ಅದು 1999ರ ವಿಧಾನಸಭಾ ಚುನಾವಣೆ. ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಕಾಂಗ್ರೆಸ್ನ ಹಿರಿಯ ನಾಯಕರಲ್ಲಿ ಒಬ್ಬರಾದ ಡಿ.ಬಿ. ಚಂದ್ರೇಗೌಡ ಸ್ಪರ್ಧಿಸಿದ್ದರು. ಈ ಹೊತ್ತಿಗಾಗಲೇ ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕಾಗಿ ಗಿರಿಜನರನ್ನು ಒಕ್ಕಲೆಬ್ಬಿಸಲು ಅಗತ್ಯವಿರುವ ಔಪಚಾರಿಕತೆಗಳನ್ನು ಪೂರೈಸಿಕೊಂಡಿದ್ದ ಅರಣ್ಯ ಇಲಾಖೆ `ಕಾರ್ಯಾಚರಣೆ’ಗೆ ಮುಂದಾಗಿತ್ತು. ಕುದುರೆಮುಖ ರಾಷ್ಟ್ರೀಯ ಉದ್ಯಾನವನವನ್ನು ವಿರೋಧಿಸಿ ಆದಿವಾಸಿ ಗಿರಿಜನ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲೊಂದು ಹೋರಾಟ ನಡೆಯುತ್ತಿತ್ತು. ಚುನಾವಣೆಯನ್ನು ಬಹಿಷ್ಕರಿಸುತ್ತೇವೆಂಬ ಮಾತುಗಳನ್ನೂ ಹೋರಾಟಗಾರರು ಆಡಿದ್ದರು. ಈ ಹೊತ್ತಿನಲ್ಲಿ ಡಿ.ಬಿ. ಚಂದ್ರೇಗೌಡರ ಮಧ್ಯ ಪ್ರವೇಶವಾಯಿತು. `ಗಿರಿಜನರ ಹಿತ ಕಾಪಾಡುತ್ತೇನೆಂದು ನಾನು ನನ್ನ ರಕ್ತದಲ್ಲಿ ಬೇಕಾದರೂ ಬರೆದುಕೊಡಲು ಸಿದ್ಧ’ ಎಂಬ ಭರವಸೆ ನೀಡಿದರು.
ಚುನಾವಣಾ ಫಲಿತಾಂಶಗಳು ಹೊರಬಿದ್ದವು. ಡಿ.ಬಿ. ಚಂದ್ರೇಗೌಡರು ಗೆದ್ದಿದ್ದರು. ಅವರ ಗೆಲುವಿಗೆ ಆದಿವಾಸಿ-ಗಿರಿಜನರು ಎಷ್ಟರ ಮಟ್ಟಿಗೆ ಕಾರಣರಾಗಿದ್ದರೋ ಗೊತ್ತಿಲ್ಲ. ಚಂದ್ರೇಗೌಡರು ಎಸ್.ಎಂ.ಕೃಷ್ಣ ಸರಕಾರದಲ್ಲಿ ಕಾನೂನು ಸಚಿವರಾಗಿದ್ದಂತೂ ನಿಜ. ತಮ್ಮ ಕ್ಷೇತ್ರದ ಶಾಸಕರೇ ಕಾನೂನು ಸಚಿವರಾದದ್ದನ್ನು ಕಂಡ ಆದಿವಾಸಿಗಳು ತಮ್ಮ ಸಮಸ್ಯೆ ಪರಿಹಾರವಾಗುತ್ತದೆಂದು ನಂಬಿದರು. ಆದರೆ ಚಂದ್ರೇಗೌಡರು ನಿಧಾನವಾಗಿ ತಮ್ಮ ಮಾತಿನ ವರಸೆಯನ್ನು ಬದಲಾಯಿಸಿದರು. ರಾಷ್ಟ್ರೀಯ ಉದ್ಯಾನವನ ಕಾಯ್ದೆಗೂ ರಾಜ್ಯ ಸರಕಾರಕ್ಕೂ ಸಂಬಂಧವಿಲ್ಲ. ಅದು ಕೇಂದ್ರ ಸರಕಾರದ ಕಾನೂನು, ನಮಗೇನೂ ಮಾಡಲು ಸಾಧ್ಯವಿಲ್ಲ. ಹೀಗೆ ನೂರೆಂಟು ತಾಂತ್ರಿಕ ಕಾರಣಗಳನ್ನು ಮುಂದೊಡ್ಡತೊಡಗಿದರು.
