ಯಡಿಯೂರಪ್ಪನವರದ್ದು ಹಲ ಬಗೆಯ ಸಾಧನೆ. ದಕ್ಷಿಣ ಭಾರತದ ಮೊಟ್ಟ ಮೊದಲ ಬಿಜೆಪಿ ಸರ್ಕಾರ ಅಧಿಕಾರಕ್ಕೇರುವಂಥ ನಾಯಕತ್ವ ನೀಡಿದ್ದು ಅವರ ಮೊದಲ ಸಾಧನೆ. ವಿವಿಧ ಪಕ್ಷಗಳ ಶಾಸಕರ ರಾಜೀನಾಮೆ ಕೊಡಿಸಿ ಪಕ್ಷಕ್ಕೆಳೆದುಕೊಂಡು ಬಂದು ಉಪ ಚುನಾವಣೆಗೆ ಕಾರಣರಾಗಿ ಆ ಸ್ಥಾನಗಳಲ್ಲಿ ಹೆಚ್ಚಿನವನ್ನು ಗೆದ್ದುಕೊಂಡದ್ದೂ ಯಡಿಯೂರಪ್ಪ ನವರ ಸಾಧನೆಯೇ. ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಟ್ಟದ್ದೂ ಅವರ ಮತ್ತೊಂದು ಸಾಧನೆ. ಈ ಪಟ್ಟಿಗೆ ಹೊಸ ಸೇರ್ಪಡೆ ಸರ್ಕಾರ ಒಂದು ವರ್ಷ ಪೂರೈಸಿದ ಹೊತ್ತಿನಲ್ಲೇ ಭಿನ್ನಮತದ ಉದ್ಘಾಟನೆ. ಭಿನ್ನಮತವೆಂಬುದು ಎಲ್ಲಾ ಸರ್ಕಾರಗಳಲ್ಲೂ ಇತ್ತು. ಆದರೆ ಇದು ಆರಂಭವಾಗುವುದಕ್ಕೆ ಕನಿಷ್ಠ ಎರಡು ವರ್ಷಗಳ ಅವಧಿಯಾದರೂ ಬೇಕಿತ್ತು. ಯಡಿಯೂರಪ್ಪನವರ ಸರ್ಕಾರ ಈ ವಿಷಯದಲ್ಲೂ ಮುಂದಿದೆ!

ಉಗ್ರ ಹೇಳಿಕೆಗಳಿಗೆ ಖ್ಯಾತರಾಗಿದ್ದ ಇಂಧನ ಸಚಿವ ಕೆ.ಎಸ್‌. ಈಶ್ವರಪ್ಪನವರು ಜೂನ್‌ ಒಂದನೇ ತಾರೀಕಿನಂದು ಶಿವಮೊಗ್ಗದಲ್ಲಿ `ಈ ಬಾರಿಯ ಚುನಾವಣೆಯಲ್ಲಿ ಜಯಗಳಿಸಲು ಹಣ, ಹೆಂಡ, ಜಾತಿಯ ಬಳಕೆ ಆಗಿದ್ದು ಇದರ ಬಗ್ಗೆ ಹಿರಿಯ ಮುಖಂಡರಿಂದ ತನಿಖೆ ನಡೆಸ ಬೇಕು’ ಎಂದು ಗುಡುಗಿದ್ದರು. ಅವರು ತಮ್ಮ ಹೇಳಿಕೆಯನ್ನು ಕೇವಲ `ತನಿಖೆ’ಗೆ ಮಾತ್ರ ಸೀಮಿತಗೊಳಿಸದೆ `ಹತ್ತೊಂಬತ್ತು ಕ್ಷೇತ್ರಗಳಲ್ಲಿ ಪಕ್ಷ ಗೆದ್ದಿರಬಹುದು. ಆದರೆ ಈ ಗೆಲುವು ಯಾವರೂಪದಲ್ಲಿ ಲಭಿಸಿದೆ’ ಎಂಬ ನೈತಿಕ ಪ್ರಶ್ನೆಯನ್ನೂ ಎತ್ತಿದ್ದರು. ಈಶ್ವರಪ್ಪನವರು ರಾಜ್ಯ ಬಿಜೆಪಿಯ ಸಣ್ಣ ನಾಯಕರೇನೂ ಅಲ್ಲ. ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಟಿಕೆಟ್‌ ನೀಡಬೇಕು, ಯಾರಿಗೆ ಟಿಕೆಟ್‌ ನೀಡಬಾರದು ಎಂಬುದನ್ನು ನಿರ್ಧರಿಸುವ ಸಮಿತಿ ಯಲ್ಲೂ ಇದ್ದವರು. ಪಕ್ಷದ ಅಧ್ಯಕ್ಷರಾಗಿ ಪಕ್ಷವನ್ನು ಕಟ್ಟಿದವರು. ಅವರ ಹೇಳಿಕೆಗೆ ಮುಖ್ಯಮಂತ್ರಿಗಳು ತಣ್ಣಗಿನ ಪ್ರತಿಕ್ರಿಯೆ ನೀಡಿದರಾದರೂ ಆಡಳಿತಾರೂಢ ಬಿಜೆಪಿಯೊಳಗೊಂದು ಅಗ್ನಿ ಪರ್ವತವಿರುವುದಂತೂ ಜನರಿಗೆ ತಿಳಿಯಿತು.

