ಭಾರತದ ಚುನಾವಣಾ ಇತಿಹಾಸದಲ್ಲಿ ಎರಡು ಪ್ರಮುಖ ಘೋಷಣೆ ಗಳಿವೆ. ಒಂದು ಇಂದಿರಾ ಗಾಂಧಿಯವರ ಕಾಲದ `ಗರೀಬಿ ಹಟಾವೋ’ ಮತ್ತೊಂದು ವಾಜಪೇಯಿ ಆಡಳಿತಾವಧಿಯನ್ನು ಗಮನದಲ್ಲಿಟ್ಟು ಕೊಂಡು ರೂಪಿಸಿದ `ಭಾರತ ಪ್ರಕಾಶಿಸುತ್ತಿದೆ’. ಈ ಎರಡೂ ಘೋಷಣೆ ಗಳ ಮಧ್ಯೆ ಮೂರು ದಶಕಗಳ ಅಂತರವಿದೆ. ಗರೀಬಿ ಹಟಾವೋ ಒಂದು ಕಾಲಘಟ್ಟದ ಭಾರತದ ಮನೋಭೂಮಿಕೆಯನ್ನು ಹೇಗೆ ವಶಪಡಿಸಿ ಕೊಂಡಿತೆಂದರೆ ಅವನತಿಯಂಚಿನಲ್ಲಿದ್ದ ಕಾಂಗ್ರೆಸ್‌ಗೆ ಮರುಜೀವ ದೊರೆಯಿತು. ಇಡೀ ಭಾರತದ ಮನೋಭೂಮಿಕೆಯನ್ನು ಹಿಡಿದಿಡುವ ಇಂಥದ್ದೊಂದು ಘೋಷಣೆಯನ್ನು ನೀಡುವುದಕ್ಕೆ ಈ ತನಕ ಯಾರಿಗೂ ಸಾಧ್ಯವಾಗಲಿಲ್ಲ.

ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರದ ಅವಧಿ ಪೂರ್ಣ ಗೊಂಡಾಗ ಬಿಜೆಪಿ ತನ್ನ ರಾಜಕಾರಣದ ಪುನರಾ ವಿಷ್ಕರಣಕ್ಕೆ ಹೊರಟಿತು. ತನ್ನ ಆಡಳಿತದ ಐದು ವರ್ಷಗಳಲ್ಲಿ ಕಾಣಿಸಿದ ಆರ್ಥಿಕತೆಯ ಉತ್ಕರ್ಷ ವನ್ನು ಗಮನದಲ್ಲಿಟ್ಟುಕೊಂಡು ಅದು `ಭಾರತ ಪ್ರಕಾಶಿಸುತ್ತಿದೆ’ ಎಂಬ ಘೋಷಣೆಯೊಂದಿಗೆ ಚುನಾವಣೆಯನ್ನು ಎದುರಿಸಿತು. ಇದಕ್ಕೆ ಪ್ರತಿ ಯಾಗಿ ಕಾಂಗ್ರೆಸ್‌ ಮೂರು ದಶಕಗಳಿಗೂ ಹೆಚ್ಚು ಹಳತಾದ `ಗರೀಬಿ ಹಟಾವೋ’ದ ಪರಿಕಲ್ಪನೆಯನ್ನೇ ಸ್ವಲ್ಪ ಸುಧಾರಿಸಿ `ಆಮ್‌ ಆದ್ಮಿ’ಯ ಬಗ್ಗೆ ಮಾತನಾಡಿತು. ಎರಡೂ ಘೋಷಣೆಗಳು ಭಾರತದ ಮನೋ ಭೂಮಿಕೆಯನ್ನು ಹಿಡಿದಿಡಲಿಲ್ಲ ಎಂಬುದನ್ನು ಚುನಾವಣಾ ಫಲಿತಾಂಶವೇ ಹೇಳಿತು. ಬಿಜೆಪಿ ನೇತೃತ್ವದ ಎನ್‌ಡಿಎ ಸೋತಿತು. ಕಾಂಗ್ರೆಸ್‌ ಏಕಾಂಗಿಯಾಗಿ ಅಧಿಕಾರಕ್ಕೇರಲಾಗದೆ ಮತ್ತೊಂದು ಮೈತ್ರಿಕೂಟ ರೂಪಿಸಿ ಸರಕಾರ ರಚಿಸಿತು.

