ನನ್ನ ಹೆಸರು ಇಸ್ಮಾಯಿಲ್ ಎಂದಿರುವುದರಿಂದ ಅನೇಕ ಸಂದರ್ಭಗಳಲ್ಲಿ ನನಗೆ ಬೇಕಿಲ್ಲದಿದ್ದರೂ ನಾನು ಮುಸ್ಲಿಮರ ಪ್ರತಿನಿಧಿಯಾಗಿಬಿಡುತ್ತೇನೆ. ಮತ-ಧರ್ಮದ ಕುರಿತ ನನ್ನ ವೈಯಕ್ತಿಕ ನಿಲುವುಗಳ ಬಗ್ಗೆ ಅರಿವಿರುವ ಹತ್ತಿರದ ಗೆಳೆಯರನ್ನು ಹೊರತು ಪಡಿಸಿದರೆ ನಾನೊಬ್ಬ ಮುಸ್ಲಿಮ ಎಂಬ ಪೂರ್ವಗ್ರಹದೊಂದಿಗೆ ಚರ್ಚೆಗಿಳಿಯುವ ಅನೇಕರಿದ್ದಾರೆ. ಈ ಬಗೆಯ ಚರ್ಚೆಗಳಿಂದ ದೂರ ಉಳಿಯಲು ನಾನು ಪ್ರಯತ್ನಿಸಿದರೂ ಕೆಲವೊಮ್ಮೆ ಅದರಿಂದ ಪಾರಾಗಲು ಸಾಧ್ಯವಾಗುವುದಿಲ್ಲ.
ಇತ್ತೀಚೆಗೆ ಇಂಥದ್ದೇ ಒಂದು ಘಟನೆ ನಡೆಯಿತು. ಕರುಣಾನಿಧಿ ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸುವ ಅನೇಕ ಮಾತುಗಳನ್ನಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ವಾರಪತ್ರಿಕೆಯಲ್ಲಿ ಬಂದ ಪ್ರಸಿದ್ಧ ಸಂಪಾದಕರೊಬ್ಬರ ಬರೆಹದ ಬಗ್ಗೆ ಹೇಳುತ್ತಿದ್ದ ಪರಿಚಿತರೊಬ್ಬರು 'ಕರುಣಾನಿಧಿ ಮುಸ್ಲಿಮರ ದೇವರ ಬಗ್ಗೆ ಹೀಗೆ ಮಾತನಾಡುತ್ತಿದ್ದರೇ? ಮಾತನಾಡಿದ್ದರೆ ಮುಸ್ಲಿಮರು ಸುಮ್ಮನಿರುತ್ತಿದ್ದರೇ?' ಎಂದೆಲ್ಲಾ ಪ್ರಶ್ನಿಸಿದರು. ನಾನು ನಕ್ಕು ಸುಮ್ಮನಾದೆ. ಈ ಬಗೆಯ ಮಾತುಗಳು ಮತ್ತೆ ಮತ್ತೆ ಕೇಳಿಬರುತ್ತಿವೆ. ಹಲವು ಬ್ಲಾಗ್ ಗಳಲ್ಲಿ, ಪತ್ರಿಕಾ ಲೇಖನಗಳಲ್ಲಿಯೂ ಇಂಥ ಪ್ರಶ್ನೆಗಳನ್ನು ಹಲವರು ಎತ್ತಿದ್ದಾರೆ. ಅಂದ ಮೇಲೆ ಈ ಪ್ರಶ್ನೆ ಸರಿಯೇ ಇರಬೇಕಲ್ಲವೇ?
