ಇತ್ತೀಚೆಗೆ ಬೆಂಗಳೂರು, ಅಹಮದಾಬಾದ್ಗಳಲ್ಲಿ ಸರಣಿ ಸ್ಫೋಟಗಳು ಸಂಭವಿಸಿದಾಗ ಅದಕ್ಕೆ ಸಂಬಂಧಿಸಿದಂತೆ ಬಂದ ಎರಡು ಮುಖ್ಯ ಪ್ರತಿಕ್ರಿಯೆಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿಲ್ಲ. ಮೊದಲನೆಯದ್ದು ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರದ್ದು. ಸ್ಫೋಟಗಳೆಲ್ಲವೂ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ ನಡೆಯುತ್ತಿದೆ. ಸಂಸತ್ನಲ್ಲಿ ನಡೆದ ವೋಟಿಗಾಗಿ ನೋಟು ಹಗರಣದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಕಾಂಗ್ರೆಸ್ ಈ ಸ್ಫೋಟಗಳನ್ನು ಸಂಘಟಸಿದ್ದಿರಬೇಕು ಎಂಬ ಅರ್ಥದಲ್ಲಿ ಅವರು ಮಾತನಾಡಿದ್ದರು. ಈ ಪ್ರತಿಕ್ರಿಯೆ ಹೊರಬಿದ್ದ ದಿನವೇ ಸಫ್ದರ್ ಹಷ್ಮಿ ಮೆಮೋರಿಯಲ್ ಟ್ರಸ್ಟ್ನ ಶಬ್ನಂ ಹಶ್ಮಿ `ಪ್ರಭುತ್ವ ತನ್ನ ಉಳಿದೆಲ್ಲಾ ಸೇವೆಗಳನ್ನೂ ಖಾಸಗೀಕರಿಸಿರುವುದರಿಂದ ಅದಕ್ಕೆ ಉಳಿದಿರುವುದು ಭದ್ರತೆಯ ಕೆಲಸ ಮಾತ್ರ. ಇದನ್ನು ಜನರಿಗೆ ಆಗಾಗ ನೆನಪು ಮಾಡಿ ಕೊಡದೇ ಹೋದರೆ ಪ್ರಭುತ್ವವೇ ಅಪ್ರಸ್ತುತವಾಗಿಬಿಡುವ ಸಾಧ್ಯತೆ ಇದೆ. ಸರಣಿ ಸ್ಫೋಟಗಳನ್ನು ಈ ಹಿನ್ನೆಲೆಯಲ್ಲೂ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ’ ಎಂದಿದ್ದರು.
ನಗರ ಮಧ್ಯೆ ದೊಡ್ಡ ಪಟಾಕಿ ಸಿಡಿದರೂ ಅದರ ಹಿಂದೆ ಇಸ್ಲಾಮಿಕ್ ಭಯೋತ್ಪಾದನೆಯಿದೆ ಎಂದು ಹೇಳುವುದು ಬಿಜೆಪಿಗೆ ಅಭ್ಯಾಸವಾಗಿ ಹೋಗಿದೆ. ಅಂತಹ ಪಕ್ಷದ ಪ್ರಮುಖ ನಾಯಕಿಯೊಬ್ಬರು ಬಾಂಬ್ ಸ್ಫೋಟದ ಹಿಂದೆ ಮತ್ತೊಂದು ರಾಜಕೀಯ ಪಕ್ಷದ ಕೈವಾಡದ ಬಗ್ಗೆ ಆರೋಪಿಸಿದ್ದು ಸ್ವಲ್ಪ ಮಟ್ಟಿಗೆ ವಿಚಿತ್ರವಾಗಿಯೂ ವಿಶಿಷ್ಟವಾಗಿಯೂ ಇದೆ. ಅಷ್ಟೇ ಅಲ್ಲ ಅವರು ಸ್ಫೋಟಗಳನ್ನು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷವೇ ಮಾಡಿಸಲು ಕಾರಣವಾದ ಅಂಶದ ಬಗ್ಗೆಯೂ ಹೇಳಿದ್ದರು. ಆದರೆ ಅದನ್ನು ಸ್ವತಃ ಬಿಜೆಪಿ ಸೇರಿದಂತೆ ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಮಾಧ್ಯಮಗಳೂ ಅಷ್ಟೇ. `ಸ್ಫೋಟಗಳ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಪಾಲಿಸಬೇಕಾದ ನೀತಿ ಸಂಹಿತೆ’ಯ ಬಗ್ಗೆಯಷ್ಟೇ ಮಾತನಾಡಿ ಸುಮ್ಮನಾಗಿಬಿಟ್ಟವು.
