ಮಳೆಯ ತಾರದ ಗುಡುಗು ಸಿಡಿಲು

ಎನ್ ಸಂತೋಷ್ ಹೆಗ್ಡೆ/ Snathosh Hegde
ಮಂತ್ರಿಗಳು ಆಗೀಗ ಅಧಿಕಾರಿಗಳ ಬಗ್ಗೆ ಕಿಡಿಕಾರುವುದುಂಟು. ಸರಕಾರ ರೂಪಿಸಿರುವ ಯೋಜನೆಗಳನ್ನು ಜನರ ಬಳಿಗೆ ಕೊಂಡೊಯ್ಯದೇ ಇದ್ದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆಂದು ಗುಡುಗುವುದು ಮಾಧ್ಯಮಗಳಲ್ಲೂ ಸುದ್ದಿಯಾಗುತ್ತದೆ. ಈ ಗುಡುಗು ಸಿಡಿಲುಗಳೆಲ್ಲವೂ ಮಳೆಯಾಗದೆ ಮುಗಿದು ಹೋಗುವುದು ನಮ್ಮ ನಿತ್ಯದ ಜಂಜಡಗಳಲ್ಲಿ ಮರೆತೂ ಹೋಗುತ್ತವೆ. ಮಂತ್ರಿ ಮಹೋದಯರ ಈ ಗುಡುಗಾಟಕ್ಕೆ ಮಳೆ ತರಿಸುವ ಶಕ್ತಿಯೇ ಇಲ್ಲ ಎಂಬುದು ವಾಸ್ತವ. ಲೋಕಾಯುಕ್ತ ಸಂಸ್ಥೆಯನ್ನು ನಮ್ಮ ಸರಕಾರಗಳು ನಡೆಸಿಕೊಳ್ಳುತ್ತಿರುವುದನ್ನು ನೋಡಿದರೆ ಎಲ್ಲವೂ ಅರ್ಥವಾಗುತ್ತದೆ.

ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಲೋಕಾಯುಕ್ತ ಸಂಸ್ಥೆ ಹಿಂದೆಂದಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಲೋಕಾಯುಕ್ತ ಎನ್‌ ಸಂತೋಷ್‌ ಹೆಗ್ಡೆ ಮತ್ತು ಉಪಲೋಕಾಯುಕ್ತ ಪತ್ರಿ ಬಸವನಗೌಡರ ಸಮರ್ಥ ನೇತೃತ್ವ ಈ ಸಂಸ್ಥೆಗೆ ದೊರೆತಿದೆ. ಜತೆಗೆ ರೂಪಕ್‌ ಕುಮಾರ್‌ ದತ್ತಾರಂಥ ದಕ್ಷ ಐಪಿಎಸ್‌ ಅಧಿಕಾರಿ ಲೋಕಾಯುಕ್ತ ಪೊಲೀಸ್‌ ವ್ಯವಸ್ಥೆಯನ್ನು ಚುರುಕುಗೊಳಿಸಿದ್ದಾರೆ. ಸಾಲು ಸಾಲಾಗಿ ನಡೆಯುತ್ತಿರುವ ಲೋಕಾಯುಕ್ತ ದಾಳಿಯ ಹಿಂದೆ ಕೆಲಸ ಮಾಡುತ್ತಿರುವುದು ಲೋಕಾಯುಕ್ತ ಪೊಲೀಸ್‌ ವ್ಯವಸ್ಥೆಯ ದಕ್ಷತೆ ಎಂಬುದನ್ನು ನಾವು ಮರೆಯುವಂತೆ ಇಲ್ಲ.

ಎನ್‌ ವೆಂಕಟಾಚಲ ಅವರು ಲೋಕಾಯುಕ್ತರಾಗಿದ್ದಾಗ ನಡೆಯುತ್ತಿದ್ದ ದಾಳಿಗಳಿಗೂ ಈಗ ನಡೆಯುತ್ತಿರುವ ದಾಳಿಗಳಿಗೂ ಬಹಳ ವ್ಯತ್ಯಾಸವಿದೆ. ಎನ್‌ ವೆಂಕಟಾಚಲ ಅವರು ದಾಳಿಗಳ ನೇತೃತ್ವವನ್ನು ತಾವೇ ವಹಿಸುತ್ತಿದ್ದರು. ದಾಳಿಯ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಹಾಜರಿರುತ್ತಿದ್ದುದು ತೀರಾ ಸಾಮಾನ್ಯ. ಸರಕಾರೀ ಆಸ್ಪತ್ರೆಗಳ ಹುಳುಕುಗಳನ್ನೆಲ್ಲಾ ಅವರು ಜನರೆದುರು ತೆರೆದಿಟ್ಟರು. ಲೋಕಾಯುಕ್ತರ ಈ ಕ್ರಿಯಾಶೀಲತೆಯಿಂದ ಜನರು ಲೋಕಾಯುಕ್ತ ಎಂಬ ಸಂಸ್ಥೆಯೊಂದಿದೆ ಎಂಬುದನ್ನು ಮೊದಲ ಬಾರಿಗೆ ಅರಿತುಕೊಂಡರು.

