
ಸಾವಿರಾರು ವರ್ಷ ಬದುಕುಳಿಯಲೇ ಬೇಕಾಗಿದ್ದ ಜೀವ ವೀಣಾಧರಿಯವರದ್ದು. ಎಚ್ಐವಿ ಬಾಧಿತರೆಲ್ಲರಲ್ಲೂ ಜೀವನೋತ್ಸಾಹವನ್ನು ಪುಟಿಯುವಂತೆ ಮಾಡಿವರೀಕೆ. ನಾಲ್ಕು ವರ್ಷಗಳ ಹಿಂದೆ ಪರೀಕ್ಷೆಯೊಂದಕ್ಕಾಗಿ ಮಂಗಳೂರಿನಲ್ಲಿದ್ದಾಗ ವೀಣಾರ ಪರಿಚಯವಾಯಿತು. ನಾನು ಉಳಿದುಕೊಂಡಿದ್ದ ಗೆಳೆಯರ ಮನೆಯ ಸಮೀಪವೇ ವೀಣಾ ಅವರ ಮನೆ ಮತ್ತು ಕಚೇರಿ. ನನ್ನ ಮಂಗಳೂರಿನ ಗೆಳೆಯರೆಲ್ಲರಿಗೂ ಪರಿಚಿತರೂ ಹತ್ತಿರದವರೂ ಆಗಿದ್ದ ವೀಣಾ ಅವರ ಬದುಕಿನ ಕಥೆ ಕೇಳಿ ನನಗೂ ಕುತೂಹಲ ಉಂಟಾಯಿತು. ಮೆಂಡೋನ್ಸಾ ಕಾಂಪೌಂಡ್ ನಲ್ಲಿದ್ದ ನಮ್ಮ ಮನೆಯಲ್ಲಿ ಕುಳಿತು ಆ ಸಂಜೆ ವೀಣಾ ಸುಮಾರು ಎರಡು ಗಂಟೆಗಳ ಕಾಲ ಮಾತನಾಡಿದ್ದರು. ಅದಷ್ಟನ್ನೂ ನಾನು ಧ್ವನಿಮುದ್ರಿಸಿದ್ದೆ. ಅದರ ಆಯ್ದ ಭಾಗಗಳನ್ನು ಒಂದು ಲೇಖನವಾಗಿಸಿ ಉದಯವಾಣಿಯ ಮಹಿಳಾ ಸಂಪದ ಪುರವಣಿಯಲ್ಲಿ ಪ್ರಕಟಿಸಿದ್ದೆ. ವೀಣಾರ ದಿಟ್ಟ ನಿಲುವುಗಳನ್ನು ಹೊರಜಗತ್ತಿಗೆ ಪರಿಚಯಿಸಿದ ಮೊದಲ ಬರೆಹ ಇದು. ಆಮೇಲೆ “ತರಂಗ” ವಾರಪತ್ರಿಕೆ ಇವರ ಬದುಕಿನ ಕತೆಯನ್ನು ಮುಖಪುಟ ಲೇಖನವಾಗಿ ಪ್ರಕಟಿಸಿತು. ಹಾಯ್ ಬೆಂಗಳೂರಿನ ರವಿ ಬೆಳಗರೆಯವರಂತೂ ವೀಣಾರ ಆಂದೋಲನಕ್ಕೆ ಸಕಲ ರೀತಿಯ ನೆರವುಗಳನ್ನು ನೀಡಿದರು. ಅಷ್ಟೇ ವೀಣಾರನ್ನು ತಮ್ಮ ಮನೆಯ ಸದಸ್ಯರಂತೆ ನೋಡಿಕೊಂಡರು. ಎಚ್ ಐವಿಯೊಂದಿಗೆ ನೇರ ಸಂಬಂಧವೇ ಇಲ್ಲದ ಮೆದುಳಿನ ರಕ್ತ ಸ್ರಾವದಿಂದ ವೀಣಾ ತೀರಿಕೊಂಡರು. ಅವರ ನೆನಪಿಗಾಗಿ ಈ ಹಳೆಯ ಲೇಖನವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ.
ಎಚ್ ಐ ವಿ ಇಲ್ಲದವರು ಅಮರರೇ?