ಒಂದು ಕ್ಷಣ ನನಗೂ ಹಾಗೆಯೇ ಅನ್ನಿಸಿತ್ತು. ಆದರೆ ವಿಷಯವನ್ನು ಸಮಗ್ರವಾಗಿ ಗ್ರಹಿಸಲು ಪ್ರಯತ್ನಿಸಿದಾಗ ಸಿಕ್ಕ ಚಿತ್ರಣವೇ ಬೇರೆ. ಮುಸ್ಲಿಮರು ಸುಮ್ಮನಿರುತ್ತಿದ್ದರೇ? ಎಂದು ಆಕ್ರೋಶದಿಂದ ಪ್ರಶ್ನಿಸುವವರ ಮನಸ್ಸಿನಲ್ಲಿರುವುದೇನು? ನಾನು ಒಂದಿಬ್ಬರು ಗೆಳೆಯರನ್ನೂ ಕೇಳಿ ನೋಡಿದೆ. ನನಗಾಗ ವಿಷಯ ಹೆಚ್ಚು ಸ್ಪಷ್ಟವಾಗುತ್ತಾ ಬಂತು. ಮುಸ್ಲಿಮರು, ಕ್ರೈಸ್ತರ ವಿಷಯಕ್ಕೆ ಬಂದಾಗ ಕೆಲವು ಸಿದ್ಧಮಾದರಿಗಳನ್ನು ನಮ್ಮ ಮಾಧ್ಯಮಗಳು ರೂಪಿಸಿಕೊಟ್ಟಿವೆ. ಈ ಸಿದ್ಧ ಮಾದರಿಗಳ ಮೂಲಕವೇ ಗ್ರಹಿಸ ಹೊರಟರೆ ಸಹಜವಾಗಿ ಕೇಳಬಹುದಾದ ಪ್ರಶ್ನೆಗಳಲ್ಲೊಂದು 'ಮುಸ್ಲಿಮರಾದರೆ ಸುಮ್ಮನಿರುತ್ತಿದ್ದರೆ?'
ಕಳೆದ ಒಂದು ದಶಕದ ಅವಧಿಯ ರಾಜಕೀಯ ಬೆಳವಣಿಗೆಗಳನ್ನು ನಾನೊಬ್ಬ ಪತ್ರಕರ್ತನಾಗಿ ಕಂಡಿದ್ದೇನೆ. ಈ ಅವಧಿಯಲ್ಲಿ ಅನೇಕ ಬಿಜೆಪಿ ನಾಯಕರ, ವಿಎಚ್ ಪಿ ಪ್ರಮುಖರ, ಭಜರಂಗದಳದ ನಾಯಕರ ಭಾಷಣಗಳನ್ನು ಕೇಳಿದ್ದೇನೆ. ಬಿಜೆಪಿ ಒಂದು ರಾಜಕೀಯ ಪಕ್ಷವಾಗಿರುವುದರಿಂದ ಅದರ ನಾಯಕರು ಮಾತನಾಡುವಾಗ ಇತರ ಮತ-ಧರ್ಮಗಳನ್ನು ನೇರವಾಗಿ ಹೀಯಾಳಿಸುವುದರಿಂದ ದೂರವಿರುತ್ತಾರೆ. ಆದರೆ ವಿಎಚ್ ಪಿ, ಭಜರಂಗದಳ ಇತ್ತೀಚಿನ ಶ್ರೀರಾಮ ಸೇನೆಯಂಥ ಸಂಘಟನೆಗಳ ನಾಯಕರು ಇಂಥ ಯಾವ ರಿಯಾಯಿತಿಯನ್ನೂ ತೋರಿಸುವುದಿಲ್ಲ. ಪ್ರವಾದಿ ಮಹಮ್ಮದರನ್ನು ಹೀಯಾಳಿಸುವುದರಿಂದ ಆರಂಭಿಸಿ ಕುರಾನ್ ನ ಲೇವಡಿಯವರೆಗಿನ ಮಾತುಗಳನ್ನು ನಾನೇ ಕೇಳಿದ್ದೇನೆ. ಇತ್ತೀಚೆಗಷ್ಟೇ ಇಂಥದ್ದೇ ಸಂಘಟನೆಯೊಂದರ ನಾಯಕರೊಬ್ಬರ ಟಿ.ವಿ. ಸಂದರ್ಶನವನ್ನು ನೋಡಿದೆ. ಅವರು ಅಲ್ಲಿಯೂ ಇಸ್ಲಾಂ ಮತ್ತು ಕ್ರೈಸ್ತ ಧರ್ಮಾನುಯಾಯಿಗಳ ವಿರುದ್ಧದ 'ಆಕ್ರೋಶ'ವನ್ನು ಮುಚ್ಚಿಡಲಿಲ್ಲ. ಈ ನಾಯಕರ ವಿರುದ್ಧ ಯಾರಾದರೂ ಮುಲ್ಲಾಗಳು ಅಥವಾ ಮುಫ್ತಿಗಳು ಫತ್ವಾ ಹೊರಡಿಸಿದ್ದಾರೆಯೇ ಎಂಬ ಸೂಕ್ಷ್ಮ ಪರಿಶೀಲನೆಯನ್ನೂ ನಡೆಸಿ ನೋಡಿದೆ. ಈ ಬಗೆಯ ಮಾತುಗಳನ್ನಾಡಿದ್ದಕ್ಕೆ ಎಷ್ಟು ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿವೆ ಎಂಬುದರ ಬಗ್ಗೆಯೂ ಒಂದು ಸಣ್ಣ ಸಂಶೋಧನೆ ನಡೆಸಿದೆ. ಅದಕ್ಕೂ ಸಿಕ್ಕ ಉತರ ಮಾತ್ರ 'ಇಲ್ಲ'. ಹಾಗಿದ್ದರೆ 'ಮುಸ್ಲಿಮರಾದರೆ ಸುಮ್ಮನಿರುತ್ತಿದ್ದರೇ?' ಎಂಬ ಪ್ರಶ್ನೆಗಿರುವ ಅರ್ಥವಾದರೂ ಏನು?