* * *
2004ರ ಲೋಕಸಭಾ ಚುನಾವಣೆಯ ಜೊತೆಯಲ್ಲಿಯೇ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ವಿಧಾನಸಭಾ ಚುನಾವಣೆಗಳೂ ನಡೆದವು. ಫಲಿತಾಂಶ ಬಂದಾಗ ಎರಡೂ ರಾಜ್ಯಗಳಲ್ಲಿ ಆಡಳಿತಾ ರೂಢರು ಸೋತಿದ್ದರು. ಈ ಸೋಲುಗಳು ಸಾಮಾನ್ಯ ಸೋಲುಗಳಲ್ಲ. ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ತಮ್ಮ ಆಡಳಿತಾವಧಿಯಲ್ಲಿ ಪತ್ರಿಕೆಯೊಂದು ನಡೆಸಿದ ಮೌಲ್ಯಮಾಪನದಂತೆ ಎರಡು ಬಾರಿ `ನಂಬರ್‌ ಒನ್‌’ ಮುಖ್ಯ ಮಂತ್ರಿಯಾಗಿದ್ದವರು. ಉತ್ತಮ ಆಡಳಿತ ವನ್ನು ನೀಡಿದವರು. ಆಡಳಿತ ಸುಧಾರಣೆ, ಆರ್ಥಿಕ ಸುಧಾರಣೆಗಳಲ್ಲಿ ಮುಂಚೂಣಿಯಲ್ಲಿದ್ದವರು.

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಈ ಎಲ್ಲಾ ಅರ್ಹತೆಗಳನ್ನು ಹೊಂದಿದ್ದವರೇ. ಅವರೂ `ನಂಬರ್‌ ಒನ್‌’ ಮುಖ್ಯಮಂತ್ರಿಯಾಗಿ ಹೆಸರು ಮಾಡಿದ್ದವರು. ಆಡಳಿತಾತ್ಮಕ ಸುಧಾರಣೆಗಳ ಭೂಪಟದಲ್ಲಿ ಆಂಧ್ರಪ್ರದೇಶವೂ ಕಾಣಿಸುವಂತೆ ಮಾಡಿದವರು.ಚುನಾವಣಾ ಫಲಿತಾಂಶಗಳು ಹೊರಬಿದ್ದಾಗ ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ `ಉತ್ತಮ ಆಡಳಿತ ಮಾತ್ರ ಓಟುಗಳನ್ನು ತಂದುಕೊಡುವುದಿಲ್ಲ’ ಎಂಬ ಅರ್ಥದ ಮಾತುಗಳನ್ನಾಡಿದ್ದರು. ಹೆಚ್ಚು ಕಡಿಮೆ ಇದೇ ಅರ್ಥದ ಮಾತುಗಳನ್ನು ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು, ಬಿಜೆಪಿಯ ಚುನಾವಣಾ ನಿರ್ವಹಣೆಯ ಹೊಣೆ ಹೊತ್ತಿದ್ದ ಪ್ರಮೋದ್‌ ಮಹಾಜನ್‌ ಕೂಡಾ ಹೇಳಿದರು.

* * *

`ಗರೀಬಿ ಹಟಾವೋ’ ಘೋಷಣೆ ಕೇವಲ ಜನಪ್ರಿಯ ರಾಜಕೀಯ ಘೋಷಣೆಯಷ್ಟೇ ಆಗಿರಲಿಲ್ಲ. ಘೋಷಣೆಯನ್ನು ವಾಸ್ತವವಾಗಿಸಲು ಅಗತ್ಯವಿರುವ ಕಾರ್ಯಕ್ರಮಗಳ ಬೆಂಬಲ ಅದಕ್ಕಿತ್ತು. ಭೂಸುಧಾರಣೆ ಯಿಂದ ಆರಂಭಿಸಿ ಇಪ್ಪತ್ತು ಅಂಶಗಳ ಕಾರ್ಯಕ್ರಮದ ತನಕ ಈ ಯೋಜನೆಗಳ ಬೆಂಬಲವನ್ನು `ಉತ್ತಮ ಆಡಳಿತ’ದ ಭಾಗವೆಂದೇ ಪರಿಗಣಿಸಬೇಕಾಗುತ್ತದೆ. ಹಾಗಾದರೆ ಎಸ್‌.ಎಂ. ಕೃಷ್ಣ, ಚಂದ್ರಬಾಬು ನಾಯ್ಡು ಮತ್ತು ಪ್ರಮೋದ್‌ ಮಹಾಜನ್‌ ಉತ್ತಮ ಆಡಳಿತ ಓಟು ತರುವು ದಿಲ್ಲ ಎಂದು ಕೊರಗಿದ್ದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು?

