ಕರ್ನಾಟಕ ರಾಜಕಾರಣದ ರಕ್ಷಣಾ ಪರ್ವವು

`ಜಾತ್ಯತೀತತೆಯ ರಕ್ಷಣೆ’ ಮತ್ತು `ಸ್ವ ಪಕ್ಷ ರಕ್ಷಣೆ’ಗಳೆರಡರ ಹೊಣೆಯನ್ನೂ ಹೊತ್ತ ಕುಟುಂಬವೊಂದಿದ್ದರೆ ಅದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರದ್ದು. ಈ `ರಕ್ಷಣೆ’ಗಳ ಕಾರಣಕ್ಕಾಗಿ ಅದು ಕೆಲವು ತೀರ್ಮಾನಗಳನ್ನು ಕೈಗೊಳ್ಳುತ್ತದೆ. ಇವು ಕೌಟುಂಬಿಕ ತೀರ್ಮಾನವಾಗಿದ್ದರೂ ಅದನ್ನು ಜೆಡಿಎಸ್‌ ಎಂಬ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್‌.ಡಿ.ದೇವೇಗೌಡರು ಕೈಗೊಂಡಂತೆ ಇರುತ್ತವೆ. ಇಲ್ಲವೇ ಪಕ್ಷ ಸಂಘಟನೆಯಲ್ಲಿ/ಸರಕಾರದಲ್ಲಿ ಇರುವ ಅವರ ಮಕ್ಕಳು ಕೈಗೊಂಡಂತೆ ಕಾಣಿಸುತ್ತವೆ. ತೀರಾ ಮುಖ್ಯವಾದ ವಿಚಾರವಾಗಿದ್ದರೆ ದೇವೇಗೌಡರು ಮತ್ತು ಕುಟುಂಬದ ಸದಸ್ಯರ ಮಾರ್ಗದರ್ಶನದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಕೈಗೊಂಡಂತೆ ಇರುತ್ತದೆ.

ದೇವೇಗೌಡರು ಜಾತ್ಯತೀತತೆಯ `ರಕ್ಷಣೆ’ಗಾಗಿಯೂ ಉಳಿದವರು ಪಕ್ಷದ `ರಕ್ಷಣೆ’ಗಾಗಿಯೂ ನಿರ್ಧಾರಗಳನ್ನು ಕೈಗೊಳ್ಳುತ್ತಿರುತ್ತಾರೆ. ಈ `ರಕ್ಷಣೆ’ಗಳ ಮೂಲಕ ನಿಜಕ್ಕೂ ಯಾರ ರಕ್ಷಣೆ ನಡೆಯುತ್ತಿದೆ ಎಂಬುದು ಈಗ ಇಡೀ ಕರ್ನಾಟಕಕ್ಕೆ ಹಾಗೂ ಸ್ವಲ್ಪ ಮಟ್ಟಿಗೆ ಇಡೀ ದೇಶಕ್ಕೂ ತಿಳಿದಿರುವ ಸಂಗತಿ. ಮೂರು ವರ್ಷಗಳ ಹಿಂದೆ ಕರ್ನಾಟಕದ ಜನತೆ ಯಾವ ಪಕ್ಷಕ್ಕೂ ಬಹುಮತ ನೀಡದೆ ತಮ್ಮ ಅಭಿಪ್ರಾಯವನ್ನು ದಾಖಲಿಸಿದ ದಿನ ದೇವೇಗೌಡರಿಗೂ ಕಾಂಗ್ರೆಸ್ಸಿಗರಿಗೂ `ಜಾತ್ಯತೀತತೆ’ ಬಹಳ ಪ್ರಿಯವಾದ ವಿಷಯವಾಗಿತ್ತು. ಈ ಪದ ಇಬ್ಬರಿಗೂ ಕುರ್ಚಿಗಳನ್ನು ಕೊಡುತ್ತಿತ್ತು. ಪರಿಣಾಮವಾಗಿ ರೂಪುಗೊಂಡದ್ದು ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ.

ಈ ಮೈತ್ರಿಗೆ ಇಪ್ಪತ್ತು ತಿಂಗಳು ತುಂಬುವಾಗ ದೇವೇಗೌಡರ ಪುತ್ರ ಹಾಗೂ ಜೆಡಿಎಸ್‌ನ ಕಾರ್ಯಾಧ್ಯಕ್ಷರಾಗಿದ್ದ ಎಚ್‌.ಡಿ.ಕುಮಾಸ್ವಾಮಿಯವರಿಗೆ `ಪಕ್ಷವನ್ನು ರಕ್ಷಿಸಬೇಕು’ ಎನ್ನಿಸಿತು. ಈ `ರಕ್ಷಣೆ’ಯಿಂದ ತಮ್ಮ ಕುರ್ಚಿಯ ರಕ್ಷಣೆಯೂ ಆಗುತ್ತದೆ ಎಂಬ ಖಾತರಿ ಅವರಿಗಿತ್ತು. ಹೆಚ್ಚು ಸ್ಥಾನಗಳನ್ನು ಗಳಿಸಿಯೂ ಕುರ್ಚಿ ದೊರೆಯದೆ ನಿರಾಶೆ ಅನುಭವಿಸುತ್ತಿದ್ದ ಬಿಜೆಪಿಗೂ ಕುರ್ಚಿಯ ಆಸೆಯಿತ್ತು. ಪರಿಣಾಮವಾಗಿ ರೂಪುಗೊಂಡದ್ದು ಜೆಡಿಎಸ್‌-ಬಿಜೆಪಿ ಮೈತ್ರಿ ಕೂಟ. ಇದು ರೂಪುಗೊಂಡಾಗ ಇಪ್ಪತ್ತು ತಿಂಗಳ ಕಾಲ ಮುಖ್ಯಮಂತ್ರಿ ಕುರ್ಚಿ ಜೆಡಿಎಸ್‌ ಬಳಿ ಇರುವುದಕ್ಕೆ ಬೆಂಬಲ ನೀಡುವ ಹೊಣೆ ಬಿಜೆಪಿಯದ್ದು ಹಾಗೆಯೇ ನಂತರದ ಇಪ್ಪತ್ತು ತಿಂಗಳುಗಳ ಕಾಲ ಅದೇ ಕುರ್ಚಿ ಬಿಜೆಪಿ ಬಳಿ ಇರುವುದಕ್ಕೆ ಬೆಂಬಲ ನೀಡುವ ಹೊಣೆ ಜೆಡಿಎಸ್‌ನದ್ದು ಎಂದು ತೀರ್ಮಾನವಾಗಿತ್ತಂತೆ.

ಜೆಡಿಎಸ್‌ ಪಾಲಿಗೆ ಬಂದಿದ್ದ ಅವಧಿಯಲ್ಲಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತು, ಹಳ್ಳಿಗಳಲ್ಲಿ ಮಲಗಿ ಅದನ್ನು ಅನುಭವಿಸಿದ ಎಚ್‌.ಡಿ.ಕುಮಾರಸ್ವಾಮಿಯವರಿಗೆ ಇಪ್ಪತ್ತು ತಿಂಗಳ ಹಿಂದೆ ಅವರನ್ನು ಕಾಡಿದ್ದ `ಜಾತ್ಯತೀತತೆ ಎಂದರೆ ಏನು?’ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಬಿಟ್ಟಿತ್ತು. ಕುರ್ಚಿಯನ್ನು ಬಿಜೆಪಿಗೆ ಬಿಟ್ಟುಕೊಡುವ ಹೊತ್ತಿಗೆ ಸರಿಯಾಗಿ ಅವರೂ ಅವರ ಪೂಜ್ಯ ತಂದೆಯವರೂ ಸೇರಿ `ಜಾತ್ಯತೀತತೆಯ ರಕ್ಷಣೆ’ ಆರಂಭಿಸಿದರು.

ದೇವೇಗೌಡರ ಕುಟುಂಬ ಜಾತ್ಯತೀತೆಯ `ರಕ್ಷಣೆ’ಗೆ ಇಳಿದ ಪರಿಣಾಮವಾಗಿ ಕುರ್ಚಿ ಕಳೆದುಕೊಂಡ ದುಃಖ ಅನುಭವಿಸಿದ ಬಿಜೆಪಿ ಧರ್ಮ `ರಕ್ಷಣೆ’ಗೆ ಮುಂದಾಯಿತು. ಯಡಿಯೂರಪ್ಪನವರು ಮಂಡ್ಯ ಜಿಲ್ಲೆಯ ಬೂಕನಕೆರೆ ಕಡೆಯಲ್ಲಿ ದುಃಖಾರ್ತ ಹೆಂಗಸರು ಶಾಪ ಹಾಕುವ ಶೈಲಿಯಲ್ಲಿ ಮಾತನಾಡುತ್ತಾ ಧರ್ಮಯಾತ್ರೆ ಆರಂಭಿಸಿದರು. ಅನಂತಕುಮಾರ್‌ ಅವರು ತಮ್ಮ ನಗು ಮುಖದ ಮೇಲೆ ಬಾರದಂತೆ ನೋಡಿಕೊಂಡು ಈ `ರಕ್ಷಣಾ ಕಾರ್ಯ’ಕ್ಕೆ ಬೆಂಬಲ ನೀಡಿದರು.

ಎಲ್ಲರ `ರಕ್ಷಣಾ ಕಾರ್ಯ’ಗಳಿಂದಾಗಿ ತಮ್ಮ ಕುರ್ಚಿಯ ಸುರಕ್ಷತೆ ಅಪಾಯದಲ್ಲಿದೆ ಎಂಬುದು ಮೊದಲಿಗೆ ಜೆಡಿಎಸ್‌ ಶಾಸಕರಿಗೆ ಅರಿವಾಯಿತು. ಅವರು `ಕುರ್ಚಿ ರಕ್ಷಣಾ ಚಟುವಟಿಕೆ’ ಆರಂಭಿಸಿದರು. ಇದರಿಂದಾಗಿ ಕೆಲವು ಕಾಂಗ್ರೆಸ್‌ ಶಾಸಕರಿಗೂ `ಕುರ್ಚಿ ರಕ್ಷಣಾ ಕಾರ್ಯ’ದಲ್ಲಿ ಆಸಕ್ತಿ ಹುಟ್ಟಿತು. ನಿಧಾನಕ್ಕೆ ಕಾಂಗ್ರೆಸ್‌ ನಾಯಕರ ಹಂತಕ್ಕೆ ಪಸರಿಸಿ ಜೆಡಿಎಸ್‌ ಶಾಸಕರ ಕುರ್ಚಿ ರಕ್ಷಣೆ ಅಭಯ ಹಸ್ತ ಚಾಚುವ ಮೂಲಕ ಕಾಂಗ್ರೆಸ್‌ ಮತ್ತೆ ಅಧಿಕಾರದ ಕುರ್ಚಿಯಲ್ಲಿ ಕೂರುವಂತೆ ಮಾಡಲು ಹೊರಟರು. ಕಾಂಗ್ರೆಸ್‌ನ ಈ ತಂತ್ರ ಎಚ್‌.ಡಿ. ದೇವೇಗೌಡರು ಮತ್ತು ಅವರ ಪುತ್ರರತ್ನರಾದ ಎಚ್‌.ಡಿ. ಕುಮಾಸ್ವಾಮಿಯವರಲ್ಲಿ ಪಕ್ಷ ರಕ್ಷಣಾತುರತೆಗೆ ಕಾರಣವಾಗಿ ಜಾತ್ಯತೀತತೆಯ ರಕ್ಷಣೆ ವಿಸ್ಮೃತಿಗೆ ಸರಿಯಿತು. ಕಡಿದುಹೋಗಿದ್ದ ಸಂಬಂಧವನ್ನು ಬೆಸೆದುಕೊಂಡು ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯಾಗಿ ಒಪ್ಪಿಕೊಂಡು ರಾಷ್ಟ್ರಪತಿ ಭವನಕ್ಕೂ ಹೋಗಿ ಶಾಸಕರ ಪೆರೇಡ್‌ ನಡೆಸಿದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನೂ ಸ್ವೀಕರಿಸಿ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕುಳಿತೇ ಬಿಟ್ಟರು.

ಇಪ್ಪತ್ತು ತಿಂಗಳು ತಮ್ಮ ಕುಮಾರಸ್ವಾಮಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತಿರಲು ಬಿಜೆಪಿ ಬೆಂಬಲ ನೀಡಿದ್ದರೂ ಜಾತ್ಯೀತತೆಗೆ ಅಪಾಯ ಸಂಭವಿಸಿರಲಿಲ್ಲ ಎಂಬುದರ ಬಗ್ಗೆ ದೇವೇಗೌಡರಿಗೆ ಖಾತರಿ ಇದೆ. ಈಗ ಯಡಿಯೂರಪ್ಪ ಕುಳಿತುಕೊಂಡರೆ ಅದಕ್ಕೆ ಅಪಾಯವಾಗಬಹುದು ಎಂಬುದು ಅವರ ಸಂಶಯ. ಪರಿಣಾಮವಾಗಿ ಅವರು ಜಾತ್ಯತೀತತೆಯ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ಈ ರಕ್ಷಣೆಗೆ ಅವರಲ್ಲಿರುವ ಸರಳ ಸೂತ್ರಗಳು ಎರಡು ಮತ್ತೆ ಮುಖ್ಯಮಂತ್ರಿ ಕುರ್ಚಿಯನ್ನು ತಮ್ಮ ಕುಟುಂಬದೊಳಕ್ಕೇ ಎಳೆದು ತರುವುದು. ಇಲ್ಲದಿದ್ದರೆ ಕುರ್ಚಿಯ ಕಾಲನ್ನು ಎಳೆಯುತ್ತಾ ಇರುವುದು.