ಅಫ್ತಾಬ್‌ ಅಲಂ ಅನ್ಸಾರಿ ಬಾಂಗ್ಲಾದೇಶಿಯಾದದ್ದು

ತೊಳೆದು ಶುಭ್ರವಾಗಿರುವ ಟ್ಯಾಕ್ಸಿಗಳು ಎಂದಿನಂತೆ ಆ ಮುಂಜಾನೆಯೂ ಅಜೀಜ್‌ಗೆ ಉತ್ಸಾಹ ತುಂಬಿದವು.N S Madhavan ಅಂಥದ್ದೊಂದು ಟ್ಯಾಕ್ಸಿಯಲ್ಲಿ ಹತ್ತಿ ಕುಳಿತು ಆಫೀಸಿನತ್ತ ಹೊರಟ ಅವನಿಗೆ ಚುನಾವಣೆಯ ಗಡಿಬಿಡಿಯನ್ನು ಮುಗಿಸಿ ಸುಧಾರಿಸಿಕೊಳ್ಳುತ್ತಿರುವ ಮುಂಬೈ ಕಾಣಿಸುವುದರ ಜತೆಗೆ ಟ್ಯಾಕ್ಸಿಯ ಗಾಜಿಗಂಟಿಸಿದ್ದ ಹುಲಿಯ ತಲೆ ಇರುವ ಸ್ಟಿಕರ್‌ ಕಾಣಿಸಿತು.ಹಿಂದಿನ ದಿನ ಪ್ರದೀಪ್‌ ಪಿಳ್ಳೈ ಊಟದ ಹೊತ್ತಿನಲ್ಲಿ `ಸರಕಾರ ಬದಲಾಗಿದೆ’ ಎಂದಿದ್ದ. ಜಯಂತ್‌ ಕರ್ಮಾರ್ಕರ್‌ ಮತ್ತೇನೋ ಹೇಳಿದ್ದ ಆದರೆ ಪ್ರದೀಪ್‌ ಪಿಳ್ಳೆಯ ಮಾತು ಸುಖಾ ಸುಮ್ಮನೆ ನಿಗೂಢವನ್ನು ಧ್ವನಿಸುತ್ತಿದೆ ಎಂದು ಅಜೀಜ್‌ಗೆ ಅನ್ನಿಸಿತ್ತು.

ಟ್ಯಾಕ್ಸಿ ಬಂದು ನರೀಮನ್‌ ಪಾಯಿಂಟ್‌ನ ಬಹುಮಹಡಿ ಕಟ್ಟಡದ ಎದುರು ನಿಲ್ಲುವ ಹೊತ್ತಿಗೆ ಅಜೀಜ್‌ಗೆ ಮುಂಬೈ ಬದಲಾಗಿಲ್ಲ ಅನ್ನಿಸತೊಡಗಿತ್ತು. ಲೋಕಲ್‌ ಟ್ರೈನುಗಳು ಮುಂಬೈಯನ್ನು ಸೀಳಿಕೊಂಡು ಓಡುತ್ತಿವೆ. ಚರ್ಚ್‌ ಗೇಟ್‌ನಲ್ಲಿ ಎಂದಿನಂತೆ ಪ್ರಯಾಣಿಕರ ಗುಂಪು ಇಳಿದು ಆಚೀಚೆ ನೋಡದೆ ಓಡುತ್ತಿದೆ. ಊಟದ ಡಬ್ಬ ಸೈಕಲೇರುತ್ತಿವೆ…