ಶಬ್ನಂ ಹಶ್ಮಿಯವರ ಅಭಿಪ್ರಾಯವೂ ಒಂದು ರೀತಿಯಲ್ಲಿ ಸುಷ್ಮಾ ಸ್ವರಾಜ್ ಅವರ ಮಾತನ್ನೇ ಮತ್ತೊಂದು ಬಗೆಯಲ್ಲಿ ಧ್ವನಿಸುತ್ತಿದೆ. ಆದರೆ ಇದು ಟಿ.ವಿ.ಯ ಟಾಕ್ ಶೋ ಒಂದರಲ್ಲಿ ಬಂದ ಆನುಷಂಗಿಕವಾದ ಮಾತಾಗಿಯಷ್ಟೇ ಉಳಿಯಿತು. ಪ್ರಭುತ್ವ ಅಥವಾ ಸರಕಾರ ತನ್ನ ಪ್ರಸ್ತುತತೆಯನ್ನು ಉಳಿಸಿಕೊಳ್ಳಲು ಸ್ಫೋಟಗಳನ್ನು ನಡೆಸಿದ್ದಿರಬಹುದೇ ಎಂಬ ಸಂಶಯವನ್ನು ದೂರಗೊಳಿಸುವ ಯಾವ ಪ್ರಯತ್ನವೂ ಸರಕಾರದ ಕಡೆಯಿಂದಂತೂ ಆಗಲಿಲ್ಲ. ಭಯೋತ್ಪಾದನೆಯ ಕುರಿತು `ತಜ್ಞ ಬರೆಹ’ಗಳನ್ನು ಒದಗಿಸುವವರೂ ಈ ದೃಷ್ಟಿಕೋನದ ಕುರಿತು ಏನನ್ನೂ ಹೇಳಲಿಲ್ಲ.
***
ಕರ್ನಾಟಕದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಹೊತ್ತಿಗೆ ಸರಿಯಾಗಿ ಬೆಂಗಳೂರಿನಲ್ಲೊಂದು ಕಳ್ಳಭಟ್ಟಿ ದುರಂತ ನಡೆಯಿತು. ಅದರ ಹಿಂದೆಯೇ ಹಾವೇರಿಯಲ್ಲಿ ರೈತರು ರಸಗೊಬ್ಬರಕ್ಕಾಗಿ ಆಗ್ರಹಿಸಿ ನಡೆಸಿದ ಚಳವಳಿ ಹಿಂಸಾರೂಪ ತಳೆಯಿತು. ಪೊಲೀಸ್ ಗೊಲಿಬಾರ್ಗೆ ಇಬ್ಬರು ರೈತರು ಬಲಿಯಾದರು. ಈ ಎರಡೂ ಪ್ರಕರಣಗಳ ಹಿಂದೆ ರಾಜಕೀಯ ಕೈವಾಡದ ಸಂಶಯವನ್ನು ಸ್ವತಃ ಮುಖ್ಯಮಂತ್ರಿಗಳೇ ವ್ಯಕ್ತಪಡಿಸಿದ್ದರು. ಈ ಸಂಶಯಕ್ಕೆ ಪುಷ್ಟಿ ನೀಡುವ ಅಂಶಗಳ ಬಗ್ಗೆ ಅವರೂ ಹೇಳಲಿಲ್ಲ. ದಿನಗಳೆಯುತ್ತಾ ಹೊಸ ಸಮಸ್ಯೆಗಳು ಎದುರಾದಂತೆ ಜನರೂ ಇವುಗಳನ್ನು ಮರೆತುಬಿಟ್ಟರು. ರಾಜಕೀಯ ಕಾರಣಕ್ಕಾಗಿ ಒಂದು ಕಳ್ಳಭಟ್ಟಿ ದುರಂತವನ್ನು ಸಂಘಟಿಸಲು ಸಾಧ್ಯವಿದ್ದರೆ, ಚಳವಳಿಯೊಂದನ್ನು ಉದ್ದೇಶಪೂರ್ವಕವಾಗಿ ಹಿಂಸೆಗೆ ತಿರುಗಿಸಲು ಸಾಧ್ಯವಿದ್ದರೆ ಅಮೋನಿಯಂ ನೈಟ್ರೇಟ್ನಂಥ ಕಚ್ಚಾ ಸ್ಫೋಟಕಗಳನ್ನು ಬಳಸಿ ಸ್ಫೋಟಗಳನ್ನೂ ನಡೆಸಬಹುದಲ್ಲವೇ?
