
ಮಂಗಳೂರಿನಲ್ಲಿ ಜನವರಿ 23ರಂದು ಪಬ್ ಒಂದರ ಮೇಲೆ ನಡೆದ ದಾಳಿಯ ನಂತರ `ಕಾನೂನನ್ನು ಕೈಗೆತ್ತಿಕೊಳ್ಳುವುದನ್ನು ನಾವು ಸಹಿಸುವುದಿಲ್ಲ’ ಎಂಬ ಹೇಳಿಕೆಯೊಂದನ್ನು ಕರ್ನಾಟಕದ ಅಧಿಕಾರಾರೂಢ ರಾಜಕಾರಣಿಗಳು ಬಹಳಷ್ಟು ಬಾರಿ ನೀಡಿದ್ದಾರೆ. ಈ ಹೇಳಿಕೆಗಳನ್ನು ನೀಡಿದವರಾಗಲೀ ಅದನ್ನು ಕೇಳಿಸಿಕೊಂಡ ನಾವಾಗಲೀ `ಕಾನೂನನ್ನು ಕೈಗೆತ್ತಿಕೊಳ್ಳುವುದು’ ಎಂಬ ಪರಿಕಲ್ಪನೆಯ ಅರ್ಥವೇನು ಎಂಬ ಬಗ್ಗೆ ಯೋಚಿಸಿಲ್ಲ.
ಜನರು ಕಾನೂನನ್ನು ಕೈಗೆತ್ತಿಕೊಳ್ಳುವುದಕ್ಕೆ ಒಂದು ಸರಳ ಮತ್ತು ಸಾಮಾನ್ಯ ಉದಾಹರಣೆ ಯಾವುದು? ಸಾರ್ವಜನಿಕ ಸ್ಥಳವೊಂದರಲ್ಲಿ ಜೇಬುಗಳ್ಳನೊಬ್ಬ ಮಾಲು ಸಮೇತ ಸಿಕ್ಕಿಬೀಳುವುದನ್ನು ಇಂಥದ್ದೊಂದು ಸಂದರ್ಭವೆಂದು ಪರಿಗಣಿಸಬಹುದೇನೋ. ಜೇಬುಗಳ್ಳ ಸಿಕ್ಕಿಬಿದ್ದ ತಕ್ಷಣ ಅವನನ್ನು ಹಿಡಿದವರು ಪೊಲೀಸರನ್ನು ಕರೆಯುವ ಗೋಜಿಗೆ ಹೋಗುವುದಿಲ್ಲ. ಬದಲಿಗೆ ಅಲ್ಲಿದ್ದವರೆಲ್ಲಾ ತಮ್ಮ ಪಾಲಿನ ಶಿಕ್ಷೆಯನ್ನು ಆತನಿಗೆ ನೀಡುತ್ತಾರೆ. ಹೀಗೆ ಸಿಕ್ಕಿಬಿದ್ದವರು `ಸಾರ್ವಜನಿಕರ ಆಕ್ರೋಶ’ಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡದ್ದೂ ಇದೆ.ಜೇಬುಗಳ್ಳನನ್ನು ಪೊಲೀಸರಿಗೆ ಒಪ್ಪಿಸಿ, ಪೊಲೀಸರು ಅವನ ಮೇಲೊಂದು ಕೇಸು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿ ಶಿಕ್ಷೆ ಕೊಡುವುದು ಕಾನೂನು ಬದ್ಧವಾದ ಹಾದಿ. ಇದನ್ನು ಕೈಬಿಟ್ಟು ವಿಚಾರಣೆಯೇ ಇಲ್ಲದೇ ಶಿಕ್ಷೆ ನೀಡುವ `ಗುಂಪು ನ್ಯಾಯ’ವನ್ನು ಕಾನೂನು ಕೈಗೆತ್ತಿಕೊಳ್ಳುವುದರ ಉದಾಹರಣೆಯೆನ್ನಬಹುದು.
