ಚುನಾವಣೆಗಳು ಹತ್ತಿರ ಬಂದಾಗಲೆಲ್ಲಾ ಮತದಾನ ಎಷ್ಟು ಮುಖ್ಯ ಎಂಬುದರ ಕುರಿತ ಪ್ರಚಾರ ಆರಂಭವಾಗುತ್ತದೆ. ಒಂದೇ ಒಂದು ಓಟು ಯಾವ ಬದಲಾವಣೆಯನ್ನು ತರಬಲ್ಲದು ಎಂಬುದರ ಬಗ್ಗೆ ಮಾಧ್ಯಮಗಳು ಹೇಳುತ್ತವೆ. ಮತದಾನದ ದಿನವಿಡೀ ಮಾಧ್ಯಮಗಳು ಮತದಾನದ ಪ್ರಮಾಣದ ಮೇಲೆ ಕಣ್ಣಿರಿಸಿ ಚರ್ಚೆಗಳನ್ನು ನಡೆಸುತ್ತವೆ. ನಿರ್ದಿಷ್ಟ ಪ್ರದೇಶದಲ್ಲಿ ಏಕೆ ಮತದಾನ ಕಡಿಮೆಯಾಯಿತು ಎಂಬುದರ ಬಗ್ಗೆ ಕೂದಲು ಸೀಳುವ ಕೆಲಸವೂ ನಡೆಯುತ್ತದೆ.
ಭಾರತದ ಚುನಾವಣೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ವಿದ್ಯಮಾನವೆಂದರೆ ನಗರ ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದ ಮತದಾನ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಮತದಾನ. ನಗರಗಳಲ್ಲಿರುವವರಲ್ಲಿ ಹೆಚ್ಚಿನವರು ಮಧ್ಯಮವರ್ಗದವರು, ಸುಶಿಕ್ಷಿತರು. ಗ್ರಾಮೀಣ ಪ್ರದೇಶಗಳಲ್ಲಿರುವವರ ಶಿಕ್ಷಣದ ಮಟ್ಟ ಕಡಿಮೆ. ಮಧ್ಯಮ ವರ್ಗದವರ ಸಂಖ್ಯೆಯೂ ಕಡಿಮೆ. ಮಧ್ಯಮ ವರ್ಗ ಭ್ರಷ್ಟಾಚಾರದ ಬಗ್ಗೆ ಕಿಡಿಕಾರುತ್ತದೆ. ರಾಜಕಾರಣಿಗಳನ್ನು ಟೀಕಿಸುತ್ತದೆ. ರಾಜಕಾರಣಿಗಳನ್ನು ಆರಿಸುವ ಪ್ರಕ್ರಿಯೆಯಲ್ಲಿ ಅದು ಪಾಲ್ಗೊಳ್ಳುವುದಿಲ್ಲ. ಮತದಾನದ ದಿನ ಸಿಗುವ ರಜೆಯನ್ನು ಅನುಭವಿಸಲು ಮನೆಯಲ್ಲಿ ಕುಳಿತು ನೋಡುವುದರಲ್ಲಿ ಕಳೆಯುತ್ತದೆ. ಮತಗಟ್ಟೆಯ ಹತ್ತಿರವೂ ಹೋಗುವುದಿಲ್ಲ. ಇವೆಲ್ಲವೂ ನಗರ ಪ್ರದೇಶಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿರುವುದರ ಕಾರಣಗಳೆಂದು ಮಾಧ್ಯಮಗಳು ಹೇಳುತ್ತಿವೆ.
