
ಆಲ್ ಇಂಡಿಯಾ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಥವಾ ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆ (ಎಐಐಎಂಎಸ್) ಇರುವುದು ದಿಲ್ಲಿಯಲ್ಲಿ. ಉತ್ಕೃಷ್ಟ ಗುಣಮಟ್ಟದ ವೈದ್ಯಕೀಯ ಶಿಕ್ಷಣ ನೀಡುವುದು ಮತ್ತು ಸಂಶೋಧನೆಗಳನ್ನು ನಡೆಸುವ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆಯಿದು. ಸಂಸತ್ತು ಅಂಗೀಕರಿಸಿದ ಮಸೂದೆಯೊಂದರ ಮೂಲಕ ಅಸ್ತಿತ್ವಕ್ಕೆ ಬಂದ ಈ ಸಂಸ್ಥೆ ಸ್ವಾಯತ್ತ ಸ್ವರೂಪವನ್ನು ಹೊಂದಿದೆ. ಈ ಕಳೆದ ಎರಡು ವರ್ಷಗಳಿಂದ ಭಾರೀ ಸುದ್ದಿ ಮಾಡುತ್ತಿದೆ. ಅಂದರೆ ಇದು ವೈದ್ಯ ವಿಜ್ಞಾನ ಕ್ಷೇತ್ರದಲ್ಲಿ ಮಹತ್ವದ್ದನ್ನು ಸಾಧಿಸಿದೆ ಎಂದೇನೂ ಭಾವಿಸಬೇಕಾಗಿಲ್ಲ. ಇಲ್ಲಿನ ವಿದ್ಯಾರ್ಥಿಗಳು ನಡೆಸಿದ ಮತ್ತು ಈಗಲೂ ಬೇರೆ ಬೇರೆ ಸ್ವರೂಪದಲ್ಲಿ ಮುಂದುವರಿಸಿರುವ ಮೀಸಲಾತಿ ವಿರೋಧಿ ಚಳವಳಿ ಮತ್ತು ಆಗಾಗ ನಡೆಸುವ ಕಿರಿಯ ವೈದ್ಯರ ಮುಷ್ಕರಗಳಿಂದಾಗಿ ಈ ಸಂಸ್ಥೆ ಸುದ್ದಿಯಾಗುತ್ತದೆ.
ಇತ್ತೀಚೆಗೆ ಈ ಸಂಸ್ಥೆಗೆ ಸಂಬಂಧಿಸಿದ ಸುದ್ದಿಯೊಂದು ಪ್ರಕಟವಾಯಿತು. ಇಲ್ಲಿನ ವಿದ್ಯಾರ್ಥಿಗಳು ಚಳವಳಿ ನಡೆಸಿದಾಗ ಸಿಗುವ ಮಹತ್ವ ಈ ಸುದ್ದಿಗೆ ಸಿಗಲಿಲ್ಲ. ದಿಲ್ಲಿಯಲ್ಲಿ ಇರುವ ಈ ಸಂಸ್ಥೆಯ ಕುರಿತಂತೆ ಕೇರಳದ ತಿರುವನಂತಪುರಂನಲ್ಲಿ ಸಿ.ಆರ್.ಸೋಮನ್ ಎಂಬವರು ಮಾತನಾಡಿದ್ದರು. `ಹಿಂದುಸ್ಥಾನ್ ಟೈಂಸ್’ ಸೇರಿದಂತೆ ಹಲವು ಆಂಗ್ಲ ಪತ್ರಿಕೆಗಳಲ್ಲಿ ಅವರ ಮಾತುಗಳು ವರದಿಯಾದವು. ಸಿ.ಆರ್.ಸೋಮನ್ ಅವರು ಹೇಳುವಂತೆ ಎಐಐಎಂಎಸ್ ಭಾರತೀಯ ತೆರಿಗೆದಾರನ ಹಣವನ್ನು ಬಳಸಿ ಅಮೆರಿಕದ ಆರೋಗ್ಯ ಕ್ಷೇತ್ರಕ್ಕೆ ಸಬ್ಸಿಡಿ ನೀಡುತ್ತಿದೆ! ಇದು ಹೇಗೆ ಎಂಬುದನ್ನು ವಿವರಿಸಲು ಅವರು ಜನವರಿ ತಿಂಗಳಿನ ವಿಶ್ವ ಆರೋಗ್ಯ ಸಂಸ್ಥೆಯ ವಾರ್ತಾಪತ್ರದಲ್ಲಿ ಪ್ರಕಟವಾದ ಮಾನಸ್ ಕೌಶಿಕ್, ಅಭಿಷೇಕ್ ಜೈಸ್ವಾಲ್, ನಸೀಮ್ ಶಾ ಮತ್ತು ಅಜ್ ಮಹಲ್ ಅವರ ಸಂಪ್ರಬಂಧವನ್ನು ಉಲ್ಲೇಖಿಸಿದ್ದಾರೆ.