ಡಿ.ಬಿ. ಚಂದ್ರೇಗೌಡರ ಶಾಸಕತ್ವದ ಅವಧಿ ಮುಗಿಯುವ ಹೊತ್ತಿಗೆ ಕುದುರೆಮುಖ ಕಾಡಿನಲ್ಲಿ ಬಂದೂಕಿನ ಸದ್ದುಗಳು ಕೇಳಲಾರಂಭಿಸಿದವು. ಮತ್ತೊಂದು ಚುನಾವಣೆ ನಡೆದು ಧರ್ಮಸಿಂಗ್ ಮುಖ್ಯಮಂತ್ರಿಯಾಗುವ ಹೊತ್ತಿಗೆ ಕುದುರೆಮುಖ ಕಾಡಿನಲ್ಲಿ ನಕ್ಸಲೀಯರಿದ್ದಾರೆ ಎಂಬುದು ನೂರಕ್ಕೆ ನೂರರಷ್ಟು ಸಾಬೀತಾಗಿತ್ತು. ಎನ್ಕೌಂಟರ್ಗಳು ನಡೆದು ಕೆಲವರು ಬಲಿಯಾದರು. ರಾಜ್ಯ ಸರಕಾರ ಗಿರಿಜನರನ್ನು ಒಕ್ಕಲೆಬ್ಬಿಸಲಾಗುವುದಿಲ್ಲ ಎಂದು ಭರವಸೆ ನೀಡುವ ದೊಡ್ಡ ಫಲಕಗಳನ್ನು ಕುದುರೆಮುಖದ ಕಾಡಿನೊಳಗೂ ಹಾಕಲಾಯಿತು. ಗಿರಿಜನರಿಗೆ ಬೆದರಿಕೆ ಹಾಕುತ್ತಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ತಣ್ಣಗಾದರು. ಗಿರಿಜನರ ಅಭಿವೃದ್ಧಿಗೆ ಪ್ಯಾಕೇಜುಗಳ ಘೋಷಣೆ ನಡೆಯಿತು.
***
ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ವಾಹನ ಚಾಲಕನಾಗಿ ದುಡಿಯುತ್ತಿದ್ದ ಒಬ್ಬಾತನನ್ನು ರಾತ್ರಿ ಬೆಳಗಾಗುವುದರೊಳಗೆ ಕೆಲಸದಿಂದ ತೆಗೆದು ಹಾಕಲಾಯಿತು. ಕನ್ನಡ ರಕ್ಷಣಾ ವೇದಿಕೆಯ ಸದಸ್ಯರು ಆ ಸಂಸ್ಥೆಯೊಳಗೆ ನುಗ್ಗಿ ದಾಂಧಲೆ ನಡೆಸಿದರು. ಆ ಸಂಸ್ಥೆಯವರು ಚಾಲಕನಿಗೆ ಮತ್ತೆ ಕೆಲಸ ಕೊಡಲಿಲ್ಲ. ಆದರೆ ಹಾಗೆ ಮಾಡುವುದಕ್ಕಾಗಿ ಆ ಉದ್ಯೋಗಿಗೆ ದೊಡ್ಡ ಪ್ರಮಾಣದ ಮೊತ್ತವೊಂದನ್ನು ಪರಿಹಾರವಾಗಿ ನೀಡಬೇಕಾಯಿತು.
