಸಿದೆ. ನನ್ನ ಸಹೋದ್ಯೋಗಿ ಜಯರಾಮ್ `ಅವರ ಹತ್ತಿರ ಮಾತಾಡುವುದು ಕಷ್ಟ ಸರ್. ಬೈದು ಬಿಡ್ತಾರೆ’ ಎಂದು ಹೆದರಿಸಿದರು. ನಾನು ಹುಚ್ಚು ಧೈರ್ಯದಿಂದ ಫೋನ್ ಮಾಡಿಯೇ ಬಿಟ್ಟೆ. ಅವರು ಕಾಫಿ ಬೆಲೆ ಕುಸಿತದ ಮರ್ಮವನ್ನೂ ಫ್ಯೂಚರ್ಸ್ ಮಾರುಕಟ್ಟೆಯ ವ್ಯವಹಾರವನ್ನೂ ಕತೆಯಂತೆ ಕುತೂಹಲಕರವಾಗಿ ವಿವರಿಸಿದರು. ಈ ಹೊತ್ತಿಗೆ ನನಗೂ ಧೈರ್ಯ ಬಂದು ಮನೆಗೊಮ್ಮೆ ಬರುತ್ತೇನೆ ಇನ್ನಷ್ಟು ಮಾತನಾಡಬೇಕು ಎಂದೆ.
`ನಾನೇನು ವಿಐಪಿ ಅಲ್ಲಾರೀ. ಒಂದು ಫೋನ್ ಮಾಡಿ ಬನ್ನಿ’ ಎಂದರು.
ಇದನ್ನು ಜಯರಾಮ್‌ಗೆ ಹೇಳಿದರೆ ಅವರು ನನ್ನನ್ನು ಸ್ವಲ್ಪ ಸಂಶಯದಿಂದಲೇ ನೋಡಿದರು. ಇದಾದ ಒಂದೆರಡು ದಿನಗಳ ನಂತರ ಒಂದು ಮುಂಜಾನೆಯೇ ಹೊರಟು ತೇಜಸ್ವಿಯವರ ಮನೆಗೆ ಹೋದೆ. ಆಗಿನ್ನು ಮನೆ ಹಳೆಯ ಸ್ವರೂಪದಲ್ಲೇ ಇತ್ತು. ಅವರ ಪ್ರೀತಿಯ ಕಾಕರ್ ಸ್ಪ್ಯಾನಿಯಲ್ ನಾಯಿ `ಮರಿ’ಯೂ ಇತ್ತು. ಎಲ್ಲಾ ಶುರುವಾದದ್ದು ಇವ್ಯಾವುದರಿಂದಲೂ ಅಲ್ಲ. ಎಲ್ಲಾ ಶುರುವಾದದ್ದು ತೇಜಸ್ವಿಯವರು ಬಳಸುತ್ತಿದ್ದ ವಿಂಡೋಸ್-95 ಎಂಬ ಸಾಫ್ಟ್‌ವೇರ್‌ನಿಂದ!
ಅವತ್ತು ಮಾತಿನ ಮಧ್ಯೆ ಅದು ಹೇಗೋ ಕಂಪ್ಯೂಟರ್ ನುಸುಳಿಕೊಂಡಿತ್ತು. ಕುವೆಂಪು ಹಸ್ತಾಕ್ಷರದಲ್ಲಿರುವ `ರಾಮಾಯಣ ದರ್ಶನಂ’ ರೂಪುಗೊಂಡದ್ದನ್ನು ತಿಳಿಯುವ ನನ್ನ ಕುತೂಹಲಕ್ಕೆ ಉತ್ತರ ನೀಡುತ್ತಾ ಅದನ್ನು ತೋರಿಸಲು ಅವರ ಕಂಪ್ಯೂಟರ್ ಕೋಣೆಗೆ ಕರೆದೊಯ್ದರು. ಅಲ್ಲಿರುವ ಎರಡೂ ಕಂಪ್ಯೂಟರ್‌ಗಳಲ್ಲಿಯೂ ಇದ್ದದ್ದು ವಿಂಡೋಸ್-95. ನಾನಾಗಲೇ ವಿಂಡೋಸ್-2000 ಬಳಸಲು ಆರಂಭಿಸಿದ್ದರಿಂದ `ಸರ್, ನೀವಿನ್ನೂ 95ಯಲ್ಲೇ ಇದ್ದೀರಲ್ಲಾ…?’ ಎಂದೆ.
