ಆಲ್ಪ್‌ಸ್  ಪರ್ವತ ಶ್ರೇಣಿ ಯೂರೋಪಿನ ಹಲವು ದೇಶಗಳನ್ನು ವ್ಯಾಪಿಸಿಕೊಂಡಿದೆ. ಆಸ್ಟ್ರಿಯಾಕ್ಕಂತೂ ಇದು ಪ್ರವಾಸಿ ಆಕರ್ಷಣೆಯೂ ಹೌದು. ಈ ಪರ್ವತ ಶ್ರೇಣಿಗಳ ತಪ್ಪಲಿನಲ್ಲಿ ನೂರು ವರ್ಷಕ್ಕೂ ಮಿಗಿಲಾದ ಇತಿಹಾಸವುಳ್ಳ ಹೊಟೇಲ್ ರೊಮ್ಯಾಂಟಿಕ್ ಸೀಹೊಟೆಲ್ ಜಾಗೆರ್ವಿಟ್‌ನಲ್ಲಿ ಕಳೆದ ತಿಂಗಳ ಕೊನೆಯ ವಾರದಲ್ಲಿ ವಿಚಿತ್ರ ಘಟನೆ ನಡೆಯಿತು. ಕೋಣೆಯೊಳಗಿದ್ದ ಯಾವ ಅತಿಥಿಗೂ ಬಾಗಿಲು ತೆರೆದು ಹೊರಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಸಹಜವಾಗಿಯೇ ಬಾಗಿಲು ತೆರೆಯಲಾಗುತ್ತಿಲ್ಲ ಎಂದು ಸ್ವಾಗತಕಾರರಿಗೆ ಫೋನಾಯಿಸಿದರೆ ಅವರಿಗೂ ಇದೇನಾಗುತ್ತಿದೆ ಎಂದು ತಿಳಿಯದ ಸ್ಥಿತಿ ಇತ್ತು. ಎಲೆಕ್ಟ್ರಾನಿಕ್ ಲಾಕಿಂಗ್ ವ್ಯವಸ್ಥೆಯಲ್ಲಿ ಏನಾದರೂ ತೊಂದರೆಯಾಗಿದೆಯೇ ಎಂದು ಪರಿಶೀಲಿಸಲು ಹೊರಟಾಗ ಹೊಟೇಲಿನ ಸಿಬ್ಬಂದಿಗೆ ತಮ್ಮ ಹೊಟೇಲಿನ ಅತಿಥಿಗಳನ್ನು ಹ್ಯಾಕರ್‌ಗಳ ಗುಂಪೊಂದು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದೆ ಎಂಬುದರ ಅರಿವಾಯಿತು.

180 ಕೋಣೆಗಳಲ್ಲಿ ಅತಿಥಿಗಳು ಬಂಧಿಗಳಾಗಿದ್ದಾರೆ. ಸಿಬ್ಬಂದಿ ಏನೇನು ಪ್ರಯತ್ನಿಸಿದರೂ ಬಾಗಿಲು ತೆರೆಯಲು ಸಾಧ್ಯವಾಗುತ್ತಿಲ್ಲ. ಶತಮಾನದಷ್ಟು ಹಳೆಯ ಹೊಟೇಲಿನ 180 ಕೋಣೆಗಳ ಬಾಗಿಲು ಒಡೆಯುವುದು ಎಲ್ಲಾ ಬಗೆಯಲ್ಲೂ ನಷ್ಟದ ಸಂಗತಿಯೇ. ದಾಳಿಯ ಮೂಲ ಎಲ್ಲಿನದ್ದೆಂದು ತಿಳಿಯುವ ಸಾಧ್ಯತೆಯಂತೂ ಹೊಟೇಲಿನಲ್ಲಿದ್ದ ತಾಂತ್ರಿಕ ಸಿಬ್ಬಂದಿಗೆ ಇರಲಿಲ್ಲ. ಪೊಲೀಸರಿಗೆ ದೂರು ಕೊಟ್ಟು ಅವರು ಮೂಲ ತಿಳಿದು ಕಾರ್ಯಾಚರಣೆಯನ್ನು ಪೂರ್ಣಗೊಳಿಸುವುದಕ್ಕೆ ಎಷ್ಟು ಸಮಯ ಬೇಕೆಂಬುದನ್ನು ಊಹಿಸಲೂ ಕಷ್ಟವಾಗುವ ಸ್ಥಿತಿ. ಎಲ್ಲದಕ್ಕಿಂತ ಹೆಚ್ಚಾಗಿ ಹೊಟೇಲಿನ ಅತಿಥಿಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡವರು ಕಣ್ಣಿಗೆ ಕಾಣಿಸುತ್ತಿರಲಿಲ್ಲ. ಹೊಟೇಲಿನ ಆವರಣದಲ್ಲಿ ದಾಳಿಕೋರರೂ ಇರಲಿಲ್ಲ.

