`ನೋಡಿ ಸಾರ್, ನಮ್ಮದು ಕಂಪ್ಲೀಟ್ ಡಿಫ್ರೆಂಟ್ ಸಿನಿಮಾ ಸಾರ್. ನಾವು ಇಡೀ ಕತೆಯನ್ನು ಡಿಫ್ರೆಂಟ್ ಆಗಿ ಪ್ರೆಸೆಂಟ್ ಮಾಡಿದ್ದೀವಿ. ತುಂಬಾನೆ ಡಿಫ್ರೆಂಟ್ ಕತೆ. ….ಅವ್ರ ಅಭಿಮಾನಿಗಳು ಎಂಜಾಯ್ ಮಾಡ್ತಾರೆ. ಯಂಗ್‌ಸ್ಟರ್ಸ್‌ಗೆ ಇಷ್ಟ ಆಗುತ್ತೆ. ಲೇಡೀಸ್‌ಗೂ ಇಷ್ಟ ಆಗುತ್ತೆ ಸಾರ್. ನೀವು ನೋಡ್ತಾ ಇರಿ ಸಾರ್. ಗ್ಯಾರಂಟಿ ಹಂಡ್ರೆಡ್ ಡೇಸ್.’
`ನಮ್ಮ ಪಕ್ಷ ಭಿನ್ನವಾದುದು. ಸಿದ್ಧಾಂತಗಳಿಗೆ ಬದ್ಧವಾದುದು. ಕಾಂಗ್ರೆಸ್ಸಿನ ಭ್ರಷ್ಟಾಚಾರ, ಜೆಡಿಎಸ್‌ನ ವಚನಭ್ರಷ್ಟತೆ ಸಂಸ್ಕೃತಿ ನಮ್ಮದಲ್ಲ. ನಮ್ಮದು ರಾಷ್ಟ್ರೀಯವಾದಿ ಪಕ್ಷ. ನಾವು ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ಪೂರ್ಣ ಅವಧಿಗೆ ಸ್ಥಿರ ಸರಕಾರವನ್ನು ನೀಡುತ್ತೇವೆ. ರೈತರಿಗೆ ಉಚಿತ ವಿದ್ಯುತ್ ನೀಡುತ್ತೇವೆ. ವಿದ್ಯುತ್ ಬಾಕಿಯನ್ನು ಮನ್ನಾ ಮಾಡುತ್ತೇವೆ. ಬಡತನ ರೇಖೆಗೆ ನಿಗದಿ ಪಡಿಸಿರುವ ಆದಾಯದ ಮಿತಿಯನ್ನು 11,800ರಿಂದ 30,000 ರೂಪಾಯಿಗಳಿಗೆ ಏರಿಸುತ್ತೇವೆ. ಕರ್ನಾಟಕದ ಎಲ್ಲ ಸಮಸ್ಯೆಗಳಿಗೂ ಬಿಜೆಪಿಯೇ ಪರಿಹಾರ’
ಮೇಲಿನ ಎರಡೂ ಹೇಳಿಕೆಗಳ ಮಧ್ಯೆ ಏನಾದರೂ ವ್ಯತ್ಯಾಸವಿದೆಯೇ? ಗಾಂಧಿನಗರಿಗರು ಹೇಳುವ ಕಂಪ್ಲೀಟ್ ಡಿಫ್ರೆಂಟ್ ಸಿನಿಮಾ ಎಂಬುದು ತಮಿಳಿನಿಂದಲೋ ತೆಲುಗಿನಿಂದಲೋ ಕದ್ದ ಸರಕನ್ನಷ್ಟೇ ಹೊಂದಿರುತ್ತದೆ. ಇದನ್ನು ಯಾರಾದರೂ ಪ್ರಶ್ನಿಸಿದರೆ ತಕ್ಷಣ ಗಾಂಧಿನಗರ ಉತ್ತರ ಕೊಡುತ್ತದೆ. `ಜಗತ್ತಿನಲ್ಲಿ ಇರುವುದೇ ಒಂಬತ್ತು ಕತೆಗಳು. ಅದನ್ನೇ ಡಿಫ್ರೆಂಟ್ ಆಗಿ ಹೇಳುವುದಷ್ಟೇ ನಮ್ಮ ಕೆಲಸ. ಹೊಸ ಕತೆ ಎಂಬುದೊಂದಿಲ್ಲ.’
