ನೀಚ ಬುದ್ಧಿಯ ಬಿಡು ನಾಲಿಗೆ

`ದೊಡ್ಡ ಮರವೊಂದು ಉರುಳುವಾಗ ಸುತ್ತಲಿನ ಭೂಮಿ ಅದುರುತ್ತದೆ’ ಸಾಮಾನ್ಯ ಸಂದರ್ಭದಲ್ಲಿ ಒಂದು ನಾಣ್ನುಡಿಯಷ್ಟೇ ಆಗಬಹುದಾಗಿದ್ದ ಈ ಹೇಳಿಕೆಗೆ ಕ್ರೌರ್ಯವನ್ನು ಲೇಪಿಸಿದ್ದು ಭಾರತದ ಪ್ರಧಾನಿಯಾಗಿದ್ದ ರಾಜೀವ್‌ ಗಾಂಧಿ. ಇಂದಿರಾ ಹತ್ಯೆ ನಂತರ ದಿಲ್ಲಿಯಲ್ಲಿ ನಡೆದ ಸಿಕ್ಖರ ನರಮೇಧವನ್ನು ಸಮರ್ಥಿಸಿಕೊಳ್ಳಲು ರಾಜೀವ್‌ ಈ ನಾಣ್ನುಡಿ ಬಳಸಿಕೊಂಡಿದ್ದರು.

ಖ್ಯಾತ ಭೌತ ವಿಜ್ಞಾನಿ ಐಸಾಕ್‌ ನ್ಯೂಟನ್‌ ಪ್ರತಿಪಾದಿಸಿದ ಬಲ ವಿಜ್ಞಾನದ ಸಿದ್ಧಾಂತಗಳಲ್ಲಿ ಮೂರನೆಯದ್ದು `ಪ್ರತಿಯೊಂದು ಕ್ರಿಯೆಗೂ ಒಂದು ಸಮಾನ ಮತ್ತು ವಿರುದ್ಧ ದಿಕ್ಕಿನ ಪ್ರತಿಕ್ರಿಯೆ ಇರುತ್ತದೆ’. ಭೌತಶಾಸ್ತ್ರದ ಈ ಮಹತ್ವದ ಹೇಳಿಕೆ ಗುಜರಾತ್‌ನ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಗೋಧ್ರಾ ನಂತರದ ನರಮೇಧವನ್ನು ಸಮರ್ಥಿಸಿಕೊಳ್ಳುವ ಹೇಳಿಕೆಯಾಗಿಬಿಟ್ಟಿತು.ಬಲ ವಿಜ್ಞಾನದ ಇತಿಹಾಸದಲ್ಲಿ ಮಹತ್ತರವಾದ ಸ್ಥಾನವನ್ನು ಪಡೆದಿದ್ದ ಈ ಹೇಳಿಕೆ ಭಾರತದ ರಾಜಕೀಯ ಇತಿಹಾಸದಲ್ಲಿ ಒಂದು ಕ್ರೌರ್ಯಕ್ಕೆ ಸಂವಾದಿಯಾಗಿಬಿಟ್ಟಿತು.

`ಮಾಲೀಕರು ತಮ್ಮ ಕಾರ್ಮಿಕರ ವಿಷಯದಲ್ಲಿ ದಯಾಳುಗಳಾಗಿರಬೇಕು’. ಸಂಪತ್ತಿನ ಧರ್ಮದರ್ಶಿತ್ವವನ್ನು ಪ್ರತಿಪಾದಿಸಿದ ಗಾಂಧೀಜಿಯ ಹೇಳಿಕೆಯಂತೆ ಕಾಣುವ ಈ ಮಾತನ್ನು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‌ ಫೆರ್ನಾಂಡಿಸ್‌ ಕೊಲೆಯೊಂದರ ಕಾರಣ ಹುಡುಕಲು ಬಳಸಿಕೊಂಡರು. ಎರಡು ವಾರದ ಹಿಂದೆ ದಿಲ್ಲಿ ಸಮೀಪದ ಗ್ರೇಟರ್‌ ನೋಯಿಡಾದ ಕಂಪೆನಿಯೊಂದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು (ಸಿಇಓ) ಕಾರ್ಮಿಕರು ಹೊಡೆದು ಕೊಂದರು. ಇದಕ್ಕೆ ಪ್ರತಿಕ್ರಿಯಿಸಿದ ಆಸ್ಕರ್‌ ಫೆರ್ನಾಂಡಿಸ್‌ ಮಾಲೀಕರೇಕೆ ದಯಾಳುಗಳಾಗಿರಬೇಕೆಂದು ಹೇಳಿದರು.