ಬಾಲ್ಯದಿಂದ ಎಂದು ಕೊಂಡರೆ ನಾನೊಬ್ಬಳು ಭಾವುಕ ಹುಡುಗಿ. ಚಿತ್ರಕಲೆ, ಹಾಡು ನೃತ್ಯ , ಓದು, ತೋಟಗಾರಿಕೆ ಹೀಗೆ ಹಲವು ಹವ್ಯಾಸಗಳು ಬಾಲ್ಯದಿಂದಲೇ ನನ್ನ ಜೊತೆಗಿದ್ದವು. ಕೇರಳದ ಸ್ವಾತಿ ತಿರುನಾಳ್ ಕಾಲೇಜಿನಲ್ಲಿ `ಗಾನಭೂಷಣಂ” ಪದವಿ ಪಡೆದೆ. ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ಅಹಿಂಸೆ ಹಾಗೂ ಮತೀಯ ಸೌಹಾರ್ದ ವಿಷಯದಲ್ಲಿ ತರಬೇತಿಯನ್ನೂ ಪಡೆದೆ. ಮತ್ತೆ ಮದುವೆ. ಇದು ಆವರೆಗಿನ ನನ್ನ ಭಾವುಕ ಬದುಕಿಗೊಂದು ತಿರುವು. ಕೆಲವು ಆತ್ಮಹತ್ಯಾ ಪ್ರಯತ್ನಗಳ ನಂತರ ಬದುಕು ಹಳಿಯ ಮೇಲೆ ಬಂತು ಎನ್ನುವ ಮತ್ತೊಂದು ಆಘಾತ. ಬಹುಶಃ ಇಲ್ಲಿಂದಲೇ ನನ್ನ ಹೊಸ ಬದುಕಿನ ಆರಂಭ.
ನನಗೆ ಎಚ್‌ಐವಿ ಸೋಂಕು ಇದೆ ಎಂದು ತಿಳಿದ ದಿನ ನನ್ನ ಹೊಸ ಬದುಕು ಆರಂಭವಾಯಿತು. ನನ್ನ ರಕ್ತ ಪರೀಕ್ಷೆಯ ಫಲಿತಾಂಶ ಹೊರಬಂತು. ರಕ್ತ ಪರೀಕ್ಷೆ ಮಾಡಿದ ಆಸ್ಪತ್ರೆಯಲ್ಲಿ ನನ್ನ ಗೆಳತಿಯೇ ಎಚ್‌ಐವಿ ಸೋಂಕು ತಗುಲಿದವರಿಗೆ ಸಲಹೆ ಕೊಡುವ ಕೆಲಸ ಮಾಡುತ್ತಾಳೆ. ನಾನು ಸಲಹೆಗಾಗಿ ಆಕೆಯ ಬಳಿ ಹೋದೆ. ನನ್ನ ಗೆಳತಿಯ ಮತ್ತೊಂದು ಮುಖ ಕಂಡು ನನಗೆ ಆಶ್ಚರ್ಯವಾಯಿತು.
`ವೀಣಾ ನಿನಗೆಷ್ಟು ಸಂಬಳ?” ಎಂಬ ಹಲವು ಪ್ರಶ್ನೆಗಳ ನಂತರ ಆಕೆಯ ಸಲಹೆಗಳನ್ನು ಕೊಡತೊಡಗಿದಳು.
ಆಕೆ ಮೊದಲಿಗೆ ಹೇಳಿದ್ದು ಆಂಟಿ ರಿಟ್ರೋವೈರಲ್ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂದು. ಆ ಹೊತ್ತಿಗೆ ನನ್ತ ರಕ್ತದಲ್ಲಿ ಬಿಳಿ ರಕ್ತಕಣಗಳ ಸಂಖ್ಯೆಗೆ ಈ ಔಷಧದ ಅಗತ್ಯವಿರಲಿಲ್ಲ. ಆದರೂ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂಬ ಒತ್ತಾಯ ಮಾತ್ರ ನಿಲ್ಲಲಿಲ್ಲ. ಈ ಔಷಧಗಳನ್ನು ತೆಗೆದುಕೊಳ್ಳುವ ಸಲಹೆ ನೀಡುವಾಗ ಹಲವಾರು ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ಇದರಲ್ಲಿ ಮುಖ್ಯವಾದದ್ದು. ಸೋಂಕು ಪೀಡಿತರ ಆದಾಯ. ಆದಾಯ ಮತ್ತು ಔಷಧದ ಬೆಲೆಗೆ ನೇರ ಸಂಬಂಧವಿದೆ. ಒಂದು ತಿಂಗಳಿಗೆ 700 ರೂಪಾಯಿಗಳಿಂದ 20,000 ರೂಪಾಯಿಗಳ ವರೆಗಿನ ಮೌಲ್ಯದ ಔಷಧಗಳಿವೆ. ಇದನ್ನು ತೆಗೆದುಕೊಂಡರೆ ಮೂರು ವರ್ಷ ಹೆಚ್ಚು ಬದುಕಬಹುದು ಎಂಬುದು ಎಚ್‌ಐವಿಗೆ ಚಿಕಿತ್ಸೆ ನೀಡುವವರ ಲೆಕ್ಕಾಚಾರ.
ಮೊದಲಿಗೆ ಔಷಧ ತೆಗೆದುಕೊಳ್ಳುವ ಪ್ರಸ್ತಾಪವನ್ನೇ ನಾನು ತಳ್ಳಿಹಾಕಿದೆ.
