ದೇಶ ಸ್ಫೋಟಿಸುವಾಗ ಸೂಟ್‌ ಬದಲಾಯಿಸಿದವರು!

`ರೋಮ್‌ ಹೊತ್ತಿ ಉರಿಯುತ್ತಿದ್ದಾಗ ದೊರೆ ನೀರೋ ಪಿಟೀಲು ನುಡಿಸುತ್ತಿದ್ದ’ ಸಂಗತಿ ನಮಗೆಲ್ಲಾ ಗೊತ್ತಿದೆ. ನೀರೋ ಪಿಟೀಲು ನುಡಿಸುತ್ತಿದ್ದನೇ ಇಲ್ಲವೇ ಎಂಬುದರ ಬಗ್ಗೆ ಅನೇಕ ಚರ್ಚೆಗಳಿವೆ. ಕಾರಣ ಆಗ ಪಿಟೀಲು ಎಂಬ ವಾದ್ಯವೇ ಇರಲಿಲ್ಲ. ನಮ್ಮ ಈಗಿನ ಗಿಟಾರ್‌ನ ಮೂಲ ರೂಪವಾಗಿದ್ದ Lyre  ವಾದ್ಯವನ್ನು ನೀರೋ ನುಡಿಸುತ್ತಿದ್ದ ಎಂದು ರೋಮಿನ ಇತಿಹಾಸಕಾರರಲ್ಲಿ ಒಬ್ಬನಾಗಿರುವ ಕ್ಯಾಸಿಯಸ್‌ ಹೇಳಿದ್ದಾನೆ. ನೀರೋ ಪಿಟೀಲು ನುಡಿಸುತ್ತಿದ್ದನೇ ಇಲ್ಲವೇ ಎಂಬುದರಷ್ಟೇ ಮುಖ್ಯವಾದ ಮತ್ತೊಂದು ಪ್ರಶ್ನೆ ರೋಮ್‌ಗೆ ಬೆಂಕಿ ಹತ್ತಿಕೊಂಡದ್ದು ಹೇಗೆ ಎಂಬುದು? ಇದಕ್ಕೆ ಸಂಬಂಧಿಸಿದಂತೆ ಹಲವು ಅಭಿಪ್ರಾಯಗಳಿವೆ. ಕೆಲವರು ಇದನ್ನು ಒಂದು ಆಕಸ್ಮಿಕ ಎಂದು ಹೇಳಿದ್ದಾರೆ. ಇನ್ನು ಕೆಲವರು ಕ್ರೈಸ್ತರು ಬೆಂಕಿ ಹಚ್ಚಿದರು ಎನ್ನುತ್ತಾರೆ. ನೀರೋನ ಕಾಲದ ದಾಖಲೆಗಳನ್ನು ಇಟ್ಟುಕೊಂಡು ಈ ಬೆಂಕಿಗೂ ನೀರೋನೇ ಕಾರಣನಾಗಿದ್ದನೆಂದು ಕ್ಯಾಸಿಯಸ್‌ನಂಥ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.

ನೀರೋ ಕಾಲದಲ್ಲಿ ಮನೆಗಳನ್ನು ಮರದಿಂದ ನಿರ್ಮಿಸಲಾಗುತ್ತಿತ್ತು. ಗೋಡೆಗಳೂ ಮರದದಿಂದಲೇ ರೂಪುಗೊಳ್ಳುತ್ತಿದ್ದವು. ಕ್ಯಾಸಿಯಸ್‌ ದಾಖಲಿಸಿರುವಂತೆ `ನಗರವನ್ನು ನಾಶಮಾಡುವ ಅಭೀಪ್ಸೆಯಿಂದ ಉತ್ತೇಜಿತನಾದ ನೀರೋ ಕುಡುಕರಂತೆ ನಟಿಸಿ ನಗರಕ್ಕೆ ಕೊಳ್ಳಿ ಇಡಲು ಜನರನ್ನು ಕಳುಹಿಸಿದ. ಪಾಲಾಟೈನ್‌ ಬೆಟ್ಟದ ಮೇಲಿದ್ದ ತನ್ನ ಅರಮನೆಯಲ್ಲಿ ಉರಿಯುವ ರೋಮ್‌ ಅನ್ನು ನೋಡುತ್ತಾ ನೀರೋ Lyre  ನುಡಿಸುತ್ತಾ ಹಾಡಿದ’.