ಒಂದು ವಾರದ ಹಿಂದಷ್ಟೇ ದಿಲ್ಲಿಯಲ್ಲಿ ಯುವ ಪತ್ರಕರ್ತೆಯೊಬ್ಬಳ ಕೊಲೆಯಾಯಿತು. ತಡರಾತ್ರಿ ಕಚೇರಿಯಿಂದ ತನ್ನ ಕಾರಿನಲ್ಲಿ ಹೊರಟ ಆಕೆಯನ್ನು ಮಾರ್ಗ ಮಧ್ಯೆಯೇ ದುಷ್ಕರ್ಮಿಗಳು ಕೊಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ದಿಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ `ತಡರಾತ್ರಿ ಹೆಣ್ಣುಮಕ್ಕಳು ಹೀಗೆಲ್ಲಾ ತಿರುಗಾಡುವ ಸಾಹಸ ಮಾಡಬಾರದು’ ಎಂದರು. ಸಾಮಾನ್ಯ ಸಂದರ್ಭದಲ್ಲಿ ಯಾರೇ ಹಿರಿಯರು ಹೇಳಬಹುದಾದ ಈ ಮಾತನ್ನು ಶೀಲಾ ದೀಕ್ಷಿತ್‌ ಬಳಸಿದ್ದು, ಪತ್ರಕರ್ತೆಯ ಕೊಲೆಗೆ ಆಕೆ ಹೆಣ್ಣಾಗಿದ್ದೂ ತಡರಾತ್ರಿಯಲ್ಲಿ ಪ್ರಯಾಣಿಸಿದ್ದೇ ಕಾರಣ ಎಂಬ ಅರ್ಥದಲ್ಲಿ.

ಇವೆಲ್ಲಾ ನಮ್ಮ ರಾಜಕಾರಣಿಗಳ ಆಚಾರವಿಲ್ಲದ ನಾಲಿಗೆ ಹೊರಳುವ ಕೆಲವು ಮಾದರಿಗಳಷ್ಟೇ. ನರಮೇಧ, ಕೊಲೆಗಳಂಥ ದುರಂತಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೆಂಬ ಸಾಮಾನ್ಯ ಜ್ಞಾನವೂ ನಮ್ಮ ರಾಜಕಾರಣಿಗಳಿಗಿಲ್ಲವೇ ಅಥವಾ ಇವುಗಳಿಗೆ ಸರಿಯಾಗಿ ಸ್ಪಂದಿಸಲಾರದಷ್ಟು ಸಂವೇದನಾಶೂನ್ಯತೆ ಅವರನ್ನು ಆವರಿಸಿದೆಯೇ?

***

ಇಂದಿರಾಗಾಂಧಿಯವರ ಸಾವಿನ ಸುದ್ದಿ ಹೊರಬೀಳುವ ಹೊತ್ತಿಗಾಗಲೇ ಕಾಂಗ್ರೆಸ್‌ನ ವರಿಷ್ಠ ಮಂಡಳಿ ಪ್ರಧಾನಿ ಹುದ್ದೆಗೆ ರಾಜೀವ್‌ ಗಾಂಧಿಯ ಹೆಸರನ್ನು ಸೂಚಿಸಿಯೂ ಆಗಿತ್ತು. ಸಂಜಯ್ ಗಾಂಧಿಯ ಮರಣಾನಂತರ ಅಮೇಥಿಯಿಂದ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಸಂಸದರಾಗಿದ್ದ ರಾಜೀವ್‌ ಯುವ ಕಾಂಗ್ರೆಸ್‌ ಅಧ್ಯಕ್ಷರೂ ಆಗಿದ್ದರು. ಇಷ್ಟೆಲ್ಲದರ ಜತೆಗೆ ತಾಯಿಗೆ ರಾಜಕೀಯ ಸಲಹೆಗಾರರೂ ಆಗಿದ್ದರೆಂಬುದು ಎಲ್ಲರಿಗೂ ತಿಳಿದಿತ್ತು. `ದೊಡ್ಡ ಮರಗಳು ಬೀಳುವಾದ ಭೂಮಿ ಅದುರುತ್ತದೆ’ ಎಂದದ್ದು ಕೇವಲ ಕೊಲೆಗೀಡಾದ ತಾಯಿಯ ಮಗನಲ್ಲ. ದೇಶದ ಭಾವಿ ಪ್ರಧಾನಿ, ಹಾಲಿ ಸಂಸದ, ಅತಿದೊಡ್ಡ ರಾಷ್ಟ್ರೀಯ ಪಕ್ಷದ ಯುವ ವಿಭಾಗದ ಅಧ್ಯಕ್ಷ.