ಆಫೀಸಿಗೆ ಹೋದರೆ ಟೇಬಲ್‌ ಮೇಲಿದ್ದ ಪಾಸ್‌ಪೋರ್ಟ್‌ ಸೈಜಿನ ತನ್ನದೇ ಫೋಟೋಗಳಿದ್ದವು. ಅಲ್ಲೇ ಇದ್ದ ಪಾಸ್‌ಪೋರ್ಟ್‌ ಅರ್ಜಿ ಭರ್ತಿ ಮಾಡತೊಡಗಿದ. ಅವನನ್ನು ಕಂಪೆನಿ ಫ್ರಾಂಕ್‌ಫರ್ಟ್‌ನಲ್ಲಿ ನಡೆಯುತ್ತಿದ್ದ ಕೈಗಾರಿಕಾ ಪ್ರದರ್ಶನಕ್ಕೆ ಕಳುಹಿಸುತ್ತಿತ್ತು. ಅರ್ಜಿಯನ್ನು ಟ್ರಾವೆಲ್‌ ಏಜೆಂಟ್‌ಗೆ ಕಳುಹಿಸುವ ಹೊತ್ತಿಗಾಗಲೇ ಊಟದ ಹೊತ್ತಾಗಿತ್ತು. ಊಟ ಮಾಡುತ್ತಿದ್ದವರ ಧ್ವನಿ ಏರಿತ್ತು. ಯಾವುದೇ ಷೇರಿನ ಬೆಲೆ ಎದ್ದಿದೆ ಇಲ್ಲವೇ ಬಿದ್ದಿದೆ ಎಂದುಕೊಂಡು ಅಲ್ಲಿಗೆ ಹೋದರೆ ಜ್ಯೋತಿ ಪ್ರಸಾದ್‌ ಶ್ರೀವಾಸ್ತವ ಕೇಳಿದ `ನೀನೇ ಹೇಳು ಅಜೀಜ್‌. ಈ ಕರ್ಮಾರ್ಕರ್‌ ಹೊಸ ಸರಕಾರ ವಿದೇಶೀಯರನ್ನೆಲ್ಲಾ ಓಡಿಸುತ್ತೇವೆ ಎಂದದ್ದು ಕ್ರೂರ ಎನ್ನುತ್ತಿದ್ದಾನೆ. ಸರಕಾರ ನಿಲುವಿನಲ್ಲಿ ತಪ್ಪೇನಿದೆ?’

`ತಪ್ಪೇನಿಲ್ಲ, ಎಲ್ಲಾ ದೇಶಗಳೂ ವೀಸಾ ಅವಧಿ ಮುಗಿದ ಮೇಲೆ ವೀದೇಶೀಯರನ್ನು ಹೊರಗೆ ಕಳುಹಿಸುತ್ತವೆ’ ಎಂದ ಅಜೀಜ್‌.

`ಇದೆಲ್ಲಾ ರಾಜಕಾರಣ. ನಿಮಗೆ ಇದೆಲ್ಲಾ ಅರ್ಥವಾಗುವುದಿಲ್ಲ’ ಎಂದು ಕರ್ಮಾಕರ್‌ ಸಿಟ್ಟು ಮಾಡಿಕೊಂಡ.

`ನಮಗೆ ಅರ್ಥವಾಗುವುದು ಸ್ಟಾಕ್‌ ಮಾರ್ಕೆಟ್‌ ಒಂದೇ. ಈ ರಾಜಕೀಯ ಚರ್ಚೆಯಲ್ಲಿ ಸಮಯ ಹಾಳು ಮಾಡದೆ ಸ್ವಲ್ಪ ದುಡ್ಡು ಮಾಡಿಕೊಳ್ಳೋಣ’ ಎಂದ ಪ್ರದೀಪ್‌ ಪಿಳ್ಳೆ. ಉಳಿದವರೂ ಇದಕ್ಕೆ ಧ್ವನಿಗೂಡಿಸುವ ಹೊತ್ತಿಗೆ ಅಜೀಜ್‌ ಕಣ್ಣು ಮುಚ್ಚಿಕೊಂಡು ನಿಟ್ಟುಸಿರಿಟ್ಟ. ಆಗ ಬಂತು ಟ್ರಾವೆಲ್‌ ಏಜೆಂಟ್‌ನ ಕರೆ `ಅಜೀಜ್‌ ನೀವು ರೇಷನ್‌ ಕಾರ್ಡ್‌ನ ಫೋಟೋ ಕಾಪಿ ಕಳುಹಿಸಿ’

`ನನಗೆ ರೇಷನ್‌ ಕಾರ್ಡ್‌ ಇಲ್ಲ. ಒಂದು ಪಾಸ್‌ಪೋರ್ಟ್‌ಗೆ ಏನೆಲ್ಲಾ ನರಕ. ರೇಷನ್‌ ಅಕ್ಕಿಯನ್ನು ನಾನು ತಿನ್ನಬೇಕಾ?’

`ಅದೆಲ್ಲಾ ಬೇಡ. ಅಡ್ರೆಸ್‌ ಪ್ರೂಫ್‌ ಆಗಿ ರೇಷನ್‌ ಕಾರ್ಡ್‌ ಕಾಪಿ ಅಟ್ಯಾಚ್‌ ಮಾಡಬೇಕು.’

`ಸರಿ ನಾನೇನು ಮಾಡಲಿ?’