ಆ ಹೊತ್ತಿಗೆ `ಜನವಾಹಿನಿ’ಯವರು ಕಚೇರಿಗೆಂದು ಕೊಟ್ಟಿದ್ದ ಕಂಪ್ಯೂಟರಿನ ಮೇಲೆಯೇ ವಿವಿಧ ಪ್ರಯೋಗಗಳನ್ನು ನಡೆಸುತ್ತಿದ್ದ ನಾನು ಯಾವತ್ತೂ ಕನ್ನಡ ಸಾಫ್ಟ್‌ವೇರ್‌ಗಳ ಗೊಂದಲ, ಭವಿಷ್ಯದಲ್ಲಿ ಅದರ ಪರಿಣಾಮಗಳ ಬಗ್ಗೆ ಯೋಚಿಸಿರಲಿಲ್ಲ. ನನ್ನ ಆಸಕ್ತಿಗಳೆಲ್ಲಾ ಸಣ್ಣ ಪುಟ್ಟ ಯುಟಿಲಿಟಿಗಳು, ಅಂತರ್ಜಾಲದಲ್ಲಿ ಉಚಿತವಾಗಿ ಸಿಗುವ ಗೇಮ್‌ಗಳನ್ನು ಬಳಸುವುದು, ಇವಲ್ಯೂಷನ್ ವರ್ಷನ್‌ಗಳನ್ನು ಶಾಶ್ವತವಾಗಿ ಉಳಿಸುವುದು ಹೇಗೆ ಎಂಬುದರ ಕುರಿತು `ಸಂಶೋಧನೆ’ ನಡೆಸುವುದಕ್ಕೆ ಸೀಮಿತವಾಗಿತ್ತು.
ಅವತ್ತು ತೇಜಸ್ವಿ ಕನ್ನಡ ಕಂಪ್ಯೂಟಿಂಗ್‌ನ ಗೊಂದಲಗಳನ್ನು ಒಂದೊಂದಾಗಿ ಬಿಡಿಸಿಟ್ಟರು. `ನಾನು ಎಂಎಸ್ ಡಾಸ್‌ನಿಂದ ವಿಂಡೋಸ್-95ಗೆ ಬರುವ ಕ್ರಿಯೆಯಲ್ಲೇ ನನ್ನ ಡೇಟಾ ಹಾಳಾಯಿತು. ಇಲ್ಲಿಂದ ಮುಂದಕ್ಕೆ ಹೋಗುವಾಗ ಮತ್ತೊಮ್ಮೆ ಡೇಟಾ ಕಳೆದುಕೊಂಡು ಅದನ್ನು ಪುನರ್‌ಸೃಷ್ಟಿಸಬೇಕು. ಎಸ್‌ಆರ್‌ಜಿಯವರೂ ಇದಕ್ಕೆ ಪರಿಹಾರ ಕೊಡುತ್ತಿಲ್ಲ. ನನ್ನ ಮಗಳು ಬಹಳ ಒದ್ದಾಡಿ ಒಂದಷ್ಟನ್ನು ಸರಿ ಮಾಡಿದಳು. ಇನ್ನಷ್ಟು ರಿಸ್ಕ್ ತೆಗೆದುಕೊಳ್ಳುವುದಕ್ಕೆ ಆಗದೆ ಸುಮ್ಮನಿದ್ದೇನೆ…’ ಇದಿಷ್ಟೂ ಅವರ ಮಾತಿನ ಸಾರ.
ಕೆಲ ದಿನಗಳ ಹಿಂದಷ್ಟೇ ಅವರು 20 ಗಿಗಾಬೈಟ್ ಸಾಮರ್ಥ್ಯದ ಒಂದು ಹಾರ್ಡ್ ಡಿಸ್ಕ್ ತಂದು ತಮ್ಮ ಕಂಪ್ಯೂಟರಿಗೆ ಅಳವಡಿಸಿದ್ದರು. ಆದರೆ ಅವರ ಆಪರೇಟಿಂಗ್ ಸಿಸ್ಟಂ ಮಾತ್ರ ಇದನ್ನು ಗುರುತಿಸುತ್ತಲೇ ಇರಲಿಲ್ಲ. ಇದಕ್ಕೆ ಕಾರಣ ಹುಡುಕುತ್ತಲೇ ಇದ್ದ ಅವರು `ಈ ಕಂಪ್ಯೂಟರ್‌ಗಳೂ ಮನುಷ್ಯರ ತರ ಆಡ್ತಾವೆ. ನೋಡು ಹೊಸ ಹಾರ್ಡ್ ಡಿಸ್ಕ್ ಹಾಕಿದರೆ ಇದಕ್ಕೆ ಗೊತ್ತೇ ಆಗಲ್ಲ’ ಎಂದರು.
ನನಗೆ ತಕ್ಷಣ ಸಮಸ್ಯೆ ಏನು ಎಂಬುದು ಅರ್ಥವಾಯಿತು. ವಿಂಡೋಸ್-95ಗೆ ಎಂಟು ಗಿಗಾ ಬೈಟ್‌ಗಳಿಗಿಂತ ಹೆಚ್ಚಿನದ್ದನ್ನು ಗುರುತಿಸುವ ಸಾಮರ್ಥ್ಯವಿರಲಿಲ್ಲ. ಅದಕ್ಕೆ ಎಂಟು ಗಿಗಾ ಬೈಟ್‌ಗಳಿಗಿಂತ ಹೆಚ್ಚಿನ ಸಾಮರ್ಥ್ಯವಿರುವ ಹಾರ್ಡ್ ಡಿಸ್ಕ್‌ಗಳನ್ನು ಎಂಟು ಅಥವಾ ಅದಕ್ಕಿಂತಲೂ ಕಡಿಮೆ ಗಿಗಾ ಬೈಟ್‌ನ ಪಾರ್ಟಿಷನ್‌ಗಳನ್ನು ಮಾಡಿ ಬಳಸಬೇಕು. ಏನೇನೋ ಪ್ರಯೋಗಗಳನ್ನು ನಡೆಸಿದ್ದ ತೇಜಸ್ವಿಯವರಿಗೆ ಈ ವಿಷಯ ಗೊತ್ತಿರಲಿಲ್ಲ. ನಾನು ಹೇಳಿದ ತಕ್ಷಣ `ಮಾರಾಯ, ನೀವು ಸಾಬರಿಗೆ ಹುಟ್ಟುವಾಗಲೇ ರಿಪೇರಿ ಗೊತ್ತಿರುತ್ತೆ…’ ಎಂದು ಜೋರಾಗಿ ನಕ್ಕರು. ಅವರಲ್ಲೇ ಇದ್ದ ಎಫ್ ಡಿಸ್ಕ್ ಬಳಸಿ ಪಾರ್ಟಿಷನ್ ಮಾಡುವ ಹೊತ್ತಿಗೆ ಆ ದಿನ ಸಂಜೆಯೇ ಆಗಿ ಹೋಗಿತ್ತು.
***
ಆ ಕಾಲದಲ್ಲೇ ಅವರು ಕನ್ನಡ ಸಾಫ್ಟ್‌ವೇರ್‌ಗಳಿಗೆ ಒಂದು ಸ್ಟ್ಯಾಂಡರ್ಡ್ ರೂಪಿಸಬೇಕು ಎಂದು ಅಧಿಕಾರದಲ್ಲಿರುವ ಅನೇಕರ ಬಳಿ ಹೇಳಿದರು. ತೇಜಸ್ವಿಯವರ ಕತೆಗಳಲ್ಲಿ ಆಗುವಂತೆ ಇದನ್ನೂ ಅಪಾರ್ಥ ಮಾಡಿಕೊಳ್ಳಲಾಯಿತು. ಬೆಂಗಳೂರಿನ ಕನ್ನಡ ಗಣಕ ಪರಿಷತ್ ಎಂಬ ಸಂಸ್ಥೆಯೊಂದು ಕನ್ನಡ ಕೀ ಬೋರ್ಡನ್ನು ಸ್ಟ್ಯಾಂಡರ್ಡೈಜ್ ಮಾಡಿತು. ಒಂದೇ ಕಂಪ್ಯೂಟರಿನಲ್ಲಿ ನಮಗಿಷ್ಟ ಬರುವಷ್ಟು ಕೀ ಬೋರ್ಡ್ ಲೇಔಟ್‌ಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಇದ್ದರೂ ಅತ್ತ ತಿರುಗಿಯೂ ನೋಡದೆ ಯಾವುದೋ ಒಂದು ಕೀಬೋರ್ಡನ್ನು ಮಾತ್ರ ಸರಿ ಎಂದದ್ದು ತೇಜಸ್ವಿಯವರಿಗೆ ಸ್ವಲ್ಪವೂ ಹಿಡಿಸಿರಲಿಲ್ಲ.