ರಾಜೀವ್‌ ಪ್ರತಿನಿಧಿಸುತ್ತಿದ್ದ ಪಕ್ಷಕ್ಕಿದ್ದ ಅಹಿಂಸಾತ್ಮಕ ಹೋರಾಟದ ಪರಂಪರೆಯ ಹಿನ್ನೆಲೆಯಲ್ಲಿ ನೋಡಿದರಂತೂ `ದೊಡ್ಡ ಮರಗಳು ಬೀಳುವ’ ರೂಪಕವನ್ನು ಆತ ಬಳಸಿದ್ದು ಮತ್ತೂ ದೊಡ್ಡ ಕ್ರೌರ್ಯವಾಗಿ ಕಾಣಿಸುತ್ತದೆ. ಬ್ರಿಟಿಷರ ವಿರುದ್ಧ ಇಡೀ ದೇಶ ಸಿಡಿದೆದ್ದು ನಿಂತ ಕಾಲಘಟ್ಟದಲ್ಲಿ ಮಹಾತ್ಮಾ ಗಾಂಧಿಯವರು ಚಳವಳಿ ಹಿಂಸಾತ್ಮಕ ಸ್ವರೂಪ ಪಡೆಯಿತೆಂಬ ಏಕೈಕ ಕಾರಣಕ್ಕೆ ಅದನ್ನು ಹಿಂತೆಗೆದುಕೊಂಡಿದ್ದರು. ಈ ಎಲ್ಲಾ ಹಿನ್ನೆಲೆಗಳನ್ನು ಬದಿಗಿರಿಸಿ ಕೇವಲ ಮಾನವೀಯ ನೆಲೆಯಲ್ಲಿ ನೋಡಿದರೂ ರಾಜೀವ್‌ ಆಡಬಾರದ ಮಾತನ್ನೇ ಆಡಿದ್ದರಷ್ಟೇ ಅಲ್ಲದೆ ಆ ಮೂಲಕ ನರಮೇಧವೊಂದನ್ನು ಸಮರ್ಥಿಸಿಕೊಂಡಿದ್ದರು.

ನರೇಂದ್ರ ಮೋದಿ ನ್ಯೂಟನ್‌ನ ಸಿದ್ಧಾಂತವನ್ನು ಬಳಸಿಕೊಂಡದ್ದೂ ಇಂಥದ್ದೇ ಸ್ಥಿತಿಯಲ್ಲಿ. ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿ ಕರಸೇವಕರನ್ನು ಕೊಂದಿದ್ದನ್ನು ಪ್ರತಿಭಟಿಸಲು ತಥಾಕಥಿತ ಹಿಂದೂ ಸಂಘಟನೆಗಳು ನೀಡಿದ್ದ ಬಂದ್‌ ಕರೆಯಲ್ಲಿ ಈ ಘಟನೆಯೊಂದಿಗೆ ಯಾವ ಸಂಬಂಧವೂ ಇಲ್ಲದ ಮುಗ್ಧರ ನರಮೇಧ ನಡೆಯಿತು. ರಾಜ್ಯದ ಮುಖ್ಯಮಂತ್ರಿಯಾಗಿ ಇದನ್ನು ತಡೆಯಬೇಕಾದ, ಕೊಲೆಗಳನ್ನು ನಡೆಸುತ್ತಿದ್ದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾದ ಜವಾಬ್ದಾರಿ ಹೊತ್ತಿದ್ದ ಮೋದಿ, ಕೊಲೆಗಳ ಸಮರ್ಥನೆಗೆ ಭೌತವಿಜ್ಞಾನದ ಮಹತ್ವದ ಸಿದ್ಧಾಂತವೊಂದನ್ನು ಬಳಸಿಕೊಂಡರು.

