ಇಂಗ್ಲಿಷ್‌ನಲ್ಲಿ ‘ಟ್ರಾಲ್’ (Troll) ಎನ್ನುವ ಪದವೊಂದಿದೆ. ಈ ಪದದ ಮೂಲ ಉತ್ತರ ಯೂರೋಪಿನ ಜಾನಪದದಲ್ಲಿದೆಯಂತೆ. ಟ್ರಾಲ್ ಎಂದರೆ ‘ಗವಿಯಲ್ಲಿ ವಾಸಿಸುವ ರಕ್ಕಸ’ ಎಂಬ ಅರ್ಥದಲ್ಲಿ ಅಲ್ಲಿ ಬಳಕೆಯಾಗಿದೆ. ಇದು ಇಂಗ್ಲಿಷ್‌ನಲ್ಲಿ ಬಳಕೆಯಾಗುತ್ತಿದ್ದದ್ದು ಹೇಳಿದ್ದನ್ನೇ ಹೇಳುವ ಪ್ರವೃತ್ತಿ ಎಂಬುದನ್ನು ವಿವರಿಸುವುದಕ್ಕೆ. ಇಂಟರ್ನೆಟ್ ಬಂದ ಮೇಲೆ ಇದಕ್ಕೆ ಹಳೆಯ ಅರ್ಥದ ಜೊತೆಗೆ ಹೊಸ ಅರ್ಥವೂ ಸೇರಿಕೊಂಡ ಬೇರೆಯೇ ಆದ ಅರ್ಥವೊಂದು ಪ್ರಾಪ್ತವಾಯಿತು.

ಸಾಮಾಜಿಕ ಜಾಲತಾಣಗಳು ಮತ್ತು ಚರ್ಚಾ ವೇದಿಕೆಗಳಲ್ಲಿ ಸುಖಾ ಸುಮ್ಮನೆ ಕೆಣಕುವ, ಜಗಳ ತೆಗೆಯುವ, ಅತಾರ್ಕಿಕ ವಾದಗಳನ್ನು ಮಂಡಿಸುವ ಮತ್ತು ಪ್ರಚೋದನಕಾರಿಯಾದ ಸಂದೇಶಗಳನ್ನು ಪ್ರಕಟಿಸುವವರನ್ನು ‘ಟ್ರಾಲ್’ ಎಂದು ಕರೆಯುತ್ತಾರೆ. ಫೇಸ್‌ಬುಕ್, ಟ್ವಿಟ್ಟರ್‌ನಂಥ ಸಾಮಾಜಿಕ ಮಾಧ್ಯಮಗಳು ಹುಟ್ಟಿಕೊಳ್ಳುವುದಕ್ಕಿಂತ ಮುಂಚಿನಿಂದಲೂ ‘ಟ್ರಾಲ್’ಗಳ ಹಾವಳಿ ಇತ್ತು. ಸಾಮಾಜಿಕ ಜಾಲತಾಣಗಳ ಆದಿಮ ರೂಪವಾದ ‘ನ್ಯೂಸ್ ಗ್ರೂಪ್’ಗಳಲ್ಲಿ ಈ ಬಗೆಯ ಪ್ರವೃತ್ತಿಯನ್ನು ಕಾಣಬಹುದಿತ್ತು. ಇವರದ್ದೊಂದು ಬಗೆಯ ಆನ್‌ಲೈನ್ ಗೂಂಡಾಗಿರಿ. ತಮ್ಮ ಮೂಗಿನ ನೇರಕ್ಕೆ ಇಲ್ಲದ ಎಲ್ಲವನ್ನೂ ಟೀಕಿಸುವ, ದಾಳಿ ಮಾಡುವ ಮನಃಸ್ಥಿತಿ ಇವರದ್ದು. ಆಫ್‌ಲೈನ್ ಜಗತ್ತಿನಲ್ಲಿ ಗೂಂಡಾಗಳು ಏನನ್ನು ಮಾಡುತ್ತಾರೋ ಅದನ್ನು ಆನ್‌ಲೈನ್ ಜಗತ್ತಿನಲ್ಲಿ ಟ್ರಾಲ್‌ಗಳು ಮಾಡುತ್ತಾರೆ.

