`ರಸ್ತೆ’ ಎಂಬ ಪರಿಕಲ್ಪನೆ ತೀರಾ ಆಧುನಿಕವಾಗಿದ್ದರೂ ಅದನ್ನು ಹೋಲುವ ಪರಿಕಲ್ಪನೆಯೊಂದು ಎಲ್ಲ ಜೀವಿಗಳ ಬದುಕಿನಲ್ಲೂ ಇದೆ. ಪ್ರಾಣಿಗಳಂತೂ ನಿರ್ದಿಷ್ಟ ಜಾಡಿನಲ್ಲಿ (track) ತಮ್ಮ ಸಂಚಾರ ನಡೆಸುತ್ತವೆ. ಮನುಷ್ಯರೂ ಅಷ್ಟೇ, ಅವರ ಸಂಚಾರಕ್ಕೊಂದು ಕಾಲು ಹಾದಿ ಇದ್ದೇ ಇರುತ್ತದೆ. ಜಲ್ಲಿ ಹಾಕಿದ ರಸ್ತೆಗಳು ಬರುವವರೆಗೂ ಹಳ್ಳಿಗಳಿಗೆ ಹೋಗಲು ಇದ್ದದ್ದು ಗಾಡಿ ಜಾಡುಗಳೇ. ಎತ್ತಿನ ಗಾಡಿಗಳ ಚಕ್ರ ಹರಿದು ಸ್ಕ್ರಷ್ಟಿಯಾಗಿದ್ದ ಮಾರ್ಗವಿದು. ಮನುಷ್ಯರು ನಡೆದು ನಡೆದು ಸೃಷ್ಟಿಯಾಗುತ್ತಿದ್ದ ಕಾಲು ಹಾದಿಯಂತೆಯೇ ಇವು ಸೃಷ್ಟಿಯಾಗುತ್ತಿದ್ದವು. ಹೆಚ್ಚೆಂದರೆ ಗಾಡಿ ಸಾಗಲು ಬೇಕಿರುವಷ್ಟು ಅಗಲಕ್ಕೆ ಪೊದೆಗಳನ್ನು ಸವರುವ ಕೆಲಸ ನಡೆಯುತ್ತಿತ್ತು.
ಭಾರತದ ರಸ್ತೆಗಳ ಇತಿಹಾಸ ಮಹಾಭಾರತ ಕಾಲಕ್ಕೂ ಹಿಂದೆ ಸಾಗುತ್ತದೆ. ಆಗ ರಸ್ತೆಗಳೆಂದರೆ ರಥಗಳು ಸಾಗುವ ದಾರಿಯಷ್ಟೇ. ಇವುಗಳಿಗೆ ಆಧುನಿಕ ರಸ್ತೆಯ ರೂಪ ಬಂದದ್ದು ಮೌರ್ಯರ ಕಾಲದಲ್ಲಿ. ಇವರಂತೂ `ರಾಜಮಾರ್ಗ’ ಮತ್ತು `ವಣಿಕ ಮಾರ್ಗ’ಗಳೆಂಬ ಎರಡು ರಸ್ತೆಗಳನ್ನು ನಿರ್ಮಿಸಿದ್ದರು. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿಯೂ ರಸ್ತೆಗಳ ನಿರ್ಮಾಣ, ನಿರ್ವಹಣೆಯ ಪ್ರಸ್ತಾಪಗಳಿವೆಯಂತೆ. ಸಾಮ್ರಾಜ್ಯಗಳು ದೊಡ್ಡದಾದಷ್ಟೂ ರಸ್ತೆಗಳ ಅಗತ್ಯ ಹೆಚ್ಚಾದಂತೆ ಕಾಣಿಸುತ್ತದೆ. ತಮ್ಮ ನೆಲೆಗಳಿಂದ ಸಮಸ್ಯೆ ಇರುವಲ್ಲಿಗೆ ತ್ವರಿತಗತಿಯಲ್ಲಿ ಧಾವಿಸಲು ಸೇನೆಗೆ ಅನುಕೂಲವಾಗುವಂತೆ ರಸ್ತೆಗಳನ್ನು ನಿರ್ಮಿಸಲಾಗುತ್ತಿತ್ತು. ರಾಜಮಾರ್ಗಗಳೆಲ್ಲಾ ಈ ಕಾರಣಕ್ಕಾಗಿಯೇ ನಿರ್ಮಾಣವಾದಂತೆ ಕಾಣಿಸುತ್ತದೆ. ರೋಮನ್ನರಂತೂ ಎತ್ತರದ ರಸ್ತೆಗಳನ್ನು ನಿರ್ಮಿಸಿ ಅವುಗಳಿಗೆ ಹೈವೇಗಳೆಂದು ಹೆಸರಿಟ್ಟರು. ಅವುಗಳ ಉದ್ದೇಶವೂ ಸೇನೆಯ ಚಲನೆಗೆ ಅನುವು ಮಾಡಿಕೊಡುವುದೇ ಆಗಿತ್ತು.
