Skip to content

Freedom of the present | ಈ ನಡುವಿನ ಬಿಡುವು

ಅಳಿಸಲಾಗದ ಅಕ್ಷರವ ಬರೆಯಲಾಗದು!

Menu
  • Privacy Policy
Menu

ಹದಿನಾಲ್ಕನೇ ಲೂಯಿಯೂ ರಾಮಚಂದ್ರೇಗೌಡರೂ

Posted on February 24, 2009May 24, 2015 by Ismail

ಫೆಬ್ರವರಿ 18ರಂದು ಬೆಂಗಳೂರಿನ ಮಾಣಿಕ್ಯವೇಲು ಮ್ಯಾನ್ಷನ್‌ನಲ್ಲಿ ನಡೆದ ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿಯ ಉದ್ಘಾಟನಾ ಸಮಾರಂಭದಲ್ಲಿ ಸಚಿವರೊಬ್ಬರು ನೀಡಿದ ಆದೇಶ ಹೀಗಿತ್ತು. `ಗವರ್ನ್‌ಮೆಂಟ್‌ ಈಸ್‌ ಸ್ಪೀಕಿಂಗ್‌ ಹಿಯರ್‌. ಪುಲ್‌ ದೆಮ್‌ ಔಟ್‌ ಐ ಸೇ’. (ಇಲ್ಲಿ ಸರ್ಕಾರ ಮಾತನಾಡುತ್ತಿದೆ. ನಾನು ಹೇಳುತ್ತಿದ್ದೇನೆ ಅವರನ್ನು ಹೊರಗೆ ಹಾಕಿ). ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು `ನನ್ನ ಸರ್ಕಾರ’ ಎಂದು ಮಾತನಾಡುವುದನ್ನು ನಾವು ಕೇಳಿದ್ದೇವೆ. ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರು ಓದುವ ಆಡಳಿತಾರೂಢ ರಾಜಕೀಯ ಪಕ್ಷಗಳು ಸಿದ್ಧಪಡಿಸಿದ ಭಾಷಣದಲ್ಲಿ `ನನ್ನ ಸರ್ಕಾರ’ ಎಂಬ ಪ್ರಯೋಗವಿರುತ್ತದೆ. ಆದರೆ ಮಂತ್ರಿಗಳು, ಶಾಸಕರು, ಸಂಸದರು ಈ ಬಗೆಯ ಪ್ರಯೋಗ ಮಾಡಿದ್ದು ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲೆಲ್ಲೂ ದಾಖಲಾಗಿಲ್ಲ.

ರಾಜ್ಯಪಾಲ, ರಾಷ್ಟ್ರಪತಿಗಳಂಥವರು `ನನ್ನ ಸರ್ಕಾರ’ ಎಂಬ ಪ್ರಯೋಗವನ್ನು ಬಳಸುತ್ತಾರೆಯೇ ಹೊರತು ಇವರ್ಯಾರೂ `ನಾನೇ ಸರ್ಕಾರ’ ಎಂದು ಹೇಳಿದ್ದಂತೂ ಇಲ್ಲವೇ ಇಲ್ಲ. ಹೀಗೆ `ನಾನೇ ಸರ್ಕಾರ’ ಎಂದು ಹೇಳಿದವನಿದ್ದರೆ ಅವನು 17ನೇ ಶತಮಾನದ ಫ್ರೆಂಚ್‌ ದೊರೆ ಹದಿನಾಲ್ಕನೇ ಲೂಯಿ. ಅವನು ಸಂಸತ್‌ ಸ್ವಯಂಪ್ರೇರಣೆಯಿಂದ ಸಭೆ ಸೇರುವುದರಿಂದ ವಿಚಲಿತನಾಗಿ `l’etat C’est moi'(ನಾನೇ ಪ್ರಭುತ್ವ ಅಥವಾ ನಾನೇ ಸರ್ಕಾರ) ಎಂದು ಕಿರುಚಿದ್ದನಂತೆ.

