Skip to content

Freedom of the present | ಈ ನಡುವಿನ ಬಿಡುವು

ಅಳಿಸಲಾಗದ ಅಕ್ಷರವ ಬರೆಯಲಾಗದು!

Menu
  • Privacy Policy
Menu

ಶಿಕ್ಷಣ ಸಚಿವರ ಪಠ್ಯ ಬದಲಾವಣೋತ್ಸಾಹ

Posted on October 21, 2008May 24, 2015 by Ismail

ಮನುಷ್ಯನನ್ನು ಪ್ರಾಣಿಗಳಿಂದ ಭಿನ್ನವಾಗಿಸುವ ಮುಖ್ಯ ಲಕ್ಷಣಗಳ ಲ್ಲೊಂದು ಭಾಷೆ. ಹಾಗಿದ್ದರೆ ಪ್ರಾಣಿಗಳಿಗೆ ಭಾಷೆ ಇಲ್ಲವೇ? ಅವುಗಳೂ ತಮ್ಮದೇ ಆದ ರೀತಿಯಲ್ಲಿ ಸದ್ದುಗಳನ್ನು ಸೃಷ್ಟಿಸುವ ಮೂಲಕ ಪರಸ್ಪರ ಸಂವಹನವನ್ನು ಸಾಧಿಸುತ್ತವೆಯಲ್ಲವೇ ಎಂಬ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಈ ಪ್ರಶ್ನೆಗಳು ಸರಿಯಾಗಿಯೇ ಇವೆ. ಆದರೆ ಇವು ಮನುಷ್ಯನ ಭಾಷೆಯ ವೈಶಿಷ್ಟ್ಯವನ್ನು ಅರಿಯದೇ ಇರುವುದರಿಂದ ಹುಟ್ಟಿರುವ ಪ್ರಶ್ನೆಗಳು.

ಪ್ರಾಣಿಗಳ ಭಾಷೆಯೆಂದರೆ ನಿರ್ದಿಷ್ಟ ಸಂಖ್ಯೆಯ ಸಂಜ್ಞೆಗಳು ಮಾತ್ರ. ಹಸಿವಾದಾಗ ಒಂದು ಸಂಜ್ಞೆ, ಶತ್ರುವನ್ನು ನೋಡಿದಾಗ ಮತ್ತೊಂದು ಸಂಜ್ಞೆ, ಮಿಲನಕ್ಕೆ ಅಣಿಯಾಗುವುದಕ್ಕೆ ಇನ್ನೊಂದು ಸಂಜ್ಞೆ ಹೀಗೆ. ಇದನ್ನು ಒಂದು ಸರಳ ಉದಾಹರಣೆಯ ಮೂಲಕ ವಿವರಿಸಬಹುದು. ಮನೆಯ ನಾಯಿ ಅದಕ್ಕೆ ಅಸಹಜ ಎನಿಸಿದ್ದನ್ನು ಕಂಡಾಗ ಬೊಗಳುತ್ತದೆ. ಈ ಬೊಗಳುವಿಕೆಯ ತೀವ್ರತೆಯನ್ನು ಅನುಸರಿಸಿ ಅದೆಷ್ಟು ಕೋಪಗೊಂಡಿದೆ ಯೆಂದು ಊಹಿಸಬಹುದಾದರೂ ಅದು ನಿರ್ದಿಷ್ಟವಾಗಿ ಏನನ್ನು ನೋಡಿದೆ ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ. ಲಂಗೂರ್‌ ಕೋತಿಗಳು ಕಾಡಿನಲ್ಲಿ ಹುಲಿ, ಚಿರತೆಯಂಥ ಪ್ರಾಣಿಗಳನ್ನು ಕಂಡಾಗ ಸದ್ದು ಮಾಡುತ್ತವೆ. ಈ ಸದ್ದನ್ನು ಕೇಳಿ ಅದು ಹುಲಿಯನ್ನು ನೋಡಿತೇ ಚಿರತೆಯನ್ನು ನೋಡಿತೇ ಎಂದು ನಿರ್ಧರಿಸಲಾಗದು.

