Skip to content

Freedom of the present | ಈ ನಡುವಿನ ಬಿಡುವು

ಅಳಿಸಲಾಗದ ಅಕ್ಷರವ ಬರೆಯಲಾಗದು!

Menu
  • Privacy Policy
Menu

ಜನ ವಿರೋಧಿ ಜನತಾ ದರ್ಶನ

Posted on January 9, 2008September 23, 2014 by Ismail
ಜನತಾದರ್ಶನ


ಕರ್ನಾಟಕದ ರಾಜ್ಯಪಾಲರ ಇತ್ತೀಚಿನ ಜನತಾದರ್ಶನದಲ್ಲಿ ಅವರು ಸ್ವೀಕರಿಸಿದ ಅರ್ಜಿಗಳ ಸಂಖ್ಯೆ 1200. ಇವು ಕೇವಲ ಎರಡೇ ಗಂಟೆಗಳಲ್ಲಿ ಸಂಗ್ರಹವಾದ ಅರ್ಜಿಗಳ ಸಂಖ್ಯೆ. ಈ ಅರ್ಜಿಗಳಲ್ಲಿ ದೂರದ ಗುಲ್ಬರ್ಗದಿಂದ ಮಗನ ಹೃದ್ರೋಗ ಚಿಕಿತ್ಸೆಗೆ ನೆರವು ಯಾಚಿಸಿ ಬಂದಿದ್ದ ಮಹಿಳೆಯಿಂದ ಆರಂಭಿಸಿ ವೃದ್ಧಾಪ್ಯ ವೇತನಕ್ಕಾಗಿ ತಾಲೂಕು ಕಚೇರಿಗೆ ಅಲೆದು ಸುಸ್ತಾಗಿ ಬೆಂಗಳೂರಿಗೆ ಬಂದ ವೃದ್ಧರಿದ್ದರು. ರಾಜ್ಯಪಾಲರು ಅರ್ಜಿ ಗಳನ್ನೆಲ್ಲಾ ಸ್ವೀಕರಿಸಿದರು. ಹೃದಯ ಚಿಕಿತ್ಸೆಗೆ ನೆರವು ಯಾಚಿಸಿದ್ದ 34 ಮಂದಿಗೆ ತಲಾ 25,000 ಸಾವಿರ ರೂಪಾಯಿಗಳ ಚೆಕ್‌ ವಿತರಿಸಿದರು. ಇವರಲ್ಲಿ ಕೆಲವರು ಸರಕಾರೀ ಸ್ವಾಮ್ಯದ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದರೆ ಇನ್ನು ಕೆಲವರು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯ ಲಿದ್ದಾರೆ. ಜನತಾದರ್ಶನದಲ್ಲಿ ಭಾಗವಹಿಸಿದ್ದ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್‌. ಮಂಜುನಾಥ್‌ `ಬಿಪಿಎಲ್‌ ಪಡಿತರ ಚೀಟಿಗಳನ್ನು ಹೊಂದಿರುವವರಿಗೆ ನಮ್ಮ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು’. 

ಕಷ್ಟದಲ್ಲಿರುವವರ ಅರ್ಜಿ ಸ್ವೀಕರಿಸಿ ಪರಿಹಾರ ನೀಡುವ ರಾಜ್ಯಪಾಲರ ದೊಡ್ಡ ಮನಸ್ಸನ್ನು ಕೊಂಡಾಡದೇ ಇರಲು ಸಾಧ್ಯವೇ? ಮಾಧ್ಯಮಗಳಲ್ಲೆಲ್ಲಾ 34 ಮಂದಿಗೆ ನೀಡಿದ 25,000 ರೂಪಾಯಿಗಳು ದೊಡ್ಡ ಸುದ್ದಿಯೇ ಆಯಿತು. ಮುಂದಿನ ಜನತಾದರ್ಶನದ ಹೊತ್ತಿಗೆ ಇದೇ ಬೇಡಿಕೆಯುಳ್ಳ ಮತ್ತಷ್ಟು ಮಂದಿ ರಾಜ್ಯಪಾಲರಿಗಾಗಿ ಕಾಯುತ್ತಾ ಸರದಿ ಸಾಲಿನಲ್ಲಿ ನಿಲ್ಲುವುದರಲ್ಲಿ ಸಂಶಯವಿಲ್ಲ. ದಯಾಳುವಾದ ರಾಜ್ಯಪಾಲರು ಅವರಿಗೂ ಒಂದಷ್ಟು ದುಡ್ಡನ್ನು ಹೊಂದಿಸಿ ಕೊಡಬಹುದು. ಅದೂ ಮಾಧ್ಯಮಗಳಲ್ಲಿ ಸುದ್ದಿಯಾಗಬಹುದು.

