ಇದು 1985ರ ಬಿಹಾರ ಕೇಡರ್‌ನ ಐಎಎಸ್ ಅಧಿಕಾರಿಯೊಬ್ಬರು ಹೇಳಿದ ಕತೆ.
`ನಾನು ಸೇವೆಗೆ ಸೇರಿದ ಹೊಸತರಲ್ಲಿ ನನ್ನ ಮನೆಯಿಂದ ಕೆಲ ವಸ್ತುಗಳು ಕಳವಾದವು. ಪೊಲೀಸರಿಗೆ ದೂರು ನೀಡಿದೆ. ತನಿಖೆ ಆರಂಭವಾಯಿತು. ನಾನು ಸಮಯಸಿಕ್ಕಾಗಲೆಲ್ಲಾ ಠಾಣೆಗೆ ಹೋಗಿ ನನ್ನ ದೂರಿನ ಕುರಿತು ವಿಚಾರಿಸುತ್ತಿದ್ದೆ. ಪ್ರತೀ ಬಾರಿ ಹೋದಾಗಲೂ ಪೊಲೀಸರು `ಇನ್ವೆಸ್ಟಿಗೇಷನ್ ಮಾಡುತ್ತಿದ್ದೇವೆ ಸಾರ್’ ಎಂದು ಯಾರಾದರೊಬ್ಬನಿಗೆ ಥಳಿಸುತ್ತಿರುತ್ತಿದ್ದರು. `ನಾನು ಠಾಣೆಗೆ ಹೋದ ದಿನ ನನ್ನನ್ನು ಮೆಚ್ಚಿಸುವುಕ್ಕೋ ಎಂಬಂತೆ ಅವರ ಥಳಿತದ ತೀವ್ರತೆಯೂ ಹೆಚ್ಚಾಗುತ್ತಿತ್ತು. ಪ್ರತೀ ಬಾರಿ ಠಾಣೆಗೆ ಹೋದಾಗಲೂ ಹೊಸ ಹೊಸ `ಆರೋಪಿ’ಗಳಿಗೆ ಪೊಲೀಸರು ಥಳಿಸುತ್ತಿದ್ದರೇ ಹೊರತು ಕಳವಾದ ವಸ್ತುಗಳ ಕುರಿತು ಯಾವ ಸುಳಿವೂ ಅವರಿಗೆ ಸಿಕ್ಕಿರಲಿಲ್ಲ. ಈ ಥಳಿಸುವಿಕೆಯನ್ನು ನೋಡಲಾಗದೆ ನಾನು ಕಳವಾದ ವಸ್ತುಗಳ ಆಸೆಯನ್ನೇ ಬಿಟ್ಟೆ’
ಇದು ಭಾರತೀಯ ಪೊಲೀಸ್ ವ್ಯವಸ್ಥೆಯ ಒಂದು ಸಣ್ಣ ಸ್ಯಾಂಪಲ್. ನಮ್ಮ ಪೊಲೀಸರ ಮಟ್ಟಿಗೆ ತನಿಖೆ ನಡೆಸುವುದೆಂದರೆ ಥಳಿಸುವುದು ಎಂದರ್ಥ.
***
ಕಳೆದ ತಿಂಗಳ (ಫೆಬ್ರವರಿ 2009) 27ರಂದು ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರ ಸುಮಾರು 34,000 ರೂಪಾಯಿ ಬೆಲೆಬಾಳುವ ಮೊಬೈಲ್ ಫೋನ್ ಒಂದು ಕಳವಾಯಿತು. ಈಗ ಮೊಬೈಲ್ ಫೋನ್ ಕಳವಾದರೆ ಅದನ್ನು ಪತ್ತೆ ಹಚ್ಚುವುದು ಸುಲಭ. ಕಳೆದು ಹೋದ ಮೊಬೈಲ್ ಫೋನ್‌ನ ಐಎಂಇಐ ಸಂಖ್ಯೆ ಅಥವಾ ಇಂಟರ್ ನ್ಯಾಷನಲ್ ಮೊಬೈಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ ನಂಬರ್ ಅನ್ನು ಪೊಲೀಸರಿಗೆ ಕೊಟ್ಟರೆ ಸಾಕು. ಕಳೆದು ಹೋದ ಮೊಬೈಲ್ ಎಲ್ಲಿ ಬಳಕೆಯಾಗುತ್ತಿದ್ದರೂ ಅದನ್ನು ಪತ್ತೆ ಹಚ್ಚಬಹುದು. ಫೋನ್ ಕಳೆದುಕೊಂಡ ಸಾಫ್ಟ್‌ವೇರ್ ಇಂಜಿನಿಯರ್ ಜೆ.ಪಿ.ನಗರ ಪೊಲೀಸರಿಗೆ ದೂರು ನೀಡುವಾಗ ತಮ್ಮ ಐಎಂಇಐ ಸಂಖ್ಯೆಯನ್ನೂ ತಿಳಿಸಿದ್ದರು.
