ಜ್ಞಾನ ಸಮಾಜ, ಜ್ಞಾನಾಧಾರಿತ ಆರ್ಥಿಕತೆ ಎಂಬ ಪದಪುಂಜಗಳನ್ನು ಇತ್ತೀಚಿನ ವರ್ಷಗಳಲ್ಲಿ ಮತ್ತೆ ಮತ್ತೆ ಕೇಳುತ್ತಿದ್ದೇವೆ. ರಾಷ್ಟ್ರೀಯ ಜ್ಞಾನ ಆಯೋಗವಂತೂ ತನ್ನ ವರದಿಗೆ `ಜ್ಞಾನಾಧಾರಿತ ಸಮಾಜದತ್ತ’ ಎಂಬ ಶೀರ್ಷಿಕೆಯನ್ನು ಕೊಟ್ಟಿದೆ. ಕರ್ನಾಟಕದಲ್ಲಿ ಇತ್ತೀಚೆಗಷ್ಟೇ ಸ್ಥಾಪನೆಯಾದ ಜ್ಞಾನ ಆಯೋಗ ಕೂಡ ಜ್ಞಾನಾಧಾರಿತ ಆರ್ಥಿಕತೆಯ ಬಗ್ಗೆ, ಜ್ಞಾನ ಸಮಾಜದ ಬಗ್ಗೆ ಹೇಳುತ್ತಿದೆ. ಭಾರತವನ್ನು ಜ್ಞಾನಾಧಾರಿತ ಆರ್ಥಿಕತೆಯನ್ನಾಗಿ ಬೆಳೆಸುವುದರ ಬಗ್ಗೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಕೂಡಾ ಹೇಳುತ್ತಾರೆ. ಇದೇ ಮಾತುಗಳನ್ನು ಹಣಕಾಸು ಸಚಿವರು ಇನ್ನಷ್ಟು ಸಂಕೀರ್ಣ ಪದಪುಂಜಗಳನ್ನು ಬಳಸಿ ವಿವರಿಸುತ್ತಾರೆ.
ಜ್ಞಾನ ಸಮಾಜದ ಕುರಿತಂತೆ ಯು.ಕೆ.ಯ ಸಸೆಕ್ಸ್ ವಿಶ್ವವಿದ್ಯಾಲಯದ ಸ್ಟೆಪ್ಸ್ ಕೇಂದ್ರ ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಹಾಗೂ ಇನ್ನಿತರ ಸಂಸ್ಥೆಗಳ ಸಹಯೋಗದಲ್ಲಿ ಎರಡು ದಿನಗಳ ಕಾರ್ಯಕ್ರಮವೊಂದನ್ನು ಬೆಂಗಳೂರಿನಲ್ಲಿ ಸಂಘಟಿಸಿತ್ತು. ವಿವಿಧ ವಿಷಯಗಳ ತಜ್ಞರು `ಜ್ಞಾನ ಸಮಾಜ’ವೆಂಬ ಪರಿಕಲ್ಪನೆಯ ಸುತ್ತ ಚರ್ಚೆ ನಡೆಸಿದರು. ದೇಶ-ವಿದೇಶಗಳ ತಜ್ಞರು ಭಾಗವಹಿಸಿದ್ದ `ರೌಂಡ್ ಟೇಬಲ್’ ಪರಿಕಲ್ಪನೆಯ ಸಂಕೀರ್ಣ ಸಮಸ್ಯೆಗಳನ್ನು ಚರ್ಚಿಸಿದರೆ ಮರುದಿನ ಏರ್ಪಾಡಾಗಿದ್ದ ಸಾರ್ವಜನಿಕ ಚರ್ಚೆ ಹಿಂದಿನ ದಿನದ ಚರ್ಚೆಗಳ ಸಾರವನ್ನು ಸಾರ್ವಜನಿಕ ಮಟ್ಟದಲ್ಲಿ ಚರ್ಚಾ ವಿಷಯವನ್ನಾಗಿಸಲು ಪ್ರಯತ್ನಿಸಿತು.
ರಾಷ್ಟ್ರೀಯ ಜ್ಞಾನ ಆಯೋಗದಿಂದ ಆರಂಭಿಸಿ ರಾಜ್ಯ ಜ್ಞಾನ ಆಯೋಗದ ತನಕ, ಪ್ರಧಾನಿಯಿಂದ ಆರಂಭಿಸಿ ಮುಖ್ಯಮಂತ್ರಿಗಳ ತನಕ, ಉದ್ಯಮಿಗಳಿಂದ ಆರಂಭಿಸಿ ವಿದ್ವಾಂಸರ ತನಕ ಎಲ್ಲರೂ ಚರ್ಚಿಸುತ್ತಿರುವ ಈ `ಜ್ಞಾನ ಸಮಾಜ’ ಎಂದರೆ ಏನು? ಈ ಪ್ರಶ್ನೆಗೆ ಸದ್ಯಕ್ಕೆ ದೊರೆಯುವ ಉತ್ತರ ವಿಕಿಪಿಡಿಯಾದ ವ್ಯಾಖ್ಯೆ ಮಾತ್ರ. ಜ್ಞಾನವನ್ನು ಉತ್ಪಾದನೆಯ ಪ್ರಾಥಮಿಕ ಸಂಪನ್ಮೂಲವಾಗಿಟ್ಟುಕೊಂಡಿರುವ ಸಮಾಜವನ್ನು `ಜ್ಞಾನ ಸಮಾಜ’ ಎನ್ನಬಹುದು. `ಉತ್ಪಾದನೆಯ ಪ್ರಾಥಮಿಕ ಸಂಪನ್ಮೂಲವಾಗಿರುವ ಜ್ಞಾನ’ ಯಾವುದು? ಈ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ಹೊರಟರೆ `ಜ್ಞಾನ ಸಮಾಜ’ವೆಂಬ ಆಧುನಿಕ ಪರಿಕಲ್ಪನೆಯ ಮಿತಿಗಳು ಅರ್ಥವಾಗತೊಡಗುತ್ತವೆ.