ಈಗ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪನವರು ಸಾಮಾನ್ಯ ರೈತನ ಮಗ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿ ಆ ಮೂಲಕ ಬಿಜೆಪಿಯಲ್ಲಿ ದುಡಿದು ಪಕ್ಷವನ್ನು ಬೆಳಸುತ್ತಲೇ ತಾವೂ ಬೆಳೆದವರು. ಇದನ್ನು ಹೇಳಿಕೊಳ್ಳುವುದಕ್ಕೆ ಯಡಿಯೂರಪ್ಪನವರು ಹೆಮ್ಮೆ ಪಡುತ್ತಾರೆ. ತಮ್ಮ ರೈತ ಹೋರಾಟದ ಕಥನವನ್ನು ಜನರ ಮುಂದಿಟ್ಟೇ ಅವರು ಓಟು ಕೇಳುತ್ತಾರೆ.

ಪ್ರಧಾನಿಯಾಗಿದ್ದ ದೇವೇಗೌಡರೂ ಅಷ್ಟೇ. ಪಕ್ಷವನ್ನು ಸಂಘಟಿಸಿ, ಕಟ್ಟಿ, ಬೆಳೆಸಿ, ಒಡೆದು, ತಾವೂ ಬೆಳೆದವರು. ಈ ಪಟ್ಟಿಯನ್ನು ಬಹಳ ಉದ್ದಕ್ಕೆ ಬೆಳೆಸಬಹುದು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ವೀರಪ್ಪ ಮೊಯ್ಲಿ, ಎಸ್.ಬಂಗಾರಪ್ಪ ಮುಂತಾದ ಅನೇಕರು ರಾಜಕೀಯ ಬದುಕಿನ ಆರಂಭದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿದ್ದವರು. ಪಕ್ಷವನ್ನು ಕಟ್ಟುತ್ತಲೇ ತಾವು ಬೆಳೆದವರು. ಆದರೆ ಇಂದು ಕರ್ನಾಟಕದಲ್ಲಿರುವ ಯಾವುದೇ ರಾಜಕೀಯ ಪಕ್ಷದ ಸಾಮಾನ್ಯ ಕಾರ್ಯಕರ್ತನೊಬ್ಬ ಮುಖ್ಯಮಂತ್ರಿ ಪದವಿಯ ಕನಸು ಕಾಣಬಹುದೇ? ಅದು ಬಿಡಿ ಕನಿಷ್ಠ ಶಾಸಕನ ಸ್ಥಾನದ ಕನಸನ್ನಾದರೂ ಕಾಣಲು ಸಾಧ್ಯವಿದೆಯೇ?

ಈ ಪ್ರಶ್ನೆಗೆ ಉತ್ತರ ಹುಡುಕಿದರೆ ನಿರಾಶೆಯಾಗುತ್ತದೆ. ನಮ್ಮ ಪ್ರಜಾಪ್ರಭುತ್ವ ಪಡೆದುಕೊಳ್ಳುತ್ತಿರುವ ಸ್ವರೂಪವನ್ನು ನೋಡಿ ಭಯವಾಗುತ್ತದೆ. ಪ್ರಜಾಪ್ರಭುತ್ವದ ಬಹುದೊಡ್ಡ ಶಕ್ತಿಯೆಂದರೆ ರಾಜಕೀಯ ಪ್ರವೇಶಕ್ಕೆ ಇರುವ ಮುಕ್ತ ಅವಕಾಶ. ಈಗ ರಾಜಕೀಯ ಪಕ್ಷಗಳು ಮುಂದಿಡುತ್ತಿರುವ `ಗೆಲ್ಲುವ ಅರ್ಹತೆ’ಯೆಂಬ ಷರತ್ತು ಈ ಮುಕ್ತ ಪ್ರವೇಶದ ಅವಕಾಶವನ್ನೇ ಕಿತ್ತುಕೊಳ್ಳುತ್ತಿದೆ. ಯಾವ ಪಕ್ಷದ ಸಾಮಾನ್ಯ ಕಾರ್ಯಕರ್ತನೂ ತನ್ನ ಪಕ್ಷ ನಿಷ್ಠೆ, ಸಂಘಟನಾ ಚಾತುರ್ಯ, ಜನಪ್ರಿಯತೆಯನ್ನು ಬಂಡವಾಳವಾಗಿಟ್ಟುಕೊಂಡು ಅಭ್ಯಥರ್ಿಯಾಗುವ ಕನಸು ಕಾಣಲು ಸಾಧ್ಯವಿಲ್ಲ. ಇಂಥದ್ದೊಂದು ಕನಸು ಕಾಣಬೇಕೆಂದರೆ ಆತ ಪ್ರಭಾವಶಾಲಿ ರಾಜಕೀಯ ಕುಟುಂಬದ ಸದಸ್ಯನಾಗಿರಬೇಕು ಇಲ್ಲವೇ ಸಿನಿಮಾದಂಥ ಕ್ಷೇತ್ರದ ಜನಪ್ರಿಯ ತಾರೆಯಾಗಿರಬೇಕು. ಇವೆರಡೂ ಅರ್ಹತೆಗಳಿಲ್ಲವಾದರೆ ಕಾನೂನು ಬದ್ಧವಾಗಿಯೋ ಕಾನೂನನ್ನು ಉಲ್ಲಂಘಿಸಿಯೋ ಟಿಕೆಟ್ ಖರೀದಿಸುವಷ್ಟು ಹಣ ಸಂಪಾದಿಸಿರಬೇಕು.