***
ದ್ರಾವಿಡ ಚಳವಳಿಯ ದಿನಗಳಲ್ಲಿ ಪೆರಿಯಾರ್ ರಾಮನ ಕುರಿತಂತೆ ಮಾಡಿದ ಟೀಕೆಗಳಿಗೆ ಲೆಕ್ಕವೇ ಇಲ್ಲ. ಇದನ್ನು ಅವರ ಅನೇಕ ಬೆಂಬಲಿಗರು ಮತ್ತೆಯೂ ಮುಂದುವರಿಸಿದರು. ಇದರ ಪ್ರಭಾವ ಇತರೆಡೆಗಳಲ್ಲಿಯೂ ಆಯಿತು. ಆಗ ಯಾರೂ ತಮಿಳುನಾಡಿನ ಬಸ್ ನಿಲ್ಲಿಸಿ ಅದಕ್ಕೆ ಬೆಂಕಿ ಕೊಟ್ಟು ಒಳಗಿದ್ದ ಒಬ್ಬಿಬ್ಬರು ಪ್ರಯಾಣಿಕರ ಸಮೇತ ಸುಟ್ಟಿರಲಿಲ್ಲ. ಆದರೆ ಈಗ ಅದು ಕರ್ನಾಟಕದಲ್ಲಿಯೇ ಸಂಭವಿಸಿದೆ.
ಗುಜರಾತಿನ ಬರೋಡ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯೊಬ್ಬ ಪರೀಕ್ಷೆಯ ಭಾಗವಾಗಿ ರಚಿಸಿದ ಚಿತ್ರಗಳನ್ನು ಮತೀಯವಾದಿ ಸಂಘಟನೆಯೊಂದರ ಕಾರ್ಯಕರ್ತರು 'ಮೌಲ್ಯಮಾಪನ' ನಡೆಸಿದರು. ಪರೀಕ್ಷೆಗೆಂದು ರಚಿಸಲಾಗಿದ್ದ ಚಿತ್ರವೊಂದು ಗುಣಮಟ್ಟದಲ್ಲಿ ಒಳ್ಳೆಯದಲ್ಲದೇ ಇದ್ದಿದ್ದರೆ ಅದನ್ನು ಪರೀಕ್ಷಕರೇ ತಿರಸ್ಕರಿಸುತ್ತಿದ್ದರು. ಇನ್ನೂ ಪರೀಕ್ಷಾ ಕೋಣೆಯಲ್ಲೇ ಇದ್ದ ಚಿತ್ರವೊಂದು ಧಾರ್ಮಿಕ ಭಾವನೆಗಳನ್ನು ಕೆರಳಿಸಿದ್ದಾದರೂ ಹೇಗೆ?