ಉದಾರೀಕರಣೋತ್ತರ ಭಾರತದಲ್ಲಿ `ಉತ್ತಮ ಆಡಳಿತ’ ಎಂಬುದು ಒಬ್ಬೊಬ್ಬರ ದೃಷ್ಟಿಯಲ್ಲೂ ಭಿನ್ನ. ರೈತರಿಗೆ ಉಚಿತ ವಿದ್ಯುತ್‌ ಕೊಡು ವುದು ರೈತರ ದೃಷ್ಟಿಯಲ್ಲಿ ಉತ್ತಮ ಆಡಳಿತವಾಗಿದ್ದರೂ ಪಟ್ಟಣದ ಮಧ್ಯಮ ವರ್ಗದ ದೃಷ್ಟಿಯಲ್ಲಿ ಇದು ತಪ್ಪು. ಸಬ್ಸಿಡಿಗಳ ಸಂಗತಿಯೂ ಅಷ್ಟೇ. ಉದ್ಯಮಿಗಳ ದೃಷ್ಟಿಯಲ್ಲಿ ಅವರಿಗೆ ಸಿಗುವ ರಫ್ತು ಸಬ್ಸಿಡಿ, ತೆರಿಗೆ ರಜೆಗಳೆಲ್ಲವೂ `ಉತ್ತೇಜಕ’ಗಳು. ರೈತರಿಗೆ ನೀಡುವ ಸಬ್ಸಿಡಿ, ಶಿಕ್ಷಣ, ಆರೋಗ್ಯಕ್ಕಾಗಿ ಸರಕಾರ ಮಾಡುವ ವೆಚ್ಚ ಅನುತ್ಪಾದಕ. ಹೀಗೆ ಸೂಕ್ಷ್ಮ ಮಟ್ಟದಲ್ಲಿ ನೋಡುತ್ತಾ ಹೋದಂತೆ ಉತ್ತಮ ಆಡಳಿತ ಎಂಬುದಕ್ಕೆ ಎಲ್ಲರಿಗೂ ಒಪ್ಪಿಗೆಯಾಗುವ, ಎಲ್ಲರನ್ನೂ ತಲುಪುವ ಒಂದು ವ್ಯಾಖ್ಯೆ ಯನ್ನು ಕಂಡುಕೊಳ್ಳಲು ಸಾಧ್ಯವೇ ಇಲ್ಲ. ಆದ್ದರಿಂದಲೇ 2004ರಲ್ಲಿ ಬಿಜೆಪಿ ರೂಪಿಸಿದ `ಪ್ರಕಾಶಿಸುವ ಭಾರತ’ ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿ ಉಳಿದದ್ದು. `ಪ್ರಕಾಶಿಸುತ್ತಿರುವುದು ಯಾರ ಭಾರತ?’ ಎಂಬ ಪ್ರಶ್ನೆಗೆ ಬಿಜೆಪಿಯ ಬಳಿಯೇ ಉತ್ತರವಿರಲಿಲ್ಲ.

ಇದು ಎಸ್‌.ಎಂ. ಕೃಷ್ಣ ಮತ್ತು ಚಂದ್ರಬಾಬು ನಾಯ್ಡು ಅವರಿಗೂ ಅನ್ವಯಿಸುತ್ತದೆ. ಅವರು ಹೇಳುವ `ಉತ್ತಮ ಆಡಳಿತ’ ವೆನ್ನುವುದು ಯಾರ ದೃಷ್ಟಿಯ ಉತ್ತಮ ಆಡಳಿತವಾಗಿತ್ತು?

