`ಜ್ಞಾನಾಧಾರಿತ ಆರ್ಥಿಕತೆ’ಯಲ್ಲಿ ಜ್ಞಾನದ ಪ್ರಶ್ನೆ

ಜ್ಞಾನ ಸಮಾಜ, ಜ್ಞಾನಾಧಾರಿತ ಆರ್ಥಿಕತೆ ಎಂಬ ಪದಪುಂಜಗಳನ್ನು ಇತ್ತೀಚಿನ ವರ್ಷಗಳಲ್ಲಿ ಮತ್ತೆ ಮತ್ತೆ ಕೇಳುತ್ತಿದ್ದೇವೆ. ರಾಷ್ಟ್ರೀಯ ಜ್ಞಾನ ಆಯೋಗವಂತೂ ತನ್ನ ವರದಿಗೆ `ಜ್ಞಾನಾಧಾರಿತ ಸಮಾಜದತ್ತ’ ಎಂಬ ಶೀರ್ಷಿಕೆಯನ್ನು ಕೊಟ್ಟಿದೆ. ಕರ್ನಾಟಕದಲ್ಲಿ ಇತ್ತೀಚೆಗಷ್ಟೇ ಸ್ಥಾಪನೆಯಾದ ಜ್ಞಾನ ಆಯೋಗ ಕೂಡ ಜ್ಞಾನಾಧಾರಿತ ಆರ್ಥಿಕತೆಯ ಬಗ್ಗೆ, ಜ್ಞಾನ ಸಮಾಜದ ಬಗ್ಗೆ ಹೇಳುತ್ತಿದೆ. ಭಾರತವನ್ನು ಜ್ಞಾನಾಧಾರಿತ ಆರ್ಥಿಕತೆಯನ್ನಾಗಿ ಬೆಳೆಸುವುದರ ಬಗ್ಗೆ ಪ್ರಧಾನ ಮಂತ್ರಿ ಮನಮೋಹನ್‌ ಸಿಂಗ್‌ ಕೂಡಾ ಹೇಳುತ್ತಾರೆ. ಇದೇ ಮಾತುಗಳನ್ನು ಹಣಕಾಸು ಸಚಿವರು ಇನ್ನಷ್ಟು ಸಂಕೀರ್ಣ ಪದಪುಂಜಗಳನ್ನು ಬಳಸಿ ವಿವರಿಸುತ್ತಾರೆ.
ಜ್ಞಾನ ಸಮಾಜದ ಕುರಿತಂತೆ ಯು.ಕೆ.ಯ ಸಸೆಕ್ಸ್‌ ವಿಶ್ವವಿದ್ಯಾಲಯದ ಸ್ಟೆಪ್ಸ್‌ ಕೇಂದ್ರ ಬೆಂಗಳೂರಿನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಹಾಗೂ ಇನ್ನಿತರ ಸಂಸ್ಥೆಗಳ ಸಹಯೋಗದಲ್ಲಿ ಎರಡು ದಿನಗಳ ಕಾರ್ಯಕ್ರಮವೊಂದನ್ನು ಬೆಂಗಳೂರಿನಲ್ಲಿ ಸಂಘಟಿಸಿತ್ತು. ವಿವಿಧ ವಿಷಯಗಳ ತಜ್ಞರು `ಜ್ಞಾನ ಸಮಾಜ’ವೆಂಬ ಪರಿಕಲ್ಪನೆಯ ಸುತ್ತ ಚರ್ಚೆ ನಡೆಸಿದರು. ದೇಶ-ವಿದೇಶಗಳ ತಜ್ಞರು ಭಾಗವಹಿಸಿದ್ದ `ರೌಂಡ್‌ ಟೇಬಲ್‌’ ಪರಿಕಲ್ಪನೆಯ ಸಂಕೀರ್ಣ ಸಮಸ್ಯೆಗಳನ್ನು ಚರ್ಚಿಸಿದರೆ ಮರುದಿನ ಏರ್ಪಾಡಾಗಿದ್ದ ಸಾರ್ವಜನಿಕ ಚರ್ಚೆ ಹಿಂದಿನ ದಿನದ ಚರ್ಚೆಗಳ ಸಾರವನ್ನು ಸಾರ್ವಜನಿಕ ಮಟ್ಟದಲ್ಲಿ ಚರ್ಚಾ ವಿಷಯವನ್ನಾಗಿಸಲು ಪ್ರಯತ್ನಿಸಿತು.