ಸುಷ್ಮಾ ಸ್ವರಾಜ್ ಅವರು ಹೇಳಿದಂತೆ ವೋಟಿಗಾಗಿ ನೋಟು ಹಗರಣದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಅಹಮದಾಬಾದ್ನಲ್ಲಿ ಸ್ಫೋಟದ ಸಂಚೊಂದನ್ನು ರೂಪಿಸಲಾಗಿತ್ತು. ಇದೇ ತರ್ಕವನ್ನು ಬೆಂಗಳೂರಿಗೆ ಅನ್ವಯಿಸುವುದಾದರೆ ವಿದ್ಯುತ್ ಕೊರತೆ, ಗೊಬ್ಬರದ ಕೊರತೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬೆಂಗಳೂರು ಸ್ಫೋಟವನ್ನು ಸಂಘಟಿಸಲಾಗಿತ್ತು ಎಂದು ಭಾವಿಸಬಹುದೇ?
***
ದೇಶವ್ಯಾಪಿಯಾಗಿ ಇತ್ತೀಚೆಗೆ ನಡೆದ ಸ್ಫೋಟಗಳ ಸರಣಿಯಲ್ಲಿ ಒಂದು ಅಂಶ ಸ್ಪಷ್ಟವಾಗಿತ್ತು. ಸ್ಫೋಟಗಳೆಲ್ಲವೂ ಹೇಗೆ ಪೂರ್ವ ನಿಯೋಜಿತವೋ ಹಾಗೆಯೇ ಸರಕಾರದ ಇದಕ್ಕೆ ಪ್ರತಿಕ್ರಿಯಿಸಿದ ರೀತಿಯೂ ಪೂರ್ವನಿಯೋಜಿತವೆಂಬ ಸಂಶಯ ಬರುವಂತೆ ಇತ್ತು. ವರ್ಷಗಳಿಂದ ಹೇಳಿಕೊಂಡು ಬರುತ್ತಿರುವ ಅವೇ ಸಂಘಟನೆಗಳ ಹೆಸರುಗಳು ಮತ್ತೆ ಮತ್ತೆ ಪೊಲೀಸರ ಬಾಯಿಂದ ಬಂದವು. ಲಷ್ಕರ್ ಎ ತಯ್ಯೆಬಾ, ಹಿಜ್ಬುಲ್ ಮುಜಾಹಿದೀನ್, ಸಿಮಿ ಹೀಗೆ ಸ್ಫೋಟದ ನಡೆದ ಕ್ಷಣವೇ ಯಾರು ಬೇಕಾದರೂ ಊಹಿಸಬಹುದಾದ ಹೆಸರುಗಳಿವು. ಸ್ಫೋಟಗಳು ನಡೆದ ಕೆಲವೇ ದಿನಗಳಲ್ಲಿ ಒಂದಷ್ಟು ಮಂದಿಯನ್ನು ಬಂಧಿಸಲಾಗುತ್ತದೆ. ಲಷ್ಕರ್ನ ಉತ್ತರ ಭಾರತ ಕಮಾಂಡರ್ನನ್ನೇ ಬಂಧಿಸಿದ್ದೇವೆಂದೋ, ಬಾಂಬ್ ಸ್ಫೋಟದ ಹಿಂದಿನ ಮೆದುಳನ್ನು ಕಂಡುಹಿಡಿದೆವೆಂದೋ ಪೊಲೀಸರು ಮಾಧ್ಯಮಗಳ ಮುಂದೆ ಹೇಳುತ್ತಾರೆ. ಈ ಮೆದುಳುಗಳು, ಕಮಾಂಡರ್ಗಳೆಲ್ಲಾ ಜೈಲಿನಲ್ಲಿ ಇರುವಾಗಲೇ ಮತ್ತೊಂದೆಡೆ ಸ್ಫೋಟ ಸಂಭವಿಸುತ್ತಿರುತ್ತದೆ. ಮತ್ತೊಂದಷ್ಟು ಮೆದುಗಳು ಮತ್ತು ಕಮಾಂಡರ್ಗಳ ಬಂಧನ ನಡೆಯುತ್ತದೆ. ಕಳೆದ ವರ್ಷ ಆಗಸ್ಟ್ನಲ್ಲಿ ಹೈದರಾಬಾದ್ನಲ್ಲಿ ಎರಡು ಕಡೆ ಸ್ಫೋಟಗಳು ನಡೆದವು. ಇದರಲ್ಲಿ ಐವತ್ತು ಮಂದಿ ಮೃತಪಟ್ಟರು. ಈ ಪ್ರಕರಣಗಳಿಗೆ ಸಂಬಂಧಪಟ್ಟಂತೆ 97 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. 