ಸಂತೋಷ್‌ ಹೆಗ್ಡೆ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದಾಗ ಅವರಿಗೆ ಎದುರಾದದ್ದು `ನೀವು ದಾಳಿಗಳನ್ನು ನಡೆಸುತ್ತೀರಾ?’. ಸಂತೋಷ್‌ ಹೆಗ್ಡೆಯವರ ಉತ್ತರ `ಉತ್ಸಾಹದಾಯಕವಾಗಿ’ ಇರಲಿಲ್ಲ. ಮಾಧ್ಯಮಗಳ ನಿರೀಕ್ಷೆಯಂತೆ ಅವರು `ಗುಡುಗಲಿಲ್ಲ’. ಅವರು ಲೋಕಾಯುಕ್ತರೇ ನಡೆಸುವ ದಾಳಿಗಳ ಮಿತಿಯ ಬಗ್ಗೆ ಮಾತನಾಡಿದರು. ಲೋಕಾಯುಕ್ತ ಕಾಯ್ದೆ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಗಳ ನಡುವಣ ವ್ಯತ್ಯಾಸವನ್ನು ವಿವರಿಸಲು ಪ್ರಯತ್ನಿಸಿದರು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅನ್ವಯ ಲೋಕಾಯುಕ್ತ ಪೊಲೀಸರೇ ದಾಳಿ ನಡೆಸಿದಾಗ ಅದಕ್ಕೆ ಇರುವ ಕಾನೂನಿನ ಬಲದ ಬಗ್ಗೆ ಹೇಳಿದರು. ಈ ಮಾತುಗಳನ್ನೆಲ್ಲಾ ಋಣಾತ್ಮಕವಾಗಿ ಗ್ರಹಿಸಿದವರೇ ಹೆಚ್ಚು. ಆದರೆ ಈಗ ನಮ್ಮ ಕಣ್ಣ ಮುಂದಿರುವ ಚಿತ್ರ ಬೇರೆಯೇ.

***

ಪತ್ರಿ ಬಸವನಗೌಡ/patri basavana goud

ಲೋಕಾಯುಕ್ತರು ದಾಳಿಗಳನ್ನು ನಡೆಸುವುದೇ ಇಲ್ಲ ಎಂದು ಭಾವಿಸಿದ್ದವರಿಗೆ ಆಶ್ಚರ್ಯವಾಗುವಷ್ಟು ದಾಳಿಗಳು ನಡೆದವು. ಸಾಮಾನ್ಯವಾಗಿ ಲೋಕಾಯುಕ್ತರ ದಾಳಿಗಳಿಂದ ಹೊರಗುಳಿಯುತ್ತಿದ್ದ ಐಎಎಸ್‌, ಐಪಿಎಸ್‌, ಕೆಎಎಸ್‌ ಅಧಿಕಾರಿಗಳ ಮೇಲೂ ದಾಳಿಗಳು ನಡೆದವು. ಸರಕಾರಿ ಅಧಿಕಾರಿಗಳು ಪ್ರತೀ ವರ್ಷ ಸಲ್ಲಿಸುವ ಆಸ್ತಿ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯ ಅನ್ವಯ ಬಹಿರಂಗ ಪಡಿಸಬೇಕು ಎಂಬ ಚರ್ಚೆಯೊಂದು ಆರಂಭವಾಯಿತು. ಆಸ್ತಿ ವಿವರ ನೀಡುವ ಅಧಿಕಾರಿಗಳು ವಿಷಯವನ್ನು ನ್ಯಾಯಾಲಯಕ್ಕೆ ಕೊಂಡೊಯ್ದು ಬೀಸುವ ದೊಣ್ಣೆಯನ್ನು ತಪ್ಪಿಸಿಕೊಂಡಿದ್ದಾರಾದರೂ ಮುಂದೆಂದಾದರೂ ಒಂದು ದಿನ ಅಧಿಕಾರಿಗಳ ಆಸ್ತಿ ವಿವರವೂ ರಾಜಕಾರಣಿಗಳ ಆಸ್ತಿ ವಿವರದಂತೆಯೇ ಬಹಿರಂಗಗೊಳ್ಳಬಹುದು.