ಮಾನಸ್ ಕೌಶಿಕ್ ಮತ್ತು ಸಹೋದ್ಯೋಗಿಗಳು 1989ರಿಂದ 2000ದವರೆಗೆ ಎಐಐಎಂಎಸ್‌ನಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಎಲ್ಲಿದ್ದಾರೆ ಎಂಬ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಇದರ ಪ್ರಕಾರ ಶೇಕಡಾ 54ರಷ್ಟು ಮಂದಿ ಭಾರತದ ಹೊರಗಿದ್ದಾರೆ. ಇವರಲ್ಲಿ ಶೇಕಡಾ 85ರಷ್ಟು ಜನರು ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಅಂಕಿ-ಅಂಶಗಳನ್ನು ನೋಡಿದ ತಕ್ಷಣ ಮೀಸಲಾತಿ ವಿರೋಧಿ ಚಳವಳಿಯ ಮುಂಚೂಣಿಯಲ್ಲಿರುವವರು ಮತ್ತೆ `ಮೀಸಲಾತಿಯಿಂದಾಗಿ ಭಾರತದಲ್ಲಿ ಅವಕಾಶಗಳೇ ಇಲ್ಲದೆ ಪ್ರತಿಭಾವಂತರಲ್ಲ ದೇಶಬಿಟ್ಟು ಹೋಗುತ್ತಿದ್ದಾರೆ’ ಎಂದು ಹೇಳತೊಡಗುವುದರಲ್ಲಿ ಸಂಶಯವೇ ಇಲ್ಲ.
ಆದರೆ ಈ ಪ್ರತಿಭಾವಂತರಿಗೆ ತರಬೇತಿ ಕೊಟ್ಟದ್ದು ತೆರಿಗೆದಾರನ ಹಣದಲ್ಲಿ. ಸೋಮನ್ ಅವರು ಹೇಳುವಂತೆ 1250 ರೂಪಾಯಿಗಳ ಬೋಧನಾ ಶುಲ್ಕ ಮತ್ತು 1500 ರೂಪಾಯಿಗಳ ವಿದ್ಯಾರ್ಥಿ ನಿಲಯ ಶುಲ್ಕಗಳನ್ನಷ್ಟೇ ಇವರು ಪಾವತಿಸುತ್ತಾರೆ. ಇದರ ಹೊರತಾದ ಲಕ್ಷಾಂತರ ರೂಪಾಯಿಗಳ ಖರ್ಚನ್ನು ಸರಕಾರ ಭರಿಸುತ್ತದೆ. ಅಂದರೆ ಇದೂ ಒಂದು ಬಗೆಯ ಮೀಸಲಾತಿಯೇ. ಕೇವಲ ಎರಡೂವರೆ ಸಾವಿರ ರೂಪಾಯಿಗಳಲ್ಲಿ ವಿಶ್ವದ ಅತ್ಯುತ್ತಮ ವೈದ್ಯಕೀಯ ಶಿಕ್ಷಣವನ್ನು ಎಐಐಎಂಎಸ್‌ನ ವಿದ್ಯಾರ್ಥಿಗಳು ಪಡೆಯುತ್ತಾರೆ. ತಮ್ಮ ಶಿಕ್ಷಣಕ್ಕೆ ಅಗತ್ಯವಿರುವ ಸಂಪನ್ಮೂಲವನ್ನು ಒದಗಿಸಿದ ಸಮುದಾಯಕ್ಕೆ ತಮ್ಮ ಸೇವೆಯನ್ನು ಒದಗಿಸುವ ನೈತಿಕ ಜವಾಬ್ದಾರಿ ಈ ವಿದ್ಯಾರ್ಥಿಗಳ ಮೇಲೆ ಇದೆ. ಆದರೆ ಇವರ್ಯಾರೂ ಆ ನೈತಿಕ ಜವಾಬ್ದಾರಿಯ ಬಗ್ಗೆ ಯೋಚಿಸುವುದೇ ಇಲ್ಲ. ಶಿಕ್ಷಣ ಮುಗಿದ ತಕ್ಷಣ ವಿದೇಶಕ್ಕೆ ಹಾರುತ್ತಾರೆ.
