ಕರ್ನಾಟಕದ ವಿಧಾನಸಭಾ ಚುನಾವಣೆಗಳು ಘೋಷಣೆಯಾದ ತಕ್ಷಣ ಬಂದ ಬೌದ್ಧಿಕ ಜಗತ್ತಿನ ಪ್ರತಿಕ್ರಿಯೆಗಳಲ್ಲಿ ಮೊದಲನೆಯದ್ದು ಮತ್ತು ಬಹಳ ಮುಖ್ಯವಾದುದು ಡಾ.ಯು.ಆರ್. ಅನಂತಮೂರ್ತಿಯವರದ್ದು. `ಯಾರು ಬಂದರೇನು? ಎಲ್ಲರೂ ಭ್ರಷ್ಟರೇ…’ ಎಂಬ ಸಿನಿಕ ಪ್ರತಿಕ್ರಿಯೆಯ ಬದಲಿಗೆ ಅವರು ರಚನಾತ್ಮಕವಾದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು. ಹನ್ನೊಂದು ಅಂಶಗಳ ಜನತಾ ಪ್ರಣಾಳಿಕೆಯೊಂದರ ಕರಡನ್ನು ಬಿಡುಗಡೆ ಮಾಡಿ ಇದಕ್ಕೆ ಇನ್ನಷ್ಟು ಅಂಶಗಳನ್ನು ಸೇರಿಸಿ ಪೂರ್ಣಗೊಳಿಸೋಣ ಎಂದರು. ಈ ಪ್ರಣಾಳಿಕೆಗೆ ಬಂದ ಪ್ರತಿಕ್ರಿಯೆಗಳು ಬಹಳ ಕುತೂಹಲಕಾರಿ. ರಾಜಕೀಯ ಪಕ್ಷಗಳಿಗೆಲ್ಲಾ ಒಂದೊಂದು ಪ್ರಣಾಳಿಕೆಯಿದ್ದಂತೆ ಜನತೆಗೂ ಒಂದು ಪ್ರಣಾಳಿಕೆ ಇರುತ್ತದೆ ಎಂಬುದನ್ನು ಹೇಳಿದ ಅನಂತಮೂತಿರ್ಯವರ ನಿಲುವನ್ನು ಹಲವರು ಶ್ಲಾಘಿಸಿದರು. ವಿವಿಧ ಚಳವಳಿಗಳಲ್ಲಿ ತೊಡಗಿಕೊಂಡಿರುವ ಹಲವರು, ರಾಜಕಾರಣ ಪರಿಶುದ್ಧವಾಗಿರಬೇಕೆಂದು ಬಯಸುವವರು ಅನಂತಮೂರ್ತಿಯವರು ಮಂಡಿಸಿದ ಹನ್ನೊಂದು ಸೂತ್ರಗಳಿಗೆ ಪೂರಕವಾಗಿ ಒಂದಷ್ಟು ಅಂಶಗಳನ್ನು ಸೇರಿಸಿದರು.
ಇನ್ನೊಂದು ವರ್ಗ ಅನಂತಮೂರ್ತಿಯವರನ್ನು ಮನಸೋ ಇಚ್ಛೆ ಹಳಿಯಲಾರಂಭಿಸಿತು. ಅದು ಈಗಲೂ ಮುಂದುವರಿದಿದೆ. ಹೀಗೆ ಬೈಯುವವರಲ್ಲಿ ಎರಡು ಬಗೆ. ಒಂದು ವರ್ಗದವರು ಅನಂತಮೂತಿರ್ಯವರು ಏನು ಮಾಡಿದರೂ ಅದನ್ನು ಟೀಕಿಸಬೇಕೆಂದು ಪಣ ತೊಟ್ಟವರು. ಮತ್ತೊಂದು ವರ್ಗದವರಿಗೆ ಈ ಬಗೆಯ ಹಟವೇನೂ ಇಲ್ಲ. ಅವರ ದೃಷ್ಟಿಯಲ್ಲಿ ರಾಜಕಾರಣ ಎಂಬುದು ಜ್ಞಾನಪೀಠ ಪುರಸ್ಕೃತರಿಗೆ ಹೇಳಿಕೊಳ್ಳುವಂಥದ್ದಲ್ಲ. ಅದು ಕೊಳಕು ರಾಡಿ. ಅದರ ಆಗುಹೋಗುಗಳಿಗೆ ಸಾಹಿತಿಯೊಬ್ಬ ಪ್ರತಿಕ್ರಿಯಿಸುವುದು ಆತನ ವ್ಯಕ್ತಿತ್ವಕ್ಕೆ ಶೋಭಿಸುವುದಿಲ್ಲ.