2000ನೇ ಇಸ್ವಿಯ ಜನವರಿ ಒಂದನೇ ತಾರೀಕಿನಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಮುಖ ಪುಟ ಲೇಖನದಲ್ಲಿ ಟಿ.ಜೆ.ಎಸ್ ಜಾರ್ಜ್ ಅವರು ಡಾಂಟೆಯ ಕಾವ್ಯದ ಕೆಲವು ಸಾಲುಗಳನ್ನು ಉಲ್ಲೇಖಿಸಿದ್ದರು. ಇವು ಡಾಂಟೆ ಪ್ರವಾದಿ ಮಹಮ್ಮದರ ಬಗ್ಗೆ ಬರೆದ ಸಾಲುಗಳು. ಇವುಗಳನ್ನು ವಿಶ್ವಾದ್ಯಂತ ಇಂಗ್ಲಿಷ್ ಕಾವ್ಯವನ್ನು ಬಲ್ಲ ಅನೇಕ ಮುಸ್ಲಿಮರು, ಧರ್ಮಶಾಸ್ತ್ರ ಪಂಡಿತರು ನೂರಾರು ವರ್ಷಗಳಿಂದ ಓದಿದ್ದರೂ ಅವರಾರು ಅದನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ಹೋಗಿರಲಿಲ್ಲ. ಬೆಂಗಳೂರಿನಲ್ಲಿ ಮಾತ್ರ ಎಕ್ಸ್ ಪ್ರೆಸ್ ಕಚೇರಿಯ ಮೇಲೆ ದಾಳಿ ನಡೆಯಿತು. ಭಾರತದ ಉಳಿದ ಯಾವ ನಗರದ ಮುಸ್ಲಿಮರೂ ಇದನ್ನು ಮಾಡಲಿಲ್ಲ!
ಪ್ರವಾದಿ ಮಹಮ್ಮದರನ್ನು ಟೀಕಿಸುವ, ಕಟಕಿಯಾಡುವ ಹಲವು ಪುಸ್ತಕಗಳು, ಲೇಖನಗಳು ಈಗಲೂ ಅಂತರ್ಜಾಲದಲ್ಲಿ ಲಭ್ಯವಿವೆ. ಕ್ರೈಸ್ತ ಧರ್ಮ ಮಾತ್ರ 'ವಿಶ್ವ ಧರ್ಮ' ಎಂದು ವಾದಿಸುವ ಅನೇಕರ ಲೇಖನಗಳಲ್ಲಿ ಇಸ್ಲಾಮನ್ನು ಹೀಯಾಳಿಸುವ, ಟೀಕಿಸುವ ಮಾತುಗಳಿವೆ. ಇವುಗಳಲ್ಲಿ ಒಂದಕ್ಕೂ ನಡೆಯದ ಪ್ರತಿಭಟನೆ ಸಲ್ಮಾನ್ ರಶ್ದಿಯ ಪುಸ್ತಕಕ್ಕೆ ಸಂಬಂಧಿಸಿದಂತೆ ನಡೆಯಿತು. ಹಾಲೆಂಡ್ ನ ಯಾವುದೋ ಪತ್ರಿಕೆಯಲ್ಲಿ ಬಂದ ವ್ಯಂಗ್ಯ ಚಿತ್ರವನ್ನು ವಿರೋಧಿಸಿ ನಡೆಯಿತು. ತಸ್ಲೀಮಾ ನಸ್ರೀನ್ ವಿರುದ್ಧ ನಡೆಯಿತು.
***
ಈ ಘಟನೆಗಳನ್ನೆಲ್ಲಾ ನೋಡುತ್ತಾ ಹೋದರೆ 'ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ' ಎಂಬ ವಾದಕ್ಕೆ ಕೆಲವರನ್ನು ಮಾತ್ರ ಆರಿಸಿಕೊಳ್ಳಲಾಗುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಈ ಆಯ್ಕೆಗಳ ಹಿಂದೆ ಯಾವುದೋ ಒಂದು ರಾಜಕಾರಣ ಕೆಲಸ ಮಾಡುತ್ತಿರುತ್ತದೆ. ಯಾರೋ ಕೆಲವರು ಇವನ್ನು ಬಹಳ ಎಚ್ಚರಿಕೆಯಿಂದ ಸಂಘಟಿಸುತ್ತಿರುತ್ತಾರೆ ಎಂಬುದು ಖಚಿತ. ಈ ಸಂದರ್ಭಗಳಲ್ಲೆಲ್ಲಾ ಯಾರೋ ಕೆಲವರು ತಮ್ಮಷ್ಟಕ್ಕೇ ಧರ್ಮ ರಕ್ಷಣೆಯ ಕೆಲಸವನ್ನು ತಮ್ಮ ಮೇಲೆ ಆರೋಪಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುತ್ತಾರೆ. ಇವರಿಗೆ ಖಂಡಿತವಾಗಿಯೂ ಸ್ವಂತ ಲಾಭವಿರುತ್ತದೆ.