ಮಾರ್ಚ್ ನಾಲ್ಕನೇ ತಾರೀಕಿನಂದು ಎನ್.ಆರ್.ಕಾಲೋನಿಯ ನಿವಾಸಿ ಮುತ್ತುರಾಜ್ ಎಂಬ ಕಾರು ಚಾಲಕ ತ್ಯಾಗರಾಜ ನಗರದ ಬಿಡಿಎ ವಾಣಿಜ್ಯ ಸಂಕೀರ್ಣದಲ್ಲಿದ್ದ ಮೊಬೈಲ್ ಅಂಗಡಿಯೊಂದರಿಂದ 1,500 ರೂಪಾಯಿ ಮೌಲ್ಯದ ಮೊಬೈಲ್ ಸೆಟ್ ಒಂದನ್ನು ಖರೀದಿಸಿದರು. ಇದನ್ನವರು ಬಳಸಲು ತೊಡಗಿದ ಕ್ಷಣದಿಂದ ಅವರ ಸಮಸ್ಯೆಗಳು ಆರಂಭವಾದವು. ಮಾರ್ಚ್ 14ರ ಶನಿವಾರ ತ್ಯಾಗರಾಜ ನಗರ ಪೊಲೀಸರು ಮುತ್ತುರಾಜ್‌ರನ್ನು ಠಾಣೆಗೆ ಕರೆಯಿಸಿಕೊಂಡು `ತನಿಖೆ’ ನಡೆಸಿದರು.
ಪೊಲೀಸರದ್ದು ಒಂದೇ ಪ್ರಶ್ನೆ. `ಬೆಲೆಬಾಳುವ ಮೊಬೈಲ್ ಸೆಟ್ ಎಲ್ಲಿ?’. ಪ್ರಶ್ನೆ ಅರ್ಥವಾಗದೆ ತೊಳಲಾಡಿದ ಮುತ್ತುರಾಜ್ ತಮ್ಮಲ್ಲಿರುವ ಸೆಟ್ ತೋರಿಸಿದರೆ ಮತ್ತಷ್ಟು ಪೆಟ್ಟುಗಳು ಬಿದ್ದವು. ಮುತ್ತುರಾಜ್ ಅವರ ತಾಯಿ ಹೇಳುವಂತೆ `ನನ್ನ ಮಗನ ಕಣ್ಣಿಗೆ ಮೆಣಸಿನ ಪುಡಿ ಹಾಕಿ ಕಾಲಿಗೆ ಹಾಕಿ ಸ್ಟಿಕ್‌ನಲ್ಲಿ ಹೊಡೆದರು’. ಮುತ್ತುರಾಜ್ ಖರೀದಿಸಿದ ಮೊಬೈಲ್ ಫೋನ್‌ನ ರಸೀದಿ ಮತ್ತು ಬಾಕ್ಸ್‌ಗಳನ್ನು ನೋಡುವ ತನಕವೂ ಪೊಲೀಸರ `ತನಿಖೆ’ ಮುಂದುವರಿಯಿತು. ರಸೀದಿ ಮತ್ತು ಬಾಕ್ಸ್ ನೋಡಿದಾಗ ಸಾಫ್ಟ್‌ವೇರ್ ಇಂಜಿನಿಯರ್ ಕಳೆದುಕೊಂಡ ಮೊಬೈಲ್ ಫೋನ್‌ನ ಐಎಂಇಐ ಸಂಖ್ಯೆ ಮತ್ತು ಮುತ್ತುರಾಜ್ ಖರೀದಿಸಿದ ಮೊಬೈಲ್ ಫೋನ್‌ನ ಐಎಂಇಐ ಸಂಖ್ಯೆಗಳೆರಡೂ ಒಂದೇ ಆಗಿತ್ತು! ತಪ್ಪು ಮಾಡಿದ್ದು ಮೊಬೈಲ್ ತಯಾರಿಸಿದ ಕಂಪೆನಿಯವರು. ಆದರೇನಂತೆ ಪೊಲೀಸರ `ತನಿಖೆ’ಯಿಂದ ಮುತ್ತುರಾಜ್‌ರ ಕಾಲಿಗೆ ಗಂಭೀರ ಗಾಯವೇ ಆಗಿತ್ತು.