ರಸ್ತೆಗಳ ಸ್ವರೂಪ ಸಂಪೂರ್ಣವಾಗಿ ಬದಲಾದದ್ದು ಮೋಟಾರು ವಾಹನಗಳನ್ನು ಕಂಡುಹಿಡಿದ ನಂತರ. ಅಲ್ಲಿಯವರೆಗೆ ರಸ್ತೆಗಳಿಗೆ ಅನುಗುಣವಾಗಿ ವಾಹನಗಳನ್ನು ವಿನ್ಯಾಸಗೊಳಿಸಲಾಗುತ್ತಿತ್ತು. ಜತೆಗೆ ಇವುಗಳನ್ನು ಎಳೆಯುವ ಪ್ರಾಣಿಗಳ ಹಿತವನ್ನೂ ಗಮನದಲ್ಲಿ ಇಟ್ಟುಕೊಳ್ಳಲಾಗುತ್ತಿತ್ತು. ಪುಷ್ಪಕ ವಿಮಾನದ ಕಲ್ಪನೆಯಿದ್ದರೂ ಅದು ಇಳಿಯಲು ರನ್ವೇ ಬೇಡವಾದ್ದರಿಂದ ರಸ್ತೆಗಳೆಂದರೆ ರಥದ, ಚಕ್ಕಡಿಯ ಚಕ್ರಗಳುರುಳಲು ಸಾಧ್ಯವಿರುವ ಹಾದಿಯಾಗಿತ್ತು. ಮೊದಲಿಗೆ ಇದೇ ರಸ್ತೆಯ ಮೇಲೆ ಮೋಟಾರು ವಾಹನವೂ ಓಡಿತು. ಗಂಟೆಗೆ ಐದು ಕಿಲೋಮೀಟರ್ಗಳಷ್ಟು ವೇಗದಲ್ಲಿ ಚಲಿಸುತ್ತಿದ್ದ ಈ ವಾಹನದ ಎದುರು ಒಬ್ಬ ಬಾವುಟ ಹಿಡಿದುಕೊಂಡು ಓಡಬೇಕಾಗಿತ್ತು. ಮೋಟಾರು ವಾಹನಗಳ ಈ ಸ್ಥಿತಿಯನ್ನು ಕಂಡವರಾರೂ ಅವು ಮುಂದೊಂದು ದಿನ ರಸ್ತೆಗಳ ಪರಿಕಲ್ಪನೆಯನ್ನೇ ಬದಲಾಯಿಸಿಯಾವು ಎಂದು ಊಹಿಸಲು ಸಾಧ್ಯವಿರಲಿಲ್ಲ. ಆವಿಷ್ಕಾರಗಳ ಇತಿಹಾಸವಿಡೀ ಇಂಥ ಆಶ್ಚರ್ಯಗಳಿಂದಲೇ ತುಂಬಿಕೊಂಡಿದೆ. ಮೋಟಾರು ವಾಹನಗಳ ಸುಧಾರಣೆಯ ಹಾದಿಯೂ ಅಂಥದ್ದೇ. ಲಭ್ಯವಿರುವ ರಸ್ತೆಗೆ ಬೇಕಾದ ವಾಹನವನ್ನು ವಿನ್ಯಾಸಗೊಳಿಸುವುದರ ಬದಲಿಗೆ. ವಿನ್ಯಾಸಗೊಳಿಸಿದ ವಾಹನಕ್ಕೆ ತಕ್ಕುದಾದ ರಸ್ತೆಗಳನ್ನು ರೂಪಿಸುವ ಕೆಲಸ ಆರಂಭವಾಯಿತು. ಚಪ್ಪಲಿಯ ಅಳತೆಗೆ ಕಾಲನ್ನು ಸೃಷ್ಟಿಸಿದ ಹಾಗೆ!