ತನ್ನ ತೋಳ್ಬಲವನ್ನು ಕೆಟ್ಟ ಉದ್ದೇಶಗಳಿಗಾಗಿ ಒಬ್ಬ ಅಥವಾ ಒಬ್ಬಳು ಬಳಸುತ್ತಿದ್ದರೆ ಅದನ್ನು ನಿರ್ವಹಿಸುವುದು ಸುಲಭ. ಸಮುದಾಯವೇ ಅವರಿಗೊಂದು ಪಾಠ ಕಲಿಸಿಬಿಡುತ್ತದೆ. ಪೊಲೀಸರೂ ಇಂಥವರ ವಿರುದ್ಧ ಕಠಿಣವಾಗಿಯೇ ವರ್ತಿಸುತ್ತಾರೆ. ಆದರೆ ರೌಡಿಗಳು ಸಂಘಟಿತರಾಗಿ ಕೆಲಸ ಮಾಡಲು ಆರಂಭಿಸಿದರೆ ಸಮಸ್ಯೆಯನ್ನು ಪರಿಹರಿಸುವುದು ಬಹಳ ಕಷ್ಟವಾಗಿಬಿಡುತ್ತದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕಾದ ವ್ಯವಸ್ಥೆಯ ಕೆಲವರು ತಮ್ಮ ಹಿತಾಸಕ್ತಿಗಳನ್ನು ಕಾಪಾಡುವುದಕ್ಕಾಗಿ ಇವರನ್ನು ಬಳಸತೊಡಗಿದರೆ ಸಮಸ್ಯೆ ಇನ್ನಷ್ಟು ಸಂಕೀರ್ಣವಾಗುತ್ತದೆ. ಕಾನೂನು ಉಲ್ಲಂಘಿಸುವುದಕ್ಕೆ ರೌಡಿಗಳಿಗೊಂದು ರಹದಾರಿ ದೊರೆತಂತಾಗುತ್ತದೆ. ಇವರ ಶಕ್ತಿ ಎಲ್ಲೆಡೆಯೂ ವಿಜೃಂಭಿಸಲು ಆರಂಭಿಸುತ್ತದೆ. ವ್ಯಾಪಾರ, ರಾಜಕಾರಣ ಮತ್ತು ಆಡಳಿತದಂಥ ಕ್ಷೇತ್ರಗಳಲ್ಲಿ ಸುಪ್ತವಾದ ಮಾರ್ಪಾಡುಗಳು ಸಂಭವಿಸಿ ಅವು ಜನಸಾಮಾನ್ಯನ ಮೇಲೆ ಪರಿಣಾಮ ಬೀರುತ್ತದೆ.

ಇಂಥದ್ದೇ ಒಂದು ಸ್ಥಿತಿ ಈಗ ಆನ್‌ಲೈನ್ ಜಗತ್ತಿನಲ್ಲಿಯೂ ನಿರ್ಮಾಣವಾಗಿದೆ. ಟ್ರಾಲಿಂಗ್ ಎಂಬ ಗೂಂಡಾಗಿರಿ ಅಂತರ್ಜಾಲದ ಸ್ವಾಸ್ಥ್ಯವನ್ನು ಬೇರೆ ಬೇರೆ ರೀತಿಯಲ್ಲಿ ಹಾಳುಗೆಡವುತ್ತಿದೆ. ಒಂದು ಕಾಲದಲ್ಲಿ ನಿರ್ದಿಷ್ಟ ಮಾನಸಿಕ ಅಸಮತೋಲನವಿರುವ ವ್ಯಕ್ತಿಗಳ ಪ್ರವೃತ್ತಿ ಎಂದು ಭಾವಿಸಲಾಗಿದ್ದ ‘ಟ್ರಾಲಿಂಗ್’ ಈಗ ವ್ಯವಸ್ಥಿತ ಮಾಫಿಯಾ ಆಗಿ ಬದಲಾಗಿದೆ. ಭೂಗತ ಜಗತ್ತಿನ ವ್ಯವಹಾರಗಳಂತೆಯೇ ‘ಟ್ರಾಲ್’ ಪ್ರವೃತ್ತಿಯನ್ನೇ ಬಂಡವಾಳವಾಗಿಸಿಕೊಂಡಿರುವ ವ್ಯಾಪಾರವೂ ಆರಂಭವಾಗಿದೆ. ಕೆಟ್ಟ ಬೈಗುಳಗಳು, ಚಾರಿತ್ರ್ಯ ಹನನದಿಂದ ಆರಂಭಿಸಿ ನಿರ್ದಿಷ್ಟ ರಾಜಕೀಯ ಒಲವಿನ ಭ್ರಮೆ ಮೂಡಿಸುವ ಕ್ರಿಯೆಯ ತನಕವೂ ಈ ವ್ಯಾಪಾರ ಹರಡಿಕೊಂಡಿದೆ.