ಇಷ್ಟೆಲ್ಲಾ ಆದ ಮೇಲೆ ಜೆ.ಪಿ.ನಗರ ಠಾಣೆಯಲ್ಲಿ ಮುತ್ತುರಾಜ್ ಅವರ `ತನಿಖೆ’ ನಡೆಸಿದ ಇನ್ಸ್‌ಪೆಕ್ಟರ್ ಎಸ್.ಕೆ.ಉಮೇಶ್ `ನಾವೇನೂ ಮಾಡಲಿಲ್ಲ. ಆತ ತನಿಖೆಯ ಹಾದಿ ತಪ್ಪಿಸಲು ಪ್ರಯತ್ನಿಸಿದ್ದರಿಂದ ಥಳಿಸಿದ್ದು ಮಾತ್ರ ಹೌದು’ ಎಂಬ ಸ್ಪಷ್ಟನೆ ನೀಡಿದರು. ಇಡೀ ಪ್ರಕರಣವನ್ನು ಒಟ್ಟಾಗಿ ಗಮನಿಸಿದರೆ ದಾರಿ ತಪ್ಪಿದ್ದು ಯಾರು ಎಂಬುದಕ್ಕೆ ಹೆಚ್ಚಿನ ವಿವರಣೆಗಳ ಅಗತ್ಯವಿಲ್ಲ.
***
ಭಾರತೀಯ ಪೊಲೀಸರು ಒಂದು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಶಂಕಿತ ಅಥವಾ ಆರೋಪಿ ಬಡವನಾಗಿದ್ದರೆ ಎಲ್ಲಾ ನಿಯಮಗಳನ್ನು ಮರೆತು ಅವನಿಗೆ ಬಡಿಯುವುದು. ಅಧಿಕಾರ ಮತ್ತು ಪ್ರಭಾವವುಳ್ಳವನಾಗಿದ್ದರೆ ಎಲ್ಲಾ ನಿಯಮಗಳನ್ನೂ ಮರೆತು ಆತನನ್ನು ರಕ್ಷಿಸುವುದು. ಮುತ್ತುರಾಜ್ ಪ್ರಕರಣದಲ್ಲಿ ಆದದ್ದು ಇದುವೇ. ಮುತ್ತುರಾಜ್ ಕೇವಲ ಕಾರು ಚಾಲಕ. ಹಾಗಾಗಿ ಅವರಿಗೆ ಪೊಲೀಸರು ಥಳಿಸಿದ್ದು ತಪ್ಪೇ ಆಗಿದ್ದರೂ `ನಮ್ಮದು ತಪ್ಪಾಯಿತು’ ಎಂದು ಹೇಳುವ ಸೌಜನ್ಯ ಪೊಲೀಸರಿಗಿಲ್ಲ.
ಈ ಘಟನೆ ನಡೆಯುವುದಕ್ಕೆ ಕೆಲವು ದಿನಗಳ ಮೊದಲು ಬೆಂಗಳೂರಿನ ಹೊರವಲಯದಲ್ಲಿ ರೇವ್ ಪಾರ್ಟಿಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದರು. ಖಾಸಗಿ ಸ್ಥಳವೊಂದರಲ್ಲಿ ನಡೆಯುತ್ತಿದ್ದ ಪಾರ್ಟಿಯೊಂದರ ಮೇಲೆ ಪೊಲೀಸರೇಕೆ ದಾಳಿ ನಡೆಸಿದರು ಎಂಬ ಪ್ರಶ್ನೆಯಿಂದ ಆರಂಭಿಸಿ ಅಲ್ಲಿ ಯಾವುದೇ ಮಾದಕ ದ್ರವ್ಯ ದೊರೆಯಲಿಲ್ಲ ಎಂಬ ತನಕದ ಎಲ್ಲಾ ವಿಚಾರಗಳೂ ಮಾಧ್ಯಮಗಳಲ್ಲಿ ಚರ್ಚೆಯಾದವು. ಪೊಲೀಸರ `ಅತ್ಯುತ್ಸಾಹ’ಕ್ಕೆ ಕಾರಣವೇನು ಎಂಬುದರ ಕುರಿತು ಒಂದು ತನಿಖೆಗೂ ಪೊಲೀಸ್ ಮಹಾನಿರ್ದೇಶಕರು ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರಿಗೆ ಜಾಮೀನು ಪಡೆಯಲು ಆದ ತೊಂದರೆ ಮುಂತಾದುವುಗಳೆಲ್ಲವೂ ಚರ್ಚೆಗೊಳಪಟ್ಟಿತು.
