ನೊಬೆಲ್ ಪುರಸ್ಕೃತ ಕೊಲಂಬಿಯನ್ ಲೇಖಕ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಸ್ಪ್ಯಾನಿಷ್ ಭಾಷೆಯಲ್ಲಿ ಬರೆಯುತ್ತಾರೆ. ಅದರ ಇಂಗ್ಲಿಷ್ ಮತ್ತು ಫ್ರೆಂಚ್ ಅನುವಾದಗಳ ಮೂಲಕ ಜಗತ್ತು ಅವರನ್ನು ಅರಿಯುತ್ತದೆ. ಅನುವಾದಗಳಲ್ಲೂ ಅವರು `ಬೆಸ್ಟ್ ಸೆಲ್ಲರ್’ ಲೇಖಕ. ಅವರ ಬಹುಮುಖ್ಯ ಕಾದಂಬರಿಗಳಾದ `ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’,`ಕ್ರಾನಿಕಲ್ ಆಫ್ ಡೆತ್ ಫೋರ್‌ಟೋಲ್ಡ್’ ಮತ್ತು ಹಲವು ಸಣ್ಣ ಕತೆಗಳು ಕನ್ನಡಕ್ಕೂ ಅನುವಾದಗೊಂಡು ಜನಪ್ರಿಯವಾಗಿವೆ. ಈ ಲೇಖಕನ ಆತ್ಮಕತೆಯ ಮೊದಲ ಭಾಗವಾದ `ಲಿವಿಂಗ್ ಟು ಟೆಲ್ ದ ಟೇಲ್’ನಲ್ಲಿ ಮಾರ್ಕ್ವೆಜ್ ಶಾಲೆಗೆ ಸೇರುವುದಕ್ಕೆ ಸಂಬಂಧಿಸಿದಂತೆ ಅವರ ಅಪ್ಪ-ಅಮ್ಮನ ಮಧ್ಯೆ ನಡೆದ ಮಾತುಕತೆಯ ವಿವರವಿದೆ.
ಅಪ್ಪ ಇಂಗ್ಲಿಷ್ ಕಲಿಸುವ ಶಾಲೆಗೆ ಸೇರಿಸಲು ಹೊರಟರೆ ಅದನ್ನು ಲೂಥರ್‌ನ ಅನುಯಾಯಿ ಗಳ (ಪ್ರಾಟಸ್ಟೆಂಟರ) ಅಡ್ಡೆ ಎಂದು ಕರೆದು ಅಮ್ಮ ತಡೆಯುತ್ತಾಳೆ. ತಾನು ಇಂಗ್ಲಿಷ್ ಕಲಿಸುವ ಶಾಲೆಗೆ ಸೇರಿದ್ದರೆ ಇಂಗ್ಲಿಷ್ ಗೊತ್ತಿಲ್ಲದ ಲೇಖಕನಾಗುತ್ತಿರಲಿಲ್ಲ ಎಂಬ ವಿಷಾದದೊಂದಿಗೆ ಮಾರ್ಕ್ವೆಜ್ ಇದನ್ನು ವಿವರಿಸುತ್ತಾರೆ. ಈ ಘಟನೆಯನ್ನು ಸುಗತ ಶ್ರೀನಿವಾಸರಾಜು ಕನ್ನಡದ ತಲ್ಲಣಗಳನ್ನು ಹೇಳುವ ತಮ್ಮ ಇಂಗ್ಲಿಷ್ ಪುಸ್ತಕದ (ಕೀಪಿಂಗ್ ಫೈತ್ ವಿದ್ ದ ಮದರ್ ಟಂಗ್-ಆ್ಯಂಕ್ಸೈಟೀಸ್ ಆಫ್ ಎ ಲೋಕಲ್ ಕಲ್ಚರ್) ಪ್ರಸ್ತಾವನೆಯಲ್ಲಿ ಬಳಸಿಕೊಂಡಿದ್ದಾರೆ. ಇಂಗ್ಲಿಷ್ ಮತ್ತು ಕನ್ನಡಗಳೆರಡರಲ್ಲೂ ಸಮರ್ಥ ವಾಗಿ ಅಭಿವ್ಯಕ್ತಿಸುವ ಶಕ್ತಿ ಇರುವ ಸುಗತ ಈ ಮಾರ್ಕ್ವೇಜಿಯನ್ ದ್ವಂದ್ವವನ್ನು ಉದಾಹರಿಸುವುದು ಕನ್ನಡದ ತಲ್ಲಣಗಳ ಕುರಿತ ಒಂದು ಮಹತ್ವದ ರೂಪಕ. ಮಾರ್ಕ್ವೆಜ್ ಇಂಗ್ಲಿಷ್ ಗೊತ್ತಿದ್ದರೆ ಏನಾಗುತ್ತಿದ್ದ ಎಂಬ ಪ್ರಶ್ನೆಯೂ ಇಲ್ಲಿದೆ. ಕೆಲವರಿದ್ದಕ್ಕೆ `ಇಷ್ಟು ದೊಡ್ಡ ಲೇಖಕ ನಾಗುತ್ತಿರಲಿಲ್ಲ’ ಎಂಬ ಉತ್ತರವನ್ನೂ ನೀಡಿದ್ದಾರೆ. ಕನ್ನಡದ ಸಂದರ್ಭ ದಲ್ಲಿ ಮಾರ್ಕ್ವೇಜಿಯನ್ ದ್ವಂದ್ವವನ್ನು ಕುವೆಂಪು ಅವರ ಇಂಗ್ಲಿಷ್ ಕುರಿತ ನಿಲುವಿನ ಮೂಲಕವೂ ಅರ್ಥ ಮಾಡಿಕೊಳ್ಳಬಹುದು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದು ಹಾಡಿದ್ದ ಕವಿಯೇ ತಾನು ಇಂಗ್ಲಿಷ್ ಕಲಿಯದೇ ಇದ್ದರೆ ಹಳ್ಳಿಯಲ್ಲಿ ಸಗಣಿ ಎತ್ತುತ್ತಲೇ ಇರಬೇಕಾಗಿತ್ತೆಂದೂ ಹೇಳಿದ್ದರು.
* * *
ಆಫ್ರಿಕಾ ಖಂಡದ ಪಶ್ಚಿಮದಲ್ಲಿ ಸೆನೆಗಲ್ ಎಂಬ ದೇಶವಿದೆ. ಕರ್ನಾಟಕದ ಕಾಲುಭಾಗದಷ್ಟು ಜನಸಂಖ್ಯೆ ಮಾತ್ರ ಇರುವ ಈ ದೇಶ ಜಗತ್ತಿನ ಗಮನ ಸೆಳೆದದ್ದು 2002ರ ವಿಶ್ವಕಪ್ ಫುಟ್‌ಬಾಲ್‌ನಲ್ಲಿ. ವಿಶ್ವಚಾಂಪಿಯನ್ ಫ್ರಾನ್ಸ್ ಅನ್ನು ಮೊದಲ ಪಂದ್ಯದಲ್ಲೇ ಸೋಲಿಸಿದ್ದ ಸೆನೆಗಲ್ ತಂಡ ಕ್ವಾರ್ಟರ್ ಫೈನಲ್ ಹಂತಕ್ಕೇರಿತ್ತು. ಆಫ್ರಿಕಾ ಖಂಡದ ಇತರ ದೇಶಗಳಂತೆ ಇಲ್ಲಿಯೂ ಹಲವು ಭಾಷೆಗಳಿವೆ. ವೋಲೋಫ್, ಪುಲಾರ್, ಜೋಲಾ, ಮಂಡಿಂಕ ಇವುಗಳಲ್ಲಿ ಮುಖ್ಯವಾದುವು. ಇಲ್ಲಿನ ಆಡಳಿತ ಭಾಷೆ ಮಾತ್ರ ಫ್ರೆಂಚ್. ನಮ್ಮನ್ನು ಇಂಗ್ಲಿಷ್ ಕಾಡುವಂತೆಯೇ ಸೆನೆಗಲ್ ಸೇರಿದಂತೆ ಆಫ್ರಿಕಾ ಖಂಡದ ಹಲವು ದೇಶಗಳನ್ನು ಫ್ರೆಂಚ್ ಕಾಡುತ್ತದೆ. ಬರೆಹಗಾರರಿಂದ ಆರಂಭಿಸಿ ಆಡಳಿತಗಾರರ ತನಕ `ಮುಖ್ಯವಾಹಿನಿ’ಯಲ್ಲಿರಬೇಕಾದರೆ ಫ್ರೆಂಚ್ ಬಳಸಬೇಕಾದ ಅನಿವಾರ್ಯತೆ ಅವರದ್ದು. ನಮ್ಮಲ್ಲಿ ಇಂಗ್ಲಿಷ್ ಬಲ್ಲವರಿಗೆ ಸಿಗುವ ಮಹತ್ವವೇ ಇಲ್ಲಿ ಫ್ರೆಂಚ್ ಬಲ್ಲವರಿಗೆ ಸಿಗುತ್ತದೆ.
