
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ ಸಮೀಪ ಒಂದು ಸ್ಮಶಾನವಿತ್ತು. ಇದನ್ನು ಸರ್ಕಾರಿ ದಾಖಲೆಗಳೂ ಸ್ಮಶಾನವೆಂದೇ ಗುರುತಿಸಿದ್ದೆವು. ಜ್ಞಾನಭಾರತಿ ಕ್ಯಾಂಪಸ್ ಆದ ಮೇಲೆ ಅದರ ಸುತ್ತಮುತ್ತೆಲ್ಲಾ ಮನೆಗಳು ಬಂದವು. ಅಲ್ಲಿ ಸ್ಮಶಾನ ಬೇಡ ಎಂಬ ಮಾತುಗಳು ಕೇಳಿಬಂದವು. ಅದನ್ನು ಬೇರೆಯೇ ಸಾರ್ವಜನಿಕ ಉದ್ದೇಶಕ್ಕೆ ಬಳಸುವ ಉಪಾಯಗಳ ಕುರಿತು ಸಲಹೆಗಳೂ ಬರತೊಡಗಿದವು.
ಈ ಹೊತ್ತಿಗೆ ಸರಿಯಾಗಿ ಇಬ್ಬರು ಅಲ್ಲಿರುವ ಸ್ಮಶಾನ ಭೂಮಿ ತಮ್ಮದು ಎಂದರು. ಇಬ್ಬರ ಬಳಿಯೂ ಸ್ಮಶಾನ ಅವರ ಹೆಸರಿನಲ್ಲಿ ಇರುವುದಕ್ಕೆ ದಾಖಲೆಯಾಗಿ ಪಹಣಿ ಅಥವಾ ಆರ್‌ಟಿಸಿಗಳಿದ್ದವು. ಇಬ್ಬರೂ ಈ ಭೂಮಿಗೆ ತಮಗೇ ಸೇರಬೇಕೆಂದು ನ್ಯಾಯಾಲಯಕ್ಕೆ ಹೋದರು. ಕೊನೆಗೆ ಇಬ್ಬರೂ ರಾಜೀ ಮಾಡಿಕೊಳ್ಳಲು ತೀರ್ಮಾನಿಸಿ ಇರುವ ಭೂಮಿಯನ್ನು ಸಮಪಾಲಾಗಿ ಹಂಚಿಕೊಳ್ಳಲು ಒಪ್ಪಿದರು. ನ್ಯಾಯಾಲಯ ಸಮಸ್ಯೆ ಬಗೆಹರಿಯಿತಲ್ಲ ಎಂದು ಕೇಸನ್ನು ವಜಾ ಮಾಡಿ ಕಂದಾಯ ಇಲಾಖೆಗೆ ಹೋಗಿ ನಿಮ್ಮ ನಿಮ್ಮ ಪಾಲನ್ನು ನಿಮ್ಮ ನಿಮ್ಮ ಹೆಸರಿಗೆ ಮಾಡಿಸಿಕೊಳ್ಳಿ ಎಂದಿತು.
ಈ ನ್ಯಾಯಾಲಯದ ಆದೇಶವನ್ನು ಹಿಡಿದುಕೊಂಡು ಕಂದಾಯ ಇಲಾಖೆಗೆ ಹೋದ ಇಬ್ಬರೂ ಜಮೀನನ್ನು ತಮ್ಮಿಬ್ಬರ ಹೆಸರಿಗೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದರು. ಕಂದಾಯ ಇಲಾಖೆಯ ದಾಖಲೆಗಳಲ್ಲಿ ಈ ಭೂಮಿ ಸ್ಮಶಾನವಾಗಿದ್ದರಿಂದ ತಹಶೀಲ್ದಾರ್ ಹಾಗೆ ಮಾಡಲು ಸಾಧ್ಯವಿಲ್ಲ ಎಂದರು. ಈ ಇಬ್ಬರೂ ಮಾಲೀಕರು ತಹಶೀಲ್ದಾರ್ ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿದರು. ತಹಶೀಲ್ದಾರ್ ತಮ್ಮ ಪರವಾಗಿ ಖಾಸಗಿ ವಕೀಲರನ್ನಿಟ್ಟುಕೊಂಡು ಸರ್ಕಾರಿ ಭೂಮಿಯನ್ನು ಉಳಿಸಲು ಹೋರಾಟ ಮಾಡಬೇಕಾಯಿತು.
ಈ ನಡುವೆ ಬ್ಯಾಂಕ್ ಒಂದರ ಉದ್ಯೋಗಿಗಳು ಗೃಹ ನಿರ್ಮಾಣ ಸಹಕಾರ ಸಂಘವೊಂದನ್ನು ಸ್ಥಾಪಿಸಿ ಲೇಔಟ್ ಮಾಡಲು ಸ್ಥಳ ಬೇಕೆಂದು ಕೇಳಿದರು. ಇದನ್ನು ಒಪ್ಪಿದ ಸರ್ಕಾರ ಇದೇ ಸ್ಮಶಾನ ಭೂಮಿಯನ್ನು ಅವರಿಗೆ ಮಂಜೂರು ಮಾಡಿತ್ತು. ಅವರು ತಮಗೆ ಸರ್ಕಾರ ಮಂಜೂರು ಮಾಡಿದ ಭೂಮಿಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ.
ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಸರ್ಕಾರೀ ಜಮೀನು ನುಂಗುವಿಕೆ ಹೇಗೆ ನಡೆಯುತ್ತಿದೆ ಎಂಬುದಕ್ಕೆ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಾಲಸುಬ್ರಹ್ಮಣ್ಯಂ ಅವರು ನೀಡಿದ ಉದಾಹರಣೆಯಿದು. ಅವರ ನೇತೃತ್ವದ ತಂಡ ನಡೆಸಿದ ತನಿಖೆಯಲ್ಲಿ ಇಂಥ ಹಲವಾರು ಪ್ರಕರಣಗಳು ರಾಜ್ಯಾದ್ಯಂತ ಪತ್ತೆಯಾಗಿವೆ. ಇವೆಲ್ಲವೂ ನಮ್ಮಲ್ಲಿ ಭೂದಾಖಲೆಗಳನ್ನು ನಿರ್ವಹಿಸುವ ಅವೈಜ್ಞಾನಿಕ ವಿಧಾನದತ್ತಲೇ ಬೊಟ್ಟು ಮಾಡುತ್ತಿವೆ.
ಪಹಣಿ ಅಥವಾ ಆರ್‌ಟಿಸಿ ಹೊಂದಿರುವವನಿಗೆ ಭೂಮಿಯ ಮೇಲೆ Presumptive right ಎಂದು ಕರೆಯಲಾಗುವ ಹಕ್ಕಿರುತ್ತದೆ. ಅದನ್ನು ಈ ಹಕ್ಕನ್ನು ಯಾರಾದರೂ ಪ್ರಶ್ನಿಸುವ ತನಕ ಅವನ ಹಕ್ಕು ಅಬಾಧಿತವಾಗಿರುತ್ತದೆ. ಯಾರಾದರೂ ಪ್ರಶ್ನಿಸಿದರೆ ಮತ್ತೆ ಅದು ನ್ಯಾಯಾದಾನ ವ್ಯವಸ್ಥೆಯ ಮೂಲಕ ನಿರ್ಧಾರವಾಗಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಅನೇಕ ತೀರ್ಪುಗಳು ಇಲ್ಲಿವೆ. ಸರ್ಕಾರಿ ಭೂಮಿಯನ್ನು ಕಬಳಿಸುವವರು ಈ ತಂತ್ರವನ್ನು ಬಳಸುತ್ತಾರೆ. ಕೈಬರಹದಲ್ಲಿದ್ದ ಕಾಲದ ಪಾಣಿಯೊಂದರಲ್ಲಿ ತಮ್ಮ ಹೆಸರನ್ನು ಸೇರಿಸಿ ದಾಖಲೆ ಸೃಷ್ಟಿಸುವುದು. ಈ ಜಮೀನಿಗೆ ಸಂಬಂಧಿಸಿದಂತೆ ಒಂದು ವಿವಾದವನ್ನು ಹುಟ್ಟುಹಾಕುವುದು. ಸಾಮಾನ್ಯವಾಗಿ ಇದಕ್ಕೆ ಅನುಸರಿಸಲಾಗುವ ತಂತ್ರವೆಂದರೆ ಇಬ್ಬರು ಒಂದೇ ಜಮೀನಿನ ದಾಖಲೆಗಳನ್ನು ಸೃಷ್ಟಿಸಿಕೊಂಡು ಜಮೀನು ತಮ್ಮದೆಂದು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದು. ಒಂದು ಹಂತದಲ್ಲಿ ರಾಜಿಗೆ ಸಿದ್ಧವೆಂದು ಅದೇ ಜಮೀನನ್ನು ಪಾಲು ಮಾಡಿಕೊಳ್ಳುವುದು. ಇಡೀ ಪ್ರಕ್ರಿಯೆಯಲ್ಲಿ ಸರ್ಕಾರಿ ಜಮೀನೊಂದು ನ್ಯಾಯಾಲಯದ ಆದೇಶದ ಪ್ರಕಾರವೇ ಖಾಸಗಿಯವರ ಕೈ ಸೇರುತ್ತದೆ.
ವಿ.ಬಾಲಸುಬ್ರಹ್ಮಣ್ಯನ್ ಅವರ ನೇತೃತ್ವದ ಟಾಸ್ಕ್ ಫೋರ್ಸ್ ಇಂಥ ಅನೇಕ ಪ್ರಕರಣಗಳ ಕುರಿತಂತೆ ಹೇಳುತ್ತದೆ. ಆದರೆ ಈ ಬಗ್ಗೆ ಕರ್ನಾಟಕ ಸರ್ಕಾರ ಈ ತನಕ ಎಚ್ಚೆತ್ತುಕೊಂಡಂತೆ ಕಾಣಿಸುವುದಿಲ್ಲ. ಭೂಗಳ್ಳರಲ್ಲಿ ಎಲ್ಲಾ ಪಕ್ಷದ ರಾಜಕಾರಣಿಗಳೂ ಇರುವುದರಿಂದ ಯಾರಿಗೂ ಈ ವರದಿಯನ್ನು ಒಪ್ಪಿಕೊಳ್ಳುವುದು ಬೇಕಿಲ್ಲ. ಸ್ವತಃ ಈ ಟಾಸ್ಕ್ ಫೋರ್ಸ್‌ನ ಅಧ್ಯಕ್ಷರೇ ಇದನ್ನು ಮುದ್ರಿಸಿ ಹಂಚಿದ್ದಾರೆ. ಈ ವರದಿಯನ್ನು ನೊಡಲು ಇಷ್ಟವಿರುವವರು ಈ ಲಿಂಕ್‌ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.