ಹನ್ನೆರಡು ಸೀಝರ್‌ಗಳು ಮತ್ತು ನೀರೋನ ಜೀವನ ಚರಿತ್ರೆಯನ್ನು ಬರೆದಿರುವ ಸೂಟೋನಿಯಸ್‌ ಹೇಳುವಂತೆ `ತನ್ನ ಹುಚ್ಚು ಗೀಳಿನಿಂದ ಪ್ರೇರೇಪಿತನಾಗಿ ನಗರಕ್ಕೆ ಬೆಂಕಿ ಇಡಲು ಭಟರನ್ನು ಕಳುಹಿಸಿದ. ನಗರಕ್ಕೆ ಬೆಂಕಿ ಹೊತ್ತಿಕೊಂಡು ಉರಿಯುವುದನ್ನು ಎಸ್ಕ್ವಿಲೈನ್‌ ಬೆಟ್ಟದ ಮೇಲಿದ್ದ ಮ್ಯಾಸಿನಾಸ್‌ ಗೋಪುರದಲ್ಲಿ Lyre  ನುಡಿಸುತ್ತಾ ಹಾಡುತ್ತಾ ನೋಡಿದ’. ರೋಮ್‌ನ ಮತ್ತೊಬ್ಬ ಇತಿಹಾಸಕಾರ ಟ್ಯಾಸಿಟಸ್‌ ಕೂಡಾ ರೋಮ್‌ಗೆ ಬೆಂಕಿ ಇಡಲು ತನ್ನದೇ ಜನರನ್ನು ಕಳುಹಿಸಿದ್ದ ನೀರೋ ನಗರ ಉರಿಯುತ್ತಿರುವಾಗ ಬಿದ್ದಿದ್ದಾಗ ತನ್ನ ಖಾಸಗಿ ವೇದಿಕೆಯಲ್ಲಿ Lyre  ನುಡಿಸುತ್ತಿದ್ದ ಎನ್ನುತ್ತಾನೆ.

ಈ ಎಲ್ಲಾ ಹೇಳಿಕೆಗಳಿಂದ ರೋಮ್‌ ಕೊಳ್ಳಿ ಇಟ್ಟದ್ದು ಸ್ವತಃ ಚಕ್ರವರ್ತಿ ನೀರೋ ಮತ್ತು ಉರಿಯುವ ನಗರವನ್ನು ನೋಡುತ್ತಾ ಆನಂದತುಂದಿನಲನಾಗಿ ಹಾಡಿದನೆಂಬುದು ಸ್ಪಷ್ಟ.

***

ಸೆಪ್ಟೆಂಬರ್‌ 13ರಂದು ದಿಲ್ಲಿಯಲ್ಲಿ ಸರಣಿ ಸ್ಫೋಟ ನಡೆಯಿತು. ಐದು ಕಡೆ ನಡೆದ ಸ್ಫೋಟದಲ್ಲಿ ಇಡೀ ದಿಲ್ಲಿಯೇ ತಲ್ಲಣಿಸಿತು. ಮರುದಿನ ಕೇಂದ್ರ ಗೃಹ ಸಚಿವರು ಭದ್ರತೆಯ ಸ್ಥಿತಿಯ ಕುರಿತು ಪರಿಶೀಲನೆ ನಡೆಸುವ ಒಂದು ಸಭೆಯನ್ನೂ ನಡೆಸಿದರು. ಇದರಲ್ಲಿ ಭಾಗವಹಿಸಿ ಹೊರಬಂದ ಕೇಂದ್ರ ಗೃಹ ಕಾರ್ಯದರ್ಶಿ ಮಧುಕರ್‌ ಗುಪ್ತ ಅವರು ನೀಡಿದ ಹೇಳಿಕೆ ಹೀಗಿದೆ. `ದೇಶಾದ್ಯಂತ ವಿವಿಧ ನಗರಗಳಲ್ಲಿ ನಡೆಯುತ್ತಿರುವ ಈ ಬಗೆಯ ಸ್ಫೋಟಗಳನ್ನು ನಾವು ನೋಡುತ್ತಿದ್ದೇವೆ. ಪ್ರತೀ ಘಟನೆಯೂ ನಮಗೊಂದು ಅನುಭವ. ಒಂದೊಂದು ಸ್ಫೋಟದಿಂದಲೂ ನಾವು ಕಲಿಯುತ್ತಿದ್ದೇವೆ’.

ಮಧುಕರ್‌ ಗುಪ್ತ ಅವರಿಗೆ ಪ್ರತಿಯೊಂದು ಸ್ಫೋಟವೂ ಒಂದು ಅನುಭವ, ಪ್ರತಿಯೊಂದರಿಂದಲೂ ಅವರು ಕಲಿಯುತ್ತಿದ್ದಾರೆ. ಇದು ಕೇವಲ ಯಾರೋ ಒಬ್ಬ ಅಧಿಕಾರಿಯ ಮಾತಲ್ಲ. ಇಡೀ ದೇಶದ ಆಂತರಿಕ ಭದ್ರತೆಯ ಹೊಣೆ ಹೊತ್ತಿರುವ ಗೃಹ ಖಾತೆಯ ಕಾರ್ಯದರ್ಶಿಯ ಮಾತುಗಳು. ಈತನಿಗೆ ಮತ್ತು ಈತ ಪ್ರತಿನಿಧಿಸುತ್ತಿರುವ ಇಲಾಖೆಗೆ ಜನರ ಸಾಯುವುದು ಕೇವಲ ಒಂದು ಅನುಭವ ಮತ್ತು ಕಲಿಕೆಯ ಅವಕಾಶ. ಈ ಅಧಿಕಾರಿ ಮತ್ತು ಆತ ಪ್ರತಿನಿಧಿಸುತ್ತಿರುವ ವರ್ಗ ರೋಮ್‌ಗೆ ಬೆಂಕಿ ಕೊಟ್ಟು ಅದನ್ನು ನೋಡುತ್ತಾ ಆನಂದ ತುಂದಿಲನಾಗಿ ನೋಡುತ್ತಾ Lyre  ನುಡಿಸಿದ ನೀರೋಗಿಂತ ಹೇಗೆ ಭಿನ್ನ.