ಮುಂದಿನ ಹಂತ ಡಯಟೀಶನ್‌ರನ್ನು ಭೇಟಿಯಾಗುವುದು. ಎಚ್‌ಐವಿ ಬಾಧಿತರು ಯಾವೆಲ್ಲಾ ಆಹಾರ ಸೇವಿಸಬೇಕು ಎಂಬ ಸಲಹೆಗಳು ಇವರಲ್ಲಿರುತ್ತವೆ. ನನ್ನನ್ನು ಕಂಡ ತಕ್ಷಣ ಅವರು ಮಾತಿಗಾರಂಭಿಸಿದರು.
`ನಿಮಗೆ ಎಚ್‌ಐವಿ ಅಂದರೆ ಏನು ಎಂದು ಗೊತ್ತಲ್ಲ. ಮೊದಲು ನಿಮ್ಮಲ್ಲಿ ಮಾತನಾಡಿದವರು ಎಲ್ಲಾ ಹೇಳಿರಬೇಕಲ್ಲ. ಎಲ್ಲಾ ತಿನ್ನಿ. ನಿಮಗೇನು ಬೇಕು ಅದೆಲ್ಲಾ ತಿನ್ನಿ”
ನಾನು ಬಾಯಿ ತೆಗೆಯುವಷ್ಟರಲ್ಲಿ ಅವರಿಂದಲೇ ಮತ್ತೊಂದು ಪ್ರಶ್ನೆ ಬಂತು.
`ನಿಮಗೆಷ್ಟು ವರ್ಷ”
`–ವರ್ಷ”
`ನಿಮಗಿನ್ನು ಇರುವುದು …ಇಷ್ಟೇ ವರ್ಷ. ಏನು ಬೇಕು ಅದೆಲ್ಲಾ ತಿನ್ನಿ”.
ಇದನ್ನು ತುಂಬಾ ಉದ್ದಕ್ಕೆ ಬೆಳಸುವುದರಲ್ಲಿ ಅರ್ಥವಿಲ್ಲ. ಯಾರಿಗಾದರೂ ಎಚ್‌ಐವಿ ಇದೆ ಎಂದು ಗೊತ್ತಾದ ಕ್ಷಣವೇ ಅವರನ್ನು ಸಾವಿಗೆ ಸಿದ್ಧಪಡಿಸಲು ಪ್ರಯತ್ನಿಸುವವರೇ ಹೆಚ್ಚು. ಇದು ವೈದ್ಯರಿಂದ ಆರಂಭಿಸಿ ಸಲಹೆಗಾರರವರೆಗಿನ ಎಲ್ಲರೂ ಮಾಡುವುದು ಇದನ್ನೇ.
ನನಗೆ ಎಚ್‌ಐವಿ ಸೋಂಕು ತಗಲಿದ್ದು ನನ್ನ ತಪ್ಪಿನಿಂದಲ್ಲ ಎಂಬುದು ನನಗೆ ಗೊತ್ತಿತ್ತು. ಈ ವಿಷಯ ನನ್ನ ರಕ್ತಪರೀಕ್ಷೆಗೆ ಹೇಳಿದ್ದ ವೈದ್ಯರಿಗೂ ಗೊತ್ತಿತ್ತು. ಆದರೆ ಫಲಿತಾಂಶ ಬಂದ ಮೇಲೆ ಅವರು ಕೇಳಿದ ಪ್ರಶ್ನೆಯನ್ನು ನಾನೀಗಲೂ ಮರೆತಿಲ್ಲ.
`ಬೇರೆ ಯಾರ ಜೊತೆಗಾದರೂ ಮಲಗಿದ್ದೆಯಾ? ಒಮ್ಮೆ, ಒಮ್ಮೆ ಮಲಗಿದರೂ ಎಚ್‌ಐವಿ ಬರ್ತದೆ”
ನನಗೆ ಎಚ್‌ಐವಿ ಇದೆ ಎಂದು ಗೊತ್ತಾದ ಹಿಂದೆಯೇ ಆಸ್ಪತ್ರೆಯಲ್ಲಿ ಆದ ಅನುಭವ ಇದು. ಅಲ್ಲಿ ನಾನು ಧೈರ್ಯವಾಗಿಯೇ ಇದ್ದೆ. ಸಾವಿಗೆ ಸಿದ್ಧಪಡಿಸುವ ವಿಧಾನವನ್ನು ಕಂಡು ನನಗೆ ಅಳುವೇ ಬರುತ್ತಿತ್ತು, ಅದನ್ನು ಅದುಮಿಟ್ಟು ನಾನು ಸಾಯುವುದಿಲ್ಲ ಎಂದು ನಿರ್ಧರಿಸಿದೆ. ಆಸ್ಪತ್ರೆಯಿಂದ ಹೊರಗೆ ಬಂದು ರಿಕ್ಷಾದಲ್ಲಿ ಕುಳಿತು ನನ್ನ ಕಚೇರಿಗೆ ಹೋಗಲು ಹೇಳಿ ಅಳ ತೊಡಗಿದೆ. ರಿಕ್ಷಾ ಚಾಲಕ ಕೂಡಾ `ಏನು” ಎಂದು ಕೇಳಿದ ನಾನು ಉತ್ತರಿಸಲಿಲ್ಲ. ಕಚೇರಿಗೆ ಬಂದೆ. ಅವತ್ತೊಂದು ಮೀಟಿಂಗ್ ಇತ್ತು. ಕಣ್ಣೊರೆಸಿಕೊಂಡು ಮೀಟಿಂಗ್‌ಗೆ ಹೋದೆ. ಮಧ್ಯೆ ಟೀ ಕುಡಿಯುವ ಹೊತ್ತಿನಲ್ಲಿ ನನ್ನ ಸಹೋದ್ಯೋಗಿಯೊಬ್ಬರು ನನ್ನ ಕಣ್ಣು ನೋಡಿ `ಏನು” ಎಂದರು.
