ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಂಕೇತಿಕವಾದ ಕ್ರಿಯೆಗಳಿಗೂ ಒಂದು ಮಹತ್ವವಿದೆ. ಅಭಿವೃದ್ಧಿ ಕಾಮಗಾರಿಗಳನ್ನು ಮುಖ್ಯಮಂತ್ರಿ ಖುದ್ದಾಗಿ ಪರಿಶೀಲಿಸಲು ಹೊರಡುವುದರಿಂದ ಆರಂಭಿಸಿ ರಾಜಧಾನಿಯ ಹೊರಗೆ ಸಂಪುಟ ಸಭೆ ಮತ್ತು ವಿಧಾನಸಭಾ ಅಧಿವೇಶನಗಳನ್ನು ನಡೆಸುವ ತನಕದ ಅನೇಕ ಕೆಲಸಗಳು ಈ ಸಾಂಕೇತಿಕ ಕ್ರಿಯೆಗಳ ಪರಿಧಿಯಲ್ಲಿ ಬರುತ್ತವೆ. ಚಾಮರಾಜ
ನಗರಕ್ಕೆ ಭೇಟಿ ನೀಡಿದವರೆಲ್ಲಾ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಭ್ರಮೆ ವ್ಯಾಪಕವಾಗಿರುವಾಗ ಮುಖ್ಯಮಂತ್ರಿಯೊಬ್ಬ ಚಾಮರಾಜ ನಗರಕ್ಕೆ ಭೇಟಿ ನೀಡುವುದು ನಿಜಕ್ಕೂ ಮುಖ್ಯವಾಗುತ್ತದೆ. ರಾಜಧಾನಿಯಿಂದ ದೂರವಿರುವ ಪ್ರದೇಶವೊಂದು ಅಭಿವೃದ್ಧಿಯಿಂದಲೂ ದೂರವಿದ್ದಾಗ ಅಲ್ಲೊಂದು ವಿಧಾನಸಭಾ ಅಧಿವೇಶನ ನಡೆಸುವುದು ಇಲ್ಲವೇ ಸಂಪುಟ ಸಭೆಯನ್ನು
ನಡೆಸುವುದು ಬಹಳ ಮುಖ್ಯವಾಗುತ್ತದೆ. ಸರ್ಕಾರ ತಮ್ಮ ಬಳಿಗೆ ಬಂತು ಎಂಬ ಭರವಸೆಯನ್ನು ಆ ಪ್ರದೇಶದ ಜನರಲ್ಲಿ ಮೂಡಿಸುವುದಕ್ಕೆ ಈ ಸಾಂಕೇತಿಕ ಕ್ರಿಯೆ ಸಹಾಯ ಮಾಡುತ್ತದೆ.
ದೇವೇಗೌಡರು ಪ್ರಧಾನಿಯಾಗಿದ್ದಾಗ ಈಶಾನ್ಯ ರಾಜ್ಯಗಳನ್ನು ಸಂದರ್ಶಿಸಿದ್ದು ಇದೇ ಕಾರಣಕ್ಕೆ ಮುಖ್ಯವಾಗಿತ್ತು. ದಿಲ್ಲಿ ತಮ್ಮನ್ನು ಕಡೆಗಣಿಸುತ್ತಿದೆ ಎಂದು ಭಾವಿಸುತ್ತಿದ್ದ ರಾಜ್ಯಗಳಿಗೆ ಪ್ರಧಾನಿಯೇ ಹೋದರೆ ಆಗುವ ಪರಿಣಾಮವೇ ಇಲ್ಲಿಯೂ ಆಗಿತ್ತು.