42 ಮಂದಿಯನ್ನು ನಿರಪರಾಧಿಗಳೆಂದು ಬಿಡುಗಡೆ ಮಾಡಲಾಯಿತು. ಉಳಿದವರನ್ನು ಇನ್ನೂ ಬಿಡುಗಡೆ ಮಾಡದಿರುವುದಕ್ಕೆ ಕಾರಣ ಅವರು ಪ್ರಕರಣದ ಆರೋಪಿಗಳಾಗಿರುವುದಕ್ಕಲ್ಲ. ಇವರೆಲ್ಲಾ ಬಾಂಗ್ಲಾ ದೇಶದಿಂದ ಬಂದ ಅಕ್ರಮ ವಲಸಿಗರು ಎಂಬ ಕಾರಣಕ್ಕಾಗಿ ಇವರಿನ್ನೂ ಜೈಲುಗಳಲ್ಲಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಬಂಧನಗಳು ಈತನಕ ನಡೆದಿಲ್ಲ.
ಕಳೆದ ವರ್ಷ ಮೇ ತಿಂಗಳಿನಲ್ಲಿ ನಡೆದ ಹೈದರಾಬಾದ್ ಮಕ್ಕಾ ಮಸೀದಿ ಸ್ಫೋಟದ ಕಥೆಯೂ ಇದಕ್ಕಿಂತ ಭಿನ್ನವಲ್ಲ. ಹರ್ಕತುಲ್ ಜಿಹಾದ್ ಎಂಬ ಸಂಘಟನೆ ಸ್ಫೋಟದ ಹಿಂದಿದೆ ಎಂಬುದು ಪೊಲೀಸರ ಊಹೆ. ಈ ತನಕ ಯಾರ ಮೇಲೂ ಆರೋಪ ಪಟ್ಟಿ ಸಲ್ಲಿಸಲಾಗಿಲ್ಲ. ಮುಖ್ಯ ಆರೋಪಿಯನ್ನು ಇನ್ನೂ ಪೊಲೀಸರು ಹುಡುಕುತ್ತಲೇ ಇದ್ದಾರೆ. ಸಂಝೋತಾ ಎಕ್ಸ್ಪ್ರೆಸ್ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 68. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿತ್ತು. ಆದರೆ ಅವರನ್ನು ಮತ್ತೆ ಬಿಡುಗಡೆ ಮಾಡಲಾಯಿತು. ಈಗ ಹರಿಯಾಣಾ ಪೊಲೀಸರ ಬಳಿ ಈ ಪ್ರಕರಣದ ಮಟ್ಟಿಗೆ ಇರುವ ಮಾಹಿತಿ ಶೂನ್ಯ. ಈ ವರ್ಷ ಮೇ ತಿಂಗಳಿನಲ್ಲಿ ಸಂಭವಿಸಿದ ಜೈಪುರ್ ಸ್ಫೋಟ 68 ಮಂದಿ ಮುಗ್ಧರನ್ನು ಬಲಿತೆಗೆದುಕೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಬಾಂಗ್ಲಾ ಪ್ರಜೆಗಳನ್ನು ಬಂಧಿಸಲಾಗಿತ್ತಾದರೂ ಮುಂದೆ ಎಲ್ಲರನ್ನೂ ಬಿಡುಗಡೆ ಮಾಡಲಾಯಿತು. ದಿಲ್ಲಿಯಲ್ಲಿ ಒಬ್ಬಾತನನ್ನು ಆರ್ಡಿಎಕ್ಸ್ ಇಟ್ಟುಕೊಂಡಿದ್ದನೆಂದು ಬಂಧಿಸಲಾಯಿತು. ಆಮೇಲೆ ಈ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಯಾವ ಪ್ರಗತಿಯೂ ಆಗಿಲ್ಲ.