ಪಾರ್ಟಿ ವಿದ್ ಎ ಡಿಫರೆನ್ಸ್ ಎಂದು ಸದಾ ಹೇಳಿಕೊಳ್ಳುವ ಬಿಜೆಪಿ ಸರಕಾರ ಈಗ ಕರ್ನಾಟಕದಲ್ಲಿ 100ನೇ ದಿನದತ್ತ ಕಾಲಿಡುತ್ತಿದೆ. ಉಚಿತ ವಿದ್ಯುತ್ತಿಗೇಕೆ ಷರತ್ತು ಹಾಕುತ್ತಿದ್ದೀರಿ? ಬಾಕಿ ಮನ್ನಾ ಮರೆತೇ ಬಿಟ್ಟಿದ್ದೀರಲ್ಲ? ಬಡವರನ್ನು ಗುರುತಿಸುವ ಆದಾಯ ಮಿತಿಯ ಹೆಚ್ಚಳದ ವಿಷಯ ಏನಾಯಿತು? ಎಂದು ಕೇಳಿದರೆ ಅದಕ್ಕೆ ಪಕ್ಕಾ ಗಾಂಧಿನಗರದ ಉತ್ತರವೇ ದೊರೆಯುತ್ತದೆ. `ಉಚಿತ ವಿದ್ಯುತ್ ಎಂದರೆ ಎಲ್ಲರಿಗೂ ಉಚಿತ ವಿದ್ಯುತ್ ಎಂದರ್ಥವಲ್ಲ. ಬಾಕಿ ಮನ್ನಾ ಮಾಡುತ್ತೇವೆ ಎಂದು ಹೇಳಿದ್ದು ಹೌದು. ಆದರೆ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನೂ ನೋಡಬೇಕಲ್ಲ. ಎರಡು ರೂಪಾಯಿಗೆ ಅಕ್ಕಿ ಕೊಡಬೇಕು ಎಂದು ಹೇಳಿದಾಗ ಒಂದು ಕೆ.ಜಿ. ಅಕ್ಕಿಗೆ 12 ರೂಪಾಯಿ ಇತ್ತು. ಈಗ 24 ರೂಪಾಯಿಗಳಷ್ಟಾಗಿದೆ…’ ಹೀಗೆ ಉತ್ತರಗಳು ಸಾಲು ಸಾಲಾಗಿ ಬರುತ್ತವೆ.
***
ಕರ್ನಾಟಕದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವುದಕ್ಕೆ ಮೊದಲು 26 ಸರಕಾರಗಳು ಅಸ್ತಿತ್ವಕ್ಕೆ ಬಂದಿವೆ. ಎಸ್.ಎಂ. ಕೃಷ್ಣ ಪಟೇಲ್ ಸರಕಾರದ ಅವಧಿಯ ತನಕವೂ ಸರಕಾರ ನೂರು ದಿನಗಳನ್ನು ಪೂರ್ಣಗೊಳಿಸಿದ್ದು ಒಂದು `ಸಂಭ್ರಮಾಚರಣೆ’ಯ ವಿಷಯವಾಗಿರಲಿಲ್ಲ. ಮಾಧ್ಯಮಗಳೂ ಸರಕಾರದ ನೂರು ದಿನದ ಸಾಧನೆಗಳ ಚರ್ಚೆಯನ್ನೇನೂ ಆರಂಭಿಸುತ್ತಿರಲಿಲ್ಲ. ಸರಕಾರಕ್ಕೆ ಒಂದು ವರ್ಷ ತುಂಬಿದ ನಂತರವಷ್ಟೇ ಇಂಥದ್ದಕ್ಕೆ ಅವಕಾಶವಿತ್ತು. ಎಸ್ ಎಂ ಕೃಷ್ಣ ಅವರ ಸರಕಾರ ನೂರು ದಿನಗಳನ್ನು ಪೂರೈಸಿದಾಗ ಈ ಪರಂಪರೆ ಆರಂಭವಾಯಿತು. ಸರಕಾರೀ ಜಾಹೀರಾತುಗಳು ಮಾಧ್ಯಮಗಳನ್ನು ತುಂಬಿಕೊಂಡವು. ಜತೆಗೇ ಮಾಧ್ಯಮಗಳಲ್ಲಿ ಸರಕಾರದ ನೂರು ದಿನಗಳ ಸಾಧನೆಯ ಕುರಿತ ಚರ್ಚೆಗಳೂ ತುಂಬಿಕೊಂಡವು. ಈಗ ಯಡಿಯೂರಪ್ಪನವರ ಸರಕಾರ ನೂರನೇ ದಿನದತ್ತ ಸಾಗುತ್ತಿರುವ ಹೊತ್ತಿನಲ್ಲೂ ಅದೇ ಸಂಭವಿಸುತ್ತಿದೆ. ಸರಕಾರಕ್ಕೆ ನೂರು ದಿನ ತುಂಬುತ್ತಿರುವುದು ಒಂದು `ಆಚರಣೆ’ಯ ವಿಷಯವಾಗುತ್ತಿದೆ.