ಈ ವ್ಯಾಪಾರದ ರಾಜಕೀಯ ಮುಖವನ್ನು ಅನಾವರಣಗೊಳಿಸುವ ಪುಸ್ತಕವೊಂದು ಇತ್ತೀಚೆಗೆ ಬಿಡುಗಡೆಯಾಗಿದೆ. ನವದೆಹಲಿಯ ಜಗ್ಗರ್‌ನಾಟ್ ಪ್ರಕಟಿಸಿರುವ ಈ ಪುಸ್ತಕದ ಕರ್ತೃ ಪತ್ರಕರ್ತೆ ಸ್ವಾತಿ ಚತುರ್ವೇದಿ. ಬಿಜೆಪಿಯ ಡಿಜಿಟಲ್ ಸೇನೆಯ ನಿಗೂಢ ಒಳಗತ್ತಿನ ಅನಾವರಣ ಎಂದು ಹೇಳಿಕೊಳ್ಳುವ ಈ ಪುಸ್ತಕ ರಾಜಕೀಯ ಪ್ರೇರಿತ ಟ್ರಾಲಿಂಗ್‌ನ ವ್ಯವಸ್ಥಿತ ಸ್ವರೂಪವನ್ನು ತೆರೆದಿಡುತ್ತದೆ.

ಸ್ವಾತಿ ಸ್ವತಃ ‘ಬಲಪಂಥೀಯ ಟ್ರಾಲ್‌’ಗಳ ದಾಳಿಯ ಬಲಿಪಶು. ತಮ್ಮ ಮೇಲೆ ಟ್ವೀಟ್ ದಾಳಿ ನಡೆಸಿದ ಟ್ರಾಲ್ ಮೇಲೆ ಪೊಲೀಸ್ ಕೇಸನ್ನೂ ದಾಖಲಿಸಿದ್ದಾರೆ. ‘ಟ್ರಾಲ್’ಗಳ ಕುರಿತಂತೆ ಹೆಚ್ಚು ಆಳವಾಗಿ ತಿಳಿದುಕೊಳ್ಳುವುದಕ್ಕೆ ಒಂದರ್ಥದಲ್ಲಿ ಈ ಘಟನೆಯೇ ಪ್ರೇರಣೆಯಾಗಿದೆ ಎನ್ನಬಹುದು. ಎರಡು ವರ್ಷಗಳಷ್ಟು ದೀರ್ಘ ಕಾಲ ಟ್ವಿಟ್ಟರ್‌ನಲ್ಲಿ ನಡೆಯುತ್ತಿರುವ ಬಲಪಂಥೀಯ ಟ್ರಾಲಿಂಗ್‌ ಅನ್ನು ಪರಿಶೀಲಿಸಿರುವ ಲೇಖಕಿ ಓದುಗರ ಮುಂದಿಡುತ್ತಿರುವ ಚಿತ್ರಣ ಅಭಿವ್ಯಕ್ತಿ ಸ್ವಾತಂತ್ರ್ಯ, ರಾಜಕೀಯ ಸಂವಹನಕ್ಕೆ ಸಂಬಂಧಿಸಿದ ಹಲವು ಪ್ರಶ್ನೆಗಳಿಗೆ ಕಾರಣವಾಗುತ್ತಿದೆ.

