
ಯುಪಿಎ ಸರಕಾರ ವಿಶ್ವಾಸ ಮತ ಯಾಚಿಸಲು ಕರೆದಿದ್ದ ಅಧಿವೇಶನದ ಎರಡನೆಯ ದಿನ ಮತದಾನ ನಡೆಯುವ ಸ್ವಲ್ಪ ಹೊತ್ತಿಗೆ ಮೊದಲು ಮೂವರು ಬಿಜೆಪಿ ಸಂಸದರು ನೋಟಿನ ಕಟ್ಟುಗಳನ್ನು ಲೋಕಸಭೆಯಲ್ಲಿ ಪ್ರದರ್ಶಿಸಿದರು. ಮತದಾನದಲ್ಲಿ ಪಾಲ್ಗೊಳ್ಳದಂತೆ ತಡೆಯಲು ಈ ಹಣದ ಆಮಿಷವನ್ನೊಡ್ಡಲಾಗಿತ್ತು ಎಂದು ಆರೋಪಿಸಿದರು. ದೇಶದ ಮೂಲೆ ಮೂಲೆಗಳಲ್ಲಿರುವವರೆಲ್ಲಾ ಟಿ.ವಿ.ಯಲ್ಲಿ ಈ ದೃಶ್ಯವನ್ನು ಕಂಡರು. ಸ್ಪೀಕರ್ ಸೋಮನಾಥ ಚಟರ್ಜಿ ಈ ಸಂಗತಿಯ ಕುರಿತ ತನಿಖೆಯ ಭರವಸೆಯನ್ನೂ ನೀಡಿದರು. ಯುಪಿಎ ವಿಶ್ವಾಸ ಮತವನ್ನು ಸಾಬೀತು ಪಡಿಸುವಲ್ಲಿ ಯಶಸ್ವಿಯಾಯಿತು.
ಈ ಎಲ್ಲಾ ಘಟನಾವಳಿಗಳ ನಂತರ ಎಲ್ಲಾ ಪಕ್ಷಗಳ ಮುಖಂಡರಂತೆ ಸಿಪಿಐ (ಎಂ)ನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಕೂಡಾ ಮಾಧ್ಯಮಗಳ ಜತೆ ಮಾತನಾಡಿದರು. ಅವರು ಹೇಳಿದ ಒಂದು ಮಾತು ಹೀಗೆ `ನಮ್ಮ ಮಿತ್ರ ಪಕ್ಷಗಳ ಹಲವು ಸದಸ್ಯರಿಗೆ ಲಂಚದ ಆಮಿಷವನ್ನೊಡ್ಡಲಾಗಿತ್ತು. ಆದರೆ ನಮ್ಮ ಪಕ್ಷದ ಸದಸ್ಯರಿಗೆ ಮಾತ್ರ ಇಂಥ ಆಮಿಷಗಳಿರಲಿಲ್ಲ. ಕಾರಣ ನಮ್ಮ ಪಕ್ಷದ ಸದಸ್ಯರನ್ನು ಖರೀದಿಸಲು ಸಾಧ್ಯವಿಲ್ಲ ಎಂಬುದು ಅವರಿಗೂ ಗೊತ್ತಿತ್ತು’. ಈ ಹೇಳಿಕೆಯನ್ನು ಅಹಂಕಾರದ ಹೇಳಿಕೆ ಎಂದು ಕೇಡರ್‌ಗಳಿಲ್ಲದ ಪಕ್ಷದ ನಾಯಕರು ಹೇಳಬಹುದಾದರೂ ಇದು ವಾಸ್ತವ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಇಂಥ ಬದ್ಧತೆಗಳು ಅಗತ್ಯ ಎಂಬುದರಲ್ಲಿಯೂ ಸಂಶಯವಿಲ್ಲ. ತನ್ನ ಸದಸ್ಯರನ್ನು ಯಾರೂ ಖರೀದಿಸಲು ಸಾಧ್ಯವಿಲ್ಲ ಎಂಬ ನಂಬಿಕೆ ಇರುವ ಪಕ್ಷವೊಂದು ತನ್ನ ಹಿರಿಯ ಸದಸ್ಯನೊಬ್ಬ ಅಂತಃಸ್ಸಾಕ್ಷಿಗೂ, ದೇಶದ ಸಂವಿಧಾನಕ್ಕೂ ಬದ್ಧತೆಯನ್ನು ತೋರಿಸಿದಾಗ ಏಕೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬುದು ಮಾತ್ರ ಆಶ್ಚರ್ಯದ ವಿಷಯ.