ಕೆ.ಎಸ್‌. ಈಶ್ವರಪ್ಪನವರು ಪ್ರಸ್ತಾಪಿಸಿದ ಮತ್ತೊಂದು ಮುಖ್ಯ ಸಂಗತಿ ಯೆಂದರೆ ಬಿಜೆಪಿಯಲ್ಲೂ `ಅಪ್ಪ-ಮಕ್ಕಳ ರಾಜಕಾರಣ’ ಆರಂಭವಾಗಿರು ವುದು. ಯಡಿಯೂರಪ್ಪ ಶಿವಮೊಗ್ಗದಲ್ಲಿ ತಮ್ಮ ಮಗನಿಗೇ ಟಿಕೆಟ್‌ ಕೊಡಬೇಕೆಂದು ಆಗ್ರಹಿಸಿ ಪಡೆದುಕೊಂಡಿದ್ದನ್ನು ಮನಸ್ಸಿನಲ್ಲಿಟ್ಟುಕೊಂಡೇ ಈಶ್ವರಪ್ಪ ಈ ಮಾತುಗಳನ್ನಾಡಿದ್ದರು.

ಲೋಕಸಭಾ ಚುನಾವಣೆಗಳು ನಡೆದು ಇನ್ನೂ ತಿಂಗಳು ತುಂಬಿಲ್ಲ. ಶಿವಮೊಗ್ಗದಲ್ಲಿ ಯಡಿಯೂರಪ್ಪ ಪುತ್ರ ರಾಘವೇಂದ್ರ ಪರವಾಗಿ ಸ್ವತಃ ಈಶ್ವರಪ್ಪನವರೇ ಪ್ರಚಾರ ಮಾಡಿದ್ದರು. ಆಗ `ಅಭ್ಯರ್ಥಿ ಯಾರ ಮಗ, ಯಾರ ಸಂಬಂಧಿ ಎಂಬುದಕ್ಕಿಂತ ಗೆಲುವಿನ ಸಂಭಾವ್ಯತೆಯೇ ಮುಖ್ಯ’ ಎಂದಿದ್ದರು. `ಅಪ್ಪ-ಮಕ್ಕಳ ರಾಜಕಾರಣ’ದ ಬಗ್ಗೆ ಹೇಳುವ ಹೊತ್ತಿನಲ್ಲಿ ಈಶ್ವರಪ್ಪನವರು ತಾವು ಈ ಹಿಂದೆ ಆಡಿದ್ದ `ಗೆಲುವಿನ ಸಂಭಾವ್ಯತೆ’ಯ ಮಾತನ್ನು ಹೇಗೆ ಮರೆತರು?