ಮಂಗಳೂರಿನಲ್ಲಿ ಪಬ್ ಮೇಲೆ ನಡೆದ ದಾಳಿ ಅಥವಾ ಬಸ್ ಅಥವಾ ಸಾರ್ವಜನಿಕ ಪ್ರದೇಶವೊಂದರಲ್ಲಿ ಹುಡುಗ-ಹುಡುಗಿಯರು ಮಾತನಾಡುತ್ತಿರುವಾಗ ಅವರ ಮೇಲೆ ಹಲ್ಲೆ ನಡೆಸುವುದಾಗಲೀ ಕಾನೂನನನ್ನು ಕೈಗೆತ್ತಿಕೊಳ್ಳುವ ಕ್ರಿಯೆಯೆಂದು ಹೇಗೆ ಹೇಳುವುದು? ಪಬ್ ನಡೆಸುವುದಕ್ಕೆ ಸರ್ಕಾರ ಅನುಮತಿ ನೀಡಿದೆ. ಹದಿನೆಂಟು ವರ್ಷಕ್ಕೆ ಮೇಲ್ಪಟ್ಟವರಿಗೆ ಮದ್ಯವನ್ನು ಸರಬರಾಜು ಮಾಡುವುದನ್ನೂ ಕಾನೂನು ಬಾಹಿರ ಎನ್ನುವಂತಿಲ್ಲ. ವಯಸ್ಕ ಹುಡುಗ ಮತ್ತು ಹುಡುಗಿಯರು ಒಟ್ಟಿಗೆ ಕುಳಿತು ಮದ್ಯ ಸೇವಿಸುವುದನ್ನೂ ಕಾನೂನು ನಿಷೇಧಿಸಿಲ್ಲ. ಹಾಗಿರುವಾಗ ಈ ದಾಳಿಯನ್ನು `ಕಾನೂನು ಕೈಗೆತ್ತಿಕೊಳ್ಳುವುದು’ ಎಂದು ಹೇಳಲು ಸಾಧ್ಯವೇ? ಹೀಗೆ ದಾಳಿ ನಡೆಸಿ ಹಲ್ಲೆ ಮಾಡಿದರೆ ಅದು ಕಾನೂನಿನ ಉಲ್ಲಂಘನೆಯಷ್ಟೇ ಆಗಲು ಸಾಧ್ಯ. ಭಿನ್ನ ಧರ್ಮದವರು ಅಥವಾ ಜಾತಿಯವರು ಪರಸ್ಪರ ಮಾತನಾಡಬಾರದು, ಗೆಳೆಯರಾಗಬಾರದು ಎಂಬ ಯಾವ ನಿಯಮಗಳೂ ಭಾರತದಲ್ಲಿ ಇಲ್ಲ. ಇದನ್ನು ಯಾವುದಾದರೂ ಗುಂಪು ಅಥವಾ ಸಂಘಟನೆ ವಿರೋಧಿಸಿದರೆ ಅದನ್ನು `ಕಾನೂನು ಕೈಗೆತ್ತಿಕೊಳ್ಳುವುದು’ ಹೇಳುವುದು ಸರಿಯೇ?
***
ಮಂಗಳೂರಿನಲ್ಲಿ ನಡೆದ ಪಬ್ ದಾಳಿಯ ನಂತರದ 17 ದಿನಗಳಲ್ಲಿ `ಕಾನೂನು ಕೈಗೆತ್ತಿಕೊಳ್ಳುವುದು’ ಎಂಬ ಪರಿಕಲ್ಪನೆಯನ್ನು ವಿರೋಧಿಸಿ ಬಂದಿರುವ ಹೆಚ್ಚಿನ ಹೇಳಿಕೆಗಳು ಕಾನೂನು ಉಲ್ಲಂಘನೆಯನ್ನು ಸಮರ್ಥಿಸುತ್ತಿದೆ ಎಂಬುದು ವಿಷಾದಕರ ಸತ್ಯ. ರಾಜ್ಯದ ಆಡಳಿತ ಚುಕ್ಕಾಣಿಯನ್ನು ಹಿಡಿದವರು ಸುಸ್ಪಷ್ಟವಾದ ಕಾನೂನು ಉಲ್ಲಂಘನೆಯೊಂದನ್ನು `ಕಾನೂನು ಕೈಗೆತ್ತಿಕೊಳ್ಳುವುದು’ ಎಂದು ವಿವರಿಸಿಬಿಟ್ಟರೆ ಕಾನೂನು ಉಲ್ಲಂಘಿಸಿದವರು `ತಪ್ಪು’ ಮಾಡಿಲ್ಲ ಎಂದು ತಾರ್ಕಿಕವಾಗಿ ಒಪ್ಪಿಕೊಂಡಂತಾಗುತ್ತದೆ.