ಮನುಷ್ಯನ ಭಾಷೆ ಹೀಗಲ್ಲ. ಅದು ಅನಂತ ಸಂಖ್ಯೆಯ ಅಭಿವ್ಯಕ್ತಿ ಗಳಿಗೆ ಅವಕಾಶವಿರುವ ಭಾಷೆ. ಈ ಕಾರಣದಿಂದಾಗಿಯೇ ಮನುಷ್ಯ ಪ್ರಾಣಿಗಳಿಗಿಂತ ಭಿನ್ನನಾಗುತ್ತಾನೆ. ಪ್ರಾಣಿಗಳ ಭಾಷೆ ಹುಟ್ಟಿಕೊಳ್ಳುವುದು ಅವುಗಳ ಮೆದುಳು ಬಳ್ಳಿಯಲ್ಲಿ. ಮನುಷ್ಯನ ಭಾಷೆ ಹುಟ್ಟಿಕೊಳ್ಳುವುದು ಅವನ ಮೆದುಳಿನ ಎಡ ಗೋಳಾರ್ಧದ ಮೇಲ್ಭಾಗದಲ್ಲಿ. ಮೆದುಳು ಬಳ್ಳಿಯಿಂದ ಉತ್ಪತ್ತಿಯಾಗುವ ಸಂದೇಶಗಳೆಲ್ಲವೂ ಭಾವನಾತ್ಮಕ ತುರ್ತಿನವು. ಈ ಕುರಿತಂತೆ ನಾವೆಲ್ಲರೂ ಹೈಸ್ಕೂಲ್‌ ಮಟ್ಟದ ಪಠ್ಯ ಪುಸ್ತಕಗಳಲ್ಲೇ ಓದಿರುತ್ತೇವೆ. ಪರಾವರ್ತಿತ ಪ್ರತಿಕ್ರಿಯೆಗಳು ಮೆದುಳು ಬಳ್ಳಿಯಿಂದಲೇ ಹುಟ್ಟಿಕೊಳ್ಳುತ್ತವೆ. ಉದಾಹರಣೆಗೆ ಬಿಸಿಯಾದ ಕೆಂಡವನ್ನು ಮುಟ್ಟಿದರೆ ತಕ್ಷಣ ಕೈಯನ್ನು ಹಿಂದಕ್ಕೆ ತೆಗೆದುಕೊಳ್ಳುವಂಥ ಪ್ರತಿಕ್ರಿಯೆಗಳಿವು. ಇಲ್ಲಿ ತರ್ಕ, ಕಾರಣಗಳಿಗೆ ಅವಕಾಶವಿಲ್ಲ. ಇವೆಲ್ಲಾ ತಕ್ಷಣದ ರಕ್ಷಣಾ ಕ್ರಿಯೆ ಗಳು. ಪ್ರಾಣಿಗಳ ಭಾಷೆ ಹುಟ್ಟಿಕೊಳ್ಳುವುದು ಇಂಥ ಕಾರಣಗಳಿಂದ.