ರಾಜಕಾರಣಿಗಳೂ ಹೆಚ್ಚು ಕಡಿಮೆ ಇದೇ ಅರ್ಥದ ಮಾತುಗಳನ್ನಾಡುತ್ತಾರೆ. ಅವುಗಳನ್ನು ಹೀಗೆ ಸಂಗ್ರಹಿಸಬಹುದು. ರಾಜಕೀಯದಲ್ಲಿ ಭ್ರಷ್ಟಾಚಾರದ ಬಗ್ಗೆ ದೊಡ್ಡ ದೊಡ್ಡ ಮಾತನಾಡುವವರು ಮತಗಟ್ಟೆಗೆ ಬಂದು ಮತ ಚಲಾಯಿಸುವುದಿಲ್ಲ. ಇವರೆಲ್ಲಾ ಕಾಗದದ ಹುಲಿಗಳು. ತಮ್ಮ ಕೋಪ, ತಾಪ, ಅಸಹನೆಗಳಿಗೆ ಸಾರ್ವಜನಿಕ ಗೊಣಗಾಟದಲ್ಲಿ ಪರಿಹಾರ ಕಾಣುವವರು. ಈ ಬಗೆಯ ಶಿಕ್ಷಿತ ವರ್ಗದಿಂದ ಒಳ್ಳೆಯ ಪ್ರಜಾಪ್ರಭುತ್ವ ಸಾಧ್ಯವಿಲ್ಲ. ಮತದಾನವನ್ನು ಕಡ್ಡಾಯಗೊಳಿಸಿದರೆ ಈ ಸಮಸ್ಯೆ ಪರಿಹಾರವಾಗುತ್ತದೆ.
***
ಮೇಲಿನ ಎಲ್ಲಾ ಹೇಳಿಕೆಗಳೂ ಅರ್ಧ ಸತ್ಯ ಮಾತ್ರ. ಈ ಅರ್ಧ ಸತ್ಯವನ್ನು ಪರಿಶೀಲಿಸುವ ಮೊದಲು ಮತದಾನದ ಅಗತ್ಯವನ್ನು ಹೇಳುವ ಕೆಲವು ದೃಷ್ಟಾಂತಗಳನ್ನು ನೋಡೋಣ. ಪತ್ರಿಕಾ ಲೇಖನಗಳಲ್ಲಿ ಅನೇಕ ಬಾರಿ ಉಲ್ಲೇಖಿಸಲಾಗಿರುವ ದೃಷ್ಟಾಂತಗಳಿವು.
1645ರಲ್ಲಿ ಒಂದೇ ಒಂದು ಓಟಿನ ಅಂತರದಿಂದ ಸೈನಿಕನಾಗಿದ್ದ ಆಲಿವರ್ ಕ್ರಾಮ್‌ವೆಲ್ ಇಂಗ್ಲೆಂಡ್ ಮೇಲೆ ಹಿಡಿತ ಸಾಧಿಸಿದ.
1649ರಲ್ಲಿ ಒಂದನೇ ಚಾರ್ಲ್ಸ್ ದೊರೆಗೆ ಶಿಕ್ಷೆಯಾಗಲು ಒಂದು ಓಟು ಕಾರಣವಾಯಿತು.
1923ರಲ್ಲಿ ಹಿಟ್ಲರ್ ನಾಝಿ ಪಾರ್ಟಿಯ ಮುಖ್ಯಸ್ಥನಾಗಲು ಕಾರಣವಾದದ್ದು ಒಂದು ಓಟು.
ಮತದಾನದ ಮಹತ್ವವನ್ನು ವಿವರಿಸಲು ಬಳಕೆಯಾಗುವ ಈ ದೃಷ್ಟಾಂತಗಳಲ್ಲಿ ಒಂದೂ ನಿಜವಲ್ಲ. ಫೆಬ್ರವರಿ ತಿಂಗಳಿನಲ್ಲಿ ಕನ್ನಡ ಪತ್ರಿಕೆಯೊಂದರಲ್ಲಿ ಈ ದೃಷ್ಟಾಂತಗಳ ಸಮೇತ ಮತದಾನದ ಮಹತ್ವವನ್ನು ವಿವರಿಸುವ ಲೇಖನವೊಂದು ಪ್ರಕಟವಾದಾಗ `ನೂರೆಂಟು ಸುಳ್ಳು” ಬ್ಲಾಗ್‌ನ ಸಂಜಯ ಒಂದು ಓಟಿನ ರಹಸ್ಯವನ್ನು ಬಯಲು ಮಾಡಿದ್ದರು. ಈ ಒಂದು ಓಟಿನ ದೃಷ್ಟಾಂತಗಳೆಲ್ಲವೂ ದಂತ ಕತೆಗಳೆಂಬುದು ಬಹಳ ಹಿಂದೆಯೇ ಸಾಬೀತಾಗಿರುವ ಸತ್ಯ. ಈ ಕುರಿತಂತೆ ಹೆಚ್ಚಿನ ಮಾಹಿತಿಗಳು http://snopes.com/history/govern/onevote.asp ಪುಟದಲ್ಲಿ ಲಭ್ಯವಿದೆ. `ನೂರೆಂಟು ಸುಳ್ಳು” ಬ್ಲಾಗ್‌ನಲ್ಲಿ ಪ್ರಕಟವಾಗಿರುವ ಲೇಖನದಲ್ಲೂ ಈ ಮಾಹಿತಿಗೆ ಒಂದು ಕೊಂಡಿಯಿದೆ. ಇಲ್ಲಿ ಇನ್ನೂ ಹಲವು ಒಂದು ಓಟಿನ ದೃಷ್ಟಾಂತಗಳ ಕುರಿತ ನಿಜ ಸಂಗತಿ ಇದೆ.