ಈ ಬಗೆಯ ಒಪ್ಪಿಗೆ ಕೇವಲ ಈ ವಿಷಯಕ್ಕೆ ಮಾತ್ರ ಸಂಬಂಧಿಸಿರುವುದೂ ಅಲ್ಲ. ಪೊಲೀಸರು ಹೊಡೆಯುವುದನ್ನು ನಾವೆಲ್ಲರೂ ಒಂದು ಬಗೆಯಲ್ಲಿ ಒಪ್ಪಿಕೊಂಡಿರುತ್ತೇವೆ. ಇತ್ತೀಚೆಗೆ ಬೆಂಗಳೂರಿನ ಠಾಣೆಯೊಂದರಲ್ಲಿ ಅಕ್ರಮ ಬಂಧನದಲ್ಲಿಟ್ಟಿದ್ದ ಪೊಲೀಸರ ನಡವಳಿಕೆಯನ್ನು ರಾಜ್ಯ ಮಾನವ ಹಕ್ಕುಗಳ ಆಯೋಗ ಪ್ರಶ್ನಿಸಿದ್ದಕ್ಕೆ ಬೆಂಗಳೂರು ಕಮಿಷನರ್ ವಿಚಲಿತರಾಗಿದ್ದರು. `ಹೀಗೆಲ್ಲಾ ಹೇಳಿದರೆ ನಾವು ಆರೋಪಿಗಳ ವಿಚಾರಣೆ ನಡೆಸುವುದಾದರೂ ಹೇಗೆ?’ ಎಂದು ಅವರು ಮಾಧ್ಯಮಗಳ ಮುಂದೆಯೇ ಅಲವತ್ತುಕೊಂಡಿದ್ದರು. ಕಾನೂನನ್ನು ಅಧ್ಯಯನ ಮಾಡಿರುವ ಅವರಿಗೂ ಪೊಲೀಸರು ಕಾನೂನನ್ನು ಉಲ್ಲಂಘಿಸುತ್ತಿದ್ದಾರೆ ಎನ್ನಿಸಿರಲಿಲ್ಲ ಎಂಬುದಿಲ್ಲಿ ಮುಖ್ಯ.
ಗುಂಪನ್ನು ನಿಯಂತ್ರಿಸುವುದಕ್ಕೆ ಪೊಲೀಸರು ಲಾಠಿ ಬಳಸುವುದಕ್ಕೂ ಬಂಧಿತ ಆರೋಪಿಯೊಬ್ಬನನ್ನು `ಬಾಯಿ ಬಿಡಿಸುವುದಕ್ಕೆ’ ಅಕ್ರಮ ಬಂಧನದಲ್ಲಿ ಇರಿಸಿಕೊಳ್ಳುವುದಕ್ಕೂ ವ್ಯತ್ಯಾಸವೇ ಇಲ್ಲವೆಂದು ಪೊಲೀಸರೂ ಜನರೂ ಒಪ್ಪಿಕೊಂಡಿರುವ ಸ್ಥಿತಿ ಇದು.
