ಹರಿದಾಸ್ ಮುಂದ್ರಾ ಹಗರಣಕ್ಕೆ ಈಗ ಅರವತ್ತು ತುಂಬುತ್ತಿದೆ. ಸ್ವತಂತ್ರ ಭಾರತದ ಮೊದಲ ಹಣಕಾಸು ಹಗರಣ ಎನ್ನಬಹುದಾದ ಈ ಪ್ರಕರಣ ಭಾರತದ ಭ್ರಷ್ಟಾಚಾರದ ಇತಿಹಾಸದಲ್ಲೊಂದು ಪ್ರಮುಖ ಸ್ಥಾನ ಪಡೆದುಕೊಂಡಿದೆ. ಈ ಪ್ರಕರಣ ಬಯಲಿಗೆ ತಂದದ್ದು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರ ಅಳಿಯ ಫಿರೋಜ್ ಗಾಂಧಿ. ಈ ಪ್ರಕರಣ ಮಾವ ಮತ್ತು ಅಳಿಯನ ಮಧ್ಯೆ ಬಹುದೊಡ್ಡ ಭಿನ್ನಾಭಿಪ್ರಾಯಕ್ಕೂ ಕಾರಣವಾಗಿತ್ತು. ಈ ಭಿನ್ನಾಭಿಪ್ರಾಯಗಳೇನೇ ಇದ್ದರೂ ನೆಹರು ಈ ಹಗರಣದ ತನಿಖೆಗೆ ನ್ಯಾಯಮೂರ್ತಿ ಎಂ.ಸಿ. ಚಾಗ್ಲಾ ನೇತೃತ್ವದ ಆಯೋಗವೊಂದನ್ನು ರಚಿಸಿದ್ದರು. ಆಯೋಗದ ಶಿಫಾರಸನ್ನು ಕಾರ್ಯರೂಪಕ್ಕೂ ತಂದರು.
ಹಗರಣದ ಸ್ವರೂಪ ಹೀಗಿದೆ. ಭಾರತೀಯ ಜೀವ ವಿಮಾ ನಿಗಮ ಆಗಷ್ಟೇ ಸ್ಥಾಪನೆಯಾಗಿತ್ತು. ಎಲ್ಲಾ ವಿಮಾ ಕಂಪೆನಿಗಳಂತೆಯೇ ಭಾರತೀಯ ಜೀವ ವಿಮಾ ನಿಗಮವೂ (ಎಲ್ಐಸಿ) ವಿಮಾದಾರರಿಂದ ಸಂಗ್ರಹಿಸಿದ ಹಣವನ್ನು ಲಾಭದಾಯಕ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುತ್ತಿತ್ತು. ಇದರ ಭಾಗವಾಗಿ Richardson Cruddas, Jessops, Smith Stanistreet, Osler Lamps, Agnelo Brothers ಮತ್ತು British India Corporation. ಎಂಬ ಕಂಪೆನಿಗಳ ಷೇರುಗಳನ್ನು ಖರೀದಿಸಿತು. ಹಗರಣದ ಮೂಲವಿರುವುದು ಖರೀದಿಗಳಲ್ಲಿ. ಆರೂ ಕಂಪೆನಿಗಳು ಕೊಲ್ಕತ್ತಾ ಮೂಲದ ಉದ್ಯಮಿ ಹರಿದಾಸ್ ಮುಂದ್ರಾ ಎಂಬಾತನಿಗೆ ಸೇರಿದ್ದವು. ಎಲ್ಲಾ ಕಂಪೆನಿಗಳೂ ಲಾಭದಾಯಕವಾಗಿರಲಿಲ್ಲ ಎಂಬುದಷ್ಟೇ ಅಲ್ಲದೇ ತೀವ್ರ ಹಣಕಾಸಿನ ಸಂಕಷ್ಟವನ್ನೂ ಎದುರಿಸುತ್ತಿದ್ದವು. ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆ ನೀಡಿ ಈ ಕಂಪೆನಿಗಳ ಷೇರುಗಳನ್ನು ಎಲ್ಐಸಿ ಖರೀದಿಸಿತ್ತು. ಆ ಕಾಲಕ್ಕೇ ಈ ಮೊತ್ತ 1.24 ಕೋಟಿ ರೂಪಾಯಿಗಳಷ್ಟಿತ್ತು. ಈ ಖರೀದಿಗಳ ಹಿಂದೆ ಹರಿದಾಸ್ ಮುಂದ್ರಾ ಕೈವಾಡವಿತ್ತು. ಹಗರಣವನ್ನು ಫಿರೋಜ್ ಗಾಂಧಿ ಸಂಸತ್ತಿನಲ್ಲಿ ಪ್ರಸ್ತಾಪಿಸಿದಾಗ ಅಂದಿನ ಹಣಕಾಸು ಸಚಿವ ಕೆ.ಕೆ. ಕೃಷ್ಣಮಾಚಾರಿ `ಇದು ಸಾಧ್ಯವೇ ಇಲ್ಲ’ ಎಂದು ಅಲ್ಲಗಳೆದಿದ್ದರು. ಮುಂದೆ ಅವರೇ ಹಗರಣ ನಡೆದಿರುವುದನ್ನು ಒಪ್ಪಿಕೊಂಡರು. ಜವಹರಲಾ್ ನೆಹರು ಆರಂಭದಲ್ಲಿ ಮುಜುಗರಕ್ಕೀಡಾದರೂ ಜನನಾಯಕನ ಧೈರ್ಯ ತೋರಿದರು. ನ್ಯಾಯಮೂರ್ತಿ ಎಂ.ಸಿ. ಚಾಗ್ಲಾ ನೇತೃತ್ವದ ಆಯೋಗಕ್ಕೆ ತನಿಖೆಯನ್ನು ಒಪ್ಪಿಸಿದರು.
ಎಂ.ಸಿ. ಚಾಗ್ಲಾ, ಪಾರದರ್ಶಕತೆ ಮತ್ತು ನಿಷ್ಪಕ್ಷಪಾತ ಧೋರಣೆಗೆ ಮಾದರಿ ಎನಿಸಬಹುದಾದ ತನಿಖೆ ನಡೆಸಿ ಅಂದಿನ ಹಣಕಾಸು ಕಾರ್ಯದರ್ಶಿ ಎಚ್.ಎಂ. ಪಟೇಲ್, ಎಲ್ಐಸಿಯ ಇಬ್ಬರು ಅಧಿಕಾರಿಗಳು ಮತ್ತು ಹಣಕಾಸು ಸಚಿವ ಕೆ.ಕೆ. ಕೃಷ್ಣಮಾಚಾರಿ ಈ ಅಕ್ರಮ ಷೇರು ಖರೀದಿಗಳಿಗೆ ಜವಾಬ್ದಾರರು ಎಂಬ ನಿರ್ಣಯಕ್ಕೆ ಬಂದರು. ಹಣಕಾಸು ಕಾರ್ಯದರ್ಶಿ ಮತ್ತು ಎ್ಐಸಿಯ ಇಬ್ಬರು ಅಧಿಕಾರಿಗಳು ಈ ಖರೀದಿಗೆ ನೇರವಾಗಿ ಜವಾಬ್ದಾರರಾಗಿದ್ದರೆ ಹಣಕಾಸು ಸಚಿವರು ಸಾಂವಿಧಾನಿಕವಾಗಿ ಜವಾಬ್ದಾರಿ ಹೊರ ಬೇಕಾಗುತ್ತದೆ ಎಂದು ಚಾಗ್ಲಾ ಹೇಳಿದ್ದರು. ಕೆ.ಕೆ. ಕೃಷ್ಣಮಾಚಾರಿ `ಸಾಂವಿಧಾನಿಕ ಜವಾಬ್ದಾರಿ’ ಹೊತ್ತು ರಾಜೀನಾಮೆ ನೀಡಿದರು. ಉಳಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಯಿತು. ಪ್ರಕರಣದ ರೂವಾರಿ ಹರಿದಾಸ್ ಮುಂದ್ರಾನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದೂ ಆಯಿತು.