ಭಾರತದ ಹೆಚ್ಚಿನ ಎಲ್ಲಾ ರಾಜಕೀಯ ಪಕ್ಷಗಳೂ ಒಂದು ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನ ಘಟಕ (ಐಸಿಟಿ ಸೆಲ್) ಹೊಂದಿವೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಿಟ್ಟದ್ದು ಬಿಜೆಪಿ. ಇಂಟರ್ನೆಟ್‌ನ ಆರಂಭಿಕ ಹಂತದಲ್ಲಿಯೇ ಅದರ ಶಕ್ತಿಯನ್ನು ಅರಿತು ಕಾರ್ಯಪ್ರವೃತ್ತವಾದ ಪಕ್ಷವದು. ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಕ್ರಿಯಾಶೀಲರಾಗಿರುವ ರಾಜಕಾರಣಿಗಳಲ್ಲಿ ಹೆಚ್ಚಿನವರು ಬಿಜೆಪಿಗೆ ಸೇರಿದವರೇ. ಪ್ರಧಾನಿ ನರೇಂದ್ರ ಮೋದಿ ದಾಖಲೆ ಸಂಖ್ಯೆಯ ಟ್ವಿಟ್ಟರ್ ಹಿಂಬಾಲಕರನ್ನು ಹೊಂದಿದ್ದಾರೆ. ಸುಷ್ಮಾ ಸ್ವರಾಜ್ ಮತ್ತು ಸುರೇಶ್ ಪ್ರಭು ಅವರು ಟ್ವಿಟ್ಟರ್ ಮೂಲಕ ಬಂದ ವಿನಂತಿಗಳಿಗೆ ಚುರುಕಾಗಿ ಸ್ಪಂದಿಸುತ್ತಾರೆ. ಇವರ ಕ್ರಿಯಾಶೀಲತೆ ಪ್ರಾಣಗಳನ್ನು ಉಳಿಸುವುದರಿಂದ ಆರಂಭಿಸಿ ಸಂಕೀರ್ಣ ಸಮಸ್ಯೆಗಳನ್ನು ಬಗೆಹರಿಸುವ ತನಕವೂ ಧನಾತ್ಮಕ ಪರಿಣಾಮ ಬೀರಿದೆ.