ಆಲಿವರ್ ಕ್ರಾಮ್‌ವೆಲ್‌ಗೆ ಒಂದು ಓಟಿನ ಬಲದಿಂದ ಇಂಗ್ಲೆಂಡ್‌ನ ನಿಯಂತ್ರಣ ದೊರೆಯುವ ಪ್ರಶ್ನೆಯೇ ಇರಲಿಲ್ಲ. ಏಕೆಂದರೆ ಸಂಸತ್ತು ಓಟಿಂಗ್ ನಡೆಯದೆಯೇ ವಿಸರ್ಜನೆಗೊಂಡಿತ್ತು. ಒಂದನೇ ಚಾರ್ಲ್ಸ್ ದೊರೆಗೆ ಮರಣ ದಂಡನೆಯನ್ನು ವಿಧಿಸುವ ಆದೇಶಕ್ಕೆ 59 ಮಂದಿ ಕಮಿಷನರ್‌ಗಳು ಸಹಿ casino pa natet ಹಾಕಿದ್ದರು. ಇಷ್ಟರ ಮೇಲೆ ಅಲ್ಲೊಂದು ಓಟಿಂಗ್ ನಡೆದಿರಲಿಲ್ಲ. ಅಡಾಲ್ಫ್ ಹಿಟ್ಲರ್ ನಾಜಿ ಪಾರ್ಟಿಯ ಮುಖ್ಯಸ್ಥನಾದದ್ದು 1921ರಲ್ಲೇ ಹೊರತು 1923ರಲ್ಲಿ ಅಲ್ಲ. ಆತ ಆಯ್ಕೆಯಾದದ್ದು 553 ಪರ ಮತ್ತು ಒಂದು ವಿರೋಧಿ ಮತದಲ್ಲಿ.
***
ಈ ದೃಷ್ಟಾಂತಗಳ ಸತ್ಯಾಸತ್ಯತೆಗೂ ರಾಜಕಾರಣಿಗಳು ಮತ್ತು ಮಾಧ್ಯಮಗಳು ನಗರದ ಮಧ್ಯಮ ವರ್ಗದ ಮತದಾರರ ಬಗ್ಗೆ ವ್ಯಕ್ತಪಡಿಸುವ ಅಭಿಪ್ರಾಯಗಳಿಗೂ ಸಾಮ್ಯತೆ ಇದೆ. ಒಂದು ಓಟಿನ ದೃಷ್ಟಾಂತಗಳು ಕೇವಲ ದಂತ ಕತೆಗಳೆಂದು ಹೇಳುವ ಮಾಹಿತಿ ಲಭ್ಯವಿದೆ. ಮತದಾನದ ಮಹತ್ವವನ್ನು ಹೇಳುವ ಆತುರದಲ್ಲಿ ದೃಷ್ಟಾಂತಗಳ ಸತ್ಯಾಸತ್ಯತೆಯನ್ನು ಪರಿಶೀಲಿಸದೆಯೇ ಉಲ್ಲೇಖಿಸುವವರು ಹೆಚ್ಚು. ಹಾಗೆಯೇ ಮಧ್ಯಮ ವರ್ಗದ ಮತದಾರ ಮತ ಚಲಾಯಿಸುತ್ತಿಲ್ಲ ಎಂಬುದನ್ನು ಗುರಿಯಾಗಿಟ್ಟುಕೊಂಡು ಏಕಪಕ್ಷೀಯವಾದ ಅಭಿಪ್ರಾಯಗಳನ್ನು ನೀಡುವ ಮಾಧ್ಯಮಗಳು ಮತ್ತು ರಾಜಕಾರಣಿಗಳು ನಿಜ ಕಾರಣಗಳನ್ನು ಅರಿಯಲು ಮುಂದಾಗುವುದಿಲ್ಲ. ಈ ಸಾಮಾನ್ಯೀಕರಣವನ್ನು ಬದಿಗಿಟ್ಟು ಯೋಚಿಸಿದರೆ ಮಧ್ಯಮ ವರ್ಗದ ಮತದಾರ ಏಕೆ ಮತಗಟ್ಟೆಗೆ ಬರುತ್ತಿಲ್ಲ ಎಂಬುದು ಅರ್ಥವಾಗಬಹುದೇನೋ.
ಬೆಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಶೇಕಡಾ 56.5ರಷ್ಟು ಮತದಾರರು ಮತ ಚಲಾಯಿಸಿಲ್ಲ. ಅಂದರೆ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅರ್ಧಕ್ಕೂ ಹೆಚ್ಚು ಮತದಾರರು ಕಣಕ್ಕಿಳಿದಿರುವ ಎಲ್ಲಾ ಸ್ಪರ್ಧಿಗಳು ಆಯ್ಕೆಗೆ ಅನರ್ಹರು ಎನ್ನುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕಲ್ಲವೇ?
ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಯಾರನ್ನೂ ಆಯ್ಕೆ ಮಾಡುವುದಿಲ್ಲ ಎಂದು ಹೇಳುವುದಕ್ಕೆ ಒಂದು ವ್ಯವಸ್ಥೆ ಇಲ್ಲ. ಮತಗಟ್ಟೆಗೆ ಹೋಗಿ ಜನಪ್ರಾತಿನಿಧ್ಯ ಕಾಯ್ದೆಯ 49-ಓ ಪ್ರಕಾರ ಹೀಗೆ ತಮ್ಮ ಅಸಮಾಧಾನವನ್ನು ದಾಖಲಿಸಬಹುದಾದರೂ ಅದು ಮತಗಳ ಎಣಿಕೆಯ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ. ಸ್ಥಿತಿ ಹೀಗಿರುವಾಗ ನಗರದ ಮಧ್ಯಮ ವರ್ಗ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬ ತೀರ್ಮಾನಕ್ಕೆ ಬರುವುದಾದರೂ ಹೇಗೆ?
`ರಾಮ ರಾಜ್ಯ ಬಂದರೂ ನಮಗೆ ರಾಗಿ ಬೀಸುವುದು ತಪ್ಪುವುದಿಲ್ಲ” ಎಂದು ಅರಿತುಕೊಂಡವರೇ ಮತಗಟ್ಟೆಗೆ ಬರುತ್ತಿಲ್ಲ ಎಂಬುದನ್ನು ರಾಜಕೀಯ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕಿದೆ. ಕರ್ನಾಟಕದ ವಿಧಾನಸಭಾ ಚುನಾವಣೆಗಳಿಗೆ ವಿವಿಧ ರಾಜಕೀಯ ಪಕ್ಷಗಳು ಹೊರತಂದಿರುವ ಪ್ರಣಾಳಿಕೆಗಳನ್ನು ನೋಡಿದರೆ ಮಧ್ಯಮ ವರ್ಗದ ಮತದಾರರೇಕೆ ಚುನಾವಣೆಗಳಿಂದ ದೂರವಿದ್ದಾರೆ ಎಂಬುದು ಅರ್ಥವಾಗುತ್ತದೆ.