* * *

ಕರ್ನಾಟಕದಲ್ಲಿ ಒಟ್ಟು 1600 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು 176 ಸರಕಾರೀ ಆಸ್ಪತ್ರೆಗಳ ಜಾಲವಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಐದು ಕಿಲೋಮೀಟರ್‌ ವ್ಯಾಪ್ತಿಯೊಳಗೇ ಸಿಕ್ಕರೆ ಆಸ್ಪತ್ರೆಗಳು ಗರಿಷ್ಠ ನಲವತ್ತು ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಸಿಗುತ್ತವೆ. ಬಹುತೇಕ ಜಿಲ್ಲೆಗಳಲ್ಲಿರುವ ಸರಕಾರೀ ಆಸ್ಪತ್ರೆಗಳಲ್ಲೇ ಎಲ್ಲಾ ಬಗೆಯ ತಜ್ಞರಿದ್ದಾರೆ. ಬಡ ರೋಗಿಯೊಬ್ಬ ಈ ಆಸ್ಪತ್ರೆಗಳಲ್ಲಿ ಯಾವುದಾದರೊಂದನ್ನು ಸಂದರ್ಶಿಸುವ ಮೂಲಕ ತನ್ನ ಚಿಕಿತ್ಸೆಗೆ ಮುಂದೇನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಿದೆ. ಆಯಾ ಆಸ್ಪತ್ರೆಗಳವರೇ ಅವರನ್ನು ಜಯದೇವ, ವಿಕ್ಟೋರಿಯಾ, ಕಿದ್ವಾಯಿ, ನಿಮ್ಹಾನ್ಸ್‌ನಂಥ ಆಸ್ಪತ್ರೆಗಳಿಗೆ ಕಳುಹಿಸಲೂಬಹುದು. ಈ ಆಸ್ಪತ್ರೆಗಳಲ್ಲಿ ಬಡವರಿಗೆ ದೊರೆಯುವ ಉಚಿತ ಚಿಕಿತ್ಸೆಗೆ ಬೇಕಿರುವ ಅರ್ಹತೆಗಳ ಬಗ್ಗೆಯೂ ತಿಳಿಸಬಹುದು. ಆದರೆ ಹೃದ್ರೋಗ ಚಿಕಿತ್ಸೆಗೆ, ಕ್ಯಾನ್ಸರ್‌ ಚಿಕಿತ್ಸೆಗೆ ದುಡ್ಡು ಬೇಕಾದವರೆಲ್ಲರೂ ಜನತಾದರ್ಶನದ ಸರದಿ ಸಾಲಿನಲ್ಲಿ ನಿಲ್ಲುತ್ತಾರೆ!

ಹೀಗೆ ತಮ್ಮನ್ನು ಭೇಟಿಯಾಗಲು ಬಂದ ಯಾರಲ್ಲಿಯೂ ರಾಜ್ಯಪಾಲರು `ನೀವು ಇಲ್ಲಿಯವರೆಗೇಕೆ ಬಂದಿರಿ?’ ಎಂಬ ಪ್ರಶ್ನೆಯನ್ನು ಕೇಳಿದಂತೆ ಕಾಣಿಸುತ್ತಿಲ್ಲ. ಯಾವುದೇ ಮಾಧ್ಯಮವೂ ರಾಜ್ಯಪಾಲರು ಇಂಥದ್ದೊಂದು ಪ್ರಶ್ನೆಯನ್ನು ಕೇಳಿದ್ದಾಗಿ ಈವರೆಗೆ ವರದಿ ಮಾಡಿಲ್ಲ. ಇದು ಕೇವಲ ರಾಜ್ಯಪಾಲರ ಜನತಾದರ್ಶನದ ಮಿತಿಯೇನೂ ಅಲ್ಲ. ಈ ಹಿಂದೆ ರಾಮಕೃಷ್ಣ ಹೆಗಡೆಯಾದಿಯಾಗಿ ನಿಕಟಪೂರ್ವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರ ವರೆಗೆ ಯಾರೂ ಜನರೇಕೆ ನಮ್ಮ ಬಳಿಗೆ ಹೀಗೆ ಹಿಂಡು ಹಿಂಡಾಗಿ ಬರುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಯೋಚಿಸಿಲ್ಲ.