* * *

ಇಂದು ಕರ್ನಾಟಕದ ಬಿಜೆಪಿ ಅನುಭವಿಸುತ್ತಿರುವ ಎಲ್ಲಾ ಸಮಸ್ಯೆಗಳ ಮೂಲವಿರುವುದು ಅದು ಅಧಿಕಾರ ಹಿಡಿಯಲು ಅನುಸರಿದ ತಂತ್ರ ಗಳಲ್ಲಿ. ಕರ್ನಾಟಕದಲ್ಲಿ ಬಿಜೆಪಿಯ ಬೆಳವಣಿಗೆಗೆ ಒಂದು ಸಹಜ ಗತಿ ಇತ್ತು. ಚುನಾವಣೆಯಿಂದ ಚುನಾವಣೆಗೆ ಅದು ಬೆಳೆಯುತ್ತಲೇ ಬಂದಿತ್ತು. ಯಡಿಯೂರಪ್ಪನವರು ಮುಖ್ಯಮಂತ್ರಿಯಾದದ್ದು ಈ ಸಹಜ ಬೆಳವಣಿಗೆ ಯಿಂದಲ್ಲ. ಇಪ್ಪತ್ತು ತಿಂಗಳ ನಂತರ ಮುಖ್ಯಮಂತ್ರಿ ಕುರ್ಚಿಯನ್ನು ಬಿಟ್ಟುಕೊಡಲು ಸಿದ್ಧರಾಗದ ಕುಮಾರಸ್ವಾಮಿ ಮತ್ತು ದೇವೇಗೌಡರು ರಾಜ್ಯದಲ್ಲಿ ಯಡಿಯೂರಪ್ಪನವರ ಪರವಾಗಿ ಒಂದು ಅನುಕಂಪದ ಅಲೆ ಸೃಷ್ಟಿಯಾಗಲು ಕಾರಣರಾದರು. ಈ ಅನುಕಂಪ ಅವರಿಗೆ ಅಧಿಕಾರಕ್ಕೇರುವಷ್ಟು ಸ್ಥಾನಗಳನ್ನುಗಳಿಸಿಕೊಟ್ಟಿತು.

ಅನುಕಂಪದಿಂದ ದೊರೆಯುವ ಅಧಿಕಾರದ ಮಿತಿ ಏನು ಎಂಬುದು ರಾಜೀವ್‌ಗಾಂಧಿಯವರ ಪ್ರಕರಣವೇ ಹೇಳಿಬಿಟ್ಟಿದೆ. ಇಂದಿರಾಗಾಂಧಿಯವರ ಸಾವು ಸೃಷ್ಟಿಸಿದ ಅನುಕಂಪದ ಅಲೆ ಅಭೂತ ಪೂರ್ವ ಎನ್ನಬಹುದಾದ ಬಹುಮತವನ್ನು ಕಾಂಗ್ರೆಸ್‌ಗೆ ತಂದುಕೊಟ್ಟಿತು. ಈ ಅನುಕಂಪದ ಅಲೆಯೂ ಹೆಚ್ಚು ಕಾಲ ಉಳಿಯಲಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲುವುದನ್ನು ತಪ್ಪಿಸಲು ರಾಜೀವ್‌ ಗಾಂಧಿಗೆ ಸಾಧ್ಯವಾಗಲಿಲ್ಲ. ಇದು ಯಡಿಯೂರಪ್ಪನವರ ವಿಷಯದಲ್ಲೂ ನಿಜ. ಅವರಿಗಿದ್ದ ಅನುಕಂಪದ ಬಲ ಅವರು ಅಧಿಕಾರಕ್ಕೇರಿದ ದಿನವೇ ಮುಗಿದು ಹೋಗಿತ್ತು. ಇದರ ನಂತರದ ಹಂತದಲ್ಲಿ ಪಕ್ಷದೊಳಗೂ ಹೊರಗೂ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಬೇರೇ ಏನನ್ನಾದರೂ ಮಾಡಲೇ ಬೇಕಿತ್ತು. ಅರ್ಥಾತ್‌ ಬಿಜೆಪಿಯ ಸಹಜ ಬೆಳವಣಿಗೆಗೆ ವೇಗವರ್ಧಕವಾಗಿ ಪರಿಣಮಿಸಿದ ಅನುಕಂಪದ ಅಲೆಯನ್ನು ಉತ್ತಮ ಆಡಳಿತದ ಮೂಲಕ ಉಳಿಸಿಕೊಳ್ಳಬೇಕಿತ್ತು. ಆದರೆ ಅವರು ಅಡ್ಡದಾರಿ ಹಿಡಿದರು. ಅನುಕಂಪ ವೆಂಬ ಸ್ಟೀರಾಯ್ಡ್‌ನ ಮೂಲಕ ಬೆಳೆದ ಪಕ್ಷವನ್ನು ಅವರು ಅಂಥದ್ದೇ ಮದ್ದುಗಳ ಮೂಲಕ ಗಟ್ಟಿಗೊಳಿಸಲು ಹೊರಟರು. ಸ್ಟೀರಾಯ್ಡ್‌ಗಳ ದೊಡ್ಡ ಸಮಸ್ಯೆಯೆಂದರೆ ತಕ್ಷಣಕ್ಕೆ ದೇಹವನ್ನು ಬಲಗೊಳಿಸುತ್ತವೆ ಯಾದರೂ ದೂರಗಾಮಿಯಾಗಿ ಅಡ್ಡ ಪರಿಣಾಮಗಳನ್ನು ಬೀರುತ್ತವೆ. ಅನುಕಂಪವೆಂಬ ಸ್ಟೀರಾಯ್ಡ್‌ನ ಅಡ್ಡ ಪರಿಣಾಮವನ್ನು ನಿರ್ವಹಿಸು ವುದಕ್ಕೆ ಯಡಿಯೂರಪ್ಪನವರು `ಆಪರೇಷನ್‌ ಕಮಲ’ದಂಥ ಸ್ಟೀರಾಯ್ಡ್‌ ಬಳಸಿದ್ದು ಮತ್ತಷ್ಟು ದೊಡ್ಡ ಸಮಸ್ಯೆಗೆ ಕಾರಣವಾಯಿತು. ಅದನ್ನೀಗ ಅವರು ಅನುಭವಿಸಲೇ ಬೇಕಾಗಿದೆ.

