ಆರು ವರ್ಷಗಳ ಹಿಂದಿನ ಸಂಗತಿಯಿದು. ಆ ಹೊತ್ತಿಗಾಗಲೇ ಎರಡೆರಡು ಬಾರಿ ಎಸ್.ಎಂ.ಕೃಷ್ಣರನ್ನು ಭಾರತದ ನಂಬರ್ ಒನ್ ಮುಖ್ಯಮಂತ್ರಿಯಾಗಿ `ಇಂಡಿಯಾ ಟುಡೇ’ ಗುರುತಿಸಿತ್ತು. ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಅವರನ್ನು ಹಿಂದಿಕ್ಕಿ ಕೃಷ್ಣ `ಸುಧಾರಣೆ’ಯ ಹಾದಿಯಲ್ಲಿ ಸಾಗುತ್ತಿದ್ದರು. ಈ ಸಮಯದಲ್ಲೇ ಕರ್ನಾಟಕದ ವಿದ್ಯುತ್ ನಿಗಮ ಮತ್ತು ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮಗಳು ತಿಳಿವಳಿಕೆ ಪತ್ರವೊಂದಕ್ಕೆ ಸಹಿ ಹಾಕುವ ಕಾರ್ಯಕ್ರಮವಿತ್ತು. ಅಲ್ಲಿ ಎಸ್.ಎಂ.ಕೃಷ್ಣ ಕರ್ನಾಟಕದ ವಿದ್ಯುತ್ ಕೊರತೆಯ ಬಗ್ಗೆ ಹೇಳುತ್ತಾ ರೈತರಿಗೆ ಉಚಿತ ವಿದ್ಯುತ್ ನೀಡುವುದರ ಅರ್ಥಹೀನತೆಯನ್ನು ವಿವರಿಸಿದರು. ಇಲ್ಲದ ವಿದ್ಯುತ್ ಅನ್ನು ಉಚಿತವಾಗಿ ಕೊಡುತ್ತೇವೆಂದು ಹೇಳುವುದರ ಬದಲಿಗೆ ಅಗತ್ಯವಿರುವುಷ್ಟು ವಿದ್ಯುತ್ ಉತ್ಪಾದಿಸಿ ನ್ಯಾಯಬದ್ಧ ದರದಲ್ಲಿ ಗುಣಮಟ್ಟದ ವಿದ್ಯುತ್ ಪೂರೈಸುವ ಅಗತ್ಯವನ್ನು ಪ್ರತಿಪಾದಿಸಿದರು.
ಈ ಹೊತ್ತಿಗೆ ಪಂಜಾಬ್ ವಿಧಾನಸಭಾ ಚುನಾವಣೆಗಳು ಘೋಷಣೆಯಾಗಿ ಎಲ್ಲಾ ರಾಜಕೀಯ ಪಕ್ಷಗಳೂ ತಮ್ಮ ಪ್ರಣಾಳಿಕೆಗಳನ್ನು ಹೊರತಂದಿದ್ದವು. ಕಾಂಗ್ರೆಸ್‌ನ ಪ್ರಣಾಳಿಕೆ `ರೈತರಿಗೆ ಉಚಿತ ವಿದ್ಯುತ್’ನ ಭರವಸೆಯನ್ನು ನೀಡಿತ್ತು. ಇದನ್ನು ಕಾಂಗ್ರೆಸ್‌ನ ಬ್ರಾಂಡ್ ಅಂಬಾಸಿಡರ್‌ನಂತೆ ಇದ್ದ ಮುಖ್ಯಮಂತ್ರಿ ವಿರೋಧಿಸುವುದು ಮಾಧ್ಯಮಗಳಿಗೆ ಸಹಜವಾಗಿಯೇ ಆಸಕ್ತಿ ಹುಟ್ಟಿಸಿತು. ಭಾಷಣ ಮುಗಿಸಿ ಹೊರಟ ಕೃಷ್ಣರನ್ನು ಮಾಧ್ಯಮ ಪ್ರತಿನಿಧಿಗಳು ತಡೆದು ಪಂಜಾಬ್ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಉಚಿತ ವಿದ್ಯುತ್‌ನ ಭರವಸೆಯಿದೆಯಲ್ಲಾ ಎಂದು ಪ್ರಶ್ನಿಸಿದರು. ಅರೆಕ್ಷಣ ವಿಚಲಿತರಾದ ಕೃಷ್ಣ `ಈ ಕುರಿತಂತೆ ರಾಷ್ಟ್ರೀಯ ಚರ್ಚೆಯಾಗಲಿ’ ಎಂದು ಬೀಸುವ ದೊಣ್ಣೆ ತಪ್ಪಿಸಿಕೊಂಡರು.