`ನನಗೆ ಎಚ್‌ಐವಿ ಇದೆ”
ಅವರಿಗೆ ಶಾಕ್ ಆಯಿತು. `ನಿಮಗಿದನ್ನು ಸೀಕ್ರೇಟ್ ಆಗಿ ಇಡಬೇಕಾ? ನೀವು ಹೆದರಬೇಡಿ ನಾವೆಲ್ಲಾ ಇದ್ದೇವೆ” ಎಂದರು.
`ಸೀಕ್ರೆಟ್ ಆಗಿ ಇಡಲು ಮನಸ್ಸಿಲ್ಲ. ನೀವು ಕೆಲಸದಿಂದ ತೆಗೆದರೂ ಪರವಾಗಿಲ್ಲ. ನನಗೆ ನೋಡಬೇಕು. ಈ ಲೋಕ ಹೇಗಿದೆ ಅಂತ ನೋಡಬೇಕು”
`ಕೆಲಸದಿಂದ ತೆಗೆಯುವ ಪ್ರಶ್ನೆಯೇ ಇಲ್ಲ”.
ಆಮೇಲೆ ನಾನು ಎಲ್ಲರಿಗೂ ಹೇಳಿದೆ. ನನ್ನ ಬಾಡಿಗೆ ಮನೆಯ ಮಾಲೀಕರಿಗೂ ಹೇಳಿದೆ. ಅವರು `ನೀನಿಲ್ಲಿಯೇ ಇರ್ತೀಯ” ಎಂದರು.
ನಾನು ಎಲ್ಲರಿಗೂ ಹೇಳುತ್ತಾ ಹೋದೆ. ನನಗೆ ಮನೆಯಲ್ಲಿ ಮಾತ್ರ ಇರಬೇಕು ಅಂತ ಇಲ್ಲವಲ್ಲಾ. ಲೋಕ ವಿಶಾಲವಾಗಿದೆ ಅಂತ ನನಗೆ ನಂಬಿಕೆ ಇದೆ. ಎಲ್ಲರೂ ರೋಗವನ್ನು ಮುಚ್ಚಿಡಲಿಕ್ಕೆ ಹೇಳಿದರು. ಈ ಸಲಹೆ ಕೊಟ್ಟವರೆಲ್ಲಾ ಒಳ್ಳೆಯವರೇ ಅವರ ತಪ್ಪಿಲ್ಲ. ಎಚ್‌ಐವಿಯ ಬಗ್ಗೆ ಅಂಥದ್ದೊಂದು ಕಲ್ಪನೆ ಇದೆ. ಇದು ಅರ್ಥವಾದ ಮೇಲೆ ನಾನು ರೋಗವನ್ನು ಮುಚ್ಚಿಡುವುದಿಲ್ಲ ಎಂಬ ತೀರ್ಮಾನ ಹೆಚ್ಚು ಬಲವಾಯಿತು. ನನಗಿದರಿಂದ ಏನು ತೊಂದರೆಯಾದರೂ ಪರವಾಗಿಲ್ಲ ಎಂದು ತೀರ್ಮಾನಿಸಿ ಮುನ್ನೆಡೆದೆ.