ಇಂಡಿಯನ್ ಎಕ್ಸ್ ಪ್ರೆಸ್ ಮೇಲೆ ನಡೆಸಲಾದ ದಾಳಿಯನ್ನು ರಾಜಕಾರಣಿಯೊಬ್ಬರು ಸಂಘಟಿಸಿದ್ದರು ಎಂಬುದು ಈಗ ಸ್ಪಷ್ಟವಾಗಿದೆ. ತಸ್ಲೀಮಾ ಮೇಲೆ ನಡೆದ ದಾಳಿಯನ್ನೂ ನೆಲೆ ಕಳೆದುಕೊಳ್ಳುತ್ತಿರುವ ರಾಜಕೀಯ ಪಕ್ಷ ಸಂಘಟಿಸಿತ್ತು ಎಂಬುದು ದಾಳಿ ನಡೆದ ದಿನವೇ ಸ್ಪಷ್ಚವಾಗಿತ್ತು. ಕರ್ನಾಟಕದ ಬಾಬಾಬುಡನ್ ಗಿರಿಯಂಥ ಸೌಹಾರ್ದದ ಸಂಕೇತಗಳನ್ನೂ ಹೀಗೇ ಎಚ್ಚರಿಕೆಯಿಂದ ಆರಿಸಿಕೊಂಡು ಕೆಲವರು ಕಾರ್ಯಾಚರಿಸುತ್ತಿದ್ದಾರೆ. ರಾಮ ಸೇತು ಚಳವಳಿಯ ಹಿಂದೆಯೂ ಬಿಜೆಪಿಯ ಚುನಾವಣಾ ಅಭೀಪ್ಸೆಗಳಿವೆ ಎಂಬುದು ಮೊದಲಿಗೇ ಸ್ಪಷ್ಟವಾದ ವಿಚಾರ.
***
ಇತ್ತೀಚೆಗೆ ನನ್ನ ಗೆಳೆಯ ನಾರಾಯಣ್ ಹೇಳಿದ ಘಟನೆಯೊಂದನ್ನು ಇಲ್ಲಿ ವಿವರಿಸಬೇಕೆನಿಸುತ್ತಿದೆ. ರಾಮ ಸೇತುವಿನ ಕುರಿತು ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣ ಪತ್ರ ವಿವಾದ ಸುದ್ದಿ ಆಗಷ್ಟೇ ನಾರಾಯಣ್ ಅವರ ತಾಯಿಗೆ ತಿಳಿದಿತ್ತಂತೆ. ಅವರು 'ಸರಕಾರ ರಾಮನಿಲ್ಲ ಎಂದಿತಂತೇ?' ಎಂದು ಕೇಳಿದರಂತೆ. ಇದಕ್ಕೆ ಉತ್ತರಿಸಲು ವಿವರಗಳಿಗಾಗಿ ತಡಕಾಡುತ್ತಿರುವಾಗಲೇ ಹತ್ತಿರದಲ್ಲೇ ಇದ್ದ ನಾರಾಯಣರ ಸೋದರತ್ತೆ 'ರಾಮನೆಂಬ ಮನುಷ್ಯ ಇರಲಿಲ್ಲ ಅಂತ ಹೇಳಿದ್ದಂತೆ. ರಾಮದೇವರು ಇಲ್ಲ ಅಂತಲ್ಲ' ಎಂದು ಉತ್ತರಿಸಿದರಂತೆ.ಬಹುಶಃ ಇದು ಭಾರತದ ಜನಸಾಮಾನ್ಯನ ನಿಲುವು.
