ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪನವನವರು ಅಧಿಕಾರ ಸ್ವೀಕರಿಸುವುದಕ್ಕೆ ಸರಿಯಾಗಿ ಹನ್ನೊಂದು ದಿನಗಳ ಮೊದಲು ಕರ್ನಾಟಕದಲ್ಲೊಂದು ಕಳ್ಳಭಟ್ಟಿ ದುರಂತ ಸಂಭವಿಸಿತು. ಕರ್ನಾಟಕದಲ್ಲೇ ನೂರಕ್ಕೂ ಹೆಚ್ಚು ಮಂದಿ ಬಲಿಯಾದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಯೋಜಿತ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಈ ಘಟನೆಯ ಹಿಂದೆ ತಮ್ಮ ವಿರೋಧಿಗಳ ಕೈವಾಡವನ್ನು ಸಂಶಯಿಸಿದ್ದರು. ಇದನ್ನವರು ಬೇರೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸಿದ್ದರು. ಇದಕ್ಕೆ ತಕ್ಕಂತೆ ಸಾರಾಯಿ ನಿಷೇಧವನ್ನು ತೀವ್ರ ಟೀಕೆಗೆ ಒಳಪಡಿಸಿದ್ದ ಕಾಂಗ್ರೆಸ್ ನಾಯಕರಾದ ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿಯವರಂಥ ಹೇಳಿಕೆಗಳೂ ಇದ್ದವು.
ಯಡಿಯೂರಪ್ಪನವರು ಅಧಿಕಾರ ಸ್ವೀಕರಿಸಿದ ಹತ್ತೇ ದಿನಗಳಲ್ಲಿ ಗೊಬ್ಬರ ಕೊರತೆಯಿಂದ ರೊಚ್ಚಿಗೆದ್ದು ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಗೋಲಿಬಾರ್ ನಡೆಯಿತು. ಗುಂಡು ತಗುಲಿದ ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಈ ಸಂದರ್ಭದಲ್ಲಿಯೂ ಯಡಿಯೂರಪ್ಪನವರು ಸಂಶಯಿಸಿದ್ದು ವಿರೋಧಿ ಗಳ ಕೈವಾಡವನ್ನೇ. ಇದಕ್ಕೆ ತಕ್ಕಂತೆ ಕೇಂದ್ರ ಸರಕಾರ ಗೊಬ್ಬರ ಬಿಡುಗಡೆ ಮಾಡಿರಲಿಲ್ಲ. ಗೊಬ್ಬರದ ಲಾರಿಗಳನ್ನೇ ಹಿಡಿದು ನಿಲ್ಲಿಸುವಷ್ಟರ ಮಟ್ಟಿಗೆ ಪ್ರತಿಭಟನೆಗಳು ತೀವ್ರಗೊಂಡಿದ್ದವು. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವಷ್ಟು ಹಿಂಸಾತ್ಮಕ ಪ್ರತಿಭಟನೆಗಳೂ ನಡೆಯುತ್ತಿದ್ದವು.
ಸರಕಾರಕ್ಕೆ ನೂರು ದಿನ ತುಂಬಿದ ಕೆಲವೇ ದಿನಗಳಲ್ಲಿ ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ಕ್ರೈಸ್ತರ ಪ್ರಾರ್ಥನಾ ಮಂದಿರಗಳ ಮೇಲೆ ತಥಾಕಥಿತ `ಹಿಂದೂ ಪರ’ ಸಂಘಟನೆಗಳು ದಾಳಿ ನಡೆಸಿದವು. ದಾವಣಗೆರೆಯಲ್ಲಿ ಆರಂಭಗೊಂಡ ಈ ದಾಳಿಯ ಸರಣಿ ಮಂಗಳೂರಿಗೆ ತಲುಪುವ ಹೊತ್ತಿಗೆ ಪಡೆದುಕೊಂಡ ಸ್ವರೂಪವೇ ಬೇರೆ. ಅಲ್ಲಿಯ ತನಕವೂ `ನ್ಯೂ ಲೈಫ್ ಫೆಲೋಷಿಪ್’ ಎಂಬ ಕ್ರೈಸ್ತ ಧರ್ಮ ಪ್ರಸಾರದ ಸಂಘಟನೆಗೆ ಸೇರಿದ ಪ್ರಾರ್ಥನಾ ಮಂದಿರಗಳ ಮೇಲೆ ನಡೆಯುತ್ತಿದ್ದ ದಾಳಿಗಳು ಕೆಥೋಲಿಕ್ ಕ್ರೈಸ್ತರ ಚರ್ಚ್ಗಳಿಗೂ ವ್ಯಾಪಿಸಿದವು. ಶಿಲುಬೆಯನ್ನು ಮುರಿಯುವ, ಯೇಸುವಿನ ಪ್ರತಿಮೆಯನ್ನು ಭಗ್ನಗೊಳಿಸುವ, ಪರಮಪ್ರಸಾದವನ್ನು ನಾಶಪಡಿಸುವ, ಗರ್ಭಿಣಿಯ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೆ ಹೋದವು.