***
ನಮ್ಮ ಸಮಸ್ಯೆಯಿರುವುದು `ಅಧಿಕಾರ’ ಎಂಬ ಪರಿಕಲ್ಪನೆಯನ್ನು ಪ್ರಜಾಸತ್ತಾತ್ಮಕ ವ್ಯವಸ್ಥೆಯೊಂದರಲ್ಲಿ ಹೇಗೆ ಗ್ರಹಿಸಬೇಕು ಎಂಬುದರಲ್ಲಿ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಎಲ್ಲರಿಗೂ ಅವರದ್ದೇ ಆದ ಅಧಿಕಾರಗಳಿರುತ್ತವೆ. ಜನರಿಗೆ ಇರುವ ಅಧಿಕಾರಗಳನ್ನು ನಾವು ಹಕ್ಕುಗಳು ಮತ್ತು ಕರ್ತವ್ಯಗಳೆಂದು ಗುರುತಿಸುತ್ತೇವೆ. ಎಲ್ಲಾದರೂ ಕಾನೂನಿಗೆ ವಿರುದ್ಧವಾದ ಕ್ರಿಯೆ ನಡೆಯುತ್ತಿದ್ದರೆ ಅದನ್ನು ಕಾನೂನು ಪಾಲಕರಿಗೆ ತಿಳಿಸುವುದು ನಮ್ಮ ಕರ್ತವ್ಯ ಹೇಗೋ ಹಾಗೆಯೇ ಅದು ಅಧಿಕಾರವೂ ಹೌದು. ಈ ಅಧಿಕಾರವನ್ನು ಬಳಸುವುದಕ್ಕೆ ಸಾಮಾನ್ಯ ಪ್ರಜೆಗೆ ಇರುವ ಮಾರ್ಗವೆಂದರೆ ಕಾನೂನು ಪಾಲಕರಿಗೆ ಈ ಕುರಿತಂತೆ ಮಾಹಿತಿ ನೀಡುವುದು.
ಕಾನೂನು ಪಾಲಕರು ತಮಗಿರುವ ಮಿತಿಯೊಳಗೇ ಅದನ್ನು ತಡೆಯಲು ಪ್ರಯತ್ನಿಸಬೇಕು. ಅಂದರೆ ಅವರೇ ನೇರವಾಗಿ ಶಿಕ್ಷೆ ನೀಡದೆ ಶಿಕ್ಷೆ ನೀಡುವ ನ್ಯಾಯಾಂಗ ವ್ಯವಸ್ಥೆಗೆ ಆರೋಪಿಗಳನ್ನು ಒಪ್ಪಿಸುವ ಕೆಲಸ ಮಾಡಬೇಕು. ತಮ್ಮ ಅಧಿಕಾರಗಳನ್ನು ತಮ್ಮ ಮಿತಿಯೊಳಗೆ ಬಳಸದೇ ಹೋದರೆ ಅದು ಕಾನೂನಿನ ಉಲ್ಲಂಘನೆಯೇ ಸರಿ. ಇದನ್ನು `ಕಾನೂನನ್ನು ಕೈಗೆತ್ತಿಕೊಳ್ಳುವುದು’ ಎಂದು ಸರಳೀಕರಿಸುವುದು ಕಾನೂನಿನ ಉಲ್ಲಂಘನೆಯನ್ನು ಸಮರ್ಥಿಸುವ ಕೆಲಸವಾಗಿಬಿಡುತ್ತದೆ. ಜನ ಸಾಮಾನ್ಯರು ತಮ್ಮ ಅರಿವಿನ ಕೊರತೆಯಿಂದ ಅಥವಾ ಹತಾಶೆಯಿಂದ ಇಂಥ ಸಮರ್ಥನೆಗಳಿಗೆ ಮುಂದಾಗುವುದನ್ನು ಸಹಿಸಿಕೊಳ್ಳಬಹುದು. ಆದರೆ ವ್ಯವಸ್ಥೆಯನ್ನು ನಿರ್ವಹಿಸುವ ಹೊಣೆ ಹೊತ್ತ ಮಂತ್ರಿಗಳು ಮತ್ತು ಅಧಿಕಾರಿಗಳು ಇದೇ ಬಗೆಯಲ್ಲಿ ಮಾತನಾಡುವುದನ್ನು ಒಪ್ಪಲು ಸಾಧ್ಯವಿಲ್ಲ.