***
ಖಾಸಗಿ ಬ್ಯಾಂಕ್ ಒಂದರ ಸಾಲ ವಸೂಲಿಗಾರರು ವಾಹನ ಚಾಲಕನೊಬ್ಬನ ಮನೆಯ ಮೇಲೆ ದಾಳಿ ಮಾಡಿ ಆತನನ್ನು ಥಳಿಸಿದರು. ಪೊಲೀಸರು ಕೇಸು ದಾಖಲಿಸಿಕೊಳ್ಳುವುದಕ್ಕೇ ಹಿಂದು-ಮುಂದು ನೋಡುತ್ತಿದ್ದಾಗ ಮಧ್ಯ ಪ್ರವೇಶಿಸಿದ್ದು ಕನ್ನಡ ರಕ್ಷಣಾ ವೇದಿಕೆ. ಅವರ ಆರ್ಭಟಕ್ಕೆ ಪೊಲೀಸರೂ ಹೆದರಿದರು. ಕಾನೂನು ಬಾಹಿರ ವಿಧಾನಗಳ ಮೂಲಕ ಸಾಲ ವಸೂಲು ಮಾಡಲು ಹೊರಟಿದ್ದ ಬ್ಯಾಂಕಿನ ಏಜಂಟರೂ ಪೊಲೀಸ್ ಕೇಸುಗಳ ಭಾರಕ್ಕೆ ಕುಸಿದರು. ಸಾಲಕೊಟ್ಟಿದ್ದ ಬ್ಯಾಂಕ್ ಮುಂದೆ ಬಂದು ತನ್ನ ವಸೂಲಾತಿ ವಿಧಾನಗಳು ಹೀಗಿರಲಿಲ್ಲ. ಏಜೆಂಟರು ತಪ್ಪು ಮಾಡಿದ್ದಾರೆ ಎಂದೆಲ್ಲಾ ಅಲವತ್ತುಕೊಂಡು ತಪ್ಪು ತಿದ್ದಿಕೊಳ್ಳುವುದಾಗಿ ಹೇಳಿತು.
***
ಭಾರತದ ಸಂವಿಧಾನ ಹೇಳುವಂತೆ ಎಂಟನೇ ಶೆಡ್ಯೂಲಿನಲ್ಲಿರುವ ಎಲ್ಲಾ ಭಾಷೆಗಳೂ ರಾಷ್ಟ್ರಭಾಷೆಗಳೇ ಸರಿ. ಇಂಗ್ಲಿಷ್ ಮತ್ತು ಹಿಂದಿಗಳು ಕೇಂದ್ರ ಸರಕಾರ ಆಡಳಿತಕ್ಕೆ ಬಳಸುತ್ತದೆ. ಇದು ಆಡಳಿತಾತ್ಮಕ ಅನುಕೂಲವೇ ಹೊರತು ಹಿಂದಿಗೆ ನೀಡಿದ ಪ್ರತ್ಯೇಕ ಮನ್ನಣೆಯೇನೂ ಅಲ್ಲ. ಈ ಅರ್ಥದಲ್ಲಿ ಹಿಂದಿಯನ್ನು ಪರಿಗಣಿಸಿದರೆ ಅಖಿಲ ಭಾರತ ಮಟ್ಟದಲ್ಲಿ ನಡೆಯುವ ಎಲ್ಲಾ ನೇಮಕಾತಿ ಪರೀಕ್ಷೆಗಳಿಗೂ ಕನ್ನಡದ ಮತ್ತು ಎಂಟನೇ ಶೆಡ್ಯೂಲಿನಲ್ಲಿರುವ ಇತರ ಎಲ್ಲಾ ಭಾಷೆಗಳ ಪ್ರಶ್ನೆ ಪತ್ರಿಕೆಗಳಿರಬೇಕು. ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ಬರೆಯಬಹುದಾಗಿರುವುದೇ ಇದಕ್ಕೆ ಸಾಕ್ಷಿ.