ಬೂಬಾಕರ್ ಬೋರಿಸ್ ದಿಯೋಪ್ ಮಾಕ್ವೇಜಿಯನ್ ದ್ವಂದ್ವವನ್ನು ಅನುಭವಿಸಿದ ಸೆನೆಗಲ್‌ನ ಲೇಖಕ. ಈತನದ್ದು ಮಾರ್ಕ್ವೆಜ್‌ಗೆ ವಿರುದ್ಧ ವಾದ ಸ್ಥಿತಿ. ಈತ ಬರೆಯಲು ತೊಡಗಿದ್ದು ಫ್ರೆಂಚ್‌ನಲ್ಲಿ. 1981ರಲ್ಲಿ ಸಾಹಿತ್ಯ ಜಗತ್ತಿಗೆ ಕಾಲಿರಿಸಿದ ಈತ ಫ್ರೆಂಚ್‌ನಲ್ಲಿ ಬರೆಯುವ ಪ್ರಖ್ಯಾತರಲ್ಲಿ ಒಬ್ಬ. ಕೆಲ ಕಾದಂಬರಿಗಳು, ಒಂದು ಚಿತ್ರಕಥೆ ಮತ್ತು ಮೂರು ಕಾದಂಬರಿ ಗಳನ್ನು ಬರೆದಿರುವ ಈತ ತನ್ನ ಅಂಕಣಗಳ ಮೂಲಕವೂ ಜನಪ್ರಿಯ.
1998ರಲ್ಲಿ ನರಮೇಧಗಳು ಮತ್ತು ಗಲಭೆಗಳಿಂದ ಕುಪ್ರಸಿದ್ಧವಾಗಿದ್ದ ರುವಾಂಡಾಕ್ಕೆ ಆಫ್ರಿಕನ್ ಲೇಖಕರ ತಂಡವೊಂದು ಭೇಟಿ ನೀಡಿತ್ತು. Rwanda, Writing lest we forget ಎಂಬ ಯೋಜನೆಯೊಂದರ ಅನ್ವಯ ಈ ಲೇಖಕರ ತಂಡ ಅಲ್ಲಿಗೆ ಹೋಗಿತ್ತು. ಬೂಬಾಕರ್ ಕೂಡಾ ಈ ತಂಡದ ಸದಸ್ಯನಾಗಿದ್ದ. ರುವಾಂಡಾದ ಕ್ರೌರ್ಯ ಬೂಬಾಕರ್‌ನಲ್ಲಿ ದೊಡ್ಡ ಬದಲಾವಣೆಯನ್ನೇ ಉಂಟು ಮಾಡಿತು. ಅಲ್ಲಿಯವರೆಗೂ ಫ್ರೆಂಚ್‌ನಲ್ಲಿ ಬರೆಯುತ್ತಿದ್ದ ಆತ ಇನ್ನು ಮುಂದೆ ತನ್ನ ಮಾತೃಭಾಷೆಯಾದ ವೋಲೋಫ್‌ನಲ್ಲಿ ಮಾತ್ರ ಬರೆಯಲು ತೀರ್ಮಾನಿಸಿದ.