`ಏನಿಲ್ಲಾ ಸಪ್ಲೈ ಆಫೀಸಿಗೆ ಹೋಗಿ ಒಂದು ಅರ್ಜಿ ಕೊಡಿ. ಕೆಲವು ದಿನಗಳ ನಂತರ ಒಬ್ಬ ಇನ್ಸ್‌ಪೆಕ್ಟರ್‌ ಬರುತ್ತಾನೆ. ಅವನ ರೇಟು ಈಗ ಒಂದು ಗಾಂಧಿ. ಎರಡು ದಿನದಲ್ಲಿ ರೇಷನ್‌ ಕಾರ್ಡ್‌ ಸಿಗುತ್ತೆ’.

ಮುಂದಿನ ಭಾನುವಾರ ಬೆಳಿಗ್ಗೆ ವಿಸಿಆರ್‌ನಲ್ಲಿ ರಾಜ್‌ಕಪೂರ್‌ನ ಹಳೆಯ ಸಿನಿಮಾ ನೋಡುತ್ತಾ ಮುಂಬೈಯ ಪುರಾತತ್ವ ಸಂಶೋಧನೆ ನಡೆಸುತ್ತಿದ್ದಾಗ ಯಾರೋ ಬಾಗಿಲು ಬಡಿದರು. ಅಮ್ಮಿಜಾನ್‌ ಊಟಕ್ಕೆ ಕರೆಯಲು ಬಂದಿದ್ದಾರೆಂದು ಗಡಿಯಾರ ನೋಡಿದರೆ ಗಂಟೆಯಿನ್ನೂ ಹನ್ನೊಂದು. ಅಮ್ಮಿಜಾನ್‌ ಹೇಳಿದರು `ಯಾರೋ ಸಪ್ಲೈ ಡಿಪಾರ್ಟ್‌ಮೆಂಟಿನವರಂತೆ’ ಎಂದರು.

ಇದೇನು ಭಾನುವಾರ ಬಂದಿದ್ದಾರೆಂದು ಹೊರಗೆ ಹೋಗಿ ನೋಡಿದರೆ ಇನ್ಸ್‌ಪೆಕ್ಟರ್‌ ಜತೆಗೆ ಆಡಳಿತ ಪಕ್ಷಕ್ಕೆ ಓಟು ಹಿಡಿಯಲು ಓಡಾಡುತ್ತಿದ್ದ ದಾದಾ ಕೂಡಾ ಇದ್ದಾನೆ.

`ನೀವು ರೇಷನ್‌ ಕಾರ್ಡ್‌ಗೆ ಅಪ್ಲೈ ಮಾಡಿದ್ದಿರಾ?’

`ಹೌದು. ನಿಮ್ಮ ಜತೆ ಇರುವುದು ಯಾರು?’

`ರಾಮೂ ದಾದ. ನಿಮ್ಮ ಮನೆ ಹುಡುಕುವುದಕ್ಕೆ ಅವರನ್ನು ಕರೆದುಕೊಂಡು ಬಂದೆ. ಮೇಡಂ ಗೋಖಲೆಯವರನ್ನು ನಾಳೆ ಬೆಳಿಗ್ಗೆ ಬಂದು ಕಾಣಬೇಕಂತೆ. ಪ್ರಮೀಳಾ ಗೋಖಲೆ…’

ಪ್ರಮೀಳಾ ಗೋಖಲೆಯ ಕಚೇರಿಯ ತುಂಡು ಬಾಗಿಲನ್ನು ತೆರೆದಾಗ ಅವನಿಗೆ ಆಶ್ಚರ್ಯವಾಯಿತು. ಆಕೆಯಿನ್ನೂ ಮೂವತ್ತರ ಆಸುಪಾಸಿನಲ್ಲಿದ್ದಂತೆ ಕಂಡಿತು. ಎರಡು ಜಡೆ ಹಾಕಿಕೊಂಡಿದ್ದ ಆಕೆ ಶಾಲೆಗೆ ಹೋಗುವ ಹುಡುಗಿಯಂತೆ ಅಜೀಜ್‌ ಕಂಡಳು. ಆಕೆಯ ಅರೆತೆರದ ಡ್ರಾವರ್‌ನಲ್ಲಿ ಅರ್ಧ ಓದಿ ಮಗುಚಿಟ್ಟಿದ್ದ `ಜ್ಞಾನೇಶ್ವರಿ’ ಇತ್ತು.

`ಮಿಸ್ಟರ್‌ ಅಜೀಜ್‌?’ ಆಕೆ ಪಿಸುಗುಡುವಷ್ಟು ಸೌಮ್ಯವಾಗಿ ಕೇಳಿದಳು.