ಆಸ್ಕರ್‌ ಫೆರ್ನಾಂಡಿಸ್‌ ಅವರ ಮಾತಿನ ತರ್ಕವನ್ನು ಶೋಧಿಸಿ ನೋಡಿದರೆ ಅವರೆಷ್ಟು ದೊಡ್ಡ ತಪ್ಪು ಮಾಡಿದರೆಂಬುದು ಅರ್ಥವಾಗುತ್ತದೆ. ಗ್ರೇಟರ್‌ ನೊಯಿಡಾದಲ್ಲಿ ಕೊಲೆಯಾದ ಸಿಇಓ ತನ್ನ ಕಾರ್ಮಿಕರ ವಿಷಯದಲ್ಲಿ ದಯಾಳುವಾಗಿರಲಿಲ್ಲ ಎಂಬ ಆಸ್ಕರ್‌ ಅವರ ಹೇಳಿಕೆಯನ್ನು ತರ್ಕಕ್ಕಾಗಿ ಒಪ್ಪಿಕೊಳ್ಳೋಣ. ಅದು ಆ ಸಿಇಓನ ವ್ಯಾಪಾರಿ ಸಹಜ ಗುಣ. ಆತ ಹಾಗಿರಬಾರದು ಎಂಬ ಕಾರಣಕ್ಕಾಗಿಯೇ ಸರಕಾರ ಕಾರ್ಮಿಕ ಕಾನೂನುಗಳನ್ನು ರೂಪಿಸಿದೆ. ಈ ಕಾನೂನುಗಳ ಜಾರಿಯ ಮೇಲ್ವಿಚಾರಣೆಗೆ ಕೇವಲ ಅಧಿಕಾರಿಗಳು ಸಾಕಾಗದು ಎಂಬ ಕಾರಣಕ್ಕೆ ಆಸ್ಕರ್‌ ಫೆರ್ನಾಂಡಿಸ್‌ರಂಥ ಜನಪ್ರತಿನಿಧಿಗಳನ್ನು ಮಂತ್ರಿಗಳನ್ನಾಗಿಯೂ ಮಾಡಲಾಗಿದೆ. ಸಿಇಓ ತನ್ನ ಕಾರ್ಮಿಕರಿಗೆ ನ್ಯಾಯ ಒದಗಿಸಲಿಲ್ಲ ಎಂದಾದರೆ ಆ ತಪ್ಪಿನಲ್ಲಿ ಕಾರ್ಮಿಕ ಇಲಾಖೆಯ ತಪ್ಪೂ ಇದೆಯಲ್ಲವೇ? ಈ ತಪ್ಪಿನಲ್ಲಿ ಇಲಾಖೆಯ ಮಂತ್ರಿಯಾಗಿ ಆಸ್ಕರ್‌ ಫೆರ್ನಾಂಡಿಸ್‌ ಅವರ ಪಾತ್ರವೂ ಇದೆಯಲ್ಲವೇ? ಸ್ವತಃ ಆಸ್ಕರ್‌ ಅವರ ಹೇಳಿಕೆಯ ತರ್ಕವನ್ನೇ ಆಧಾರವಾಗಿಟ್ಟುಕೊಂಡರೆ ನಿಜಕ್ಕೂ ಕೊಲೆಯಾಗಬೇಕಿರುವುದು ಯಾರು?