ಈ ಸಕಾರಾತ್ಮಕ ಆಯಾಮದ ನೆರಳಿನಲ್ಲೇ ನಿಗೂಢವಾದ ‘ಆನ್‌ಲೈನ್ ಗೂಂಡಾಗಿರಿ’ಯೂ ಹೇಗೆ ನೆಲೆ ಕಂಡುಕೊಂಡಿದೆ ಎಂಬುದನ್ನು ಸ್ವಾತಿ ಅವರ ಪುಸ್ತಕ ವಿವರಿಸುತ್ತದೆ. ಇದರಲ್ಲಿ ಬಹುಮುಖ್ಯವಾಗಿ ಪ್ರಸ್ತಾಪವಾಗಿರುವುದು ಸಾಧ್ವಿ ಖೋಸ್ಲಾ ಎಂಬ  ಬಿಜೆಪಿ ಮಾಹಿತಿ ತಂತ್ರಜ್ಞಾನ ಘಟಕದ ಮಾಜಿ ಕಾರ್ಯಕರ್ತೆಯ ಹೇಳಿಕೆಗಳು. ಈಕೆಯನ್ನು ಹೊರತು ಪಡಿಸಿದಂತೆ ಲೇಖಕಿಯ ಜೊತೆ ಮಾತನಾಡಿದ ಯಾವುದೇ ‘ಟ್ರಾಲ್’ಗಳು ತಮ್ಮ ಗುರುತನ್ನು ಬಹಿರಂಗ ಪಡಿಸಲು ಒಪ್ಪಿಕೊಂಡಿಲ್ಲ. ಖೋಸ್ಲಾ ಬಹಿರಂಗ ಪಡಿಸಿರುವ ವಿಚಾರಗಳು ಮಾತ್ರ ನಿಜಕ್ಕೂ ಆಘಾತಕಾರಿ. ನಟ ಅಮೀರ್‌ಖಾನ್ ತನ್ನ ಕುಟುಂಬದ ಸುರಕ್ಷತೆಯ  ಕುರಿತಂತೆ ಆಡಿದ  ಮಾತುಗಳನ್ನೇ ನೆಪವಾಗಿರಿಸಿಕೊಂಡು ಅವರ ಮೇಲೆ ನಡೆದ ‘ಟ್ರಾಲ್’ದಾಳಿಯ ಕುರಿತು ನಮಗೆಲ್ಲಾ ಗೊತ್ತು. ಇದೇ ಸಂದರ್ಭದಲ್ಲಿ ಅವರು ಬ್ರಾಂಡ್ ಅಂಬಾಸಿಡರ್ ಆಗಿದ್ದ ಸಂಸ್ಥೆಯ ಮೇಲೆ ಒತ್ತಡ ಹೇರುವ ತಂತ್ರವೂ ಬಹಿರಂಗವಾಗಿಯೇ ನಡೆಯಿತು. ಇದಕ್ಕೆ ಬಿಜೆಪಿಯ ಬೆಂಬಲವೂ ಇರಬಹುದೇನೋ ಅನ್ನಿಸುವಂತೆ ರಕ್ಷಣಾ ಸಚಿವರ ಮನೋಹರ್ ಪರಿಕ್ಕರ್ ಕೂಡಾ ಮಾತನಾಡಿದ್ದರು. ಆದರೆ ಇದನ್ನು ಬಿಜೆಪಿಯ ಸಾಮಾಜಿಕ ಮಾಧ್ಯಮಗಳನ್ನು ನಿರ್ವಹಿಸುವ ಘಟಕ ವ್ಯವಸ್ಥಿತವಾಗಿ ಮಾಡಿತು ಎಂಬುದು ಖೋಸ್ಲಾ ಹೇಳಿಕೆಗಳು ಬಹಿರಂಗ ಪಡಿಸುತ್ತಿವೆ.

ಅಮೀರ್ ಖಾನ್ ಬ್ರಾಂಡ್ ಅಂಬಾಸಿಡರ್ ಆಗಿದ್ದ ಆನ್‌ಲೈನ್ ಮಾರುಕಟ್ಟೆ ತಾಣದ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಅದಕ್ಕೆ ಕಡಿಮೆ ರೇಟಿಂಗ್ ಕೊಡುವುದು. ಬ್ರಾಂಡ್ ಅಂಬಾಸಿಡರ್ ಸ್ಥಾನದಿಂದ ಅಮೀರ್‌ಖಾನ್ ಕೈಬಿಡಿ ಎಂದು ಒತ್ತಾಯಿಸುವ ಆನ್‌ಲೈನ್ ಮನವಿ ಇತ್ಯಾದಿಗಳೆಲ್ಲವನ್ನೂ ಅರವಿಂದ್ ಗುಪ್ತ ಮುಖ್ಯಸ್ಥರಾಗಿರುವ ಬಿಜೆಪಿಯ ಸಾಮಾಜಿಕ ಜಾಲತಾಣ ಘಟಕದ ಮುಖಾಂತರವೇ ನಡೆಯಿತು ಎಂಬುದು ಖೋಸ್ಲಾ ಮಾತಿನ ಸಾರ.