ಒಂದು ಸರಕಾರದ ಆಡಳಿತಾವಧಿ ಐದು ವರ್ಷ. ಈ ಐದು ವರ್ಷಗಳ ಅವಧಿಯಲ್ಲಿ ಆರಂಭದ ನೂರು ದಿನಗಳಿಗೆ ವಿಶೇಷ ಮಹತ್ವವೇನೂ ಇರುವುದಿಲ್ಲ. ಅಂಥದ್ದೊಂದು ಮಹತ್ವ ಬರಬೇಕೆಂದರೆ ಸರಕಾರ ಐದು ವರ್ಷಗಳ ಕಾಲ ಬದುಕುವ ಬಗ್ಗೆ ಸಂಶಯವಿರಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ ಅವಧಿಯನ್ನು ಪೂರ್ಣಗೊಳಿಸುವ ಬಗ್ಗೆ ಮಾಧ್ಯಮಗಳಿಗೆ ಸಂಶಯವಿರಬೇಕು. ಇಲ್ಲದಿದ್ದರೆ ಸರಕಾರದ `ಸಾರ್ವಜನಿಕ ಸಂಪರ್ಕ ತಜ್ಞರು’ ಸಿಕ್ಕಾಪಟ್ಟೆ ಉತ್ಸಾಹಿಗಳಾಗಿರಬೇಕು. ಎಸ್ ಎಂ ಕೃಷ್ಣ ಅವರ ಸರಕಾರದ ಸಂದರ್ಭದಲ್ಲಿ ಕೊನೆ ಅಂಶ ಮುಖ್ಯ ಪಾತ್ರವಹಿಸಿತ್ತು. ಯಡಿಯೂರಪ್ಪನವರ ಸರಕಾರದಲ್ಲಿ ಈ ಮೂರರಲ್ಲಿ ಯಾವುದು ಮುಖ್ಯ ಪಾತ್ರವಹಿಸುತ್ತಿದೆ ಎಂದು ನಿರ್ಧರಿಸುವುದು ಕಷ್ಟವಾಗುತ್ತಿದೆ.
ಈ ವಿದ್ಯಮಾನವನ್ನೂ ಗಾಂಧೀನಗರದ ವಿದ್ಯಮಾನಗಳನ್ನು ಹೋಲುತ್ತದೆ. ಹತ್ತು ವರ್ಷಗಳ ಹಿಂದಿನ ಸಿನಿಮಾ ಜಾಹೀರಾತುಗಳು ಮತ್ತು ಪೋಸ್ಟರ್‌ಗಳನ್ನು ಒಮ್ಮೆ ನೆನಪಿಸಿಕೊಂಡರೆ ಇದು ಅರ್ಥವಾಗುತ್ತದೆ. ಪೊಸ್ಟರ್‌ಗಳು ಮತ್ತು ಜಾಹೀರಾತುಗಳಲ್ಲಿ `ಜನಭರಿತ ಮೂರನೇ ವಾರ’ದಂಥ ಒಕ್ಕಣೆಗಳಿರುತ್ತಿದ್ದವು. ಈಗ ಅವೇ ಜಾಹೀರಾತುಗಳು ಮತ್ತು ಪೋಸ್ಟರ್‌ಗಳಲ್ಲಿ `ಜನಭರಿತ ಮೂರನೇ ದಿನ’ ಎಂದಿರುತ್ತದೆ. ಚಿತ್ರವೊಂದರ ಪ್ರದರ್ಶನದ ದಿನಗಳ ಲೆಕ್ಕಾಚಾರ ವಾರಗಳಿಂದ ದಿನಗಳಿಗೆ ಇಳಿದುಬಿಟ್ಟಿದೆ. ಸರಕಾರದ ಅಸ್ತಿತ್ವದ ಅವಧಿ ಈಗ ವರ್ಷಗಳಿಂದ ದಿನಗಳಿಗೆ ಕುಸಿದಿದೆ ಎಂದು ಭಾವಿಸೋಣವೇ?