ಶೀಲಾ ದೀಕ್ಷಿತ್‌ ದಿಲ್ಲಿಯ ಮುಖ್ಯಮಂತ್ರಿ. ಅವರೂ ಒಬ್ಬರು ಮಹಿಳೆ. ಅವರೇ ಹೇಳಿಕೊಂಡಿರುವಂತೆ ಅವರಿಗೆ ಮೂವರು ಸೋದರಿಯರಿದ್ದಾರೆ. ಅವರ ಮೊಮ್ಮಕ್ಕಳಲ್ಲಿ ಇಬ್ಬರು ಹೆಣ್ಣು ಮಕ್ಕಳು. ತಮ್ಮ ಮೊಮ್ಮಕ್ಕಳ ವಯಸ್ಸಿನ ಹುಡುಗಿಯೊಬ್ಬಳ ಕೊಲೆಯಾದರೆ ಅದನ್ನವರು `ತಡರಾತ್ರಿ ಹೆಣ್ಣು ಮಕ್ಕಳು ಓಡಾಡಿದರೆ ಹೀಗೆಯೇ ಆಗುವುದು’ ಎಂದು ವಿವರಿಸಿದರೆ ಅದನ್ನು ಏನೆಂದು ಅರ್ಥ ಮಾಡಿಕೊಳ್ಳಬೇಕು. ಯಾವ ಹೊತ್ತಿನಲ್ಲಿ ಯಾರು ಓಡಾಡಿದರೂ ಅವರ ಕೊಲೆಯಾಗದಂತೆ ನೋಡಿಕೊಳ್ಳಬೇಕಾದ ಹೊಣೆಯನ್ನು ಹೊತ್ತಿರುವವರು ಹೀಗೆ ಮಾತನಾಡಿದರೆ ಅವರು ಕೊಲೆಗಾರರಿಗಿಂತ ಹೇಗೆ ಭಿನ್ನ?

***

ರಾಜಕಾರಣಿಗಳ ಆಚಾರವಿಲ್ಲದ ನಾಲಿಗೆಯ ಪುರಾಣ ಕೇವಲ ಕ್ರೌರ್ಯ ತುಂಬಿದ ಹೇಳಿಕೆಗಳಲ್ಲಿ ಮುಗಿದು ಹೋಗುವುದಿಲ್ಲ. ಶೀಲಾ ದೀಕ್ಷಿತ್‌, ಆಸ್ಕರ್‌ ಫೆರ್ನಾಂಡಿಸ್‌ ಅವರ ಸಂವೇದನಾ ಶೂನ್ಯ ಹೇಳಿಕೆಗಳು ಹೊರ ಬಿದ್ದ ಕ್ಷಣದಲ್ಲಿಯೇ ಅದನ್ನು ಖಂಡಿಸಲು ಬಿಜೆಪಿಯ ಅನೇಕ ರಾಷ್ಟ್ರೀಯ ನಾಯಕರು ಮೇಲಾಟ ನಡೆಸಿದರು. ಬಿಜೆಪಿಯ ದಿಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರುವ ವಿ.ಕೆ.ಮಲ್ಹೋತ್ರ `ದಿಲ್ಲಿಯ ಸುರಕ್ಷೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಸಂವೇದನಾರಾಹಿತ್ಯ ಧೋರಣೆಯನ್ನು ಈ ಹೇಳಿಕೆ ತೋರಿಸುತ್ತಿದೆ’ ಎಂದು ಟೀಕಿಸಿದರು. ಲೋಕಸಭೆಯ ವಿರೋಧ ಪಕ್ಷದ ನಾಯಕ ಎಲ್‌.ಕೆ.ಆಡ್ವಾಣಿ ಕೂಡಾ ಶೀಲಾ ದೀಕ್ಷಿತ್‌ ಹೇಳಿಕೆಯನ್ನು ಖಂಡಿಸಿದರು. ಬಿಜೆಪಿಯ ವಕ್ತಾರ ರವಿಶಂಕರ್‌ ಪ್ರಸಾದ್‌ ಅವರಂತೂ ಆಸ್ಕರ್‌ ಫೆರ್ನಾಂಡಿಸ್‌ ಅವರ ಮೇಲೆ ಹರಿ ಹಾಯಲು ಎಲ್ಲಾ ಟಿ.ವಿ. ಚಾನೆಲ್‌ಗಳನ್ನೂ ವೇದಿಕೆಯನ್ನಾಗಿಸಿಕೊಂಡರು.