ಮನುಷ್ಯನ ಭಾಷೆಯೆಂಬುದು ತರ್ಕದ ಕೂಸು. ಮೆದುಳಿನ ಎಡ ಗೋಳಾರ್ಧದ ಮೇಲ್ಭಾಗ ನಮ್ಮ ತಾರ್ಕಿಕ ಶಕ್ತಿಯನ್ನು ನಿಯಂತ್ರಿಸುತ್ತದೆ. ಅಂದರೆ ಮನುಷ್ಯನಿಗೆ ಭಾಷೆಯೆಂಬುದು ಜೈವಿಕವಾಗಿ ದೊರೆಯುವ ಕೌಶಲ್ಯವಲ್ಲ. ಈ ಕೌಶಲ್ಯವನ್ನು ಆತ ಕಲಿತು ರೂಢಿಸಿಕೊಳ್ಳುತ್ತಾನೆ. ಈ ಕಾರಣದಿಂದಾಗಿಯೇ ವಿಶ್ವದ ಎಲ್ಲೆಡೆ ನಾಯಿಗಳು ಒಂದೇ ಬಗೆಯಲ್ಲಿ ಬೊಗಳುತ್ತವೆ. ಈ ಸಂಜ್ಞಾ ವಿಧಾನದಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಆದರೆ ಮನುಷ್ಯನ ಭಾಷೆ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ. ಒಂದೇ ಭಾಷೆಯೊಳಗೆ ಅನೇಕ ಡಯಲೆಕ್ಟ್‌ಗಳಿರುತ್ತವೆ. ಇದಿಷ್ಟೂ ಆಧುನಿಕ ಭಾಷಾ ವಿಜ್ಞಾನಿಗಳು ಮನುಷ್ಯನ ಭಾಷೆಯ ಕುರಿತಂತೆ ತಿಳಿದುಕೊಂಡಿರುವ ವಿಷಯಗಳ ಸರಳೀಕೃತ ಸಾರ. ಮನುಷ್ಯ ಭಾಷೆಯನ್ನು ಕಲಿಯುವ ಪ್ರಕ್ರಿಯೆಯನ್ನೂ ಈ ಮಾಹಿತಿಗಳ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಲಾಗುತ್ತಿದೆ. ಈ ಹೊಸ ಅರಿವಿನಿಂದಾಗಿ ಭಾಷಾ ಬೋಧನೆಯೆಂಬ ಜ್ಞಾನ ಕ್ಷೇತ್ರ ಬೋಧನೆಯ ತಂತ್ರಗಳನ್ನು ಪುನರಾವಿಷ್ಕರಿಸುತ್ತಿದೆ. ಮಗುವೊಂದು ತನ್ನ ವಾತಾವರಣದ ಭಾಷೆಯನ್ನು ಸಹಜವಾಗಿ ಕಲಿಯುವಂತೆಯೇ ಹೊಸ ಭಾಷೆಯನ್ನು ಕಲಿಸುವುದಕ್ಕೆ ಬೇಕಾದ ಸೂತ್ರ ಗಳನ್ನು ಭಾಷಾ ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ವರ್ತಮಾನದ ಭಾಷಾ ಬೋಧನೆಯ ತಂತ್ರಗಳು ಬದಲಾಗಿರುವುದೂ ಇದೇ ಕಾರಣದಿಂದ.

* * *

ಸರ್ಕಾರೀ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್‌ ಬೋಧಿಸಬೇಕೆಂಬ ನಿರ್ಧಾರವೊಂದನ್ನು ಕರ್ನಾಟಕ ಸರಕಾರ ಕೈಗೊಂಡಾಗ ಅದಕ್ಕೆ ಅನೇಕ ವಿರೋಧಗಳು ವ್ಯಕ್ತವಾದವು. ಆದರೆ ಅಂತಿಮವಾಗಿ ಆಧುನಿಕ ಅಗತ್ಯಗಳಲ್ಲಿ ಇಂಗ್ಲಿಷ್‌ ಕೂಡಾ ಒಂದು ಎಂಬುದು ಎಲ್ಲಾ ಮಕ್ಕಳ ಪಾಲಕರ ನಿಲುವೂ ಆಗಿದ್ದರಿಂದ ಒಂದನೇ ತರಗತಿಯಿಂದ ಇಂಗ್ಲಿಷ್‌ ಕಲಿಸುವ ನಿರ್ಧಾರಕ್ಕೇ ಗೆಲುವು ದೊರೆಯಿತು. ಅದರ ಭಾಗವಾಗಿಯೇ ಒಂದನೇ ತರಗತಿಯ ಮಕ್ಕಳಿಗೆ ಇಂಗ್ಲಿಷ್‌ ಕಲಿಸುವುದಕ್ಕೊಂದು ಪಠ್ಯ ಪುಸ್ತಕ ರೂಪುಗೊಂಡಿತು.