ಎಚ್.ಡಿ.ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯದ ಮಿತಿಗಳೇನೇ ಇದ್ದರೂ ರಾಜ್ಯದ ಆಡಳಿತ ಚುಕ್ಕಾಣಿಯನ್ನು ಹಿಡಿದಿರುವ ವ್ಯಕ್ತಿಯೊಬ್ಬ ಹಳ್ಳಿಯ ಬಡವನ ಮನೆಯಲ್ಲೂ ವಾಸ್ತವ್ಯ ಮಾಡಬಲ್ಲ ಎಂಬುದು ನಿಜಕ್ಕೂ ಮಹತ್ವದ ವಿಷಯವೇ ಆಗಿತ್ತು. ಈ ಸಾಂಕೇತಿಕ ಕ್ರಿಯೆಗಳು ಮುಂದಿನ ಹಂತದಲ್ಲಿ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಹೋಗಬೇಕು. ದುರದೃಷ್ಟವಶಾತ್ ನಮ್ಮಲ್ಲಿ ಸಾಂಕೇತಿಕ ಕ್ರಿಯೆಗಳ್ಯಾವೂ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಅರ್ಥಪೂರ್ಣ ಕ್ರಿಯೆಗಳಾಗುತ್ತಿಲ್ಲ. ಇವೆಲ್ಲವೂ ಫೋಟೋಗಳಿಗೆ ಫೋಸ್ ಕೊಡುವುದಕ್ಕೂ ದೃಶ್ಯ ಮಾಧ್ಯಮಗಳಿಗೆ ವಿಷುಯಲ್ ಪೀಸ್ ಆಗುವುದಕ್ಕೂ ಸೀಮಿತವಾಗುತ್ತಾ ಸಾಗಿವೆ. ಈ ಸಾಂಕೇತಿಕ ಕ್ರಿಯೆಯಲ್ಲಿಯೂ ಅನುಕೂಲಸಿಂಧುತ್ವವೇ ಮೇಲುಗೈ ಸಾಧಿಸುತ್ತಿದೆ.
***
ಉತ್ತರ ಕರ್ನಾಟಕದ ಅನಾಥ ಪ್ರಜ್ಞೆ ಹೋಗಲಾಡಿಸುವುದಕ್ಕೆ ಬೆಳಗಾವಿಯಲ್ಲಿ ಅಧಿವೇಶನ ಎಂಬ ತರ್ಕವನ್ನು ವಿಶ್ಲೇಷಣೆಗೆ ಒಳಪಡಿಸಿದರೆ ನಮ್ಮ ಸರ್ಕಾರಗಳು ಅನುಸರಿಸುವ ಅನುಕೂಲ ಸಿಂಧು ರಾಜಕಾರಣ ಅರ್ಥವಾಗುತ್ತದೆ. ಉತ್ತರ ಕರ್ನಾಟಕದ ಅನಾಥ ಪ್ರಜ್ಞೆ ಹೋಗಲಾಡಿಸುವುದಕ್ಕೆ ವಿಧಾನ ಸಭಾ ಅಧಿವೇಶನವನ್ನು ಎಲ್ಲಿ ನಡೆಸಬೇಕಿತ್ತು? ಅತ್ಯಂತ ಹಿಂದುಳಿದ ಜಿಲ್ಲೆಯಲ್ಲಿ
ಎಂಬುದು ಈ ಪ್ರಶ್ನೆಗೆ ಸಹಜ ಉತ್ತರ. ಆದರೆ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಮಾನವ ಅಭಿವೃದ್ಧಿ ಸೂಚಿಯಲ್ಲಿ ಮೊದಲ ಹತ್ತು ಸ್ಥಾನಗಳೊಳಗೇ ಇರುವ ಬೆಳಗಾವಿಯನ್ನು ಆರಿಸಿಕೊಂಡಿತು. ಮಾನವ ಅಭಿವೃದ್ಧಿ ಸೂಚಿಯಲ್ಲಿ ಬೆಳಗಾವಿಗೆ ಎಂಟನೇ ಸ್ಥಾನವಿದೆ.
ಅಭಿವೃದ್ಧಿ ಹೊಂದಿದೆ ಎನ್ನಲಾಗುತ್ತಿರುವ ದಕ್ಷಿಣ ಕರ್ನಾಟಕದ ಹಾಸನದಂಥ ಜಿಲ್ಲೆಗಿಂತ ಮೂರು ಸ್ಥಾನಗಳಷ್ಟು ಮೇಲಿರುವ ಜಿಲ್ಲೆಯಲ್ಲಿ ವಿಧಾನಸಭಾ ಅಧಿವೇಶನ ನಡೆಸುವುದೇ ಒಂದು ತಮಾಷೆಯಲ್ಲವೇ?