ಈ ಏಕ ಕೀಬೋರ್ಡ್ ವಿಧಾನವನ್ನು ತೇಜಸ್ವಿ ವಿರೋಧಿಸಿದ್ದರು. ಈ ವಿರೋಧಕ್ಕೆ ಅವರು ಮುಂದಿಟ್ಟ ತರ್ಕ ಹೀಗಿತ್ತು. ಕನ್ನಡ ಟೈಪ್‌ರೈಟಿಂಗ್ ಕಲಿತವರು ಸಾಕಷ್ಟು ಮಂದಿ ಇದ್ದಾರೆ. ಅವರು ಕನ್ನಡ ಟೈಪಿಸುವುದಕ್ಕೆ ಮತ್ತೊಂದು ಕೀಬೋರ್ಡ್ ಲಾಜಿಕ್ ಕಲಿಯುವ ಬದಲಿಗೆ ಅವರು ಕಲಿತದ್ದನ್ನೇ ಬಳಸಿಕೊಳ್ಳುವಂತೆ ಟೈಪ್‌ರೈಟಿಂಗ್ ಕೀ ಬೋರ್ಡ್ ಲೇಔಟ್ ಉಳಿಸಿಕೊಳ್ಳಬೇಕು. ಹಾಗೆಯೇ ಉಳಿದ ಅನೇಕ ಕೀಬೋರ್ಡ್‌ಗಳನ್ನು ಹಲವಾರು ವರ್ಷದಿಂದ ಬಳಸುತ್ತಾ ಬಂದವರಿಗೆ ಅವೂ ಇರಬೇಕು. ವಿದೇಶದಲ್ಲಿರುವ ಮಗನಿಗೆ ಇ-ಮೇಲ್ ಕಳುಹಿಸಲು ಕನ್ನಡ ಬಳಸುವವರಿಗೆ ಈ ಕೀಬೋರ್ಡ್ ಸಮಸ್ಯೆಯಾಗಿ ಕಾಣಿಸುವುದಿಲ್ಲ. ಆದರೆ ಟೈಪ್ ಮಾಡಿ ಪ್ರತೀ ಪುಟಕ್ಕಿಷ್ಟು ದುಡ್ಡು ಎಂದು ಪಡೆದುಕೊಳ್ಳುವವರಿಗೆ ಕಷ್ಟವಾಗುತ್ತದೆ. ಒಂದು ಪುಟ ಟೈಪ್ ಮಾಡಲು ಹತ್ತು ಪುಟ ಟೈಪ್ ಮಾಡುವ ಹೊತ್ತು ಹಿಡಿದರೆ ಒಂದು ಕುಟುಂಬ ಹಸಿವಿನಿಂದ ಬಳಲಬೇಕಾಗುತ್ತದೆ. ಕಂಪ್ಯೂಟರ್ ಅವಕಾಶಗಳನ್ನು ಸೀಮಿತಗೊಳಿಸಬಾರದು. ಅದು ಅವಕಾಶಗಳನ್ನು ವಿಸ್ತರಿಸಬೇಕು.
***
ತೇಜಸ್ವಿಯವರು ಮೀನು ಹಿಡಿಯುವುದನ್ನು ಎಂಥಾ ತನ್ಮಯತೆಯಿಂದ ಮಾಡುತ್ತಿದ್ದರು ಎಂಬುದು ಅವರ ಗೆಳೆಯರಿಗೆಲ್ಲಾ ಗೊತ್ತು. ಮುದುಕ ಮೀನುಗಾರನ ಕತೆಯಿರುವ ಹೆಮಿಂಗ್ವೇಯ `ಓಲ್ಡ್ ಮ್ಯಾನ್ ಅಂಡ್ ಸೀ’ ಕೂಡಾ ಅವರಿಗಿಷ್ಟ. ತಿಮಿಂಗಿಲದ ಹಿಡಿಯುವ ಕ್ರಿಯೆಯನ್ನು ವರ್ಣಿಸುವ ಉತ್ಸಾಹದಲ್ಲೇ ಮೀನಿನೆಣ್ಣೆ ತೆಗೆಯುವ ಕ್ರಿಯೆಯನ್ನು ವಿವರಿಸುವ Herman Melvilleಯ Moby-Dick ಕೂಡಾ ಇಷ್ಟ. ಯಾರೋ ಗೆಳೆಯರೊಬ್ಬರ ಮನೆಯಲ್ಲಿ `ಮೈ ಮೊಬಿ ಡಿಕ್’ ಎಂಬ ಹವ್ಯಾಸಿ ಮೀನುಗಾರನೊಬ್ಬನ ಅನುಭವವನ್ನು ಹೇಳುವ ಪುಸ್ತಕ ಸಿಕ್ಕಾಗ ಅದನ್ನು ತೇಜಸ್ವಿಯವರಿಗೆ ಕೊಟ್ಟಿದ್ದೆ. `ಈಗೀಗ ಪುಸ್ತಕ ಹಿಡಿದುಕೊಂಡರೆ ನಿದ್ದೆ ಬರುತ್ತೆ’ ಎಂದು ಅದನ್ನು ತೆಗೆದುಕೊಂಡ ಅವರು ನಂತರ ಅದರ ಪ್ರತೀ ಅಧ್ಯಾಯದ ಕುರಿತೂ ಮಾತನಾಡಿದ್ದರು.