ಜಗತ್ತು ನಾನು ಭಾವಿಸಿದಷ್ಟು ಕ್ರೂರವಾಗಿರಲಿಲ್ಲ. ಎಲ್ಲರ ಪ್ರೀತಿಯೂ ದೊರೆಯಿತು. ನನ್ನ ಗೆಳತಿ ಕ್ಲಾರ. ಅವರು ನನಗೊಂದು ಪುಸ್ತಕ ಕೊಟ್ಟರು. ಲಂಡನ್‌ನ ಒಬ್ಬರ ಡಾಕ್ಟರ್ ಬರೆದ ಪುಸ್ತಕ ಅದು. ಅವರು ಎಚ್‌ಐವಿ ಪೀಡಿತರಿಗೆ ಕೌನ್ಸೆಲಿಂಗ್ ಮಾಡುತ್ತಿದ್ದವರು. ಒಂದು ತನಗೇ ಎಚ್‌ಐವಿ ಇದೆ ಎಂದು ಗೊತ್ತಾದಾಗ ಭಾರತ, ಚೀನಾ ಮುಂತಾದ ಪೂರ್ವದ ದೇಶಗಳ ವೈದ್ಯ ವಿಜ್ಞಾನಗಳನ್ನು ಅಭ್ಯಾಸ ಮಾಡಿದರು. ನೆಲ್ಲಿಕಾಯಿ, ಕಹಿಬೇವು, ತುಳಸಿ, ಬೆಲ್ಲ, ತುಪ್ಪ, ಲೋಳೆಸರ, ಪ್ರಕೃತಿ ಚಿಕಿತ್ಸೆ ಮುಂತಾದುಗಳಿಂದ ಎಚ್‌ಐವಿಯ ನಿಯಂತ್ರಣ ಸಾಧ್ಯ ಎಂಬುದು ಅವರಿಗೆ ತಿಳಿಯಿತು. ವಿನ್ನಿ ಎಂಬ ಮತ್ತೊಬ್ಬರು ವಿಲಿಯಂ ಡಿ ಸಿಲ್ವಾ ಎಂಬ ಜರ್ಮನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರೊಫೆಸರ್ ಒಬ್ಬರನ್ನು ಪರಿಚಯಿಸಿದರು. ಎಚ್‌ಐವಿಗೆ ಬಾಡಿ ಮಸಾಜಿಂಗ್ ಬಹಳ ಮುಖ್ಯ ಎಂಬುದು ಅವರಿಂದ ತಿಳಿಯಿತು. ಮಸಾಜ್ ಮಾಡುವ ವಿಧಾನವನ್ನು ವಿಲಿಯಂ ಹೇಳಿಕೊಟ್ಟರು.
ಈ ದಿನಗಳು ನನ್ನ ಬದುಕಿನಲ್ಲಿ ಬಹಳಷ್ಟು ಹೆದರಿದ ದಿನಗಳು. ಸಾವಿನ ಹೆದರಿಕೆ ಎಂಬುದು ಅದನ್ನು ಅನುಭವಿಸಿದವರಿಗೇ ಗೊತ್ತು. ಮೊದಲಿಗೆ ನನಗೆ ಬೇಕಾದ ಲೋಳೆಸರದಿಂದ mobile casino ಆರಂಭಿಸಿ ಎಲ್ಲವನ್ನೂ ಗೆಳೆಯರೇ ತಂದುಕೊಡುತ್ತಿದ್ದರು.ಕೆಲವು ಗೆಳೆಯರಂತೂ `ನಿನಗೆ `ಎಚ್‌ಐವಿ” ಬಂದದ್ದು ಒಳ್ಳೆಯದೇ ಆಯಿತು. ನಾವಾಗಿದ್ದರೆ ಹೆದರಿ ಪ್ರಾಣವೇ ಹೋಗುತ್ತಿತ್ತೇನೋ” ಎನ್ನುತ್ತಿದ್ದರು. ನನಗೆ ಒಳಗೆ ಭಯವಿತ್ತು. ಆದರೆ ಹೊರಗೆ ತೋರಿಸಿಕೊಳ್ಳುತ್ತಿರಲಿಲ್ಲ. ಇದೇ ವೇಳೆ ಇನ್ನು ಕೆಲವು ಪರಿಚಿತರು `ನಿನಗೆ ಕೈ ನಡುಗುತ್ತದೆಯೇ? ಆಯಾಸವಾಗುತ್ತದೆಯೇ?” ಮುಂತಾದ ಪ್ರಶ್ನೆಗಳನ್ನೂ ಕೇಳ ತೊಡಗಿದರು. ಆಗ ನಾನೊಂದು ತೀರ್ಮಾನಕ್ಕೆ ಬಂದೆ. ಎಷ್ಟು ಕಷ್ಟವಾದರೂ ಸರಿ ಇಂಥದ್ದೇನೂ ನನಗೆ ಸಂಭವಿಸದಂತೆ ನೋಡಿಕೊಳ್ಳುತ್ತೇನೆ ಎಂದು ನಿರ್ಧರಿಸಿದೆ.
ನನ್ನ ಆಯುರ್ವೇದ ಚಿಕಿತ್ಸೆ ಬಗ್ಗೆ ನನ್ನ ನಂಬಿಕೆ ಹೆಚ್ಚಿದಂತೆ ನಾನೇ ಎಚ್‌ಐವಿ ಪೀಡಿತರಿರುವಲ್ಲಿಗೆ ಹೋಗ ತೊಡಗಿದೆ. ಮಂಗಳೂರಿನಲ್ಲಿರುವ ಆಸ್ಪತ್ರೆಗೆ ಹೋಗಿ ನನ್ನ ಅನುಭವವನ್ನು ಇತರ ರೋಗಿಗಳೊಂದಿಗೆ ಹಂಚಿಕೊಳ್ಳತೊಡಗಿದೆ. ಇಲ್ಲಿ ಪ್ರತೀ ತಿಂಗಳೂ ಎಚ್‌ಐವಿ ಪೀಡಿತರ ಸಭೆ ನಡೆಯುತ್ತದೆ. ಅಲ್ಲಿಗೆ ಹೋದರೆ ನಮಗೆ ಬದುಕಲು ಪ್ರೇರೇಪಿಸುವಂಥ ಯಾವ ಸಲಹೆಯೂ ದೊರೆಯುವುದಿಲ್ಲ. ಅಲ್ಲಿರುವ ರೋಗಿಗಳ ಮಾಹಿತಿಯನ್ನಿಟ್ಟುಕೊಂಡು ಆಸ್ಪತ್ರೆಗಳಿಗೆ ಹೋಗಿ ಅಲ್ಲಿದ್ದ ರೋಗಿಗಳಲ್ಲಿ ಭರವಸೆ ತುಂಬುವ ಕೆಲಸ ಆರಂಭಿಸಿದೆ.