***
ಸೋಮನಾಥ್ ಚಟರ್ಜಿಯವರಿಗೂ ಸಿಪಿಐ(ಎಂ)ಗೂ ಇರುವ ಸಂಬಂಧ ಅರ್ಧ ಶತಮಾನದ ಅವಧಿಯದ್ದು. ಅವರ ಸಂಸದೀಯ ಜೀವನವೇ ನಾಲ್ಕು ದಶಕಗಳಷ್ಟು ದೀರ್ಘವಾದದ್ದು. ಈ ಅವಧಿಯುದ್ದಕ್ಕೂ ಅವರು ತಾವು ಪ್ರತಿನಿಧಿಸುವ ಪಕ್ಷದ ಸಿದ್ಧಾಂತಗಳನ್ನು ಸಂಸತ್ತಿನ ಒಳಗೆ ಮತ್ತು ಸಂಸತ್ತಿನ ಹೊರಗೆ ಎತ್ತಿ ಹಿಡಿದಿದ್ದರು. ವೈಯಕ್ತಿಕ ಬದುಕನ್ನೂ ಪಕ್ಷದ ಸಿದ್ಧಾಂತದ ಪರಿಮಿತಿಯೊಳಗೇ ರೂಪಿಸಿಕೊಂಡಿದ್ದರು. ಅತ್ಯುತ್ತಮ ಸಂಸದನೆಂಬ ಹೆಗ್ಗಳಿಕೆಗೂ ಪಾತ್ರನಾಗಿದ್ದರು.
ಸಿಪಿಐ(ಎಂ) ಮತ್ತು ಇತರ ಎಡಪಕ್ಷಗಳು `ಕೋಮುವಾದಿ’ಗಳು ಸರಕಾರ ರಚಿಸುವುದನ್ನು ತಪ್ಪಿಸುವುದಕ್ಕೋಸ್ಕರ ಕಾಂಗ್ರೆಸ್ ಎಂಬ ಬೂರ್ಜ್ವಾ ಪಾರ್ಟಿಗೆ ಬೆಂಬಲ ನೀಡಲು ತೀರ್ಮಾನಿಸಿದವು. ಎಡ ಪಕ್ಷಗಳು ಎಂದಿನಂತೆ ಬೂಜ್ವಾ ಪಾರ್ಟಿಗಳು ಸೇರಿ ರಚಿಸುವ ಸರಕಾರದ ಒಳಗೆ ಇರಲು ಇಚ್ಛಿಸದೆ ಹೊರಗಿನಿಂದ ಬೆಂಬಲ ನೀಡುವುದಕ್ಕೆ ತೀರ್ಮಾನಿಸಿದವು. ಈ ಪ್ರಕ್ರಿಯೆಯಲ್ಲಿ ಲೋಕಸಭೆಯ ಸ್ಪೀಕರ್ ಸ್ಥಾನವನ್ನು ಹೊರಗಿನಿಂದ ಬೆಂಬಲ ನೀಡುವ ಪಕ್ಷಕ್ಕೆ ನೀಡುವ ತೀರ್ಮಾನವೂ ಆಯಿತು. ಲೋಕಸಭೆಯ ಹಿರಿಯ ಸದಸ್ಯರಾಗಿರುವ ಸೋಮನಾಥ ಚಟರ್ಜಿಯವರ ಹೆಸರು ಸ್ಪೀಕರ್ ಸ್ಥಾನಕ್ಕೆ ಕೇಳಿಬಂತು. ಸಿಪಿಐ (ಎಂ) ಬಹಳಷ್ಟು ಚರ್ಚೆಗಳನ್ನು ನಡೆಸಿ ಸೋಮನಾಥ್ ಚಟರ್ಜಿಯವರು ಸ್ವೀಕರ್ ಸ್ಥಾನವನ್ನು ಒಪ್ಪಿಕೊಳ್ಳಬಹುದೆಂಬ ತೀರ್ಮಾನಕ್ಕೆ ಬಂತು.