ಎಐಐಎಂಎಸ್‌ನಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ನೀಡುವ ಪ್ರಸ್ತಾಪ ಬಂದಾಗ ಅದನ್ನು ಉಗ್ರವಾಗಿ ವಿರೋಧಿಸಿದ ವಿದ್ಯಾರ್ಥಿಗಳು ಸ್ನಾತಕೋತ್ತರ ತರಗತಿಗಳಿಗೆ ಎಐಐಎಂಎಸ್‌ನ ಪದವೀಧರರಿಗೆ ಮೀಸಲಿಟ್ಟಿರುವ ಸೀಟುಗಳು ಬೇಡ ಯಾವತ್ತೂ ಹೇಳಿಲ್ಲ. ಎಐಐಎಂಎಸ್‌ನಲ್ಲಿ ಇರುವ ಒಟ್ಟು ಸ್ನಾತಕೋತ್ತರ ಸೀಟುಗಳಲ್ಲಿ ಶೇಕಡಾ 33ರಷ್ಟನ್ನು ಅಲ್ಲಿಯೇ ಪದವಿ ಪಡೆದವರಿಗೆ ಮೀಸಲಿರಿಸಲಾಗಿದೆ. ಪರಿಣಾಮವಾಗಿ ಹೊರಗಿನಿಂದ ಬಂದ ವಿದ್ಯಾರ್ಥಿಯೊಬ್ಬ ಹೆಚ್ಚು ಅಂಕಗಳನ್ನು ಗಳಿಸಿದ್ದರೂ ಎಐಐಎಂಎಸ್ ವಿದ್ಯಾರ್ಥಿಯ ಎದುರು ಸೋತು ಹೋಗುತ್ತಾನೆ.
ಮಾನಸ್ ಕೌಶಿಕ್ ಮತ್ತು ಸಹೋದ್ಯೋಗಿಗಳ ಸಂಶೋಧನೆ ಮತ್ತೊಂದು ಆಸಕ್ತಿದಾಯಕ ಅಂಶದ ಮೇಲೂ ಬೆಳಕು ಚೆಲ್ಲಿದೆ. ಎಐಐಎಂಎಸ್‌ನಲ್ಲಿ ಪ್ರವೇಶ ಪಡೆಯುವುದಕ್ಕೆ ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲು ಸೀಟುಗಳಿವೆ. ಈ ಸೀಟುಗಳನ್ನು ಪಡೆದುಕೊಂಡವರು ವಿದೇಶಕ್ಕೆ ಹೋಗುವ ಸಾಧ್ಯತೆಗಳು ಕಡಿಮೆ. ಹಾಗೆಯೇ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮಟ್ಟ ಹೆಚ್ಚಿದಷ್ಟೂ ಅವರು ವಿದೇಶಕ್ಕೆ ಹೋಗುವ ಸಾಧ್ಯತೆಗಳು ಹೆಚ್ಚಾಗುತ್ತಾ ಹೋಗಿವೆ.