ಈ ಎರಡೂ ಗುಂಪಿಗೆ ಸೇರದ ಮತ್ತೊಂದು ವರ್ಗವಿದೆ. ಇದನ್ನು ಸಿನಿಕರ ಬಳಗ ಎಂದು ಗುರುತಿಸಬಹುದೇನೋ. ಈ ಸಿನಿಕರ ಬಳಗ ಅನಂತಮೂರ್ತಿಯವರು ಜನರೆದುರು ಇಟ್ಟ ಕರಡು ಪ್ರಣಾಳಿಕೆಯ ಹನ್ನೊಂದು ಅಂಶಗಳಲ್ಲಿ `ಮೀಸಲಾತಿ ಪಡೆದವರಿಗೆ ಮತ್ತೆ ಮೀಸಲಾತಿ ಬೇಡ’ ಎಂಬ ಅಂಶವೊಂದನ್ನುಳಿದು ಉಳಿದೆಲ್ಲವೂ ಅಪ್ರಾಯೋಗಿಕ. ಅತಿ ಆದರ್ಶದ ಮಾತುಗಳು ಎಂದು ನಿರಾಕರಿಸಿಬಿಟ್ಟಿತು.
* * *
ಅನಂತಮೂರ್ತಿಯವರ ಪ್ರಣಾಳಿಕೆಯ ಹನ್ನೊಂದು ಅಂಶಗಳು ಈ ಕೆಳಗಿನಂತೆ ಸಂಕ್ಷೇಪಿಸಬಹುದು.
1.ಅದಿರನ್ನು ಮಾರುವ ಗಣಿಗಾರಿಕೆ ನಿಲ್ಲಬೇಕು.
2.ಎಲ್ಲ ಮಕ್ಕಳಿಗೂ ಹತ್ತನೇ ತರಗತಿಯ ತನಕವಾದರೂ ಉತ್ಕೃಷ್ಟ ಗುಣಮಟ್ಟದ ಸಾಮಾನ್ಯ ಶಾಲೆಗಳಲ್ಲಿ ಶಿಕ್ಷಣ ದೊರೆಯಬೇಕು.
3.ನಮ್ಮ ನಗರಗಳು ಬೆಳೆಯುವಾಗ ಅವು ವೃದ್ಧರಿಗೂ ಅಂಗವಿಕಲರಿಗೂ ಮಕ್ಕಳಿಗೂ ಅಹ್ಲಾದಕರವಾಗಿರಬೇಕು. ಎಲ್ಲೆಲ್ಲೂ ಸಾರ್ವಜನಿಕ ಉದ್ಯಾನವನಗಳು. ಗ್ರಂಥಾಲಯಗಳು, ರಸ್ತೆಗಳನ್ನು ದಾಟಲು ಮುಕ್ತ ಅವಕಾಶ, ಸೈಕಲ್‌ನಲ್ಲಿ ಓಡಾಡುವವರಿಗೆ ಅವರದೇ ಮಾರ್ಗಗಳು ಬೇಕು.
4.ಬಡಪಾಯಿಗಳಾದ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಕೆಲಸಗಳನ್ನು ಪಡೆಯುವುದಕ್ಕೆ ಅಗತ್ಯವಾದ ಶಿಕ್ಷಣ ಮತ್ತು ಮೀಸಲಾತಿ ಬೇಕು.
5.ಈಗಾಗಲೇ ಮೀಸಲಾತಿ ಪಡೆದವರ ಮಕ್ಕಳಿಗೆ ಮೀಸಲಾತಿ ಸೌಲಭ್ಯ ಬೇಡ. ಬದಲಿಗೆ ಆ ವರ್ಗಗಳಲ್ಲಿ ಈವರೆಗೂ ಏನೂ ಸಿಗದವರಿಗೆ ಈ ಸವಲತ್ತು ದೊರೆಯಬೇಕು.
6.ವೋಟುಗಳಿಸಲು ಕೋಮು, ಭಾಷೆ, ಜಾತಿಗಳ ನಡುವೆ ವೈಷಮ್ಯವನ್ನು ಬೆಳೆಸುವ ಮಾಧ್ಯಮಗಳ ಲಾಭಕೋರತನದ ಹವಣಿಕೆಗಳಿಗೂ ರಾಜಕಾರಣಿಗಳ ಪ್ರಚಾರಗಳಿಗೂ ನಿರ್ಬಂಧಗಳಿರಬೇಕು.