ಇಂಥದ್ದೊಂದು ನಿರ್ಧಾರಕ್ಕೆ ಬಂದದ್ದನ್ನು ಆತ ವಿವರಿಸುವುದು ಹೀಗೆ `…ಅಲ್ಲಿ ನಡೆಯುತ್ತಿದ್ದ ನರಮೇಧ ದಿನಕ್ಕೆ ಹತ್ತು ಸಾವಿರ ಮಂದಿಯನ್ನು ಬಲಿತೆಗೆದುಕೊಳ್ಳುತ್ತಿತ್ತು. ಇದನ್ನು ಇನ್ನೂ ಮೂರು ತಿಂಗಳ ಕಾಲ ನಡೆಯಲು ಬಿಟ್ಟು ಏನನ್ನೂ ಮಾಡದಿದ್ದರೆ ಆಫ್ರಿಕಾ ಜಗತ್ತಿನ ಶಾಪಗ್ರಸ್ಥ ಪ್ರದೇಶಗಳಲ್ಲಿ ಒಂದಾಗುತ್ತದೆ. ನಾನೊಬ್ಬ ಬರೆಹಗಾರ. ನನ್ನದಲ್ಲದ ಯಾವುದೋ ಒಂದು ಭಾಷೆಯಲ್ಲಿ ಬರೆದು ಅದನ್ನು ಆಡುವ, ಬಳಸುವ ದೇಶಗಳಲ್ಲಿ ಬೌದ್ಧಿಕ ಚರ್ಚೆಗೆ ವಸ್ತುವಾಗುತ್ತಿದ್ದೇನೆ. ಆದರೆ ನನ್ನ ದೇಶದ ಮಟ್ಟಿಗೆ ಈ ಬರೆಹಗಳು ಏನೂ ಅಲ್ಲ. ಹೀಗನ್ನಿಸಿದ್ದೇ ತಡ ನಾನು ಇನ್ನು ಬರೆಯುವುದಿದ್ದರೆ ಮಾತೃಭಾಷೆಯಲ್ಲಿ ಮಾತ್ರ ಎಂದು ನಿರ್ಧರಿಸಿದೆ’.
ಬೂಬಾಕರ್‌ನ ಮಾತೃಭಾಷೆ ವೋಲೋಫ್. ಇದು ಸೆನೆಗಲ್‌ನ ಎರಡು ಪ್ರಮುಖ ಭಾಷೆಗಳಲ್ಲಿ ಒಂದು. ಮತ್ತೊಂದು ಪುಲಾರ್. ವೋಲೋಫ್ ಭಾಷೆಗೆ ನಾಲ್ಕು ಡಯಲೆಕ್ಟ್‌ಗಳಿವೆ. ಇವುಗಳಲ್ಲಿ ಎರಡನ್ನು ಆಡುವಷ್ಟು ಬೂಬಾಕರ್‌ಗೆ ಗೊತ್ತಿತ್ತು. ಒಂದೂ ಕಾಲು ಕೋಟಿ ಜನಸಂಖ್ಯೆಯ ದೇಶದಲ್ಲಿ ಬೂಬಾಕರ್‌ಗೆ ಗೊತ್ತಿದ್ದ ಡಯಲೆಕ್ಟ್‌ಗಳನ್ನು ಅರಿತಿದ್ದವರ ಸಂಖ್ಯೆ ಎಷ್ಟಿರಬಹುದು? ಇಷ್ಟರ ಮೇಲೆ ಸೆನೆಗಲ್‌ನ ಸಾಕ್ಷರತೆಯ ಪ್ರಮಾಣ ಕೇವಲ ಶೇಕಡಾ 39. ಫ್ರೆಂಚ್‌ನಲ್ಲಿ ಬರೆಯುವ ಮೂಲಕ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಲೇಖಕ ವೋಲೋಫ್ ನಲ್ಲಿ ಬರೆಯುವುದೆಂದರೆ ತನ್ನ ಓದುಗರಲ್ಲಿ ಶೇಕಡಾ 99 ಮಂದಿಯನ್ನೂ ಮರೆತುಬಿಡಬೇಕಷ್ಟೇ.
ಓದುಗರ ಸಂಖ್ಯೆಯ ಕುರಿತ ಭ್ರಮಯೆನ್ನೇನೋ ಬೂಬಾಕರ್ ಕಳಚಿಕೊಂಡ. ವೋಲೋಫ್‌ನಲ್ಲೇ ತನ್ನ ಕಾದಂಬರಿಯನ್ನು ಬರೆಯಲು ಹೊರಟಾಗ ಮತ್ತೊಂದು ಸವಾಲು ಎದುರಾಯಿತು. ಅಭಿವ್ಯಕ್ತಿಗೆ ಬೇಕಾದ ಪದಗಳೇ ಬೂಬಾಕರ್ ಬಳಿ ಇರಲಿಲ್ಲ. ಫ್ರೆಂಚ್ ತನಗೆ ಕೇವಲ ಅಭಿವ್ಯಕ್ತಿಯ ಭಾಷೆ ಮಾತ್ರವಾಗಿರಲಿಲ್ಲ. ಅದು ಗ್ರಹಿಕೆಯ ಭಾಷೆಯೂ ಆಗಿತ್ತೆಂದು ಅವನಿಗೆ ಅರಿವಾಯಿತು. ತನ್ನೊಳಗಿನ ಫ್ರೆಂಚ್‌ನ ಜತೆಗೆ ಗುದ್ದಾಡುತ್ತಾಲೇ ಬೂಬಾಕರ್ ತನ್ನ ಮೊದಲ ವೋಲೋಫ್ ಕಾದಂಬರಿಯನ್ನು ಬರೆದು ಮುಗಿಸಿದ.
ಈ ಕ್ರಿಯೆಯ ಮಧ್ಯೆಯೇ ಎದುರಾದುದು ಮತ್ತೊಂದು ಸಮಸ್ಯೆ. ಪುಸ್ತಕ ಬರೆದರಷ್ಟೇ ಸಾಕೇ. ಅದನ್ನು ಮುದ್ರಿಸಿ ಮಾರಾಟವನ್ನೂ ಮಾಡಬೇಕಲ್ಲ. ವೋಲೋಫ್ ಭಾಷೆಯಲ್ಲಿ ಸಾಹಿತ್ಯ ರಚನೆ ನಿಂತು 30 ವರ್ಷಗಳು ಕಳೆದಿದ್ದವು. ಇಷ್ಟರ ಮೇಲೆ ವೋಲೋಫ್ ಓದಲು ಗೊತ್ತಿದ್ದವರಿಗೆ ಹೊಟ್ಟೆಗೇ ಇರಲಿಲ್ಲ. ಓದಲು ಗೊತ್ತಿದ್ದ ಹಣವಂತರಿಗೆ ಪುಸ್ತಕ ಖರೀದಿಸುವುದಕ್ಕಿಂತ ಹೊಸ ಕಾರು ಖರೀದಿಸುವುದರಲ್ಲೇ ಹೆಚ್ಚಿನ ಆಸಕ್ತಿ. ಸಾಮಾನ್ಯರಾಗಿದ್ದರೆ ಇದು ತನ್ನೊಳಗಿನ ಬರೆಹಗಾರನ ಆತ್ಮಹತ್ಯೆ ಎಂದು ಭಾವಿಸುತ್ತಿದ್ದರೇನೋ. ಬೂಬಾಕರ್ ಮಾತ್ರ ಎದೆಗುಂದಲಿಲ್ಲ. Doomi Golo ಎಂಬ ಕಾದಂಬರಿ ಪೂರ್ಣಗೊಂಡು ಪ್ರಕಟ ವಾಯಿತು. ಮೊದಲ ಆವೃತ್ತಿಯ 3000 ಪ್ರತಿಗಳು ಮಾರಾಟವಾದವು. ಎರಡನೇ ಆವೃತ್ತಿಯ ಮುದ್ರಣಕ್ಕೆ ಸರಕಾರವೇ ಧನ ಸಹಾಯ ಮಾಡಿತು. ಎಂಟು ವರ್ಷಗಳ ನಂತರ ಈ ಕಾದಂಬರಿಯ ಫ್ರೆಂಚ್ ಮತ್ತು ಇಂಗ್ಲಿಷ್ ಅನುವಾದಗಳೂ ಪ್ರಕಟವಾದವು.
Doomi Golo ಕಾದಂಬರಿ ಸೆನೆಗಲ್‌ನ ಸಾಹಿತ್ಯ ಲೋಕವನ್ನೇ ಬದ ಲಾಯಿಸಿಬಿಟ್ಟಿತು. ಸಾಹಿತ್ಯ ರಚನೆ ನಿಂತೇ ಹೋಗಿದ್ದ ವೋಲೋಫ್, ಪುಲಾರ್, ಜೋಲಾ, ಮಂಡಿಂಕ ಭಾಷೆಗಳಲ್ಲಿ ಸಾಹಿತ್ಯ ರಚಿಸುವ ಹೊಸ ತಲೆಮಾರೇ ಹುಟ್ಟಿಕೊಂಡಿತು. ಈ ಭಾಷೆಗಳ ಪುಸ್ತಕಗಳೂ ಮಾರಾಟವಾಗ ತೊಡಗಿದವು. ಗೂಗಿ ಥಿಯಾಂಗೋ ಆರಂಭಿಸಿದ್ದ `ಮಾತೃಭಾಷೆಯ ಬರೆಹ’ ಆಂದೋ ಲನಕ್ಕೆ ಬೂಬಾಕರ್‌ನ ಪ್ರಯತ್ನ ವೇಗವರ್ಧಕ ವಾಯಿತು. ಕೇವಲ ಆಫ್ರಿಕನ್ ದೇಶಗಳೊಳಗಷ್ಟೇ ಇದ್ದ ಈ ಮಾತೃಭಾಷಾ ಬರೆಹದ ಆಂದೋಲನ ವಲಸೆ ಹೋಗಿದ್ದವರ ಮಟ್ಟಕ್ಕೂ ವ್ಯಾಪಿಸಿತು. ಯೂರೋಪಿನಿಂದ ಅಮೆರಿಕದವರೆಗೂ ವ್ಯಾಪಿಸಿದ್ದ ಆಫ್ರಿಕನ್ ವಲಸಿಗ ಯುವಕರು ತಮ್ಮ ಭಾಷೆಗಳಲ್ಲಿ, ತಮ್ಮದೇ ಡಯಲೆಕ್ಟುಗಳಲ್ಲಿ ಈಗ ಬರೆಯಲಾರಂಭಿಸಿದ್ದಾರೆ.
* * *
Doomi Golo ಕಾದಂಬರಿಯಲ್ಲಿ ಮಾರ್ಕ್ವೇಜಿಯನ್ ದ್ವಂದ್ವಕ್ಕೆ ಉತ್ತರವಾಗುವಂಥ ಒಂದು ರೂಪಕವಿದೆ. ಇದು ಇಡೀ ಕಾದಂಬರಿಯ ಧ್ವನಿಯೂ ಹೌದು. ಎಲ್ಲೋ ಒಂದು ದೊಡ್ಡ ನಿಲುವುಗನ್ನಡಿ-ಅದು ಎಲ್ಲಿಯೂ ಇರಬಹುದು. ಅದರ ಎದುರು ಎರಡು ಗೊರಿಲ್ಲಾಗಳು. ಕನ್ನಡಿಯಲ್ಲಿ ಕಂಡ ತಮ್ಮ ಪ್ರತಿಬಿಂಬದ ಮೇಲೆ ಅವು ದಾಳಿ ಮಾಡುತ್ತವೆ. ಈ ದಾಳಿಯಲ್ಲಿ ಕನ್ನಡಿ ಒಡೆದು ಅದರ ಚೂಪಾದ ತುಂಡುಗಳು ಚುಚ್ಚಿ ಗೊರಿಲ್ಲಾಗಳು ಸಾಯುತ್ತವೆ. `ಅನ್ಯ’ದ ಕುರಿತ ಭಯ, ಸಿಟ್ಟು, ತಿರಸ್ಕಾರಗಳೆಲ್ಲವೂ ನಮ್ಮ ಬಗೆಗಿನ ಭಾವನೆಗಳೇ ಹೊರತು ಬೇರೇನೂ ಅಲ್ಲ. ನಾವು ಇಂಗ್ಲಿಷ್‌ಗೆ ಭಾವುಕವಾಗಿ ಪ್ರತಿಕ್ರಿಯಿಸುವ ವಿಧಾನಕ್ಕೂ ಗೊರಿಲ್ಲಾ ಗಳು ಕನ್ನಡಿಯಲ್ಲಿ ತಮ್ಮದೇ ಪ್ರತಿಬಿಂಬಗಳಿಗೆ ಪ್ರತಿಕ್ರಿಯಿಸಿದ್ದಕ್ಕೂ ವ್ಯತ್ಯಾಸವೇನೂ ಇಲ್ಲ. ಕನ್ನಡಿಯ ಮೇಲಿನ ದಾಳಿ ನಮ್ಮನ್ನೇ ಇಲ್ಲವಾಗಿಸುತ್ತದೆ. ಪ್ರತಿಬಿಂಬವೆಂದು ತಿಳಿದರೆ ನಮ್ಮ ಸಮಸ್ಯೆ ಅರ್ಥವಾಗುತ್ತದೆ.