***

ಮೇಲೆ ಹೇಳಿದ ಮೂರು ಅರ್ಹತೆಗಳಿದ್ದವರಿಗೆ ಟಿಕೆಟ್ ಮೀಸಲು ಎಂದು ಯಾವ ಪಕ್ಷವೂ ಅಧಿಕೃತವಾಗಿ ಘೋಷಿಸುವುದಿಲ್ಲ. ಅದನ್ನು ಹೇಳುವುದಕ್ಕೆ ರಾಜಕೀಯ ಪಕ್ಷಗಳು ತರ್ಕಬದ್ಧವಾದ `ಗೆಲ್ಲುವ ಅರ್ಹತೆ’ ಎಂಬ ಪದಪುಂಜವನ್ನು ಬಳಸುತ್ತವೆ. ಏನೀ ಗೆಲ್ಲುವ ಅರ್ಹತೆ?

ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪಟ್ಟಿಯ ಮೇಲೆ ಒಮ್ಮೆ ಕಣ್ಣಾಡಿಸಿದರೆ ಈ ಗೆಲ್ಲುವ ಅರ್ಹತೆ ಏನು ಎಂಬುದು ಅರ್ಥವಾಗುತ್ತದೆ. ಈಗಾಗಲೇ ಸಾಕಷ್ಟು ಚರ್ಚೆಯಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮಗ ರಾಘವೇಂದ್ರ ಅವರ ಉಮೇದುವಾರಿಕೆಯನ್ನು ಉದಾಹರಣೆಯಾಗಿಟ್ಟುಕೊಳ್ಳೋಣ. ರಾಜಕೀಯ ಅನುಭವದ ದೃಷ್ಟಿಯಿಂದ ನೋಡಿದರೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿದ್ದ ಭಾನುಪ್ರಕಾಶ್ ಅವರಿಗೆ ಒಳ್ಳೆಯ ಸಂಘಟನಾತ್ಮಕ ಅನುಭವವಿದೆ. ಅವರು ಬಿಜೆಪಿಯ ರಾಜ್ಯ ಪದಾಧಿಕಾರಿಯೂ ಹೌದು. ಹಾಗೆಯೇ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಅಯನೂರು ಮಂಜುನಾಥ್ ಕೂಡಾ ಬಿಎಂಎಸ್ನ ಮೂಲಕ ಕಾರ್ಮಿಕರನ್ನು ಸಂಘಟಿಸಿ ಬೆಳೆದವರು. ಪಕ್ಷವನ್ನು ಕಟ್ಟಲು ಬಹುಕಾಲ ಶ್ರಮಿಸಿದವರು. ಬಂಗಾರಪ್ಪನವರನ್ನು ಬಿಜೆಪಿ ಅಭ್ಯರ್ಥಿಯಾಗಿ ಹೇರಿದಾಗ ಸಿಟ್ಟಿನಿಂದ ಪಕ್ಷಬಿಟ್ಟಿದ್ದನ್ನು ಹೊರತು ಪಡಿಸಿದರೆ ಅವರು ಯಾವಾಗಲೂ ಪಕ್ಷ ನಿಷ್ಠರೇ.

ಇವರಿಬ್ಬರನ್ನೂ ಮೀರಿಸುವ ಯಾವ ಅರ್ಹತೆ ರಾಘವೇಂದ್ರ ಅವರಿಗೆ ಇದೆ? ಇದಕ್ಕಿರುವ ಉತ್ತರಗಳು ಎರಡು. ಒಂದು, ರಾಘವೇಂದ್ರ ಯಡಿಯೂರಪ್ಪನವರ ಪುತ್ರ. ಮತ್ತೊಂದು, ವರ್ತಮಾನದ ಚುನಾವಣೆಗಳ ಅಗತ್ಯವಾಗಿರುವ ಬಂಡವಾಳ ಹೂಡಿಕೆಯ ಶಕ್ತಿ.