`ಸರ್ಕಾರ ಮಾತನಾಡುತ್ತಿದೆ’ ಎಂದು ಹೇಳಿದ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರೇಗೌಡರು ಖಂಡಿತವಾಗಿಯೂ ಹದಿನಾಲ್ಕನೇ ಲೂಯಿಯಂಥ ಚಕ್ರವರ್ತಿಯಂತೂ ಅಲ್ಲ. ಅವರು ಜನರಿಂದ ಅದೂ ಪದವೀಧರರಿಂದ ಆಯ್ಕೆಯಾಗಿರುವ ಶಾಸಕ. ಸರಳವಾಗಿ ಹೇಳುವುದಾದರೆ ಜನಪ್ರತಿನಿಧಿ ಮತ್ತು ಮುಖ್ಯಮಂತ್ರಿಗಳಿಂದ ನೇಮಕಗೊಂಡ ಸಚಿವ. ಹಾಗಾಗಿ ಅವರೇ ಸರ್ಕಾರವಾಗಿರುವ ಯಾವ ಸಾಧ್ಯತೆಯೂ ಇಲ್ಲ.
ಆಧುನಿಕ ಕಲಾ ಗ್ಯಾಲರಿ ಕೇಂದ್ರ ಸರ್ಕಾರದ ಆಡಳಿತದ ಪರಿಧಿಯಲ್ಲಿರುವಂಥದ್ದು. ಇದರ ಉದ್ಘಾಟನೆಯಲ್ಲಿ ಸಚಿವ ರಾಮಚಂದ್ರೇಗೌಡರು ಮುಖ್ಯಮಂತ್ರಿಗಳ ಪ್ರತಿನಿಧಿಯಾಗಿದ್ದರು. ಈ ಅಂಶವನ್ನು ಒಪ್ಪಿಕೊಂಡರೂ ರಾಮಚಂದ್ರೇಗೌಡರು ಸರ್ಕಾರವಾಗಲು ಸಾಧ್ಯವಿಲ್ಲ. ಭಾರತದ ಪ್ರತಿನಿಧಿಯಾಗಿ ಹೊರ ದೇಶಗಳಲ್ಲಿರುವ ರಾಯಭಾರಿಗಳು ಭಾರತ ಸರ್ಕಾರದ ಪ್ರತಿನಿಧಿಗಳೇ ಹೊರತು ಅವರೇ ಭಾರತ ಸರ್ಕಾರವಲ್ಲ ಎಂಬ ತರ್ಕವನ್ನು ಇಲ್ಲಿಗೂ ಅನ್ವಯಿಸಬಹುದು.

***
ಒಟ್ಟಿನಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಯಾವ ವ್ಯಕ್ತಿಯೂ `ನಾನೇ ಸರ್ಕಾರ’ ಎಂದು ಹೇಳುವ ಯಾವ ಅವಕಾಶವೂ ಇಲ್ಲ ಎಂಬ ತೀರ್ಮಾನಕ್ಕೆ ಬರಬಹುದು. ಅಂದರೆ ಮಂತ್ರಿಯೊಬ್ಬರು `ನಾನೇ ಸರ್ಕಾರ’ ಎಂದಿದ್ದರೆ ಅದು ಅಪ್ರಜಾಸತ್ತಾತ್ಮಕ ಹೇಳಿಕೆ ಎಂಬುದು ಸಂಶಯಾತೀತವಾಗಿ ಸ್ಪಷ್ಟ. ಆದರೆ ರಾಮಚಂದ್ರೇಗೌಡರ ಪ್ರಕರಣದಲ್ಲಿ ಸಂಭವಿಸಿದ್ದು ಬೇರೆಯೇ.

`ಸರ್ಕಾರ ಮಾತನಾಡುತ್ತಿದೆ. ಅವರನ್ನು ಹೊರಗೆ ಹಾಕಿ’ ಎಂಬ ಹೇಳಿಕೆಯ ಕೊನೆಯ ಭಾಗ ಮತ್ತು ಅದರ ಪರಿಣಾಮ ಮಾತ್ರ ಎಲ್ಲರಿಗೂ ಮುಖ್ಯವಾಗಿಬಿಟ್ಟಿದೆ. ರಾಮಚಂದ್ರೇಗೌಡರು ನೀಡಿದ ಆದೇಶ ಪೊಲೀಸರಿಗಲ್ಲದೇ ಇದ್ದರೂ ಪೊಲೀಸರು ಭಾಷಣಕ್ಕೆ ಅಡ್ಡಿಪಡಿಸುತ್ತಿದ್ದ ಕಲಾವಿದನನ್ನು ಸಮ್ಮೇಳನ ಸಭಾಂಗಣದಿಂದ ಹೊರಗೆ ಹಾಕಿದರು. ಹೀಗೆ ಹೊರಗೆ ಹಾಕಿದ್ದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯ ಕುರಿತಂತೆ ಕಾಳಜಿಯುಳ್ಳವರು ಒಟ್ಟು ಸೇರಿ ಪ್ರತಿಭಟಿಸಿದರು. ಆದರೆ ಮಂತ್ರಿಯೊಬ್ಬ `ನಾನೇ ಸರ್ಕಾರ’ ಎಂಬ ದಾರ್ಷ್ಟ್ಯ ತೋರಿದ್ದು ಎಲ್ಲಿಯೂ ಯಾರನ್ನೂ ಕಾಡಲಿಲ್ಲ.