ಮಂಗಳೂರಿನಲ್ಲಿ ಕ್ರೈಸ್ತರು ಈ ದಾಳಿಗಳ ವಿರುದ್ಧ ಪ್ರತಿಭಟನೆ ಹಿಂಸಾತ್ಮಕ ಸ್ವರೂಪವನ್ನೂ ಪಡೆಯಿತು. ಈ ಹಿಂಸೆಗೆ ಪೊಲೀಸರೇ ಕಾರಣರು ಎಂಬ ವಾದ ಒಂದೆಡೆಗಿದ್ದರೆ ಪ್ರತಿಭಟನೆಕಾರರ ಹಿಂಸೆ ಪೊಲೀಸರನ್ನು ರೊಚ್ಚಿಗೆಬ್ಬಿಸಿತು ಎಂಬುದು ಮತ್ತೊಂದು ವಾದ. ದಕ್ಷಿಣ ಕನ್ನಡದ ಪೊಲೀಸರು ಕೋಮು ಸೂಕ್ಷ್ಮ ಪರಿಸ್ಥಿತಿಯನ್ನು ಈ ತನಕ ನಿರ್ವಹಿಸಿರುವುದನ್ನು ನೋಡಿದರೆ ತಪ್ಪು ಎರಡೂ ಕಡೆಯೂ ಇರಬಹು ದೆಂದು ಕಾಣಿಸುತ್ತದೆ. ಪರಿಸ್ಥಿತಿ ಹಿಂಸಾತ್ಮಕ ತಿರುವು ಪಡೆದುಕೊಳ್ಳುವ ವರೆಗೂ ಪೊಲೀಸರು ಸರಿಯಾದ ಕ್ರಮ ಕೈಗೊಳ್ಳುವುದಿಲ್ಲ ಎಂಬುದು ಈವರೆಗಿನ ಅನೇಕ ಉದಾಹರಣೆಗಳಿಂದ ಸಾಬೀತಾಗಿದೆ.
ಈ ಘಟನೆಗಳಿಗೆ ಪ್ರತಿಕ್ರಿಯಿಸುವಾಗಲೂ ಮುಖ್ಯಮಂತ್ರಿ ಯಡಿಯೂರಪ್ಪನವರು ವಿರೋಧಿಗಳತ್ತಲೇ ಬೊಟ್ಟು ಮಾಡಿದರು. ಈ ಬಾರಿಯಂತೂ ಸ್ಪಷ್ಟವಾಗಿಯೇ ತಮ್ಮ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಕೇಂದ್ರ ಸರಕಾರ 355ನೇ ವಿಧಿಯನ್ನು ಬಳಸಿಕೊಂಡು ಎರಡು ಎಚ್ಚರಿಕೆ ಪತ್ರಗಳನ್ನೂ ಬರೆಯಿತು. ಇದರ ಪರಿಣಾಮವೋ ಎಂಬಂತೆ ಪೊಲೀಸರೇ ತನಿಖೆ ಮಾಡ ಬೇಕಾಗಿದ್ದ ಚರ್ಚ್ ದಾಳಿ ಪ್ರಕರಣಗಳು ಒಂದು ಹಂತದಲ್ಲಿ ಸಿಓಡಿಗೆ ಹೋಗಿತ್ತು. ಮತ್ತೆ ಅದೂ ಬದಲಾಗಿ ನ್ಯಾಯಾಂಗ ತನಿಖೆಗೆ ಒಪ್ಪಿಗೆಯಾಯಿತು.
ಇಷ್ಟೆಲ್ಲಾ ಆಗಿ ಎಲ್ಲವೂ ಮುಗಿಯಿತು ಎನ್ನುವಷ್ಟರಲ್ಲಿ ರಾಜಧಾನಿ ಯಲ್ಲೇ ಚರ್ಚ್ಗಳ ಮೇಲೆ ದಾಳಿ ನಡೆಯಿತು. ಪೊಲೀಸ್ ಆಯುಕ್ತರು ಇದು ದಾಳಿಯಲ್ಲ ಕಳ್ಳತನ ಎಂದರು. ಆದರೆ ಯಡಿಯೂರಪ್ಪನವರು ಮಾತ್ರ `ರಾಜಧಾನಿಯಲ್ಲೂ ಚರ್ಚ್ಗಳ ಮೇಲೆ ದಾಳಿ ನಡೆದಿರುವುದಕ್ಕೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ’ ಎಂದು ಕಿಡಿಕಾರಿದರು. ತಮಾಷೆಯೆಂದರೆ ಕಳ್ಳಭಟ್ಟಿ ದುರಂತ, ಹಾವೇರಿ ಗೋಲಿಬಾರ್ ಮತ್ತು ಬೆಂಗಳೂರಿನ ಹೊರಗೆ ನಡೆದ ಚರ್ಚ್ಗಳ ಮೇಲಿನ ದಾಳಿಗಳಲ್ಲೂ ಪೊಲೀಸರ ವೈಫಲ್ಯ ಢಾಳಾಗಿ ಕಾಣಿಸುತ್ತಿದ್ದರೂ ಮುಖ್ಯಮಂತ್ರಿಗಳು ಈ ಬಗ್ಗೆ ಒಂದು ಮಾತನ್ನೂ ಆಡಿರಲಿಲ್ಲ. ರಾಜಧಾನಿಯಲ್ಲಿ ನಡೆದಾಗ ಮಾತ್ರ ಅವರಿಗೆ ಪೊಲೀಸರ ವೈಫಲ್ಯದ ಬಗ್ಗೆ ಅರಿವಾಯಿತು!
* * *
ಆಡಳಿತಾತ್ಮಕ ವೈಫಲ್ಯವನ್ನು ತೋರಿಸಿಕೊಡುವ ಎಲ್ಲಾ ಘಟನೆಗಳ ಸಂದರ್ಭದಲ್ಲಿಯೂ ಆಡಳಿತದ ಚುಕ್ಕಾಣಿ ಹಿಡಿದವರು ವಿರೋಧಿಗಳನ್ನು ಬೊಟ್ಟು ಮಾಡುವುದು ಪಲಾಯನವಾದದ ಪರಾಕಾಷ್ಠೆ. ಮುಖ್ಯ ಮಂತ್ರಿಗೆ ಇರುವ ಅಧಿಕಾರದ ವ್ಯಾಪ್ತಿಯನ್ನು ಪರಿಗಣಿಸಿದರೆ ಈ ಬಗೆಯ ಆರೋಪಗಳನ್ನು ಮಾಡುವುದು ಬಾಲಿಶತನದ ಪರಮಾವಧಿಯೂ ಹೌದು. ಸಾಮಾನ್ಯವಾಗಿ ಎಲ್ಲಾ ಮುಖ್ಯಮಂತ್ರಿಗಳೂ ಗುಪ್ತವಾರ್ತೆ ವಿಭಾಗವನ್ನು ತಮ್ಮ ನಿಯಂತ್ರಣದಲ್ಲಿಯೇ ಇಟ್ಟುಕೊಂಡಿರುತ್ತಾರೆ. ಪ್ರತೀ ಕ್ಷಣವೂ ಅವರಿಗೆ ಮಾಹಿತಿಗಳು ದೊರೆಯುತ್ತಲೇ ಇರುತ್ತವೆ. ವಿರೋಧ ಪಕ್ಷಗಳು ಅಥವಾ ಪಕ್ಷದೊಳಗಿನ ವಿರೋಧಿಗಳು ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿದ್ದರೆ ಅದರ ಮಾಹಿತಿ ಮುಖ್ಯಮಂತ್ರಿಗಳಿಗೆ ಸ್ವಲ್ಪ ಮೊದಲೇ ತಿಳಿದಿರಬೇಕು. ಇಲ್ಲದಿದ್ದರೆ ಗುಪ್ತವಾರ್ತೆ ವಿಭಾಗ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರ್ಥ.
ಯಡಿಯೂರಪ್ಪನವರು `ವಿರೋಧಿಗಳ ಷಡ್ಯಂತ್ರ’ದ ಬಗ್ಗೆ ಮಾತನಾಡುವಾಗ ಅವರು ವಿರೋಧ ಪಕ್ಷಗಳನ್ನು ದೃಷ್ಟಿಯಲ್ಲಿಟ್ಟು ಕೊಂಡಿದ್ದರೇ ಇಲ್ಲವೇ ಎಂಬುದು ಚರ್ಚಾಸ್ಪದ ವಿಷಯ. ಅದೇನೇ ಇದ್ದರೂ ಯಾರು `ಷಡ್ಯಂತ್ರ’ ರೂಪಿಸಿದ್ದಾರೆ ಎಂಬುದನ್ನು ಸಾಬೀತು ಪಡಿಸಲು ಬೇಕಿರುವ ಅಧಿಕಾರ ಮತ್ತು ಆಡಳಿತ ಯಂತ್ರ ಮುಖ್ಯ ಮಂತ್ರಿಗಳ ಬಳಿಯೇ ಇರುವುದರಿಂದ ಆರೋಪಗಳನ್ನು ಸಾಬೀತು ಮಾಡಿ ತೋರಿಸುವ ಜವಾಬ್ದಾರಿಯೂ ಅವರಿಗಿರುತ್ತದೆ. ನಿಜಕ್ಕೂ ವಿರೋಧ ಪಕ್ಷಗಳೇ ಇದನ್ನು ಮಾಡುತ್ತಿದ್ದರೆ ಅದನ್ನು ಸಾಬೀತು ಮಾಡುವ ಧೈರ್ಯವನ್ನೂ ಮುಖ್ಯಮಂತ್ರಿಗಳು ತೋರಿಸುತ್ತಿದ್ದರು. ಸುದೀರ್ಘ ಕಾಲದ ರಾಜಕಾರಣದ ಅನುಭವ ಅವರಿಗೆ ಇಂಥ ಧೈರ್ಯವನ್ನು ನೀಡಿರುವುದರಲ್ಲಿ ಯಾವ ಸಂಶಯವೂ ಇಲ್ಲ.
ಚರ್ಚ್ಗಳ ಮೇಲಿನ ದಾಳಿಯ ವಿಷಯ ಕೇವಲ `ಹೊರಗಿನ ಶಕ್ತಿಗಳಿಗೆ’ ಮಾತ್ರ ಸೀಮಿತವಾಗಿರುವ ವಿಷಯವಲ್ಲ ಎಂಬುದು ಸ್ವತಃ ಯಡಿಯೂರಪ್ಪನವರಿಗೂ ತಿಳಿದಿರುವಂತೆ ಕಾಣಿಸುತ್ತದೆ. ಜತೆಗೆ ಬಜರಂಗದಳದ ಮುಖ್ಯಸ್ಥ ಮಹೇಂದ್ರಕುಮಾರ್ ಮಾಧ್ಯಮಗಳ ಎದುರು `ನಾವೇ ದಾಳಿ ನಡೆಸಿದೆವು’ ಎಂದೂ ಹೇಳಿದ್ದಾರೆ. ಈ ಕಾರಣ ದಿಂದಾಗಿಯೇ ಮುಖ್ಯಮಂತ್ರಿಗಳು ದಾಳಿಗಳ ಆರಂಭದ ಹಂತದಲ್ಲಿ ಸಮಸ್ಯೆಯನ್ನು ಒಂದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನಾಗಿ ನೋಡದೆ ಅದರ ಮನಶ್ಶಾಸ್ತ್ರೀಯ ವಿಶ್ಲೇಷಣೆಯನ್ನು ಆರಂಭಿಸಿದರು. ಮತಾಂತರಗಳ ಬಗ್ಗೆ, ನ್ಯೂ ಲೈಫ್ಗೆ ಎಲ್ಲಿಂದ ಹಣ ಬರುತ್ತಿದೆ ಎಂಬುದರ ಬಗ್ಗೆ ತನಿಖೆ ನಡೆಸುತ್ತೇವೆ ಎಂದೆಲ್ಲಾ ಹೇಳಿಕೆ ನೀಡಿದರು. ಇವೆಲ್ಲವುಗಳ ಪರಿಣಾಮವನ್ನು ಈಗ ಮುಖ್ಯಮಂತ್ರಿ ಎದುರಿಸುತ್ತಿದ್ದಾರೆ.
* * *
ಎಲ್ಲಾ ಪಕ್ಷಗಳ ರಾಜಕಾರಣಿಗಳಿಗೆ ಹಿಡಿದಿರುವ ದೊಡ್ಡ ರೋಗ ಕಾರಣಗಳನ್ನು ಹುಡುಕುವುದು. ಬಾಂಬ್ ಸ್ಫೋಟ, ಚರ್ಚ್ ಮೇಲೆ ದಾಳಿ ನಡೆದರೆ ಅದಕ್ಕಿರುವ `ಧಾರ್ಮಿಕ ಕಾರಣ’ಗಳನ್ನು ಹುಡುಕುವುದು. ಈ ಹುಡುಕಾಟದ ಕ್ರಿಯೆಯಲ್ಲಿ, ಆರೋಪ ಪ್ರತ್ಯಾರೋಪಗಳ ಭರಾಟೆ ಯಲ್ಲಿ ಸಾಮಾನ್ಯ ಜನ ಅನುಭವಿಸುವ ತೊಂದರೆ ಹಿಂದಕ್ಕೆ ಸರಿಯುತ್ತದೆ. ಸಾವು ನೋವುಗಳಿಗೆ ಜಾತಿ, ಮತ, ಧರ್ಮಗಳಿರುವುದಿಲ್ಲ.
ಇನ್ನು ಧಾರ್ಮಿಕತೆಯ ಸಂಕೇತಗಳಾದ ದೇವಾಲಯಗಳು, ಚರ್ಚ್ಗಳು ಮತ್ತು ಪ್ರಾರ್ಥನಾ ಮಂದಿರಗಳ ಪಾವಿತ್ರ್ಯವೂ ಅಷ್ಟೇ. ಒಂದು ಹೆಚ್ಚು ಪವಿತ್ರ ಮತ್ತೊಂದು ದಾಳಿಗೆ ಅರ್ಹ ಎಂಬ ವ್ಯತ್ಯಾಸ ಗಳೇನೂ ಇರುವುದಿಲ್ಲ. ಆಯಾ ಮತ-ಧರ್ಮಗಳನ್ನು ಅನುಸರಿಸುವವ ರಿಗೆ ಅವರವರ ಕ್ಷೇತ್ರಗಳು ಪವಿತ್ರ. ಉಳಿದವರೂ ಅವುಗಳನ್ನು ಪವಿತ್ರ ವೆಂದು ಗೌರವಿಸುವುದೇ ಜಾತ್ಯತೀತತೆ. ದುರದೃಷ್ಟವಶಾತ್ ನಮ್ಮ ರಾಜ ಕಾರಣಿಗಳಿಗೆ ಕೆಲವು ಹೆಚ್ಚು ಪವಿತ್ರವಾಗಿ ಕಾಣುವುದು ಇಂದಿನ ದುರಂತ.