ಸ್ಪೀಕರ್ ಹುದ್ದೆಯೆಂಬುದು ಪಕ್ಷಾತೀತವಾದ ಸಾಂವಿಧಾನಿಕ ಹುದ್ದೆ. ಇದು ಮಂತ್ರಿ ಪದವಿಯಂಥದ್ದಲ್ಲ. ಆದ್ದರಿಂದಲೇ ಸ್ಪೀಕರ್ ಆಯ್ಕೆಯನ್ನು ನಿರ್ದಿಷ್ಟ ಜನಪ್ರತಿನಿಧಿ ಸಭೆಯ ಎಲ್ಲಾ ಸದಸ್ಯರೂ ಸೇರಿ ಮಾಡುತ್ತಾರೆ. ಹೀಗೆ ಸ್ಪೀಕರ್ ಆಯ್ಕೆಯಾದಾತ ಪಕ್ಷದ ಜತೆಗಿನ ತನ್ನ ಸಂಬಂಧವನ್ನು ಕಳೆಕೊಳ್ಳುತ್ತಾನೆ. ಆತ ಸ್ಪೀಕರ್ ಹುದ್ದೆಯಿಂದ ಕೆಳಗಿಳಿದ ನಂತರವಷ್ಟೇ ಆತ ಮತ್ತೆ ಪಕ್ಷದ ಜತೆಗಿನ ಸಂಬಂಧವನ್ನು ಮುಂದುವರಿಸಬಹುದು. ಹುದ್ದೆಯಲ್ಲಿ ಇರುವಷ್ಟು ದಿನವೂ ಆತ ಪಕ್ಷಾತೀತನಾಗಿ ಲೋಕಸಭೆಯ ನಡವಳಿಕೆಗಳನ್ನು ವಿವರಿಸುವ ಭಾರತೀಯ ಸಂವಿಧಾನಕ್ಕೆ ಬದ್ಧನಾಗಿರಬೇಕು.
ಸೋಮನಾಥ್ ಚಟರ್ಜಿ ಮೊದಲು ಪಕ್ಷದ ಸದಸ್ಯನಾಗಿದ್ದಾಗ ಹೇಗೆ ಪಕ್ಷದ ಸಂವಿಧಾನಕ್ಕೆ ಬದ್ಧರಾಗಿದ್ದರೋ ಸ್ಪೀಕರ್ ಆಗಿರುವಾಗ ಆ ಹುದ್ದೆಯ ಜವಾಬ್ದಾರಿಯಂತೆ ಭಾರತೀಯ ಸಂವಿಧಾನಕ್ಕೆ ಬದ್ಧರಾಗಿ ಪಕ್ಷಾತೀತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಯುಪಿಎ ಜತೆಗಿನ ಸಂಬಂಧ ಹಳಸಿದಾಗ ಸಿಪಿಐ (ಎಂ) ತಾನು ಸರಕಾರಕ್ಕೆ ನೀಡಿದ್ದ ಬಾಹ್ಯ ಬೆಂಬಲವನ್ನು ಹಿಂತೆಗೆದುಕೊಳ್ಳಲು ತೀರ್ಮಾನಿಸಿತು. ಬೆಂಬಲ ಹಿಂತೆಗೆದುಕೊಳ್ಳುವ ಸಂಸದರ ಪಟ್ಟಿಯಲ್ಲಿ ಸಿಪಿಐ(ಎಂ) ಸೋಮನಾಥ ಚಟರ್ಜಿಯವರ ಹೆಸರನ್ನೂ ಸೇರಿಸಿತು. ಸೋಮನಾಥ ಚಟರ್ಜಿ ಸಿಪಿಐ(ಎಂ)ನ ಚಿಹ್ನೆಯಲ್ಲೇ ಸ್ಪರ್ಧಿಸಿ ಗೆದ್ದಿದ್ದರೂ ಅವರು ಲೋಕಸಭೆಯ ಸ್ಪೀಕರ್ ಆದ ತಕ್ಷಣ ಪಕ್ಷದ ಜತೆಗಿನ ಸಂಬಂಧ ಕಳೆದುಕೊಂಡಿರುತ್ತಾರೆ ಎಂಬುದನ್ನು ಪಕ್ಷ ಗಮನಿಸಲಿಲ್ಲ. ಕನಿಷ್ಠ ಅವರ ಅನುಮತಿ ಪಡೆಯುವ ಸೌಜನ್ಯವನ್ನೂ ತೋರಲಿಲ್ಲ.