ಹೀಗೆ ಮಂತ್ರಿಗಳು ಮತ್ತು ಅಧಿಕಾರಿಗಳು ಅವರೇ ಸರ್ಕಾರವಾಗುವುದು ಇದೇ ಮೊದಲೇನೂ ಅಲ್ಲ. ಎಚ್‌.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಮೈಸೂರಿನಲ್ಲಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದಾಗಲೂ ಇಂಥದ್ದೇ ಒಂದು ಘಟನೆ ಸಂಭವಿಸಿತ್ತು. ನಿಯಮೋಲ್ಲಂಘನೆಯ ಮೂಲಕ ನೇಮಕಗೊಂಡಿದ್ದ ನೌಕರರನ್ನು ಕುಲಪತಿ ಕೆಲಸದಿಂದ ತೆಗೆದು ಹಾಕಿದ್ದರು. ಕಾನೂನು ಬದ್ಧವಾಗಿ ಅವರ ಮರು ನೇಮಕ ಸಾಧ್ಯವಿರಲಿಲ್ಲ. ಎಚ್‌.ಡಿ.ಕುಮಾರಸ್ವಾಮಿಯವರು ರಜೆಯಲ್ಲಿದ್ದ ಕುಲಪತಿಯನ್ನು ಕರೆಯಿಸಿಕೊಂಡು `ಎಲ್ಲರನ್ನೂ ಮರು ನೇಮಕ ಮಾಡಿ’ ಎಂದು ಆದೇಶಿಸಿದರು. ಕುಲಪತಿ ಅದು ನಿಯಮೋಲ್ಲಂಘನೆಯಾಗುತ್ತದೆ ಎಂದಾಗ ಮರುನೇಮಕಕ್ಕಾಗಿ ಆಗ್ರಹಿಸುತ್ತಿದ್ದವರನ್ನು ಉದ್ದೇಶಿಸಿ `ನಾನು ಹೇಳುತ್ತಿದ್ದೇನೆ. ನಿಮ್ಮ ಮರು ನೇಮಕ ಸಾಧ್ಯವಾಗದಿದ್ದರೆ ಉಳಿದವರೂ ವಿಶ್ವವಿದ್ಯಾಲಯಕ್ಕೆ ಬರದಂತೆ ಬೀಗ ಹಾಕಿ’ ಎಂದು ಆದೇಶಿಸಿದ್ದರು.

ಎನ್‌.ವೆಂಕಟಾಚಲ ಅವರು ಲೋಕಾಯುಕ್ತರಾಗಿದ್ದಾಗ ಸಾರಿಗೆ ಕಚೇರಿಯೊಂದಕ್ಕೆ ದಾಳಿ ನಡೆಸಿದ ಸಂದರ್ಭದಲ್ಲಿ ನಾಗರಿಕರೊಬ್ಬರು ಅಧಿಕಾರಿಗಳ ಪರವಾಗಿ ಮಾತನಾಡಿದಾಗ ಅವರನ್ನು ಜಿ.ರಮೇಶ್‌ ಎಂಬ ಲೋಕಾಯುಕ್ತ ಎಸ್‌.ಪಿ. ಮನಬಂದಂತೆ ಥಳಿಸಿದ್ದರು. ಇತ್ತೀಚೆಗೆ ಮಗನ ಕೊಲೆಯಿಂದ ದುಃಖ ಅನುಭವಿಸುತ್ತಿದ್ದ ಎಎಸ್‌ಐ ಒಬ್ಬರಿಗೆ ಡಿಸಿಪಿ ರವಿ ಥಳಿಸಿದ್ದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಈಗ ಮಾನವ ಹಕ್ಕು ಆಯೋಗವೂ ಡಿಸಿಪಿ ರವಿಯವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಸೋನಿಯಾ ನಾರಂಗ್‌ ಎಂಬ ಪೊಲೀಸ್‌ ಅಧಿಕಾರಿ ತಮ್ಮ ಕೈಕೆಳಗಿನ ಅಧಿಕಾರಿಯೊಬ್ಬರಿಗೆ ಥಳಿಸಿದ್ದನ್ನೂ ನಾವೆಲ್ಲರೂ ಪತ್ರಿಕೆಗಳಲ್ಲಿ ಓದಿ ಮರೆತಿದ್ದೇವೆ.