ರಾಷ್ಟ್ರೀಯ ಜ್ಞಾನ ಆಯೋಗದಿಂದ ಆರಂಭಿಸಿ ರಾಜ್ಯ ಜ್ಞಾನ ಆಯೋಗದ ತನಕ, ಪ್ರಧಾನಿಯಿಂದ ಆರಂಭಿಸಿ ಮುಖ್ಯಮಂತ್ರಿಗಳ ತನಕ, ಉದ್ಯಮಿಗಳಿಂದ ಆರಂಭಿಸಿ ವಿದ್ವಾಂಸರ ತನಕ ಎಲ್ಲರೂ ಚರ್ಚಿಸುತ್ತಿರುವ ಈ `ಜ್ಞಾನ ಸಮಾಜ’ ಎಂದರೆ ಏನು? ಈ ಪ್ರಶ್ನೆಗೆ ಸದ್ಯಕ್ಕೆ ದೊರೆಯುವ ಉತ್ತರ ವಿಕಿಪಿಡಿಯಾದ ವ್ಯಾಖ್ಯೆ ಮಾತ್ರ. ಜ್ಞಾನವನ್ನು ಉತ್ಪಾದನೆಯ ಪ್ರಾಥಮಿಕ ಸಂಪನ್ಮೂಲವಾಗಿಟ್ಟುಕೊಂಡಿರುವ ಸಮಾಜವನ್ನು `ಜ್ಞಾನ ಸಮಾಜ’ ಎನ್ನಬಹುದು. `ಉತ್ಪಾದನೆಯ ಪ್ರಾಥಮಿಕ ಸಂಪನ್ಮೂಲವಾಗಿರುವ ಜ್ಞಾನ’ ಯಾವುದು? ಈ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ಹೊರಟರೆ `ಜ್ಞಾನ ಸಮಾಜ’ವೆಂಬ ಆಧುನಿಕ ಪರಿಕಲ್ಪನೆಯ ಮಿತಿಗಳು ಅರ್ಥವಾಗತೊಡಗುತ್ತವೆ.

***

ಉತ್ಪಾದನೆ ಎಂಬ ಪರಿಕಲ್ಪನೆಯೇ ಸಮಾಜವೆಂಬ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡಿದೆ. ಸಮಾಜವೆಂಬ ಪರಿಕಲ್ಪನೆ ಅಸ್ತಿತ್ವದಲ್ಲಿ ಇಲ್ಲದ ಪ್ರಪಂಚದಲ್ಲಿ `ಉತ್ಪಾದನೆ’ ಪರಿಕಲ್ಪನೆಗೂ ಅವಕಾಶವಿಲ್ಲ. ಹಾಗೆಯೇ ಪ್ರತೀ ಉತ್ಪಾದನೆಯ ಹಿಂದೆಯೂ ಜ್ಞಾನ ಇದ್ದೇ ಇರುತ್ತದೆ. ಹಾಗಿರುವಾಗ `ಜ್ಞಾನ ಸಮಾಜದತ್ತ’ ಎಂದು ರಾಷ್ಟ್ರೀಯ ಜ್ಞಾನ ಆಯೋಗ ಹೇಳುವುದಕ್ಕೇನು ಅರ್ಥ? ಅಥವಾ ದೇಶ ವಿದೇಶಗಳ ವಿಶ್ವವಿದ್ಯಾಲಯದಲ್ಲಿರುವ ತಜ್ಞರು ಒಂದೆಡೆ ಕಲೆತು `ಜ್ಞಾನ ಸಮಾಜ’ದ ಕುರಿತಂತೆ ಚರ್ಚಿಸುವುದೇಕೆ?