ಉತ್ತರ ಕರ್ನಾಟಕದಲ್ಲಿ ಅಧಿವೇಶನ ನಡೆಸಲೇಬೇಕೆಂದಿದ್ದರೆ ಮಾನವ ಅಭಿವೃದ್ಧಿ ಸೂಚಿಯಲ್ಲಿ 27ನೇ ಸ್ಥಾನದಲ್ಲಿರುವ ರಾಯಚೂರಿನಲ್ಲಿ ನಡೆಸಬಹುದಿತ್ತಲ್ಲವೇ? ಅದೂ ಬೇಡವೆಂದಿದ್ದರೆ 26ನೇ ಸ್ಥಾನದಲ್ಲಿರುವ ಗುಲ್ಬರ್ಗ, ಇಲ್ಲವೇ 24ನೇ ಸ್ಥಾನದಲ್ಲಿರುವ ಕೊಪ್ಪಳವನ್ನು ಆರಿಸಿಕೊಳ್ಳಬಹುದಿತ್ತಲ್ಲವೇ?
ಇವುಗಳನ್ನೇಕೆ ಆರಿಸಿಕೊಳ್ಳಲಿಲ್ಲ ಎಂಬುದಕ್ಕೆ ಕೆಲವು ಸರಳ ಕಾರಣಗಳನ್ನು ನಾವೇ ಕಂಡುಕೊಳ್ಳಬಹುದು. ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದಕ್ಕೆ ಬೇಕಿರುವ ಎಲ್ಲಾ ಅನುಕೂಲಗಳೂ ಇವೆ. ಮಾನವ ಅಭಿವೃದ್ಧಿ ಸೂಚಿಯಲ್ಲಿ ಧಾರವಾಡಕ್ಕಿಂತಲೂ ಎರಡು ಸ್ಥಾನಗಳಷ್ಟು ಮೇಲಿರುವ ಬೆಳಗಾವಿ ಜಿಲ್ಲೆಗೆ ಸಂಪರ್ಕ ಸುಲಭ. ಪ್ರಭಾಕರ ಕೋರೆ ಅಧಿವೇಶನಕ್ಕೆ ಬೇಕಿರುವ ಸಕಲ ಅನುಕೂಲಗಳನ್ನೂ ಕಲ್ಪಿಸುತ್ತಾರೆ. ಅಧಿವೇಶನಕ್ಕೆ ರಜೆ ಇರುವ ದಿನಗಳಲ್ಲಿ ಶಾಸಕರು ಗೋವಾಕ್ಕೋ ಮುಂಬೈಗೋ ಹೋಗುವುದೂ ಸುಲಭ.
ಬೆಳಗಾವಿಯಲ್ಲಿ ಅಧಿವೇಶನಕ್ಕೆ ಒದಗಿಸಿರುವ ಅನುಕೂಲಗಳನ್ನು ನೋಡಿದರೆ ಕೊಪ್ಪಳದಲ್ಲೋ ರಾಯಚೂರಿನಲ್ಲೋ ಇಂಥದ್ದೊಂದು ಅಧಿವೇಶನ ನಡೆಯಲು ಸಾಧ್ಯವೇ ಇಲ್ಲವೇನೋ ಅನ್ನಿಸುತ್ತದೆ. ಕೊಪ್ಪಳದಲ್ಲಿ ಅಧಿವೇಶನ ನಡೆಸುವುದಕ್ಕೆ ಅಗತ್ಯವಿರುವ ಒಂದೇ ಒಂದು ಕಟ್ಟಡವೂ ಇಲ್ಲ. ವಸತಿಯ ವ್ಯವಸ್ಥೆಯಂತೂ ಸಾಧ್ಯವೇ ಇಲ್ಲ. ಕೊಪ್ಪಳದಲ್ಲಿ ನಮ್ಮ ಶಾಸಕರ `ಮಟ್ಟ’ಕ್ಕೆ ಬೇಕಿರುವ ಒಂದು ಹೊಟೇಲೂ ಇಲ್ಲ. ಮಂತ್ರಿಗಳ ಮಟ್ಟದ ಹೊಟೇಲುಗಳಂತೂ ಇಲ್ಲವೇ ಇಲ್ಲ. ರಾಯಚೂರಿನಲ್ಲಿ ಅಧಿವೇಶನ ನಡೆಸುವುದಾದರೆ ಅಲ್ಲಿರುವ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ರೋಗಿಗಳನ್ನೆಲ್ಲಾ ಸ್ಥಳಾಂತರಿಸಬೇಕೇನೋ?