7.ಕೃಷಿಯೋಗ್ಯ ಭೂಮಿಯನ್ನು ವಿಶೇಷ ಆರ್ಥಿಕ ವಲಯಗಳಿಗಾಗಿ ವಶಪಡಿಸಿಕೊಳ್ಳಬಾರದು.
8.ರೈತರ ಬೆಳೆಗೆ ಯೋಗ್ಯ ಬೆಲೆ ದೊರೆಯಬೇಕು.
9.ದೊಡ್ಡ ಮಾಲ್‌ಗಳ ಬದಲಿಗೆ ಹಲವು ವ್ಯಾಪಾರಿಗಳು ನಡೆಸುವ ಕಿರಾಣಿ ಅಂಗಡಿಗಳಿಗೆ ಪ್ರೋತ್ಸಾಹ ದೊರೆಯಬೇಕು.
10.ಭೂಮಿಯ ತಾಪವನ್ನು ಹೆಚ್ಚಿಸುವ ಸಕಲ ಜೀವಿಗಳಿಗೆ ಮೃತ್ಯು ಪ್ರಾಯವಾದ ಅಮೆರಿಕಾ ಮಾದರಿಯ ಅಭಿವೃದ್ಧಿಗೆ ಬದಲಾಗಿ ಸರ್ವೋದಯದ ಪ್ರಗತಿ ನಮ್ಮ ಎಲ್ಲ ಕ್ರಿಯೆಗಳಲ್ಲಿ ವ್ಯಕ್ತವಾಗಬೇಕು.
11.ಸಾವಯವ ಕೃಷಿಗೂ, ಸೂರ್ಯಶಾಖದಿಂದ ಉತ್ಪಾದಿಸುವ ವಿದ್ಯುತ್ತಿಗೂ ಜಲಸಂರಕ್ಷಣೆಗೂ ಅಗತ್ಯವಾದ ಸಂಶೋಧನೆಗಳಿಗೆ ವಿಜ್ಞಾನ ಲೋಕದಲ್ಲಿ ಆದ್ಯಂತೆ ಇರುವಂತೆ ನೋಡಿಕೊಳ್ಳಬೇಕು.
ಈ ಪ್ರಣಾಳಿಕೆಗೆ ಪ್ರತಿಕ್ರಿಯಿಸಿದ ಸಿನಿಕರ ಬಳಗದ ಪ್ರತಿನಿಧಿಯೊಬ್ಬರು `ಸಾಮಾನ್ಯ ಶಾಲೆಗಳು, ಉದ್ಯಾನವನಗಳಿರುವ ನಗರಗಳು, ಪ್ರತ್ಯೇಕ ಸೈಕಲ್ ಲೇನ್‌ಗಳೆಲ್ಲಾ ಅಮೆರಿಕಾದಲ್ಲಿವೆ. ಕರ್ನಾಟಕದ ಎಲ್ಲರಿಗೂ ಅಮೆರಿಕಾಕ್ಕೆ ವಿಸಾ ಕೊಟ್ಟರೆ ಸಮಸ್ಯೆ ಪೂರ್ಣ ಪರಿಹಾರ!’ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದರು. ಈ ಸಿನಿಕ ಪ್ರತಿಕ್ರಿಯೆ ಕೂಡಾ ಜನತಾ ಪ್ರಣಾಳಿಕೆಯ ಪ್ರಾಯೋಗಿಕತೆಯನ್ನು ಹೇಳುತ್ತಿದೆ ಎಂಬುದೇ ಇಲ್ಲಿನ ತಮಾಷೆ. ಆಧುನಿಕ ಅಭಿವೃದ್ಧಿಯ ಪ್ರವಾದಿಗಳಿಗೆಲ್ಲಾ ಬಹುದೊಡ್ಡ ಮಾದರಿ ಅಮೆರಿಕ. ಅಲ್ಲಿನ ಸಾಮಾನ್ಯ ಶಾಲೆಗಳೂ ಮಕ್ಕಳಿಗೂ ಮುದುಕರಿಗೂ ಅಂಗವಿಕಲರಿಗೂ ಸಹ್ಯವಾದ ನಗರಗಳೇಕೆ ನಮಗೆ ಮಾದರಿಯಾಗುತ್ತಿಲ್ಲ?