ಅತಿಥಿಗಳನ್ನು ಒತ್ತೆಯಳುಗಳನ್ನಾಗಿಸಿದ್ದ ಹ್ಯಾಕರ್‌ಗಳು ಕೇಳಿದ ಒತ್ತೆ ಹಣ ಕೇವಲ 40 ಬಿಟ್ ಕಾಯಿನ್‌ಗಳು. ಇದು ಭಾರತೀಯ ರೂಪಾಯಿಗಳಲ್ಲಿ ಸುಮಾರು 27 ಲಕ್ಷ ರೂಪಾಯಿಗಳಷ್ಟಾಗುತ್ತದೆ. ಅತಿಥಿಗಳಿಗೆ ಆಗುತ್ತಿರುವ ತೊಂದರೆಯನ್ನು ಬಗೆಹರಿಸುವುದಕ್ಕೆ ತಮ್ಮ ಮುಂದೆ ಇರುವ ಉಪಾಯಗಳಲ್ಲಿ ಅತಿ ಕಡಿಮೆ ವೆಚ್ಚದ್ದು ಇದುವೇ ಎಂಬ ನಿರ್ಧಾರಕ್ಕೆ ಹೊಟೇಲಿನ ಆಡಳಿತ ವರ್ಗ ಬಂತು. 40 ಬಿಟ್ ಕಾಯಿನ್‌ಗಳನ್ನು ಕೊಟ್ಟು ಒತ್ತೆಯಾಳುಗಳನ್ನು ಬಿಡಿಸಿಕೊಂಡಿತು.

ಇದೇ ಬಗೆಯ ಸಣ್ಣ ಪುಟ್ಟ ದಾಳಿಗಳು ಬೇರೆ ಬೇರೆ ಬಗೆಯಲ್ಲಿ ಭಾರತದಲ್ಲಿಯೂ ನಡೆಯುತ್ತಿರುತ್ತವೆ. ಆದರೆ ಇಲ್ಲಿ ಒತ್ತೆಯಾಗಿ ಇರಿಸಿಕೊಳ್ಳುವುದು ವ್ಯಕ್ತಿಗಳನ್ನಲ್ಲ. ಕಂಪ್ಯೂಟರುಗಳನ್ನು ಅಥವಾ ಮೊಬೈಲ್ ಫೋನ್‌ನಂಥ ಸ್ಮಾರ್ಟ್ ಉಪಕರಣಗಳನ್ನು. ಯಾವುದೋ ವೆಬ್‌ಸೈಟ್ ನೋಡುತ್ತಿರುವಾಗ ಇದ್ದಕ್ಕಿದ್ದಂತೆಯೇ ಒಂದು ಸಂದೇಶ ನಿಮ್ಮೆದುರು ಪ್ರತ್ಯಕ್ಷವಾಗಿ ‘ನಿಮ್ಮ ಫೋನ್‌ನಲ್ಲಿ ವೈರಸ್‌ಗಳು ಸೇರಿಕೊಂಡಿವೆ. ತಕ್ಷಣ ಇದನ್ನು ಶುದ್ಧೀಕರಿಸಿ’ ಎನ್ನುತ್ತದೆ. ನೀವೇನಾದರು ‘ಯೆಸ್’, ‘ನೋ’ ಅಥವಾ ‘ಓಕೆ’ ಎಂಬ ಯಾವುದೇ ಗುಂಡಿಯನ್ನು ಒತ್ತಿದರೂ ಗುಂಡಿಗೆ ಬಿದ್ದಿರಿ ಎಂದರ್ಥ. ನಿಮ್ಮ ಕಂಪ್ಯೂಟರ್, ಟ್ಯಾಬ್ ಅಥವಾ ಮೊಬೈಲ್ ಫೋನ್ ಅನ್ನು ಶುದ್ಧೀಕರಿಸುವ ಭರವಸೆ ನೀಡುತ್ತಿದ್ದ ತಂತ್ರಾಂಶ ವಾಸ್ತವದಲ್ಲಿ ಒಂದು ಕುತಂತ್ರಾಂಶ. ಇದು ನಿಮ್ಮ ಉಪಕರಣವನ್ನು ಸಂಪೂರ್ಣವಾಗಿ ತನ್ನ ಹತೋಟಿಗೆ ತೆಗೆದುಕೊಂಡು ಬಿಡುತ್ತದೆ.