ಈ ಬೆಳವಣಿಗೆಯನ್ನು ಅಮೆರಿಕ ಮೂಲದ ಸದ್ಯ ಜಪಾನ್ನಲ್ಲಿರುವ ಚಿಂತಕ-ಹೋರಾಟಗಾರ ಬಹಳ ಚೆನ್ನಾಗಿ ಅರ್ಥೈಸುವ ಲೇಖನವೊಂದನ್ನು ಬರೆದಿದ್ದಾರೆ. `ರಸ್ತೆಗಳು’ ಎಂಬ ಶೀರ್ಷಿಕೆಯ ಈ ಲೇಖನ ಅಶೀಶ್ ನಂದಿ ಮತ್ತು ವಿನಯ್ಲಾಲ್ ಅವರು ಸಂಪಾದಿಸಿರುವ `ಫ್ಯೂಚರ್ ಆಫ್ ನಾಲೆಜ್ ಅಂಡ್ ಕಲ್ಚರ್: ಎ ಡಿಕ್ಷನರಿ ಫಾರ್ ದ ಟ್ವೆಂಟಿಫಸ್ಟ್ ಸೆಂಚುರಿ’ ಪುಸ್ತಕಕ್ಕಾಗಿ ಬರೆದಿದ್ದಾರೆ. ಈ ಪುಸ್ತಕದ ಭಾಗಶಃ ಕನ್ನಡ ಅನುವಾದವಾದ `ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು’ ಪುಸ್ತಕದಲ್ಲಿಯೂ ಈ ಲೇಖನವಿದೆ. ಡಗ್ಲಾಸ್ ಲುಮ್ಮಿಸ್ ರಸ್ತೆಗಳ ಇತಿಹಾಸವನ್ನೂ ವರ್ತಮಾನವನ್ನೂ ಈ ಲೇಖನದಲ್ಲಿ ಚರ್ಚಿಸಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಾದಾದರೂ ಅದರ ಒಳಧ್ವನಿ ಬೇರೆಯೇ ಇದೆ. ಲೇಖನವನ್ನು ಪೂರ್ತಿಯಾಗಿ ಓದಿ ಮುಗಿಸುವ ಹೊತ್ತಿಗೆ ಇದು ಆಧುನಿಕ ರಸ್ತೆಗಳು ವರ್ತಮಾನದ ಅಭಿವೃದ್ಧಿಯೆಂಬ ಮಹಾ ಅಸಂಗತವನ್ನು ವಿವರಿಸುವ ರೂಪಕದಂತೆ ಕಾಣಿಸತೊಡಗುತ್ತದೆ.