ಗಾಳ ಹಾಕುವುದರ ಕುರಿತು `ಗಾಳದ ದಾರಕ್ಕೂ ಹೃದಯಕ್ಕೂ ನೇರ ಸಂಪರ್ಕ ಮಾರಾಯ ಅದು…’ ರೊಮ್ಯಾಂಟಿಕ್ ಆಗಿಬಿಡುತ್ತಿದ್ದ ಅವರು ಅದೇ ತನ್ಮಯತೆಯಿಂದ ಕಂಪ್ಯೂಟರನ್ನು ಬಳಸುತ್ತಿದ್ದುದಂತೂ ನಿಜ. ಅವರ ಸಿಪಿಯು ಯಾವಾಗಲೂ ಕ್ಯಾಬಿನೆಟ್‌ನ ಒಳಗಿರುತ್ತಿರಲಿಲ್ಲ. ಸದಾ ಗಾಳಿಗೆ ತೆರೆದುಕೊಂಡಿರುತ್ತಿದ್ದ ಸಿಪಿಯುನ ಎಲ್ಲಾ ಅಂಗಾಂಗಳ ಪರಿಚಯ ಅವರಿಗಿತ್ತು. ಒಂದರಲ್ಲಿ ರ್ಯಾಮ್ ಕಡಿಮೆಯಾಯಿತೆಂದರೆ ಮತ್ತೊಂದರಿಂದ ಕಿತ್ತು ಜೋಡಿಸುತ್ತಾ ಸ್ವಲ್ಪವೂ ಬೇಸರವಿಲ್ಲದೆ ರಿಸ್ಟಾರ್ಟ್ ಮಾಡುತ್ತಾ ಅವರು ಕೆಲಸದಲ್ಲಿ ಮುಳುಗಿಹೋಗುತ್ತಿದ್ದುದನ್ನು ನೋಡಿದರೆ `ಅಣ್ಣನ ನೆನಪು’ವಿನಲ್ಲಿರುವ ಸ್ಕೂಟರ್ ರಿಪೇರಿ ಏನೇನೂ ಅಲ್ಲ.
***
ಮೀನು ಹಿಡಿಯುವುದು, ಫೋಟೋ ತೆಗೆಯುವುದು, ಕಂಪ್ಯೂಟರಿನಲ್ಲಿ ತೊಡಗಿಕೊಳ್ಳುವುದು, ಸ್ಕೂಟರ್ ರಿಪೇರಿ ತೇಜಸ್ವಿಯವರ ಎಲ್ಲಾ ಹವ್ಯಾಸಗಳಲ್ಲೂ ಒಂದು ಸಾಮಾನ್ಯ ಗುಣವಿದೆ. ಅದು ಪ್ರೋಸೆಸ್ ಅನ್ನು ಎಂಜಾ್ ಮಾಡುವ ಗುಣ. ಕುವೆಂಪು ಅವರ ಹಸ್ತಾಕ್ಷರದಲ್ಲಿರುವ `ರಾಮಾಯಣ ದರ್ಶನಂ’ ತರುವುದಕ್ಕೆ ಕೇವಲ ತಾಂತ್ರಿಕ ಪರಿಣತಿ ಇದ್ದರೆ ಮಾತ್ರ ಸಾಕಾಗುತ್ತಿರಲಿಲ್ಲ. ಅದಕ್ಕೊಬ್ಬ ಕಲಾವಿದನ ಕೌಶಲ್ಯ ಮತ್ತು ಏಕಾಗ್ರತೆಯ ಅಗತ್ಯವೂ ಇತ್ತು. `ತೇಜಸ್ವಿ ಕುವೆಂಪು ಅವರ ಹಸ್ತಾಕ್ಷರವನ್ನು ಫಾಂಟ್ ಮಾಡಿದ್ದಾರೆ’ ಎಂದು ನಾವೆಲ್ಲಾ ಅಭಿಮಾನಿಸುತ್ತಿದ್ದ ಪತ್ರಿಕೆಯೇ ಬರೆದಿತ್ತು. ಈ ವಿವಾದವೆಲ್ಲಾ ಮುಗಿದು ವರ್ಷವುರುಳಿದ ನಂತರ ನಾನೇ `ರಾಮಾಯಣ ದರ್ಶನಂ’ ರೂಪುಗೊಂಡ ಬಗೆಯನ್ನು ತೇಜಸ್ವಿಯವರ ಡೇಮಾನ್‌ಸ್ಟ್ರೇಷನ್ ಜತೆಗೆ ನೋಡಿದಾಗ ಪತ್ರಿಕೆಗಳಲ್ಲಿ ಓದಿದ್ದೆಲ್ಲಾ ಎಷ್ಟು ಸುಳ್ಳು ಎಂಬುದು ಅರಿವಾಯಿತು. ತೇಜಸ್ವಿ ಪ್ರೋಸೆಸ್ ಅನ್ನು ಎಂಜಾಯ್ ಮಾಡುತ್ತಿದ್ದುದು ಅವರ ಹತ್ತಿರದ ಗೆಳೆಯರಿಗೂ ಏಕೆ ಅರ್ಥವಾಗಲಿಲ್ಲ ಎಂಬುದು ಈಗಲೂ ನನಗೆ ಚೋದ್ಯವಾಗಿಯೇ ಉಳಿದಿದೆ.
ತೇಜಸ್ವಿಯವರಿಗೆ ಪುಸ್ತಕದ ರಕ್ಷಾಪುಟ, ಒಳಪುಟಗಳ ವಿನ್ಯಾಸ ಮಾಡುವ ಯಾವ ಅಗತ್ಯವೂ ಇರಲಿಲ್ಲ. ಇದನ್ನು ಬೇರೆ ಯಾರಿಂದಲೋ ಮಾಡಿಸಿ ಮಾರಿದ್ದರೂ ಅವರ ಪುಸ್ತಕದ ಮಾರಾಟವೇನೂ ಕುಸಿಯುತ್ತಿರಲಿಲ್ಲ. ಆದರೆ ಅವರಿಗೆ ಕನ್ನಡ ಪುಸ್ತಕಗಳನ್ನೂ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ತರಬಹುದು ಎಂಬುದನ್ನು ತೋರಿಸಿಕೊಡುವ ಆಸೆಯಿತ್ತು. ಜತೆಗೆ ಇದನ್ನೆಲ್ಲಾ ಮಾಡುವ ಪ್ರಕ್ರಿಯೆಯಲ್ಲಿ ದೊರೆಯುವ ಸಂತೋಷವನ್ನು ಅನುಭವಿಸಲು ಅವರು ತುಡಿಯುತ್ತಿದ್ದರು. `ರಾಮಾಯಣ ದರ್ಶನಂ’ನ ಕೆಲಸಕ್ಕೂ ಅವರೂ ಕೈಹಾಕಿದ್ದು ಇದೇ ಕಾರಣಕ್ಕೆ ಅನ್ನಿಸುತ್ತದೆ. ಈ ಕೆಲಸ ಮಾಡಿದ ದಿನಗಳಲ್ಲಿ ತಂತ್ರಜ್ಞಾನ ಈಗಿನಷ್ಟು ಬೆಳೆದಿರಲಿಲ್ಲ. ಎಲ್ಲಾ ಮಿತಿಗಳು ಗೊತ್ತಿದ್ದೂ ಅವರದನ್ನು ಸಾಧ್ಯವಾಗಿಸಿದರು. ಇದನ್ನೊಂದು ಕಲಾಕೃತಿಯನ್ನಾಗಿ ನೋಡದೆ ಅದೂ ಒಂದು ಪುಸ್ತಕ ಎಂದು ಎಲ್ಲರೂ ಭಾವಿಸಿದ್ದೇ ಅವರ ವಿರುದ್ಧ ಬಂದ ಟೀಕೆಗಳಿಗೆ ಮುಖ್ಯಕಾರಣ ಎನಿಸುತ್ತದೆ.
***
ಕನ್ನಡ ಸಾಫ್ಟ್‌ವೇರ್‌ನ ಗೊಂದಲಗಳ ಕುರಿತು ತೇಜಸ್ವಿಯವರ ಆಕ್ರೋಶ ಸ್ಪಷ್ಟ ರೂಪ ಪಡೆದುಕೊಂಡದ್ದು ಕನ್ನಡ ಗಣಕ ಪರಿಷತ್ ರೂಪಿಸಿದ್ದ `ನುಡಿ’ಯ ವಿರುದ್ಧದ ಸಮರದಲ್ಲಿ. `ನುಡಿ’ ಕನ್ನಡ ಸಾಫ್ಟ್‌ವೇರ್ ತಯಾರಕರ ಕಪಿಮುಷ್ಠಿಯಿಂದ ಕನ್ನಡಿಗರನ್ನು ಪಾರು ಮಾಡಿತು ಎಂದು ಎಲ್ಲರೂ ಭಾವಿಸಿದ್ದಾಗ ತೇಜಸ್ವಿ ಅದರ ವಿರುದ್ಧ ಧ್ವನಿ ಎತ್ತಿದರು. ನನಗೆ ಫ್ರೀ ಸಾಫ್ಟ್‌ವೇರ್ ಜಗತ್ತಿನ ಪರಿಚಯ ಮಾಡಿಕೊಟ್ಟಿದ್ದ ತೇಜಸ್ವಿಯವರೇ ನುಡಿ ಎಂಬ ಉಚಿತ ಸಾಫ್ಟ್‌ವೇರ್‌ನ ವಿರುದ್ಧ ಜಗಳ ತೆಗೆದದ್ದೇಕೆ ಎಂಬುದು ತಕ್ಷಣಕ್ಕೆ ಅರ್ಥವಾಗಿರಲಿಲ್ಲ. ಸಾಲದ್ದಕ್ಕೆ ಕನ್ನಡ ಸಾಫ್ಟ್‌ವೇರ್‌ನ ಗೊಂದಲಕ್ಕೆ ಕಾರಣ ಎಂಬು ನಾನು ಭಾವಿಸಿದ್ದ ಕನ್ನಡ ಸಾಫ್ಟ್‌ವೇರ್ ತಯಾರಕರ ಪರವಾಗಿಯೂ ತೇಜಸ್ವಿ ಮಾತನಾಡಿದ್ದರು.
ತೇಜಸ್ವಿಯವರ ಈ ನಿರ್ಧಾರಕ್ಕೆ ಗಟ್ಟಿಯಾದ ತರ್ಕದ ಬೆಂಬಲವಿತ್ತು. ಅವರದೇ ಮಾತುಗಳಲ್ಲಿ ಅದನ್ನು ಹೀಗೆ ಸಂಗ್ರಹಿಸಬಹುದು. `ಕನ್ನಡ ಸಾಫ್ಟ್‌ವೇರ್ ನಿರತಂರವಾಗಿ ಅಭಿವೃದ್ಧಿ ಹೊಂದಬೇಕಾದರೆ ಅದಕ್ಕೊಂದು ಸ್ಪರ್ಧಾತ್ಮಕ ಮಾರುಕಟ್ಟೆಯ ವಾತಾವರಣ ಇರಬೇಕು. ಕನ್ನಡದ ಸಂದರ್ಭದಲ್ಲಿ ಸಾಫ್ಟ್‌ವೇರ್‌ನ ದೊಡ್ಡ ಮಾರುಕಟ್ಟೆ ಅಂದರೆ ಸರಕಾರ. ಸರಕಾರ ನುಡಿಯನ್ನು ಒಪ್ಪಿಕೊಂಡು ಅದನ್ನೇ ಉಚಿತವಾಗಿಯೂ ಹಂಚುತ್ತಿದೆ. ಪರಿಣಾಮವಾಗಿ ಕನ್ನಡ ಸಾಫ್ಟ್‌ವೇರ್ ತಯಾರಿಸುತ್ತಿದ್ದವರೆಲ್ಲಾ ಅದನ್ನು ನಿಲ್ಲಿಸಿ ಒಬ್ಬಿಬ್ಬರು ಉಳಿದುಕೊಂಡಿದ್ದಾರೆ. ಸರಕಾರವನ್ನು ಹೊರತು ಪಡಿಸಿದ ಮಾರುಕಟ್ಟೆ ಇವರನ್ನು ಸಲಹುವಷ್ಟು ಸಾಮರ್ಥ್ಯ ಪಡೆದಿಲ್ಲ. ಇನ್ನು `ನುಡಿ’ಯ ಆಕರ ಸಂಕೇತಗಳನ್ನೂ ಮುಕ್ತವಾಗಿ ನೀಡದೇ ಇರುವುದರಿಂದ ಅದನ್ನು ಇನ್ಯಾರಾದರೂ ಸ್ವತಂತ್ರವಾಗಿ ತಮ್ಮ ತಮ್ಮ ಅಗತ್ಯಗಳಿಗೆ ತಕ್ಕಂತೆ ಬದಲಾಯಿಸಲೂ ಸಾಧ್ಯವಿಲ್ಲ. ನಿತ್ಯ ಬದಲಾಗುತ್ತಿರುವ ತಂತ್ರಜ್ಞಾನದ ಜತೆಗೆ ಕನ್ನಡವೂ ಅಭಿವೃದ್ಧಿಯಾಗುವ ಎಲ್ಲಾ ಸಾಧ್ಯತೆಗಳೂ ಮುಚ್ಚಿ ಹೋಗಿವೆ. ಆದ್ದರಿಂದ `ನುಡಿ’ಯನ್ನು ವಿರೋಧಿಸಬೇಕು. ಸರಕಾರ ದುಡ್ಡಿನಿಂದ ಅದು ತಯಾರಾಗಿರುವುದರಿಂದ ಅದರ ಆಕರ ಸಂಕೇತಗಳು ಮುಕ್ತವಾಗಿರಬೇಕು.’
ನುಡಿಯ ಆಕರ ಸಂಕೇತಗಳನ್ನು ಮುಕ್ತವಾಗಿಸಬೇಕು ಎಂಬ ತೇಜಸ್ವಿಯವರ ಆಗ್ರಹ ಕೈಗೂಡಲೇ ಇಲ್ಲ. ಅವರು ಬೇಸತ್ತು `ಕುವೆಂಪು’ ಎಂಬ ತಂತ್ರಾಂಶವನ್ನು ಕನ್ನಡ ವಿಶ್ವವಿದ್ಯಾಲಯದ ಜತೆ ಸೇರಿ ರೂಪಿಸಿದರು. ಇದರ ಆಕರ ಸಂಕೇತವನ್ನು ಕನ್ನಡ ವಿಶ್ವವಿದ್ಯಾಲಯ ಮುಕ್ತವಾಗಿಡುತ್ತೇನೆಂಬ ಭರವಸೆ ಕೊಟ್ಟಿದೆ ಎಂದು ಅವರೇ ಹೇಳಿದ್ದರು. ಅವರು ಕೊನೆಯುಸಿರೆಳೆಯುವ ಮೂರು ದಿನಗಳ ಹಿಂದಷ್ಟೇ ನನ್ನಲ್ಲಿ ಇದೇ ವಿಷಯ ಮಾತನಾಡಿದ್ದ ಅವರು ವರ್ತಮಾನಕ್ಕೆ ಸ್ಪಂದಿಸದ ಸರಕಾರೀ ಸಂಸ್ಥೆಗಳ ಕಾನೂನುಗಳ ಬಗ್ಗೆ ಕಿಡಿಕಾರಿ `ನಾನಂತೂ ರೈಗಳಿಗೆ ಸ್ಪಷ್ಟವಾಗಿ ಹೇಳಿಬಿಟ್ಟಿದ್ದೇನೆ. ಕಾಪಿರೈಟು ಅಂತೆಲ್ಲಾ ಮಾತಾಡಿ ಕನ್ನಡ ಕೊಲ್ಲಬೇಡಿ ಅಂತ. ನೀನೂ ಸ್ವಲ್ಪ ಬೆನ್ನು ಬೀಳು. ಕಂಬಾರರಿಗೂ ಹೇಳು’ ಎಂದಿದ್ದರು.
***
ಕಂಪ್ಯೂಟರಿನಲ್ಲಿ ಕನ್ನಡ ಅಪ್ರಸ್ತುತವಾಗಬಾರದು ಎಂಬುದನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದರೆಂದರೆ ಯಾವ ಕಾರ್ಯಕ್ರಮಕ್ಕೆ ಯಾರು ಕರೆದರೂ ಬಡಪೆಟ್ಟಿಗೆ ಬೆಂಗಳೂರಿಗೆ ಬರಲೊಪ್ಪದ ಅವರು ಕನ್ನಡ ಕಂಪ್ಯೂಟಿಂಗ್ ಎಂದರೆ ಮರು ಮಾತನಾಡದೇ ಬರುತ್ತಿದ್ದರು. ಅವರೆದುರು ಏನೂ ಅಲ್ಲದ ನಮ್ಮಂಥ ಹುಡುಗರ ಮಾತುಗಳನ್ನೆಲ್ಲಾ ಕೇಳಿ ಅದನ್ನು ಅಧಿಕಾರದ ಸ್ಥಾನಗಳಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದರು. ಮಾತ್ರವಲ್ಲ ವಾಟಾಳ್ ನಾಗರಾಜ್‌ರಂತ `ಹೋರಾಟಗಾರರಿಂದ’ ಆರಂಭಿಸಿ ಬೇರೆ ಬೇರೆ ಮಂತ್ರಿಗಳವರೆಗೆ ಹಲವರನ್ನು ಭೇಟಿ ಮಾಡಿ ಕನ್ನಡದ ಕಂಪ್ಯೂಟರ್ ಗೋಳವನ್ನು ವಿವರಿಸಿದ್ದರು.
ಈ ಗೋಳಿನ ಕತೆಗೊಂದು ಸುಖಾಂತ್ಯ ದೊರೆಯುವ ಮೊದಲೇ ಅವರು ಲಾಗ್ ಆಫ್ ಆಗಿಬಿಟ್ಟಿದ್ದಾರೆ. ತೇಜಸ್ವಿ ಬದುಕಿರುವಷ್ಟು ದಿನವೂ ಸರಕಾರೀ ಪ್ರಕಾಶನವನ್ನು ವಿರೋಧಿಸಿ ತಮ್ಮ ಪುಸ್ತಕಗಳು ಸದಾ ಮಾರುಕಟ್ಟೆಯಲ್ಲಿ ಲಭ್ಯವಿರುವಂತೆ ನೋಡಿಕೊಂಡವರು. ಈಗಲೂ ಅವರ ಪುಸ್ತಕಗಳು ಮಾರುಕಟ್ಟೆಯಲ್ಲಿ ಸದಾ ಇರುವಂತೆ ನೋಡಿಕೊಳ್ಳಲು ಪುಸ್ತಕ ಪ್ರಕಾಶನವಿದೆ. ಆದ್ದರಿಂದ ಅವರ ಪುಸ್ತಕಗಳನ್ನು ಮುದ್ರಿಸುವುದಕ್ಕಿಂತ ಕನ್ನಡ ಕಂಪ್ಯೂಟಿಂಗ್‌ನ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಯೋಜನೆಯೊಂದನ್ನು ಸರಕಾರ ರೂಪಿಸಬೇಕು. ಈ ಯೋಜನೆಯ ಮೂಲಕ ಕಾರ್ಯಗತಗೊಳಿಸುವ ಎಲ್ಲವೂ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಸಿದ್ಧಾಂತಕ್ಕೆ ಬದ್ಧವಾಗಿರಬೇಕು. ಬಹುಶಃ ಇದು ಮಾತ್ರ ತೇಜಸ್ವಿಯವರಿಗೆ ಸಲ್ಲಿಸುವ ಅರ್ಥಪೂರ್ಣ ಶ್ರದ್ಧಾಂಜಲಿ.
(ಈ ಲೇಖನದ ಸಂಕ್ಷಿಪ್ತ ರೂಪವೊಂದು ಏಪ್ರಿಲ್ 8 2007ರ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾಗಿತ್ತು)