***
`ಪ್ರತಿಭಾ ಪಲಾಯನ’ದ ಕುರಿತು ಚರ್ಚೆಗಳು ಆರಂಭವಾಗಿ ಮೂರು ದಶಕಗಳಾಗುತ್ತಾ ಬಂತು. ಎಪ್ಪತ್ತರ ದಶಕದ ಅಂತ್ಯದಿಂದ ಆರಂಭಗೊಂಡು ಎಂಬತ್ತರ ದಶಕದ ತುಂಬಾ ಭಾರತದಿಂದ ವಿದೇಶಕ್ಕೆ ಹೋಗುತ್ತಿದ್ದವರಲ್ಲಿ ಅದರಲ್ಲೂ ವಿಶೇಷವಾಗಿ ಅಮೆರಿಕಕ್ಕೆ ಹೋಗುತ್ತಿದ್ದವರಲ್ಲಿ ಗಣಿತ, ವಿಜ್ಞಾನದ ವಿದ್ಯಾರ್ಥಿಗಳೇ ಹೆಚ್ಚು. ಈ ಅವಧಿಯಲ್ಲಿ ಕಂಪ್ಯೂಟರ್ ಸಂಬಂಧಿ ಸಂಶೋಧನೆ ಮತ್ತು ಅಭಿವೃದ್ಧಿಗಳು ಆರಂಭದ ಹಂತದಲ್ಲಿದ್ದವು. ಮೂಲವಿಜ್ಞಾನದ ವಿದ್ಯಾರ್ಥಿಗಳಿಗೆ ಹೆಚ್ಚು ಬೇಡಿಕೆ ಇತ್ತು. ಮಾಹಿತಿ ತಂತ್ರಜ್ಞಾನ ಯುಗ ಆರಂಭವಾಗುವ ಹೊತ್ತಿಗೆ ಭಾರತದಲ್ಲೂ ಕೆಲವು ಬದಲಾವಣೆಗಳು ನಡೆದಿದ್ದವು. ರಾಜೀವ್‌ಗಾಂಧಿಯ ದೂರದೃಷ್ಟಿಯಿಂದ ಸಾಧ್ಯವಾದ ಟೆಲಿಕಾಂ ಕ್ರಾಂತಿ ಭಾರತದಲ್ಲಿಯೂ ವಿದ್ಯುನ್ಮಾನ ಮತ್ತು ಕಂಪ್ಯೂಟರ್ ತಂತ್ರಜ್ಞರನ್ನು ಹುಟ್ಟು ಹಾಕಿತ್ತು. ಕರ್ನಾಟಕದಂಥ ರಾಜ್ಯಗಳಲ್ಲಿದ್ದ ಸಿಇಟಿಯಂಥ ವ್ಯವಸ್ಥೆ ಬಡ, ಮಧ್ಯಮ ವರ್ಗದವರಿಗೂ ತಾಂತ್ರಿಕ ಶಿಕ್ಷಣವನ್ನು ಪಡೆಯುವ ಅವಕಾಶವನ್ನು ಒದಗಿಸಿತ್ತು. ಹೀಗೆ ಸೃಷ್ಟಿಯಾದ ತಂತ್ರಜ್ಞರಿಗೆ ದೇಶದ ಒಳಗೂ ಹೊರಗೂ ಅವಕಾಶಗಳು ಹೇರಳವಾಗಿ ಲಭ್ಯವಾದುವು. ಭಾರತದ ಮಾಹಿತಿ ತಂತ್ರಜ್ಞಾನ ಕ್ರಾಂತಿಯಲ್ಲಿ ಪ್ರಮುಖ ಪಾತ್ರವಹಿಸಿದ ಖ್ಯಾತಿ ಇರುವ ಮಹನೀಯರೆಲ್ಲರೂ ಈ ಬಗೆಯ ರಿಯಾಯಿತಿ ದರದ ಶಿಕ್ಷಣ ಅಥವಾ `ಮೀಸಲಾತಿ ಶಿಕ್ಷಣ’ದ ಲಾಭವನ್ನು ಪಡೆದವರೇ.