ಇಂಥದ್ದೇ ಮತ್ತೊಂದು ಉದಾಹರಣೆ ಹಾವೇರಿ ಲೋಕಸಭಾ ಕ್ಷೇತ್ರದ್ದು. ಇಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿರುವುದು ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿಯವರ ಮಗ ಶಿವಕುಮಾರ್ ಉದಾಸಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿ.ಎಂ.ಉದಾಸಿಯವರಿಗೆ ಚುನಾವಣಾ ಏಜೆಂಟ್ ಆಗಿದ್ದುದನ್ನು ಹೊರತು ಪಡಿಸಿದರೆ ಶಿವಕುಮಾರ್ ಗೆ ಅಂಥ ರಾಜಕೀಯ ಅನುಭವವೇನೂ ಇಲ್ಲ. ಇಲ್ಲಿಯೂ ಎಂ.ಸಿ.ಪಾಟೀಲ್, ನೆಹರು ಓಲೆಕಾರ್, ರಾಜಶೇಖರ ಸಿಂಧೂರ್ ಅವರಂಥ ಅನುಭವಿಗಳಿದ್ದರೂ ಅವರಿಗೆ ಟಿಕೆಟ್ ಸಿಗಲಿಲ್ಲ.

ಮೇಲಿನ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು `ಯುವಕರಿಗೆ ಅವಕಾಶ ಕಲ್ಪಿಸಿದ್ದೇವೆ’ ಎಂಬ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ. ಈ ಸ್ಪಷ್ಟನೆಯನ್ನು ನಿಜವೆಂದು ಪರಿಗಣಿಸಿದರೂ ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದ ಇನ್ನೂ ಅನೇಕ ಯುವಕರಿಗೇಕೆ ಟಿಕೆಟ್ ದೊರೆಯಲಿಲ್ಲ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಇದು ಬರೇ ಬಿಜೆಪಿಯ ಸಮಸ್ಯೆಯೇನೂ ಅಲ್ಲ. ದೇವೇಗೌಡರ ಕುಟುಂಬದ ಮೂವರು ಈಗ ಕರ್ನಾಟಕದ ವಿಧಾನಸಭೆಯಲ್ಲಿದ್ದಾರೆ. ನೆಹರು ಕುಟುಂಬದ ಇಬ್ಬರು ಲೋಕಸಭೆಯಲ್ಲೂ ಇದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಕೆನರಾ ಲೋಕಸಭಾ ಕ್ಷೇತ್ರದಿಂದ ತಮ್ಮ ಮಗನಿಗೆ ಟಿಕೆಟ್ ಬೇಕು ಎನ್ನುತ್ತಿದ್ದಾರೆ. ಇಲ್ಲಿಂದ ಟಿಕೆಟ್ ಬಯಸಿರುವ ಮಾರ್ಗರೆಟ್ ಆಳ್ವ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ತಮ್ಮ ಮಗನಿಗೆ ಟಿಕೆಟ್ ಕೇಳಿದ್ದರು. ಅಷ್ಟೇಕೆ ಸ್ವತಃ ಮಾರ್ಗರೆಟ್ ಆಳ್ವ ಕೂಡಾ ರಾಜಕೀಯ ಕುಟುಂಬದಿಂದಲೇ ಬಂದವರು.

***

ರಾಜಕೀಯಕ್ಕೆ ಪ್ರವೇಶ ಪಡೆಯುವ ಮುಕ್ತ ಅವಕಾಶವನ್ನು ಪ್ರತಿಬಂಧಿಸುವ `ಗೆಲ್ಲುವ ಅರ್ಹತೆ’ಯ ಕುರಿತು ಇನ್ನಷ್ಟು ಚರ್ಚೆಗಳ ಅಗತ್ಯವಿದೆ. ಇದನ್ನು ಕೇವಲ ಕುಟುಂಬ ರಾಜಕಾರಣಕ್ಕೆ ಸೀಮಿತಗೊಳಿಸಿ ನೋಡುವುದರಲ್ಲಿಯೂ ಹೆಚ್ಚಿನ ಅರ್ಥವಿಲ್ಲ. ಕುಟುಂಬ ರಾಜಕಾರಣ ಬಹಳ ಹಿಂದಿನಿಂದಲೇ ಇತ್ತು. ಆದರೆ ಈಗಿನಂತೆ ಪ್ರಭಾವಶಾಲಿ ರಾಜಕೀಯ ಕುಟುಂಬದ ಸದಸ್ಯರು `ರೆಡಿಮೇಡ್’ ಅಭ್ಯರ್ಥಿಗಳಾಗುತ್ತಿರಲಿಲ್ಲ. ಒಂದು ಸಂಘಟನಾತ್ಮಕ ಅನುಭವದಿಂದಲೇ ಅವರೂ ನಾಯಕತ್ವ ಸ್ಥಾನಕ್ಕೇರುತ್ತಿದ್ದರು.

ತಳಮಟ್ಟದ ರಾಜಕೀಯ ಅನುಭವವಿಲ್ಲದ `ರೆಡಿಮೇಡ್ ಅಭ್ಯರ್ಥಿ’ಗಳು ತಾವು ಪ್ರತಿನಿಧಿಸುವ ರಾಜಕೀಯ ಪಕ್ಷಗಳಿಗೆ ಎಂತಹ ನಾಯಕತ್ವ ನೀಡಬಲ್ಲರು? ದೇವೇಗೌಡರು ಮತ್ತು ಯಡಿಯೂರಪ್ಪನವರಿಬ್ಬರೂ ತಮ್ಮ ರೈತ ಹಿನ್ನೆಲೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇವರ ಮಕ್ಕಳು `ನಾನು ರೈತನ ಮಗನ ಮಗ’ ಹೇಳಿಕೊಳ್ಳುತ್ತಾರೆಯೇ?

***

ಸಂವಿಧಾನ ಶಿಲ್ಪಿ ಡಾ|ಬಿ.ಆರ್.ಅಂಬೇಡ್ಕರ್ ಭಾರತದ ಜಾತಿಪದ್ಧತಿಯನ್ನು ಕಿಟಕಿಗಳೂ ಮೆಟ್ಟಿಲುಗಳೂ ಇಲ್ಲದ ಬಹುಅಂತಸ್ತಿನ ಕಟ್ಟಡವೊಂದಕ್ಕೆ ಹೋಲಿಸಿದ್ದರು. ಪ್ರತೀ ಅಂತಸ್ತಿನಲ್ಲಿವವರೂ ಆಯಾ ಅಂತಸ್ತಿನಲ್ಲಿ ಬಂಧಿಗಳು. ಕಿಟಕಿಗಳಿಲ್ಲದಿರುವುದರಿಂದ ಹೊರನೋಡುವ ಅವಕಾಶವಿಲ್ಲ. ಮೆಟ್ಟಿಲುಗಳೂ ಇಲ್ಲದಿರುವುದರಿಂದ ಕೆಳಗಿರುವವರು ಮೇಲೇರುವ ಪ್ರಶ್ನೆಯೂ ಇಲ್ಲ.

ನಮ್ಮ ಪಟ್ಟಭದ್ರ ರಾಜಕಾರಣಿಗಳು ರಾಜಕೀಯ ಕ್ಷೇತ್ರವನ್ನೂ ಮೆಟ್ಟಿಲುಗಳಿಲ್ಲದ ಬಹುಅಂತಸ್ತಿನ ಕಟ್ಟಡವಾಗಿ ಪರಿವರ್ತಿಸುತ್ತಿದ್ದಾರೆ. ರಾಜಕಾರಣಿಯ ಮಕ್ಕಳು ರಾಜಕಾರಣಿಗಳಾಗುವುದನ್ನು ಸಚಿವರೊಬ್ಬರು `ವೈದ್ಯರ ಮಕ್ಕಳು ವೈದ್ಯರಾದಂತೆ, ಸಂಗೀತಗಾರರ ಮಕ್ಕಳು ಸಂಗೀತಗಾರರಾದಂತೆ, ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗುತ್ತಾರೆ’ ಎಂದು ಸಮರ್ಥಿಸಿಕೊಂಡಿದ್ದರು. ಅವರ ಹೇಳಿಕೆಯನ್ನು ಸ್ವಲ್ಪ ಬದಲಾಯಿಸುವ ಅಗತ್ಯವಿದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರ ಮಕ್ಕಳು ಕಾರ್ಯಕರ್ತರಾಗಿರುತ್ತಾರೆ. ಮಂತ್ರಿಗಳು ಮಕ್ಕಳು ಮಾತ್ರ ಮಂತ್ರಿಗಳಾಗುತ್ತಾರೆ. ಇದರ ಪರಿಣಾಮ ಸಮಾಜದ ಮೇಲೂ ಆಗುತ್ತದೆ. ಕೊಳೆಗೇರಿಯಲ್ಲಿರುವವರು ಕೊಳೆಗೇರಿಯಲ್ಲಿಯೇ ಇರುತ್ತಾರೆ. ಕೂಲಿಕಾರನ ಮಕ್ಕಳು ಕೂಲಿ ಮಾಡುತ್ತಾರೆ. ಉಳ್ಳವರ ಮಕ್ಕಳು ಮಾತ್ರ ಉಳ್ಳವರಾಗಿರುತ್ತಾರೆ.