* * *

ಯಡಿಯೂರಪ್ಪನವರ ವಿರುದ್ಧ ನೈತಿಕ ಪ್ರಶ್ನೆಗಳನ್ನು ಎತ್ತುತ್ತಿರು ವವರೆಲ್ಲಾ ಕಳೆದ ಒಂದು ವರ್ಷ ಕಾಲ ಯಡಿಯೂರಪ್ಪನವರು ಕೈಗೊಂಡರನ್ನೆಲಾದ `ಅನೈತಿಕ’ ನಿರ್ಧಾರಗಳಿಗೆ ಬೆಂಬಲ ನೀಡದವರೇ. ರೆಡ್ಡಿ ಸೋದರರು ಪಕ್ಷಕ್ಕೆ ತಡವಾಗಿ ಬಂದರೂ ಅವರಿಗೆ ಪಕ್ಷದಲ್ಲಿ ಅವರಿಗಿರುವ ಹಿಡಿತ ಅಪಾರ. ಪಕ್ಷ ರೆಡ್ಡಿ ಸೋದರರ ತಾಳಕ್ಕೆ ಕುಣಿಯುವಾಗ ಹೇಗಾದರೂ ಸರಿ ಪಕ್ಷ ಅಧಿಕಾರಕ್ಕೆ ಬರಲಿ ಎಂಬ ಏಕೈಕ ಉದ್ದೇಶದಿಂದ ಈಶ್ವರಪ್ಪ ಮತ್ತು ಅವರ ಮಾತುಗಳಿಗೆ ಮೌನ ಬೆಂಬಲ ನೀಡುತ್ತಿರುವವರೆಲ್ಲಾ ಸುಮ್ಮನೆ ಕುಳಿತಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಮಗನಿಗೆ ಟಿಕೆಟ್‌ ಪಡೆದು ಕೊಂಡ ಹೊತ್ತಿನಲ್ಲೇ ಅದನ್ನು ವಿರೋಧಿಸುವುದಕ್ಕೆ ಈಶ್ವರಪ್ಪನವರಿಗೆ ಅವಕಾಶವಿತ್ತು. ಆಗ ಸುಮ್ಮನಿದ್ದು ಈಗ ಮಾತನಾಡುವುದೇಕೆ? `ಆಪರೇಷನ್‌ ಕಮಲ’ ಪ್ರಕ್ರಿಯೆ ನಡೆಯುವಾಗ ಸುಮ್ಮನೆ ಕುಳಿತಿದ್ದ ಭಿನ್ನಮತೀಯರಿಗೆ ಈಗ ಅದು `ಅನೈತಿಕ’ ಎಂದು ಅರಿವಾದದ್ದು ಹೇಗೆ? ಈ ಎಲ್ಲಾ ಪ್ರಶ್ನೆಗಳ ಉತ್ತರವಿರುವುದು ವೈಯಕ್ತಿಕ ಪ್ರತಿಷ್ಠೆಗಳಲ್ಲಿ.