ವಾಸ್ತವದಲ್ಲಿ ಇದೊಂದು ಪಠ್ಯ ಪುಸ್ತಕವಲ್ಲ. ಶಿಕ್ಷಕರಿಗೊಂದು ಬೋಧನಾ ಕೈಪಿಡಿ ಮಕ್ಕಳಿಗೊಂದು ಚಟುವಟಿಕೆ ಪುಸ್ತಕಗಳನ್ನು ತಜ್ಞರ ಸಮಿತಿ ರೂಪಿಸಿತು. ಮಕ್ಕಳ ಬಳಿ ಇರುವ ಚಟುವಟಿಕೆ ಪುಸ್ತಕದಲ್ಲಿ ಒಂದಷ್ಟು ಚಿತ್ರಗಳು, ಕಲಿಕಾ ಚಟುವಟಿಕೆಗಳಿಗೆ ಬೇಕಾದ ಅವಕಾಶವಿದೆ. ಶಿಕ್ಷಕರಿಗೆ ನೀಡಲಾಗಿರುವ ಕೈಪಿಡಿಯಲ್ಲಿ ಇಂಗ್ಲಿಷ್‌ನ ಕಥೆಗಳು, ಸರಳ ವಾಕ್ಯಗಳು ಇತ್ಯಾದಿಗಳಿವೆ. ಶಿಕ್ಷಕರು ತಮ್ಮ ಬೋಧನಾ ಕೈಪಿಡಿಯಲ್ಲಿರುವ ಮಾಹಿತಿ ಯನ್ನು ಸಹಜ ಕಲಿಕೆಯನ್ನು ಉತ್ತೇಜಿಸುವ ವಿಧಾನಗಳಲ್ಲಿ ಮಕ್ಕಳಿಗೆ ಬೋಧಿಸಬೇಕು. ಆ ರೀತಿಯ ಚಟುವಟಿಕೆಗಳನ್ನೂ ಮಾಡಿಸಬೇಕು.

ಇಷ್ಟಕ್ಕೂ ಈ ಪುಸ್ತಕಗಳು ಮಕ್ಕಳಿಗೆ ಇಂಗ್ಲಿಷ್‌ ಅಕ್ಷರಗಳನ್ನು ಅಥವಾ ವಾಕ್ಯಗಳನ್ನು ಬರೆಯಲು ಕಲಿಸುವ ಉದ್ದೇಶದಿಂದ ರೂಪುಗೊಂಡವಲ್ಲ. ಇವುಗಳ ಉದ್ದೇಶ ಮಕ್ಕಳು ನುಡಿಯನ್ನು ಕಲಿಯಲಿ ಎಂಬುದು. ಒಂದು ವರ್ಷದ ಚಟುವಟಿಕೆಗಳ ಮೂಲಕ ಅವರು ಇಂಗ್ಲಿಷ್‌ನಲ್ಲಿ ಸರಳ ವಾಕ್ಯಗಳನ್ನು ರಚಿಸಿ ಹೇಳುವ ಸಾಮರ್ಥ್ಯ ಪಡೆಯುತ್ತಾರಷ್ಟೇ. ಮಾತ್ರವಲ್ಲ ಶಿಕ್ಷಕರು ಅವರಿಗೆ ನೀಡಲಾಗಿರುವ ಪುಸ್ತಕದಲ್ಲಿರುವ ಕಥೆಗಳನ್ನೇ ಬಳಸಬೇಕೆಂಬ ಒತ್ತಾಯವೂ ಇಲ್ಲಿಲ್ಲ. ತಮಗೆ ಗೊತ್ತಿರುವ ಕಥೆಗಳನ್ನೇ ಪಠ್ಯ ಕ್ರಮಕ್ಕೆ ಅನುಗುಣವಾಗಿ ಅಳವಡಿಸಿಕೊಳ್ಳಲೂ ಅವರಿಗೆ ಸ್ವಾತಂತ್ರ್ಯವಿದೆ. ಒಟ್ಟಿನಲ್ಲಿ ಒಂದನೇ ತರಗತಿಯ ಮಕ್ಕಳಿಗೆ ವೈಜ್ಞಾನಿಕವಾಗಿ ಇಂಗ್ಲಿಷ್‌ ಕಲಿಸುವ ವಿಧಾನಕ್ಕೆ ಈ ಕೈಪಿಡಿ ಮತ್ತು ಚಟುವಟಿಕೆ ಪುಸ್ತಕ ಸಹಾಯ ಮಾಡುತ್ತದೆ. ಈ ಪುಸ್ತಕವನ್ನು ಹೇಗೆ ಬಳಸಬೇಕೆಂಬುದರ ಕುರಿತು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಎರಡೆರಡು ಸುತ್ತಿನ ತರಬೇತಿಯನ್ನೂ ನೀಡಲಾಗಿದೆ. ಇದು ಸಾಲದು ಎಂಬಂತೆ ಉಪಗ್ರಹ ತಂತ್ರಜ್ಞಾನ ಬಳಸಿ ತಜ್ಞರ ಜತೆ ಸಂವಾದಕ್ಕೂ ಎಲ್ಲಾ ಶಿಕ್ಷಕರಿಗೂ ಅವಕಾಶ ಕಲ್ಪಿಸಲಾಗಿತ್ತು. ಆದರೆ ಇದನ್ನೆಲ್ಲಾ ಮರೆತು ನಮ್ಮ ಶಿಕ್ಷಣ ಸಚಿವರು `ಒಂದನೇ ತರಗತಿಯ ಪಠ್ಯ ಪುಸ್ತಕವನ್ನು ಬದಲಾಯಿಸಲಾಗುವುದು’ ಎಂದು ಹೇಳುತ್ತಿದ್ದಾರೆ.

