ಫೆಬ್ರವರಿ 18ರಂದು ಬೆಂಗಳೂರಿನ ಮಾಣಿಕ್ಯವೇಲು ಮ್ಯಾನ್ಷನ್‌ನಲ್ಲಿ ನಡೆದ ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿಯ ಉದ್ಘಾಟನಾ ಸಮಾರಂಭದಲ್ಲಿ ಸಚಿವರೊಬ್ಬರು ನೀಡಿದ ಆದೇಶ ಹೀಗಿತ್ತು. `ಗವರ್ನ್‌ಮೆಂಟ್ ಈಸ್ ಸ್ಪೀಕಿಂಗ್ ಹಿಯರ್. ಪುಲ್ ದೆಮ್ ಔಟ್ ಐ ಸೇ’. (ಇಲ್ಲಿ ಸರ್ಕಾರ ಮಾತನಾಡುತ್ತಿದೆ. ನಾನು ಹೇಳುತ್ತಿದ್ದೇನೆ ಅವರನ್ನು ಹೊರಗೆ ಹಾಕಿ). ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು `ನನ್ನ ಸರ್ಕಾರ’ ಎಂದು ಮಾತನಾಡುವುದನ್ನು ನಾವು ಕೇಳಿದ್ದೇವೆ. ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರು ಓದುವ ಆಡಳಿತಾರೂಢ ರಾಜಕೀಯ ಪಕ್ಷಗಳು ಸಿದ್ಧಪಡಿಸಿದ ಭಾಷಣದಲ್ಲಿ `ನನ್ನ ಸರ್ಕಾರ’ ಎಂಬ ಪ್ರಯೋಗವಿರುತ್ತದೆ. ಆದರೆ ಮಂತ್ರಿಗಳು, ಶಾಸಕರು, ಸಂಸದರು ಈ ಬಗೆಯ ಪ್ರಯೋಗ ಮಾಡಿದ್ದು ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲೆಲ್ಲೂ ದಾಖಲಾಗಿಲ್ಲ.
ರಾಜ್ಯಪಾಲ, ರಾಷ್ಟ್ರಪತಿಗಳಂಥವರು `ನನ್ನ ಸರ್ಕಾರ’ ಎಂಬ ಪ್ರಯೋಗವನ್ನು ಬಳಸುತ್ತಾರೆಯೇ ಹೊರತು ಇವರ್ಯಾರೂ `ನಾನೇ ಸರ್ಕಾರ’ ಎಂದು ಹೇಳಿದ್ದಂತೂ ಇಲ್ಲವೇ ಇಲ್ಲ. ಹೀಗೆ `ನಾನೇ ಸರ್ಕಾರ’ ಎಂದು ಹೇಳಿದವನಿದ್ದರೆ ಅವನು 17ನೇ ಶತಮಾನದ ಫ್ರೆಂಚ್ ದೊರೆ ಹದಿನಾಲ್ಕನೇ ಲೂಯಿ. ಅವನು ಸಂಸತ್ ಸ್ವಯಂಪ್ರೇರಣೆಯಿಂದ ಸಭೆ ಸೇರುವುದರಿಂದ ವಿಚಲಿತನಾಗಿ `l’etat C’est moi'(ನಾನೇ ಪ್ರಭುತ್ವ ಅಥವಾ ನಾನೇ ಸರ್ಕಾರ) ಎಂದು ಕಿರುಚಿದ್ದನಂತೆ.