ಕರ್ನಾಟಕದಲ್ಲಿ ಅಧಿಕಾರಕ್ಕೇರಿದ ಎಲ್ಲಾ ಪಕ್ಷಗಳ ಸರ್ಕಾರದ ಭಿನ್ನಮತದ ಕಥನಗಳನ್ನು ನೋಡಿದರೂ ಅಲ್ಲಿ ನೈತಿಕ ಪ್ರಶ್ನೆಗಳಿಗಿಂತಲೂ ವೈಯಕ್ತಿಕ ಪ್ರತಿಷ್ಠೆ, ವೈಯಕ್ತಿಕ ಲಾಭ ನಷ್ಟಗಳೇ ಮುಖ್ಯವಾಗಿವೆ. ದುರದೃಷ್ಟ ವೆಂದರೆ ಈ ಪ್ರಶ್ನೆಗಳು ಯಾವತ್ತೂ ಬೆಳಕಿಗೆ ಬಾರದಷ್ಟು ಕತ್ತಲಲ್ಲಿರುತ್ತವೆ. ದಿನಕ್ಕೊಂದು ಬಗೆಯ ಹೇಳಿಕೆಗಳ ಮೂಲಕ `ಭಿನ್ನಮತೀಯರು’ ಮಾಧ್ಯಮ ಗಳ ಹಾದಿ ತಪ್ಪಿಸುತ್ತಲೇ ಇರುತ್ತಾರೆ. ಮಾಧ್ಯಮಗಳೂ ಈ ಹೇಳಿಕೆಗಳ ಜಾಡು ಹಿಡಿದು ಭಿನ್ನಮತದ ಮೂಲವನ್ನು ಕೆದಕುತ್ತವೆಯೇ ಹೊರತು ನಿಜವಾದ ಕಾರಣಗಳನ್ನು ಕಂಡುಕೊಳ್ಳಲು ಪ್ರಯತ್ನಿಸುವುದೇ ಇಲ್ಲ.

ಜೂನ್‌ ಒಂದನೇ ತಾರೀಕಿನಂದು ಶಿವಮೊಗ್ಗದಲ್ಲಿ `ಪಕ್ಷದ ಗೆಲವು ಯಾವ ಸ್ವರೂಪದ್ದು?’ ಎಂಬ ಪ್ರಶ್ನೆಯನ್ನೆತ್ತಿದ್ದ ಈಶ್ವರಪ್ಪನವರು ಜೂನ್‌ ಮೂರರಂದು ದಿಲ್ಲಿಯಲ್ಲಿ ಮಾತನಾಡುವಾಗ `ನನ್ನ ಹೇಳಿಕೆಯನ್ನು ತಿರುಚ ಲಾಗಿದೆ. ನಾನು ಇತರ ಪಕ್ಷಗಳು ಆರೋಪಿಸುತ್ತಿರುವ ಬಗ್ಗೆ ಹೇಳಿದ್ದೆ. ಈ ಕುರಿತಂತೆ ತನಿಖೆ ನಡೆಸಿ ನಮ್ಮ ಗೆಲುವು ಸತ್ಯಸಂಧವಾದದ್ದೆಂದು ಸಾಬೀತು ಮಾಡಬೇಕೆಂಬ ಉದ್ದೇಶದಿಂದ ಈ ಮಾತುಗಳನ್ನಾಡಿದ್ದೆ’ ಎಂದರು. ದಿಲ್ಲಿಗೆ ಹೋದದ್ದರ ಹಿಂದೆಯೇ ಈಶ್ವರಪ್ಪನವರು ಮಾತು ಬದಲಾಯಿಸು ವುದಕ್ಕೆ ಇದ್ದ ಕಾರಣವೇನು ಎಂಬುದನ್ನು ಅರಿತರೆ ಅವರ ಭಿನ್ನಮತದ ನಿಜ ಕಾರಣ ತಿಳಿಯುತ್ತದೆ. ಈ ಕಾರಣ ಯಾವತ್ತೂ ಬಯಲಾಗುವುದಿಲ್ಲ.

