ಕಳೆದ ಎರಡು ವರ್ಷಗಳಲ್ಲಿ ಬಿಹಾರದಿಂದ ಆರಂಭಿಸಿ ಕರ್ನಾಟಕದ ಹಾಸನದ ತನಕ ದಿಡೀರ್ ನ್ಯಾಯದಾನದ ಹಲವು ಪ್ರಕರಣಗಳನ್ನು ನಾವು ಮಾಧ್ಯಮಗಳಲ್ಲಿ ಓದಿ ತಿಳಿದಿದ್ದೇವೆ. ಎರಡು ವರ್ಷಗಳ ಹಿಂದೆ ಬಿಹಾರದ ವೈಶಾಲಿ ಜಿಲ್ಲೆಯ ಧೆಲ್‌ಫೋರ್ವಾ ಗ್ರಾಮದಲ್ಲಿ ಕಳವು ಆರೋಪಿಯೊಬ್ಬನನ್ನು ಬೀದಿಯಲ್ಲೇ ಭೀಕರವಾಗಿ ಥಳಿಸಿದ್ದು ಟಿ.ವಿ.ಚಾನೆಲ್‌ಗಳಲ್ಲಿ ಹಲವಾರು ಬಾರಿ ಪ್ರಸಾರವಾಗಿತ್ತು.
ಇದಾದ ಒಂದೇ ತಿಂಗಳಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಎಡಪ್ಪಾಲ್‌ನಲ್ಲಿ ಚಿನ್ನದ ಕಡಗವೊಂದನ್ನು ಕದ್ದಿದ್ದಾರೆಂಬ ಸಂಶಯದ ಮೇಲೆ 40 ವರ್ಷದ ಗರ್ಭಿಣಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳನ್ನು ಅಮಾನವೀಯವಾಗಿ ಥಳಿಸಲಾಗಿತ್ತು. ಜನಸಂದಣಿ ಇರುವ ಮಾರುಕಟ್ಟೆ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಈ ಘಟನೆಯನ್ನು ಟಿ.ವಿ.ಚಾನೆಲ್ ವರದಿಗಾರನೊಬ್ಬ ಚಿತ್ರೀಕರಿಸಿದ್ದರಿಂದ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿತ್ತು.
ಈ ಎರಡೂ ಪ್ರಕರಣಗಳಲ್ಲಿ ಪೊಲೀಸರು ಮೂಕ ಸಾಕ್ಷಿಗಳಾಗಿದ್ದರು. ಬಿಹಾರದ ಘಟನೆಯ ಸಂದರ್ಭದಲ್ಲಂತೂ ಸಾರ್ವಜನಿಕರ ಥಳಿಸುವಿಕೆಯ ನಂತರ ಪೊಲೀಸರು ಆರೋಪಿಯನ್ನು ರಸ್ತೆಯಲ್ಲಿ ಎಳೆದಾಡಿದ್ದರು. ಕೇರಳದ ಘಟನೆಯಲ್ಲಿ ನಿರಪರಾಧಿ ಮಹಿಳೆ ಮತ್ತು ಆಕೆಯ ಇಬ್ಬರ ಮಕ್ಕಳಿಗೆ ವೈದ್ಯಕೀಯ ನೆರವು ನೀಡುವುದರ ಬದಲಿಗೆ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು.
ಈ ಬಗೆಯ ದಿಡೀರ್ ನ್ಯಾಯದಾನದ ಪ್ರಕರಣಗಳು ಬಿಹಾರದಲ್ಲಿ ಸ್ವಲ್ಪ ಹೆಚ್ಚು. ಹಾಗೆಂದು ದೇಶದ ಉಳಿದೆಡೆ ಇಲ್ಲ ಎಂದಲ್ಲ. ಬಸ್‌ನಿಲ್ದಾಣದಲ್ಲಿ, ಮಾರುಕಟ್ಟೆ ಪ್ರದೇಶದಲ್ಲಿ ಒಬ್ಬನ ಮೇಲೆ ಕಳ್ಳನೆಂಬ ಸಂಶಯ ಬಂದರೆ ಆತ ಜನರಿಗೆ ಕಳ್ಳರ ಮೇಲಿರುವ ಸಿಟ್ಟಿನ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಹೀಗೆ ಥಳಿತಕ್ಕೆ ಗುರಿಯಾದವರಲ್ಲಿ ಕೆಲವರು ಸ್ಥಳದಲ್ಲಿ ಮೃತಪಟ್ಟರೆ ಇನ್ನು ಕೆಲವರು ಹಲವಾರು ದಿನ ಆಸ್ಪತ್ರೆಯಲ್ಲಿದ್ದು ಕೊನೆಯುಸಿರೆಳೆದದ್ದೂ ಇದೆ.
ಈ ಬಗೆಯ ದಿಡೀರ್ ನ್ಯಾಯಕ್ಕೆ ಜನರೇಕೆ ಮುಂದಾಗುತ್ತಾರೆ ಎಂಬ ಪ್ರಶ್ನೆಗೆ ಇರುವ ಸುಲಭದ ಮತ್ತು ಸರಳವಾದ ಉತ್ತರ ಒಂದೇ. `ತಡವಾಗಿ ದೊರೆಯುವ ನ್ಯಾಯ ಅನ್ಯಾಯ’. ಪ್ರಕರಣವೊಂದು ನ್ಯಾಯಾಲಯದಲ್ಲಿದೆ ಎಂದರೆ ಇನ್ನು ಹಲವು ವರ್ಷಗಳ ಕಾಲ ಅದರ ಬಗ್ಗೆ ಚಿಂತಿಸದೇ ಇರುವುದೆಂಬ ಮನೋಭಾವ ಎಲ್ಲರಲ್ಲೂ ಮನೆ ಮಾಡಿದೆ. ಪರಿಣಾಮವಾಗಿ ಅಪರಾಧಿಕ ಪ್ರಕರಣಗಳಲ್ಲಿ ದಿಡೀರ್ ನ್ಯಾಯ ಒದಗಿಸುವ ಕೆಲಸಗಳಿಗೆ ಒಂದು ಬಗೆಯ ಹಿಂಬಾಗಿಲ ಪ್ರೋತ್ಸಾಹವೂ ಇದೆ. ಹೈದರಾಬಾದ್‌ನಲ್ಲಿ ಯುವತಿಯರ ಮೇಲೆ ಆಸಿಡ್ ಎರಚಿದವರು `ಎನ್‌ಕೌಂಟರ್’ನಲ್ಲಿ ಬಲಿಯಾದಾಗ ಜನರು ಪೊಲೀಸರಿಗೆ ಹೂಗುಚ್ಛಗಳನ್ನು ನೀಡಿ ಶ್ಲಾಘಿಸಿದ್ದನ್ನಿಲ್ಲಿ ನೆನಪಿಸಿಕೊಳ್ಳಬಹುದು.
***
ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕ ಸರ್ಕಾರ ಹಲವಾರು ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂದಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿತು. ಇದರಲ್ಲಿ ಪ್ರಚೋದನಕಾರಿ ಭಾಷಣ, ಸರ್ಕಾರಿ ಕಚೇರಿಗಳ ಮೇಲಿನ ದಾಳಿ, ಹಲ್ಲೆ, ಕೊಲೆಯತ್ನದಂಥ ಪ್ರಕರಣಗಳೂ ಇದ್ದವು. ಈ ಪ್ರಕರಣಗಳಲ್ಲಿ ಪಾಲ್ಗೊಂಡವರಲ್ಲಿ ಶಾಸಕರಿದ್ದರು. ಕೆಲವು ಸಂಘಟನೆಗಳ ನಾಯಕರಿದ್ದರು. ಈ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಕ್ರಿಯೆಯಲ್ಲಿ ರಾಜಕೀಯವಿದೆ ಎಂದು ಭಾವಿಸಬಹುದು. ಆದರೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರು ಮೊಕದ್ದಮೆ ಹೂಡುವುದನ್ನೇ ತಡೆಯುವ, ಹೂಡಿದ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳುವ ಕ್ರಮಗಳನ್ನು ಸರ್ಕಾರ ಹೇಗೆ ಸಮರ್ಥಿಸಿಕೊಳ್ಳುತ್ತದೆ.
ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ನಂತರ ಇಬ್ಬರು ಭ್ರಷ್ಟ ಐಎಎಸ್ ಅಧಿಕಾರಿಗಳನ್ನು ರಕ್ಷಿಸಲಾಯಿತು. ಇವರಲ್ಲೊಬ್ಬರು ಆದಾಯಕ್ಕೆ ಮೀರಿದ ಆಸ್ತಿ ಪಾಸ್ತಿ ಸಂಗ್ರಹಿಸಿದ್ದ ಕಾರಣಕ್ಕೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿ. ಮತ್ತೊಬ್ಬರು ಮಹಿಳಾ ಐಎಎಸ್ ಅಧಿಕಾರಿ. ಈಕೆ ಜಿಲ್ಲಾ ಪಂಚಾಯಿತಿಯೊಂದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾಗ ಸರ್ಕಾರದ ಹಣವನ್ನು ಸ್ವಂತ ಖಾತೆಗೆ ಹಾಕಿ ದುರುಪಯೋಗ ಪಡಿಸಿಕೊಂಡಿದ್ದ ಆರೋಪ ಹೊತ್ತವರು. ಈಕೆಯ ವಿರುದ್ಧ ಇಲಾಖೆ ತನಿಖೆ ಮುಗಿದಿತ್ತು. ಸಿಬಿಐ ತನಿಖೆ ನಡೆಯುತ್ತಿತ್ತು. ರಾಜ್ಯದ ಮುಖ್ಯ ಕಾರ್ಯದರ್ಶಿಯೊಬ್ಬರು ಈಕೆಯ ಮೇಲೆ ಕ್ರಮ ಕೈಗೊಳ್ಳುವುದು ಅಗತ್ಯವೆಂದು ಸ್ಪಷ್ಟವಾಗಿ ಶಿಫಾರಸು ಮಾಡಿದ್ದರು. ಇಷ್ಟಾಗಿಯೂ ಮೊಕದ್ದಮೆಯನ್ನು ಮುಕ್ತಾಯಗೊಳಿಸಲು ಮುಖ್ಯಮಂತ್ರಿ ಕಾರ್ಯಾಲಯವೇ ನಿರ್ಧರಿಸತೆಂದು ಮಾಧ್ಯಮ ವರದಿಗಳು ಹೇಳುತ್ತವೆ. ಇವಷ್ಟೇ ಅಲ್ಲದೆ ನಕಲು ಮಾಡುವುದಕ್ಕೇ ಖ್ಯಾತರಾದ ಪ್ರೊಫೆಸರ್ ಒಬ್ಬರು ಆರೋಪ ಮುಕ್ತರಾದ ಕಥೆ ಬೇರೆಯೇ ಇದೆ.
ಇತ್ತೀಚೆಗೆ ಭಾರೀ ಸುದ್ದಿ ಮಾಡಿದ ಶಾಸಕ ವೈ.ಸಂಪಂಗಿ ಲಂಚ ಪ್ರಕರಣದ ವಿಷಯದಲ್ಲೂ ಇದೇ ಸಂಭವಿಸುತ್ತಿದೆ. ಶಾಸಕರ ಭವನಕ್ಕೆ ಇದ್ದಕ್ಕಿದ್ದಂತೆಯೇ ಸದನದ ಸ್ಥಾನವನ್ನು ನೀಡಲಾಯಿತು. ಅಂದರೆ ಶಾಸಕರ ಭವನದಲ್ಲಿ ಯಾರನ್ನಾದರೂ ಬಂಧಿಸಬೇಕಿದ್ದರೆ ಅದಕ್ಕೆ ವಿಧಾನಸಭಾಧ್ಯಕ್ಷರ ಅನುಮತಿ ಪಡೆಯಬೇಕಾಗುತ್ತದೆ. ಸಂಪಂಗಿ ಪ್ರಕರಣದ ಹಿನ್ನೆಲೆಯಲ್ಲೇ ಇದನ್ನು ನೋಡುವುದಾದರೆ ಇನ್ನು ಮುಂದೆ ಶಾಸಕರ ಭವನದಲ್ಲಿ ಶಾಸಕರು ತಕ್ಷಣ ಬಂಧನಕ್ಕೊಳಗಾಗುವ ಭೀತಿಯಿಲ್ಲದೆ ಲಂಚ ಪಡೆಯುವುದೂ ಸೇರಿದಂತೆ ಏನು ಬೇಕಾದರೂ ಮಾಡಬಹುದು.
***
ಇದನ್ನೆಲ್ಲಾ ಗಮನಿಸಿಯೇ ಪ್ರಕಾಶ್‌ಸಿಂಗ್ಖ್/ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಬಹಳ ಮುಖ್ಯವಾದ ತೀರ್ಪನ್ನು ನೀಡಿತ್ತು. ಪೊಲೀಸರು ಆಯಾ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿರುವುದರ ಬದಲಿಗೆ ಕಾನೂನಿನ ಪ್ರತಿನಿಧಿಯಾಗಿರುವಂತೆ ವ್ಯವಸ್ಥೆಯನ್ನು ಬದಲಾಯಿಸಬೇಕು. ಇದಕ್ಕಾಗಿ ಪೊಲೀಸರ ವರ್ಗಾವಣೆ ಮತ್ತಿತರ ಕ್ರಿಯೆಗಳಲ್ಲಿ ಸರ್ಕಾರ ಹಸ್ತಕ್ಷೇಪ ನಡೆಸದಂತೆ ನೋಡಿಕೊಳ್ಳಲು ಒಂದು ಸಕ್ಷಮ ಪ್ರಾಧಿಕಾರವನ್ನು ಸ್ಥಾಪಿಸಬೇಕು ಮುಂತಾದ ಪೊಲೀಸ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕೆಂದು ನ್ಯಾಯಾಲಯ ಹೇಳಿತ್ತು.
ಪೊಲೀಸ್ ವ್ಯವಸ್ಥೆಯೆಂಬುದು ಸರ್ಕಾರದ ಪ್ರತಿನಿಧಿಯಾಗದೆ ಕಾನೂನಿನ ಪ್ರತಿನಿಧಿಯಾಗುವ ಕ್ರಿಯೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ತಂದುಕೊಡುತ್ತದೆ. 2006ರ ಸೆಪ್ಟೆಂಬರ್ 22ರಂದು ತೀರ್ಪು ನೀಡಿದಾಗ ವ್ಯವಸ್ಥೆಯನ್ನು ಬದಲಾಯಿಸುವುದಕ್ಕೆ ಸರ್ಕಾರಗಳಿಗೆ 2007ರ ಡಿಸೆಂಬರ್ 31ರ ತನಕ ಕಾಲಾವಕಾಶ ನೀಡಲಾಗಿತ್ತು. ಬದಲಾವಣೆಗಳನ್ನು ಮಾಡುತ್ತೇವೆಂದು ಒಪ್ಪಿದ್ದ ಕೆಲವು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ನ್ಯಾಯಾಲಯ ಕೊಟ್ಟ ಡೆಡ್‌ಲೈನ್ ಮುಗಿದು ಒಂದು ವರ್ಷ ದಾಟಿದೆ. ಪೊಲೀಸ್ ಆಯೋಗದ ಶಿಫಾರಸುಗಳ ಜಾರಿಗೆ ಕ್ರಿಯಾ ಯೋಜನೆ ರೂಪಿಸಿದ್ದ ಅಧಿಕಾರಿ ಶ್ರೀಕುಮಾರ್ ಈಗ ನಿವೃತ್ತರಾಗಿದ್ದಾರೆ.
***
ಪೊಲೀಸರನ್ನು ಕಾನೂನಿನ ಪ್ರತಿನಿಧಿಗಳನ್ನಾಗಿಸುತ್ತೇವೆಂದು ನ್ಯಾಯಾಲಯಕ್ಕೆ ಭರವಸೆ ನೀಡಿದ್ದ ಸರ್ಕಾರ ಪೊಲೀಸರನ್ನು ತನ್ನ ಕೈಗೊಂಬೆಯಾಗಿಯೇ ಉಳಿಸಿಕೊಂಡಿದೆ. ತನಗೆ ಬೇಡವಾದವರ ಮೇಲೆ ಮೊಕದ್ದಮೆ ಹೂಡುವುದಕ್ಕೂ ತನಗೆ ಬೇಕಿದ್ದವರ ಮೇಲಿರುವ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳುವ ಕೆಲಸವನ್ನೂ ಅದು ಮಾಡುತ್ತಿದೆ. ಇದು ಹಣ ಮತ್ತು ಅಧಿಕಾರ ಬಲವಿರುವವರಿಗೆ ಯಾವ ಕಾನೂನು ಅನ್ವಯಿಸುವುದಿಲ್ಲ ಎಂಬ ಸಂದೇಶವನ್ನು ಜನರಿಗೆ ರವಾನಿಸುತ್ತದೆ. ಇದರ ಪರಿಣಾಮ ಕಳ್ಳರಿಗೆ ಬೀದಿಯಲ್ಲೇ ಬಡಿದು ಪಾಠ ಕಲಿಸುವ ದಿಡೀರ್ ನ್ಯಾಯದಾನದ ವ್ಯಾಪ್ತಿಯನ್ನು ಜನರು ವಿಧಾನ ಸೌಧಕ್ಕೂ ಶಾಸಕರ ಭವನಕ್ಕೂ ಸರ್ಕಾರೀ ಕಚೇರಿಗಳಿಗೂ ವಿಸ್ತರಿಸಿಕೊಳ್ಳುವಲ್ಲಿ ಕಾಣಿಸಿಕೊಳ್ಳಬಹುದು. ಆ ಹೊತ್ತಿಗೆ ಸರಿಪಡಿಸುವುದಕ್ಕೇನೂ ಉಳಿದಿರುವುದಿಲ್ಲ!