`ಹೌದು’

`ತಂದೆಯ ಹೆಸರು?’

`ಬೀರಾನ್‌ ಕುಂಞಿ’

`ತಾಯಿ?’

`ಫಾತಿಮಾ’

`ಅವರು ಬದುಕಿದ್ದಾರಾ?’

`ಇಲ್ಲ. ಕಳೆದ ವರ್ಷವಲ್ಲ ಅದರ ಹಿಂದಿನ ವರ್ಷ ಇಬ್ಬರೂ ಒಂದು ತಿಂಗಳ ಅಂತರದಲ್ಲಿ ತೀರಿಕೊಂಡರು’

`ನಿಮಗೇನಾದರೂ ಭೂಮಿ ಇದೆಯಾ?’

`ಇಲ್ಲ. ನನ್ನನ್ನು ಐಐಟಿಯಲ್ಲಿ ಓದಿಸುವುದಕ್ಕೆ ಮತ್ತೆ ನನ್ನ ತಮ್ಮನಿಗೆ ಅಬೂದಾಬಿಯ ವೀಸಾ ಕೊಡಿಸುವುದಕ್ಕೆ ಆಸ್ತಿಯನ್ನೆಲ್ಲಾ ಮಾರಿದರು’

`ಹಾಗಿದ್ದರೆ ನಿಮ್ಮಲ್ಲಿ ಹಳೆಯ ಭೂಕಂದಾಯ ಕಟ್ಟಿದ ರಸೀದಿಗಳಿರಬೇಕು’

`ಇಲ್ಲ’

`ಹಾಗಾದರೆ ನಿಮಗೆ ಭಾರತದಲ್ಲಿ ಏನಾದರೂ ಆಸ್ತಿಯಿತ್ತು ಎನ್ನುವುದಕ್ಕೆ ಆಧಾರಗಳಿಲ್ಲ’.

`ಇಲ್ಲ…ನನ್ನ ರೇಷನ್‌ ಕಾರ್ಡ್‌?’

`ಈ ತನಿಖೆ ಅದಕ್ಕೇ. ಮೊದಲು ನೀವು ಭಾರತೀಯ ಎಂದು ಸಾಬೀತು ಮಾಡಬೇಕು. ಆಮೇಲೆ ರೇಷನ್‌ ಕಾರ್ಡ್‌ನ ಬಗ್ಗೆ ಯೋಚಿಸಬಹುದು.’

`ಒಳ್ಳೆ ಆಟ. ನಿಮ್ಮನ್ನು ನಡು ರಾತ್ರಿಯಲ್ಲಿ ಎಬ್ಪಿಸಿ ಭಾರತೀಯ ಪೌರಳೆಂದು ಸಾಬೀತು ಮಾಡು ಅಂದರೆ ನೀವೇನು ಮಾಡುತ್ತೀರಿ?’ ಅಜೀಜ್‌ನ ಧ್ವನಿ ಏರಿತು.

`ನಾನು ನನ್ನ ಹೆಸರು ಹೇಳುತ್ತೇನೆ. ಅಷ್ಟೇ. ನನ್ನ ಹೆಸರೇ ನನ್ನ ಇತಿಹಾಸ ಮತ್ತು ಭೂಗೋಳ. ಪ್ರಮೀಳಾ ಗೋಖಲೆ, ಮಹಾರಾಷ್ಟ್ರಿಯನ್‌, ಹಿಂದೂ, ಚಿತ್ಪಾವನ್‌. ಅರ್ಥವಾಯಿತಾ?’ ಇಷ್ಟೆಲ್ಲಾ ಹೇಳಿದರೂ ಆಕೆಯ ಧ್ವನಿ ಪಿಸುಗುಡುವ ಪ್ರೇಮಿಯಂತೆ ಇತ್ತು. ಧ್ವನಿಯ ಈ ಸೌಮ್ಯತೆಯೇ ಅಜೀಜ್‌ಗೆ ಹೆದರಿಕೆ ಹುಟ್ಟಿಸಿತು.

`ನಾನೇನು ಮಾಡಲಿ ಈಗ’

`ಈಗ ಹೋಗಿ ಮತ್ತೆ ಕರೆದಾಗ ಬನ್ನಿ’.