ನಮ್ಮಲ್ಲೊಂದು ಹಳೆಯ ಗಾದೆಯೇ ಇದೆ- `ರಾಜನಂತೆ ಪ್ರಜೆ’. ಮಧುಕರ್‌ ಗುಪ್ತ ಪ್ರತೀ ಸ್ಫೋಟವನ್ನು ಒಂದು ಹೊಸ ಅನುಭವವಾಗಿ ಆಸ್ವಾದಿಸುತ್ತಿದ್ದಾಗ ಅವರು ಇಲಾಖೆಯ ಸಚಿವ ಶಿವರಾಜ್‌ ಪಾಟೀಲ್‌ ಮತ್ತೊಂದು ಬಗೆಯಲ್ಲಿ ಅನುಭವಿಸುತ್ತಿದ್ದರು. ಸ್ಫೋಟದಂಥ ದುರಂತಗಳು ನಡೆದಾಗಲೆಲ್ಲಾ ಮಾಧ್ಯಮಗಳು ಗೃಹ ಸಚಿವರನ್ನು ಆಂತರಿಕ ರಕ್ಷಣಾ ವ್ಯವಸ್ಥೆಯ ಕುರಿತಂತೆ ಪ್ರಶ್ನಿಸುತ್ತಾರೆ. ಈಗಂತೂ ಪ್ರತೀ ಸುದ್ದಿಯನ್ನೂ Live  ಆಗಿ ಪ್ರಸಾರ ಮಾಡುವ ಟಿ.ವಿ.ಗಳಿರುವುದರಿಂದ ಸ್ಫೋಟಗಳೂ ಸೇರಿದಂತೆ ಎಲ್ಲಾ ಬಗೆಯ ದುರಂತಗಳೂ ಒಂದು ರೀತಿಯ ಸುದ್ದಿ ಸಂಭ್ರಮಗಳಾಗಿಬಿಟ್ಟಿವೆ. ಟಿ.ವಿ.ಚಾನೆಲ್‌ಗಳೇನೋ ತಮ್ಮ ಮಾನವೀಯತೆಯನ್ನು ಬದಿಗಿಟ್ಟು ಸ್ಫೋಟದಂಥ ದುರಂತವನ್ನೂ ಬಿಸಿ ಬಿಸಿಯಾಗಿ ಮಾರಾಟ ಮಾಡುತ್ತಿರುತ್ತವೆ. ಆದರೆ ದೇಶದ ಗೃಹ ಸಚಿವರೂ ಈ ಟಿ.ವಿ.ಚಾನೆಲ್‌ಗಳಲ್ಲಿ ಸುಂದರವಾಗಿ ಕಾಣಿಸಿಕೊಳ್ಳುವ ಉದ್ದೇಶದಿಂದ ಬಗೆ ಬಗೆಯ ಸೂಟ್‌ಗಳನ್ನು ಧರಿಸಿ ಬಂದರೆ ಹೇಗಿರುತ್ತದೆ?

ದಿಲ್ಲಿಯಲ್ಲಿ ನಡೆದ ಸರಣಿ ಸ್ಫೋಟದ ನಂತರದ ಟಿ.ವಿ.ಯಲ್ಲಿ ಕಾಣಿಸಿಕೊಂಡ ಗೃಹ ಸಚಿವ ಶಿವರಾಜ್‌ ಪಾಟೀಲ್‌ ಕೆಲವೇ ಗಂಟೆಗಳೊಳಗೆ ಮೂರು ಸೂಟ್‌ಗಳನ್ನು ಬದಲಾಯಿಸಿದ್ದರು. ಅಂದು ಸಂಜೆ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಭಾಗವಹಿಸಲು ಬಿಳಿ ಸೂಟ್‌ ತೊಟ್ಟು ಹೋಗಿದ್ದ ಗೃಹ ಸಚಿವರು ಸ್ಫೋಟದ ಸುದ್ದಿ ಕೇಳಿದ ತಕ್ಷಣ ಮನೆಗೆ ಧಾವಿಸಿದರು. ಹೊರಗೆ ಬರುವಾಗ ಅವರು ಗಾಢ ವರ್ಣದ ಸೂಟ್‌ ತೊಟ್ಟು ಅದಕ್ಕೆ ಹೊಂದುವ ಶೂ ಧರಿಸಿದ್ದರು. ಸ್ಫೋಟಗಳು ನಡೆದ ತಕ್ಷಣ ಟಿ.ವಿ. ಚಾನೆಲ್‌ಗಳು ಬಯಸುವ `ತಕ್ಷಣದ ಪ್ರತಿಕ್ರಿಯೆ’ ನೀಡಿಯಾದ ಮೇಲೆ ಅವರು ಸ್ಫೋಟದ ಸ್ಥಳದ ಔಪಚಾರಿಕ ಪರಿಶೀಲನೆಗೆ ಹೊರಟರು. ಆಗ ಮತ್ತೆ ಸೂಟ್‌ ಬದಲಾಗಿತ್ತು. ಈ ಬಾರಿ ಮತ್ತೆ ಶ್ವೇತ ವಸನಧಾರಿಯಾಗಿದ್ದರು. ಈ ಸೂಟ್‌ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಗೆ ತೊಟ್ಟಿದ್ದ ಸೂಟ್‌ ಅಲ್ಲ!