ತಾವು ಎತ್ತಿದ್ದ ಎರಡು ಪ್ರಶ್ನೆಗಳಲ್ಲಿ ಒಂದನ್ನು ಕೈಬಿಟ್ಟಿರುವುದರಿಂದ ಈಶ್ವರಪ್ಪನವರ ಕೆಲವು ಬೇಡಿಕೆಗಳನ್ನು ಬಿಜೆಪಿಯ ಹೈಕಮಾಂಡ್‌ ನೆರವೇರಿಸಿದೆ ಎಂದುಕೊಳ್ಳಬಹುದು. ಉಳಿದ ಬೇಡಿಕೆಗಳಿಗೆ ಮನ್ನಣೆ ಸಿಕ್ಕ ದಿನ ಅವರ ಭಿನ್ನಮತ ಸಂಪೂರ್ಣವಾಗಿ ಇಲ್ಲವಾಗುತ್ತದೆ. `ಆಪರೇಷನ್‌ ಕಮಲ’ವನ್ನು ರಾಜಕೀಯ ಧ್ರುವೀಕರಣ ಎಂದು ಸಮರ್ಥಿಸಿಕೊಂಡಂತೆ ತಮ್ಮ ಭಿನ್ನಮತ ಶಮನವಾದದ್ದನ್ನು ಅವರು `ಭಿನ್ನಮತದ ದ್ರವೀಕರಣ’ ಎಂದು ಸಮರ್ಥಿಸಿಕೊಳ್ಳಲೂ ಬಹುದು. ಈ ಮಧ್ಯೆ ಎಲ್ಲರೂ ಮರೆತದ್ದು ರೆಡ್ಡಿ ಸೋದರರಿಂದ ಆರಂಭಿಸಿ ಆಪರೇಷನ್‌ ಕಮಲದ ಮೂಲಕ ಪಕ್ಷಕ್ಕೆ ಬಂದವರಿಂದ ಪಕ್ಷದ ಕೇಡರ್‌ಗಳಿಗೆ ಆದ ಅನ್ಯಾಯ. ಈ ಪ್ರಶ್ನೆ ಈಗ ಸುದ್ದಿ ಮಾಡುತ್ತಿರುವ ಭಿನ್ನಮತೀಯರಿಗೂ ಮುಖ್ಯವಾಗಿಲ್ಲ. ಏಕೆಂದರೆ ಭಿನ್ನಮತದಲ್ಲೂ ರೆಡ್ಡಿ ಸೋದರರಿಗೆ ಪಾಲಿದೆ!

ಇನ್ನು ನೈತಿಕತೆಯ ಪ್ರಶ್ನೆ. ಈಶ್ವರಪ್ಪನವರು ಈ ಪ್ರಶ್ನೆಗಳನ್ನು ಎತ್ತುವ ಮೊದಲೇ ಈ ಪ್ರಶ್ನೆಗಳು ಇದ್ದುದರಿಂದ ಭಿನ್ನಮತ ಶಮನದ ನಂತರವೂ ಅವು ಉಳಿದಿರುತ್ತವೆ. ನಿವ್ವಳ ನಷ್ಟ ಯಾರಿಗೆ ಎಂಬ ಪ್ರಶ್ನೆಯ ಉತ್ತರವಂತೂ ಜನರಿಗೆ ತಿಳಿದೇ ಇದೆ!