ಎಚ್‌.ಡಿ.ಕುಮಾರಸ್ವಾಮಿಯವರೊಮ್ಮೆ ಈ ವಿಷಯದಲ್ಲಿ ಜ್ಞಾನೋದಯವಾದಂತೆ ಮಾಧ್ಯಮಗಳೆದುರು ಅಬ್ಬರಿಸಿದ್ದರು. ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಮಾತನಾಡಿದ್ದರು. ಇದಾದ ಒಂದೆರಡು ವಾರ ಗಳಲ್ಲೇ ಅವರು ಹೇಳಿಯೇ ಬಿಟ್ಟರು `ವ್ಯವಸ್ಥೆಯನ್ನು ಬದಲಾಯಿ ಸುವುದಕ್ಕೆ ನನ್ನೊಬ್ಬನಿಂದ ಸಾಧ್ಯವಿಲ್ಲ!’.

* * *

ವೃದ್ಧಾಪ್ಯವೇತನ, ಅಂಗವಿಕಲರ ಮಾಸಾಶನ, ವಿಧವಾ ವೇತನ ಗಳನ್ನು ಪಡೆಯಲು ಏನು ಮಾಡಬೇಕು? ಕರ್ನಾಟಕದ ಈಗಿನ ಸ್ಥಿತಿಯನ್ನು ನೋಡಿದರೆ `ಜನತಾದರ್ಶನದಲ್ಲಿ ಅರ್ಜಿ ಕೊಡಬೇಕು’ ಎಂದು ಉತ್ತರಿಸಬೇಕಾಗುತ್ತದೆ.

ಅದು ಇರಬೇಕಾದದ್ದು ಹೀಗಲ್ಲ. ಮಾಸಾಶನ ಬೇಕಿರುವವರು ತಾಲೂಕು ಕಚೇರಿಯಲ್ಲಿ ಇಲ್ಲವೇ ನಾಡ ಕಚೇರಿಯಲ್ಲಿ ಒಂದು ಅರ್ಜಿ ಕೊಡಬೇಕು. ಈ ಅರ್ಜಿಯನ್ನು ನಾಡಕಚೇರಿಯ ಉಪ ತಹಶೀಲ್ದಾರರು ಅಥವಾ ತಾಲೂಕು ಕಚೇರಿಯ ತಹಶೀಲ್ದಾರರು ಸಂಬಂಧಪಟ್ಟ ರಾಜಸ್ವ ನಿರೀಕ್ಷಕರಿಗೆ ಕಳುಹಿಸುತ್ತಾರೆ. ಅವರು ಅರ್ಜಿ ಸಲ್ಲಿಸಿರುವ ವ್ಯಕ್ತಿಯ ವಿಳಾಸ ನೋಡಿ ಆ ಊರಿನ ಗ್ರಾಮ ಲೆಕ್ಕಿಗರಿಗೆ ಕಳುಹಿಸುತ್ತಾರೆ. ಗ್ರಾಮ ಲೆಕ್ಕಿಗರು ಆ ವ್ಯಕ್ತಿಯ ವಿಳಾಸ ಹುಡುಕಿ ದಾಖಲೆ ಪರಿಶೀಲಿಸಿ, ಮಹಜರು ಮಾಡಿ ಅರ್ಜಿದಾರ ಸರಕಾರ ಕೊಡುವ ಮಾಸಾಶನವನ್ನು ಪಡೆಯಲು ಎಷ್ಟು ಅರ್ಹ ಅಥವಾ ಅರ್ಹನಲ್ಲ ಎಂಬ ವರದಿ ತಯಾರಿಸಿ ರಾಜಸ್ವ ನಿರೀಕ್ಷಕರಿಗೆ ತಲುಪಿಸುತ್ತಾರೆ. ಅವರದನ್ನು ಪರಿಶೀಲಿಸಿ ತಮ್ಮ ಅಭಿಪ್ರಾಯವನ್ನೂ ಬರೆದು ನಾಡಕಚೇರಿಗೆ ಇಲ್ಲವಾದರೆ ತಾಲೂಕು ಕಚೇರಿಗೆ ಕಳುಹಿಸುತ್ತಾರೆ. ಈ ವರದಿಗಳನ್ನೆಲ್ಲಾ ನೋಡಿ ತಹಶೀಲ್ದಾರರು ಮಾಸಾಶನ ಮಂಜೂರು ಮಾಡುವುದಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಂಡು ಖಜಾನೆಗೆ ಆದೇಶ ನೀಡುತ್ತಾರೆ. ಖಜಾನೆಯಿಂದ ನಿರ್ದಿಷ್ಟ ವ್ಯಕ್ತಿಗೆ ಮನಿ ಆರ್ಡರ್‌ ಹೋಗಲಾರಂಭಿಸುತ್ತದೆ.