* * *

ಶಾಸಕನಾಗಿಯೂ ಸರಳವಾಗಿ ಬದುಕುತ್ತಿದ್ದ ಅಲ್ಪಸಂಖ್ಯಾತರಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಯೂ ಒಬ್ಬರು. ಅಷ್ಟೇಕೆ ಮಂತ್ರಿಯಾದ ನಂತರವೂ ತಮ್ಮ ಸರಳ ಬದುಕನ್ನು ಮುಂದುವರಿಸಿರುವವರು. ಅವರು ಹಳ್ಳಿಗಾಡಿನಿಂದ ಕನ್ನಡ ಮಾಧ್ಯಮದಲ್ಲೇ ಕಲಿತು ಬಂದು ಇಂಗ್ಲಿಷ್‌ ಬಳಸಲು ತೊಂದರೆ ಅನುಭವಿಸಿದವರೂ ಹೌದು. ಆದರೆ ಒಂದನೇ ತರಗತಿಯ ಪಠ್ಯ ಪುಸ್ತಕದ ಮೇಲೆ ಅವರಿಗೇಕೆ ಕೆಂಗಣ್ಣು ಎಂಬುದು ಮಾತ್ರ ಅರ್ಥವಾಗದ ಸಂಗತಿ. ಹೊಸ ಕಾಲದ ಬೋಧನಾ ವಿಧಾನಗಳ ಕುರಿತು ಅವರು ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸಿದರೆ ಅವರಿಗಿರುವ ಸಂಶಯಗಳು ದೂರವಾಗಬಹುದು. ಜತೆಗೆ `ಪುಸ್ತಕ ಕಷ್ಟ’ ಎಂಬ ಸೋಮಾರಿ ಶಿಕ್ಷಕರ ದೂರನ್ನು ಅವರು ಕಡೆಗಣಿಸುವುದು ಉತ್ತಮ ಎನಿಸುತ್ತದೆ. ಸರ್ಕಾರಿ ಕೆಲಸ ಸಿಕ್ಕಿರುವುದು ಸಂಬಳ ಪಡೆಯಲು ಮಾತ್ರ ಎಂಬ ನಿಲುವು ಹೊಂದಿರುವ ಕೆಲವು ಶಿಕ್ಷಕರಿಗಷ್ಟೇ ಈ ಬೋಧನಾ ವಿಧಾನ ಕಷ್ಟ ಎನಿಸುತ್ತಿದೆಯೇ ಹೊರತು ಮಕ್ಕಳಿಗೆ ಕಲಿಸುವ ವಿಷಯದಲ್ಲಿ ತಾವೂ ಕಲಿಯಲು ಸಿದ್ಧರಾಗಿರುವ ಯಾವ ಶಿಕ್ಷಕರೂ ಈ ಪಠ್ಯಕ್ರಮ ಕಷ್ಟ ಎಂದು ದೂರುತ್ತಿಲ್ಲ. ಸಚಿವರು ಇದನ್ನು ಅರ್ಥ ಮಾಡಿಕೊಳ್ಳಲು ತಮ್ಮದೇ ಇಲಾಖೆಯ ಕಾರ್ಯದರ್ಶಿ ವಂದಿತಾ ಶರ್ಮ ಅವರನ್ನು ಕೇಳಿದರೂ ಸಾಕು. ಅವರು `ಚುಕ್ಕಿ ಚಿನ್ನಾ’ ಅಂತರ ಕ್ರಿಯಾತ್ಮಕ ರೇಡಿಯೋ ಬೋಧನಾ ಕಾರ್ಯ ಕ್ರಮಗಳನ್ನು ರೂಪಿಸುತ್ತಿದ್ದ `ಡಾಟ್‌ ಎಜು’ ಯೋಜನೆಯ ನಿರ್ದೇಶಕ ರಾಗಿದ್ದವರು. ಒಂದನೇ ತರಗತಿಯ ಪಠ್ಯ ಕ್ರಮವನ್ನೇ ಬಳಸಿ ರೂಪಿಸಲಾದ ಕಾರ್ಯಕ್ರಮಗಳೆಲ್ಲವಕ್ಕೂ ಧನಾತ್ಮಕ ಪ್ರತಿಕ್ರಿಯೆಗಳೇ ದೊರೆತಿದ್ದನ್ನು ಅವರು ಮರೆತಿರಲಾರರು. ಅನೇಕ ಶಿಕ್ಷಕರು ನಾವು ಕಲಿಯುವಾಗಲೂ ಇಂಥದ್ದೇ ವಿಧಾನಗಳಿದ್ದರೆ ಒಳ್ಳೆಯದಿತ್ತು ಎಂದು ಹೇಳಿದ್ದರೆಂದು ಕಾರ್ಯಕ್ರಮದ ಮೌಲ್ಯಮಾಪನ ನಡೆಸಿದವರು ದಾಖಲಿಸಿದ್ದಾರೆ.