* * *
ಕರ್ನಾಟಕದ ರಾಜಕಾರಣ ಕೋಮು ಉನ್ಮಾದ, ಅಧಿಕಾರ ಲಾಲಸೆ, ಜಾತಿ ಜಗಳಗಳ ಆಡೊಂಬಲವಾಗಿರುವುದರಿಂದ ಬೇಸರಗೊಂಡು ಸಿನಿಕರ ಬಳಗದ ಸದಸ್ಯರಾಗಬಹುದಾಗಿದ್ದವರು ರವಿ ಕೃಷ್ಣಾ ರೆಡ್ಡಿ. ಮೂವತ್ಮೂರು ವರ್ಷ ವಯಸ್ಸಿನ ಇವರು ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಅಮರಿಕದಲ್ಲಿ ಕೈತುಂಬಾ ಸಂಬಳ ತರುವ ಕೆಲಸವೂ ಇದೆ. ಕನ್ನಡ ಮತ್ತು ಇಂಗ್ಲಿಷ್‌ಗಳೆರಡರಲ್ಲೂ ಚೆನ್ನಾಗಿ ಬರೆಯುವ ಕೌಶಲ್ಯವೂ ಇದೆ. ಹಾಗಾಗಿ ಸಿನಿಕ ಅಭಿಪ್ರಾಯಗಳನ್ನು ಪ್ರಚುರ ಪಡಿಸುವುದೂ ಇವರಿಗೆ ಬಹಳ ಸುಲಭ. ಈ ಸುಲಭದ ಹಾದಿಯನ್ನು ಬಿಟ್ಟು ಅವರು ಕರ್ನಾಟಕದ ರಾಜಕಾರಣದಲ್ಲಿ ಮೌಲ್ಯ ಮತ್ತು ನೈತಿಕತೆಗಳಿಗೆ ಆಗ್ರಹಿಸಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಸಿನಿಕರ ಬಳಗದ ದೃಷ್ಟಿಯಲ್ಲಿ ಇದೂ ಅಪ್ರಾಯೋಗಿಕ. ಏಕೆಂದರೆ ರವಿ ಗೆಲ್ಲುವ ಸಾಧ್ಯತೆ ಇಲ್ಲ. ಮೌಲ್ಯಗಳಿಗಾಗಿ ಆಗ್ರಹಿಸಿ ಉಪವಾಸ ಮಾಡಿದರೆ ಯಾರು ಕೇಳುತ್ತಾರೆ? ಹೀಗೆ ಕಾರಣಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
* * *
ಸಮಾನತೆ, ಪರಿಸರ ಅಭಿವೃದ್ಧಿ, ನೈತಿಕತೆ ಮುಂತಾದುವುಗಳೆಲ್ಲಾ ಅಪ್ರಾಯೋಗಿಕ ಎಂದರೆ ಪ್ರಾಯೋಗಿಕವಾದುದೇನು?
ಸುಳ್ಳು ಭರವಸೆಗಳನ್ನು ನೀಡುವುದು, ಓಟಿಗಾಗಿ ಲಂಚ ಪಡೆದು ಗೆದ್ದ ನಂತರ ಅದನ್ನು ಮರಳಿ ಗಳಿಸುವುದು, ಕೋಮು ದ್ವೇಷವನ್ನು ಹುಟ್ಟು ಹಾಕುವುದು, ಅಕ್ರಮವಾಗಿ ಆಸ್ತಿ ಸಂಪಾದಿಸುವುದು, ದೇಶದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿ ಗಣಿಗಾರಿಕೆ ನಡೆಸುವುದು, ದೊಡ್ಡ ಕಾರುಗಳು ವೇಗವಾಗಿ ಚಲಿಸಲು ಸಾಧ್ಯವಿರುವ ದೊಡ್ಡ ರಸ್ತೆಗಳನ್ನು ನಿರ್ಮಿಸುವುದು, ಸರಕಾರೀ ಶಾಲೆಗಳನ್ನು ದೊಡ್ಡಿಗಳನ್ನಾಗಿಸುವುದು ಮುಂತಾದುವುಗಳೆಲ್ಲಾ ಪ್ರಾಯೋಗಿಕವಾದ ಕ್ರಿಯೆಗಳು ಎನ್ನಬಹುದೇ?