* * *

ಹಾಗಿದ್ದರೆ ಎಲ್ಲರಿಗೂ ಅನ್ವಯಿಸುವ ಉತ್ತಮ ಆಡಳಿತದ ಪರಿಕಲ್ಪನೆಯೇ ಇಲ್ಲವೇ? 2004ರ ಲೋಕಸಭಾ ಚುನಾವಣೆಗೆ ಸ್ವಲ್ಪ ಮೊದಲಷ್ಟೇ ನಡೆದ ಮಧ್ಯಪ್ರದೇಶ, ರಾಜಸ್ಥಾನಗಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ `ಉತ್ತಮ ಆಡಳಿತ’ವನ್ನೇ ಚುನಾವಣಾ ವಿಷಯವನ್ನಾಗಿಟ್ಟುಕೊಂಡು ಯಶಸ್ವಿಯಾಗಿತ್ತು. ಕಳೆದ ವರ್ಷ ನಡೆದ ಗುಜರಾತ್‌, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ದಿಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ `ಉತ್ತಮ ಆಡಳಿತ’ವೇ ಮುಖ್ಯ ವಿಷಯವಾಗಿತ್ತು. ಇದೇ ಕಾರಣದಿಂದ ಗುಜರಾತ್‌, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ಗಳಲ್ಲಿ ಬಿಜೆಪಿಯೂ ದಿಲ್ಲಿಯಲ್ಲಿ ಕಾಂಗ್ರೆಸ್‌ ಅಧಿಕಾರ ಉಳಿಸಿಕೊಂಡಿತು. ಬಿಹಾರದಲ್ಲೀಗ ಚುನಾವಣೆ ಎದುರಿಸುತ್ತಿರುವ ನಿತಿಶ್‌ ಕುಮಾರ್‌ ಉತ್ತಮ ಆಡಳಿತವನ್ನು ವಿಷಯವನ್ನಾಗಿಸಿ ಕೊಂಡಿದ್ದರೆ ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಎಡರಂಗದ ವಿರುದ್ಧ ತೃಣಮೂಲ ಕಾಂಗ್ರೆಸ್‌ ಕೂಡಾ ಉತ್ತಮ ಆಡಳಿತ ಅಸ್ತ್ರವನ್ನು ಪ್ರಯೋಗಿಸುತ್ತಿದೆ.

ಇಷ್ಟಾಗಿಯೂ ಮುಖ್ಯಧಾರೆಯ ಚುನಾವಣಾ ಪ್ರಚಾರದಲ್ಲಿ ಈ `ಉತ್ತಮ ಆಡಳಿತ’ ಚರ್ಚೆಯಾಗುವುದಿಲ್ಲ. ಕಾಂಗ್ರೆಸ್‌ನ ದೃಷ್ಟಿಯಲ್ಲಿ ಎಲ್‌.ಕೆ. ಆಡ್ವಾಣಿಯವರನ್ನು ಟೀಕಿಸಲು ಇರುವುದು `ಭಯೋತ್ಪಾದಕರ ಬಿಡುಗಡೆ’ ಮಾತ್ರ. ಬಿಜೆಪಿಯೂ ಅಷ್ಟೇ. ತಾನು ಅಧಿಕಾರದಲ್ಲಿದ್ದಾಗ 20ಕ್ಕೂ ಹೆಚ್ಚು ಮಂದಿ ಮರಣ ದಂಡನೆಗೆ ಗುರಿಯಾದವರ ಕ್ಷಮಾದಾನ ಅರ್ಜಿಯನ್ನು ವಿಲೇವಾರಿ ಮಾಡಿರಲಿಲ್ಲ ಎಂಬುದರ ಕುರಿತು ಜಾಣ ಮರೆವು ನಟಿಸಿ `ಅಫ್ಜಲ್‌ ಗುರು ಮರಣ ದಂಡನೆ’ ಪ್ರಶ್ನೆಯನ್ನು ಮುಖ್ಯವಾಗಿಸುತ್ತದೆ.