ಸೋಮನಾಥ್ ಚಟರ್ಜಿ ಒಬ್ಬ ಸಿದ್ಧಾಂತಕ್ಕೆ ಬದ್ಧನಾಗಿರುವ ಕಮ್ಯುನಿಸ್ಟನಂತೆಯೇ ಇದಕ್ಕೆ ಪ್ರತಿಕ್ರಿಯಿಸಿದರು. ಸ್ಪೀಕರ್ ಕಚೇರಿಯನ್ನು ರಾಜಕಾರಣಕ್ಕೆ ಎಳೆದು ತಂದದ್ದನ್ನು ಪ್ರತಿಭಟಿಸಿದರು. ತಾನೀಗ ಪಕ್ಷಾತೀತ ಎಂಬುದನ್ನು ಸ್ಪಷ್ಟಪಡಿಸಿದರು. ಆದರೆ ಸಿಪಿಐ(ಎಂ)ನ ಕೇಂದ್ರೀಯ ಸಮಿತಿ ಮತ್ತು ಪೊಲಿಟ್‌ಬ್ಯೂರೋ ಸ್ಟಾಲಿನ್‌ನಂತೆ ವರ್ತಿಸಿತು. ವಿಶ್ವಾಸ ಮತ ಯಾಚನೆಯ ಅಧಿವೇಶನ ಮುಗಿದ ತಕ್ಷಣ ಸೋಮನಾಥ ಚಟರ್ಜಿಯವರನ್ನು ಪಕ್ಷದಿಂದ ಉಚ್ಛಾಟಿಸಿತು. ಈ ಪ್ರಕ್ರಿಯೆ ಸೋವಿಯತ್ ಯೂನಿಯನ್‌ನಲ್ಲಿ ಸ್ಟಾಲಿನ್ ತನ್ನ ಎದುರಾಳಿಗಳನ್ನು ಮಟ್ಟ ಹಾಕುತ್ತಿದ್ದ ಪ್ರಕ್ರಿಯೆಯನ್ನೇ ಹೋಲುತ್ತದೆ. ಒತ್ತಾಯಪೂರ್ವಕವಾಗಿ ಪಡೆದ `ತಪ್ಪೊಪ್ಪಿಗೆ’ಗಳ ಆಧಾರದಲ್ಲಿ ಅನೇಕರನ್ನು ಪಕ್ಷದಿಂದ ಮತ್ತೇನಕರನ್ನೂ ಪ್ರಪಂಚದಿಂದಲೇ ಉಚ್ಛಾಟಿಸುವಲ್ಲಿ ಸ್ಟಾಲಿನ್ ಯಶಸ್ವಿಯಾಗಿದ್ದ. ಎಲ್ಲದಕ್ಕಿಂತ ಹೆಚ್ಚಾಗಿ ತಾನು ಯಾರ ಮೇಲೆ ಕ್ರಮಕೈಗೊಳ್ಳುತ್ತಾನೋ ಅವರ ಮಾತುಗಳನ್ನು ಕೇಳುವುದಕ್ಕೂ ಆತ ತಯಾರಿರಲಿಲ್ಲ. ಸಿಪಿಐ (ಎಂ)ನ ಕಾರ್ಯದರ್ಶಿ ಪ್ರಕಾಶ್ ಕಾರಾಟ್ ಇದೇ ಪರಂಪರೆಯನ್ನು ಮುಂದುವರಿಸಿ ಸೋಮನಾಥ ಚಟರ್ಜಿಯವರು ತಮ್ಮ ನಿಲುವಿನ ಬಗ್ಗೆ ಏನು ಹೇಳುತ್ತಾರೆಂಬುದನ್ನೂ ಕೇಳದೆ ಅವರನ್ನು ಉಚ್ಚಾಟಿಸುವ ತೀರ್ಮಾನ ಕೈಗೊಂಡರು.
***
ತನ್ನ ಪಕ್ಷದ ಸದಸ್ಯರನ್ನು ಯಾರೂ ಖರೀದಿಸಲು ಸಾಧ್ಯವಿಲ್ಲ ಎಂದು ಹೇಳುವ ಪಕ್ಷದ ಈ ಅಪ್ರಜಾಸತ್ತಾತ್ಮಕ ನಿಲುವನ್ನು ಹೇಗೆ ಅರ್ಥ ಮಾಡಿಕೊಳ್ಳಲು ಈ ಕೆಳಗಿನ ರೂಪಕ ಸಹಾಯ ಮಾಡಬಹುದೇನೋ. ಈ ಕತೆಯನ್ನು ಬರೆದದ್ದು ಮಲಯಾಳಿ ಕತೆಗಾರ ಪಿ.ಸುರೇಂದ್ರನ್. ಕತೆಯ ಹೆಸರು `ಮುಂಡನ ಮಾಡಿಸಿಕೊಂಡ ಬದುಕು’.
ಒಂದು ದಿನ ಪಾರ್ಟಿ ಸೆಕ್ರಟರಿ ಮತ್ತು ಅವರ ಅನುಯಾಯಿಗಳು ಬಂದು ಆತನನ್ನು ಮನೆಯಿಂದ ಎಳೆದೊಯ್ದರು. ತಲೆಯನ್ನು ಬೋಳು ಮಾಡಿ ಕತ್ತೆಯ ಮೇಲೆ ಕೂರಿಸಿ ನಗರವಿಡೀ ಮೆರವಣಿಗೆ ಮಾಡಿದರು. ಆತನಿಗೆ ತಾನು ಮಾಡಿದ ತಪ್ಪೇನೆಂದು ಅರ್ಥವಾಗಲಿಲ್ಲ. ಅವನು ಕೇಳಿಯೇ ಬಿಟ್ಟ `ನನಗೆ ಈ ಶಿಕ್ಷೆ ಕೊಡುವುದಕ್ಕೆ ಕಾರಣವೇನು?’
`ಮನೆಯಿಲ್ಲದವರ ಮತ್ತು ನಿರ್ವಸಿತರಾಗುವವರ ಸಂಖ್ಯೆ ಹೆಚ್ಚುತ್ತಲೇ ಇರುವಾಗ ಪಕ್ಷಕ್ಕೆ ಅರಮನೆಯಂಥ ಕಟ್ಟಡಗಳು ಬೇಕೇ ಎಂದು ಬೀದಿಯಲ್ಲಿ ನಿಂತು ಪ್ರಶ್ನಿಸಲಿಲ್ಲವೇ?’
`ಹೌದು. ಈ ಪ್ರಶ್ನೆ ಕೇಳಿದೆ’
`ನಾಯಕರು ತೀರಿಕೊಂಡು ಅವರ ಚಿತೆಯ ಬೆಂಕಿ ಆರುವ ಮೊದಲೇ ಚಂದಾ ಸಂಗ್ರಹಿಸುವುದೇಕೆಂದು ನೀನು ಕೇಳಲಿಲ್ಲವೇ?’
`ಹೌದು. ಕೇಳಿದ್ದೇನೆ’
`ಗಿರಿಜನರು ಹಸಿವಿನಿಂದ ಸಾಯುವ ದೇಶದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್‌ಗಳನ್ನು ಆರಂಭಿಸುವುದು ಮಾನವೀಯತೆಗೆ ಮಾಡುವ ಅವಮಾನವೆಂದು ನೀನು ಹೇಳಲಿಲ್ಲವೇ ?’
`ಹೀಗೆ ಹೇಳಿದ್ದೂ ನಿಜ.’
`ಜಲಾಶಯಗಳನ್ನೆಲ್ಲಾ ಎದೆಗವಚಿಕೊಂಡು ನೀರಿರುವುದು ಆಡುವುದಕ್ಕಲ್ಲ. ಕುಡಿಯುವುದಕ್ಕೆ ಎಂದು ನೀನು ಘೋಷಿಸಲಿಲ್ಲವೇ? ಭವಿಷ್ಯದಲ್ಲಿ ಬರುವ ವಿನಾಶಕಾರಿ ಬಿರುಗಾಳಿಗಳನ್ನು ತಡೆಯಲು ಮರಗಳನ್ನು ಕಡಿಯಬೇಡಿರೆಂದು ನೀನು ಒತ್ತಾಯಿಸಲಿಲ್ಲವೇ? ಭೂಮಿಯಿಂದ ದೂರಕ್ಕೋಡಿಸುವ ಮೋಡಗಳೆಲ್ಲವೂ ಒಂದು ದಿನ ಕುಂಭದ್ರೋಣ ಮಳೆಯಾಗಿ ಸುರಿಯಲಿದೆಯೆಂದು ನೀನು ಭವಿಷ್ಯ ನುಡಿಯಲಿಲ್ಲವೇ?’
`ಖಂಡಿತವಾಗಿಯೂ ಈ ಮಾತುಗಳನ್ನೆಲ್ಲಾ ಹೇಳಿದ್ದೇನೆ’
`ಹಾಗಿದ್ದರೆ ಈ ಮಾತುಗಳನ್ನಾಡಿದ್ದಕ್ಕೆ ನಿನಗೀ ಶಿಕ್ಷೆ. ಕತ್ತೆಯ ಮೇಲಿಂದ ಕೆಳಗಿಳಿಯುವುದಕ್ಕೆ ನಿನಗೆ ಅನುಮತಿಯಿಲ್ಲ. ನೀನಲ್ಲಿಯೇ ಕುಳಿತಿರಬೇಕು.’
ಪಾರ್ಟಿ ಸೆಕ್ರಟರಿ ಮತ್ತು ಅನುಯಾಯಿಗಳೂ ಹೋದ ನಂತರ ಕತ್ತೆ ಮಾತನಾಡಿತು. `ಭಯಪಡಬೇಡ ಗೆಳೆಯಾ, ಕೊಳಕು ಬಟ್ಟೆಗಳನ್ನು ಹೊರುವವನಾದರೇನಂತೆ, ನಾನು ನಿನ್ನ ಜತೆಗಿರುತ್ತೇನೆ’