ಆದರೆ ರೈಲ್ವೇ ಇಲಾಖೆ ಎಸ್ಎಸ್ಎಲ್ಸಿ ವಿದ್ಯಾರ್ಹತೆ ಇರುವವರಿಗೆ ನಡೆಸುವ ನೇಮಕಾತಿ ಪರೀಕ್ಷೆಗಳಲ್ಲೂ ಅಭ್ಯರ್ಥಿಗಳು ಹಿಂದಿ ಅಥವಾ ಇಂಗ್ಲಿಷ್ನಲ್ಲಿ ಮಾತ್ರ ಉತ್ತರ ಬರೆಯಬಹುದಾದ ಸ್ಥಿತಿ ಇದೆ. ಸರೋಜಿನಿ ಮಹಿಷಿ ವರದಿಯಿಂದ ಆರಂಭವಾಗಿ ಅನೇಕ ವರದಿಗಳಲ್ಲಿ ಈ ವಿಷಯದ ಚರ್ಚೆ ಇದೆ. ಆದರೆ ಇದರ ಕುರಿತು ನಿಜವಾದ ಚರ್ಚೆ ಆರಂಭವಾದದ್ದು ಇತ್ತೀಚೆಗೆ. ಅದಕ್ಕೆ ಕಾರಣವಾದದ್ದು ಕನ್ನಡ ರಕ್ಷಣಾ ವೇದಿಕೆ. ಈ ಬಹಳ ಮುಖ್ಯವಾದ ಚರ್ಚೆಯನ್ನು ಅದು ಆರಂಭಿಸಿದ್ದು ಬಹಳ ಸುಲಭವಾದ ತಂತ್ರದ ಮೂಲಕ. ರೈಲ್ವೇ ನೇಮಕಾತಿ ಮಂಡಳಿ ನಡೆಸುತ್ತಿದ್ದ ಸಂದರ್ಶನಾಂಗಣದ ಮೇಲೆ ಅದು ಹಿಂಸಾತ್ಮಕ ದಾಳಿಯನ್ನು ನಡೆಸಿತು. ಇದರಿಂದ ದೊಡ್ಡ ಉಪಯೋಗವೇನೂ ಆಗದಿದ್ದರೂ ನೇಮಕಾತಿ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ರಾಜಕೀಯ ಪಕ್ಷಗಳು ಕನ್ನಡ ಮಾತ್ರ ಬಲ್ಲವರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಮಾತನಾಡಲು ತೊಡಗಿದವು.
***
ಮೇಲಿನ ಎಲ್ಲಾ ಉದಾಹರಣೆಗಳೂ ಒಂದು ಅಂಶವನ್ನು ಸ್ಪಷ್ಟ ಪಡಿಸುತ್ತಿವೆ. ಅಹಿಂಸಾತ್ಮಕ ಮತ್ತು ಪ್ರಜಾಸತ್ತಾತ್ಮಕವಾದ ಯಾವುದೇ ತಂತ್ರವನ್ನು ಬಳಸಿ ಒತ್ತಾಯಗಳನ್ನು ಮುಂದಿಟ್ಟರೂ ಆಡಳಿತ ನಡೆಸುವವರು ಅದನ್ನು ಪರಿಗಣಿಸುವುದಿಲ್ಲ. ಹಿಂಸೆಯ ಅಂಶ ಸೇರಿಕೊಂಡ ತಕ್ಷಣ ಹೋರಾಟಕ್ಕೊಂದು ಬೆಲೆ ಸಿಗಲಾರಂಭಿಸುತ್ತದೆ. ಈ ತರ್ಕವನ್ನು ಇನ್ನಷ್ಟು ಬೆಳೆಸಿದರೆ ಆದಿವಾಸಿ-ಗಿರಿಜನರು ನಕ್ಸಲೀಯರಿಗೆ ಬೆಂಬಲ ನೀಡುವುದು ಮತ್ತು ಕನ್ನಡಿಗರಾಗಿದ್ದುಕೊಂಡು ಕೇಂದ್ರ ಸರಕಾರದಲ್ಲಿ ಉದ್ಯೋಗ ಪಡೆಯಬೇಕಾದವರು ಕನ್ನಡ ರಕ್ಷಣಾ ವೇದಿಕೆಯ ಹಿಂಸಾತ್ಮಕ ತಂತ್ರಗಳಿಗೆ ಬೆಂಬಲ ನೀಡುವುದು ಸರಿ ಎಂದಾಗುತ್ತದೆ. ಹಾಗಂದುಕೊಳ್ಳಲೂ ಸಮಸ್ಯೆ ಇದೆ. ಕರ್ನಾಟಕದ ಹೆಚ್ಚುವರಿ ಡಿಜಿಪಿ ಶಂಕರ್ ಬಿದರಿ ಇತ್ತೀಚೆಗೊಂದು ಹೇಳಿಕೆ ನೀಡಿದರು. `ಹೋರಾಟದ ಹೆಸರಿನಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವ ದಾಂಧಲೆ ಎಬ್ಬಿಸುವ ಕೆಲಸದಲ್ಲಿ ಕೆಲವು ಸಂಘಟನೆಗಳು ತೊಡಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ತಮ್ಮ ಅಸಮಾಧಾನವನ್ನು ಹೊರಗೆಡಹುವ ಹಕ್ಕಿದೆ. ಆದರೆ ಅದು ಮಿತಿ ಮೀರಬಾರದು’. ಹೆಚ್ಚುವರಿ ಡಿಜಿಪಿಯವರ ಮಾತುಗಳು ನೂರಕ್ಕೆ ನೂರರಷ್ಟು ಕಾನೂನುಬದ್ಧವಾಗಿವೆ. ಆದರೆ ಹೀಗೇ ಕಾನೂನು ಬದ್ಧವಾಗಿ ಹೋರಾಟ ಮಾಡುತ್ತಿದ್ದಾಗ ಕುದುರೆಮುಖದ ಆದಿವಾಸಿ ಗಿರಿಜನರಿಗೆ ಸಿಕ್ಕಿದ್ದು ಒಕ್ಕಲೆಬ್ಬಿಸುವಿಕೆಯ ಉಡುಗೊರೆ. ನಕ್ಸಲೀಯರು ಗುಂಡು ಹಾರಿಸಿದ ತಕ್ಷಣ ಅವರಿಗೆ ಅಭಿವೃದ್ಧಿ ಪ್ಯಾಕೇಜುಗಳು ಬಂದವು.
ಸಾಲ ವಸೂಲಿಗೆ ಬ್ಯಾಂಕಿನವರು ಗೂಂಡಾಗಳನ್ನು ಕಳುಹಿಸಿದ್ದಾರೆ ಎಂದು ದೂರು ಕೊಡಲು ಹೋದರೆ ಅದನ್ನು ಸ್ವೀಕರಿಸುವುದಕ್ಕೆ ಪೊಲೀಸರು ಹಿಂದೆ ಮುಂದೆ ನೋಡುತ್ತಾರೆ. ಕರ್ನಾಟಕ ರಕ್ಷಣಾ ವೇದಿಕೆಯವರ ಬಳಿ ಹೋದರೆ ಸಮಸ್ಯೆ ತಾತ್ಕಾಲಿಕವಾಗಿಯಾದರೂ ಪರಿಹಾರವಾಗುತ್ತದೆ. ಕ್ಷುಲ್ಲಕ ನೆಪ ಮುಂದಿಟ್ಟುಕೊಂಡು ಚಿತ್ರ ಪ್ರದರ್ಶನಕ್ಕೆ ಅಡ್ಡಿ ಮಾಡುವ ಮತೀಯವಾದಿಗಳಿಗೂ ಕರ್ನಾಟಕ ರಕ್ಷಣಾ ವೇದಿಕೆಯೇ ಮದ್ದು ಎಂಬುದೂ ಇತ್ತೀಚೆಗಷ್ಟೇ ಸಾಬೀತಾಯಿತು. ಪರಿಸ್ಥಿತಿ ಹೀಗಿರುವಾಗ `ಪ್ರಜಾಸತ್ತಾತ್ಮಕ, ಕಾನೂನುಬದ್ಧ ಹೋರಾಟ ಮಾಡಬೇಕು’ ಎನ್ನುವುದು ವಾಸ್ತವದಿಂದ ವಿಮುಖಿಯಾದ ಉಪದೇಶವಾಗುವುದಿಲ್ಲವೇ?
***
ಹಿಂಸೆಗಿಳಿಯದೆ ಪ್ರಜಾಸತ್ತಾತ್ಮಕವಾಗಿ ಬೇಡಿಕೆಗಳನ್ನು ಮಂಡಿಸಬೇಕು ಎಂದು ಯಾರು ಯಾರಿಗೂ ಹೇಳುವಂಥ ಸ್ಥಿತಿ ಈಗ ಇಲ್ಲದಿರುವುದರ ಹಿಂದಿರುವುದು ರಾಜಕೀಯ ನಾಯಕತ್ವದ ವೈಫಲ್ಯ. ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡಕ್ಕೂ ಹೊಂದಿಕೊಂಡಿರುವ ಸಾಕಷ್ಟು ಪ್ರಬಲವೇ ಆಗಿರುವ ಕಾರ್ಮಿಕ ಸಂಘಟನಾ ವಿಭಾಗಗಳಿವೆ. ಬಹುರಾಷ್ಟ್ರೀಯ ಕಂಪೆನಿಯೊಂದು ತನ್ನಲ್ಲಿ ಕೆಲಸ ಮಾಡುವ ದಿನಗೂಲಿ ನೌಕರನೊಬ್ಬನನ್ನು ಕಿತ್ತು ಹಾಕಿದರೆ ಆತನ ಪರವಾಗಿ ಮಾತನಾಡುವ ಧೈರ್ಯ ಮತ್ತು ಅದಕ್ಕೆ ಬೇಕಾದ ಚಾತುರ್ಯಗಳು ಈ ಎರಡೂ ಕಾರ್ಮಿಕ ಸಂಘಟನೆಗಳಿಗಿಲ್ಲ. ಇದ್ದರೂ ಅವು ಇಂದಿನವರೆಗೂ ತೋರಿಸಿಕೊಟ್ಟಿಲ್ಲ. ಇನ್ನು ಕಾರ್ಮಿಕರನ್ನು ಗುತ್ತಿಗೆಗೆ ತೆಗೆದುಕೊಂಡಂತೆ ಮಾತನಾಡುವ ಎಡ ಪಕ್ಷಗಳ ಕಾರ್ಮಿಕ ನಾಯಕರೂ ಅಷ್ಟೇ. ಸಂಘಟಿತರಾಗಿರುವ ಕಾರ್ಮಿಕರ ಮಧ್ಯೆ ಮಾತ್ರ ಇವರ ಆಟಾಟೋಪ. ಇವರೆಲ್ಲಾ ಪ್ರಜಾಸತ್ತಾತ್ಮಕವಾಗಿ ಮಾತನಾಡಿ ಜನರ ಬೇಡಿಕೆಗಳನ್ನು ವ್ಯವಸ್ಥೆ/ಆಡಳಿತಗಳ ಮುಂದೆ ಇಡಬೇಕಾದವರು. ಇವರಾರೂ ಆ ಕೆಲಸ ಮಾಡದೇ ಇದ್ದಾಗ ಯಾವುದೋ ಒಂದು ತಂತ್ರದ ಮೂಲಕ ಕೆಲಸ ಸಾಧಿಸಿಕೊಡುವ ಸಂಘಟನೆಗಳಿಗೆ ಜನರು ಮೊರೆ ಹೋಗುತ್ತಾರೆ.
***
ಕೇಂದ್ರ ಸರಕಾರದ ಅಧೀನದಲ್ಲಿರುವ ಇಲಾಖೆಗಳು ಮತ್ತಿತರ ಸಂಸ್ಥೆಗಳಲ್ಲಿ `ಸಿ’ ಮತ್ತು `ಡಿ’ ದರ್ಜೆಯ ಹುದ್ದೆಗಳ ನೇಮಕಾತಿ ಹೇಗೆ ನಡೆಯುತ್ತದೆ ಎಂಬುದರ ಬಗ್ಗೆ ಇಂದಿನವರೆಗೂ ಯಾವುದೇ ರಾಜಕೀಯ ಪಕ್ಷ ತಲೆಕೆಡಿಸಿಕೊಂಡಂತೆ ಕಾಣಿಸುವುದಿಲ್ಲ. ಕನ್ನಡ ರಕ್ಷಣಾ ವೇದಿಕೆಯ ಪ್ರತಿಭಟನೆಗಳಿಗೆ ಬೆಂಬಲ ಸಿಗಲಾರಂಭಿಸಿದಾಗ ಎಲ್ಲಾ ರಾಜಕೀಯ ಪಕ್ಷಗಳೂ `ತಾವೂ ಇದ್ದೇವೆ’ ಎಂದುಕೊಂಡು ಅದಕ್ಕೆ ಧ್ವನಿಗೂಡಿಸಿದರು. ಕಾಂಗ್ರೆಸ್ ಈಗಲೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದೆ. ಬಿಜೆಪಿಯೂ ಒಂದು ಪೂರ್ಣ ಅವಧಿಗೆ ಕೇಂದ್ರದಲ್ಲಿ ಗದ್ದುಗೆ ಹಿಡಿದಿತ್ತು. ಎರಡೂ ಪಕ್ಷಗಳ ಒಬ್ಬ ನಾಯಕರೂ ಕೇಂದ್ರ ಸರಕಾರದ ಇಲಾಖೆಗಳಿಗೆ ನಡೆಯುವ ನೇಮಕಾತಿಯ ಸ್ವರೂಪ ಅದರಲ್ಲಿ ಇರುವ ಪ್ರಾದೇಶಿಕ ಅಸಮಾನತೆಗಳ ಕುರಿತು ಚರ್ಚಿಸಿದ್ದಿಲ್ಲ.
ಈಗಲೂ ರೈಲ್ವೇ ನೇಮಕಾತಿಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ಮಾತನಾಡುತ್ತಿದ್ದರೆ ಅದಕ್ಕೆ ಮುಖ್ಯ ಕಾರಣ ಸದ್ಯವೇ ಎದುರಾಗುತ್ತಿರುವ ಚುನಾವಣೆಗಳು. ಈ ಕಣ್ಣೊರೆಸುವ ರಾಜಕಾರಣ ಎರಡು ರೀತಿಯಲ್ಲಿ ಅಪಾಯಕಾರಿ. ಮೊದಲನೆಯದ್ದು ರೈಲ್ವೇ ಇಲಾಖೆಯ ನೇಮಕಾತಿಯನ್ನು ಹಿಂಸಾತ್ಮಕವಾಗಿ ವಿರೋಧಿಸುವುದಕ್ಕೆ ತಥಾಕಥಿತ ಪ್ರಜಾಸತ್ತಾತ್ಮಕ ಹೋರಾಟದಲ್ಲಿ ನಂಬಿಕೆ ಇರುವವರೂ ಒಪ್ಪಿಗೆ ನೀಡಿದಂತಾಗುತ್ತದೆ. ಎರಡನೆಯದ್ದು: ರಾಜಕೀಯ ಪ್ರಬುದ್ಧತೆಯೇ ಇಲ್ಲದೆ ಗಾಳಿಬಂದಂತೆ ತೂರಿಕೊಳ್ಳುವ ಮನಸ್ಥಿತಿ ಇದು. ಡಿ.ಬಿ.ಚಂದ್ರೇಗೌಡರು ಚುನಾವಣೆ ಗೆಲ್ಲಲು ಆದಿವಾಸಿಗಳಿಗೆ ಭರವಸೆ ಕೊಟ್ಟಂತೆಯೇ ಯಡಿಯೂರಪ್ಪ, ಅನಂತಕುಮಾರ್ ಆದಿಯಾಗಿ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ರೈಲ್ವೇ ನೇಮಕಾತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಹಿಂಸಾತ್ಮಕ ಹೋರಾಟಗಳನ್ನು ಬಂದೂಕಿನಿಂದ ನಿಯಂತ್ರಿಸಬಹುದೆಂದು ವಾದಿಸಬಹುದು. ಆದರೆ ರಾಜಕೀಯ ಪಕ್ಷಗಳ ಸೋಲು ಪ್ರಜಾಸತ್ತಾತ್ಮಕವಾಗಿ ಹೋರಾಟ ನಡೆಸಬಹುದು ಎಂಬ ಭರವಸೆಯನ್ನೇ ನಾಶ ಮಾಡುತ್ತಿರುವುದನ್ನು ಹೇಗೆ ತಡೆಯುವುದು?