ಆಸ್ಕರ್‌ ಫೆರ್ನಾಂಡಿಸ್‌ ಮತ್ತು ಶೀಲಾ ದೀಕ್ಷಿತರನ್ನು ಖಂಡಿಸುವುದಕ್ಕೆ ಇದ್ದ ಸಂವೇದನಾ ಶೀಲತೆ ನರೇಂದ್ರ ಮೋದಿಯವರ `ಕ್ರಿಯೆ ಪ್ರತಿಕ್ರಿಯೆಯ ಸಿದ್ಧಾಂತ’ಕ್ಕೆ ಬಂದಾಗ ಇಲ್ಲದಂತಾಗಿಬಿಟ್ಟಿತ್ತು. ಆಡ್ವಾಣಿಯವರಿಂದ ಆರಂಭಿಸಿ ಬಿಜೆಪಿಯ ಕೊನೆಯ ಕಾರ್ಯಕರ್ತನ ತನಕ ನರೇಂದ್ರ ಮೋದಿಯವರ ಹೇಳಿಕೆಯನ್ನು ಸಮರ್ಥಿಸುವುದಕ್ಕೆ ರಾಜೀವ್‌ ಗಾಂಧಿಯವರ ದೊಡ್ಡ ಮರಗಳು ಬೀಳುವ ರೂಪಕವನ್ನು ಬಳಸಿಕೊಂಡರು. ಒಂದು ನರಮೇಧವನ್ನು ಸಮರ್ಥಿಸಲು ಮತ್ತೊಂದು ನರಮೇಧದ ಸಮರ್ಥನೆಯನ್ನು ಬಳಸಿಕೊಳ್ಳಲಾಯಿತು. ರಾಜೀವ್‌ ಗಾಂಧಿ ಸಿಕ್ಖರ ನರಮೇಧವನ್ನು ಸಮರ್ಥಿಸಿರುವಾಗ ನಾವು ಗುಜರಾತ್‌ನಲ್ಲಿ ನಡೆದ ಮುಸ್ಲಿಮರ ನರಮೇಧವನ್ನು ಸಮರ್ಥಿಸುವುದರಲ್ಲಿ ತಪ್ಪೇನಿದೆ ಎಂಬ ನಿಲುವು ಇದು.

***
ಮೇಲೆ ಚರ್ಚಿಸಲಾದ ನಾಲ್ಕೂ ಉದಾಹರಣೆಗಳ ಸಂದರ್ಭದಲ್ಲಿ ಆಯಾ ವ್ಯಕ್ತಿಗಳ ಹೇಳಿಕೆ ಕನಿಷ್ಠ ಚರ್ಚೆಗೆ ಟೀಕೆಗೆ ಗುರಿಯಾಗಿವೆ. ಹೀಗೆ ಆಗದಿರುವ ಅನೇಕ ಸಂದರ್ಭಗಳಿವೆ. ಕೆಲವು ತಿಂಗಳುಗಳ ಹಿಂದೆ ರೆಡ್‌ ರಿಬ್ಬನ್‌ ಎಕ್ಸ್‌ಪ್ರೆಸ್‌ ಬೆಂಗಳೂರಿಗೆ ಬಂದಾಗ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರೇಗೌಡರೂ ಇಂಥದ್ದೇ ಮಾತುಗಳನ್ನಾಡಿದ್ದರು. ಹಿಂದೆಲ್ಲಾ ಯುದ್ಧಗಳಲ್ಲಿ ಜನರು ಸಾಯುವುದರ ಮೂಲಕ ಜನಸಂಖ್ಯೆಯ ನಿಯಂತ್ರಣವಾಗುತ್ತಿತ್ತು. ಈಗ ಆ ಸ್ಥಾನದಲ್ಲಿ ಎಚ್‌ಐವಿ ಇದೆ ಎಂದು ರಾಮಚಂದ್ರೇಗೌಡರ ಭಾಷಣದ ಸಾರ. ಎಚ್‌ಐವಿ ಎಂಬುದು ಜನಸಂಖ್ಯಾ ನಿಯಂತ್ರಣದ ಮಾರ್ಗವೇ ಆಗಿದ್ದರೆ ಅವರದ್ದೇ ಸರ್ಕಾರದ ಆರೋಗ್ಯ ಇಲಾಖೆ ಅದರ ನಿಯಂತ್ರಣಕ್ಕೆ ಕೋಟ್ಯಂತರ ರೂಪಾಯಿಗಳನ್ನು ವಿದೇಶಗಳಿಂದಲೂ ಭಿಕ್ಷೆ ಬೇಡಿ ತಂದು ಖರ್ಚು ಮಾಡುತ್ತಿದೆ?

ಇಂಥ ಮಾತುಗಳನ್ನಾಡುವವರಿಗೆ ಹೇಳಲಿಕ್ಕಿರುವುದು ದಾಸರು ಹೇಳಿದ ಅದೇ ಮಾತನ್ನು-ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ…