ನಂಬಿ ಹಿಡಿದರೆ ನದಿಯ ಮಗ ಹಗೆಯ ಅಂಬಿಗಿಟ್ಟ ಕಾಯವನು
ಸುತ ಸತ್ತ ನೆಪದಲಿ ಧನುವ ಬಿಸುಟನು ಗರಡಿಯಾಚಾರ್ಯ
ಅಂಬು ಬೆಸನವ ಬೇಡಿದರೆ ತೊಡನೆಂಬ ಛಲ ನಿನಗಾಯ್ತು
ಮೂವರ ನಂಬಿ ಕೌರವ ಕೆಟ್ಟ ಅಕಟಕಟೆಂದನಾ ಶಲ್ಯ

ಇದು ಕರ್ಣಪರ್ವ ಯಕ್ಷಗಾನ ಪ್ರಸಂಗದ ಒಂದು ಪದ್ಯ. ತಮ್ಮೆಲ್ಲಾ ಪರಾಕ್ರಮಗಳನ್ನೂ ಕೃಷ್ಣನ `ಆಪರೇಷನ್‌’ಗಳಿಗೆ ಬಲಿಕೊಟ್ಟ ಕುರುಸೇನೆಯ ಅತಿರಥ ಮಹಾರಥರ ಕುರಿತು ಶಲ್ಯ ಆಡಿಕೊಳ್ಳುವುದನ್ನು ಈ ಪದ್ಯ ವಿವರಿಸುತ್ತದೆ.

ರಣರಂಗದಲ್ಲಿ ಕುರುಸೇನೆಯನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದ ಭೀಷ್ಮ ಶಿಖಂಡಿಯನ್ನು ನೆಪವಾಗಿಟ್ಟುಕೊಂಡು ಶರಶಯ್ಯೆಯಲ್ಲಿ ಮಲಗಿ ಉತ್ತರಾಯಣ ಪುಣ್ಯಕಾಲವನ್ನು ನಿರೀಕ್ಷಿಸತೊಡಗಿದ. ಮಗ ಚಿರಂಜೀವಿಯೆಂದು ತಿಳಿದಿದ್ದರೂ ಅಶ್ವತ್ಥಾಮನೆಂಬ ಆನೆ ಹತ್ಯೆಯಾದ ಸುದ್ದಿಯನ್ನು ನೆಪವಾಗಿಟ್ಟುಕೊಂಡ ದ್ರೋಣಾಚಾರ್ಯ ಯೋಗ ನಿದ್ರೆಗೆ ಪ್ರವೇಶಿಸಿಬಿಟ್ಟ. ಭೀಷ್ಮರಿರುವ ತನಕ ಯುದ್ಧರಂಗಕ್ಕೆ ಬರಲಾರನೆಂದು ಕುಳಿತಿದ್ದ ಕರ್ಣ ರಣರಂಗಕ್ಕೆ ಬಂದ ಮೇಲೆ ಕುಂತಿಗೆ ಕೊಟ್ಟ `ತೊಟ್ಟಂಬ ತೊಡಲಾರೆ’ನೆಂಬ ಭಾಷೆಗೆ ಬದ್ಧವಾಗಿ ಉಳಿದ. ಇವರನ್ನೆಲ್ಲಾ ನಂಬಿ `ಕೌರವ ಕೆಟ್ಟ’ ಎನ್ನುವ ಶಲ್ಯ ಕೂಡಾ ಕರ್ಣನ ತೊಟ್ಟ ಬಾಣವ ತೊಡದ ಪ್ರತಿಜ್ಞೆಯನ್ನು ಖಂಡಿಸಿ ರಥವಿಳಿದು ಕೌರವ ಕೆಡುವುದಕ್ಕೆ ತನ್ನ ಪಾಲನ್ನು ಸೇರಿಸುತ್ತಾನೆ.