ರೋಮ್‌ ಹೊತ್ತಿ ಉರಿಯುವಾಗ ಹಾಡುತ್ತಾ Lyre  ನುಡಿಸಿದ ನೀರೋನ ಮನಸ್ಥಿತಿಗೂ ನಮ್ಮ ಗೃಹ ಸಚಿವರ ಮನಸ್ಥಿತಿಗೂ ಏನಾದರೂ ವ್ಯತ್ಯಾಸವಿದೆಯೇ?

***

ದಿಲ್ಲಿಯಲ್ಲಿ ಬಾಂಬ್‌ ಸ್ಫೋಟಿಸಿದಾಗ ಬೆಂಗಳೂರಿನಲ್ಲಿ ಬಿಜೆಪಿಯ ಕಾರ್ಯಕಾರಿಣಿ ನಡೆಯುತ್ತಿತ್ತು. ಲೋಕಸಭೆಯ ವಿರೋಧ ಪಕ್ಷದ ನಾಯಕ ಎಲ್‌.ಕೆ. ಆಡ್ವಾಣಿಯವರು ಬೆಂಗಳೂರಿನಿಂದಲೇ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಅಹಮದಾಬಾದ್‌ ಸ್ಫೋಟದ ತನಿಖೆಯ ಸಂದರ್ಭದಲ್ಲೇ ದಿಲ್ಲಿ ಸ್ಫೋಟದ ಸುಳಿವು ಗುಜರಾತ್‌ ಪೊಲೀಸರಿಗೆ ದೊರೆತಿತ್ತು. ಇದನ್ನು ಗುಜರಾತ್‌ ಮುಖ್ಯಮಂತ್ರಿ ರಾಷ್ಟ್ರೀಯ ಭದ್ರತಾ ಸಲಹೆಗಾರರು ಮತ್ತು ಪ್ರಧಾನಿಯವರ ಗಮನಕ್ಕೆ ತಂದಿದ್ದರು. ಆದರೂ ಸರಕಾರ ಎಚ್ಚೆತ್ತುಕೊಳ್ಳಲಿಲ್ಲ ಎಂದು ಆರೋಪಿಸಿದರು.

ಗುಜರಾತ್‌ ಮುಖ್ಯಮಂತ್ರಿ ರಾಷ್ಟ್ರೀಯ ಭದ್ರತಾ ಸಲಹೆಗಾರರು ಮತ್ತು ಪ್ರಧಾನಿಗೆ ಈ ವಿಷಯ ತಿಳಿಸುವಾಗ ತಮ್ಮ ಪಕ್ಷದ ನಾಯಕ ಹಾಗೂ ವಿರೋಧ ಪಕ್ಷದ ನಾಯಕರೂ ಆಗಿರುವ ಎಲ್‌.ಕೆ. ಆಡ್ವಾಣಿಯವರಿಗೂ ಈ ವಿಷಯ ತಿಳಿಸಿದ್ದಾರೆ. ವಿರೋಧ ಪಕ್ಷದ ನಾಯಕನೆಂಬ ನೆಲೆಯಲ್ಲಿ ಸರಕಾರ ಯಾವ ಕ್ರಮ ಕೈಗೊಂಡಿದೆ ಎಂಬುದನ್ನು ಎಷ್ಟರ ಮಟ್ಟಿಗೆ ಪರಿಶೀಲಿಸಿದೆ ಎಂಬುದನ್ನು ಮಾತ್ರ ಆಡ್ವಾಣಿಯವರು ಹೇಳಲಿಲ್ಲ. ವಿರೋಧ ಪಕ್ಷದ ನಾಯಕನೆಂಬ ನೆಲೆಯಲ್ಲಿ ಇಂಥ ವಿಷಯಗಳಲ್ಲಿ ಕೆಲವು ಮಟ್ಟದ ಪರಿಶೀಲನೆಗಳನ್ನು ನಡೆಸಲು ಸಾಧ್ಯವಿದೆ ಎಂಬುದನ್ನು ಹಿರಿಯ ಮುತ್ಸದ್ದಿ ಆಡ್ವಾಣಿಯವರಿಗೆ ಯಾರೂ ಹೇಳಿಕೊಡಬೇಕಾಗಿಲ್ಲ.