ಈ ಪ್ರಶ್ನೆಗಳಿಗೆ ಇರುವ ಉತ್ತರ ಸರಳವಾದುದು. ಜ್ಞಾನವೆಂಬುದು ಉತ್ಪಾದನೆಯ ಪ್ರಾಥಮಿಕ ಸಂಪನ್ಮೂಲವಾಗಿರುವ ಕ್ಷೇತ್ರಗಳು ಯಾವುವು ಎಂಬುದನ್ನು `ಜ್ಞಾನಧಾರಿತ ಆರ್ಥಿಕತೆ’ಯ ಪ್ರತಿಪಾದಕರು ನಿರ್ಧರಿಸಿಬಿಟ್ಟಿದ್ದಾರೆ. ಸಾಫ್ಟ್‌ವೇರ್‌, ಹೊರಗುತ್ತಿಗೆ, ವೈಜ್ಞಾನಿಕ ಆವಿಷ್ಕಾರಗಳು ಮಾತ್ರ ಜ್ಞಾನವನ್ನು ಆಧಾರವಾಗಿಟ್ಟುಕೊಂಡ ಉತ್ಪನ್ನಗಳು ಎಂಬ ಪೂರ್ವಗ್ರಹಿಕೆಯ ಆಧಾರದ ಮೇಲೆ `ಜ್ಞಾನಾಧಾರಿತ ಆರ್ಥಿಕತೆ’ ನಿಂತಿದೆ. ಈ ಮಾದರಿಯ ಉತ್ಪಾದನೆಯನ್ನು ನಡೆಸುವ ಸಮಾಜಗಳು `ಜ್ಞಾನ ಸಮಾಜ’ ಎಂಬುದು ಇವರ ನಿಲುವು. ಅಂದರೆ ನಮ್ಮ ಕೃಷಿಕರು, ಕುಶಲಕರ್ಮಿಗಳು ಈ `ಜ್ಞಾನ ಸಮಾಜ’ದ ವ್ಯಾಖ್ಯೆಯೊಳಗೆ ಇಲ್ಲ. ಅಥವಾ ಇವರಲ್ಲಿರುವ ಜ್ಞಾನವನ್ನು ಈ `ಜ್ಞಾನ ಸಮಾಜ’ವು ಜ್ಞಾನವೆಂದು ಪರಿಗಣಿಸುವುದಿಲ್ಲ.

***

ಜ್ಞಾನ ಮತ್ತು ಉತ್ಪಾದನೆಯ ಸಂಬಂಧವನ್ನು ವಾಣಿಜ್ಯಾತ್ಮಕ ಅರ್ಥದಲ್ಲಿ ಗ್ರಹಿಸಿದಾಗಲೇ ಪೂರ್ವದ ಜ್ಞಾನ ಪರಂಪರೆಗಳೆಲ್ಲವೂ ಅರ್ಥ ಕಳೆದುಕೊಂಡುಬಿಡುತ್ತವೆ. ಪೇಟೆಂಟ್‌ ಮತ್ತು ಕಾಪಿ ರೈಟ್‌ ಕಾನೂನುಗಳ ವ್ಯಾಪ್ತಿಯಲ್ಲಿ ವ್ಯಾಖ್ಯಾನಕ್ಕೆ ಒಳಪಡುವ ಜ್ಞಾನ ಮಾತ್ರ `ಜ್ಞಾನ’ವಾಗಿ ಉಳಿಯುತ್ತದೆ. ನಮ್ಮ ಕುಶಲಕರ್ಮಿಗಳು ತಮಗೆ ಪರಂಪರಾಗತವಾಗಿ ಬಂದಿರುವ ಕೌಶಲ್ಯಕ್ಕೆ ಪೇಟೆಂಟ್‌ ಪಡೆದುಕೊಳ್ಳಬೇಕು. ಇಲ್ಲವೇ ಇದಕ್ಕೆ ಪೇಟೆಂಟ್‌ ಪಡೆದುಕೊಂಡಿರುವ ಯಾವುದೋ ಸಂಸ್ಥೆಗೆ ನಿರಂತರವಾಗಿ ರಾಯಲ್ಟಿ ಪಾವತಿಸಬೇಕು. ಕೃಷಿಕರು ತಮ್ಮ ಬೆಳೆಗಳ ಬೀಜಗಳಿಗೆ ಪೇಟೆಂಟ್‌ ಪಡೆದಿರಬೇಕು ಇಲ್ಲವೇ ಪೇಟೆಂಟ್‌ ಮಾಲೀಕರಾಗಿರುವ ಯಾವುದೋ ಕಂಪೆನಿಗೆ ರಾಯಲ್ಟಿ ಪಾವತಿಸಬೇಕು. ಪಾರಂಪರಿಕ ವೈದ್ಯಕೀಯ ಕ್ಷೇತ್ರದ ಸಮಸ್ಯೆ ಇನ್ನೂ ಸಂಕೀರ್ಣವಾದುದು.