* * *
ಜವಹರಲಾ್ ನೆಹರು ಪ್ರಧಾನಿಯಾಗಿದ್ದಾಗಲೇ ಇಹಲೋಕ ತ್ಯಜಿಸಿದರು. ಕೊನೆಗೊಂದು ದಿನ ಇಂದಿರಾಗಾಂಧಿ ಪ್ರಧಾನಿಯಾದರು. ಹರಿದಾಸ್ ಮುಂದ್ರಾ ಹಗರಣದಲ್ಲಿ ಆರೋಪಿಯಾಗಿದ್ದ ಹಣಕಾಸು ಕಾರ್ಯದರ್ಶಿ ಎಚ್.ಎಂ. ಪಟೇಲ್ ಸ್ವತಂತ್ರ ಪಾರ್ಟಿ ಸೇರಿ ರಾಜಕಾರಣಿಯಾದರು. ಇಂದಿರಾ ಸರಕಾರದ ಭ್ರಷ್ಟತೆಯ ವಿರುದ್ಧ ಜಯಪ್ರಕಾ್ ನಾರಾಯಣ್ ದೊಡ್ಡ ಆಂದೋಲನವನ್ನೇ ನಡೆಸಿದರು. ಭಾರತದ ಜನತೆ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರಕಾರವೊಂದನ್ನು ಆರಿಸಿದರು. ಮೊರಾರ್ಜಿ ದೇಸಾಯಿ ಮೊದಲ ಕಾಂಗ್ರೆಸ್ಸೇತರ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸ್ವತಂತ್ರ ಭಾರತದ ಮೊದಲ ಬೃಹ್ ಹಣಕಾಸು ಹಗರಣದ ಆರೋಪಿ ಎಚ್ ಎಂ ಪಟೇಲ್ ಸ್ವತಂತ್ರ ಭಾರತದ ಮೊದಲ ಕಾಂಗ್ರೆಸ್ಸೇತರ ಸರಕಾರದಲ್ಲಿ ಹಣಕಾಸು ಮಂತ್ರಿಯಾಗಿದ್ದರು!
ಎಲ್ಐಸಿ ಯಾವ ಷೇರುಗಳನ್ನು ಖರೀದಿಸಬೇಕು ಎಂಬ ನಿರ್ಧಾರ ಕೈಗೊಳ್ಳುವ ಸಮಿತಿಯಲ್ಲಿ ಎಚ್.ಎಂ. ಪಟೇಲ್ ಅವರಿಗೆ ಬಹು ಮುಖ್ಯ ಪಾತ್ರವಿತ್ತು. ಯಾರು ಎಷ್ಟೇ ನಿರಾಕರಿಸಿದರೂ ಈ ಸತ್ಯವನ್ನು ಯಾರಿಗೂ ಮುಚ್ಚಿಡಲು ಸಾಧ್ಯವಿರಲಿಲ್ಲ. ಭ್ರಷ್ಟಾಚಾರವನ್ನೇ ಚುನಾವಣಾ ವಿಷಯವನ್ನಾಗಿಸಿಕೊಂಡಿದ್ದವರು ಮಾತ್ರ ಈ ವಿಷಯವನ್ನು ಮರೆತಿದ್ದರು. ಎಚ್.ಎಂ. ಪಟೇ್ ಹಣಕಾಸು ಸಚಿವರಾದ ನಂತರ ಅವರನ್ನು `ಪ್ರಾಮಾಣಿಕ ಅಧಿಕಾರಿ’, `ದೇದೀಪ್ಯಮಾನ ಸೇವಾ ದಾಖಲೆ ಹೊಂದಿದವರು’ ಎಂದೆಲ್ಲಾ ಸಮರ್ಥಿಸಿಕೊಳ್ಳಲಾಯಿತು.