ಚುನಾವಣಾ ಕುರುಕ್ಷೇತ್ರದಲ್ಲಿರುವ ಕರ್ನಾಟಕದ ಕಾಂಗ್ರೆಸ್‌ನ ಸ್ಥಿತಿಯೂ ಹೆಚ್ಚು ಕಡಿಮೆ ಮಹಾಭಾರತದ ಕುರುಸೇನೆಯ ಸ್ಥಿತಿಯನ್ನೇ ಹೋಲುತ್ತದೆ. ಹೀಗೆಂದ ಮಾತ್ರಕ್ಕೆ ಕಾಂಗ್ರೆಸ್‌ನ ವಿರುದ್ಧವಿರುವವರೆಲ್ಲಾ ಪಾಂಡವರೆಂದೇನೂ ಭಾವಿಸಬೇಕಾಗಿಲ್ಲ. ಈ ಚುನಾವಣಾ ಕುರುಕ್ಷೇತ್ರದಲ್ಲಿ ಪಾಂಡವ ಪಕ್ಷವೇ ಇಲ್ಲ. ಇರುವವೆಲ್ಲವೂ ಕೌರವ ಪಕ್ಷಗಳೇ. ಇವುಗಳಲ್ಲಿ ಕಾಂಗ್ರೆಸ್‌ ಕೂಡಾ ಒಂದು ಅಷ್ಟೇ.

***

ಕಾಂಗ್ರೆಸ್‌ನ ಸುದೀರ್ಘ ಇತಿಹಾಸದಲ್ಲಿ ಪಕ್ಷವನ್ನು ಬಿಟ್ಟು ಹೋಗುವುದು ಮತ್ತು ಪಕ್ಷಕ್ಕೆ ಬಂದು ಸೇರುವುದು ಸದಾ ನಡೆದೇ ಇದೆ. ಕಾಂಗ್ರೆಸ್‌ನಿಂದ ಬಿಟ್ಟು ಹೋಗುವ ಕ್ರಿಯೆ ಈ ಬಾರಿ ನಡೆದಂತೆ ಹಿಂದೆಂದೂ ನಡೆದಿರಲಿಲ್ಲ. 1994ರ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ ಅತಿ ಕಡಿಮೆ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೂ ಕಾಂಗ್ರೆಸ್‌ನಿಂದ ಈ ಬಗೆಯ ವಲಸೆ ಕಂಡುಬಂದಿರಲಿಲ್ಲ. 1996ರಲ್ಲಿ ಜನತಾದಳ ಹದಿನಾರು ಲೋಕಸಭಾ ಸ್ಥಾನಗಳನ್ನು ಗೆದ್ದುಕೊಂಡು ಸ್ವತಃ ಎಚ್‌.ಡಿ.ದೇವೇಗೌಡರೇ ಪ್ರಧಾನಿಯಾದಾಗಲೂ ಕಾಂಗ್ರೆಸ್‌ನಿಂದ ಈ ಬಗೆಯ ವಲಸೆ ನಡೆದಿರಲಿಲ್ಲ. ಈ ಬಾರಿ ಕಾಂಗ್ರೆಸ್‌ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ರಾಜ್ಯದಲ್ಲಿ ಅದೊಂದು ಪ್ರಬಲ ವಿರೋಧ ಪಕ್ಷ. ಇಷ್ಟಾಗಿಯೂ ಕಾಂಗ್ರೆಸ್‌ನಿಂದ ಹೊರ ನಡೆದವರ ಸಂಖ್ಯೆ ಮಾತ್ರ ಹಿಂದೆಂದಿಗಿಂತ ಹೆಚ್ಚು.