***
ಅಧಿಕಾರಕ್ಕೇರುವ ತನಕ ಮಾತ್ರ ರಾಜಕೀಯ ಪಕ್ಷಗಳೂ `ಡಿಫ್ರೆಂಟ್’ ಆಗಿರುತ್ತವೆ. ಗಾಂಧಿನಗರದ ಸಿನಿಮಾಗಳೂ ಅಷ್ಟೇ ಬಿಡುಗಡೆಯಾಗುವ ತನಕವೂ `ಡಿಫ್ರೆಂಟ್’. ಇದನ್ನು ಬಿಜೆಪಿ ಅಧಿಕಾರಕ್ಕೆ ಬಂದ ನೂರೇ ದಿನಗಳಲ್ಲಿ ಸಾಬೀತು ಮಾಡಿದೆ. ವರ್ಗಾವಣೆಗಳಿಂದ ಆರಂಭಿಸಿ ಆಪರೇಷನ್ ಕಮಲದ ತನಕ ಬಿಜೆಪಿಯೂ ಇತರ ಎಲ್ಲಾ ಪಕ್ಷಗಳಂತೆಯೇ ಭ್ರಷ್ಟವೂ ಅಪ್ರಾಮಾಣಿಕವೂ ಆಗಿದೆ ಎಂಬುದು ಸಾಬೀತಾಗಿದೆ. ಇನ್ನು ಅಭಿವೃದ್ಧಿಯ ವಿಷಯ ಮಾತನಾಡದೇ ಇರುವುದೇ ಒಳ್ಳೆಯದು. ಗುಜರಾತ್‌ನ ರಿಮೇಕ್ ಆದರೂ ಇಲ್ಲಿ ನಡೆಯುತ್ತದೆ ಎಂದು ಭಾವಿಸಿದ್ದ ಬಿಜೆಪಿ ಕಾರ್ಯಕರ್ತರಿಗೇ ನಿರಾಶೆಯಾಗಿದೆ.
ಉಚಿತ ವಿದ್ಯುತ್ ನೀಡಲು ಸಾಧ್ಯವಿಲ್ಲ, ಪಡಿತರ ಸಬ್ಸಿಡಿಯನ್ನು ನೀಡಲು ಸಾಧ್ಯವಿಲ್ಲ ಎಂದು ನೇರವಾಗಿ ಹೇಳುವ ಧೈರ್ಯ ಮಾಡಿದ್ದರೆ ಈಗಿನ ಸರಕಾರವನ್ನು ಕನಿಷ್ಠ ಈ ಪ್ರಾಮಾಣಿಕತೆಗಾಗಿ ಯಾದರೂ ಭಿನ್ನ ಎಂದು ಒಪ್ಪಿಕೊಳ್ಳಬಹುದಿತ್ತು. ಈಡೇರಿಸಲಾಗದ ಭರವಸೆಗಳನ್ನು ಈಡೇರಿಸುವ ನಾಟಕವನ್ನು ಕಾಂಗ್ರೆಸ್ ಐವತ್ತು ವರ್ಷಗಳ ಆಡಿದೆ. ತಾನು ಹುಟ್ಟಿದ ದಿನದಿಂದ ಕಾಂಗ್ರೆಸ್‌ನ ಸಿದ್ಧಾಂತವನ್ನೂ ಆಡಳಿತ ವಿಧಾನವನ್ನೂ ಖಂಡಿಸುತ್ತಲೇ ಬಂದಿರುವ ಬಿಜೆಪಿ ಕೂಡಾ ತನಗೆ ಅಧಿಕಾರ ಸಿಕ್ಕ ತಕ್ಷಣ ಕಾಂಗ್ರೆಸ್‌ನ ಅದೇ ನೀತಿಯನ್ನು ಹೊಸ ಭಾಷೆಯಲ್ಲಿ ಹೇಳುತ್ತಿದೆ ಅಷ್ಟೇ. ಹಳೆಯ ಸರಕಾರಗಳು ರೂಪಿಸಿ ವಿಫಲವಾದ ಯೋಜನೆಗಳನ್ನು ಹೊಸ ಹೆಸರಿನಲ್ಲಿ ನೀಡುವಷ್ಟರ ಮಟ್ಟಿಗೆ ನಮ್ಮ ರಾಜಕಾರಣಿಗಳ ಸೃಜನಶೀಲತೆ ಸತ್ತು ಹೋಗಿದೆಯೇ? ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು ಪಾಲಿಸಲೇ ಬೇಕಾದ ಅನಿವಾರ್ಯತೆ ನಮಗಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಇಂಥ ಕಾನೂನುಗಳನ್ನು ನಮ್ಮಿಂದ ಮಾಡಿಸಿವೆ. ಸಾಲ ಪಡೆಯಲು ಇಂಥಾ ಕಾನೂನು ಮಾಡುವುದು ಅನಿವಾರ್ಯವಾಗಿತ್ತು. ಎಂದು ಧೈರ್ಯವಾಗಿ ಹೇಳುವುದಕ್ಕೆ ಯಡಿಯೂರಪ್ಪನವರಿಗೆ ಇರುವ ಸಮಸ್ಯೆಯಾದರೂ ಏನು?