ಕಾಂಗ್ರೆಸ್‌ ಮತ್ತು ಬಿಜೆಪಿಗಳೆರಡೂ ಚರ್ಚಿಸುವ ಭಯೋತ್ಪಾದಕತೆಯ ವಿಷಯವೂ ಇಬ್ಬರು ಮಾತನಾಡುವಾಗಲೂ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಂಡು ಇಡೀ ಭಾರತವನ್ನು ಕಾಡುವ ಸಮಸ್ಯೆಯಾಗಿ ಕಾಣಿಸುವುದೇ ಇಲ್ಲ. ಈ ಆರ್ಥಿಕ ಹಿಂಜರಿತದ ಹೊತ್ತಿನಲ್ಲಿ ಅದನ್ನು ಹೇಗೆ ನಿರ್ವಹಿಸಬೇಕೆಂಬುದು ಎಲ್ಲಾ ರಾಜಕೀಯ ಪಕ್ಷ ಗಳಿಗೆ ಮುಖ್ಯವಾಗಬೇಕಿತ್ತು. ಆದರೆ ಇದು ಕೇವಲ ರಾಜಕೀಯ ಘೋಷಣೆಗಳಿಗೆ ಮಾತ್ರ ಸೀಮಿತವಾಗಿ ಉಳಿದಿರುವ ವಿಷಯವಾಗಿದೆ.

* * *

ಪ್ರಬುದ್ಧ ಪ್ರಜಾಪ್ರಭುತ್ವಗಳಲ್ಲಿ ಬದುಕಿನ ಜೊತೆಗೆ ನೇರ ಸಂಬಂಧವುಳ್ಳ ಸಂಗತಿಗಳು ಚುನಾವಣಾ ವಿಷಯಗಳಾಗುತ್ತವೆ. ಬರಾಕ್‌ ಒಬಾಮಾ ಬದಲಾವಣೆಗೆ ಕರೆ ಕೊಡುವಾಗಲೂ ಜನರ ಮುಂದಿಟ್ಟದ್ದು ಶಿಕ್ಷಣ, ಆರೋಗ್ಯ, ಪಿಂಚಣಿಯಂಥ ಸರಳ ಮತ್ತು ನೇರ ಸಂಗತಿಗಳನ್ನು. ಈ ವಿಷಯಗಳಿಗೆ ಸಂಬಂಧಿಸಿದಂತೆ ಸ್ಪಷ್ಟವಾದ ನೀತಿಗಳನ್ನು ಪ್ರಕಟಿಸು ವುದಕ್ಕೂ ಒಬಾಮಾಗೆ ಸಾಧ್ಯ ವಿತ್ತು. ನಮ್ಮ ಎಲ್ಲಾ ಪ್ರಮುಖ ಪಕ್ಷಗಳ ಪ್ರಣಾಳಿಕೆಗಳಲ್ಲಿ ಈ ಮೂರು ಸಂಗತಿಗಳ ಬಗ್ಗೆ ಇರುವ ವಿವರಗಳನ್ನು ಓದಿದರೆ ಭಾರತದ ಯಾರೊಬ್ಬನೂ ಇದು ತನಗೆ ಸಂಬಂಧಿಸಿದ ವಿಷಯ ಎಂದುಕೊಳ್ಳಲು ಸಾಧ್ಯವೇ ಇಲ್ಲ. ಭಾರತದಲ್ಲೀಗ ಬಡವರ ಜೊತೆ ಗುರುತಿಸಿಕೊಂಡು ಅಭಿಪ್ರಾಯ ರೂಪಿಸಬಹುದಾದ ಮಧ್ಯಮ ವರ್ಗ ಸಣ್ಣದಾಗಿ ಬಿಟ್ಟಿದೆ. ಹಾಗಾಗಿ ಅದರ ಧ್ವನಿ ಕ್ಷೀಣವಾಗಿದೆ. ಇನ್ನು ಅಭಿಪ್ರಾಯ ರೂಪಿಸುವ, ಬಡವರ ಜೊತೆ ಗುರುತಿಸಿಕೊಳ್ಳದ ಮಧ್ಯಮ ವರ್ಗಕ್ಕೆ ಸರಕಾರದಿಂದ ಏನೂ ಆಗಬೇಕಾಗಿಲ್ಲ. ಬಹುಶಃ ಮತ್ತೊಂದು `ಗರೀಬಿ ಹಟಾವೋ’ದಂಥ ಘೋಷಣೆ ಸಾಧ್ಯವಾಗದೇ ಇರುವುದಕ್ಕೂ ಇದೇ ಕಾರಣವಿರಬೇಕು