ಲೋಳೆಸರ (Aloe vera) ಎಚ್‌ಐವಿ ಪೀಡಿತರ ಮಟ್ಟಿಗೆ ಒಳ್ಳೆಯ ಔಷಧ. ಇದು ಮಂಗಳೂರಿನಲ್ಲಿ ಸಿಗುವುದಿಲ್ಲ. ಇದು ನನಗೂ ಬೇಕಿತ್ತು. ನನ್ನ ಸಲಹೆ ಕೇಳಿಬರುವ ಇತರ ರೋಗಿಗಳಿಗೂ ಬೇಕಿತ್ತು. ಹಾಗಾಗಿ ನಾನು ಲೋಳೆಸರ ಹುಡುಕಿ ಕೊಯಮತ್ತೂರು ಮುಂತಾದ ಕಡೆಗೆಲ್ಲಾ ಹೋಗುತ್ತಿದ್ದೆ. ಸ್ವಿಟ್ಜರ್ಲೆಂಡ್‌ನಲ್ಲಿ ನನ್ನ ಸೋದರಿ ಒಬ್ಬಳಿದ್ದಾಳೆ. ಆಕೆ ನನಗೆ ಅಲ್ಲಿಯೂ ಚಿಕಿತ್ಸೆಗಾಗಿ ಲೋಳೆಸರ ಬಳಸುವುದನ್ನು ಹೇಳಿದಳು.
ಎಚ್‌ಐವಿ ಪೀಡಿತರಿರುವ ಸಂಸ್ಥೆಗಳು, ಆಸ್ಪತ್ರೆಗಳಿಗೆ ಹೋಗಿ ನನ್ನ ಅನುಭವ ಹೇಳತೊಡಗಿದಾಗ ನಾನು ಆಯುರ್ವೇದ ಪ್ರಚಾರ ಮಾಡುತ್ತಿದ್ದೇನೆ ಎಂದು ಆರೋಪಿಸಿದರು. `ಫ್ರೀಡಂ” ಫೌಂಡೇಶನ್‌ನಲ್ಲಿ ನನ್ನನ್ನು ಒಳಗೆ ಹೋಗಲೇ ಬಿಡಲಿಲ್ಲ. ನಾನು ಹೇಳುವ ಆಹಾರ ಔಷಧದ ವಿಷಯಗಳನ್ನು ಕೇಳಿದ ಅವರು `ನಿಮ್ಮ ಹತ್ತಿರ ಮಾತನಾಡಿದರೆ ಅವರು ಇಲ್ಲಿ ಬರುವುದಿಲ್ಲ. ಇಲ್ಲಿ ಪ್ರತೀ ತಿಂಗಳೂ ಕೌನ್ಸೆಲಿಂಗ್ ಇದೆ” ಎನ್ನುತ್ತಿದ್ದರು. ನಾನು ಇವನ್ನು ಮಾರಾಟ ಮಾಡುತ್ತಿಲ್ಲ. ತುಂಬಾ ಸಣ್ಣ ಮಕ್ಕಳಿದ್ದಾರೆ. ಅವರಾದರೂ ಬದುಕಬಹುದು ಎಂದರೂ ಅವರು ಕೇಳುತ್ತಿರಲಿಲ್ಲ. ಕೊನೆಗೆ ನಾನು ಈ ಔಷಧ ಇತರ ಯಾವ ಕಾಯಿಲೆಗೆ ಆಗುತ್ತದೆ ಎಂದು ವಿವರಿಸಿದ ನಂತರ `ನನ್ನ ತಂದೆಗೆ ಬ್ಲಡ್ ಪ್ರೆಷರ್ ಇದೆ. ಶುಗರ್ ಇದೆ ಅವರಿಗೆ ಇದನ್ನು ಕೊಡುತ್ತೇನೆ” ಎಂದು ಹೇಳುತ್ತಿದ್ದರೇ ಹೊರತು ಎಚ್‌ಐವಿ ಪೀಡಿತರಿಗೆ ಇದನ್ನು ಕೊಡುವ ವಿಷಯ ಮಾತನಾಡುತ್ತಿರಲಿಲ್ಲ.
ಇಂಥ ಅನುಭವಗಳನ್ನು ಪಟ್ಟಿ ಮಾಡಿದಷ್ಟೂ ಮುಗಿಯುವುದಿಲ್ಲ. ಎಚ್‌ಐವಿ ನಿಯಂತ್ರಣಕ್ಕಾಗಿ ಸರಕಾರ, ಸ್ವಯಂ ಸೇವಾ ಸಂಸ್ಥೆಗಳು, ದಾನಿಗಳು ಹೀಗೆ ಬಹಳಷ್ಟು ಮೂಲಗಳಿಂದ ಹಣ ಹರಿದು ಬರುತ್ತಿದೆ. ಇದರಿಂದ ಎಚ್‌ಐವಿ ಪೀಡಿತರಿಗೆ ಯಾವ ಉಪಯೋಗವೂ ಆಗಿಲ್ಲ. `ಜಾಗೃತಿ” ಮೂಡಿಸುವ ಭ್ರಮೆಯಲ್ಲಿ ಮುಳುಗಿರುವ ಎಲ್ಲರೂ ಸೋಂಕು ಪೀಡಿತರನ್ನು ಸಾವಿಗೆ ಸಿದ್ಧಪಡಿಸುವಲ್ಲಿ ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ.
ಎಚ್‌ಐವಿ/ಏಡ್ಸ್ ಪೀಡಿತರನ್ನು ಅಸ್ಪೃಶ್ಯರಂತೆ ನೋಡುವುದು. ರೋಗಿಗೆ ಚಿಕಿತ್ಸೆ ನೀಡಬೇಕಾದ ವೈದ್ಯರು ರೋಗಿಯನ್ನು ಸಾವಿಗೆ ಸಿದ್ಧಪಡಿಸುವುದರ ಹಿಂದೆ ಈ `ಜಾಗೃತಿ”ಯ ದುಷ್ಪರಿಣಾಮಗಳಿವೆ. ಇದರಲ್ಲಿ ದೊಡ್ಡ ತಮಾಷೆಯಿದೆ. ಎಚ್‌ಐವಿ ಪೀಡಿತರಲ್ಲೂ ವಿವಿಧ ವರ್ಗಗಳಿವೆ. ಎಚ್‌ಐವಿ ಪೀಡಿತರು ತಮ್ಮದೇ ಆದ ನೆಟ್‌ವರ್ಕ್ ರೂಪಿಸುವ ಯೋಜನೆಯೊಂದಿದೆ. ಇದರಲ್ಲಿ ಇರುವವರೆಲ್ಲಾ ಎಚ್‌ಐವಿ ಪೀಡಿತರೇ. ಆದರೆ ನೆಟ್‌ವರ್ಕ್‌ನಲ್ಲಿ ಇರುವವರು ಒಂದು ಮೇಲ್ದರ್ಜೆಯವರು. ಇದರ ಮುಖ್ಯಸ್ಥರು ಇನ್ನೂ ಮೇಲ್ದರ್ಜೆಯವರು. ಈ ಗುಂಪಿನಲ್ಲಿ ಇರುವ ಹೆಚ್ಚಿನವರು ಇನ್ನುಳಿದ ಎಚ್‌ಐವಿ ಬಾಧಿತರನ್ನು ಕೆಳದರ್ಜೆಯವರು ಎಂದು ತೀರ್ಮಾನಿಸಿ ಬಿಟ್ಟಿದ್ದಾರೆ!
ದೇಶದ ಎಲ್ಲಾ ರಾಜ್ಯಗಳಲ್ಲಿರುವ ಎಚ್‌ಐವಿ ನೆಟ್‌ವರ್ಕ್ ಪ್ರತಿನಿಧಿಸುವ ಸಾವಿರ ಮಂದಿ ಭಾಗವಹಿಸುವ ಕಾರ್ಯಕ್ರಮವೊಂದು ದಿಲ್ಲಿಯಲ್ಲಿತ್ತು. ಕೇಂದ್ರದ ಮಂತ್ರಿಗಳೂ ಭಾಗವಹಿಸಿದ್ದ ಈ ಕಾರ್ಯಕ್ರಮಕ್ಕಾಗಿ ಖರ್ಚು ಮಾಡಿದ್ದ ಹೂವಿನ ಹಣದಲ್ಲಿ ಸಾವಿರಾರು ಎಚ್‌ಐವಿ ಪೀಡಿತರ ಬದುಕನ್ನು ಸುಧಾರಿಸಬಹುದಿತ್ತು! ಕಾರ್ಯಕ್ರಮಕ್ಕೆ ನಾನೂ ಹೋಗಿದ್ದೆ. ಬಹಳಷ್ಟು ವಿಚಾರ ಸಂಕಿರಣಗಳು, ಒಳ್ಳೆಯ ಊಟ, ಪಂಚತಾರಾ ಹೊಟೇಲಿನಲ್ಲಿ ವಾಸ್ತವ್ಯ. ಓಹ್. ನನ್ನ ಜೊತೆಗಿದ್ದ ಎಚ್‌ಐವಿ ಬಾಧಿತರೊಬ್ಬರು ಹೇಳಿಯೇ ಬಿಟ್ಟರು. `ನಮಗೆ ಎಚ್‌ಐವಿ ಇದ್ದದ್ದೇ ಒಳ್ಳೆಯದಾಯಿತು!”