* * *

ಸರ್ಕಾರ ಒಂದನೆಯ ತರಗತಿಯಿಂದ ಇಂಗ್ಲಿಷ್‌ ಬೋಧಿಸುವ ನಿರ್ಧಾರ ಕೈಗೊಳ್ಳುವ ಮೊದಲು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಐದನೇ ತರಗತಿಯಿಂದ ಇಂಗ್ಲಿಷ್‌ ಕಲಿಕೆಯನ್ನು ಆರಂಭಿಸುತ್ತಿದ್ದರು. ಅಲ್ಲಿಂದ ಮುಂದಕ್ಕೆ ಅವರು ಪದವಿಯ ತನಕವೂ ಇಂಗ್ಲಿಷ್‌ ಅನ್ನು ಕನಿಷ್ಠ ಭಾಷಾ ವಿಷಯವಾಗಿ ಅಧ್ಯಯನ ಮಾಡುತ್ತಾರೆ. ಈ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಪದವಿ ಮುಗಿಸಿದ ನಂತರವೂ ಸರಳ ಇಂಗ್ಲಿಷ್‌ ವಾಕ್ಯಗಳನ್ನು ರಚಿಸಲು ಸೋಲುತ್ತಾರೆ. ಕೆಎಎಸ್‌ ಪರೀಕ್ಷೆಯ ಫಲಿತಾಂಶಗಳಂತೂ ಇದಕ್ಕೆ ದೊಡ್ಡ ಸಾಕ್ಷಿ. ಇಂಗ್ಲಿಷ್‌ನಲ್ಲಿ ಅರ್ಹತೆ ಬೇಕಾದಷ್ಟು ಅಂಕಗಳನ್ನು ಗಳಿಸಲೇ ಹೆಚ್ಚಿನವರು ವಿಫಲರಾಗಿಬಿಡುತ್ತಾರೆ.