ಈಗ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್‌ನ ಚುನಾವಣಾ ನಿರ್ವಹಣೆ ಮತ್ತು ಸಮನ್ವಯ ಸಮಿತಿಗೆ ಎಸ್ ಎಂ ಕೃಷ್ಣ ಮುಖ್ಯಸ್ಥರು. ಆದರೂ ಕಾಂಗ್ರೆಸ್ ಪ್ರಣಾಳಿಕೆ ರೈತರಿಗೆ ಉಚಿತ ವಿದ್ಯುತ್ ಕೊಡುವ ಭರವಸೆ ನೀಡುತ್ತಿದೆ. ಈ ಹಿಂದೆ ಉಚಿತ ವಿದ್ಯುತ್ ನೀಡುವುದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಚರ್ಚೆಗೆ ಕರೆ ನೀಡಿದ್ದನ್ನು ಕೃಷ್ಣ ಮರೆತರೇ ಅಥವಾ ಈಗ ಅವರು ಇಲ್ಲದ ವಿದ್ಯುತ್ತನ್ನು ಉಚಿತವಾಗಿ ನೀಡಲು ಸಾಧ್ಯ ಎಂದು ನಂಬತೊಡಗಿದರೇ?
***
ಬಿಜೆಪಿಯ ಮಟ್ಟಿಗೆ ಈಗ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬ್ರಾಂಡ್ ಅಂಬಾಸಿಡರ್ ಇದ್ದಂತೆ. 2007ರ ಚುನಾವಣೆಯಲ್ಲಿ ಆಡಳಿತ ವಿರೋಧಿ ಮನಸ್ಥಿತಿಯನ್ನು ಯಶಸ್ವಿಯಾಗಿ ಹತ್ತಿಕ್ಕಿ ಮೋದಿ ಮತ್ತೆ ಗೆಲ್ಲುವುದಕ್ಕೆ ಕಾರಣವಾದದ್ದು ಅಭಿವೃದ್ಧಿ ಎಂಬುದು ಬಿಜೆಪಿಯ ನಾಯಕರೂ ಸೇರಿದಂತೆ ಹಲವರ ನಂಬಿಕೆ. ಈ ಕಾರಣದಿಂದಾಗಿಯೇ ಬಿಜೆಪಿ ಗುಜರಾತ್ ಮಾದರಿಯನ್ನು ಎಲ್ಲೆಡೆ ಅನುಸರಿಸಲು ಹೊರಟಿದೆ. ಗುಜರಾತ್ ಮಾದರಿ ಅಭಿವೃದ್ಧಿ ಎಂದರೆ ಏನು ಎಂಬ ಪ್ರಶ್ನೆಯ ಸುತ್ತ ಹಲವಾರು ಚರ್ಚೆಗಳಿವೆ. ಈ ಚರ್ಚೆಗಳಿಗೆ ಹೋಗದೆ ಬಿಜೆಪಿಯ ನಿಲುವನ್ನೇ ಒಪ್ಪಿಕೊಂಡು ಮುಂದುವರಿಯೋಣ. ಗುಜರಾತ್‌ನಲ್ಲಿ ರೈತರಿಗೆ ನಿರಂತರವಾಗಿ ಗುಣಮಟ್ಟದ ವಿದ್ಯುತ್ ಪೂರೈಸಲಾಗುತ್ತಿದೆ. ಹಾಗೆಯೇ ಈ ವಿದ್ಯುತ್‌ಗೆ ನಿಗದಿತ ದರದಲ್ಲಿ ಶುಲ್ಕವನ್ನೂ ವಸೂಲು ಮಾಡಲಾಗುತ್ತಿದೆ. ರೈತರು ಅದನ್ನು ಪಾವತಿಸಲೂ ಇದ್ದಾರೆ.
ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಯಡಿಯೂರಪ್ಪನವರು ಒಂದು ವಾರ ಕಾಲ ಮುಖ್ಯಮಂತ್ರಿಯಾಗಿದ್ದವರು. ಇವರು ಪ್ರಮಾಣವಚನ ಸ್ವೀಕರಿಸುವ ಸಮಾರಂಭಕ್ಕೆ ಗುಜರಾತಿನ ಮುಖ್ಯಮಂತ್ರಿ ನರೇಂದ್ರಮೋದಿ ಕೂಡಾ ಬಂದಿದ್ದರು. ಅಂದಿನಿಂದಲೇ ಯಡಿಯೂರಪ್ಪನವರು ಗುಜರಾತ್ ಮಾದರಿ ಅಭಿವೃದ್ಧಿಯ ಮಂತ್ರವನ್ನು ಜಪಿಸುತ್ತಲೇ ಇದ್ದರು. ಆದರೆ ಬಿಜೆಪಿಯ ಪ್ರಣಾಳಿಕೆಯಲ್ಲಿ ಮಾತ್ರ ಉಚಿತ ವಿದ್ಯುತ್‌ನ ಭರವಸೆಯಿದೆ.