ಸರಕಾರ ಸರಿಯಾದ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ಆಗಲೇ ಅರಿವಾಗಿದ್ದರೆ ಈ ಮಾಹಿತಿಯನ್ನು ಕನಿಷ್ಠ ಬಹಿರಂಗಗೊಳಿಸಿ ಜನರ ಗಮನಸೆಳೆಯಲು ಆಡ್ವಾಣಿಯವರಿಗೆ ಸಾಧ್ಯವಿತ್ತು. ಸರಕಾರ ಮಾಹಿತಿ ಕೊಟ್ಟರೂ ಕ್ರಮ ಕೈಗೊಳ್ಳುವುದಿಲ್ಲ ಎಂದು ಟೀಕಿಸುವುದಕ್ಕಾಗಿಯಾದರೂ ಇದನ್ನವರು ಮಾಡಬಹುದಿತ್ತು. ಆದರೆ ಅವರು ಸ್ಫೋಟ ನಡೆಯುವ ತನಕ ಸುಮ್ಮನಿದ್ದು `ಇದು ನನಗೆ ಮೊದಲೇ ಗೊತ್ತಿತ್ತು’ ಎಂದರು. ಸ್ಫೋಟದ ದಿನ ಟಿ.ವಿ.ಯಲ್ಲಿ ಕಾಣಿಸಿಕೊಳ್ಳುತ್ತೇನೆಂದು ಅರಿವಿದ್ದು ತಮ್ಮನ್ನು ತಾವೇ ಸಿಂಗರಿಸಿಕೊಂಡ ಗೃಹ ಸಚಿವರಲ್ಲಿರುವ ನೀರೋ ಗುಣ ಒಂದು ಬಗೆಯದ್ದಾದರೆ ವಿರೋಧ ಪಕ್ಷದ ನಾಯಕರಲ್ಲಿದ್ದ ನೀರೋ ಗುಣ ಮತ್ತೊಂದು ಬಗೆಯದ್ದು. ಸ್ಫೋಟದ ನಂತರ ಆಡ್ವಾಣಿಯವರ ಕಣ್ಣಿಗೆ ಕಾಣಿಸುತ್ತಿದ್ದುದು ಮುಂದಿನ ಲೋಕಸಭಾ ಚುನಾವಣೆಗಳು ಮಾತ್ರ.

***

ಬಿಜೆಪಿಯ ಕಾರ್ಯಕಾರಣಿಯ ಕೊನೆಯ ದಿನ ಮಂಗಳೂರು, ಚಿಕ್ಕಮಗಳೂರು, ಉಡುಪಿಗಳಲ್ಲಿ ಭಜರಂಗದಳದ ಕಾರ್ಯಕರ್ತರು ಸುಮಾರು 15 ಚರ್ಚ್‌ಗಳ ಮೇಲೆ ದಾಳಿ ನಡೆಸಿದರು. `ಮತಾಂತರವನ್ನು ವಿರೋಧಿಸಲು ಈ ದಾಳಿ ನಡೆಸಿದೆವು’ ಎಂದು ಅವರೇ ಹೇಳಿಕೊಂಡರು. ಬಲವಂತದ ಮತಾಂತರ ನಡೆಯುತ್ತಿದ್ದರೆ ಅದನ್ನು ತಡೆಯುವುದಕ್ಕೆ ರಾಜ್ಯದಲ್ಲಿ ಪೊಲೀಸ್‌ ವ್ಯವಸ್ಥೆ ಇದೆ. ಭಜರಂಗದಳದ ಹಿರಿಯ ಸಹೋದರ ಸಂಘಟನೆಯೂ ಆಗಿರುವ ಬಿಜೆಪಿ ಎಂಬ ರಾಜಕೀಯ ಪಕ್ಷವೇ ಈಗ ಕರ್ನಾಟಕವನ್ನು ಆಳುತ್ತಿದೆ. ಇದನ್ನೆಲ್ಲಾ ಮರೆತು ಚರ್ಚ್‌ ಒಂದರ ಕ್ರಿಸ್ತನ ವಿಗ್ರಹವನ್ನೂ ಭಗ್ನಗೊಳಿಸಿದ ಈ ದಾಳಿಯನ್ನು ಬಿಜೆಪಿ ತಪ್ಪಿಯೂ ಖಂಡಿಸಲಿಲ್ಲ.