ಕಾಂಗ್ರೆಸ್‌ಗೆ ಈ ದುಸ್ಥಿತಿ ಏಕೆ ಬಂತು ಎಂಬ ಪ್ರಶ್ನೆಗೆ ಮೊನ್ನೆ ಮೊನ್ನೆಯಷ್ಟೇ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ ಅಲ್ಲಿ ಲೋಕಸಭಾ ಸ್ಥಾನಕ್ಕೆ ಅಭ್ಯರ್ಥಿಯೂ ಆದ ಡಿ.ಬಿ.ಚಂದ್ರೇಗೌಡರು ಕಾಂಗ್ರೆಸ್ಸಿಗನಾಗಿದ್ದುಕೊಂಡೇ ಆಡಿದ ಮಾತುಗಳು ಒಂದು ಸಂಭಾವ್ಯ ಉತ್ತರವನ್ನು ಕೊಡುತ್ತದೆ. `ಹಾವನೂರು ಆಯೋಗವನ್ನು ನೇಮಿಸಿದ್ದು ನಾವು. ಅದರ ಶಿಫಾರಸುಗಳನ್ನು ಜಾರಿಗೆ ತಂದವರು ನಾವು. ಹಿಂದುಳಿದ ವರ್ಗಗಳವರನ್ನು ಮುಖ್ಯಮಂತ್ರಿಯಾಗಿಸಿದ್ದೂ ನಾವೇ. ಇಷ್ಟರ ಮೇಲೆ ಹಿಂದುಳಿದ ವರ್ಗದ ನಾಯಕನೊಬ್ಬನನ್ನು ನಾವು ಆಮದು ಮಾಡಿಕೊಳ್ಳಬೇಕೇ? ಹೊರಗಿನಿಂದ ಬಂದವರು ಕಾಂಗ್ರೆಸ್‌ ಅಧ್ಯಕ್ಷರಾದರು. ಮತ್ತೊಬ್ಬರು ವಿರೋಧ ಪಕ್ಷದ ನಾಯಕನಾಗಬೇಕು ಎನ್ನುತ್ತಿದ್ದಾರೆ. ಹಾಗಿದ್ದರೆ ನಮಗೇನಿಲ್ಲಿ ಕೆಲಸ?’.

ಸಿದ್ದರಾಮಯ್ಯನವರು ಕರ್ನಾಟಕದ ಹಿಂದುಳಿದ ವರ್ಗಗಳ ಮಟ್ಟಿಗೆ ಕಿಂದರಿಜೋಗಿಯಿದ್ದಂತೆ. ಅವರು ಕಾಂಗ್ರೆಸ್‌ಗೆ ಬಂದರೆ ಹಿಂದುಳಿದ ವರ್ಗಗಳ ಮತಗಳು ಬೊಮ್ಮನಹಳ್ಳಿಯ ಇಲಿಗಳು ಕಿಂದರಿಜೋಗಿಯನ್ನು ಹಿಂಬಾಲಿಸಿದಂತೆ ಬರುತ್ತವೆ ಎಂದು ಕಾಂಗ್ರೆಸ್‌ ನಂಬಿತು. ಪರಿಣಾಮವಾಗಿ ಸಿದ್ದರಾಮಯ್ಯ ಕಾಂಗ್ರೆಸ್‌ ಸೇರಿದರು. ಅವರ ಆಗಮನ ಫಲಿತಾಂಶದ ಮೇಲೆ ಅಂಥ ಪ್ರಭಾವವನ್ನೇನೂ ಬೀರಲಿಲ್ಲ. ಆದರೆ ಸಿದ್ದರಾಮಯ್ಯ ಮಾತ್ರ ಜಾತ್ರೆಯಲ್ಲಿ ಮಕ್ಕಳು ಪೀಪಿಗಾಗಿ ಹಟ ಮಾಡುವಂತೆ `ನನಗೆ ಸ್ಥಾನಮಾನ ಬೇಕು’ ಎಂದು ಚಂಡಿ ಹಿಡಿಯತೊಡಗಿದರು. ಕಳೆದ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಸಿದ್ದರಾಮಯ್ಯ ಮೈಸೂರು ಬಿಟ್ಟು ಕದಲಲಿಲ್ಲ. ಉಪ ಚುನಾವಣೆಗಳ ಸಂದರ್ಭದಲ್ಲಿ ತಣ್ಣಗೆ ಕುಳಿತರು. ಈಗಲೂ ಅಷ್ಟೇ ವಿರೋಧ ಪಕ್ಷದ ನಾಯಕನ ಸ್ಥಾನ ಬೇಕು ಎಂದು ಚಂಡಿ ಹಿಡಿದು ಅಳುತ್ತಿದ್ದಾರೆ. ಅವರನ್ನು ಸಮಾಧಾನ ಪಡಿಸಲು ಕಾಂಗ್ರೆಸ್‌ ಹೈಕಮಾಂಡ್‌ ಮಲ್ಲಿಕಾರ್ಜುನ ಖರ್ಗೆಯವರ ರಾಜೀನಾಮೆಯನ್ನೂ ಪಡೆದಿದೆ. ಇಷ್ಟೆಲ್ಲಾ ಆದ ಮೇಲೆ ಕುರುಕ್ಷೇತ್ರ ಯುದ್ಧ ಮುಗಿದ ಮೇಲೆ ಆಗಮಿಸುವ ಅಶ್ವತ್ಥಾಮನಂತೆ ಸಿದ್ದರಾಮಯ್ಯನವರು ಘರ್ಜಿಸುತ್ತಿದ್ದಾರೆ. ಮಹಾಭಾರತದ ಕಥೆ ಗೊತ್ತಿದ್ದವರಿಗೆ ಇದರ ಪರಿಣಾಮ ವಿವರಿಸುವ ಅಗತ್ಯವಿಲ್ಲ.