* * *
ಈಗ ಕರ್ನಾಟಕದ ವಿಧಾನಸಭೆಗೆ ಚುನಾವಣೆಗಳು ನಡೆಯುತ್ತಿವೆ. ವಾಸ್ತವದಲ್ಲಿ ಚುನಾವಣಾ ವಿಷಯ ಎಂಬುದೊಂದಿಲ್ಲ. ಆದರೆ ಬಿಜೆಪಿ ಇದನ್ನು ಒಪ್ಪುವುದಿಲ್ಲ. ಬಿಜೆಪಿ – ಜೆಡಿಎಸ್ ಮೈತ್ರಿಕೂಟದ ಸರಕಾರ ಪತನವಾದ ದಿನದಿಂದಲೂ ಅದು ನಡೆಸುತ್ತಿರುವ ಪ್ರಚಾರ ಅಭಿಯಾನದಲ್ಲಿ ಮೇಲಿಂದ ಮೇಲೆ ಎರಡು ವಿಷಯಗಳನ್ನು ಪ್ರಸ್ತಾಪಿಸುತ್ತಿದೆ. ಒಂದು ಜೆಡಿಎಸ್ ನ ವಿಶ್ವಾಸ ದ್ರೋಹ ಮತ್ತೊಂದು ಗಣಿ ಲಂಚ ಹಗರಣ. ಬಿಜೆಪಿಯ ಮಟ್ಟಿಗೆ ತಾತ್ವಿಕವಾಗಿಯಾದರೂ ಭ್ರಷ್ಟಾಚಾರ ಮತ್ತು ವಿಶ್ವಾಸ ದ್ರೋಹಗಳೆರಡೂ ಚುನಾವಣಾ ವಿಷಯಗಳು.
ಕೆಲ ಕಾಲದ ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಪಿಎಚ್ ಡಿ ಹಗರಣವೊಂದರಲ್ಲಿ ಸಿಕ್ಕಿಬಿದ್ದಿದ್ದರು. ಈ ಪ್ರಾಧ್ಯಾಪಕರ ಪಿಎಚ್ ಡಿ ವಿದ್ಯಾರ್ಥಿಯೊಬ್ಬ ನಡೆಸಿದ ಕೃತಿಚೌರ್ಯ ಹಗರಣದ ಕೇಂದ್ರ ಬಿಂದು. ಈ ಶಿಷ್ಯೋತ್ತಮ ಕೃತಿ ಚೌರ್ಯ ಮಾಡಿದ್ದು ತನ್ನ ಮಾರ್ಗದರ್ಶಕರ ಪಿಎ್ಡಿ ಪ್ರಬಂಧವನ್ನು. ತಮ್ಮದೇ ಮಹಾಪ್ರಬಂಧವನ್ನೇ ಶಿಷ್ಯ ಕದ್ದಿದ್ದರೂ ಅದರ ಕುರಿತು ಗುರುಗಳು ತೆಪ್ಪಗಿದ್ದರು. ಅಂದರೆ ಕದಿಯುವಿಕೆಗೆ ಅವರ ಒಪ್ಪಿಗೆಯೂ ಇತ್ತು. ಈ ಕುರಿತಂತೆ ಮೂರು ಸಮಿತಿಗಳು ತನಿಖೆ ನಡೆಸಿದವು. ಕೊನೆಗೆ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ರಾಜ್ಯಪಾಲರು `ಮಾರ್ಗದರ್ಶಕ’ ಪ್ರಾಧ್ಯಾಪಕರನ್ನು ಅಮಾನತುಗೊಳಿಸಿದ್ದರು. ಈ ಪಿಎಚ್ ಡಿ ಹಗರಣದ ವಿರುದ್ಧ ಬಿಜೆಪಿಯ ವಿದ್ಯಾರ್ಥಿ ವಿಭಾಗದಂತೆ ಕಾರ್ಯಾಚರಿಸುವ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಪ್ರತಿಭಟನೆ ನಡೆಸಿತ್ತು. ಈ ಹಗರಣ ಬೆಳಕಿಗೆ ಬಂದ ದಿನಗಳಲ್ಲೇ ಈ ಪ್ರಾಧ್ಯಾಪಕರು ಟಿ.ವಿ. ಕ್ಯಾಮೆರಾಗಳ ಎದುರು ಕುಲಾಧಿಪತಿಗಳಾಗಿದ್ದ ರಾಜ್ಯಪಾಲರನ್ನು ವಾಚಾಮಗೋಚರವಾಗಿ ನಿಂದಿಸಿದ್ದರು.
