ಕರ್ನಾಟಕ ರಾಜಕಾರಣದ ದುರಂತ ನಾಯಕರು

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನ ಆರ್‌.ವಿ.ದೇಶಪಾಂಡೆಯವರಿಗೆ ದೊರೆತಿದೆ. ಪರಿಣಾಮವಾಗಿ ಸಿದ್ದರಾಮಯ್ಯ ಬೆಂಬಲಿಗರಿಗೆ ಸಿಟ್ಟು ಬಂದಿದೆ. ಈಗವರು `ಅಹಿಂದ”ದ ಮೂಲಕ ರಣಕಹಳೆ ಮೊಳಗಿಸಲಿದ್ದಾರೆ. ಸಿದ್ದರಾಮಯ್ಯನವರೂ ಇದಕ್ಕೆ ಓಗೊಟ್ಟು ಭಾವುಕರಾಗಿ ಮಾತನಾಡುತ್ತಾರೆ. ಇದು ಈ ಹಿಂದೆಯೂ ಸಂಭವಿಸಿತ್ತು. ಆಗ ಸಿದ್ದರಾಮಯ್ಯ ಸೆಕ್ಯುಲರ್‌ ಜನತಾದಳದಲ್ಲಿದ್ದರು. ಆಗ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿ ಹೋಗಿತ್ತೆಂಬ ಅಸಮಾಧಾನವಿತ್ತು. ಅಷ್ಟು ಸಾಲದೆಂಬಂತೆ ದೇವೇಗೌಡರ ಮಗ ಎಚ್‌.ಡಿ.ಕುಮಾರಸ್ವಾಮಿ ಸರಕಾರವನ್ನು ತಮ್ಮ ಅಂಕೆಯಲ್ಲಿಟ್ಟುಕೊಳ್ಳಲು ಬೇಕಾದ ಎಲ್ಲವನ್ನೂ ಮಾಡುತ್ತಿದ್ದರು. ಇದನ್ನು ಪ್ರತಿಭಟಿಸಲು ಸಿದ್ದರಾಮಯ್ಯ `ಅಹಿಂದ” ವೇದಿಕೆ ಬಳಸಿಕೊಂಡರು. ದೇವೇಗೌಡರು ಸಿದ್ದರಾಮಯ್ಯನವರಿಗಿದ್ದ ಉಪ ಮುಖ್ಯಮಂತ್ರಿ ಹುದ್ದೆಯನ್ನೂ ಕಿತ್ತುಕೊಂಡರು.

ಈಗ ಸಿದ್ದರಾಮಯ್ಯ ಕಾಂಗ್ರೆಸ್ಸಿನಲ್ಲಿದ್ದಾರೆ. ಸೆಕ್ಯುಲರ್‌ ಜನತಾದಳದಿಂದ ದೂರವಾದ ಹೊಸತರಲ್ಲಿ ಎಲ್ಲರಿಗೂ ಕೇಳಿಸುವಂತೆ `ಅಹಿಂದ” ಜಪ ಮಾಡುತ್ತಿದ್ದ ಸಿದ್ದರಾಮಯ್ಯನವರು ಕಾಂಗ್ರೆಸ್‌ಗೆ ಹತ್ತಿರವಾಗುತ್ತಾ ಹೋದಂತೆ `ಅಹಿಂದ” ಜಪದ ಧ್ವನಿಯನ್ನು ಮೆತ್ತಗಾಗಿಸಿ ಕೊನೆಗೊಮ್ಮೆ ಮೌನ ಜಪಕ್ಕೆ ಶರಣಾಗಿಬಿಟ್ಟರು. ಈಗ ಮತ್ತೆ `ಅಹಿಂದ” ಜಪದ ಧ್ವನಿಯನ್ನು ಸಿದ್ದರಾಮಯ್ಯ ತಾರಕಕ್ಕೆ ಏರಿಸಿದ್ದಾರೆ. ಇದನ್ನು ಕೇಳಿ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದವರೆಲ್ಲಾ ತಮ್ಮ ಕೈ ಹಿಡಿದು ಮೇಲೆತ್ತುತ್ತಾರೆ ಎಂಬ ಭಾವನೆ ಸಿದ್ಧರಾಮಯ್ಯನವರಿಗೂ ಅವರ ತಥಾಕಥಿತ ಬೆಂಬಲಿಗರಿಗೂ ಇರುವಂತೆ ಕಾಣಿಸುತ್ತದೆ.

***

ಸೆಕ್ಯುಲರ್‌ ಜನತಾದಳ ದೊರೆತು ಕಾಂಗ್ರೆಸ್‌ ಸೇರಿರುವ ಎಂ.ಪಿ.ಪ್ರಕಾಶ್‌ ಅವರಿಗೆ ಅಭಾವ ವೈರಾಗ್ಯದ ಬಾಧೆ ಆರಂಭವಾಗಿ ಬಹಳ ಕಾಲವೇ ಆಯಿತೇನೋ? ಜೆಡಿಎಸ್‌-ಬಿಜೆಪಿ ಸರಕಾರ ರಚನೆಯಾದ ಕ್ಷಣವೇ ಅವರೊಳಕ್ಕೆ ಈ ವೈರಾಗ್ಯ ಪ್ರವೇಶ ಪಡೆದಿತ್ತು. ಆದರೆ ಮುಖ್ಯಮಂತ್ರಿ ಹುದ್ದೆ ಹಸ್ತಾಂತರದ ವಿಷಯ ವಿವಾದವಾದಾಗ ಎಂ.ಪಿ.ಪ್ರಕಾಶ್‌ ನಿಜ ರಾಜಕಾರಣಿಯಂತೆ ತಲೆ ಎತ್ತಿ ನಿಂತಿದ್ದರು. ಪ್ರಕಾಶ್‌ ಅವರ ಲೋಹಿಯಾವಾದ ಮಾತಿನಿಂದ ಕೃತಿಗಿಳಿಯುತ್ತಿರುವುದನ್ನು ಕಂಡು ಅನೇಕರಿಗೆ ಸಂತೋಷವಾಗಿತ್ತು. ಆದರೆ ಅದು ಕಾಂಗ್ರೆಸ್‌ ಸೇರುವುದರಲ್ಲಿ ಕೊನೆಗೊಂಡಿತು. ಹಳೆಯ ಸಮಾಜವಾದಿಗಳಿಗೆ ಕೊನೆಯ ಆಶ್ರಯ ತಾಣ ಅವರು ವಿರೋಧಿಸಿಕೊಂಡು ಬಂದಿದ್ದ ಕಾಂಗ್ರೆಸ್‌ ಎಂಬುದು ಪ್ರಕಾಶ್‌ ವಿಷಯದಲ್ಲೂ ನಿಜವಾಗಿಬಿಟ್ಟಿತು. ಇಷ್ಟಾಗಿಯೂ ಪ್ರಕಾಶ್‌ ನಾಯಕರಾಗುತ್ತಾರೆ ಎಂದು ಸ್ವತಃ ಕಾಂಗ್ರೆಸ್ಸಿಗರಲ್ಲೇ ಅನೇಕರು ಭಾವಿಸಿದ್ದರು. ಕರ್ನಾಟಕದ ಕಾಂಗ್ರೆಸ್‌ನಲ್ಲಿ ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುವ ವರ್ಚಸ್ವೀ ನಾಯಕರೇ ಇಲ್ಲ. ಈ ಸ್ಥಾನ ಸ್ವಾಭಾವಿಕವಾಗಿಯೇ ಪ್ರಕಾಶ್‌ ಅವರದ್ದೆಂದು ಎಲ್ಲರ ಭಾವನೆಯಾಗಿತ್ತು. ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರಕಾರ ಒಡೆಯುವ ಹೊತ್ತಿನಲ್ಲಿ ಪ್ರಕಾಶ್‌ ಸಂದರ್ಭದ ಕಾರಣದಿಂದಲೋ ಸ್ವಪರಿಶ್ರಮದಿಂದಲೋ ಲಿಂಗಾಯತ ಸಮುದಾಯದ ವರ್ಚಸ್ವೀ ನಾಯಕರಾಗಿ ಹೊರ ಹೊಮ್ಮಿದ್ದಂತೂ ನಿಜ. ಆಗ ಪ್ರಕಾಶ್‌ ಹೊಳೆಯಿಸಿದ ಮಿಂಚು, ಗುಡುಗಿಸಿದ ಸಿಡಿಲುಗಳೆಲ್ಲವೂ ಕಾಂಗ್ರೆಸ್‌ನಲ್ಲಿ ಮಳೆಯಾಗಲಿದೆ ಎಂದು ಕೊಂಡದ್ದು ಸುಳ್ಳಾಯಿತು. ಹರಪನಹಳ್ಳಿಯಲ್ಲಿ ಪ್ರಕಾಶ್‌ ಸೋತದ್ದಕ್ಕಿಂತಲೂ ಕಾಂಗ್ರೆಸ್‌ನಲ್ಲಿ ಅವರು ಮೂಲೆ ಸೇರಿದ್ದು ಹೆಚ್ಚು ದೊಡ್ಡ ದುರಂತ. ಇದಕ್ಕೆ ಕಾಂಗ್ರೆಸ್‌ ಪಕ್ಷದೊಳಗಿನ `ರಾಜಕಾರಣ”ಕ್ಕಿಂತಲೂ ದೊಡ್ಡ ಕಾರಣ ಪ್ರಕಾಶ್‌ ಅವರಿಗೆ ಆವರಿಸುವ ಅಭಾವ ವೈರಾಗ್ಯ.

***

ಆರ್‌ಎಸ್‌ಎಸ್‌ನಲ್ಲಿದ್ದಾಗ ಲೋಹಿಯಾವಾದದಿಂದ ಆಕರ್ಷಿತರಾಗಿ ಜನತಾಪರಿವಾರಕ್ಕೆ ಸೇರಿದವರು ಪಿ.ಜಿ.ಆರ್‌.ಸಿಂಧ್ಯ. ಜಾತಿ ಬಲವೊಂದಿದ್ದರೆ ತಾನು ಕರ್ನಾಟಕದ ಮುಖ್ಯಮಂತ್ರಿಯಾಗುತ್ತಿದ್ದೆ ಎಂದು ಭಾವಿಸುವ ಸಿಂಧ್ಯ ಒಕ್ಕಲಿಗರೇ ಹೆಚ್ಚಾಗಿರುವ ಕನಕಪುರ ಕ್ಷೇತ್ರದಿಂದ ನಿರಂತರವಾಗಿ ಗೆದ್ದು ಆಶ್ಚರ್ಯ ಹುಟ್ಟಿಸಿದವರು. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮುರಿದು ಜೆಡಿಎಸ್‌-ಬಿಜೆಪಿ ಮೈತ್ರಿ ರೂಪುಗೊಂಡಾಗ ಕುಮಾರಸ್ವಾಮಿಯದ್ದು ತಪ್ಪು ಎಂದು ದೇವೇಗೌಡರ ಜತೆಗಿದ್ದವರು. ಒಂದು ಹಂತದಲ್ಲಿ ದೇವೇಗೌಡರು ಜೆಡಿಎಸ್‌-ಬಿಜೆಪಿ ಮೈತ್ರಿಯ ಪರವೇ ಇದ್ದಾರೆ ಎಂದು ತಿಳಿದಾಗ ಅವರಿಂದಲೂ ದೂರವಾದವರು.

2008ರ ಚುನಾವಣೆಯ ಹೊತ್ತಿಗೆ ಬಹುಜನ ಸಮಾಜ ಪಕ್ಷ ಸೇರಿದರು. ರಾಜ್ಯದ ಎಲ್ಲೆಡೆ ಅಭ್ಯರ್ಥಿಗಳನ್ನು ನಿಲ್ಲಿಸಲು ಶಕ್ತರಾದರು. ಆದರೆ ತಾವೇ ಹಲವು ಬಾರಿ ಗೆದ್ದಿದ್ದ ಕ್ಷೇತ್ರ ಇಲ್ಲವಾದರೂ ಅದರ ಭಾಗಗಳಿದ್ದ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲು ಧೈರ್ಯ ಮಾಡದವರು. ಮಾಯಾವತಿಯವರ ಆನೆ ಸಿಂಧ್ಯರನ್ನು ತನ್ನ ನೆರಳಿಗೆ ಕರೆದುಕೊಂಡಷ್ಟೇ ವೇಗದಲ್ಲಿ ಹೊರಗೂ ತಳ್ಳಿತು. ಚುನಾವಣೆಗೆ ನಿಂತು ತಮ್ಮ ನಾಯಕತ್ವವನ್ನು ಸಾಬೀತು ಪಡಿಸಿಕೊಳ್ಳಲೂ ಸೋತು ಬಿಟ್ಟ ಸಿಂಧ್ಯ, ದೇವೇಗೌಡರು ನೀಡಿದ ಏಟಿನ ಗಾಯವನ್ನು ಒಣಗಿಸಿಕೊಳ್ಳುತ್ತಿರುವಾಗಲೇ ಮಾಯಾವತಿಯವರ ಹೊಡೆತದಿಂದಾದ ಹೊಸ ಗಾಯವನ್ನು ಒಣಗಿಸಿಕೊಳ್ಳಬೇಕಾದ ಸ್ಥಿತಿ ತಲುಪಿದ್ದಾರೆ.

***

ಸಿದ್ದರಾಮಯ್ಯ, ಎಂ.ಪಿ.ಪ್ರಕಾಶ್‌ ಮತ್ತು ಪಿ.ಜಿ.ಆರ್‌.ಸಿಂಧ್ಯ ಜನತಾದಳದಲ್ಲಿ ಇದ್ದಷ್ಟು ದಿನವೂ ಪ್ರಬಲ ನಾಯಕರು. ಪಕ್ಷದಲ್ಲಿ ರಾಜ್ಯಾಧ್ಯಕ್ಷರಷ್ಟೇ ಮಹತ್ವವಿದ್ದರೆ ಸರಕಾರದಲ್ಲಿ ಮುಖ್ಯಮಂತ್ರಿಗಳ ನಂತರದ ಸ್ಥಾನ ಇವರಿಗಿತ್ತು. ಮೂವರೂ ಒಂದಲ್ಲಾ ಒಂದು ದಿನ ಮುಖ್ಯಮಂತ್ರಿಯಾಗುವ ಕನಸು ಕಂಡವರು. ಈ ಮೂವರೂ ತಮ್ಮ ನಾಯಕತ್ವ ಬಲವಾಗಿದ್ದ ದಿನಗಳಲ್ಲಿ ರಾಮಕೃಷ್ಣ ಹೆಗಡೆ, ಎಸ್‌.ಆರ್‌.ಬೊಮ್ಮಾಯಿ, ಎಚ್‌.ಡಿ.ದೇವೇಗೌಡ ಮತ್ತು ಜೆ.ಎಚ್‌.ಪಟೇಲ್‌ ಎಂಬ ನಾಲ್ವರು ಮುಖ್ಯಮಂತ್ರಿಗಳ ಸ್ಥಾನವನ್ನು ಭದ್ರ ಅಥವಾ ಅಸ್ಥಿರಗೊಳಿಸುವ ಶಕ್ತಿಯಿದ್ದ ನಾಯಕರಾಗಿದ್ದವರು.

ಈಗ ಇವರೆಲ್ಲಾ `ದುರಂತ ನಾಯಕ”ರಾಗಲು ಮುಖ್ಯ ಕಾರಣ ಅವರವರ ದೌರ್ಬಲ್ಯಗಳು. ಇವರಿಗೆ ಜನತಾದಳದಲ್ಲಿದ್ದಾಗ ಇದ್ದ ಶಕ್ತಿ ಈಗ ಇಲ್ಲ. ಕಾರಣ ಇವರಿಗಿರುವ ವಿಶಿಷ್ಟ ದೌರ್ಬಲ್ಯಗಳು. ಕುತೂಹಲಕಾರಿ ಸಂಗತಿಯೆಂದರೆ ಒಬ್ಬರ ದೌರ್ಬಲ್ಯ ನಿಭಾಯಿಸಲು ಮತ್ತೊಬ್ಬರು ನೆರವಾಗುವಂಥ ಶಕ್ತಿಗಳೂ ಇವರಿಗಿವೆ.

***

ಸಿದ್ದರಾಮಯ್ಯನವರದ್ದು ಸದಾ `ಮೇಲರಿಮೆ”ಯ ಔದಾಸೀನ್ಯ. ಒಳ್ಳೆಯ ಬಜೆಟ್‌ ಕೊಡುವವನು ಒಳ್ಳೆಯ ನಾಯಕ ಎಂಬುದರಿಂದ ಆರಂಭಿಸಿ ಹಿಂದುಳಿದ ವರ್ಗಗಳ ನಾಯಕನಾಗುವುದೆಂದರೆ ಕುರುಬರ ನಾಯಕನಾಗುವುದು ಎಂಬಲ್ಲಿಯವರೆಗೆ ಅವರ ಭ್ರಮೆಗಳ ಪಟ್ಟಿ ಮುಂದುವರೆಯುತ್ತದೆ. ಈ ಭ್ರಮೆಯಲ್ಲಿಯೇ ಅವರು ಜೆ.ಎಚ್‌.ಪಟೇಲರಿಗಿದ್ದ ಹಿರಿತನವನ್ನೂ ಮರೆತು ಮುಖ್ಯಮಂತ್ರಿಯಾಗಲು ಹೊರಟಿದ್ದರು. ಸಹಜವಾಗಿ ಮುಖ್ಯಮಂತ್ರಿ ಹುದ್ದೆಗೆ ಬರುತ್ತಿದ್ದ ಜೆ.ಎಚ್‌.ಪಟೇಲರನ್ನು ತಡೆಯಲು ಜನರನ್ನು ತಂದು ಸಣ್ಣ ಮಟ್ಟಿಗೆ ಸದ್ದು-ಗದ್ದಲವನ್ನೂ ಸೃಷ್ಟಿಸಿದ್ದರು. ಈ ಭ್ರಮೆಯಲ್ಲೇ ದೇವೇಗೌಡರ ಜತೆ ಸೇರಿ ಪಟೇಲರಿಗೆ ಇನ್ನಿಲ್ಲದ ಕಾಟ ಕೊಟ್ಟರು. ಕೊನೆಗೊಮ್ಮೆ ದೇವೇಗೌಡರೇ ತಮ್ಮ ವಿರುದ್ಧ ನಿಂತಾಗ `ಅಹಿಂದ” ವೇದಿಕೆ ಬಳಸಿಕೊಂಡು ರಣಕಹಳೆಯೂದಿದರು. ಆ ಕ್ಷಣ ಸಿದ್ದರಾಮಯ್ಯ ಎಲ್ಲ ಭ್ರಮೆಗಳನ್ನೂ ಕಳಚಿಕೊಂಡು ನಿಜ ನಾಯಕರಾದರು ಎಂದು ಹಲವರಿಗೆ ಅನ್ನಿಸಿತ್ತು. ಆದರೆ ಅವರು `ಅಹಿಂದ”ವನ್ನು ಅರ್ಧದಲ್ಲೇ ಬಿಟ್ಟು ಹೋದರು.

ಕಾಂಗ್ರೆಸ್‌ ಎಂಬ ಮಹಾಸಮುದ್ರದಲ್ಲಿ ಲೀನವಾಗಿ ಹೋಗದಿರಲು ಸಿದ್ದರಾಮಯ್ಯನವರಿಗಿದ್ದ ಏಕೈಕ ಮಾರ್ಗವೆಂದರೆ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವ ಡೈನಮಿಸಂ. ಕೇವಲ `ಆಡಳಿತಗಾರ”ನಷ್ಟೇ ಆಗಿರುವ ಅವರಿಗೆ ಇದು ಸಾಧ್ಯವಿರಲಿಲ್ಲ. ಸ್ವಂತ ಪಕ್ಷ ಕಟ್ಟಲು ಧೈರ್ಯವಿರಲಿಲ್ಲ. ತಾನಾಗಿಯೇ ಒದಗಲಿದ್ದ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಈಗೇಕೆ ಎಂದು ತಿರಸ್ಕರಿಸಿದರು. ಆಮೇಲೆ ಬೇಕೆಂದು ಬಯಸಿದರು. ಪರಿಣಾಮ ಕಣ್ಣ ಮುಂದೆಯೇ ಇದೆ. ತನಗೆ ಬೇಸರವಾಗಿದೆ ಎಂದು ಹೇಳಲಾಗದೆ `ನನ್ನ ಬೆಂಬಲಿಗರಿಗೆ ಸಿಟ್ಟು ಬಂದಿರುವುದು online slots ಸಹಜ” ಎಂದು ಅಡ್ಡಗೋಡೆ ಮೇಲೆ ದೀಪವಿಡುತ್ತಿದ್ದಾರೆ.

ಪ್ರಕಾಶ್‌ ಜನತಾದಳದಲ್ಲಿ ಇದ್ದಾಗಲೂ ತಮಗೊಂದು ಅನನ್ಯತೆ ರೂಢಿಸಿಕೊಳ್ಳಲಿಲ್ಲ. ಅದೇನಾದರೂ ಇದ್ದರೆ ಅದು ಅಯಾಚಿತ. ಅದನ್ನು ಉಳಿಸಿಕೊಳ್ಳಲೂ ಪ್ರಕಾಶ್‌ ಪ್ರಯತ್ನಿಸುವುದಿಲ್ಲ. ಜೆಡಿಎಸ್‌-ಬಿಜೆಪಿ ಸರಕಾರದಲ್ಲಿ ಮುಖ್ಯಮಂತ್ರಿ ಹುದ್ದೆಯ ಹಸ್ತಾಂತರ ವಿವಾದವಾದಾಗ ತಮಗೆ ಅರಿವಿಲ್ಲದಂತೆಯೇ ಪ್ರಕಾಶ್‌ ವರ್ಚಸ್ವೀ ಲಿಂಗಾಯತ ನಾಯಕರಾಗಿದ್ದರು. ಅದನ್ನು ಉಳಿಸಿಕೊಂಡಿದ್ದರೆ ತನ್ನ ಅನಿವಾರ್ಯತೆಯಿಂದಲಾದರೂ ಕಾಂಗ್ರೆಸ್‌ ಅವರನ್ನು ಮೂಲೆಗುಂಪು ಮಾಡದೇ ನೋಡಿಕೊಳ್ಳುತ್ತಿತ್ತೇನೋ.

ಪಿ.ಜಿ.ಆರ್‌.ಸಿಂಧ್ಯ ಬಹುಜನ ಸಮಾಜ ಪಾರ್ಟಿಗೆ ಸೇರಿದ ಹೊಸತರಲ್ಲಿ ಅವರನ್ನು ಪತ್ರಿಕೆಯೊಂದರ ವರದಿಗಾರನೊಬ್ಬ ಸಂದರ್ಶಿಸಲು ಹೋದರೆ `ಸಿದ್ದರಾಮಯ್ಯನವರನ್ನು ನಿಮ್ಮ ಮುಖ್ಯ ವರದಿಗಾರರೇ ಸಂದರ್ಶಿಸುತ್ತಾರೆ. ನನ್ನನ್ನು ಸಂದರ್ಶಿಸಲೇಕೆ ನಿಮ್ಮನ್ನು ಕಳುಹಿಸಿದ್ದಾರೆ?” ಎಂದು ಹರಿಹಾಯ್ದ ಕತೆ ಜನಜನಿತ. ಸಿಂಧ್ಯ ಅವರ ಸಮಸ್ಯೆಯೆಂದರೆ ಅವರ ಕೀಳರಿಮೆ. ಜನತಾಪರಿವಾರದಲ್ಲಿದ್ದಾಗಲೆಲ್ಲಾ ತನಗೆ ಜಾತಿಬಲವಿಲ್ಲದೆ ಹೋಯಿತು ಎಂದು ಕೊರಗುತ್ತಿದ್ದರು. ಜಾತಿಬಲವಿಲ್ಲದೆಯೇ ಚುನಾವಣೆ ಗೆಲ್ಲುತ್ತಿದ್ದ ಅವರಿಗೆ ರಾಜಕಾರಣದಲ್ಲಿ ಮೇಲೇರಲು ಜಾತಿ ಬಲವೇ ಬೇಕೆಂದಿದ್ದರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ನೂರೆಂಟು ಜಾತಿಗಳಿಗೆ ನಾಯಕನಾಗಿಬಿಡಬಹುದಿತ್ತು. ಬಿಎಸ್‌ಪಿ ಸೇರಿದ ನಂತರ ಡಿ.ಕೆ.ಶಿವಕುಮಾರ್‌ ಜತೆ ರಾಜೀ ಮಾಡಿಕೊಳ್ಳದೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರೂ ಅವರು ನಾಯಕರಾಗಿ ಉಳಿದಿರುತ್ತಿದ್ದರೇನೋ?

***

ಸಿದ್ದರಾಮಯ್ಯ, ಎಂ.ಪಿ.ಪ್ರಕಾಶ್‌ ಮತ್ತು ಪಿ.ಜಿ.ಆರ್‌.ಸಿಂಧ್ಯ ಒಂದೆಡೆ ಸೇರಿದರೆ ಈಗಲೂ ಒಂದು ಶಕ್ತಿಯೇ ಸರಿ. ಇದು ಯಾರಿಗೆ ಅರ್ಥವಾಗದೇ ಇದ್ದರೂ ದೇವೇಗೌಡರಿಗೆ ಅರ್ಥವಾಗಿತ್ತು. ಜೆ.ಎಚ್‌.ಪಟೇಲರನ್ನು ಹಣಿಯಲು ಸಿದ್ದರಾಮಯ್ಯನವರನ್ನು ಬಳಸಿಕೊಂಡಿದ್ದ ದೇವೇಗೌಡರು ಸಿದ್ದರಾಮಯ್ಯನವರನ್ನು ಹಣಿಯಲು ಪ್ರಕಾಶ್‌ ಹಾಗೂ ಸಿಂಧ್ಯ ಇಬ್ಬರನ್ನೂ ಬಳಸಿಕೊಂಡರು. ಸಿದ್ದರಾಮಯ್ಯನವರನ್ನು ಪಕ್ಷದಿಂದ ಉಚ್ಛಾಟಿಸಲು ಹೊರಟ ಸಂದರ್ಭದಲ್ಲಾದರೂ ಪ್ರಕಾಶ್‌ ಮತ್ತು ಸಿಂಧ್ಯ ಪ್ರತಿಭಟಿಸಿದ್ದರೆ ಕರ್ನಾಟಕದ ರಾಜಕೀಯ ಚಿತ್ರಣವೇ ಬೇರೆ ರೀತಿ ಇರುತ್ತಿತ್ತು.

ಅಜ್ಞಾತರಾಗಿ ಎರಡೆರೆಡು ಹೊಡೆತಗಳ ಗಾಯ ಒಣಗಿಸಿಕೊಳ್ಳುತ್ತಿರುವ ಸಿಂಧ್ಯ ತಮ್ಮ ಕೀಳರಿಮೆ ತೊರೆದು ಸಂಘಟನೆಗೆ ಮುಂದಾದರೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದಕ್ಕೆ ಮೊದಲು ಜನ ನಾಯಕನಾಗುವುದು ಅಗತ್ಯ ಎಂಬುದನ್ನು ಅರಿತು ತಮ್ಮ ಮೇಲರಿಮೆ ತೊರೆದರೆ ಪ್ರಕಾಶ್‌ ತಮಗೆ ಆವರಿಸಿಕೊಂಡಿರುವ ಅಭಾವ ವೈರಾಗ್ಯವನ್ನು ತೊಡೆಯಲು ಸಾಧ್ಯವಾದರೆ ಈಗಲೂ ಕರ್ನಾಟಕದ ರಾಜಕೀಯ ಭೂಪಟ ಬದಲಾಗುತ್ತದೆ. ಈ ಮೂವರ ಜತೆಗೆ ಜನತಾಪರಿವಾರದಲ್ಲಿ ಮತ್ತಿಬ್ಬರು ನಾಯಕರಿದ್ದರು. ಒಬ್ಬರು ಸಿ.ಭೈರೇಗೌಡರು. ಮತ್ತೊಬ್ಬರು ಬಿ.ಎಲ್‌.ಶಂಕರ್‌. ಭೈರೇಗೌಡರು ದಿವಂಗತರಾಗಿದ್ದಾರೆ. ಬಿ.ಎಲ್‌.ಶಂಕರ್‌ ತಮ್ಮ ರಾಜಕಾರಣಿ ಮತ್ತು ಬುದ್ಧಿಜೀವಿ ಇಮೇಜ್‌ನ ಮಧ್ಯೆ ಹೊಂದಾಣಿಕೆ ಸಾಧ್ಯವಾಗದೆ ಬಳಲುತ್ತಿದ್ದಾರೆ. ಸಿದ್ದು,ಪ್ರಕಾಶ್‌, ಸಿಂಧ್ಯ ಒಟ್ಟಾಗಿ ಶಂಕರ್‌ರನ್ನು ಕರೆದರೆ ಅವರು ಒಲ್ಲೆ ಎನ್ನಲು ಸಾಧ್ಯವೇ? ಸ್ವಲ್ಪ ಜೋರಾಗಿ ಕರೆದರೆ ಈ ನಾಲ್ವರಿಗೆ ಯುವ ನಾಯಕ ಕೃಷ್ಣ ಭೈರೇಗೌಡರೂ ಜತೆಗೂಡಿಯಾರು!