***

ಇದು ಕಾಂಗ್ರೆಸ್‌ ಎದುರಿಸುತ್ತಿರುವ ಸಮಸ್ಯೆಯ ಒಂದು ಮುಖ. ಕಾಂಗ್ರೆಸ್‌ ಬಿಟ್ಟು ಹೋಗುತ್ತಿರುವ ನಾಯಕರಿಗೆ ಬೇಕಿದ್ದದ್ದು ಕುರುಕ್ಷೇತ್ರದಲ್ಲಿ ಶಲ್ಯ ನೀಡಿದಂಥ ಪಿಳ್ಳೆ ನೆವ ಮಾತ್ರ. ಡಿ.ಬಿ.ಚಂದ್ರೇಗೌಡರು ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿಯುವ ಹೊತ್ತಿಗೆ ಜನತಾದಳವೆಂಬ ಬೋಗಿಯಿಂದ ಇಳಿದು ಕಾಂಗ್ರೆಸ್‌ ಬೋಗಿಗೆ ಹತ್ತಿದ್ದರು. ಅವರ ಹಿರಿತನಕ್ಕೆ ಸಹಜವಾಗಿ ಅವರಿಗೊಂದು ಮಂತ್ರಿ ಪದವಿಯೂ ದೊರೆಯಿತು. ಐದು ವರ್ಷಗಳು ಮುಗಿದ ಮೇಲೂ ಅವರಿಗೆ ಎರಡೆರಡು ಬಾರಿ ಟಿಕೆಟ್‌ ಸಿಕ್ಕಿತಾದರೂ ಎರಡೂ ಬಾರಿಯೂ ಅವರು ಸೋತರು. ಈ ಸೋಲಿನ ನಾಯಕರಿಗೆ ಕಾಂಗ್ರೆಸ್‌ ಇನ್ನೇನು ಕೊಡಬಹುದಿತ್ತು? ಸೋಮಣ್ಣ ಹೊಸ ಪಕ್ಷ ಸೇರುವುದಕ್ಕೆ ಇರುವುದು ಒಂದೇ ಉದ್ದೇಶ ಯಾವುದಾದರೊಂದು ಅಧಿಕಾರ ಗಿಟ್ಟಿಸುವುದು. ಕಾಂಗ್ರೆಸ್‌ನ ಸಹ ಸದಸ್ಯರಾಗಿದ್ದುಕೊಂಡೇ ಅವರು ಎಚ್‌.ಡಿ.ದೇವೇಗೌಡರ ಪರ ಪ್ರಚಾರ ಮಾಡಿದ್ದರು. ಈ ಬಾರಿ ಬಿಜೆಪಿ ಸೇರಿಯೇ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರಷ್ಟೇ. ಜಗ್ಗೇಶ್‌ಗೆ ಒಮ್ಮೆ ಟಿಕೆಟ್‌ ನಿರಾಕರಿಸಿದ್ದರೂ ಅವರು ಗದ್ದಲ ಮಾಡಿದ್ದರಿಂದ ಕಾಂಗ್ರೆಸ್‌ ಟಿಕೆಟ್‌ ದೊರೆಯಿತು. ಅವರು ಗೆದ್ದೂಬಿಟ್ಟರು. ಆಮೇಲೆ ಅವರಿಗೆ ಜನಸೇವೆ ಮಾಡುವುದಕ್ಕೆ ಕಾಂಗ್ರೆಸ್‌ ಸೂಕ್ತವಲ್ಲ ಎನಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಹಾರಿದರು. ಇಷ್ಟಾಗಿ ಅವರಿಗೆ ಚುನಾವಣೆಗೆ ನಿಲ್ಲುವ ಧೈರ್ಯವಿರಲಿಲ್ಲ. ಕೇವಲ ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿ ಪಟ್ಟರು.