ಎಚ್‌ಐವಿ ನಿಯಂತ್ರಣ ನಡೆಯುತ್ತಿರುವುದು ಹೀಗೆ ಎಂದರೆ ಅದನ್ನು ಮಾಡುತ್ತಿರುವವರಿಗೆ ಬೇಸರವಾಗುತ್ತದೆ. ಇದರಲ್ಲಿ ಯಾರ ತಪ್ಪೂ ಇಲ್ಲ. ಏಕೆಂದರೆ `ಜಾಗೃತಿ” ಮೂಡಿಸುವ ಕೆಲಸದಲ್ಲಿ ಹಣವಿದೆ. ಸೋಂಕು ಬಾಧಿತರು ಹೇಗೂ ಸಾಯುವವರಲ್ಲವೇ?
ಎಚ್‌ಐವಿ ಬಾಧಿತರಿಗೆ ತುರ್ತು ಚಿಕಿತ್ಸೆ ಬೇಕು. ಅವರಿಗೆ ಪೌಷ್ಟಿಕ ಆಹಾರ ಬೇಕು. ಸರಕಾರಿ ಆಸ್ಪತ್ರೆಗಳಿಗೆ ಎಚ್‌ಐವಿಗೆ ಚಿಕಿತ್ಸೆಯೇ ದೊರೆಯುವುದಿಲ್ಲ. ಎಚ್‌ಐವಿ ಚಿಕಿತ್ಸೆಗಾಗಿಯೇ ಇರುವ ಆಸ್ಪತ್ರೆಗಳಿಗೆ ಹೋದರೆ ಅಲ್ಲಿ ನಿಮ್ಮನ್ನು ಸಾವಿಗಾಗಿ ಸಿದ್ಧಪಡಿಸುತ್ತಾರೆ-ಎಚ್‌ಐವಿ ಇಲ್ಲದವರೆಲ್ಲಾ ಅಮರರು ಎಂಬಂತೆ!
ನಾನಿಂದು ನನಗೆ ಎಚ್‌ಐವಿ ಇದೆ ಎಂದು ಹೇಳಿಕೊಳ್ಳುವುದಕ್ಕೆ ಇವೆಲ್ಲಾ ಕಾರಣ. ಇದನ್ನು ಸರಿಪಡಿಸುವ ದೊಡ್ಡ ಸವಾಲು ನಮ್ಮ ಅಂದರೆ ಎಚ್‌ಐವಿ ಪೀಡಿತರ ಮುಂದಿದೆ. ಈಗಾಗಲೇ ಎಚ್‌ಐವಿ `ಜಾಗೃತಿ”ಯಲ್ಲಿ ತೊಡಗಿರುವವರಿಗೆ ನಮ್ಮಂಥವರು ಸ್ಪರ್ಧಿಗಳಂತೆ ಕಾಣುತ್ತಾರೆ. ಅವರ ಗಳಿಕೆಯಲ್ಲಿ ಪಾಲು ಕೇಳುವವರಂತೆಯೂ ಭಾವಿಸಬಹುದು. ಇದು ನಮ್ಮ ಉತ್ಸಾಹವನ್ನು ಕುಗ್ಗಿಸಬೇಕಿಲ್ಲ. ನಮ್ಮ ಬದುಕುವ ಹಕ್ಕನ್ನು ಸಾಬೀತು ಮಾಡಬೇಕಿದೆ. ಆಂಟಿ ರಿಟ್ರೋವೈರಲ್ ಔಷಧಗಳಷ್ಟೇ ಮಾರ್ಗವಲ್ಲ. ಅದರಾಚೆಗಿನ ಔಷಧಗಳೂ ಇವೆ ಎಂಬುದಕ್ಕೆ ನನ್ನ ಅನುಭವವೇ ಸಾಕ್ಷಿ. ನಾನು ಈಗಲೂ ಸಾಮಾನ್ಯ ಆರೋಗ್ಯವಂತರಷ್ಟೇ ಚೆನ್ನಾಗಿದ್ದೇನೆ.
ಎಲ್ಲರೂ ಸಾಯುತ್ತಾರೆ. ಹಾಗೆ ಎಚ್‌ಐವಿ ಬಾಧಿತರೂ ಸಾಯುತ್ತಾರೆ. ಇದರಲ್ಲಿ ವಿಶೇಷವೇನೂ ಇಲ್ಲ ಎಂಬುದು ಎಲ್ಲರಿಗೂ ಅರಿವಾದರೆ ಸಾಕು.