ಎರಡು ದಿನಗಳ ನಂತರ ಅಜೀಜ್‌ ಪ್ರಮೀಳಾ ಗೋಖಲೆಯನ್ನು ಭೇಟಿಯಾದಾಗ ಆ ಅರೆ ತೆರೆದ ಡ್ರಾವರ್‌ನಲ್ಲಿ ಮಗುಚಿಟ್ಟಿದ್ದ ಜ್ಞಾನೇಶ್ವರಿ ಮತ್ತಷ್ಟು ಪುಟಗಳು ಓದಿ ಮುಗಿದಂತೆ ಮತ್ತೊಂದು ಕಡೆಗೆ ಬಂದಿದ್ದವು. ಮತ್ತೆ ಪ್ರಶ್ನೆಗಳು.

`ನೀವು ಹುಟ್ಟಿದ್ದೆಲ್ಲಿ?’

`ಕೇರಳದಲ್ಲಿ’

`ಕೇರಳದಲ್ಲಿ ಎಲ್ಲಿ’

`ಮಲಪ್ಪುರಂ ಜಿಲ್ಲೆಯಲ್ಲಿ’

`ಯಾವ ಹಳ್ಳಿ?’

`ಪಾಂಗ್‌’

`ಪಾಂಗ್‌. ಪಾಂಗ್‌ ಅಂದರೇನು?’ ಮೊದಲ ಬಾರಿಗೆ ಆಕೆ ಧ್ವನಿ ಏರಿತು?’

`ಪಾಂಗ್‌. ಅದು ನಮ್ಮ ಊರಿನ ಹೆಸರು’

`ಇದೆಂಥ ಹೆಸರು. ಅದೆಲ್ಲಾ ಇಲ್ಲ. ಅಂಥದ್ದೊಂದು ಹೆಸರಿನ ಹಳ್ಳಿ ಭಾರತದಲ್ಲಿರಲು ಸಾಧ್ಯವಿಲ್ಲ.’

`ಮೇಡಂ, ನಾನ್ಯಾಕೆ ಸುಳ್ಳು ಹೇಳಬೇಕು?’

`ಅದೆಲ್ಲಾ ನನಗೆ ಗೊತ್ತಿಲ್ಲ. ಮಲಯಾಳಂನಲ್ಲಿ ಪಾಂಗ್‌ ಎಂಬುದರ ಅರ್ಥವೇನು?’

`ನನಗೆ ಗೊತ್ತಿಲ್ಲ, ಅದಕ್ಕೇನಾದಾರೂ ಅರ್ಥವಿರಬಹುದೆಂದೇ…’

`ಅರ್ಥವಿಲ್ಲದ ಶಬ್ದವೇ? ಶಬ್ದಗಳಿಗೆ ಅವಮಾನ ಮಾಡಬೇಡಿ. ಈಗ ಸ್ಪಷ್ಟವಾಯಿತಲ್ಲ `ಪಾಂಗ್‌’ ಎಂಬುದೊಂದಿಲ್ಲ ಅಂತ’

`ಪಾಂಗ್‌ ಇದೆ. ನೀವು ಮಲಪ್ಪುರಂ ಕಲೆಕ್ಟರ್‌ಗೆ ಒಂದು ಟೆಲಿಗ್ರಾಂ ಮಾಡಿ ಖಚಿತಪಡಿಸಿಕೊಳ್ಳಬಹುದು’

`ಭಾರತದ ಭೂಪಟದಲ್ಲಿ ಪಾಂಗ್‌ ಅನ್ನು ತೋರಿಸಬಹುದೇ?’

`ಸಾಧ್ಯವಿಲ್ಲ’

`ಕೇರಳದ ಭೂಪಟದಲ್ಲಿ..?’

`ನನಗೆ ಗೊತ್ತಿಲ್ಲ…’

`ಹಾಗಿದ್ದರೆ ಭಾರತದಲ್ಲಿ ಅಂಥದ್ದೊಂದು ಸ್ಥಳವಿಲ್ಲ. ನೀವಿನ್ನು ಹೋಗಬಹುದು’

ಅಜೀಜ್‌ ಕೆಲದಿನಗಳು ಆಫೀಸಿಗೆ ಹೋಗಲಿಲ್ಲ. ಒಂದು ಸಂಜೆ ರಾಮೂ ದಾದಾನ ಜತೆಗೆ ಆ ಇನ್ಸ್‌ಪೆಕ್ಟರ್‌ ಬಂದು ತಮ್ಮ ಜತೆ ಆಫೀಸಿಗೆ ಬರಬೇಕೆಂದರು. ಅಜೀಜ್‌ ಹೋದ. ಅರೆತೆರೆದ ಡ್ರಾವರ್‌ನಲ್ಲಿ ಮಗುಚಿಟ್ಟಿದ್ದ ಜ್ಞಾನೇಶ್ವರಿಯ ಪುಟಗಳೆಲ್ಲಾ ಓದಿ ಮುಗಿದಂತೆ ಮತ್ತೊಂದು ಬದಿಗೆ ಸರಿದಿದ್ದವು.

`1970ರಲ್ಲಿ ನೀವು ಭಾರತದಲ್ಲಿದ್ದಿರಾ?’ ಅದೇ ಪಿಸುಗುಡುವ ಧ್ವನಿಯಲ್ಲಿ ಪ್ರಶ್ನೆಗಳು ಆರಂಭಗೊಂಡವು.
`ಮೇಡಂ, ಆಗ ನಾನಿನ್ನೂ ಹುಟ್ಟಿರಲಿಲ್ಲ’

`71ರಲ್ಲಿ..?’

`ಆ ವರ್ಷ ನಾನು ಹುಟ್ಟಿದೆ’

`ಅಂದರೆ 1970ಕ್ಕೆ ಮೊದಲು ನೀವು ಭಾರತದಲ್ಲಿರಲಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೀರಿ’

`ಇದೆಂಥ ಅಸಂಬದ್ಧ. ಆಗ ನಾನಿನ್ನೂ ಹುಟ್ಟಿರಲಿಲ್ಲ’

`ಹಾಗಿದ್ದರೆ ಬಾಂಗ್ಲಾದೇಶದಿಂದ ನುಸುಳುವಿಕೆ ಆರಂಭವಾಗುವ ಮೊದಲು ನೀವು ಭಾರತದಲ್ಲಿರಲಿಲ್ಲ ಎಂದು ದಾಖಲಿಸಲೇ?’

`ಆಗ ನಾನಿನ್ನು ಹುಟ್ಟಿಯೇ ಇರಲಿಲ್ಲ ಎಂದು ಎಷ್ಟಾಸಾರಿ ಹೇಳಬೇಕು?’

`ಹೌದು ಅಥವಾ ಇಲ್ಲಗಳಲ್ಲಿ ಉತ್ತರ ಕೊಡಿ’ ಆಕೆಯ ಧ್ವನಿ ಸ್ವಲ್ಪ ಏರಿತು. ಇದು ಅಜೀಜ್‌ಗೆ ಸಿಡಿಲಿನಂತೆ ಕೇಳಿಸಿತು.

`ಹೇಳಿ, ಬಾಂಗ್ಲಾದಿಂದ ಅಕ್ರಮ ವಲಸೆ ಆರಂಭವಾಗುವ ಮೊದಲು ಅಂದರೆ 1970ಕ್ಕೂ ಮೊದಲು ನೀವು ಭಾರತದಲ್ಲಿ ಇದ್ದಿರೇ?

`ಇಲ್ಲ’

`ಬಾಂಗ್ಲಾದೇಶದಿಂದ ಅಕ್ರಮ ವಲಸೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಂದರೆ 71ರ ನಂತರ ಇದ್ದಿರೇ?’

`ಹೌದು’

ಕೆಲ ಕ್ಷಣಗಳ ಮೌನದ ನಂತರ ಬೇಸರನವನ್ನು ಅದುಮಿಟ್ಟು ಅಜೀಜ್‌ ಕೇಳಿದ `ನನ್ನ ರೇಷನ್‌ ಕಾರ್ಡ್‌’
ಮುಗುಳ್ಳನಕ್ಕು ಆಕೆ ಹೇಳಿದಳು `ನನ್ನ ವರದಿಯನ್ನು ಮುಗಿಸಿದ್ದೇನೆ. ನಾಳೆಯೇ ಅದನ್ನು ಕಳುಹಿಸಿ ಕೊಡುತ್ತೇನೆ’

`ಅಂದರೆ ನಾನೊಬ್ಬ ಅಕ್ರಮ ವಲಸಿಗ ಎನ್ನುತ್ತಿರಾ’

`ಅದನ್ನು ನೀವೇ ಒಪ್ಪಿಕೊಂಡಿದ್ದೀರಲ್ಲಾ?’

***

ಅಫ್ತಾಬ್‌ ಆಲಂ ಅನ್ಸಾರಿ ಎಂಬ ಕೊಲ್ಕತ್ತಾದ ಸಿಇಎಸ್‌ಸಿಯ ನೌಕರ, ಕಾಶಿಪುರ್‌ ನಿವಾಸಿ 2007ರ ಡಿಸೆಂಬರ್‌ 27ರಂದು ತನ್ನ ಗೆಳೆಯನ ಜತೆ ಶ್ಯಾಂಬಜಾರ್‌ಗೆ ಹೋಗಿ ಮನೆಗೆ ಬೇಕಿದ್ದ ಕೆಲ ವಸ್ತುಗಳು ಖರೀದಿಸಿ ಹಿಂದಿರುಗುತ್ತಿದ್ದಾಗ ಅವನ ಮೊಬೈಲ್‌ ಫೋನ್‌ಗೆ ಕರೆಯೊಂದು ಬಂತು.

`ಎಲ್ಲಿದ್ದೀರಿ’

`ಬಸ್‌ನಲ್ಲಿದ್ದೇನೆ. ಚಿರಿಯಾಮೋರ್‌ನಲ್ಲಿ ಇಳಿಯುತ್ತೇನೆ’.

ಅರ್ಧ ಗಂಟೆ ಕಳೆದು ಅಲ್ಲಿ ಇಳಿದು ರಸ್ತೆ ದಾಟುವಾಗ ಆರು ಮಂದಿ ಯೂನಿಫಾರ್ಮ್‌ ಧರಿಸದ ಪೊಲೀಸರು ಬಂದು ಎಳೆದುಕೊಂಡು ಹೋಗಿ ಕಾರಿಗೆ ಹತ್ತಿಸಿದರು. ಅವರಂದರು `ನೀನು ಮುಖ್ತರ್‌ ಅಲಿಯಾಸ್‌ ರಾಜು ಅಲಿಯಾಸ್‌ ಬಾಂಗ್ಲಾದೇಶಿ’. ಅವನಲ್ಲದ ಅಫ್ತಾಬ್‌ ಅದನ್ನು ನಿರಾಕರಿಸಿದ. ನಿರಾಕರಿಸಿದಷ್ಟೂ ಪೊಲೀಸರಿಗೆ ಇವನೇ `ಮುಖ್ತರ್‌ ಅಲಿಯಾಸ್‌ ರಾಜು ಅಲಿಯಾಸ್‌ ಬಾಂಗ್ಲಾದೇಶಿ’ ಅನ್ನಿಸತೊಡಗಿತು.

ಮರುದಿನ ಈತನನ್ನು ಅಲಿಪೂರ್‌ ಸಬ್‌ ಡಿವಿಷನಲ್‌ ಜ್ಯುಡಿಶಿಯಲ್‌ ಮ್ಯಾಜಿಸ್ಟ್ರೇಟರ ಎದುರು ಹಾಜರು ಪಡಿಸಿ ಅವನನ್ನು ಉತ್ತರ ಪ್ರದೇಶ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಲಕ್ನೊದಲ್ಲಿರುವ ವಿಶೇಷ ತನಿಖಾ ದಳದ ಲಾಕಪ್‌ನಲ್ಲಿ ಈತನನ್ನು ವಿಚಾರಣೆಗೊಳಪಡಿಸಲಾಯಿತು. ಆ ವಿಚಾರಣೆ ಹೀಗಿತ್ತು.

`ನಮ್ಮ ಕಣ್ಣನ್ನೇ ನೋಡು’

`…’

`ನೀನು ಮುಖ್ತರ್‌ ಅಲಿಯಾಸ್‌ ರಾಜು ಅಲಿಯಾಸ್‌ ಬಾಂಗ್ಲೇದೇಶಿ. ತಲೆತಪ್ಪಿಸಿಕೊಂಡ ಭಯೋತ್ಪಾದಕ’

`ನಾನು ಕೊಲ್ಕತ್ತಾ ಸಿಇಎಸ್‌ಸಿಯ ಸಾಮಾನ್ಯ ನೌಕರ.’

ಅಧಿಕಾರಿಯೊಬ್ಬ ಉತ್ತರ ಪ್ರದೇಶ ಸರಣಿ ಸ್ಫೋಟಗಳ ಪಟ್ಟಿ ಓದಿದ. ಅದಕ್ಕೆಲ್ಲಾ ನೀನೇ ಕಾರಣ ಎಂದ. ಅಫ್ತಾಬ್‌ಗೆ ಏನು ಕೇಳುತ್ತಿದ್ದೇನೆಂದೇ ಅರ್ಥವಾಗಲಿಲ್ಲ. ಗೊಂದಲದಲ್ಲಿರುವಾಗಲೇ ಪೆಟ್ಟು ಬೀಳ ತೊಡಗಿದವು. ಆತ ಕುರ್ಚಿಯಲ್ಲೇ ಗಟ್ಟಿಯಾಗಿ ಕುಳಿತುಬಿಟ್ಟ.

ಅಧಿಕಾರಿಯೊಬ್ಬ ಕಿರುಚಿದ `ಎಲ್ಲಾ ಭಯೋತ್ಪಾದಕರೂ ಅಷ್ಟೇ. ತಮಗೇನೂ ಗೊತ್ತಿಲ್ಲ ಅನ್ನುತ್ತಾರೆ…’

`ನಾನು ಭಯೋತ್ಪಾದಕನಲ್ಲ…’ ಅಫ್ತಾಬ್‌ ಮತ್ತೆ ಹೇಳಿದ.

ಅಧಿಕಾರಿಗೆ ಸಿಟ್ಟು ಬಂತು ಬೆಲ್ಟ್‌ ಬಿಚ್ಚಿ ಭಾರಿಸತೊಡಗಿದ.

ಅಫ್ತಾಬ್‌ ಸಿಇಎಸ್‌ಸಿಯ ಕೆಲಸಗಾರ ಎಂದು ಕೊಲ್ಕತ್ತಾದ ಪತ್ರಿಕೆಗಳಲ್ಲೆಲ್ಲಾ ಸುದ್ದಿಯಾಗಿ ತನಿಖಾಧಿಕಾರಿ ಬದಲಾಗುವ ಹೊತ್ತಿಗೆ ಒಂದು ವಾರ ಕಳೆದಿತ್ತು. ಹೊಸ ತನಿಖಾಧಿಕಾರಿ ಅಫ್ತಾಬ್‌ನನ್ನು ಹೆಚ್ಚು ಪ್ರಶ್ನೆಗಳೇನ್ನೇನೂ ಕೇಳಲಿಲ್ಲ. ಕೇಳಿದ್ದು ಒಂದು ಮುಖ್ಯ ಪ್ರಶ್ನೆ `ನೀನು ಆಗಾಗ ಗೋರಕ್‌ಪುರಕ್ಕೆ ಯಾಕೆ ಹೋಗುತ್ತೀ?’

`ನಾನು ಮದುವೆಯಾದದ್ದು ಗೋರಕ್‌ಪುರದ ಹುಡುಗಿಯನ್ನು. ನಾನು ಅಲ್ಲೇ ಹತ್ತಿರದ ಗೋಲಾಬಜಾರ್‌ನವನು’

`ನಿನ್ನ ಮೊಬೈಲ್‌ನಿಂದ ಸ್ಫೋಟದ ಶಂಕಿತ ಆರೋಪಿಯೊಬ್ಬ ಫೋನ್‌ ಮಾಡಿದ್ದು ಹೇಗೆ?’

`ಮಾರ್ಚ್‌ ಆರರಂದು ಅಂದರೆ ನನ್ನ ಮದುವೆಯ ಹಿಂದಿನ ದಿನ ಕೊಲ್ಕತ್ತಾದಿಂದ ಗೋರಕ್‌ಪುರಕ್ಕೆ ಹೋಗುವಾಗ ಅಪರಿಚಿತನೊಬ್ಬ ನನ್ನ ಹತ್ತಿರ ತುರ್ತಾಗಿ ಗೋರಕ್‌ಪುರಕ್ಕೊಂದು ಫೋನ್‌ ಮಾಡಬೇಕೆಂದು ಫೋನ್‌ ಕೇಳಿ ಪಡೆದಿದ್ದ’

***

ಅಜೀಜ್‌ನ ಕಥೆ ಬರೆದದ್ದು ಖ್ಯಾತ ಮಲೆಯಾಳಂ ಸಣ್ಣ ಕತೆಗಾರ ಎನ್‌.ಎಸ್‌.ಮಾಧವನ್‌. ಅಫ್ತಾಬ್‌ ಆಲಂ ಅನ್ಸಾರಿಯ ಕಥೆ ಬರೆದದ್ದು ಪತ್ರಿಕೆಗಳು. ಅವನ ಬಗ್ಗೆ ಕೆಲವು ಪತ್ರಕರ್ತರು ಆಸಕ್ತಿ ವಹಿಸದೇ ಹೋಗಿದ್ದರೆ ಅವನೂ ಅಜೀಜ್‌ನಂತೆಯೇ ಆಗುತ್ತಿದ್ದನೇನೋ. ಮೊನ್ನೆ ಅಂದರೆ ಜನವರಿ 16ರಂದು ಆತನ ಬಿಡುಗಡೆಯಾಯಿತು.

Comments are closed.