ಈ ದಾಳಿಗಳು ನಡೆಯುತ್ತಿದ್ದ ಹೊತ್ತಿನಲ್ಲೇ ಬಿಜೆಪಿಯ ರಾಜ್ಯ ವಕ್ತಾರ ಧನಂಜಯ ಕುಮಾರ್‌ ಪಾಪ್ಯುಲರ್‌ ಫ್ರಂಟ್‌ ಇಂಡಿಯಾ ಎಂಬ ಸಂಘಟನೆ ಟಿ.ವಿ.ಚಾನೆಲ್‌ ಒಂದರ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿ ಮಾತನಾಡುತ್ತಿದ್ದರು. ಸದಾ ತುಷ್ಟೀಕರಣದ ಬಗ್ಗೆ ಮಾತನಾಡುವ ಬಿಜೆಪಿ ತನಗೆ ಅಧಿಕಾರ ದೊರೆತಾಗ ತನ್ನವರನ್ನು ತುಷ್ಟೀಕರಿಸುವುದರಲ್ಲಿ ಉಳಿದೆಲ್ಲರನ್ನೂ ಹಿಂದಿಕ್ಕುತ್ತದೆ ಎಂಬುದಂತೂ ಇದರಿಂದ ಸಾಬೀತಾಗುತ್ತಿದೆ. ಭಾರತೀಯ ಸಂವಿಧಾನ ಹೇಳಿರುವ ಜಾತ್ಯತೀತತೆಯನ್ನು ಪ್ರತಿಪಾದಿಸುವ ಪ್ರತಿಯೊಬ್ಬನನ್ನು `ನೀವು ಭಯೋತ್ಪಾದನೆಯನ್ನು ಖಂಡಿಸುವುದಿಲ್ಲ’ ಎನ್ನುವ ಬಿಜೆಪಿಯ ನಾಯಕರು ತಮ್ಮ ಸಹೋದರ ಸಂಘಟನೆಯ ಭಯೋತ್ಪಾದನೆಯ ವಿಷಯದಲ್ಲೇಕೆ ಕುರುಡು?

ಈ ವರ್ತನೆಯನ್ನು ಕಂಡು ಜನರೇನೂ ಆಶ್ಚರ್ಯ ಪಡುವುದಿಲ್ಲ. ಏಕೆಂದರೆ ಪ್ರತಿಯೊಬ್ಬ ರಾಜಕಾರಣಿಯೂ ರಾಜಕೀಯ ಪಕ್ಷವೂ ನೀರೋನ ಅಪರಾವತಾರವೇ. ಅದು ಬಯಲಾಗುವುದಕ್ಕೆ ಬೇಕಿರುವುದು ನಿರ್ದಿಷ್ಟ ಸಂದರ್ಭಗಳಷ್ಟೇ. ದಿಲ್ಲಿಯಲ್ಲಿ ಕಾಂಗ್ರೆಸ್‌ನ ನೀರೋ ಗುಣ ಹೊರಬಿದ್ದರೆ ಬೆಂಗಳೂರಿನಲ್ಲಿ ಬಿಜೆಪಿಯ ನೀರೋ ಗುಣ ಬಹಿರಂಗಗೊಂಡಿತು.