ಈಗ ಒಂದನೇ ತರಗತಿಗೆಂದು ರೂಪಿಸಲಾಗಿರುವ ಪಠ್ಯ ಕ್ರಮ ಕಷ್ಟವಿದೆಯೆಂದು ಹೇಳುತ್ತಿರುವ ಶಿಕ್ಷಕರ ಸಮಸ್ಯೆಯೂ ಇದುವೇ. ಇವರೆಲ್ಲಾ ಎಸ್‌ಎಸ್‌ಎಲ್‌ಸಿ ಅಥವಾ ಪದವಿ ಪೂರ್ವ ಶಿಕ್ಷಣ ಮುಗಿಸಿ ಶಿಕ್ಷಕರ ತರಬೇತಿ ಪಡೆದವರು. ಇವರ ಇಂಗ್ಲಿಷ್‌ನ ಮಟ್ಟವೂ ಇಂಥದ್ದೇ. ಪಠ್ಯ ಕ್ರಮ `ಕಷ್ಟವಾಗುತ್ತಿರುವುದು’ ಇದೇ ಕಾರಣದಿಂದ. ಈ ಶಿಕ್ಷಕರ ಇಂಗ್ಲಿಷ್‌ನ ಗುಣಮಟ್ಟವನ್ನು ಸುಧಾರಿಸಲು ಮತ್ತಷ್ಟು ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಅವರ ಉತ್ತರದಾಯಿತ್ವವನ್ನು ಖಾತರಿ ಪಡಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಂಡರೆ ಕನಿಷ್ಠ ಮಕ್ಕಳು ಇಂಗ್ಲಿಷ್‌ ಕಲಿಯುತ್ತಾರೆ. ಇದನ್ನು ಮಾಡದೆ ನೂರಾರು ಬಾರಿ ಪಠ್ಯ, ಪಠ್ಯ ಕ್ರಮಗಳನ್ನು ಬದಲಾಯಿಸಿದರೂ ಪ್ರಯೋಜನವಾಗದು.

October 2008
M T W T F S S
 12345
6789101112
13141516171819
20212223242526
2728293031  
« Sep   Jan »
  • December 2017
  • November 2017
  • March 2017
  • February 2017
  • January 2017
  • June 2014
  • March 2010
  • June 2009
  • May 2009
  • April 2009
  • March 2009
  • February 2009
  • January 2009
  • October 2008
  • September 2008
  • August 2008
  • July 2008
  • May 2008
  • April 2008
  • March 2008
  • February 2008
  • January 2008
  • December 2007
  • November 2007
  • September 2007
  • August 2007
  • July 2007
  • April 2007
  • January 2007
  • December 2006
  • October 2006
  • September 2006
  • May 2006
  • ಪ್ರಜೆಗಳನ್ನು ಬೆತ್ತಲಾಗಿಸುವ ಅಪಾರದರ್ಶಕ ಪ್ರಭುತ್ವ
  • ಇಂಟರ್‌ನೆಟ್ ಇಲ್ಲದ ಡಿಜಿಟಲ್ ಆರ್ಥಿಕತೆ!
  • ನೋಟು ರದ್ದತಿಯಲ್ಲಿ ಕಂಡ ಡಿಜಿಟಲ್ ಡಿವೈಡ್
  • ಮಾಧ್ಯಮ ನಿಯಂತ್ರಣದ ‘ಭದ್ರತಾ’ ತಂತ್ರಗಳು
  • ಒಮ್ಮುಖ ಪಾರದರ್ಶಕತೆಯ ತಂತ್ರಜ್ಞಾನಾಧಾರಿತ ಪ್ರಭುತ್ವ
  • ಇ-ಹೊತ್ತು ಅಂಕಣ
  • ಒಂಟಿದನಿ (ಉದಯವಾಣಿ ಅಂಕಣ)
  • ಟಿಪ್ಪಣಿ
  • ಪ್ರಜಾವಾಣಿ
  • ಬಿಡಿ ಬರಹಗಳು
  • Privacy Policy
© 2023 Freedom of the present | ಈ ನಡುವಿನ ಬಿಡುವು | Powered by Superbs Personal Blog theme