ನಾನು ಹುಟ್ಟಿ ಬೆಳೆದದ್ದು ಹಾಸನ ಜಿಲ್ಲೆಯಲ್ಲಿ. ನಮ್ಮಾಚೆ 'ನಮ್ಮದು ರಾವಣನ ಒಕ್ಕಲು' ಎಂದು ಹೇಳಿಕೊಳ್ಳುವ ವಿವಿಧ ಜಾತಿಯ ಜನರಿದ್ದಾರೆ. ಹಿಂದೆಲ್ಲಾ ರಾವಣ ಎಂದು ಹೆಸರು ಇಟ್ಟುಕೊಳ್ಳುತ್ತಿದ್ದುದೂ ಉಂಟಂತೆ. ಈಗ ಅದಿಲ್ಲ. ಕನ್ನಡದ ಅತ್ಯುತ್ತಮ ಬರೆಹಗಾರರಲ್ಲಿ ಒಬ್ಬರಾದ ಪಿ.ಲಂಕೇಶ್ ಅವರ ಹೆಸರೇ ಈ 'ರಾವಣನ ಒಕ್ಕಲಿನ' ಜನರನ್ನು ಕುರಿತು ಸಾಕಷ್ಟು ಹೇಳುತ್ತಿದೆ. 'ರಂಗ್ ದೇ ಬಸಂತಿ' ಸಿನಿಮಾ ನೋಡಿದವರಿಗೆ ರಾಮ್ ಪ್ರಸಾದ್ ಬಿಸ್ಮಿಲ್ಹಾ ಎಂಬ ಹೆಸರು ಚೆನ್ನಾಗಿ ನೆನಪಿರುತ್ತದೆ. ಇತಿಹಾಸದಲ್ಲಿರುವ ರಾಮ್ ಪ್ರಸಾದ್ ಬಿಸ್ಲಿಲ್ಹಾ ಬಗ್ಗೆಯೂ ಹಲವರಿಗೆ ಗೊತ್ತಿರಬಹುದು. ನನ್ನೊಬ್ಬ ಮಲೆಯಾಳಿ ಗೆಳೆಯನಿಗೂ ಇದೇ ಹೆಸರಿದೆ. ಅವನೂ ಮುಸ್ಲಿಮನೇ.
***
ಧಾರ್ಮಿಕ ನಂಬಿಕೆಗಳಿಗೂ ಮತೀಯ ಮೂಲಭೂತವಾದದ ರಾಜಕಾರಣಕ್ಕೂ ಸಂಬಂಧವಿರಬೇಕಿಲ್ಲ. ಧಾರ್ಮಿಕ ನಂಬಿಕೆಗಳಿಗೆ ಐತಿಹಾಸಿಕ ಆಧಾರಗಳೂ ಬೇಕಿಲ್ಲ. ರಾಮನ ಭಕ್ತರಿಗೆ ರಾಮನಿದ್ದ ಎಂಬ ಐತಿಹಾಸಿಕ ಸಾಕ್ಷ್ಯಗಳು ಬೇಕಿಲ್ಲ. ಅವುಗಳು ಸಿಕ್ಕಾಕ್ಷಣ ರಾಮ ಕೇವಲ ಮನುಷ್ಯ ಎಂದುಕೊಂಡು ರಾಮನ ಮೇಲಿನ ಭಕ್ತಿಯನ್ನು ಅವರು ತ್ಯಜಿಸುವುದೂ ಇಲ್ಲ. ದೇವರನ್ನು ಕಂಡುಕೊಳ್ಳುವ ಈ ಬಗೆಯನ್ನು ಅನಂತಮೂರ್ತಿಯವರು ತಮ್ಮ 'ಅಲ್ಲಿರುವ ತಿರುಪತಿಗೆ ಇಲ್ಲೊಂದು ತಿರುಪತಿ'ಲೇಖನದಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ಈ ವಿವೇಕವನ್ನು ನಮ್ಮ ಧರ್ಮ ರಕ್ಷಕರಿಗೆ ಬೋಧಿಸುವುದು ಹೇಗೆ?
ಇಷ್ಟನ್ನೆಲ್ಲಾ ಬರೆಯಲು ಪ್ರೇರೇಪಿಸಿದ್ದು ಇವತ್ತಿನ ದ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾಗಿರುವ ರೋಮಿಲಾ ಥಾಪರ್ ಅವರ ಲೇಖನ. ರಾಮ ಸೇತು ವಿವಾದದ ಕುರಿತಂತೆ ವಿವೇಕದ ಮಾತುಗಳು ಇಲ್ಲಿವೆ ಎಂಬುದು ನನ್ನ ಅನಿಸಿಕೆ.
ನಾನೇದರೂ ಮುಸ್ಲಿಮನಾಗಿರುತ್ತಿದ್ದರೆ ಈಚೆಗೆ ಪಾಕೀಸ್ತಾನದಲ್ಲೀ ಮಹಿಳೆಯರೂ ಸೇರಿದಂತೆ ಎಲ್ಲರೂ ಸರ್ವಾಧಿಕಾರದ ವಿರುದ್ಧ ಪ್ರತಿಭಟಿಸುವುದನ್ನು ನೋಡಿ ಈ ಕಾಲದಲ್ಲಿ ಇಸ್ಲಾಂ ತನ್ನ ಹಿಂದಿನ ದೈವಿಕ ಆಶಯಗಳಿಗೆ ಹಿಂದುರುಗಿ ಪೆಟ್ರೋಲಿನ ಅಹಂಕಾರದಿಂದ ಮುಕ್ತವಾಗುತ್ತ ಇದೆ ಅಂದು ಕೊಳ್ಳುತ್ತ ಇದ್ದೆ.
manjunath s reddy
hello sir
nannana neevu ckp yalli nodirtheera … nanagu nimma lekhanadondige sahamathavide. adara jothege ondu sandeha neevu ramasethuvina bagge bareyuvaaga bjp ya raajakeeya kurithu heliddeera ok but nanage rama sethuvina project bagge detailes beku …nnangoo aa project nadeyoodu ista illla.. aadarinda neevu aa project bagge details haagu adara kuritha nimma abipraaya heltheera… sorry kannada dalli type maadodikke kasta aagthide adakke engleeshalli type maadiddeni
ಮುಸ್ಲಿಲಮರಾದರೆ ಸುಮ್ಮನಿರುತ್ತಿದ್ದರೇ? ಅನ್ನೋಕಿಂತ ಮುಸ್ಲಿಮರಾದ್ರೆ ಬಿಟೇವೆ??
ಎಂಬಂತಾಗಿದೆ ಪರಿಸ್ತಿತಿ, ಭಯೋತ್ಪಾದಕರು ಅನ್ನೋ ಹಣೆ ಪಟ್ಟಿ ಕಟ್ಟಿ ಯಾರನ್ ಬೇಕಾದ್ರು Aeroplane!! ಹತ್ತಿಸ್ತಾರೆ, ರಕ್ಷಿಸಬೇಕಾದ ಅರಕ್ಷಕರು ಮತ್ತು ಅದಕ್ಕೆ ಉಪ್ಪು ಖಾರ ಹಚ್ಚಿ ಸುದ್ದಿ ಮಾಡೋ media ಮಂದಿ. ಈಗಿನ ಮುಸ್ಲಿಮರಿಗೆ ತಮ್ಮ ಧರ್ಮದ ಬಗ್ಗೆನೆ ಸರಿಯಾಗಿ ತಿಳುವಳಿಕೆ ಗ್ಯಾನ ಇಲ್ಲ ಇನ್ನು ಸಮಾಜದಲ್ಲಿ ಗೌರವದಿಂದ ಬಾಳಲು ಕೂಡ ಅಂಥ ಹೇಳಿಕೊಳ್ಳುವಂಥ ಕೆಲಸವಿರುದಿಲ್ಲ. ವಟ್ನಲ್ಲಿ ಸಾಮಾಜಿಕ ನೆಮ್ಮದಿಯನ್ನ ಕ್ಷುಲ್ಲಕ ಕಾರಣಗಳಿಗಾಗಿ ಮತ್ತು ತಮ್ಮ ವಯುಕ್ತಿಕ ಹಿತಾಸಕ್ತಿಗಾಗಿ ಕದಡ್ತಾ ಇದಾರೆ.
Ismailji,
Sorry to know your predicament despite your unbiased views. This is probably what several others are going through.
In any case, your observations are good and are beautifully written !!
Keep up the good work !!