2008ರಲ್ಲಿ ಮಹಾರಾಷ್ಟ್ರದ ನಾಂದೇಡ್ನಲ್ಲಿ ನಡೆದ ಸ್ಫೋಟ ಪ್ರಕರಣ ಬಹಳ ಕುತೂಹಲಕಾರಿಯಾಗಿತ್ತು. ಆರ್ಎಸ್ಎಸ್ ಸಂಘಟನೆಯ ಕಾರ್ಯಕರ್ತರು ಎನ್ನಲಾದವರೊಬ್ಬರ ಮನೆಯಲ್ಲಿ ಈ ಸ್ಫೋಟ ನಡೆದಿತ್ತೆಂದು ಮಾಧ್ಯಮಗಳು ವರದಿ ಮಾಡಿದ್ದವು. ಇದರಲ್ಲಿ ಇಬ್ಬರು ಮೃತಪಟ್ಟಿದ್ದರು ಈ ಕುರಿತ ತನಿಖೆ ಅಲ್ಲಿಂದಾಚೆಗೆ ಮುಂದುವರಿಯಲೇ ಇಲ್ಲ. ಪರ್ಭನಿ ಸ್ಫೋಟಗಳ ಹಿನ್ನೆಲೆಯಲ್ಲೂ ರಾಷ್ಟ್ರೀಯವಾದಿ ಸಂಘಟನೆಯೊಂದರ ಹೆಸರು ಕೇಳಿಬಂದಿತ್ತು. ಈ ಕುರಿತ ತನಿಖೆ ಏನಾಯಿತೆಂದು ಯಾರಿಗೂ ತಿಳಿಯಲಿಲ್ಲ. ಈ ಪಟ್ಟಿಯನ್ನು ಹೀಗೆ ಬೆಳಸುತ್ತಲೇ ಹೋಗಬಹುದು. ಸುಷ್ಮಾ ಮತ್ತು ಶಬ್ನಂ ಅವರ ಹೇಳಿಕೆಗಳ ಜತೆಯಲ್ಲಿ ಈ ವಿವರಗಳನ್ನು ನೋಡಿದರೆ ಭಯೋತ್ಪಾದನೆ ನಾವಂದುಕೊಂಡಷ್ಟು ಅಥವಾ ಸರಕಾರ ಹೇಳುತ್ತಿರುವಷ್ಟು ಸರಳವಾದುದಲ್ಲ ಎಂಬುದಂತೂ ಮನದಟ್ಟಾಗುತ್ತದೆ.
***
ಸ್ಫೋಟಗಳನ್ನು ಸಂಭವಿಸಿದ ಮರು ಕ್ಷಣವೇ ಪೊಲೀಸರು `…ಸಂಘಟನೆಯ ಕೆಲಸ’ ಎನ್ನುವುದು. ಅದರ ಮಾಸ್ಟರ್ ಮೈಂಡ್ಗಳು ಇಂಥವರೇ ಎಂದು ಊಹಿಸುವುದನ್ನು ಕಂಡು ನಾವೆಲ್ಲಾ ನಮ್ಮ ಪೊಲೀಸರ ಶಕ್ತಿಯ ಕುರಿತು ಹೆಮ್ಮೆ ಪಡುತ್ತಿರುತ್ತೇವೆ. ಆದರೆ ಅವರ ತನಿಖೆಗಳು ಎಂಥವು ಎಂಬುದನ್ನು ಮೇಲೆ ಪಟ್ಟಿ ಮಾಡಿದ ಉದಾಹರಣೆಗಳೇ ಸ್ಪಷ್ಟಪಡಿಸುತ್ತಿವೆ. ಈಗಷ್ಟೇ ಅಹಮದಾಬಾದ್ ಸ್ಫೋಟದ ಹಿಂದಿನ ಮಾಸ್ಟರ್ ಮೈಂಡ್ ಅನ್ನೂ ಅದನ್ನು ನಡೆಸಿದ ಸಂಘಟನೆಯನ್ನೂ ಗುಜರಾತ್ ಪೊಲೀಸರು ಕಂಡುಹಿಡಿದಿದ್ದಾರೆ. ಆದರೆ ಇಲ್ಲೊಂದು ಸಮಸ್ಯೆ ಇದೆ. ಸುಷ್ಮಾ ಸ್ವರಾಜ್ ಅವರು ಹೇಳಿದ `ರಾಜಕೀಯ ಹುನ್ನಾರ’ಕ್ಕೂ ಈ ಸಂಘಟನೆಗಳಿಗೂ ಸಂಬಂಧವಿದೆಯೇ ಎಂಬುದನ್ನು ಬಿಜೆಪಿ ಆಡಳಿತವಿರುವ ಗುಜರಾತ್ ಸರಕಾರದ ಪೊಲೀಸರೂ ಹೇಳುತ್ತಿಲ್ಲ!