ಗುಜರಾತ್‌ನಲ್ಲಿ ಉಚಿತ ವಿದ್ಯುತ್‌ನ ಭರವಸೆಯೇ ಇಲ್ಲದೆ ನರೇಂದ್ರಮೋದಿ ಗೆದ್ದ ಉದಾಹರಣೆಯಿದೆ. ತಮ್ಮದೂ ಗುಜರಾತ್ ಮಾದರಿ ಅಭಿವೃದ್ಧಿ ಎನ್ನುತ್ತಿರುವ ಕರ್ನಾಟಕದ ಬಿಜೆಪಿಗೆ ಉಚಿತ ವಿದ್ಯುತ್ ಭರವಸೆ ನೀಡದಿರುವುದಕ್ಕೆ ಏನು ಅಡ್ಡಿಯಿತ್ತು?
***
ರಾಜ್ಯದಲ್ಲಿ ಪ್ರತಿನಿತ್ಯ 20 ದಶಲಕ್ಷ ಯೂನಿಟ್‌ಗಳಷ್ಟು ವಿದ್ಯುತ್ ಕೊರತೆ ಇದೆ. ಹೀಗೆ ಕೊರತೆ ಕಂಡುಬಂದಾಗಲೆಲ್ಲಾ ಹಳ್ಳಿಗಳಿಗೆ ವಿದ್ಯುತ್ ಕಡಿತ ಮಾಡುವುದರ ಮೂಲಕ ಅದನ್ನು ಸರಿದೂಗಿಸಿಕೊಳ್ಳಲಾಗುತ್ತದೆ. ಹಳ್ಳಿಗಳಿಗೆ ವಿದ್ಯುತ್ ಕಡಿತ ಎಂದರೆ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಇಲ್ಲದಂತಾಗುತ್ತದೆ. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ಸಂದರ್ಭದಲ್ಲಂತೂ ಕೊರತೆಯ ಪರಿಣಾಮವನ್ನು ಅವುಗಳಿಗೆ ವರ್ಗಾಯಿಸುವುದಕ್ಕೆ ಮತ್ತೊಂದು ತರ್ಕವೂ ಸಿಗುತ್ತದೆ. ಒಟ್ಟಿನಲ್ಲಿ ವಿದ್ಯುತ್ ಪೂರೈಸದೇ ಇರುವುದನ್ನು ನಮ್ಮ ರಾಜಕಾರಣಿಗಳು ಉಚಿತ ವಿದ್ಯುತ್ ಎಂದು ಕರೆಯುತ್ತಾರೆ ಎಂದುಕೊಳ್ಳಬಹುದು.
ಭಾರತ ಸರಕಾರ ವಿತ್ತೀಯ ಹೊಣೆಗಾರಿಕೆ ಕಾಯ್ದೆಯೊಂದನ್ನು ಹೊಂದಿದೆ. ನಮ್ಮ ಸರಕಾರಗಳಿಗೆ ಸಾಲ ಕೊಡುವ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಒತ್ತಾಯಕ್ಕೆ ಮಣಿದು ಮಣಿದು ಈ ಕಾಯ್ದೆಯನ್ನು ರೂಪಿಸಲಾಗಿದೆ. ಇದು ಹೇಳುವಂತೆ ವಿತ್ತೀಯ ಕೊರತೆ ಮತ್ತು ಕಂದಾಯ ಕೊರತೆಗಳೆರಡನ್ನೂ ಸರಕಾರಗಳು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಇದಕ್ಕಾಗಿ ಸಬ್ಸಿಡಿಗಳನ್ನು ಕಡಿಮೆ ಮಾಡಬೇಕು. ರೈತರಿಗೆ ಕೊಡುವ ಉಚಿತ ವಿದ್ಯುತ್ ಕೂಡಾ ಇಂಥ ಸಬ್ಸಿಡಿಗಳ ಪಟ್ಟಿಯಲ್ಲೇ ಇದೆ. ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ನಿಯಮಗಳನ್ನು ಅನ್ವಯಿಸಿ ನೋಡಿದರೆ ಉಚಿತ ವಿದ್ಯುತ್ ನೀಡುವುದು ಸಾಧ್ಯವಿಲ್ಲ. ಇದನ್ನು ಒಪ್ಪಿಕೊಂಡು ಮುಂದುವರಿದರೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರಿಸಲಾಗದೆ `ವಚನ ಭ್ರಷ್ಟತೆ’ ಆರೋಪ ಎದುರಿಸಬೇಕಾಗುತ್ತದೆ. ಸ್ಥಿತಿ ಹೀಗಿರುವಾಗ `ವಚನ ಭ್ರಷ್ಟ’ರಾಗದೆ ವಿತ್ತೀಯ ಹೊಣೆಗಾರಿಕೆಯನ್ನು ನಿರ್ವಹಿಸುವುದು ಹೇಗೆ?