ಆದರೆ ಮುತ್ತುರಾಜ್ ಪ್ರಕರಣದಲ್ಲಿ ತಪ್ಪು ಮಾಡಿದ ಪೊಲೀಸರು ತೋರಿಕೆಗೂ ತಮ್ಮ ತಪ್ಪು ಒಪ್ಪಿಕೊಳ್ಳಲಿಲ್ಲ. ಮಾಧ್ಯಮ ವರದಿಗಳನ್ನು ನೋಡಿ ಸ್ವಯಂ ಪ್ರೇರಣೆಯಿಂದ ಮಾನವ ಹಕ್ಕು ಉಲ್ಲಂಘನೆಯ ಪ್ರಕರಣ ದಾಖಲಿಸುವ ರಾಜ್ಯ ಮಾನವ ಹಕ್ಕುಗಳ ಆಯೋಗ ಈ ಲೇಖನ ಸಿದ್ಧಪಡಿಸುವವ ತನಕವೂ ಮೌನವಾಗಿಯೇ ಇತ್ತು.
***
ತನಿಖೆಗೂ ಥಳಿಸುವಿಕೆಗೂ ವ್ಯತ್ಯಾಸವಿಲ್ಲದಂತೆ ಪೊಲೀಸರು ವರ್ತಿಸುವುದೇಕೆ ಎಂಬ ಪ್ರಶ್ನೆ ಯಾವತ್ತೂ ಚರ್ಚೆಯಾಗಿಯೇ ಇಲ್ಲ. ಯಾರದ್ದಾದರೂ ಮನೆಯಲ್ಲಿ ಕಳವಾಯಿತು ಎಂದಾಕ್ಷಣ ಮೊದಲಿಗೆ ಮನೆಗೆಲಸದವರನ್ನು ಕರದೊಯ್ದು ಥಳಿಸುವುದನ್ನೇ ಪೊಲೀಸರು ತನಿಖೆ ಎಂದುಕೊಂಡಿದ್ದಾರೆ. ಮುತ್ತುರಾಜ್‌ಗೆ ಥಳಿಸಿದ್ದನ್ನು `ಆತ ಪೊಲೀಸರನ್ನು ತಪ್ಪುದಾರಿಗೆಳೆದದ್ದರಿಂದ ಥಳಿಸಬೇಕಾಯಿತು’ ಎಂದು ಸಮರ್ಥಿಸಿಕೊಳ್ಳುವ ಪೊಲೀಸರು ಶಾಸಕ ಸಂಪಂಗಿ ಲಂಚ ಪಡೆದು ತಲೆನೋವು, ಎದೆನೋವು ಎಂದು ನಟಿಸಿದಾಗ ಆಸ್ಪತ್ರೆಗೆ ದಾಖಲಿಸುವ ಬದಲಿಗೆ ಅವರಿಗೂ ಥಳಿಸಿ ನೀಡಿ ಸತ್ಯ ತಿಳಿದುಕೊಳ್ಳಲೇಕೆ ಪ್ರಯತ್ನಿಸಲಿಲ್ಲ? ಪೊಲೀಸರಿಗೆ ತರಬೇತಿ ನೀಡುವಾಗಲೇ ತನಿಖೆ ಎಂದರೆ ಥಳಿಸುವುದು ಎಂದು ಹೇಳಿಕೊಡಲಾಗುತ್ತದೆಯೇ? ಅಷ್ಟೇಕೆ ಪೊಲೀಸರಿಗೆ ಹೇಗೆ ತರಬೇತಿ ನೀಡಲಾಗುತ್ತಿದೆ? ಈ ತರಬೇತಿಯ ಪಠ್ಯ ಕ್ರಮವೇನು? ಈ ಕುರಿತಂತೆ ಜನ ಸಾಮಾನ್ಯರಿಗೆ ತಿಳಿಸುವ ಏನಾದರೂ ವ್ಯವಸ್ಥೆ ಇದೆಯೇ?