ಈ ಎಲ್ಲಾ ಪ್ರಕರಣಗಳೂ ರಾಜಕಾರಣಿಗಳು ಮತ್ತು ಅಧಿಕಾರಿಗಳ `ತುಘಲಕ್‌ ಮನಸ್ಥಿತಿ’ಯ ಸ್ಯಾಂಪಲ್‌ಗಳು ಮಾತ್ರ.

***

ರಾಮಚಂದ್ರೇಗೌಡರ ಪ್ರಕರಣವನ್ನು ಸೂಕ್ಷ್ಮವಾಗಿ ನೋಡಿದರೆ ಅಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯವಿರುವುದು ಬೇರೆಯೇ ಬಗೆಯಲ್ಲಿ. ಆಧುನಿಕ ಕಲೆ ಮತ್ತು ಕಲಾವಿದರ ಬಗ್ಗೆ ಸಚಿವರು ವ್ಯಕ್ತಪಡಿಸಿದ ಅಭಿಪ್ರಾಯವನ್ನು ಕಲಾವಿದರೊಬ್ಬರು ಸಭೆಯಲ್ಲೇ ವಿರೋಧಿಸಿದರು. ರಾಮಚಂದ್ರೇಗೌಡರಿಗೆ ಆಧುನಿಕ ಕಲೆಯ ಬಗ್ಗೆ ತಮ್ಮ ಸ್ವಂತ ಅಭಿಪ್ರಾಯವನ್ನು ಅದು ಯಾರಿಗೆ ಇಷ್ಟವಾಗದಿದ್ದರೂ ಹೇಳುವ ಹಕ್ಕಿದೆ. ಭಾಷಣಕ್ಕೆ ಅಡ್ಡಿಪಡಿಸಿದವರು ಸಚಿವರ ಈ ಮೂಲಭೂತ ಹಕ್ಕನ್ನು ಉಲ್ಲಂಘಿಸಿದರೆಂದೇ ಭಾವಿಸೋಣ. ಆದರೆ ಇದಕ್ಕೆ ಸಚಿವರು ನೀಡಿದ ಪ್ರತಿಕ್ರಿಯೆ ಕೆಲವು ಹೊಸ ಪ್ರಶ್ನೆಗಳಿಗೆ ಕಾರಣವಾಗುತ್ತದೆ. `ಇಲ್ಲಿ ಸರ್ಕಾರ ಮಾತನಾಡುತ್ತಿದೆ’ ಎಂದು ಸಚಿವರು ಹೇಳಿದರು. ಅಂದರೆ ಸಚಿವರು ಆಧುನಿಕ ಕಲೆ ಮತ್ತು ಕಲಾವಿದರ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯಗಳು ಸಚಿವ ಸಂಪುಟದ ಅರ್ಥಾತ್‌ ಸರ್ಕಾರದ ಅಭಿಪ್ರಾಯವೇ? ಅಂದರೆ ಇದನ್ನು ಆಧುನಿಕ ಕಲೆ ಮತ್ತು ಕಲಾವಿದರ ಬಗೆಗಿನ ಸರ್ಕಾರದ ನೀತಿ ಎಂದು ಪರಿಗಣಿಸಬಹುದೇ? ತಮ್ಮ ಮಾತಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದವರನ್ನು `ಹೊರಗೆ ದಬ್ಬುವುದೂ’ ಈ ನೀತಿಯ ಭಾಗವೇ?