***
ಈ ಅನುಕೂಲ ಸಿಂಧುತ್ವ ಕೇವಲ ಅಧಿವೇಶನ ನಡೆಸುವ ವಿಷಯಕ್ಕಷ್ಟೇ ಸೀಮಿತವಾಗಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮೊದಲ ಹೆಜ್ಜೆಯೆಂದು ಸರ್ಕಾರಗಳು ಹೇಳಿಕೊಂಡ ಹೈಕೋರ್ಟ್ ಪೀಠ ಸ್ಥಾಪನೆಯಾದದ್ದು ಧಾರವಾಡದಲ್ಲಿ. ಧಾರವಾಡ ಮಾನವ ಅಭಿವೃದ್ಧಿ ಸೂಚಿಯಲ್ಲಿ ಮೊದಲ ಹತ್ತು ಸ್ಥಾನಗಳೊಳಗೆ ಬರುವ ಜಿಲ್ಲೆ. ಗುಲ್ಬರ್ಗಕ್ಕೊಂದು ಸಂಚಾರೀ ಪೀಠ ದೊರೆತದ್ದು ಧರ್ಮಸಿಂಗ್ ಗುಲ್ಪರ್ಗದವರಾಗಿದ್ದರು ಎಂಬುದು ಕಾರಣವೇ ಹೊರತು ಅಭಿವೃದ್ಧಿಗೆ ಸಂಬಂಧಿಸಿದ ಸಾಂಕೇತಿಕತೆಯಲ್ಲ.
ಎರಡು ಹೊಸ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲು ಹೊರಟಾಗ ಅದರಲ್ಲೊಂದನ್ನು ಕೊಪ್ಪಳಕ್ಕೋ ರಾಯಚೂರಿಗೋ ನೀಡಬಹುದಿತ್ತು. ಆದರೆ ಆಗ ನಮ್ಮ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ಕಾಣಿಸಿದ್ದು ಮಾನವ ಅಭಿವೃದ್ಧಿ ಸೂಚಿಯಲ್ಲಿ ಆರನೇ ಸ್ಥಾನದಲ್ಲಿರುವ ಶಿವಮೊಗ್ಗ ಮತ್ತು ಹನ್ನೊಂದನೇ ಸ್ಥಾನದಲ್ಲಿರುವ ಹಾಸನ ಜಿಲ್ಲೆಗಳು. 2007ರಲ್ಲಿ ಹೊಸ ಸರ್ಕಾರಿ ಕಾಲೇಜುಗಳನ್ನು ಸ್ಥಾಪಿಸುವ ನಿರ್ಧಾರ ಕೈಗೊಂಡಾಗ ಕೇವಲ ಒಂದು ಸರ್ಕಾರಿ ಕಾಲೇಜನ್ನು ಹೊಂದಿದ್ದ ಬೀದರ್ಗೆ ದೊರೆತದ್ದು ಆರು ಸರ್ಕಾರಿ ಕಾಲೇಜುಗಳು. 63 ಸರ್ಕಾರಿ ಕಾಲೇಜುಗಳಿದ್ದ ಹಾಸನ ಜಿಲ್ಲೆಗೆ 20 ಕಾಲೇಜುಗಳ ಪಾಲು ದೊರೆಯಿತು. ಆಗ ಇದ್ದ
ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳೇ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರದ ಬದ್ಧತೆಯನ್ನು ತೋರಿಸುವುದಕ್ಕೆ ಬೆಳಗಾವಿಯಲ್ಲಿ ವಿಧಾನ ಸಭಾ ಅಧಿವೇಶನವನ್ನು ಆಯೋಜಿಸಿದ್ದರು.