ಇದನ್ನು ನಿವಾರಿಸಿಕೊಳ್ಳುವುದಕ್ಕೆ ಹೊರಟಾಗ ಈ ‘ಕುತಂತ್ರಾಂಶ’ದ ನಿಜ ಸ್ವರೂಪ ನಿಮಗೆ ತಿಳಿಯುತ್ತದೆ. ಯಾವ ಕುತಂತ್ರಾಂಶ ನಾಶಕವನ್ನು ಬಳಸಿ ನಿವಾರಿಸಿಕೊಳ್ಳಲೂ ಸಾಧ್ಯವಾಗದಷ್ಟು ಮಟ್ಟಿಗೆ ಇದು ನಿಮ್ಮ ಉಪಕರಣದ ಮೇಲೆ ಹತೋಟಿ ಸಾಧಿಸಿರುತ್ತದೆ. ಇದನ್ನು ನಿವಾರಿಸಿಕೊಳ್ಳುವುದಕ್ಕೆ ಇರುವ ಏಕೈಕ ಮಾರ್ಗವೆಂದರೆ ಇದನ್ನು ತಯಾರಿಸಿದವರಿಗೆ ಒಂದಷ್ಟು ಹಣ ಕೊಡುವುದು ಮಾತ್ರ. ಈ ಬಗೆಯ ತಂತ್ರಾಂಶಗಳನ್ನು ಇಂಗ್ಲಿಷ್‌ನಲ್ಲಿ ರ್ಯಾನ್ಸಮ್‌ವೇರ್ ಎಂದು ಕರೆಯುತ್ತಾರೆ. ಆಸ್ಟ್ರಿಯಾದ ಹೊಟೇಲಿನ ಭದ್ರತಾ ವ್ಯವಸ್ಥೆಯನ್ನು ಬಾಧಿಸಿದ್ದೂ ಇಂಥದ್ದೇ ಒಂದು ತಂತ್ರಾಂಶ.

ಈ ಬಗೆಯ ಕುತಂತ್ರಾಂಶಗಳ ದಾಳಿಗೆ ತುತ್ತಾಗುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಐದನೇ ಸ್ಥಾನವಿದೆ ಎಂದು ಕ್ಯಾಸ್ಪರಸ್ಕಿ ಲ್ಯಾಬ್‌ನ ವರದಿ ಹೇಳುತ್ತದೆ. ಈ ಬಗೆಯ ದಾಳಿಗಳ ಬಲಿಪಶುಗಳಲ್ಲಿ ಹೆಚ್ಚಿನವರು ಮುಗ್ಧ ಕಂಪ್ಯೂಟರ್ ಮತ್ತು ಮೊಬೈಲ್ ಫೋನ್‌ ಬಳಕೆದಾರರೇ ಇದ್ದಾರೆ. ಸಾಂಸ್ಥಿಕ ಮಟ್ಟದಲ್ಲಿ ಇಂಥ ದಾಳಿಗಳು ನಡೆದಿದ್ದರೂ ಈ ಗುಟ್ಟು ಬಯಲಾಗದಂತೆ ನೋಡಿಕೊಳ್ಳಲಾಗುತ್ತದೆ. ಆಸ್ಟ್ರಿಯಾದಲ್ಲಿ ನಡೆದಂಥ ದಾಳಿಗಳಿನ್ನೂ ಇಲ್ಲಿ ನಡೆದಿಲ್ಲವಾದ್ದರಿಂದ ಈ ದಾಳಿಗಳ ಮಾಹಿತಿ ಸದ್ಯ ಕಾಣಿಸಿಕೊಳ್ಳುವುದು ಕುತಂತ್ರಾಂಶಗಳಿಗೆ ಪ್ರತಿ ತಂತ್ರಾಂಶಗಳನ್ನು ತಯಾರಿಸುವ ಕಂಪೆನಿಗಳ ತ್ರೈಮಾಸಿಕ ವರದಿಗಳಲ್ಲಿ ಮಾತ್ರ.

