ಸಂಖ್ಯೆಯಷ್ಟೇ ಆಗಿಬಿಟ್ಟ ರೈತನ ಸಾವು

ಮಾಧ್ಯಮಗಳಲ್ಲಿ ಪ್ರಕಟವಾಗುವ ಸಾವಿನ ಸುದ್ದಿಗಳಲ್ಲಿ ಎರಡು ವಿಧ. ಮೊದಲನೆಯದ್ದು ಕೇವಲ ಸಂಖ್ಯೆಗಳಲ್ಲಿ ಹೇಳುವ ಸಾವುಗಳು. ಎರಡನೆಯದ್ದು ಸತ್ತ ವ್ಯಕ್ತಿಯ ಕುರಿತು ಹೇಳುವಂಥದ್ದು. ಅಪಘಾತಗಳು, ಆಕಸ್ಮಿಕಗಳು, ದುರಂತಗಳು ಸಂಭವಿಸಿದಾಗ ಸತ್ತವರ ಸಂಖ್ಯೆಗಳೇ ಮುಖ್ಯವಾಗಿ ಸತ್ತವರು ಯಾರೆಂಬುದು ನಗಣ್ಯವಾಗಿಬಿಡುತ್ತವೆ. ಪ್ರಮುಖ ವ್ಯಕ್ತಿಗಳ ಮರಣದ ಸಂದರ್ಭದಲ್ಲಿ ವ್ಯಕ್ತಿಯೇ ಮುಖ್ಯ. ಈ ಎರಡೂ ಅಲ್ಲದ ಸಂದರ್ಭವೊಂದರಲ್ಲಿ ವ್ಯಕ್ತಿ ಮುಖ್ಯನಾಗುವುದೂ ಇದೆ. ಬೆಂಗಳೂರಿನ ಉದಾಹರಣೆಯನ್ನೇ ಪರಿಗಣಿಸುವುದಾದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡರೆ, ಕೊಲೆಯಾದರೆ ಆತ/ಆಕೆ `ಪ್ರಮುಖ’ನಲ್ಲದೇ ಹೋದರೂ ಮುಖ್ಯ ಸುದ್ದಿಯಾಗುವುದಿದೆ. ಹೊರ ಗುತ್ತಿಗೆ ಉದ್ದಿಮೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಕೊಲೆಯಾದಾಗ ಅದು ಸುಮಾರು ಒಂದು ತಿಂಗಳ ಕಾಲ ನಿರಂತರವಾಗಿ ಸುದ್ದಿಯಾಗಿತ್ತು. ಈಗಲೂ ಆ ಪ್ರಕರಣದ ವಿಚಾರಣೆಯ ವಿವರಗಳು ಮಾಧ್ಯಮಗಳಲ್ಲಿ ಕಾಣಿಸುತ್ತಲೇ ಇರುತ್ತದೆ.

ಇದು ಕೇವಲ ಸಾವಿನ ಸುದ್ದಿಗೆ ಮಾತ್ರ ಸೀಮಿತವಾದ ವಿಷಯವೇನೂ ಅಲ್ಲ. ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಉದ್ದಿಮೆಗಳು ಒಂದು ವರ್ಷದಲ್ಲಿ ನಡೆಸಿದ ರಫ್ತಿನ ಪ್ರಮಾಣ, ಅದರಿಂದ ವಿವಿಧ ಕಂಪೆನಿಗಳು ಗಳಿಸಿದ ಲಾಭದ ಪ್ರಮಾಣ ಇತ್ಯಾದಿ ಅಂಕಿ-ಅಂಶಗಳು ಕಾರಣವಿಲ್ಲದೆಯೇ ಮುಖ್ಯಪುಟಗಳ ಸುದ್ದಿಯಾಗುತ್ತದೆ. ಷೇರು ಮಾರುಕಟ್ಟೆಯ ಗೂಳಿ-ಕರಡಿಗಳ ಚಿನ್ನಾಟಕ್ಕೆ ದೊರೆಯುವ ಮಹತ್ವದ ಬಗ್ಗೆ ಹೇಳಬೇಕಾಗಿಯೇ ಇಲ್ಲ.

ಕಳೆದವಾರ ಷೇರು ಮಾರುಕಟ್ಟೆ ಸ್ವಲ್ಪ ಚೆನ್ನಾಗಿಯೇ ಚೇತರಿಸಿಕೊಂಡಿದ್ದ ಹೊತ್ತಿನಲ್ಲಿ ರಾಷ್ಟ್ರೀಯ ಕ್ರೈಂ ರೆಕಾರ್ಡ್‌ ಬ್ಯೂರೋ ತನ್ನ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿತು. ಅದರಂತೆ 2006ರಲ್ಲಿ ಭಾರತಾದ್ಯಂತ 17,060 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ಪತ್ರಿಕೆಗಳಲ್ಲಿ ಇದು ಮುಖಪುಟದ ಸುದ್ದಿಯಾಗಿದ್ದರೂ ಹೆಚ್ಚಿನ ಎಲ್ಲ ಪತ್ರಿಕೆಗಳು ಇದರ ಬಗ್ಗೆ ಸಂಪಾದಕೀಯ ಬರೆದರೂ ಎರಡಂಕಿಯ ಅಭಿವೃದ್ಧಿ ದರದತ್ತ ಧಾವಿಸುತ್ತಿರುವ ಭಾರತೀಯರಿಗೆ ಮಾತ್ರ ಏನೂ ಅನ್ನಿಸಲಿಲ್ಲ. ಕಾಲ್‌ ಸೆಂಟರ್‌ ಹುಡುಗಿಯ ಸಾವಿಗೆ ಕರಗಿ ನೀರಾದ ಹೃದಯಗಳಲ್ಲೊಂದೂ ಯಾಕೆ ಹೀಗೆ ರೈತರು ಸಾಯುತ್ತಿದ್ದಾರೆಂದು ಪ್ರಶ್ನಿಸಲಿಲ್ಲ!

ಭಾರತದ ರೈತನ ಆತ್ಮಹತ್ಯೆ ಅಂಕೆ-ಸಂಖ್ಯೆಗಳ ವ್ಯವಹಾರವಾಗಿ ಕನಿಷ್ಠ ಹತ್ತು ವರ್ಷಗಳಾದವು. ಕರ್ನಾಟಕ ಸರಕಾರವಂತೂ ಸತ್ತ ರೈತನ ಬೆಲೆ ಒಂದು ಲಕ್ಷ ರೂಪಾಯಿಗಳೆಂದು ಹೇಳಿಬಿಟ್ಟಿದೆ. ಮಹಾರಾಷ್ಟ್ರದ ವಿದರ್ಭ ಪ್ರದೇಶದ ರೈತರ ಆತ್ಮಹತ್ಯೆಗಳನ್ನು ವೇಗವನ್ನು ತಡೆಯಲು ಸ್ವತಃ ಪ್ರಧಾನಿ ಮನಮೋಹನ್‌ ಸಿಂಗ್‌ ಅವರೇ ಹೊಸ ಪ್ಯಾಕೇಜ್‌ ಘೋಷಿಸಿದರು. ಈ ಪ್ಯಾಕೇಜ್‌ ಘೋಷಣೆಯಾಗಿ ಹದಿನಾರು ತಿಂಗಳು ತುಂಬುವ ಹೊತ್ತಿಗೆ ಸರಿಯಾಗಿ ರಾಷ್ಟ್ರೀಯ ಕ್ರೈಂ ರೆಕಾರ್ಡ್‌ ಬ್ಯೂರೋ ವಿದರ್ಭದ ರೈತರ ಆತ್ಮಹತ್ಯೆಗಳ ಸಂಖ್ಯೆ ಹಿಂದಿನ ವರ್ಷಕ್ಕಿಂತಲೂ ಹೆಚ್ಚು ಎಂದು ಹೇಳಿದೆ.

***

ರೈತರೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ? ಈ ಪ್ರಶ್ನೆಗೆ ಈವರೆಗೆ ನಡೆದ ಯಾವ ಸಂಶೋಧನೆಯೂ ಇದಮಿತ್ಥಂ ಎಂಬಂಥ ಉತ್ತರವೊಂದನ್ನು ನೀಡಿಲ್ಲ. ನಮ್ಮ ಸಂಶೋಧನಾ ವಿಧಾನಗಳಿಗೆ ಇಂಥದ್ದೊಂದು ಉತ್ತರವನ್ನು ನೀಡುವ ಶಕ್ತಿಯೂ ಇಲ್ಲ. ರೈತರ ಆತ್ಮಹತ್ಯೆಗಳಿಗೆ ಕಾರಣ ಹುಡುಕುವ ಕ್ರಿಯೆ ವಿಶ್ಲೇಷಣಾತ್ಮಕವಾಗಿ ಸಾಗುತ್ತದೆ. ಆತ್ಮಹತ್ಯೆ ಮಾಡಿಕೊಂಡವನು/ಳು ಕುಡಿಯುತ್ತಿದ್ದನೇ/ಳೇ?, ಮನೆಯ ಖರ್ಚಿಗೂ ಸಾಲ ಮಾಡಿಕೊಂಡಿದ್ದರೇ? ಬಗೆಯ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು ರೈತರ ಆತ್ಮಹತ್ಯೆಗೆ `ಇತರ ಕಾರಣ’ಗಳೂ ಇವೆ ಎಂಬ ತೀರ್ಮಾನಕ್ಕೆ ಬರಲಾಗುತ್ತದೆ. `ಇತರ ಕಾರಣ’ಗಳೂ ಇರುವುದರಿಂದ ರೈತರ ಆತ್ಮಹತ್ಯೆಯ ಕಾರಣ ಅಸ್ಪಷ್ಟವಾಗಿಯೇ ಉಳಿಯುತ್ತದೆ.

ವಿವಿಧ ಸಂಶೋಧನೆಗಳು ಪಟ್ಟಿ ಮಾಡುವ ಇತರ ಕಾರಣಗಳು ಈಗ ಹುಟ್ಟಿಕೊಂಡವೇನೂ ಅಲ್ಲ. ಈ ಮೊದಲೂ ರೈತರು ಸಾಲ ಮಾಡುತ್ತಿದ್ದರು. ಬೆಳೆ ವಿಫಲವಾಗುತ್ತಿತ್ತು. ಆಗಲೂ ಸಾಲ ಮಾಡಿಯೇ ಮಕ್ಕಳ ಮದುವೆ ಮಾಡುತ್ತಿದ್ದರು ಅಷ್ಟೇಕೆ ಸಾಲ ತಂದೇ ಪಿತೃಪಕ್ಷವನ್ನೂ ಆಚರಿಸುತ್ತಿದ್ದರು. ಆದರೆ ಈ ಸಾಲಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಈಗ ಏಕೆ ಅವೇ ಸಮಸ್ಯೆಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ? ರೈತರ ಆತ್ಮಹತ್ಯೆಗಳ ಸಂಶೋಧನೆ ನಡೆಸುವ ಯಾರಿಗೂ ಈ ಪ್ರಶ್ನೆ ಕಾಡುವುದಿಲ್ಲವೇಕೆ?

ಎಲ್ಲಾ ಬಗೆಯ ಆತ್ಮಹತ್ಯೆಗಳ ಹಿಂದಿನ ಮುಖ್ಯ ಕಾರಣ ಹತಾಶೆ. ರೈತ ಯಾಕೆ ಹತಾಶನಾಗಿದ್ದಾನೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳದೇ ಯಾವ ಪ್ಯಾಕೇಜ್‌ ಘೋಷಿಸಿದರೂ ಆತ್ಮಹತ್ಯೆಗಳು ಕಡಿಮೆಯಾಗುವ ಸಾಧ್ಯತೆಗಳಿಲ್ಲ. ರೈತನ ಹತಾಶೆಯ ಕಾರಣಗಳನ್ನು ಹುಡುಕುವುದಕ್ಕೆ `ಹೌದು’ ಅಥವಾ `ಇಲ್ಲ’ಗಳಲ್ಲಿ ಉತ್ತರ ಬಯಸುವ ಸಮೀಕ್ಷೆಗಳಿಗೆ ಸಾಧ್ಯವಿಲ್ಲ.

***

ರೋಗಗ್ರಸ್ತ ಉದ್ದಿಮೆಗಳ ಕಾಯ್ದೆ-1985 ಎಂಬ ಕಾಯ್ದೆಯೊಂದನ್ನು ಜಾರಿಗೆ ತಂದು ಇಪ್ಪತ್ತೆರಡು ವರ್ಷಗಳಾದುವು. ಉದ್ದಿಮೆಗಳು ನಷ್ಟಕ್ಕೊಳಗಾದಾಗ ಸರಕಾರ ಮಧ್ಯ ಪ್ರವೇಶಿಸಿ ಪುನಶ್ಚೇತನಕ್ಕೆ ನೆರವು ನೀಡುವುದು ಈ ಕಾಯ್ದೆಯ ಮುಖ್ಯ ಉದ್ದೇಶ. ಈ ಪುನಶ್ಚೇತನ ಕ್ರಿಯೆಯನ್ನು ಕಾರ್ಯಗತಗೊಳಿಸಲು ಬೋರ್ಡ್‌ ಆಫ್‌ ಇಂಡಸ್ಟ್ರಿಯಲ್‌ ಅಂಡ್‌ ಫೈನಾನ್ಸ್‌ ರಿಕನ್‌ಸ್ಟ್ರಕ್ಷನ್‌ (ಬಿಐಎಫ್‌ಆರ್‌) ಎಂಬ ಸಂಸ್ಥೆಯಿದೆ. ಈ ಸಂಸ್ಥೆ ರೋಗಗ್ರಸ್ತ ಉದ್ದಿಮೆಗಳ ಪುನಶ್ಚೇತನಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳುತ್ತದೆ. ತನ್ನ ಕಡೆಯ ನಿರ್ದೇಶಕರನ್ನು ಉದ್ದಿಮೆಯ ಆಡಳಿತ ಮಂಡಳಿಗೆ ನೇಮಿಸಿ ನಿರ್ವಹಣೆಯ ಮೇಲ್ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ಸಂಸ್ಥೆಗೆ ಸಾಲ ನೀಡಿದ ಬ್ಯಾಂಕ್‌ಗಳವರನ್ನು ಕರೆಯಿಸಿ ಬಡ್ಡಿ ಮನ್ನಾ ಮಾಡಿಸುವುದರಿಂದ ಹಿಡಿದು ಸಾಲದ ಮೊತ್ತದಲ್ಲೇ ಸ್ವಲ್ಪ ಪ್ರಮಾಣವನ್ನು ಕಡಿತಗೊಳಿಸಲಾಗುತ್ತದೆ. ಹಾಗೆಯೇ ಸಂಸ್ಥೆಯ ಪುನಶ್ಚೇತನಕ್ಕೆ ಅಗತ್ಯವಿರುವ ಸಾಲವನ್ನು ಕೊಡಿಸುವ ಕೆಲಸವೂ ನಡೆಯುತ್ತದೆ.

ರೈತನೊಬ್ಬ ಸಾಲ ಮಾಡಿಕೊಂಡು ಕಷ್ಟಕ್ಕೆ ಬಿದ್ದರೆ ಅವನ ನೆರವಿಗೆ ಯಾರು ಬರುತ್ತಾರೆ? ಪಡೆದ ಸಾಲವನ್ನು ಮರು ಪಾವತಿ ಮಾಡದಿದ್ದರೆ ಅವನದೇ ಷೇರು ಬಂಡವಾಳದಿಂದ ನಡೆಯುತ್ತಿರುವ ಸಹಕಾರ ಸಂಘ ಕೂಡಾ ಅವನ ಜಮೀನು ಹರಾಜು ಹಾಕುವ ಮಾತನಾಡುತ್ತದೆ. ಮರು ಪಾವತಿಯಿಲ್ಲದೆ ಸಾಲವಿಲ್ಲ ಎಂಬ ಸಹಕಾರ ಸಂಘ ಮತ್ತು ಬ್ಯಾಂಕುಗಳ ನೀತಿಯಿಂದಾಗಿ ರೈತ ಅನಿವಾರ್ಯವಾಗಿ ಸುಲಭದಲ್ಲಿ ಸಾಲಕೊಡುವ ಬಡ್ಡಿ ವ್ಯಾಪಾರಿಗಳ ಬಳಿಗೆ ಹೋಗುತ್ತಾನೆ. ಈ ಸಾಲದ ಮೂಲಕ ಮಾಡಿದ ಹೂಡಿಕೆಯೂ ನಷ್ಟವಾದರೆ? ಈ ಹೊತ್ತಿಗಾಗಲೇ ಚಕ್ರವ್ಯೂಹ ಪ್ರವೇಶ ಮಾಡಿರುವ ರೈತ ಹೊರ ಬರುವ ದಾರಿ ಹುಡುಕುತ್ತಲೇ ಒಂದು ದಿನ ಸತ್ತು ಹೋಗುತ್ತಾನೆ. ಆತ್ಮಹತ್ಯೆ ಸುಲಭ ಬಿಡುಗಡೆಯ ಒಂದು ಮಾರ್ಗ ಮಾತ್ರ.

ಸಹಕಾರಿ ಸಂಘಗಳು ಮತ್ತು ಬ್ಯಾಂಕುಗಳು ನೀಡುವ ಕೃಷಿ ಸಾಲದ ಸ್ವರೂಪದ ಬಗ್ಗೆ ಪ್ರಧಾನ ಮಂತ್ರಿಯವರಿಂದ ಆರಂಭಿಸಿ ಆತ್ಮಹತ್ಯೆ ತಡೆಗೆ ಪ್ರಧಾನ ಮಂತ್ರಿ ಪ್ಯಾಕೇಜ್‌ ಕಾರ್ಯರೂಪಕ್ಕೆ ತರುವ ಅಧಿಕಾರಿಗಳವರೆಗೆ ಎಲ್ಲರಿಗೂ ಗೊತ್ತಿದೆ. ಬಿಐಎಫ್‌ಆರ್‌ ತರಹವೇ ಕೃಷಿ ಪುನಶ್ಚೇತನಕ್ಕೊಂದು ಸಂಸ್ಥೆ ಇರಬೇಕೆಂದು ಮಾತ್ರ ಯಾರಿಗೂ ಅನ್ನಿಸುವುದಿಲ್ಲ.

ಇದು ಬರೇ ಸಾಲಕ್ಕೆ ಸಂಬಂಧಿಸಿದ ಪ್ರಶ್ನೆ ಮಾತ್ರ ಅಲ್ಲ. ಭಾರತದಲ್ಲಿರುವ ಖಾಸಗಿ, ಸರಕಾರೀ ಸ್ವಾಮ್ಯದ ಟೆಲಿಫೋನ್‌ ಕಂಪೆನಿಗಳು ತಮ್ಮ ಸೇವಾದರವನ್ನು ಹೆಚ್ಚಿಸಬೇಕಾದರೆ ಕನಿಷ್ಠ 24 ಗಂಟೆಗಳ ಮೊದಲಾದರೂ ಸೇವೆಯನ್ನು ಪಡೆಯುವರಿಗೆ ಇದರ ವಿವರವನ್ನು ತಿಳಿಸಬೇಕು. ದರ ಹೆಚ್ಚಿಸುವ ಮೊದಲು ಅದನ್ನು ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್‌) ಮುಂದಿಟ್ಟು ಅದರ ಒಪ್ಪಿಗೆ ಪಡೆಯಬೇಕು.

ರೈತನಿಗೆ ಬೀಜ, ಕೀಟನಾಶಕ ಒದಗಿಸುವ ಹಲವು ದೇಶೀ ಮತ್ತು ವಿದೇಶೀ ಕಂಪೆನಿಗಳು ಭಾರತದಲ್ಲಿವೆ. ಇವುಗಳು ಋತುಮಾನ, ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಮೂಗಿನ ನೇರಕ್ಕೆ ಬೀಜದ ಬೆಲೆಯನ್ನು ನಿರ್ಧರಿಸುತ್ತವೆ. ಆ ಬೆಲೆ ಕೊಟ್ಟು ರೈತ ಬೀಜ, ಕೀಟನಾಶಕಗಳನ್ನು ಖರೀದಿಸಬೇಕು. ಈ ಸಂಸ್ಥೆಗಳು ತಮ್ಮ ಉತ್ಪನ್ನಗಳಿಗೆ ಬೆಲೆ ನಿರ್ಧರಿಸುವುದು ಯಾವ ಆಧಾರದ ಮೇಲೆ ಎಂದು ಯಾರೂ ಕೇಳುವುದಿಲ್ಲ. ಈ ಬೆಲೆಗಳನ್ನು ನಿಯಂತ್ರಿಸುವುದಕ್ಕೂ ಟ್ರಾಯ್ ನಂಥ ಒಂದು ಸಂಸ್ಥೆ ಬೇಡವೇ?

ನಮ್ಮ ನೀತಿ ನಿರೂಪಕರಿಗೆ ಇಂಥ ಪ್ರಶ್ನೆಗಳು ಹುಟ್ಟಿಕೊಳ್ಳದೇ ಇರುವುದೂ ಸಹಜವಾಗಿದೆ. ಅವರು ಜಗತ್ತಿಗೆ ತೋರಿಸುತ್ತಿರುವ ಅಭಿವೃದ್ಧಿ ದರದಲ್ಲಿ ರೈತನ ಪಾಲೇಲೂ ಇಲ್ಲ. ರೈತನೂ ಅಷ್ಟೇ ಉದ್ದಿಮೆಗಳಂತೆ ತನ್ನ ಸಮಸ್ಯೆಯನ್ನು ಪರಿಹರಿಸಲು ಬಿಐಎಫ್‌ಆರ್‌ ಬರಲೆಂದು ಕಾಯುವುದಿಲ್ಲ. ಅವನದ್ದೇ ಪರಿಹಾರದ ಹಾದಿ ಹುಡುಕಿಕೊಂಡಿದ್ದಾನೆ. ಅದನ್ನು ಆತ್ಮಹತ್ಯೆ ಎಂದು ಕರೆಯಲಾಗುತ್ತಿದೆ.