***
ಥಾರ್ ಮರುಭೂಮಿಯ ನಂತರ ಅತೀವ ನೀರಿನ ಕೊರತೆ ಅನುಭವಿಸುತ್ತಿರುವ ಭೂಭಾಗ ಉತ್ತರ ಕರ್ನಾಟಕದಲ್ಲಿದೆ. ಸೋದರ ಸಂಬಂಧಗಳಲ್ಲಿ ನಡೆಯುವ ವಿವಾಹದಿಂದ ಭಾರತದಲ್ಲೇ ಅತಿ ಹೆಚ್ಚು ಆರೋಗ್ಯದ ಸಮಸ್ಯೆಗಳಿರುವ ಪ್ರದೇಶವೂ ಉತ್ತರ ಕರ್ನಾಟಕವೇ. ಅಷ್ಟೇಕೆ ಮಾನವ ಅಭಿವೃದ್ಧಿ ಸೂಚಿಯ ಶಿಕ್ಷಣ ಸೂಚಿಯಲ್ಲಿ ಅತ್ಯಂತ ಹಿಂದುಳಿದಿರುವ ಎಂಟು ಜಿಲ್ಲೆಗಳಿರುವುದು ಇದೇ
ಪ್ರದೇಶದಲ್ಲಿ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕೊನೆಯ ಸ್ಥಾನದಲ್ಲಿರುವ ಎಂಟು ಜಿಲ್ಲೆಗಳಿರುವುದೂ ಉತ್ತರ ಕರ್ನಾಟಕದಲ್ಲಿಯೇ.
ಉತ್ತರ ಕರ್ನಾಟಕವೇಕೆ ಹೀಗಿದೆ ಎಂಬ ಪ್ರಶ್ನೆಯೇ ಸುತ್ತವೇ ಉತ್ತರ ಕರ್ನಾಟಕದಲ್ಲಿ ನಡೆಯುವ ಅಧಿವೇಶನ ಚರ್ಚಿಸಬಹುದಿತ್ತು. ಕಳೆದ ಬಾರಿಯ ಅಧಿವೇಶನದಲ್ಲಿ ಸಾಂಕೇತಿಕತೆಯ ಸಂಭ್ರಮ ಮುಖ್ಯವಾಗಿದ್ದನ್ನು ಕ್ಷಮಿಸಬಹುದು. ಈ ಬಾರಿಯೂ ಅದೇ ಮುಂದುವರೆದದ್ದನ್ನು ಹೇಗೆ ಒಪ್ಪಿಕೊಳ್ಳುವುದು. ಮಾನವ ಅಭಿವೃದ್ಧಿಯಲ್ಲಿ ಕೊನೆಯ ಸ್ಥಾನಗಳಲ್ಲಿರುವ ಕ್ಷೇತ್ರಗಳ ಶಾಸಕರೂ ಈ ವಿಷಯ ಚರ್ಚೆಯಾಗಬೇಕು ಎಂದು ಭಾವಿಸದೇ ಇರುವುದನ್ನು ಕ್ಷಮಿಸಲು ಸಾಧ್ಯವೇ?
ಬೆಳಗಾವಿಯಲ್ಲಿ ಅಧಿವೇಶನ ನಡೆಯುವುದು ಕೆಲವು ಶಾಸಕರಿಗೆ ಗೋವಾದಲ್ಲಿ ರಜೆ ಕಳೆಯಲು ಅನುಕೂಲ ಕಲ್ಪಿಸಿದ್ದನ್ನು ಬಿಟ್ಟರೆ ಮತ್ತೇನನ್ನೂ ಸಾಧಿಸಲಿಲ್ಲ ಎಂಬುದು ಕಟು ವಾಸ್ತವ. ಬೆಳಗಾವಿಯಲ್ಲಿ ಮೃಷ್ಟಾನ್ನ ಉಣ್ಣಲು ಅವಕಾಶ ಕಲ್ಪಿಸುವ ಬದಲಿಗೆ ರಾಯಚೂರು, ಕೊಪ್ಪಳದಂಥ ಪ್ರದೇಶದಲ್ಲಿ ಅಧಿವೇಶನ ನಡೆಸಿದ್ದರೆ ಕನಿಷ್ಠ ಅನಭಿವೃದ್ಧಿಯ ರುಚಿಯನ್ನಾದರೂ ನಮ್ಮ ಜನಪ್ರತಿನಿಧಿಗಳು ಆಸ್ವಾದಿಸುತ್ತಿದ್ದರೇನೋ?