***

ಎಚ್‌.ಡಿ.ಕುಮಾರಸ್ವಾಮಿಯವರಿಂದ ಆರಂಭಿಸಿ ರಾಮಚಂದ್ರೇಗೌಡರ ತನಕದ ರಾಜಕಾರಣಿಗಳು ಮತ್ತು ಎಸ್‌ಪಿ ರಮೇಶ್‌ರಿಂದ ಆರಂಭಿಸಿ ಸೋನಿಯಾ ನಾರಂಗ್‌ ಅವರ ತನಕದ ಪೊಲೀಸ್‌ ಅಧಿಕಾರಿಗಳು ಒಂದು ಅಂಶವನ್ನಂತೂ ಸ್ಪಷ್ಟಪಡಿಸುತ್ತಿದ್ದಾರೆ. ಇವರಾರಿಗೂ ಪ್ರಜಾಸತ್ತೆಯ ಮುಖ್ಯ ಉಪಕರಣವಾಗಿರುವ ಭಿನ್ನಾಭಿಪ್ರಾಯಕ್ಕೆ ಬೆಲೆ ಕೊಡುವ ಮನಸ್ಸಿಲ್ಲ. ನಿಯಮದ ಬಲದ ಮೇಲೆ ನಂಬಿಕೆ ಇಲ್ಲ. ದಬ್ಬುವುದು, ಥಳಿಸುವುದರ ಮೂಲಕ ಆಳುವುದು ಇವರ ಆಡಳಿತ ವೈಖರಿ. ಇಲ್ಲಿಯ ತನಕ ಕರ್ನಾಟಕ ಬಿಹಾರವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿತ್ತು. ಈಗಿನ ಸ್ಥಿತಿ ನೋಡಿದರೆ ಕರ್ನಾಟಕ 17ನೇ ಶತಮಾನದ ಫ್ರಾನ್ಸ್‌ನಂತಾಗುತ್ತಿದೆ ಎನಿಸುತ್ತದೆ. ಹದಿನಾಲ್ಕನೇ ಲೂಯಿಯ `ನಾನೇ ಸರ್ಕಾರ’ ಎಂಬ ಉದ್ಧಟತನದ ಪರಿಣಾಮ 1789ರಲ್ಲಿ ಫ್ರಾನ್ಸ್‌ ಹೊತ್ತಿ ಉರಿಯುವುದರಲ್ಲಿ ಕೊನೆಗೊಂಡಿತೆಂಬುದು ನಮಗೆ ನೆನಪಿರಬೇಕು.

ಚಿತ್ರಗಳು: ಮುರಳೀಧರ ರಾಥೋಡ್

February 2009
M T W T F S S
 1
2345678
9101112131415
16171819202122
232425262728  
« Jan   Mar »
  • December 2017
  • November 2017
  • March 2017
  • February 2017
  • January 2017
  • June 2014
  • March 2010
  • June 2009
  • May 2009
  • April 2009
  • March 2009
  • February 2009
  • January 2009
  • October 2008
  • September 2008
  • August 2008
  • July 2008
  • May 2008
  • April 2008
  • March 2008
  • February 2008
  • January 2008
  • December 2007
  • November 2007
  • September 2007
  • August 2007
  • July 2007
  • April 2007
  • January 2007
  • December 2006
  • October 2006
  • September 2006
  • May 2006
  • ಪ್ರಜೆಗಳನ್ನು ಬೆತ್ತಲಾಗಿಸುವ ಅಪಾರದರ್ಶಕ ಪ್ರಭುತ್ವ
  • ಇಂಟರ್‌ನೆಟ್ ಇಲ್ಲದ ಡಿಜಿಟಲ್ ಆರ್ಥಿಕತೆ!
  • ನೋಟು ರದ್ದತಿಯಲ್ಲಿ ಕಂಡ ಡಿಜಿಟಲ್ ಡಿವೈಡ್
  • ಮಾಧ್ಯಮ ನಿಯಂತ್ರಣದ ‘ಭದ್ರತಾ’ ತಂತ್ರಗಳು
  • ಒಮ್ಮುಖ ಪಾರದರ್ಶಕತೆಯ ತಂತ್ರಜ್ಞಾನಾಧಾರಿತ ಪ್ರಭುತ್ವ
  • ಇ-ಹೊತ್ತು ಅಂಕಣ
  • ಒಂಟಿದನಿ (ಉದಯವಾಣಿ ಅಂಕಣ)
  • ಟಿಪ್ಪಣಿ
  • ಪ್ರಜಾವಾಣಿ
  • ಬಿಡಿ ಬರಹಗಳು
  • Privacy Policy
© 2023 Freedom of the present | ಈ ನಡುವಿನ ಬಿಡುವು | Powered by Superbs Personal Blog theme