ಅತ್ಯಂತ ಸರಳವಾದ, ತಪ್ಪುಗಳಿಗೆ ಆಸ್ಪದವಿಲ್ಲದ ವ್ಯವಸ್ಥೆ ಇದು. ಅರ್ಜಿ ಕೊಟ್ಟವನು/ಕೊಟ್ಟವಳಿಗೆ ಮಾಸಾಶನ ಪಡೆಯುವ ಅರ್ಹತೆ ಇದ್ದರೆ ಸಿಗಲೇಬೇಕು. ಅರ್ಹತೆ ಇದ್ದೂ ಸಿಗದೆ ಒಬ್ಬಾತ ಬೆಂಗಳೂರಿಗೆ ಬಂದು ಜನತಾದರ್ಶನದಲ್ಲಿ ಅರ್ಜಿ ಕೊಟ್ಟರೆ ಅದು ಮಂಜೂರಾಗುತ್ತದೆ. ಜನತಾದರ್ಶನದ ಇತ್ಯಾತ್ಮಕ ಪರಿಣಾಮಗಳ ಪಟ್ಟಿಗೆ ಇದು ಸೇರ್ಪಡೆಯಾಗುತ್ತದೆ. ಈ ಬಗೆಯ ಮಂಜೂರಾತಿ ಯೊಂದು ತೋರಿಸಿಕೊಡುವ ಸಾಂಸ್ಥಿಕ ವೈಫಲ್ಯ ಕಾಣಿಸುವುದೇ ಇಲ್ಲ.

* * *

ರಾಜ್ಯಪಾಲರೋ ಮುಖ್ಯಮಂತ್ರಿಯೋ ನಡೆಸುವ ಜನತಾ ದರ್ಶನ ಹೆಚ್ಚೆಂದರೆ ವಾರದಲ್ಲಿ ಒಂದು ದಿನ ಅದೂ ಕೆಲವು ಗಂಟೆಗಳಿಗೆ ಮೀಸಲಾದ ಕ್ರಿಯೆ. ಬೆಂಗಳೂರಿನವರೆಗೂ ಬರಲು ಸಾಧ್ಯವಿಲ್ಲದವರ, ಬೆಂಗಳೂರಿಗೆ ಬಂದರೂ ಜನತಾದರ್ಶನದಲ್ಲಿ ಅರ್ಜಿ ಕೊಡಲು ಸಾಧ್ಯವಿಲ್ಲದವರ ಕಷ್ಟವನ್ನು ಯಾರು ಪರಿಹರಿಸಬೇಕು? ಈ ದೃಷ್ಟಿಯಲ್ಲಿ ನೋಡಿದರೆ ಜನತಾದರ್ಶನ ಎಂಬ ಕಾರ್ಯಕ್ರಮ ನಿಜಕ್ಕೂ ಪ್ರಜಾವಿರೋಧಿಯಾದದ್ದು.

ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ರಾಜ್ಯಪಾಲರು ನಡೆಸುತ್ತಿರುವ ಜನತಾ ದರ್ಶನವನ್ನು `ಇದು ಕಾಂಗ್ರೆಸ್‌ನ ಪ್ರಚಾರ ತಂತ್ರ’ ಎಂದು ಕಟುವಾಗಿ ಟೀಕಿಸಿದರು. ತಾಲೂಕುಗಳಲ್ಲೇ ಪರಿಹರಿಸಲು ಸಾಧ್ಯವಿರುವ ಸಮಸ್ಯೆಗಳಿಗೂ ಬೆಂಗಳೂರಿಗೆ ಹೋಗುವಂತೆ ಜನರನ್ನು ಜನತಾದರ್ಶನ ಪ್ರೇರೇಪಿಸು ತ್ತಿದೆ ಎಂದೆಲ್ಲಾ ಮುತ್ಸದ್ಧಿಯಂತೆ ಅವರು ಮಾತನಾಡಿದ್ದರು. ಇದೇ ಯಡಿಯೂರಪ್ಪನವರು ಇಪ್ಪತ್ತು ತಿಂಗಳ ಕಾಲ ಉಪ ಮುಖ್ಯಮಂತ್ರಿಯಾಗಿದ್ದರು. ಈ ಅವಧಿಯಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರ ಜನತಾದರ್ಶನಗಳು ನಡೆಯುತ್ತಿದ್ದವು. ಆಗಲೂ ಈಗಿನಂತೆಯೇ ತಾಲೂಕು ಮಟ್ಟದಲ್ಲಿ ಪರಿಹಾರವಾಗು ವಂಥ ಸಮಸ್ಯೆಗಳೇ ಹೆಚ್ಚಾಗಿರುತ್ತಿದ್ದವು. ಅವೇಕೆ ಮುಖ್ಯಮಂತ್ರಿಗಳ ತನಕ ಬರುತ್ತಿವೆ ಎಂಬ ಪ್ರಶ್ನೆ ಅಂದು ಯಡಿಯೂರಪ್ಪನವರಿಗೆ ಬಂದಿರಲೇ ಇಲ್ಲ. ಆಗ ಅವರು ಜನತಾದರ್ಶನದ ಬಗ್ಗೆ ಹೇಳಿದ್ದು ಹೀಗೆ: `ಮುಖ್ಯಮಂತ್ರಿಗಳು ಬೆಳಗ್ಗಿನಿಂದ ಸಂಜೆಯ ತನಕ ನಿಂತು ಊಟವನ್ನು ಮಾಡದೆ ಜನತೆಯ ಅಹವಾಲನ್ನು ಆಲಿಸುತ್ತಾರೆ. ಇದಕ್ಕಾಗಿ ನಾನವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ’.