ಈ ಕುತಂತ್ರಾಂಶ ದಾಳಿಯ ಕಾಲಘಟ್ಟದಲ್ಲಿ ನಮ್ಮ ಸರ್ಕಾರಿ ವೆಬ್‌ಸೈಟುಗಳು ಎಷ್ಟು ಭದ್ರವಾಗಿವೆ? ಈ ಪ್ರಶ್ನೆಗಿರುವ ಉತ್ತರವನ್ನು ಒಂದು ವಾರದ ಹಿಂದಷ್ಟೇ ಕೇಂದ್ರ ಗೃಹ ಸಚಿವಾಲಯ ನೀಡಿದೆ. 2016ರಲ್ಲಿ ದಿನ ಬಿಟ್ಟು ದಿನದ ಆವರ್ತನೆಯಲ್ಲಿ ಸರ್ಕಾರಿ ವೆಬ್‌ಸೈಟ್‌ಗಳ ಮೇಲೆ ಹ್ಯಾಕರ್‌ಗಳ ದಾಳಿ ನಡೆದಿದೆ. ಒಂದು ವರ್ಷದ ಅವಧಿಯಲ್ಲಿ 199 ಸರ್ಕಾರಿ ವೆಬ್‌ಸೈಟ್‌ಗಳ ಮೇಲೆ ಹ್ಯಾಕರ್ ದಾಳಿ ನಡೆದಿದೆ. 2013ರಲ್ಲಿ 189 ಸೈಟ್‌ಗಳ ಮೇಲೆ ದಾಳಿ ನಡೆದಿದ್ದರೆ 2014ರಲ್ಲಿ ಈ ಸಂಖ್ಯೆ 165ಕ್ಕೆ ಇಳಿದಿತ್ತು. 2016ರಲ್ಲಿ ಮತ್ತೆ ಇದು 199ಕ್ಕೆ ಏರಿದೆ. ಅಂದ ಹಾಗೆ ಈ ಎಲ್ಲಾ ಸರ್ಕಾರಿ ವೆಬ್‌ಸೈಟ್‌ಗಳನ್ನು  ಸರ್ಕಾರಿ ಸ್ವಾಮ್ಯದ ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್‌ ನಿರ್ವಹಿಸುತ್ತದೆ.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ದಾಳಿಗೆ ಒಳಗಾದ ವೆಬ್‌ಸೈಟ್‌ಗಳಲ್ಲಿ ಬಹಳ ಮುಖ್ಯವಾದುದು ರೈಲು ಟಿಕೆಟ್ ಕಾದಿರಿಸಲು ಸಾರ್ವಜನಿಕರು ಬಳಸುವ ವೆಬ್‌ಸೈಟ್ (ಐಆರ್‌ಸಿಟಿಸಿ). ಇಲ್ಲಿಂದ ಒಂದು ಕೋಟಿ ಗ್ರಾಹಕರ ವೈಯಕ್ತಿಕ ವಿವರಗಳ ಸೋರಿಕೆಯಾಗಿರಬಹುದು ಎಂದು ಅಧಿಕಾರಿಗಳು ಸಂಶಯಿಸಿದ್ದರು. ಈ ಸೋರಿಕೆಯ ಕುರಿತಂತೆ ಹೆಚ್ಚಿನ ಮಾಹಿತಿಗಳು ಈ ತನಕ ಲಭ್ಯವಿಲ್ಲ. ಈ ವರ್ಷದ ಮೊದಲ ದಿನದಂದೇ ನ್ಯಾಷನ್ ಸೆಕ್ಯುರಿಟಿ ಗಾರ್ಡ್ (ಎನ್‌ಎಸ್‌ಜಿ) ವೆಬ್‌ಸೈಟ್‌ ಮೇಲೆ ಹ್ಯಾಕರ್‌ಗಳು ದಾಳಿ ನಡೆಸಿ ವಿರೂಪಗೊಳಿಸಿದ್ದರು. ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಗಳನ್ನು ನಡೆಸುವ ಎನ್‌ಎಸ್‌ಜಿಯ ಸೈಟ್‌ನಿಂದ ಆರಂಭಿಸಿ ಕೋಟ್ಯಂತರ ಗ್ರಾಹಕರ ವಿವರಗಳಿರುವ ಐಆರ್‌ಸಿಟಿ ವೆಬ್‌ಸೈಟ್ ತನಕ ಎಲ್ಲವೂ ಹ್ಯಾಕರ್‌ಗಳ ಕೈಚಳಕಕ್ಕೆ ತಡೆಯೊಡ್ಡುವುದಿಲ್ಲ ಎಂಬುದು ನಮ್ಮ ಇ–ಆಡಳಿತ ವ್ಯವಸ್ಥೆಯ ದಕ್ಷತೆಗೆ ಹಿಡಿದ ಕನ್ನಡಿ.