ನವದೆಹಲಿಯನ್ನು ಕೇಂದ್ರವಾಗಿಟ್ಟು ಕಾರ್ಯನಿರ್ವಹಿಸುವ ಈ ಘಟಕ ‘’ಟೀಕೆ’ ಮತ್ತು ‘ಬೈಗುಳ’ಗಳ ಪಠ್ಯವನ್ನೂ ತನ್ನ ಕಾರ್ಯಕರ್ತರು ಮತ್ತು ಸಂಬಳ ಪಡೆಯುವ ‘ಕಾರ್ಯಕರ್ತ’ರಿಗೆ ವಾಟ್ಸ್ ಆಪ್ ಗುಂಪುಗಳ ಮೂಲಕ ಪೂರೈಸುವ ಬಗೆ ಇತ್ಯಾದಿಗಳನ್ನೂ ಖೋಸ್ಲಾ ವಿವರಿಸಿದ್ದಾರೆ. ಅಮೀರ್‌ಖಾನ್ ಹೇಳಿಕೆ ಟ್ವಿಟ್ಟರ್ ಬಳಕೆದಾರರಿಗೆ ಅಸಮಾಧಾನ ಹುಟ್ಟಿಸಿದೆ ಎಂಬ ಭಾವ ಬರುವಂಥ ವಾತಾವರಣವನ್ನು ಕೃತಕವಾಗಿ ಸೃಷ್ಟಿಸಲಾಗಿತ್ತು ಎಂಬುದು ಖೋಸ್ಲಾ ಅವರ ಹೇಳಿಕೆಯ ಸಾರ. ಇದು ಕೇವಲ ಒಂದು ಪ್ರಕರಣಕ್ಕೆ ಸೀಮಿತವಾದ ವಿಚಾರವೇನೂ ಅಲ್ಲ. ಕೆಲವು ಪತ್ರಕರ್ತರ ಮೇಲೂ ಇದೇ ಬಗೆಯ ನಿರ್ದಿಷ್ಟ ದಾಳಿಗಳನ್ನು ನಡೆದಿವೆ. ಇವುಗಳನ್ನೂ ಹೀಗೆಯೇ ಯೋಜಿಸಲಾಗಿತ್ತು ಎಂಬುದನ್ನು ವಿವರಿಸುವ ಭಾಗಗಳೂ ಪುಸ್ತಕದಲ್ಲಿವೆ.

ಟ್ವಿಟ್ಟರ್‌ನಲ್ಲಿ ಎರಡೂ ಕೋಟಿಗೂ ಅಧಿಕ ಹಿಂಬಾಲಕರಿರುವ ನರೇಂದ್ರಮೋದಿ 1375 ಮಂದಿಯನ್ನು ಹಿಂಬಾಲಿಸುತ್ತಾರೆ. ಕಳೆದ ವರ್ಷ ಹೋಳಿಯ ದಿನ ನಡೆದ ಡಾ.ಪಂಕಜ್ ನಾರಂಗ್ ಅವರ ಕೊಲೆಯಾದದ್ದು ಮುಸ್ಲಿಮರಿಂದ ಎಂಬ ಸುಳ್ಳು ಸುದ್ದಿಯೊಂದನ್ನು ಹರಡಲು ಪ್ರಯತ್ನಿಸಿದ್ದು ಪ್ರಧಾನಿಯವರೇ ಹಿಂಬಾಲಿಸುವ ರಾಹುಲ್ ರಾಜ್ ಎಂಬ ವ್ಯಕ್ತಿಯ ಟ್ವಿಟ್ಟರ್ ಖಾತೆ. ಪೊಲೀಸರ ಸಕಾಲಿಕ ಮಧ್ಯ ಪ್ರವೇಶದಿಂದ ಕೋಮು ಗಲಭೆಯೊಂದು ಸಂಭವಿಸಲಿಲ್ಲ.

ಮಹಿಳೆಯರನ್ನು ಅವಾಚ್ಯ ಶಬ್ದಗಳಲ್ಲಿ ನಿಂದಿಸುವ ಸುಳ್ಳು ಸುದ್ದಿಗಳನ್ನು ನಿಜವೆಂಬಂತೆ ಹರಡಲು ಪ್ರಯತ್ನಿಸುವ 26 ಟ್ವಿಟ್ಟರ್ ಖಾತೆಗಳಿವೆ ಎಂದು ಸ್ವಾತಿ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಈ ತನಕ ಪ್ರಧಾನಿ ಕಚೇರಿಯಿಂದ ಈ ಕುರಿತಂತೆ ಒಂದು ಸ್ಪಷ್ಟನೆ ಬಂದಿಲ್ಲ ಎಂಬುದು ‘ಐ ಆಮ್ ಟ್ರಾಲ್’ನ ಎತ್ತುತ್ತಿರುವ ಪ್ರಶ್ನೆಗಳ ಮಹತ್ವವನ್ನೂ ಹೇಳುತ್ತಿದೆ.

]]>