ಲೋಕಾಯುಕ್ತ ವ್ಯವಸ್ಥೆಯನ್ನು ಹೊಸ ಬಗೆಯಲ್ಲಿ ಗ್ರಹಿಸುವ ಪ್ರಯತ್ನವೊಂದಕ್ಕೆ ಎನ್‌ ಸಂತೋಷ್‌ ಹೆಗ್ಡೆ ಮತ್ತು ಪತ್ರಿ ಬಸವನಗೌಡ ನಾಂದಿ ಹಾಡಿದ್ದರಿಂದ ಇವೆಲ್ಲವೂ ಸಾಧ್ಯವಾಯಿತು. ಭ್ರಷ್ಟಾಚಾರಿಗಳನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದಷ್ಟೇ ಲೋಕಾಯುಕ್ತರ ಕೆಲಸವಲ್ಲ ಎಂಬುದನ್ನು ಸಂತೋಷ್‌ ಹೆಗ್ಡೆ ತಾವು ಅಧಿಕಾರ ಸ್ವೀಕರಿಸಿದಂದೇ ಸ್ಪಷ್ಟ ಪಡಿಸಿದ್ದರು. ಆಡಳಿತ ಸುಧಾರಣಾ ಕ್ರಿಯೆಯ ನಿರಂತರತೆಯನ್ನು ಕಾಯ್ದುಕೊಳ್ಳುವ ಕೆಲಸ ಲೋಕಾಯುಕ್ತ ಸಂಸ್ಥೆಯದ್ದು ಎಂಬುದು ಅವರ ನಂಬಿಕೆ. ಇದರ ಭಾಗವಾಗಿ ಅವರು ಆಸ್ತಿ ನೋಂದಣಿ ಕ್ರಿಯೆಯ ಸರಳೀಕರಣ, ಶಾಲೆಗಳ ಸುರಕ್ಷತೆಯನ್ನು ಖಚಿತ ಪಡಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಉತ್ತರದಾಯಿಗಳನ್ನಾಗಿಸುವುದು ಹೀಗೆ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ.

***

ಭ್ರಷ್ಟಾಚಾರವೆಂಬ ಮದೋನ್ಮತ್ತ ಆನೆಯನ್ನು ಮಣಿಸಲು ಕಾಯ್ದೆಯ ಮಿತಿಯೊಳಗೆ ಲೋಕಾಯುಕ್ತ ಸಂಸ್ಥೆ ಮಾರ್ಗಗಳನ್ನು ಹುಡುಕುತ್ತಿದೆ. ಆದರೆ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವುದಕ್ಕೆ ರಾಜಕಾರಣಿಗಳು ಏನು ಮಾಡಿದ್ದಾರೆ?

ಈಗ ಆಡಳಿತ ನಡೆಸುತ್ತಿರುವ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಒಂದು ಸಾಲಿನ ಭರವಸೆಯೊಂದನ್ನು ನೀಡಿದೆ. `ಭ್ರಷ್ಟಾಚಾರವನ್ನು ತಡೆಗಟ್ಟುವುದು-ಲೋಕಾಯುಕ್ತವನ್ನು ಬಲಪಡಿಸುವುದು’ (ಬಿಜೆಪಿ ಪ್ರಣಾಳಿಕೆ, ಪುಟ ಸಂಖ್ಯೆ-62).

ಬಿಜೆಪಿ ಆಡಳಿತಕ್ಕೆ ಬಂದರೆ ಪ್ರಣಾಳಿಕೆಯೇ ಬಜೆಟ್‌ ಎಂದಿದ್ದ ಯಡಿಯೂರಪ್ಪನವರು ಬಜೆಟ್‌ ಮಂಡಿಸುವ ಸಮಯದಲ್ಲಿ ಪ್ರಣಾಳಿಕೆ ಮರೆತಂತೆ ಲೋಕಾಯುಕ್ತರ ಕೈ ಬಲ ಪಡಿಸುವ ವಿಷಯವನ್ನೂ ಮರೆತು ಬಿಟ್ಟಿದ್ದಾರೆ. ಜೆ.ಎಚ್‌.ಪಟೇಲ್‌ ಒಬ್ಬರನ್ನು ಹೊರತು ಪಡಿಸಿದರೆ ಉಳಿದ ಯಾವ ಮುಖ್ಯಮಂತ್ರಿಯೂ ಲೋಕಾಯುಕ್ತರು ಕೇಸು ದಾಖಲಿಸಲು ಅನುಮತಿ ಕೇಳಿದಾಗ ಒಪ್ಪಿಕೊಂಡಿಲ್ಲ. ಇದಕ್ಕೆ ಇರುವ ಕಾರಣಗಳೇನು ಎಂಬುದನ್ನು ಹುಡುಕುವುದಕ್ಕೆ ಒಂದು ತನಿಖಾ ಆಯೋಗವೇ ಬೇಕು ಅನ್ನಿಸುತ್ತದೆ.

***

ಲೋಕಾಯುಕ್ತ ಸಂಸ್ಥೆ ಹಲ್ಲು, ಉಗುರುಗಳಿಲ್ಲದ ಹುಲಿಯಂತೆ ಇರುವುದರ ಬಗ್ಗೆ ಲೋಕಾಯುಕ್ತರು ಬಹಳಷ್ಟು ಬಾರಿ ಮಾತನಾಡಿದ್ದಾರೆ. ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ರಾಜಕಾರಣಿಗಳು ಆಸ್ತಿ ವಿವರ ಸಲ್ಲಿಸದೇ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಕಾನೂನಿನ ಸೂಕ್ಷ್ಮಗಳನ್ನು ಹುಡುಕಿ ಅವರಲ್ಲಿ ನಡುಕ ಹುಟ್ಟಿಸುವಲ್ಲಿಯೂ ಲೋಕಾಯುಕ್ತರು ಯಶಸ್ವಿಯಾಗಿದ್ದರು. ಆದರೆ ಅಧಿಕಾರಿಗಳನ್ನು ಬಗ್ಗಿಸಲು ಮಾತ್ರ ಅವರಿಂದ ಸಾಧ್ಯವಾಗಿಲ್ಲ. ಲೋಕಾಯುಕ್ತರ ಕೈ ಬಲ ಪಡಿಸುವ ಭರವಸೆ ನೀಡಿರುವ ರಾಜಕೀಯ ಪಕ್ಷ ಕೂಡಾ ಲೋಕಾಯುಕ್ತರ ದಾಳಿಗೆ ಒಳಗಾದ ಅಧಿಕಾರಿಗಳನ್ನು ಅವೇ ಹುದ್ದೆಗಳಲ್ಲಿ ಮುಂದುವರೆಸುವುದನ್ನು ನೋಡಿ ಲೋಕಾಯುಕ್ತರು ಮೊನ್ನೆ ಮತ್ತೊಮ್ಮೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಲೋಕಾಯುಕ್ತ ಪೊಲೀಸರು ನಡೆಸುವ ದಾಳಿಗಳಲ್ಲಿ ಪತ್ತೆಯಾಗುವ ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಿದ್ಧಪಡಿಸುವುದಕ್ಕೆ ಕೆಲವೊಮ್ಮೆ ವರ್ಷಗಳಷ್ಟು ತಡವಾಗುವುದೂ ಉಂಟು. ಈ ಅವಧಿಯಲ್ಲಿ ಅಧಿಕಾರಿ ತನ್ನ ಹಳೆಯ ಹುದ್ದೆಯಲ್ಲೇ ಮುಂದುವರೆದರೆ ಸಾಕ್ಷ್ಯಗಳನ್ನು ನಾಶಪಡಿಸುವ ಎಲ್ಲಾ ಸಾಧ್ಯತೆಗಳಿವೆ. ದುರದೃಷ್ಟವಶಾತ್‌ ಇದನ್ನು ತಡೆಯುವ ಯಾವ ವ್ಯವಸ್ಥೆಯೂ ಸರಕಾರದ ಬಳಿ ಇಲ್ಲ. ಹೆಚ್ಚೆಂದರೆ ಈ ಅಧಿಕಾರಿಗಳನ್ನು ಆರು ತಿಂಗಳುಗಳ ಕಾಲ ಅಮಾನತು ಮಾಡಲಾಗುವುದು. ಈ ಅವಧಿ ಮುಗಿದ ತಕ್ಷಣ ಅವರು ತಮ್ಮ ಹಳೆಯ ಹುದ್ದೆಗೇ ವಕ್ಕರಿಸಿಕೊಳ್ಳುತ್ತಾರೆ. ಕೆಲವರು ಬಡ್ತಿಗಳನ್ನೂ ಪಡೆಯುತ್ತಾರೆ.

ಮೊನ್ನೆ ಮೊನ್ನೆಯಷ್ಟೇ ಬೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್‌ ಒಬ್ಬರು ಹೀಗೆ ತಮ್ಮ ಹಳೆಯ ಹುದ್ದೆಗೇ ವಕ್ಕರಿಸಿದರು. ಅವರನ್ನು ಸ್ವಾಗತಿಸುವುದಕ್ಕೆ ಕಚೇರಿಯಲ್ಲಿ ಪುಷ್ಪಗುಚ್ಛಗಳ ದೊಡ್ಡ ರಾಶಿಯೇ ಇತ್ತು. ಲೋಕಾಯುಕ್ತರು ಈ ಬಗ್ಗೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ ನಂತರ ಅವರನ್ನು ಆ ಹುದ್ದೆಯಿಂದ ವರ್ಗಾಯಿಸಲಾಯಿತು.

***

ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರೊಬ್ಬರು ನೇತೃತ್ವ ವಹಿಸಿರುವ ಸಂಸ್ಥೆಯೊಂದಕ್ಕೆ ಸರಕಾರ ನೀಡುವ ಗೌರವ ಇದು. ಮಾಧ್ಯಮಗಳಲ್ಲಿ ಕಟು ಟೀಕೆಗಳು ಪ್ರಕಟವಾದ ನಂತರವಷ್ಟೇ ಸರಕಾರ ಎಚ್ಚೆತ್ತುಕೊಂಡಿತು. ಹೀಗೆ ಕಣ್ಣು ಮುಚ್ಚಿ ಹಾಲು ಕುಡಿಯುವ ಸರಕಾರದ ವರ್ತನೆಯ ಹಿಂದಿನ ರಹಸ್ಯವೇನು?

ಲೋಕಾಯುಕ್ತ ಸಂಸ್ಥೆ ಅಸ್ತಿತ್ವಕ್ಕೆ ಬಂದ ನಂತರ ದಾಳಿಗಳಲ್ಲಿ ಸಿಕ್ಕಿಬಿದ್ದ ಎಲ್ಲ ಪ್ರಭಾವೀ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಕ್ಕೆ ಅನುಮತಿ ನೀಡಿದ್ದು ಜೆ ಎಚ್‌ ಪಟೇಲ್‌ ಅವರ ಸರಕಾರ ಮಾತ್ರ. ಉಳಿದವರೆಲ್ಲರೂ ಲೋಕಾಯುಕ್ತರು ಆರೋಪ ಪಟ್ಟಿ ಸಲ್ಲಿಸದಂತೆ ತಡೆದಿದ್ದಾರೆ. ಇದೇಕೆ ಎಂಬುದಕ್ಕೆ ಹೆಚ್ಚಿನ ವಿವರಣೆಗಳು ಬೇಕಾಗಿಲ್ಲ. ಅಧಿಕಾರಿಗಳ ಭ್ರಷ್ಟಾಚಾರದಲ್ಲಿ ರಾಜಕಾರಣಿಗಳಿಗೆ ಇರುವ ಪಾಲು ಮುಖ್ಯ ಕಾರಣ. ಇನ್ನು ಧರ್ಮ, ಜಾತಿ, ಒಳ ಜಾತಿಗಳ ವ್ಯವಹಾರ ಬೇರೆಯೇ ಇದೆ.

ವಿರೋಧ ಪಕ್ಷದ ನಾಯಕರಾಗಿದ್ದಾಗ ಅನೇಕ ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆದಿದ್ದ ಯಡಿಯೂರಪ್ಪ ಇದಕ್ಕೆ ಹೊರತಾಗಿರುತ್ತಾರೆ ಎಂಬ ನಂಬಿಕೆ ಜನರಲ್ಲಿ ಈಗಲೂ ಉಳಿದಿದೆ. ಇದನ್ನು ನಿಜವಾಗಿಸಲಾದರೂ ಯಡಿಯೂರಪ್ಪನವರು ಲೋಕಾಯುಕ್ತರಿಗೆ ಹೆಚ್ಚಿನ ಶಕ್ತಿ ನೀಡಲು ಮುಂದಾಗಬೇಕು. ಇಲ್ಲದಿದ್ದರೆ ಲೋಕಾಯುಕ್ತರ ದಾಳಿಗಳ ಮೂಲಕ ಬಹಿರಂಗಗೊಳ್ಳುವ ಅಕ್ರಮ ಆಸ್ತಿಯ ವಿವರಗಳು ಅಧಿಕಾರಿಗಳ ಅಕ್ರಮ ಸಂಪಾದನೆಯ ಪ್ರಮಾಣದ ಸೂಚ್ಯಂಕ ಮಾತ್ರವಾಗಿ ಉಳಿಯುತ್ತದೆ.

Comments are closed.