ಅವರ ಈಗಿನ ಹೇಳಿಕೆಗೂ ಹಿಂದಿನ ಹೇಳಿಕೆಗೂ ಮಧ್ಯೆ ಐದು ತಿಂಗಳ ಅಂತರವಿದೆ. ಈ ಐದು ತಿಂಗಳಲ್ಲಿ ಯಡಿಯೂರಪ್ಪ ಬಹಳ ಬದಲಾಗಿದ್ದಾರೆ. ಮುಖ್ಯವಾಗಿ ಅಧಿಕಾರ ಕಳೆದುಕೊಂಡಿದ್ದಾರೆ. ಅಂದರೆ ಜನತಾದರ್ಶನ ಅಪ್ರಜಾಸತ್ತಾತ್ಮಕ ಮತ್ತು ಜನವಿರೋಧಿ ಯಾದುದು ಎಂದು ರಾಜಕಾರಣಿಗಳಿಗೆ ಅರಿವಾಗಬೇಕಾದರೆ ಅವರು ಅಧಿಕಾರದಲ್ಲಿ ಇರಬಾರದು.

so , what costume are you fit on through suede even rearfoot footwear
chanel espadrilles The Latest Trends in Women’s Clothing

After that at age 17 he started back into music
woolrich parkaWhat would the MFA uniform have looked like in the 90s
January 2008
M T W T F S S
 123456
78910111213
14151617181920
21222324252627
28293031  
« Dec   Feb »
  • December 2017
  • November 2017
  • March 2017
  • February 2017
  • January 2017
  • June 2014
  • March 2010
  • June 2009
  • May 2009
  • April 2009
  • March 2009
  • February 2009
  • January 2009
  • October 2008
  • September 2008
  • August 2008
  • July 2008
  • May 2008
  • April 2008
  • March 2008
  • February 2008
  • January 2008
  • December 2007
  • November 2007
  • September 2007
  • August 2007
  • July 2007
  • April 2007
  • January 2007
  • December 2006
  • October 2006
  • September 2006
  • May 2006
  • ಪ್ರಜೆಗಳನ್ನು ಬೆತ್ತಲಾಗಿಸುವ ಅಪಾರದರ್ಶಕ ಪ್ರಭುತ್ವ
  • ಇಂಟರ್‌ನೆಟ್ ಇಲ್ಲದ ಡಿಜಿಟಲ್ ಆರ್ಥಿಕತೆ!
  • ನೋಟು ರದ್ದತಿಯಲ್ಲಿ ಕಂಡ ಡಿಜಿಟಲ್ ಡಿವೈಡ್
  • ಮಾಧ್ಯಮ ನಿಯಂತ್ರಣದ ‘ಭದ್ರತಾ’ ತಂತ್ರಗಳು
  • ಒಮ್ಮುಖ ಪಾರದರ್ಶಕತೆಯ ತಂತ್ರಜ್ಞಾನಾಧಾರಿತ ಪ್ರಭುತ್ವ
  • ಇ-ಹೊತ್ತು ಅಂಕಣ
  • ಒಂಟಿದನಿ (ಉದಯವಾಣಿ ಅಂಕಣ)
  • ಟಿಪ್ಪಣಿ
  • ಪ್ರಜಾವಾಣಿ
  • ಬಿಡಿ ಬರಹಗಳು
  • Privacy Policy
© 2023 Freedom of the present | ಈ ನಡುವಿನ ಬಿಡುವು | Powered by Superbs Personal Blog theme