ಸಂಸದನಾಗಿ, ಮಂತ್ರಿಯಾಗಿ ನಿಷ್ಕ್ರಿಯರಾಗಿದ್ದ ಅಂಬರೀಶ್‌ಗೆ ಕೊಡುವುದಕ್ಕೆ ಕಾಂಗ್ರೆಸ್‌ ಬಳಿ ಏನೂ ಬಾಕಿ ಉಳಿದಿಲ್ಲ. ಅವರಿಗೆ ವಿಧಾನಸಭಾ ಚುನಾವಣೆಗೂ ಟಿಕೆಟ್‌ ನೀಡಲಾಗಿತ್ತು. ಅಲ್ಲಿ ಸೋತ ಅವರಿಗೆ ಮತ್ತೆ ಟಿಕೆಟ್‌ ಕೊಡಲು ಹೊರಟರೆ ಅವರದ್ದು ನೂರೆಂಟು ಷರತ್ತುಗಳು. ಕಾಂಗ್ರೆಸ್‌ ಅದಕ್ಕೂ ಒಪ್ಪಿಗೆ ನೀಡಿದೆ. ಎಸ್‌.ಎಂ.ಕೃಷ್ಣ ಬೆಂಗಳೂರು ದಕ್ಷಿಣದಿಂದ ಚುನಾವಣೆಗೆ ನಿಂತು ಇಡೀ ಚುನಾವಣಾ ವಾತಾವರಣದಲ್ಲೊಂದು ಲವಲವಿಕೆಗೆ ಕಾರಣರಾಗುತ್ತಾರೆಂದು ಕಾಂಗ್ರೆಸ್‌ ಕಾರ್ಯಕರ್ತರು ನಂಬಿದ್ದರು. ಆದರೆ ಕೃಷ್ಣ ನೀಡಿದ್ದೂ ಕೂಡಾ `ಪಿಳ್ಳೆನೆವ’ವೇ. ರಾಜ್ಯಸಭೆಯಲ್ಲಿ ಕಾಂಗ್ರೆಸ್ಸಿಗರ ಸಂಖ್ಯೆ ಕಡಿಮೆಯಾಗುತ್ತದೆ ಎಂಬುದು ಅವರ ಸಬೂಬು.

***

ಇದನ್ನೆಲ್ಲಾ ನೋಡಿದರೆ ಕುರುಸೇನೆಯ ನಾಯಕರಿಗೆ ಎದುರು ಪಕ್ಷದಲ್ಲಿದ್ದವರ ಜೊತೆ ಇದ್ದ ಸಂಬಂಧಗಳಂತೆ ಕಾಂಗ್ರೆಸ್‌ನ ಅತಿರಥ ಮಹಾರಥರಿಗೆ ಇತರ ಪಕ್ಷಗಳ ಜೊತೆಗೆ ಇರುವ `ಅನಂತಾನಂತ’ ಸಂಬಂಧಗಳ ಕಾರಣವೇ ಅರ್ಥವಾಗದಂಥ ಸ್ಥಿತಿ ಇದೆ. ಈಗ ಕಾಂಗ್ರೆಸ್‌ ಎದುರಿಸುತ್ತಿರುವ ಸ್ಥಿತಿ ಉಳಿದೆಲ್ಲಾ ಪಕ್ಷಗಳಿಗೂ ಒಂದು ಪಾಠವೇ. ಈಗ `ಜನಸೇವೆ’ಗಾಗಿ ಬಿಜೆಪಿ ಸೇರುತ್ತಿರುವವರೆಲ್ಲಾ ಮುಂದಿನ ದಿನಗಳಲ್ಲಿ ಇಂದು ಕಾಂಗ್ರೆಸ್‌ ಎದುರಿಸುತ್ತಿರುವಂಥ ಸಮಸ್ಯೆಯನ್ನು ಬಿಜೆಪಿಯೊಳಗೂ ಸೃಷ್ಟಿಸುವ ಸಾಮರ್ಥ್ಯವುಳ್ಳವರು. ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಾಗುವುದರ ಪರಿಣಾಮವಿದು.