ಉಚಿತ ವಿದ್ಯುತ್‌ಗೆ ಆಗುವ ಖರ್ಚನ್ನು ಸರಿದೂಗಿಸಲು ರೈತರಿಗೆ ನೀಡುವ ಇತರ ಸವಲತ್ತುಗಳನ್ನು ಕಡಿತಗೊಳಿಸಲಾಗುತ್ತದೆ. ಅಲ್ಲಿಗೆ ವಿತ್ತೀಯ ಹೊಣೆಗಾರಿಕೆಯನ್ನು ನಿರ್ವಹಿಸಿದಂತಾಯಿತು. ವಿದ್ಯುತ್ ಕೊರತೆ ನಿರ್ವಹಿಸಲು ಹಳ್ಳಿಗಳಿಗೆ ವಿದ್ಯುತ್ ಕಡಿತ ಮಾಡಲಾಗುತ್ತದೆ. ಪೂರೈಸದೇ ಇರುವ ವಿದ್ಯುತ್‌ಗೆ ವಿತರಣಾ ಕಂಪೆನಿಗಳಿಗೆ ಬಿಲ್ ಪಾವತಿಸುವ ಸಮಸ್ಯೆಯೂ ಇಲ್ಲ. ಒಂದು ಕಡೆ ಉದಾರೀಕರಣವಾದೀ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳನ್ನು ಮೆಚ್ಚಿಸುತ್ತಲೇ ರೈತರ ಭರವಸೆಯನ್ನು ಈಡೇರಿಸಿದ ಖ್ಯಾತಿ ಆಡಳಿತಾರೂಢರಿಗೆ. ನಿವ್ವಳ ನಷ್ಟ ರೈತನಿಗೆ.
***
ಯಡಿಯೂರಪ್ಪನವರು ರಾಜ್ಯದ ಹಣಕಾಸು ಖಾತೆಯನ್ನು ನಿರ್ವಹಿಸಿದ್ದವರು. ಎಸ್.ಎಂ.ಕೃಷ್ಣ ಕೇಂದ್ರದಲ್ಲಿ ವಾಣಿಜ್ಯ ಮತ್ತು ಹಣಕಾಸು ಖಾತೆಗಳನ್ನು ನಿರ್ವಹಿಸುವುದರ ಜತೆಗೆ ರಾಜ್ಯದಲ್ಲೂ ಹಣಕಾಸು ಖಾತೆಯನ್ನು ನಿಭಾಯಿಸಿದವರು. ಇವರಿಬ್ಬರಿಗೂ ಉಚಿತ ವಿದ್ಯುತ್ ನೀಡುವುದರ ಒಳಸುಳಿಗಳು ತಿಳಿದಿಲ್ಲ ಎಂದುಕೊಂಡರೆ ನಾವು ಮೂರ್ಖರಾಗಿಬಿಡುತ್ತೇವೆ. ಇವರಿಗೂ ಇವರಿಬ್ಬರ ಪಕ್ಷದಲ್ಲಿರುವ ಅನೇಕ ನಾಯಕರಿಗೂ ಈ ಯೋಜನೆಯ ಪೊಳ್ಳುತನದ ಅರಿವಿದೆ. ಆದರೂ ಅವರು ಇಂಥ ಭರವಸೆಗಳನ್ನು ನೀಡುತ್ತಾರೆ. ಚುನಾವಣೆಗಳನ್ನು ಗೆಲ್ಲುವುದಕ್ಕೆ ಇದು ಅಗತ್ಯ ಎಂದು ಅವರು ಭಾವಿಸಿದ್ದಾರೆ.