ಅಭಿಪ್ರಾಯ ರೂಪಿಸುವ ಸ್ಥಾನದಲ್ಲಿ ನಿಂತಿದ್ದೇನೆಂದು ಭಾವಿಸುವ ಸಿನಿಕರ ಬಳಗ ಇವೆಲ್ಲವೂ ಪ್ರಾಯೋಗಿಕವೇ ಸರಿ ಎಂಬ ಸಿನಿಕ ವಾದವನ್ನು ಮಂಡಿಸಿದರೂ ಆಶ್ಚರ್ಯವಿಲ್ಲ. ಆದರೆ ವಾಸ್ತವ ಇಷ್ಟೊಂದು ನಿರಾಶಾದಾಯಕವಾಗಿಲ್ಲ. ಅನಂತಮೂರ್ತಿ ಮತ್ತು ರವಿ ಕೃಷ್ಣಾ ರೆಡ್ಡಿಯವರ ವೈಯಕ್ತಿಕ ಮಟ್ಟದ ಪ್ರತಿಕ್ರಿಯೆಗಳಿಗಿಂತ ಭಿನ್ನವಾದ ಸಾಮುದಾಯಿಕ ಪ್ರತಿಕ್ರಿಯೆಯೊಂದೂ ರೂಪುಗೊಂಡಿದೆ. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿರುವ ನೂರಾರು ಸಂಘಟನೆಗಳು ಒಂದಾಗಿ ಜನತೆಯ ಪ್ರಣಾಳಿಕೆಯೊಂದನ್ನು ಪ್ರಕಟಿಸಿವೆ. ಈ ಎಲ್ಲಾ ಪ್ರಯತ್ನಗಳ ಫಲವೇನು ಎಂಬುದನ್ನು ಚುನಾವಣೆಯ ಫಲಿತಾಂಶಗಳೇ ಹೇಳಬೇಕು.
ಇತಿಹಾಸವನ್ನು ನೋಡಿದರೆ ಸಿನಿಕರ ಮಾತುಗಳನ್ನು ಸಮರ್ಥಿಸುವ ಉದಾಹರಣೆಗಳು ಸಿಗುವುದಿಲ್ಲ. ದೇಶದಲ್ಲೆಲ್ಲೂ ಇಲ್ಲದ ವಾಜಪೇಯಿ ಅಲೆ ಕರ್ನಾಟಕದಲ್ಲಿ ಇದ್ದಾಗಲೂ ಕರ್ನಾಟಕದ ಜನತೆ ಬಿಜೆಪಿಗೆ ಆಡಳಿತ ನಡೆಸುವಷ್ಟು ಸ್ಥಾನಗಳನ್ನು ನೀಡಲಿಲ್ಲ. ಹಾಗೆಯೇ ಇಡೀ ದೇಶ ಎನ್‌ಡಿಎಯ `ಪ್ರಕಾಶಮಾನ ಭಾರತ’ವನ್ನು ಕಂಡು ಕಂಗಾಲಾಗಿದ್ದರೂ ಕಾಂಗ್ರೆಸ್ ಮಾತ್ರ ಅಧಿಕಾರಕ್ಕೇರುವಷ್ಟು ಸ್ಥಾನಗಳನ್ನೂ ನೀಡಲಿಲ್ಲ. ಸಮ್ಮಿಶ್ರ ಸರಕಾರ ಅಗತ್ಯ ಎನ್ನುವ ವಾತಾವರಣವನ್ನು ಮತದಾರರು ಸೃಷ್ಟಿಸಿದರು. ಇದರಲ್ಲೊಂದು ಸ್ಪಷ್ಟ ಸಂದೇಶವಿತ್ತು. ನೀವ್ಯಾರೂ ನಮ್ಮ ಪ್ರಣಾಳಿಕೆಯನ್ನು ಗಮನಿಸಲಿಲ್ಲ ಎಂಬುದೇ ಆ ಸಂದೇಶ.
ಬ್ಲಾಗುಗಳಲ್ಲಿ ಬಡಬಡಿಸುವವರಿಗೂ ಪತ್ರಿಕೆಗಳಲ್ಲಿ ಕರೆ ನೀಡುವವರಿಗೂ ಟಿ.ವಿ.ಸ್ಟುಡಿಯೋಗಳಲ್ಲಿ ಕುಳಿತು ಜನರ ನಾಡಿ ಮಿಡಿತವನ್ನು ಅಳೆಯುವವರಿಗೂ ಇದು ಅರ್ಥವಾಗಬೇಕಾಗಿದೆ. ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಮೊದಲೇ ತನ್ನ ಆಯ್ಕೆಯನ್ನು ಖಚಿತ ಪಡಿಸಿಕೊಂಡಿರುವ ಭಾರತೀಯ ಮತದಾರ ವಿಶ್ಲೇಷಕರ ಲೆಕ್ಕಾಚಾರಗಳನ್ನು ತಪ್ಪಿಸಬೇಕು ಎಂಬುದನ್ನೂ ನೆನಪಿನಲ್ಲಿಟ್ಟುಕೊಂಡಿರುತ್ತಾನೆ.