ಭಾರತದ ಸರ್ಕಾರಿ ವೆಬ್‌ಸೈಟ್‌ಗಳ ಮೇಲೆ ಹ್ಯಾಕರ್‌ಗಳು ಸುಲಭದಲ್ಲಿ ದಾಳಿ ಮಾಡುತ್ತಿರುವುದಕ್ಕೆ ಮುಖ್ಯ ಕಾರಣ ನಮ್ಮ ಕೆಂಪು ಪಟ್ಟಿ ಆಡಳಿತ ವ್ಯವಸ್ಥೆ. ತಂತ್ರಜ್ಞಾನದ ವೇಗಕ್ಕೆ ತಕ್ಕಂತೆ ಭದ್ರತಾ ವ್ಯವಸ್ಥೆ ಬಲಪಡಿಸಿಕೊಳ್ಳದೇ ಹೋದರೆ ಈ ಸಮಸ್ಯೆ ನಿವಾರಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಮುಂದೊಂದು ದಿನ ನಮ್ಮ ಆಧಾರ್ ಅಥವಾ ಪ್ಯಾನ್ ದತ್ತ ಸಂಚಯವನ್ನು ವಿಶ್ವದ ಯಾವ್ಯಾವುದೋ ಮೂಲೆಗಳಲ್ಲಿ ಕುಳಿತು ಕಾರ್ಯಾಚರಿಸುವ ಹ್ಯಾಕರ್‌ಗಳ ಗುಂಪೊಂದು ವಶಪಡಿಸಿಕೊಂಡು ಒಂದಷ್ಟು ಒತ್ತೆ ಹಣಕ್ಕೆ ಬೇಡಿಕೆ ಇಟ್ಟರೆ ನಮ್ಮೆದುರು ಉಳಿಯುವುದು ಅದನ್ನು ಪಾವತಿಸುವ ಮಾರ್ಗ ಮಾತ್ರ.

ಇ-ಆಡಳಿತ ಎಂಬ ಪರಿಕಲ್ಪನೆ ಅನೇಕ ಸಕಾರಾತ್ಮಕ ಬೆಳವಣಿಗೆಗಳಿಗೆ ಕಾರಣವಾಗಿದೆ. ಇದೇ ವೇಳೆ ಮಾಹಿತಿಯ ಕೇಂದ್ರೀಕರಣವೂ ನಡೆಯುತ್ತಿದೆ. ಭಾರತದ ಪ್ರತಿಯೊಬ್ಬ ಪೌರರಿಗೂ ಒಂದು ಆಧಾರ್ ಸಂಖ್ಯೆಯನ್ನು ನೀಡಿ ಅದರ ಮೂಲಕ ಎಲ್ಲರ ಮಾಹಿತಿಯನ್ನು ಒಂದು ದತ್ತ ಸಂಚಯದಲ್ಲಿ ಸಂಗ್ರಹಿಸುವುದು ಆಡಳಿತಾತ್ಮಕವಾಗಿ ಅನುಕೂಲಕರ. ಈಗಂತೂ ಹಣಕಾಸು ಪಾವತಿಗಾಗಿಯೂ ಇದೇ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿದ್ದೇವೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್‌ನಂಥ ವ್ಯವಸ್ಥೆಯ ಅಗತ್ಯವೇ ಇಲ್ಲದೆ ‘ನಗದು ರಹಿತ’ ಆರ್ಥಿಕತೆ ಸಾಕಾರಗೊಳಿಸುವುದಕ್ಕೂ ಇದು ಅನುಕೂಲ ಕಲ್ಪಿಸಬಹುದು. ಆದರೆ ಇದು ಆಧಾರ್ ದತ್ತ ಸಂಚಯವನ್ನು ಸಂಪರ್ಕಿಸುವ ಕೊಂಡಿಗಳನ್ನೂ ಹೆಚ್ಚಿಸುತ್ತದೆ.

ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದಷ್ಟೂ ಅಪಘಾತದ ಸಾಧ್ಯತೆಗಳು ಹೆಚ್ಚಾಗುತ್ತಾ ಹೋಗುತ್ತವೆ. ಇದನ್ನು ಶೂನ್ಯ ಮಟ್ಟಕ್ಕೆ ಇಳಿಸುವುದಕ್ಕೆ ಇರುವುದು ಎರಡು ಮಾರ್ಗಗಳು. ಅಪಘಾತದ ಸಾಧ್ಯತೆಗಳು ಕಡಿಮೆಯಾಗುವಂತೆ ರಸ್ತೆಗಳನ್ನು ಮತ್ತು ವಾಹನಗಳನ್ನು ಸುಧಾರಿಸುವುದು. ಎರಡನೆಯದ್ದು ವ್ಯಕ್ತಿಗಳು ವಾಹನ ಬಳಕೆಯನ್ನು ಕಡಿಮೆ ಮಾಡಿಕೊಳ್ಳುವಂಥ ವ್ಯವಸ್ಥೆಯನ್ನು ರೂಪಿಸುವುದು. ಭಾರತದ ಇ-ಆಡಳಿತವನ್ನು ನಿರ್ವಹಿಸುವ ಹೊಣೆ ಹೊತ್ತವರು ಈ ಎರಡನ್ನೂ ಮಾಡುತ್ತಿಲ್ಲ. ಸರ್ಕಾರಿ ವೆಬ್‌ಸೈಟುಗಳು ಮತ್ತು ದತ್ತ ಸಂಚಯಗಳ ಭದ್ರತೆಯ ಸ್ಥಿತಿ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಕೇಂದ್ರ ಗೃಹ ಸಚಿವಾಲಯ ನೀಡಿರುವ ಅಂಕಿ ಅಂಶಗಳೇ ಹೇಳುತ್ತಿವೆ.

ಇಷ್ಟರ ಮೇಲೆ ಪೌರರ ವೈಯಕ್ತಿಕ ಮಾಹಿತಿಗಳಿರುವ ದತ್ತ ಸಂಚಯವನ್ನು ಹೊರಗಿನಿಂದ ಸಂಪರ್ಕಿಸುವ ಕೊಂಡಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸರ್ಕಾರಿ ಇಲಾಖೆಗಳ ಜೊತೆಗಿನ ಸಂಪರ್ಕದಿಂದ ಆರಂಭಿಸಿ ಖಾಸಗಿಯವರೊಂದಿಗೆ ನಡೆಸುವ ಹಣಕಾಸು ವ್ಯವಹಾರದ ತನಕ ಎಲ್ಲವನ್ನೂ ಆಧಾರ್‌ಗೆ ಜೋಡಿಸಲಾಗುತ್ತಿದೆ. ಇದನ್ನು ಕ್ರಾಂತಿಕಾರಿ ಹೆಜ್ಜೆಯೆಂದು ಕೊಂಡಾಡುವಾಗಲೇ ಅದರ ನಕಾರಾತ್ಮಕ ಪರಿಣಾಮಗಳ ಬಗ್ಗೆ ಎಚ್ಚರದಿಂದಲೂ ಇರಬೇಕಾಗುತ್ತದೆ. ಇಲ್ಲವಾದರೆ ಒಂದು ದಿನ ಆಸ್ಟ್ರಿಯಾದ ಹೊಟೇಲಿನ ಅತಿಥಿಗಳು ಒತ್ತೆಯಾಳುಗಳಾದಂತೆ ಇಡೀ ದೇಶದ ಪೌರರು ಒತ್ತೆಯಾಳುಗಳಾಗಿಬಿಡುವ ಅಪಾಯವಿದೆ.

]]>