ಕೃಷ್ಣ ತಮ್ಮ ಸುಧಾರಣವಾದೀ ಅಜೆಂಡಾಗಳ ಜತೆಗೇ 2004ರಲ್ಲಿ ಚುನಾವಣೆಯನ್ನು ಎದುರಿಸಿ ಸೋತು ಸುಣ್ಣವಾದವರು. ಇನ್ನೊಮ್ಮೆ ತಮ್ಮ ಸುಧಾರಣಾವಾದಿ ನಿಲುವುಗಳನ್ನು ಅವರಿಗೆ ಪಕ್ಷದೊಳಗೆ ಪ್ರತಿಪಾದಿಸುವುದೂ ಕಷ್ಟವಾಗಿರಬಹುದು. ಇಷ್ಟಕ್ಕೂ ಉಚಿತ ವಿದ್ಯುತ್ ಕೊಡುವುದರಿಂದ `ನಿವ್ವಳ ನಷ್ಟ’ ಅನುಭವಿಸುವುದು ರೈತನಲ್ಲವೇ?
ಗುಜರಾತ್ ಮಾದರಿ ಅಭಿವೃದ್ಧಿಯಲ್ಲಿ ಯಡಿಯೂರಪ್ಪನವರಿಗೆ ವಿಶ್ವಾಸವಿದೆ. ಆದರೆ ಗುಜರಾತ್‌ನಲ್ಲಿ ನರೇಂದ್ರ ಮೋದಿ ಚುನಾವಣೆ ಗೆದ್ದದ್ದು ಕೇವಲ ಅಭಿವೃದ್ಧಿಯಿಂದ ಎಂದು ನಂಬುವುದಕ್ಕೆ ಯಡಿಯೂರಪ್ಪನವರಿಗೇಕೆ ಬಿಜೆಪಿಗೂ ಕಷ್ಟ. ಗುಜರಾತ್‌ನಲ್ಲಿ ನರೇಂದ್ರ ಮೋದಿ ಗೆದ್ದ ನಂತರ ಬಿಜೆಪಿಯ ವಕ್ತಾರ ಪ್ರಕಾಶ್ ಜಾವಡೇಕರ್ ಹೇಳಿದ ಮಾತೊಂದನ್ನು ಇಲ್ಲಿ ನೆನಪಿಸಿಕೊಳ್ಳುವುದು ಸೂಕ್ತವೆನಿಸುತ್ತಿದೆ-`ಹಿಂದುತ್ವ ಮತ್ತು ಅಭಿವೃದ್ಧಿಯ ಸಂಯೋಜನೆಯೊಂದಿಗೆ ನಾವು ಇತರ ರಾಜ್ಯಗಳಲ್ಲೂ ಚುನಾವಣೆಯನ್ನು ಎದುರಿಸುತ್ತೇವೆ’. ಈ ಹೇಳಿಕೆಯನ್ನು ಕರ್ನಾಟಕ ವರ್ತಮಾನದ ಸ್ಥಿತಿಗೆ ಅನ್ವಯಿಸಿಕೊಂಡರೆ ಯಡಿಯೂರಪ್ಪನವರೂ ಸೇರಿದಂತೆ ಕರ್ನಾಟಕದ ಬಿಜೆಪಿ ಹೇಗೆ ಚಿಂತಿಸುತ್ತಿದೆ ಎಂಬುದು ತಿಳಿಯುತ್ತದೆ.
ಗುಜರಾತ್‌ನಲ್ಲಿ ಇದ್ದಂಥ ಕೋಮುವಾದೀ ವಾತಾವರಣ ಕರ್ನಾಟಕದಲ್ಲಿ ಇಲ್ಲ. ಆದ್ದರಿಂದ ಹಿಂದುತ್ವ ಕಾರ್ಯಸೂಚಿ ಪರಿಣಾಮಕಾರಿಯಲ್ಲ. ಇನ್ನು ಕೇವಲ ಅಭಿವೃದ್ಧಿ ಚುನಾವಣೆ ಗೆಲ್ಲುವುದಕ್ಕೆ ಸಾಕಾಗುವುದಿಲ್ಲ. ಉಳಿದದ್ದು `ಜನಪ್ರಿಯ ಯೋಜನೆ’ಗಳು ಮಾತ್ರ.
ಅಧಿಕಾರ ಮತ್ತು ರೈತರ ನಡುವಣ ಆಯ್ಕೆಯಲ್ಲಿ ರೈತರಿಗಾಗಿ `ಹೋರಾಡಿದ, ಹೋರಾಡುತ್ತಿರುವ, ಹೋರಾಡಲಿರುವ’ ಯಡಿಯೂರಪ್ಪನವರ ಆಯ್ಕೆ ಯಾವುದೆಂಬುದು ಅವರು ಹೇಳದೆಯೇ ಸ್ಪಷ್ಟವಾಗಿದೆ.