***
ಮೀಸಲಾತಿಗೆ ಸಂಬಂಧಿಸಿದಂತೆ ಉದಾರೀಕರಣೋತ್ತರ ಭಾರತದ ಉನ್ನತ ವರ್ಗ ಮುಂದಿಡುತ್ತಿರುವ ಎಲ್ಲಾ ಸಿದ್ಧ ಮಾದರಿಗಳನ್ನೂ ಭಂಜಿಸುವ ವಿಷಯಗಳನ್ನು ಮಾನಸ್‌ಕೌಶಿಕ್ ಮತ್ತು ಸಹೋದ್ಯೋಗಿಗಳ ಸಂಶೋಧನೆ ಮುಂದಿಡುತ್ತಿದೆ. ಕೇಂದ್ರ ಸರಕಾರದ ಅಧೀನದಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಬೇಡ ಎಂದು ವಾದಿಸುವವರ್ಯಾರೂ ರಿಯಾಯಿತಿ ದರದ ಶಿಕ್ಷಣ ಬೇಡ ಎನ್ನುವುದಿಲ್ಲ. ಇದೂ ಒಂದು ಬಗೆಯ ಮೀಸಲಾತಿ ಎನ್ನುವುದರ ಕುರಿತು ಜಾಣ ಮರೆವನ್ನು ನಟಿಸುತ್ತಾರೆ.
ಈ ಮರೆವುಗಳನ್ನೆಲ್ಲಾ ಸಹಿಸಿಕೊಳ್ಳೋಣ ಎಂದರೆ ರಿಯಾಯಿತಿ ದರದ ಶಿಕ್ಷಣ ತಮಗೆ ಮಾತ್ರ ದೊರೆಯಬೇಕು ಎಂಬಂತೆ ವಾದಿಸುವ `ಪ್ರತಿಭಾವಂತರು’ ಶಿಕ್ಷಣ ಪಡೆದ ಮೇಲೆ ನೇರವಾಗಿ ವಿದೇಶಕ್ಕೆ ಹಾರುತ್ತಾರೆ. ಮೀಸಲಾತಿಯನ್ನು ಅನೈತಿಕ, ಅವಕಾಶ ಕಿತ್ತುಕೊಳ್ಳುವ ಹುನ್ನಾರವೆಂದು ಬಣ್ಣಿಸುವ ಭಾರತದ ಉನ್ನತ ವರ್ಗ ತನ್ನ ಪ್ರತಿಭೆಯನ್ನು ಭಾರತದ ಉದ್ದಾರಕ್ಕೆ ಮೀಸಲಿಡುವುದಿಲ್ಲವೇಕೆ?
ಇನ್ನು ಪ್ರತಿಭೆಯ ಮಾನದಂಡಕ್ಕೆ ಸಂಬಂಧಿಸಿದ ಪ್ರಶ್ನೆಯೊಂದು ಬಹಳ ಹಿಂದಿನಿಂದಲೂ ಇದೆ. ಇದನ್ನು ಖ್ಯಾತ ದಲಿತ ಚಿಂತಕ ಚಂದ್ರಭಾನ್ ಪ್ರಸಾದ್ ಅವರು ತಮ್ಮ ಅಂಕಣವೊಂದರಲ್ಲಿ ಪ್ರಸ್ತಾಪಿಸಿದ್ದರು. ಶೇಕಡಾ 50 ಅಂಕಗಳನ್ನು ಪಡೆದವನು ಶೇಕಡಾ 70 ಅಂಕಗಳನ್ನು ಪಡೆದವನಿಗಿಂತ ಹೇಗೆ ಕಡಿಮೆ ಪ್ರತಿಭಾವಂತ ಎಂಬ ಅರ್ಥದ ಪ್ರಶ್ನೆಗೆ ಉತ್ತರವನ್ನು ಈಗಲೂ ಯಾರೂ ನೀಡಿದಂತೆ ಕಾಣಿಸುತ್ತಿಲ್ಲ