ಈ ಪ್ರಾಧ್ಯಾಪಕರೀಗ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಗಣಿ ಲಂಚ ಹಗರಣ ಮತ್ತು ವಿಶ್ವಾಸದ್ರೋಹಗಳನ್ನು ಚುನಾವಣಾ ವಿಷಯವನ್ನಾಗಿಸಲು ಶತಪ್ರಯತ್ನ ನಡೆಸುತ್ತಿರುವ ಬಿಜೆಪಿ ಅವರಿಗೆ ಬೆಂಗಳೂರಿನ ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡುವುದಾಗಿ ಘೋಷಿಸಿದೆ. ಈ ಟಿಕೆಟ್ ಸೇರಿದಂತೆ ತನ್ನ ಒಟ್ಟು ಟಿಕೆಟ್ ನೀಡಿಕೆ ನೀತಿಯೇನು ಎಂಬುದನ್ನೂ ಬಿಜೆಪಿ ಸ್ಪಷ್ಟ ಪಡಿಸಿದೆ – `ಗೆಲ್ಲುವ ಕುದುರೆಗಳಿಗೆ ಟಿಕೆಟ್’.
ಈ ನೀತಿಯ ಬೆಳಕಿನಲ್ಲಿ ಕೃತಿಚೌರ್ಯದ ಮಾರ್ಗದರ್ಶಕರಿಗೆ ಟಿಕೆಟ್ ನೀಡಿರುವುದನ್ನು ಹೇಗೆ ವಿಶ್ಲೇಷಿಸುವುದು? ಇದಕ್ಕೆ ಇರುವ ಉತ್ತರ ಸರಳ. ಪುಲಿಕೇಶಿ ನಗರದ ಜನರು ಕೃತಿಚೌರ್ಯವನ್ನು ಸಮರ್ಥಿಸುತ್ತಾರೆ. ರಾಜ್ಯಪಾಲರು ನಿಯಮಬದ್ಧವಾಗಿ ನಡೆದುಕೊಳ್ಳುವುದು ತಪ್ಪು ಎಂದು ಭಾವಿಸುತ್ತಾರೆ. ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ತಮ್ಮ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ ಕುಲಾಧಿಪತಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನ್ನು ಬೆಂಬಲಿಸುತ್ತಾರೆ! ಬಿಜೆಪಿ ಟಿಕೆಟ್ ನೀಡಿಕೆಯ ಹಿಂದಿನ ನೀತಿಯ ಅರ್ಥ ಇದೇ ಆಗಿದ್ದರೆ ಅದು ಖಂಡಿತವಾಗಿಯೂ ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದ ಮತದಾರರನ್ನು ಅವಮಾನಿಸುತ್ತಿದೆ.
* * *
ಚುನಾವಣೆಗಳಲ್ಲಿ ಗೆಲ್ಲುವುದಕ್ಕೂ ನೈತಿಕತೆಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಈವರೆಗಿನ ಹಲವು ಚುನಾವಣೆಗಳು ಸಾಬೀತು ಮಾಡಿವೆ. ಆದುದರಿಂದ ಪುಲಿಕೇಶಿ ನಗರದ ಮತದಾರರು `ಕೃತಿಚೌರ್ಯ’ವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಕೊಳ್ಳೋಣ. ಬಿಜೆಪಿ ಸರಕಾರ ರಚಿಸುವಷ್ಟು ಸ್ಥಾನಗಳನ್ನು ಗಳಿಸಿ ಕೃತಿಚೌರ್ಯದ ಮಾರ್ಗದರ್ಶಕರೂ ಗೆದ್ದುಬಿಟ್ಟರೆ?
ಅವರು ಶಿಕ್ಷಣ ಮಂತ್ರಿಯಾಗಬಹುದು. ಎಚ್.ಎಂ. ಪಟೇಲರನ್ನು ಹೊಗಳಲು ಬಳಸಿದ ಅದೇ ಶಬ್ದಗಳನ್ನು ಈ ಕೃತಿಚೌರ್ಯದ ಮಾರ್ಗದರ್ಶಕರನ್ನು ಹೊಗಳುವುದಕ್ಕೂ ಬಳಸಬಹುದು. ಜತೆಗೆ `ಪಿಎಚ್ ಡಿ ವಿದ್ಯಾರ್ಥಿಗಳ ಕೃತಿಚೌರ್ಯ ಸ್ವಾತಂತ್ರಕ್ಕಾಗಿ ಹೋರಾಡಿದ ಪ್ರಾಧ್ಯಾಪಕ’ ಎಂದೂ ಸೇರಿಸಿಕೊಳ್ಳಬಹುದು