ನಮ್ಮ ಜ್ಞಾನ ಆಯೋಗದಿಂದ ಆರಂಭಿಸಿ ಪ್ರಧಾನಿಗಳ ತನಕದ ಎಲ್ಲರೂ ಪ್ರತಿಪಾದಿಸುತ್ತಿರುವ ಈ `ಜ್ಞಾನ ಸಮಾಜ’ದಲ್ಲಿ ಜ್ಞಾನದ ಮುಕ್ತ ಹರಿವು ಸಾಧ್ಯವಿಲ್ಲ. ಈ ಸಮಸ್ಯೆಯನ್ನು ಭಾರತದ ಮತ್ತು ಭಾರತದ ಹೊರಗಿರುವ ಅನೇಕ ವಿದ್ವಾಂಸರು ಚರ್ಚಿಸುತ್ತಿದ್ದಾರೆ. ಈ ಚರ್ಚೆಗಳು ಕೇವಲ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಗಳಂಥ `ಉತ್ಕೃಷ್ಟತಾ ಕೇಂದ್ರ’ಗಳ ವೇದಿಕೆಗಷ್ಟೇ ಸೀಮಿತಗೊಂಡಿರುವುದು ಈ ಹೊತ್ತಿನ ನಿಜವಾದ ಸಮಸ್ಯೆ.

***

ಪಾರಂಪರಿಕ ಜ್ಞಾನವನ್ನೂ ಆಧುನಿಕ ಮಾರುಕಟ್ಟೆ ಪ್ರತಿಪಾದಿಸುತ್ತಿರುವ `ಜ್ಞಾನ ಸಮಾಜ’ದ ಪರಿಧಿಯೊಳಕ್ಕೆ ತರುವುದಕ್ಕೂ ಪ್ರಯತ್ನಗಳು ನಡೆಯುತ್ತಿವೆ. ಈ ಪ್ರಯತ್ನದಲ್ಲಿ ಮುಖ್ಯವಾದುದು ಜೀವ ವೈವಿಧ್ಯ ದಾಖಲಾತಿಯಂಥವು. ಜೀವ ವೈವಿಧ್ಯವನ್ನು ದಾಖಲಿಸಿ ಅವುಗಳ ಮೇಲೆ ಮಾಲೀಕತ್ವ ನಿರ್ದಿಷ್ಟ ಸರ್ಕಾರ ಅಥವಾ ಸಮುದಾಯದ್ದೆಂದು ಸ್ಥಾಪಿಸಿಬಿಟ್ಟರೆ ಸಮಸ್ಯೆ ಪರಿಹಾರವಾಗುತ್ತದೆ ಎಂಬುದು ಈ ದಾಖಲಾತಿಯ ಹಿಂದಿನ ಪ್ರೇರಣೆ.