ರಾಜಕಾರಣಿಗಳ ಸಮಸ್ಯೆ ಇರುವುದೇ ಇಲ್ಲಿ. ಇದೂ ಗಾಂಧಿನಗರದ ಸಮಸ್ಯೆಯೇ. ಹೊರಗಿನಿಂದ ಗಾಯಕರನ್ನು, ನಾಯಕಿಯರನ್ನು ಕರೆಯಿಸುವಾಗ, ರಿಮೇಕ್ ಚಿತ್ರಗಳನ್ನು ಮಾಡುವಾಗ ಅವರು ನೀಡುವ ಕಾರಣ ಒಂದೇ. `ನಮ್ಮಲ್ಲಿ ನಮಗೆ ಬೇಕಾದ ಗಾಯಕರಿಲ್ಲ, ನಾಯಕಿಯರಿಲ್ಲ, ಕಥೆಗಳಿಲ್ಲ ಆದ್ದರಿಂದ ಇದು ಅನಿವಾರ್ಯ’. ಯಡಿಯೂರಪ್ಪನವರೂ ಅಷ್ಟೇ ಬೇರೇ ಬೇರೇ ಪಕ್ಷಗಳಿಂದ ಬಂದವರಿಗೆ ಸಚಿವ ಸ್ಥಾನ ಕೊಟ್ಟರು. ಅವರಿಗೂ ಅಧಿಕಾರ ಉಳಿಸಿಕೊಳ್ಳಲು ಬೇಕಾದವರು ಪಕ್ಷದ ಒಳಗಿಲ್ಲ.
***
ಗಾಂಧಿನಗರದ `ಡಿಫ್ರೆಂಟ್’ ಸಿನಿಮಾಗಳ ನಿರ್ದೇಶಕರು `ಪಾರಿನ್ ಲೊಕೇಷನ್’ಗಳನ್ನು ಹುಡುಕಿ ಹಾರುವಂತೆ ನಮ್ಮ ನೂರು ದಿನಗಳ ಹೀರೋ ಕೂಡಾ ಭರವಸೆಗಳ ಬಿತ್ತನೆಗೆ ಫಾರಿನ್ ಲೊಕೇಶನ್‌ನಲ್ಲಿದ್ದಾರೆ. ಅವರಿಗೂ ಗಾಂಧಿನಗರಿಗರಿಗೂ ಅನ್ವಯಿಸಬಹುದಾದ ಫ್ರೆಂಚ್ ಚಿತ್ರಕಾರನ ಹೇಳಿಕೆಯೊಂದಿದೆ. `ಸತ್ಯ ಇರುತ್ತದೆ-ಸುಳ್ಳನ್ನು ಮಾತ್ರ ಆವಿಷ್ಕರಿಸಲೇ ಬೇಕಾಗುತ್ತದೆ’. ನಿಮ್ಮ ಆವಿಷ್ಕಾರಗಳು ಜನರಿಗೆ ತಿಳಿಯುವ ಮೊದಲು ಇರುವ ಸತ್ಯವನ್ನು ಒಪ್ಪಿಕೊಂಡುಬಿಡಿ.