***
ರತನ್ಟಾಟಾ ಮೊನ್ನೆಯಷ್ಟೇ ತಮ್ಮ ಕಂಪೆನಿ ತಯಾರಿಸಿದ ಒಂದು ಲಕ್ಷ ರೂಪಾಯಿಯ ಕಾರನ್ನು ಅನಾವರಣಗೊಳಿಸುವ ಮುನ್ನ ಮತ್ತು ಅದರ ನಂತರ ಮಾಧ್ಯಮಗಳು ಈ ಕಾರಿನ ಕುರಿತು ಬಹಳ ಚರ್ಚೆ ನಡೆಸಿದವು. ಕಾರಿನ ವಿರೋಧಿಗಳೆಲ್ಲರೂ ಇದು ಪರಿಸರಕ್ಕೆ ಉಂಟು ಮಾಡುವ ಹಾನಿ, ರಸ್ತೆಗಳನ್ನು ಮತ್ತಷ್ಟು ನಿಬಿಡಗೊಳಿಸುವ ಸಾಧ್ಯತೆಯ ಬಗ್ಗೆ ಚಿಂತಿತರಾಗಿದ್ದರು. ಕಾರನ್ನು ಬೆಂಬಲಿಸುವವರೆಲ್ಲರೂ `Inclusive development ಮತ್ತು Inclusive growthಗಳಂಥ ಪದಪುಂಜಗಳ ಮೊರೆ ಹೊಕ್ಕರು. ಅಭಿವೃದ್ಧಿಯ ಲಾಭದಲ್ಲಿ ಎಲ್ಲರಿಗೂ ಪಾಲುಕೊಡುವುದರ ಸಂಕೇತವಿದು ಎಂದು ಸಮರ್ಥಿಸಿಕೊಂಡರು. ಒಂದು ಲಕ್ಷದ ಕಾರನ್ನು ವಿರೋಧಿಸುವವರ್ಯಾರೂ `ಯಾವ ಅಭಿವೃದ್ಧಿಯ ಪಾಲು ಯಾರಿಗೆ?’ ಎಂಬ ಮೂಲಭೂತ ಪ್ರಶ್ನೆಯನ್ನು ಮಾತ್ರ ಕೇಳಲಿಲ್ಲ.
ದಿಲ್ಲಿಯಲ್ಲಿ ರತನ್ ಟಾಟಾ ತಮ್ಮ ಕನಸನ್ನು ಅನಾವರಣಗೊಳಿಸಿದ್ದರ ಹಿಂದೆಯೇ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಸಿಂಗೂರಿನ ಜನರು ಬೀದಿಗಿಳಿದು ನ್ಯಾನೋ ಕಾರಿನ ಪ್ರತಿಕೃತಿಗಳನ್ನು ಸುಟ್ಟು ತಮ್ಮ ಸಿಟ್ಟನ್ನು ತೋರಿಸಿದರು. ಸಿಂಗೂರಿನ ಸುಮಾರು 12,000 ಕುಟುಂಬಗಳನ್ನು ನಿರ್ವಸಿತರನ್ನಾಗಿಸಿ ಟಾಟಾದ ಒಂದು ಲಕ್ಷ ರೂಪಾಯಿ ಕಾರಿನ ಕಾರ್ಖಾನೆ ಆರಂಭವಾಗಿದೆ. ತೃಣಮೂಲ ಕಾಂಗ್ರೆಸ್ನ ನಾಯಕಿ ಮಮತಾ ಬ್ಯಾನರ್ಜಿಯವರ ಆಲಂಕಾರಿಕ ಮಾತಗಳಲ್ಲೇ ವಿವರಿಸುವುದಾದರೆ `ಒಂದು ಸಾವಿರ ಕೋಟಿ ರೂಪಾಯಿ ಬೆಲೆ ಬಾಳುವ ಭೂಮಿ ಉಚಿತ, ಇದು ಸಾಲದು ಎಂಬಂತೆ ನೂರಾ ಮೂವತ್ತೈದು ಕೋಟಿ ರೂಪಾಯಿಗಳಷ್ಟು ಮೌಲ್ಯದ ವಿದ್ಯುತ್ ಮತ್ತು ನೀರಿನ ಪ್ರೋತ್ಸಾಹವನ್ನು ಪಡೆದುಕೊಂಡ ಟಾಟಾ 10 ಲಕ್ಷ ಕಾರುಗಳನ್ನು ಉಚಿತವಾಗಿಯೂ ಕೊಡಬಹುದು’.
ಒಂದು ಲಕ್ಷದ ಕಾರು Inclusive growthನ ಸಂಕೇತವೇ ಆಗಿದ್ದರೆ ಸಿಂಗೂರಿನ ನಿರ್ವಸಿತ ಜನರಿಗೆ ಸಿಕ್ಕ ಅಭಿವೃದ್ಧಿಯ ಲಾಭ ಏನು?