ಇದರ ಪರಿಣಾಮವಾಗಿ ಚರ್ಚ್ಗಳ ಮೇಲೆ ದಾಳಿ ನಡೆದಾಗ ಒಂದೆಡೆ ದಾಳಿಯ ಕಾರಣಗಳ ಮನೋವಿಶ್ಲೇಷಣೆ ಆರಂಭವಾದರೆ ಮತ್ತೊಂದೆಡೆ ಏಕಪಕ್ಷೀಯ ಖಂಡನೆಗಳು ಆರಂಭವಾಗುತ್ತವೆ. ಆಡಳಿತ ನಡೆಸುವವರು ಕೋಮು ಸೂಕ್ಷ್ಮ ಸಂದರ್ಭಗಳಲ್ಲಿ ಈ ಮನೋ ವಿಶ್ಲೇಷಣೆಗಳನ್ನು ಬದಿಗಿಟ್ಟು ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಕಾರ್ಯಪ್ರವೃತ್ತರಾಗಬೇಕು. ವಿರೋಧ ಪಕ್ಷಗಳು ಸರಕಾರವನ್ನು ಟೀಕಿಸುವುದಕ್ಕಷ್ಟೇ ಸೀಮಿತರಾಗದೆ ಒಡೆದ ಹೃದಯಗಳನ್ನು ಒಂದುಗೂಡಿಸುವ ಕ್ರಿಯೆಗೆ ಕೈಜೋಡಿಸಬೇಕು.ಕರ್ನಾಟಕದಲ್ಲಿ ಇದಕ್ಕೆ ತದ್ವಿರುದ್ಧವಾದ ಪ್ರಕ್ರಿಯೆ ನಡೆಯುತ್ತಿದೆ. ಚಿಕ್ಕಮಗಳೂರಿನಲ್ಲಿ ಕೋಮುವಾದದ ಬೆಳವಣಿಗೆಗೆ ತಮ್ಮದೇ ಆದ ಕಾಣಿಕೆಗಳನ್ನು ನೀಡಿದ ಕಾಂಗ್ರೆಸ್ನ ಡಿ.ಬಿ.ಚಂದ್ರೇಗೌಡರು `ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿದೆ’ ಎಂದು ಕ್ರೈಸ್ತರನ್ನು ಸಂತೈಸಲು ಹೊರಡುತ್ತಾರೆ. ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಪ್ರತಿಭಟನಾರ್ಥವಾಗಿ ರಜೆ ನೀಡಿದಾಗ ಅದರ ಕಾನೂನು ಬದ್ಧತೆಯನ್ನು ಪ್ರಶ್ನಿಸುವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶ್ರೀರಾಮ ಸೇನೆ ಬಂದ್ ಕರೆ ನೀಡಿದರೆ ಜಾಣ ಮರೆವು ನಟಿಸುತ್ತಾರೆ.
ಎಲ್ಲವನ್ನೂ ಸಮಚಿತ್ತದಿಂದ ಕಾಣಲು ಸಾಧ್ಯವಾಗುವವನಷ್ಟೇ ನಿಜವಾದ ಮುತ್ಸದ್ಧಿ. ಯಡಿಯೂರಪ್ಪನವರು ಈ ಕ್ಷಣ ತಳೆಯಬೇಕಾದ ನಿಲುವೂ ಅದುವೇ. ಈ ಸಮಚಿತ್ತದ ಪ್ರತಿಕ್ರಿಯೆ ತಕ್ಷಣಕ್ಕೆ ಬಿಜೆಪಿಗೂ ಅದರ ಸಹೋದರ ಸಂಘಟನೆಗಳಿಗೂ ಇರಿಸುಮುರಿಸುಂಟು ಮಾಡಿದರೂ ಇತಿಹಾಸ ಮಾತ್ರ ಅವರನ್ನು ಮುತ್ಸದ್ಧಿಯನ್ನಾಗಿ ಕಾಣುತ್ತದೆ ಎಂಬುದು ಯಡಿಯೂರಪ್ಪನವರಿಗೆ ನೆನಪಿರಬೇಕು.