ಇದಕ್ಕೆ ವಿರುದ್ಧವಾದ ಮತ್ತೊಂದು ವಾದ ಸರಣಿಯೂ ಇದೆ. ಈ ಬಗೆಯ ದಾಖಲಾತಿಗಳು ಪಾರಂಪರಿಕ ಜ್ಞಾನವನ್ನು ಹೆಚ್ಚು ದೊಡ್ಡ ಗಂಡಾಂತರಕ್ಕೆ ದೂಡುತ್ತವೆ. ಪಾರಂಪರಿಕ ಅರಿವಿನ ಮೇಲೆ ತಮ್ಮ ಮಾಲೀಕತ್ವವನ್ನು ಸ್ಥಾಪಿಸಲು ಹೊರಟವರಿಗೆ ಈ ದಾಖಲಾತಿಗಳು ಒಂದು ಭಂಡಾರವಾಗಿ ಮಾರ್ಪಡುತ್ತವೆ ಎಂಬುದು ಈ ವಾದ.  ಮೊದಲನೆಯ ವಾದ ಆಧುನಿಕ ಮಾರುಕಟ್ಟೆಯ ಪರಿಭಾಷೆಯೊಳಗೇ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದರೆ ಎರಡನೇ ವಾದ ಮಾರುಕಟ್ಟೆಯ ಪರಿಭಾಷೆಯನ್ನು ಒಪ್ಪಿಕೊಂಡೇ ಅದರಿಂದ ದೂರ ಉಳಿಯಲು ಪ್ರಯತ್ನಿಸುತ್ತಿದೆ. ವಾಸ್ತವದಲ್ಲಿ ಇವರೆಡೂ ಈಗಿನ ಸಮಸ್ಯೆಗೆ ಪರಿಹಾರವಾಗುವುದಿಲ್ಲ. ಈ ಎರಡೂ ಪ್ರಯತ್ನಗಳು ಪಾರಂಪರಿಕ ಜ್ಞಾನದ ಮೇಲೆ ಯಾರೂ ಪೇಟೆಂಟ್‌ ಪಡೆಯದಂತೆ ನೋಡಿಕೊಳ್ಳುವುದನ್ನು ತಮ್ಮ ಮುಖ್ಯ ಉದ್ದೇಶವನ್ನಾಗಿಸಿಕೊಂಡಿವೆಯೇ ಹೊರತು ಪೇಟೆಂಟ್‌ ಎಂಬ ಪರಿಕಲ್ಪನೆಯನ್ನು ಪ್ರಶ್ನಿಸಲು ಹೋಗುತ್ತಿಲ್ಲ.

ಆಧುನಿಕ ಮಾರುಕಟ್ಟೆ ಪ್ರತಿಪಾದಿಸುತ್ತಿರುವ `ಪೇಟೆಂಟ್‌’, `ಕಾಪಿ ರೈಟ್‌’ಗಳ ಪರಿಕಲ್ಪನೆಯನ್ನೇ ಪ್ರಶ್ನಿಸದೇ ಹೋದರೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಭಾರತೀಯ ಜ್ಞಾನ ಪರಂಪರೆಗಳ ಅತಿ ಮುಖ್ಯ ಲಕ್ಷಣವೆಂದರೆ ಯಾವ ಆವಿಷ್ಕಾರವೂ ಯಾರೋ ಒಬ್ಬನದ್ದಾಗಿರುವುದಿಲ್ಲ. ಇದು ಸಾಹಿತ್ಯದಿಂದ ಆರಂಭಿಸಿ ವಿಜ್ಞಾನದ ತನಕದ ಎಲ್ಲ ಸಂದರ್ಭಗಳಲ್ಲೂ ಇರುವ ವಾಸ್ತವ. ಲೌಕಿಕ ಕೇಂದ್ರೀತವಾದ ಪಶ್ಚಿಮ ಪ್ರತಿಪಾದಿಸುವ ಆವಿಷ್ಕಾರ ಆಧ್ಯಾತ್ಮಿಕ ಭಾರತದ ಮಟ್ಟಿಗೆ ಒಂದು ಸುಧಾರಣೆ ಮಾತ್ರ. `ವ್ಯಾಸೋಚ್ಛಿಷ್ಟಂ ಜಗತ್ಸರ್ವಂ’ ಎನ್ನುವಾಗ ಭಾರತದ ಕವಿ ತನ್ನ ಸೃಜನಶೀಲತೆಯನ್ನು ನಿರಾಕರಿಸುತ್ತಿರುವುದಿಲ್ಲ. ಬದಲಿಗೆ ತನ್ನ ಪರಂಪರೆಯನ್ನು ನೆನಪಿಸಿಕೊಳ್ಳುತ್ತಾ ಇದು ತನ್ನದು ಮಾತ್ರವಲ್ಲ ಎಂದು ವಿನಮ್ರನಾಗುತ್ತಿರುತ್ತಾನೆ. ರೈತ ಹೊಸತೊಂದು ಬೆಳೆ ವಿಧಾನವನ್ನು ಕಂಡುಕೊಂಡರೆ ಅದಕ್ಕೆ ಪೇಟೆಂಟ್‌ ಪಡೆಯದೆ ಉಳಿಯುವುದೂ ಇದೇ ಕಾರಣದಿಂದ.