ದಕ್ಷ ಸೇವೆಯಲ್ಲಿ `ಸೇವೆ’ ಎಷ್ಟಿದೆ?

ನಲ್ಲೂರು ಹಾಸನ ಜಿಲ್ಲೆಯ ಆಲೂರು ತಾಲೂಕಿನ ಅಂಚಿನಲ್ಲಿರುವ ಒಂದು ಗ್ರಾಮ. ಹಾಸನ ಮತ್ತು ಸಕಲೇಶಪುರ ನಗರಗಳೆರಡರಿಂದಲೂ ಸಮಾನ ದೂರದಲ್ಲಿರುವ ಅಷ್ಟೇನೂ ಒಳ್ಳೆಯ ರಸ್ತೆಯಿಲ್ಲದ ಮಲೆನಾಡಿನ ಈ ಹಳ್ಳಿಗೆ ಹತ್ತು ವರ್ಷಗಳ ಹಿಂದೆ ಇದ್ದದ್ದು ಒಂದೇ ಬಸ್ಸು. ರಾಷ್ಟ್ರೀಯ ಹೆದ್ದಾರಿಯಿಂದ ಆರೇ ಕಿಲೋಮೀಟರ್‌ಗಳಷ್ಟು ದೂರವಿದ್ದರೂ ಬಸ್ಸು ಮಾತ್ರ ಬೆಳಿಗ್ಗೆ ಮತ್ತು ಸಂಜೆ ಬರುತ್ತಿತ್ತು. ಇತ್ತೀಚೆಗೆ ಬಸ್ಸುಗಳ ಸಂಖ್ಯೆ ನಾಲ್ಕಾಗಿದೆ. ಬೆಳಿಗ್ಗೆ ಸಕಲೇಶಪುರದಿಂದ ಬರುವ ಬಸ್ಸು ಪೂರ್ಣ ಖಾಲಿಯಾಗಿಯೇ ನಲ್ಲೂರಿಗೆ ಬರುತ್ತದೆ. ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ ತಲುಪುವ ಆರು ಕಿಲೋಮೀಟರ್‌ಗಳ ಒಳಗೆ ಬಸ್ಸು ತುಂಬಿಕೊಳ್ಳುತ್ತದೆ. ಇದಕ್ಕೆ ಹತ್ತುವವರಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳದ್ದೇ ಸಿಂಹ ಪಾಲು. ಉಳಿದವರು ಆಸ್ಪತ್ರೆಗೆ ಹೋಗುವವರು, ಸಂತೆಗೆ ಹೋಗುವವರು ಹೀಗೆ ಆಯಾ ದಿನದ ವಿಶೇಷಗಳಿಗೆ ಪ್ರಯಾಣಿಸುವವರು. ಈ ಸಂಖ್ಯೆ ಕೆಲವೊಮ್ಮೆ ಬಸ್ಸಿನ ಮೇಲೆ ಹತ್ತಿ ಕುಳಿತುಕೊಳ್ಳುವಷ್ಟು ದೊಡ್ಡದಾಗಿರುತ್ತದೆ.

ಆರು ಕಿಲೋಮೀಟರ್‌ಗಳೊಳಗೆ ಬರುವ ಆರು ತಂಗುದಾಣಗಳಲ್ಲಿ ಬಸ್ಸು ತುಂಬಿ-ತುಳುಕುವಷ್ಟು ಜನರಿರುವುದನ್ನು ನೋಡಿ ಕೆಲವರು ಈ ದಾರಿಯಲ್ಲಿ ಮ್ಯಾಕ್ಸಿಕ್ಯಾಬ್‌ಗಳನ್ನೂ ಓಡಾಡಿಸಿ ನೋಡಿದರು. ಇದಕ್ಕೂ ಜನರೇನೋ ಬಂದರು. ಆದರೆ ಕೃಷಿ ಕೆಲಸ ಹೆಚ್ಚಿದ್ದ ದಿನಗಳಲ್ಲಿ, ಭಾನುವಾರಗಳಂದು ಈ ದಾರಿಯಲ್ಲಿ ಜನರೇ ಇಲ್ಲದಿರುವುದನ್ನು ಕಂಡು ಅವರು ಈ ವ್ಯವಹಾರದಿಂದ ಹಿಂದೆ ಸರಿದರು. ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಕೆಲವರು ರಸ್ತೆಯ ಗುಣಮಟ್ಟವನ್ನೂ ದೂರಿದರು.

ಕೆಲವು ದಿನಗಳಂದು ಜನರೇ ಇಲ್ಲದಿದ್ದರೂ ಕೆಲವು ದಿನಗಳಂದು ಬರೇ ವಿದ್ಯಾರ್ಥಿ ಪಾಸ್‌ಗಳೇ ಬಸ್‌ ತುಂಬಿಕೊಂಡಾಗಲೂ ಬೇಸರ ಮಾಡಿಕೊಳ್ಳದೇ ಇದ್ದದ್ದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಾತ್ರ. ಒಬ್ಬ ಪ್ರಯಾಣಿಕನೂ ಇಲ್ಲದೇ ಇರುವ ದಿನಗಳಲ್ಲೂ ಈ ಬಸ್ಸುಗಳು ಬಂದು ಹೋಗುವುದು ಅನೇಕ ಸಮಸ್ಯೆಗಳನ್ನು ಪರಿಹರಿಸಿದೆ. ಸುತ್ತಲಿನ ಆರು ಕಿಲೋಮೀಟರ್‌ ಸುತ್ತಳತೆಯಲ್ಲಿ ಒಂದೇ ಒಂದು ಆಸ್ಪತ್ರೆಯಾಗಲೀ ವೈದ್ಯರಾಗಲೀ ಇಲ್ಲ. ಈ ದಾರಿಯಲ್ಲಿ ಬರುವ ಬಸ್ಸು ಆರೋಗ್ಯದ ಸಮಸ್ಯೆಗೊಂದು ಉತ್ತರ. ಪ್ರೌಢಶಾಲೆಯಿಲ್ಲ. ಕಾಲೇಜಿಲ್ಲ. ಹಾಗೆಂದು ಶಿಕ್ಷಣ ಪಡೆಯಬೇಕೆಂದುಕೊಂಡವರಿಗೆ ಬಸ್ಸುಗಳಿರುವುದೇ ಧೈರ್ಯ.

ಹೊತ್ತು ಹೊತ್ತಿಗೆ ಬಂದು ಹೋಗುವ ಕೆಎಸ್‌ಆರ್‌ಟಿಸಿ ಬಸ್ಸುಗಳ ಬಗ್ಗೆ ಈ ಊರಿನವರಿಗೆ ಬಹಳ ಸಮಾಧಾನವಿದೆ ಎಂದು ಅಂದುಕೊಳ್ಳಬೇಕಾಗಿಲ್ಲ. ಬೆಳಿಗ್ಗೆ ಏಳಕ್ಕೆ ಬರಬೇಕಾದ ಬಸ್ಸು ಎಂಟಾದರೂ ಕಾಣಿಸಿದೇ ಹೋದರೆ ಕಾಲುಗಟ್ಟಿ ಇರುವವರು ಬಸ್ಸಿಗೆ ಶಾಪ ಹಾಕುತ್ತಾ ಆರು ಕಿಲೋಮೀಟರ್‌ ನಡೆದು ಹೆದ್ದಾರಿ ತಲುಪುತ್ತಾರೆ. ಖಾಸಗಿ ಬಸ್‌ ಇದ್ದಿದ್ದರೆ ಒಳ್ಳೆಯದಿತ್ತು ಎಂದು ನೆರೆಯ ಚಿಕ್ಕಮಗಳೂರನ್ನೂ ಯಾವತ್ತೋ ನೋಡಿದ್ದ ಮಂಗಳೂರನ್ನೂ ನೆನಪಿಸಿಕೊಳ್ಳುತ್ತಲೂ ಇರುತ್ತಾರೆ.

***

ರೆಂಜಾಡಿ ಎಂಬ ಊರಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನಲ್ಲಿ. ರಾಷ್ಟ್ರೀಯ ಹೆದ್ದಾರಿ-17ರಿಂದ ಸುಮಾರು ಐದು ಕಿಲೋಮೀಟರ್‌ ದೂರದಲ್ಲಿರುವ ಹಳ್ಳಿ ಇದು. ಮಂಗಳೂರಿನ ನಗರ ಸಾರಿಗೆ ಬಸ್‌ ನಿಲ್ದಾಣದಲ್ಲಿ ನಿಂತರೆ ಹತ್ತು ನಿಮಿಷದೊಳಗೆ ಇಲ್ಲಿಗೆ ಹೋಗಲು ಒಂದು ಬಸ್‌ ಸಿಗುತ್ತದೆ. ಆದರೆ ರಾತ್ರಿ ಎಂಟು ಕಳೆದರೆ ಅಲ್ಲಿಗೆ ನೇರವಾಗಿ ಹೋಗುವ ಬಸ್ಸುಗಳಿಲ್ಲ. ರಾತ್ರಿ ಹತ್ತು ಗಂಟೆ ದಾಟಿದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುವ ಬಸ್ಸುಗಳೂ ಇರುವುದಿಲ್ಲ. ಯಾವುದಾದರೂ ಲಾರಿಗೆ ಕೈತೋರಿಸಿ ಇಲ್ಲವೇ ಕೇರಳದ ಕಡೆಗೆ ಹೋಗುವ ಬಸ್ಸುಗಳವರಲ್ಲಿ ಅಲವತ್ತುಕೊಂಡು ತೊಕ್ಕೊಟ್ಟು ಎಂಬಲ್ಲಿ ಇಳಿದು, ರಿಕ್ಷಾದವರಿಗೆ ನೂರಾರು ರೂಪಾಯಿಗಳನ್ನು ಕೊಟ್ಟು ಮನೆ ತಲುಪಬೇಕು.

ಸಮಸ್ಯೆ ಇಷ್ಟಕ್ಕೇ ಮುಗಿಯುವುದಿಲ್ಲ. ಹಗಲು ಹೊತ್ತಿನಲ್ಲಿ ನೆನಪಿಸಿಕೊಂಡಾಗಲೆಲ್ಲಾ ಕಾಣ ಸಿಗುವ ಬಸ್ಸುಗಳು ಸಾಕಷ್ಟು ಜನರಿದ್ದರೆ ಮಾತ್ರ ಹೋಗುತ್ತವೆಯೇ ಹೊರತು ರೆಂಜಾಡಿಯಲ್ಲಿ ಯಾರೋ ಮಂಗಳೂರಿಗೆ ಬರುವವರು ಕಾಯುತ್ತಿದ್ದಾರೆ ಎಂಬ ಕಾರಣಕ್ಕಾಗಿ ಹೋಗುವುದಿಲ್ಲ. ಅಂದ ಹಾಗೆ ಇಲ್ಲಿಯೂ ಮೂರು ಕಿಲೋಮೀಟರ್‌ ವ್ಯಾಪ್ತಿಯೊಳಗೆ ಆಸ್ಪತ್ರೆ ಇಲ್ಲ. ಪ್ರೌಢಶಾಲೆಯಿಲ್ಲ. ಕಾಲೇಜೂ ಇಲ್ಲ.

***

ಮಂಗಳಾದೇವಿ ದೇವಸ್ಥಾನವಿರುವುದು ಮಂಗಳೂರಿನ ಹೃದಯ ಭಾಗದಲ್ಲಿ. ಈ ಪ್ರದೇಶಕ್ಕೆ ಮಂಗಳಾದೇವಿ ಎಂದೇ ಕರೆಯುತ್ತಾರೆ. ಇಲ್ಲಿಂದ ಎಂಆರ್‌ಪಿಎಲ್‌ ಕಾರ್ಖಾನೆ ಇರುವ ಸುರತ್ಕಲ್‌ಗೆ ಹಲವು ಬಸ್‌ಗಳಿವೆ. ಆಚೆ ಕಡೆಯಿಂದಲೂ ಅಷ್ಟೇ. ಬೈಕಂಪಾಡಿ ಕೈಗಾರಿಕ ಪ್ರದೇಶದಿಂದ ಕೆಲಸ ಮುಗಿಸಿಕೊಂಡು ಸೀದಾ ಮನೆ ತಲುಪಲು ಅನುಕೂಲವಾಗುವಂತೆ ಅನೇಕ ಬಸ್ಸುಗಳು. ಇವೆಲ್ಲವೂ ಹಗಲು ಹೊತ್ತಿನಲ್ಲಿ ಮಾತ್ರ. ಎರಡನೇ ಪಾಳಿಯನ್ನು ಮುಗಿಸಿಕೊಂಡು ರಾತ್ರಿ ಹತ್ತಕ್ಕೆ ಯಾರಾದರೂ ಸುರತ್ಕಲ್‌ ಅಥವಾ ಬೈಕಂಪಾಡಿಯಲ್ಲಿ ಮಂಗಳಾದೇವಿಯ ಬಸ್ಸು ಹಿಡಿಯಬೇಕೆಂದರೆ ಅವರ ಅದೃಷ್ಟ ಚೆನ್ನಾಗಿರಬೇಕು. ಅಂದರೆ ಬಸ್ಸಿನ ತುಂಬ ಜನರಿದ್ದರಷ್ಟೇ ಆ ಬಸ್ಸು ಮಂಗಳಾದೇವಿಯವರೆಗೂ ಹೋಗುತ್ತದೆ. ಇಲ್ಲದಿದ್ದರೆ ಮತ್ತೊಂದು ಬಸ್ಸು ಸಿಗದ ಜಾಗದಲ್ಲಿ ಪ್ರಯಾಣಿಕರನ್ನು ಇಳಿಸಿ ಬಸ್ಸು ಮಾಯವಾಗುತ್ತದೆ. ಈ ಬಸ್ಸುಗಳೆಲ್ಲಾ `ದಕ್ಷ ಸೇವೆ’ ನೀಡುವ ಖಾಸಗಿಯವರದ್ದು. ಇಲ್ಲಿ ನೇಮಕಾತಿಯಲ್ಲಿ ಮೀಸಲಾತಿ ಇರುವುದಿಲ್ಲ. ಲಾಭವಿಲ್ಲದಿದ್ದರೆ ಏನೂ ನಡೆಯುವುದೂ ಇಲ್ಲ.

***

ನಲ್ಲೂರಿಗೆ ಜನರಿಲ್ಲದಿದ್ದರೂ ಬಸ್‌ ಓಡಿಸುವ ಕೆಎಸ್‌ಆರ್‌ಟಿಸಿ ಈಗ ನಷ್ಟದಲ್ಲೇನೂ ಇಲ್ಲ. ಹಾಗೆಯೇ ಜನರಿದ್ದಾಗ ಮಾತ್ರ ಬಸ್ಸು ಓಡಿಸುವ ಖಾಸಗಿಯವರೂ ನಷ್ಟದಲ್ಲಿಲ್ಲ. ಕೆಎಸ್‌ಆರ್‌ಟಿಸಿಯ ಲಾಭದ ಕಲ್ಪನೆ ಮತ್ತು ಖಾಸಗಿ ಬಸ್‌ ಮಾಲೀಕರ ಲಾಭದ ಕಲ್ಪನೆಗಳೆರಡೂ ಭಿನ್ನ. ವಾರದ ಬಹುತೇಕ ದಿನಗಳಲ್ಲಿ ತುಂಬಿ ತುಳುಕುವಷ್ಟು ಜನರಿರುವುದರಿಂದ ಒಂದರೆಡು ದಿನ ಜನರಿಲ್ಲದೇ ಇದ್ದರೂ ಪರವಾಗಿಲ್ಲ ಎಂದು ಕೆಎಸ್‌ಆರ್‌ಟಿಸಿ ಭಾವಿಸುತ್ತದೆ. ಅದೊಂದು ಸರಕಾರೀ ಸ್ವಾಮ್ಯದ ಸಂಸ್ಥೆಯಾಗಿರುವುದರಿಂದ ಹಾಗೆ ಭಾವಿಸುವಂತೆ ಕಾನೂನುಗಳು ಒತ್ತಾಯಿಸುತ್ತವೆ. ಈ ಕಾನೂನನ್ನು ಕೆಎಸ್‌ಆರ್‌ಟಿಸಿಯ ನೌಕರರು ಪಾಲಿಸುತ್ತಾರೆ. ಜನರಿರಲಿಲ್ಲ ಎಂಬ ಕಾರಣಕ್ಕೆ ಅವರ ಸಂಬಳವೇನೂ ಕಡಿತವಾಗುವುದಿಲ್ಲ.

ಖಾಸಗಿ ಬಸ್‌ಗಳು ವ್ಯವಹರಿಸುವ ವಿಧಾನವೇ ಬೇರೆ. ಪ್ರತಿ ದಿನ ಆಗುವ ಸಂಪಾದನೆಯ ಒಂದು ಭಾಗ ಚಾಲಕ ಮತ್ತು ನಿರ್ವಾಹಕರಿಗೆ ದೊರೆಯುತ್ತದೆ. ಕೆಲವೊಮ್ಮೆ ಒಂದು ನಿರ್ದಿಷ್ಟ ಮೊತ್ತವನ್ನು ಬಸ್ಸಿನ ಮಾಲೀಕರಿಗೆ ನೀಡುವ ಒಪ್ಪಂದವಿರುತ್ತದೆ. ಎರಡೂ ವಿಧಾನಗಳಲ್ಲಿ ಯಾವುದನ್ನು ಅನುಸರಿಸಿದರೂ ಜನರಿಲ್ಲದೇ ಹೋದರೆ ಟ್ರಿಪ್‌ ನಡೆಸಲು ಚಾಲಕ ಮತ್ತು ನಿರ್ವಾಹಕರು ಮನಸ್ಸು ಮಾಡುವುದಿಲ್ಲ.

ನಲ್ಲೂರಿನ ಜನರ ಉದಾಹರಣೆಯನ್ನು ಮುಂದಿಟ್ಟುಕೊಂಡು ಅರ್ಥ ಮಾಡಿಕೊಳ್ಳಲು ಹೊರಟರೆ ಖಾಸಗಿಯವರ ಲಾಭದ ಪರಿಕಲ್ಪನೆ ತಂದೊಡ್ಡುವ ಸಮಸ್ಯೆ ಅರ್ಥವಾಗುತ್ತದೆ. ಭಾನುವಾರದಂದು ನಲ್ಲೂರಿಗೆ ಹೋಗುವ ಬಸ್ಸಿಗೆ ಜನರೇ ಇರುವುದಿಲ್ಲ. ಖಾಸಗಿಯವರಾದರೆ ಭಾನುವಾರದ ಟ್ರಿಪ್‌ ರದ್ದಾಗುತ್ತದೆ. ಈ ದಿನ ನಲ್ಲೂರಿನಲ್ಲೊಬ್ಬನಿಗೆ ಸಣ್ಣಗೆ ಜ್ವರ ಬಾಧಿಸಿದ್ದರೆ, ಅದು ತೀವ್ರವಾಗಿ ಏರುವ ಮಲೇರಿಯಾ ಜ್ವರವೇನಾದರೂ ಆಗಿದ್ದರೆ, ಆಸ್ಪತ್ರೆಗೆ ಹೋಗಲು ಆತ ಬಸ್ಸಿಗಾಗಿ ಕಾಯುತ್ತಿದ್ದರೆ ಅವನ ಭವಿಷ್ಯವೇನು?

ಇದು ಕೇವಲ ಒಂದು ಉದಾಹರಣೆ ಮಾತ್ರ. ಇಂಥ ಇನ್ನೂ ಅನೇಕ ಸಮಸ್ಯೆಗಳನ್ನು ಪಟ್ಟಿ ಮಾಡಬಹುದು. ಜೀವನಾವಶ್ಯಕ ಸೇವೆಗಳನ್ನು ಒದಗಿಸುವುದರಲ್ಲಿಯೂ ಲಾಭದ ಅಂಶವಿರುತ್ತದೆ. ಇದು ಬಹಳ ದೊಡ್ಡ ಲಾಭವೂ ಆಗಿರಬಹುದು. ಸೇವೆಯನ್ನು ಒದಗಿಸುವವರು ಇಲ್ಲಿ ಸೇವೆಯನ್ನು ಮರೆತು ಕೇವಲ ಲಾಭವನ್ನು ಮಾತ್ರ ಪರಿಗಣಿಸುವ ಸ್ಥಿತಿ ಉದ್ಭವಿಸಿದಂತೆ ಇರಬೇಕಾದರೆ ಅದಕ್ಕೆ ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳೇ ಬೇಕಾಗುತ್ತದೆ. ಕೆಎಸ್‌ಆರ್‌ಟಿಸಿ ಬಸ್‌ ಬಾರದಿದ್ದರೆ ತಮ್ಮ ಹಕ್ಕಿನಂತೆ ಅದನ್ನು ಕೇಳುವುದಕ್ಕೆ ಜನರಿಗೆ ಹಕ್ಕು ಮತ್ತು ಧೈರ್ಯಗಳೆರಡೂ ಇರುತ್ತವೆ. ಅದು ಒದಗಿಸುವ ಸೇವೆ ದಕ್ಷವಾಗಿಲ್ಲದಿದ್ದರೂ ಅದಕ್ಕೊಂದು ಸೇವೆಯ ಆಯಾಮವಿರುತ್ತದೆ. ವಿದ್ಯುತ್‌ ಒದಗಿಸುವ ಕೆಪಿಟಿಸಿಎಲ್‌ ಮತ್ತು ಎಸ್ಕಾಂಗಳು, ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿಗಳು ಒದಗಿಸುವ ಸೇವೆಗಳನ್ನು ಸಾರ್ವಜನಿಕ ಸ್ವಾಮ್ಯದಲ್ಲೇ ಇರುವಂತೆ ನೋಡಿಕೊಳ್ಳಬೇಕಿರುವುದು ಈ ಕಾರಣಕ್ಕಾಗಿಯೇ. ಈ ಸಂಸ್ಥೆಗಳು ನಷ್ಟದಲ್ಲಿದ್ದರೆ, ಆಡಳಿತಾತ್ಮಕವಾಗಿ ವಿಫಲಗೊಂಡಿದ್ದರೆ ಅವುಗಳನ್ನು ಸುಧಾರಣೆಗೊಳಪಡಿಸಿಯಾದರೂ ಉಳಿಸಿಕೊಳ್ಳಲೇಬೇಕು.

Comments are closed.