ಹೀಗೆ ಪ್ರಶ್ನೆಗಳು ಬೆಳೆಯುತ್ತಲೇ ಹೋಗುತ್ತವೆ. ಈ ಪ್ರಶ್ನೆಗಳಿಗೆ ಎಲ್ಲಿಂದಲೂ ಉತ್ತರ ಸಿಗುವುದಿಲ್ಲ. ಏಕೆಂದರೆ ಪೊಲೀಸರು ಅಧಿಕಾರ ಮತ್ತು ಪ್ರಭಾವವುಳ್ಳವರ ನಾಯಿಗೂ ಗೌರವ ನೀಡುತ್ತಾರೆ. ಹಾಗಾಗಿ ಈ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳುವ ಧೈರ್ಯ ಮತ್ತು ಸಾಮರ್ಥ್ಯವುಳ್ಳವರು ಯಾವತ್ತೂ ಪೊಲೀಸರ ಉದ್ಧಟತನವನ್ನು ಎದುರಿಸಿರುವುದೇ ಇಲ್ಲ. ಅದರಿಂದಾಗಿಯೇ ಅಧಿಕಾರರೂಢ ರಾಜಕಾರಣಿಗಳು ಪೊಲೀಸರನ್ನು ಮನುಷ್ಯರನ್ನಾಗಿಸುವ ಬಗ್ಗೆ ಮಾತನಾಡುವುದೂ ಇಲ್ಲ. ಸ್ಥಿತಿ ಹೀಗಿರುವಾಗ ಪೊಲೀಸ್ ವ್ಯವಸ್ಥೆಯನ್ನು ಮಾನವೀಯಗೊಳಿಸುವುದು ಹೇಗೆ?
ಈ ಪ್ರಶ್ನೆಗೆ ಇರುವ ಉತ್ತರ ಒಂದೇ. ಪೊಲೀಸ್ ವ್ಯವಸ್ಥೆಯೊಳಗೇ ಇರುವ ಯಾರಾದರೂ ಇಂಥದ್ದೊಂದು ಕ್ರಿಯೆಯನ್ನು ಆರಂಭಿಸಬೇಕು. ಕರ್ನಾಟಕದಲ್ಲೀಗ ಇದಕ್ಕೆ ಕಾಲ ಪಕ್ವವಾಗಿದೆ. ಪೊಲೀಸ್ ಸುಧಾರಣೆಯ ಅಗತ್ಯದ ಬಗ್ಗೆ ಸಾಕಷ್ಟು ತಿಳಿದುಕೊಂಡಿರುವ ಮತ್ತು ಅದರಲ್ಲಿ ಆಸಕ್ತಿ ಇರುವ ಡಾ.ಅಜ್‌ಕುಮಾರ್ ಸಿಂಗ್ ಪೊಲೀಸ್ ಮಹಾನಿರ್ದೇಶಕರಾಗಿದ್ದಾರೆ. ಸಿಓಡಿಯ ಮಹಾನಿರ್ದೇಶಕ ಡಾ.ಡಿ.ವಿ.ಗುರುಪ್ರಸಾದ್ ಕೂಡಾ ಈ ವಿಷಯಗಳಲ್ಲಿ ಆಸಕ್ತಿ ಮತ್ತು ಕಾಳಜಿಗಳುಳ್ಳವರು. ಈ ಸುಶಿಕ್ಷಿತ ಮತ್ತು ಸಂಭಾವಿತರ ಕಾಲದಲ್ಲಿ ಸುಧಾರಣೆಯ ಪ್ರಕ್ರಿಯೆ ಆರಂಭವಾಗದಿದ್ದರೆ ಅದು ಸದ್ಯೋಭವಿಷ್ಯದಲ್ಲಿ ಅದನ್ನು ನಿರೀಕ್ಷಿಸುವುದೇ ತಪ್ಪಾಗಬಹುದು