***
ಮಂಗಳೂರು ಪಬ್ ದಾಳಿಗೆ ಸಂಬಂಧಿಸಿದ ಚರ್ಚೆಗಳಲ್ಲಿ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಹೇಳಿದ ವಿಷಯವೊಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅವರು ಹೇಳುವಂತೆ ಮೊದಲನೆಯದಾಗಿ ಇದು ಪಬ್ ಅಲ್ಲ. ಅಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆಯೇ ಹೊರತು ಮದ್ಯ ಸೇವನೆಗಲ್ಲ. ಈ ವಿಷಯ ಜಿಲ್ಲಾಧಿಕಾರಿಗೆ ತಿಳಿಯಲು ಇಷ್ಟು ತಡವೇಕಾಯಿತು ಎಂಬ ಪ್ರಶ್ನೆಗೆ ಜಿಲ್ಲಾಧಿಕಾರಿಗಳ ಹೇಳಿಕೆಯಲ್ಲಿ ಉತ್ತರವಿಲ್ಲ. ಮಾತ್ರವಲ್ಲ ಮದ್ಯ ಮಾರಾಟಕ್ಕೆ ಮಾತ್ರ ಅನುಮತಿ ಪಡೆದು ಮದ್ಯ ಸೇವನೆಗೆ ಅನುಕೂಲ ಕಲ್ಪಿಸಿಕೊಟ್ಟವರ ವಿರುದ್ಧ ಅಬ್ಕಾರಿ ಇಲಾಖೆ ಏಕೆ ಕ್ರಮ ಕೈಗೊಂಡಿರಲಿಲ್ಲ? ಮಂಗಳೂರಿನ ಪ್ರಮುಖ ಬೀದಿಯೊಂದರಲ್ಲಿ ನಡೆಯುತ್ತಿರುವ ಈ ವ್ಯವಹಾರ ಪೊಲೀಸರೂ ಸೇರಿದಂತೆ ಸಂಬಂಧಪಟ್ಟ ಯಾವ ಇಲಾಖೆಯ ಕಣ್ಣಿಗೂ ಏಕೆ ಬಿದ್ದಿರಲಿಲ್ಲ!
ಅಕ್ರಮವಾಗಿ ಮದ್ಯ ಸೇವನೆಗೆ ಅವಕಾಶ ಕಲ್ಪಿಸಿಕೊಟ್ಟವರ ವಿರುದ್ಧ ಕ್ರಮ ಕೈಗೊಳ್ಳದವರು ಅಲ್ಲಿ ನಡೆದ ಹಲ್ಲೆಯಂಥ ಕ್ರಿಮಿನಲ್ ಪ್ರಕರಣವೊಂದನ್ನು `ಕಾನೂನು ಕೈಗೆತ್ತಿಕೊಳ್ಳುವುದು’ ಎಂದು ವಿವರಿಸುವುದರ ಮೂಲಕ ಎರಡೆರಡು ತಪ್ಪು ಮಾಡಿದ್ದಾರೆ. ಇಡೀ ಪ್ರಕರಣವನ್ನು ಸರಳವಾಗಿ ಗ್ರಹಿಸಿದರೆ ಕಾಣಿಸುವುದಿಷ್ಟೇ. ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯೊಂದನ್ನು ಪರಿಹರಿಸಬೇಕಾದ ವಿಧಾನವನ್ನು ಇಲ್ಲಿ ಅಧಿಕಾರಿಗಳು ಅನುಸರಿಸಿಲ್ಲ. ಅಧಿಕಾರಿಗಳು ಉತ್ತರದಾಯಿತ್ವವನ್ನು ಖಾತರಿ ಪಡಿಸಬೇಕಾದ ಶಾಸಕಾಂಗದ ಪ್ರತಿನಿಧಿಗಳಾದ ಮಂತ್ರಿಗಳು ಮತ್ತು ಶಾಸಕರು ಪ್ರಕರಣವನ್ನು `ಕಾನೂನು ಕೈಗೆತ್ತಿಕೊಳ್ಳುವುದು’ ಎಂದು ಸರಳೀಕರಿಸಿ ಅಧಿಕಾರಿಗಳ ತಪ್ಪನ್ನು ಸಮರ್ಥಿಸುತ್ತಿದ್ದಾರೆ. ಒಟ್ಟಿನಲ್ಲಿ ಆಡಳಿತಾತ್ಮಕ ವೈಫಲ್ಯವೊಂದನ್ನು ಮುಚ್ಚಿಡಲು ನೈತಿಕ ಪ್ರಶ್ನೆಗಳನ್ನು ಗುರಾಣಿಯಾಗಿ ಬಳಸಿಕೊಳ್ಳಲಾಗುತ್ತಿದೆ.