ಕೃಷಿ ಸಾಲ ಮನ್ನಾ, ಕೃಷಿಗೆ ಕಡಿಮೆ ಬಡ್ಡಿಯ ಸಾಲ, ಬಡತನ ರೇಖೆಯ ಕೆಳಗಿರುವವರಿಗೆ ಕಲರ್ ಟಿ.ವಿ, ರೈತರಿಗೆ ಉಚಿತ ವಿದ್ಯುತ್ ಹೀಗೆ ಘೋಷಣೆಯಾಗಿರುವ ಮುಖ್ಯ ಯೋಜನೆಗಳೆಲ್ಲವೂ ಬಡತನ=ಕೃಷಿ=ಗ್ರಾಮೀಣ ಪ್ರದೇಶಗಳೆಂಬ ಸಾಮಾನ್ಯೀಕೃತ ತರ್ಕದಲ್ಲಿ ರೂಪುಗೊಂಡಿವೆ. ಬೆಂಗಳೂರು ಅಭಿವೃದ್ಧಿಯ ಬಗ್ಗೆಯೂ ಪ್ರಣಾಳಿಕೆಗಳು ಹೇಳುತ್ತವೆ. ಈ ಅಭಿವೃದ್ಧಿಯ ಉದ್ದೇಶವೇ ಬೆಂಗಳೂರಿನಿಂದ ಹೇಗೆ ಮತ್ತಷ್ಟು ತೆರಿಗೆಯನ್ನು ಸಂಗ್ರಹಿಸಲು ಅನುಕೂಲ ಮಾಡಿಕೊಳ್ಳುವುದು. ಯಾರೂ ಬಂದರೂ ತಮಗೆ ಮಾತ್ರ ನಷ್ಟ ಎಂದು ಬೆಂಗಳೂರಿಗ ಅಂದುಕೊಂಡರೆ ಅದರಲ್ಲಿ ತಪ್ಪೇನಿದೆ?
ರಸ್ತೆ, ನೀರು ಒಳ ಚರಂಡಿಯಂಥ ಮೂಲ ಸೌಕರ್ಯಗಳನ್ನು ಒದಗಿಸುವುದರಲ್ಲಿ ಎಲ್ಲಾ ಪಕ್ಷದ ಸರಕಾರಗಳೂ ಸೋತಿವೆ. ಇದನ್ನೆಲ್ಲಾ ಸಹಿಸಿಕೊಂಡು ಮಧ್ಯಮ ವರ್ಗ ತೆರಿಗೆ ಪಾವತಿಸುತ್ತದೆ. ಸರಕಾರ ಒದಗಿಸುವ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಸ್ಥಿತಿಯಂತೂ ಹೇಳಿ ತೀರದು. ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಇರುವ ಯಾರೂ ನಗರದ ಸರಕಾರೀ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಸಾಧ್ಯವಿಲ್ಲ. ಅಗತ್ಯವಿರುವ ಪ್ರಮಾಣ ಪತ್ರಗಳನ್ನು ಪಡೆಯುವಂಥ ಕ್ರಿಯೆಗೂ ಲಂಚ ಪಾವತಿಸದೆ ಮಾರ್ಗವಿಲ್ಲ. ಅಲ್ಲಿಗೆ ಮಧ್ಯಮ ವರ್ಗದ ವ್ಯಕ್ತಿಯೊಬ್ಬನ ನಿತ್ಯದ ಬದುಕಿನಲ್ಲಿ ಸರಕಾರದ ಪಾತ್ರ ಕೇವಲ ಒಂದು ಉಪದ್ರವದ ಮಟ್ಟಕ್ಕೆ ಇಳಿದುಬಿಡುತ್ತದೆ. ಈ ಅನಿವಾರ್ಯ ಉಪದ್ರವವನ್ನು ಸಹ್ಯಗೊಳಿಸಲು ಆತ ತೆರಿಗೆಯ ಜತೆಗೆ ಲಂಚವನ್ನೂ ಕೊಡುತ್ತಾನೆ. ಮತ್ತೆ ಮತ್ತೆ ಬರುವ ಚುನಾವಣೆಗಳನ್ನು ಬಹಿಷ್ಕರಿಸಿ ಪ್ರತಿಭಟಿಸುತ್ತಾನೆ. ಅವನ ಪ್ರಭುತ್ವವನ್ನು ಸಾಬೀತು ಪಡಿಸಲು ಅದಕ್ಕಿಂತ ಹೆಚ್ಚಿನದ್ದನ್ನು ಮಾಡಲು ಅವನಿಗೆ ಅವಕಾಶವಾದರೂ ಎಲ್ಲಿದೆ?