***
ಈ ಮೊದಲೇ ಪ್ರಸ್ತಾಪಿಸಿದ ಡಗ್ಲಾಸ್ ಲುಮ್ಮಿಸ್ ಪ್ರಜಾಪ್ರಭುತ್ವದ ಕುರಿತು `ರ್ಯಾಡಿಕಲ್ ಡೆಮಾಕ್ರಸಿ’ ಎಂಬ ಪುಸ್ತಕವೊಂದನ್ನು ಬರೆದಿದ್ದಾರೆ. ಇದರಲ್ಲಿ ಅವರು ಆರ್ಥಿಕ ಅಭಿವೃದ್ಧಿಯ ಕುರಿತು ಹೇಳುವ ಮಾತು ಟಾಟಾದ ಒಂದು ಲಕ್ಷದ ಕಾರು ಅಭಿವೃದ್ಧಿಯ ಸಂಕೇತವಾಗುವುದು ಹೇಗೆ ಎಂಬುದನ್ನು ಬಹಳ ಚೆನ್ನಾಗಿ ವಿವರಿಸುತ್ತದೆ. ಅದರ ಭಾವಾನುವಾದ ಹೀಗಿರಬಹುದು.
`ಆರ್ಥಿಕ ಅಭಿವೃದ್ಧಿಯೇ ಪ್ರಜಾಪ್ರಭುತ್ವ ವಿರೋಧಿ. ಇದು ಬಯಸುವ ವಾತಾವರಣ, ನಿರೀಕ್ಷಿಸುವ ದುಡಿಮೆಯನ್ನು ಯಾವುದೇ ಸ್ವತಂತ್ರ ಸಮಾಜ ಆರಿಸಿಕೊಳ್ಳಲು ಸಾಧ್ಯವೇ ಇಲ್ಲ. ಸಮಾಜದ ಅಪ್ರಜಾಸತ್ತಾತ್ಮಕ ಪುನಾರಚನೆಯ ಮೂಲಕ ಜನರು ಹೆಚ್ಚು `ದಕ್ಷರಾಗಿ’ ದುಡಿದು ಮಿಗುತಾಯ ಮೌಲ್ಯವನ್ನು ಬಂಡವಾಳಶಾಹಿಗಳಿಗೆ, ವ್ಯವಹಾರಾಡಳಿತ ನಿರ್ವಾಹಕರಿಗೆ, ಕಮ್ಯುನಿಸ್ಟ್ ಪಕ್ಷದ ನಾಯಕರಿಗೆ ಮತ್ತು ಟೆಕ್ನೊಕ್ರಾಟ್ಗಳಿಗೆ ನೀಡಬೇಕಷ್ಟೇ.’
ಈ ಹೇಳಿಕೆ ಟಾಟಾ ಕಾರನ್ನು ಸಂಕೇತವಾಗಿಟ್ಟುಕೊಂಡ Inclusive growth ಯಾವುದು ಎಂಬುದನ್ನು ಸ್ಪಷ್ಟವಾಗಿ ವಿವರಿಸುತ್ತಿದೆ. ಒಂದು ಲಕ್ಷ ರೂಪಾಯಿಗೆ ಕಾರನ್ನು ಖರೀದಿಸುವವನೂ ಆಧುನಿಕ ವ್ಯವಹಾರಾಡಳಿತ ವಿವರಿಸುವ ಯಾವ ಸ್ವತಂತ್ರ ಸಮಾಜವೂ ಆರಿಸಿಕೊಳ್ಳದ `ದಕ್ಷತೆ’ಯನ್ನು ತೋರಿಸಬೇಕು. ಕಾರು ಖರೀದಿಸುವುದೆಂದರೆ ಕೇವಲ ಕಾರನ್ನು ಮಾತ್ರ ಖರೀದಿಸುವುದಲ್ಲ. ಅದನ್ನಿಟ್ಟುಕೊಳ್ಳುವುದಕ್ಕೆ ತಕ್ಕ ಮನೆಯನ್ನು ಹೊಂದಿಸಿಕೊಳ್ಳುವುದರಿಂದ ಆರಂಭಿಸಿ ಅದನ್ನು ನಿರ್ವಹಿಸಲು ಬೇಕಿರುವ ಹಣವನ್ನು ಸಂಪಾದಿಸುವುದು ಎಂದರ್ಥ. ಈ ಸಂಪಾದನೆಗಾಗಿ ಆತ ಅವಲಂಬಿಸಬೇಕಾದ ಮಾರ್ಗವೇನು ಎಂಬುದನ್ನು ಈಗಾಗಲೇ `ಉದ್ಯೋಗ ಮಾರುಕಟ್ಟೆ’ ಹೇಳಿಬಿಟ್ಟಿದೆ. ಟಾಟಾ ಒಂದು ಲಕ್ಷ ರೂಪಾಯಿಗೆ ಕಾರನ್ನು ಮಾರುವುದು ಸಾಧ್ಯವಾಗಬೇಕಾದರೆ ಸಿಂಗೂರಿನ 12,000 ಕುಟುಂಬಗಳು ನಿರ್ವಸಿತರಾಗಿ ಕೇವಲ ಒಂಬೈನೂರು ಜನರು ಮಾತ್ರ ಟಾಟಾ ಕಾರಿನ ಕಂಪೆನಿಯಲ್ಲಿ ಉದ್ಯೋಗ ಪಡೆಯಬೇಕು. ಮಾನವ ಸಂಪನ್ಮೂಲದ ಬಳಕೆ ಹೆಚ್ಚಿದಷ್ಟೂ ಕಾರಿನ ಬೆಲೆ ಹೆಚ್ಚುವುದರಿಂದ ಇದು ಅನಿವಾರ್ಯ. ಈ ಅರ್ಥದಲ್ಲಿ ನಿರ್ವಸತಿ, ಉದ್ಯೋಗ ಹೀನತೆಯ ಮೂಲಕ ಸಿಂಗೂರಿನ ಜನರು Inclusive growthನಲ್ಲಿ ಪಾಲು ಪಡೆಯುತ್ತಿದ್ದಾರೆ.
***
ಒಂದು ಲಕ್ಷ ರೂಪಾಯಿಯ ಕಾರು ಬಂದಿರುವುದರಿಂದ ರಸ್ತೆಗಳು ಮತ್ತಷ್ಟು ನಿಬಿಡವಾಗುತ್ತವೆ ಎಂಬುದು ನಿಜ. ವಾಹನಗಳಿಗೆ ತಕ್ಕಂತೆ ರಸ್ತೆಗಳನ್ನು ನಿರ್ಮಿಸುವುದನ್ನು ಸಹಜವೆಂದು ಪರಿಗಣಿಸಿರುವುದರಿಂದ Inclusive growthನ ಪರಿಧಿಯೊಳಕ್ಕೆ ಇನ್ನಷ್ಟು ಮಂದಿಯನ್ನು ತರಲು ಸಾಧ್ಯವಿದೆ. ಈಗಿರುವ ರಸ್ತೆಗಳನ್ನು ಅಗಲಗೊಳಿಸುವುದು, ಎಕ್ಸ್ಪ್ರೆಸ್ ವೇ, ಸೂಪರ್ ಹೈವೇಗಳನ್ನು ನಿರ್ಮಿಸುವುದರ ಮೂಲಕ ಇನ್ನಷ್ಟು ಮಂದಿ ಉದ್ಯೋಗ ಮತ್ತು ವಸತಿ ಕಳೆದುಕೊಳ್ಳುವಂತೆ ಮಾಡಬಹುದು. ಈ ಮೂಲಕ ಅಭಿವೃದ್ಧಿಯಲ್ಲಿ ಪಾಲು ಪಡೆಯದ ಇನ್ನಷ್ಟು ಮಂದಿ ಅಭಿವೃದ್ಧಿಗಾಗಿ ತ್ಯಾಗ ಮಾಡುವಂತೆಯೂ ಮಾಡಬಹುದು.
ಇದರಿಂದ ನಾವೇನೂ ನಿರಾಶರಾಗಬೇಕಿಲ್ಲ. ಇನ್ನೇನು ಭಾರತದ ಅಭಿವೃದ್ಧಿ ದರ ಶೇಕಡಾ 9 ದಾಟಲಿದೆ!
jackets and shoes
woolrich outlet Grow Your Own Orange Tree
louis vuitton bagsDesign Your Own Prom Dress