‘ಎಂಜಿನಿಯರಿಂಗ್ ಮುಗಿಸಿದ ವಿದ್ಯಾರ್ಥಿಗಳು ಉಬರ್ ಅಥವಾ ಓಲಾ ಟ್ಯಾಕ್ಸಿ ಓಡಿಸಿದರೆ ಸಾಫ್ಟ್ವೇರ್ ಎಂಜಿನಿಯರುಗಳಿಗಿಂತ ಹೆಚ್ಚು ಸಂಪಾದಿಸಬಹುದು’ ಇದು ಕಳೆದ ವರ್ಷದ ಆಗಸ್ಟ್ನಲ್ಲಿ ಐಟಿ ಉದ್ಯಮದ ಒಳಸುಳಿಗಳನ್ನೆಲ್ಲಾ ಬಲ್ಲವರೊಬ್ಬರು ಆಡಿದ ಮಾತು. ಅವರ ಮಾತುಗಳು ಐಟಿ ಉದ್ಯಮದ ಬಿಕ್ಕಟ್ಟನ್ನು ಧ್ವನಿಸುವುದರ ಜೊತೆಗೆ ಉಬರ್ ಮತ್ತು ಓಲಾಗಳು ಸೃಷ್ಟಿಸುತ್ತಿರುವ ‘ಚಾಲಕ ಉದ್ಯಮಿ’ಗಳ ಕುರಿತ ಶ್ಲಾಘನೆಯನ್ನೂ ಒಳಗೊಂಡಿತ್ತು.
ಓಲಾ – ಉಬರ್ಗಳೆಂಬ ಬಿಸಿಲುಗುದುರೆಯನೇರಿ…
ಆ್ಯಪ್ ಎಂಬ ಮಂತ್ರದಂಡ ತಿಂಗಳಿಗೆ ಹೆಚ್ಚೆಂದರೆ ಇಪ್ಪತ್ತು ಸಾವಿರ ರೂಪಾಯಿಗಳನ್ನು ದುಡಿಯುತ್ತಿದ್ದ ಚಾಲಕರಿಗೆ ಒಂದು ಲಕ್ಷ ರೂಪಾಯಿ ದುಡಿಯುವ ಅವಕಾಶ ಕಲ್ಪಿಸಿದ ಕಥೆ ಈಗ ಕನಸಿನಂತೆ ಕಾಣುತ್ತಿದೆ. ಇದೇ ಫೆ.12ರಂದು ದೆಹಲಿಯ ಉಬರ್ ಚಾಲಕ ಪ್ರವೀಣ್ ಕುಮಾರ್ ಕಾರು ಖರೀದಿಸಲು ಮಾಡಿದ ಸಾಲದ ಕಂತು ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವುದರೊಂದಿಗೆ ‘ಚಾಲಕ ಉದ್ಯಮಿ’ಗಳ ಕಥೆಯ ದುರಂತಾಂತ್ಯದ ಸಾಧ್ಯತೆಗಳು ಅನಾವರಣಗೊಳ್ಳುತ್ತಿವೆ. ಹೆಚ್ಚು ಕಡಿಮೆ ಕಳೆದ ವರ್ಷದ ಅಂತ್ಯದಲ್ಲೇ ‘ಚಾಲಕ ಉದ್ಯಮಿ’ಗೆ ಸವಾಲುಗಳು ಎದುರಾಗ ತೊಡಗಿದ್ದವು.
ಓಲಾ ಮತ್ತು ಉಬರ್ ತಮ್ಮ ‘ಪ್ರೋತ್ಸಾಹಧನ’ದ ಪ್ರಮಾಣವನ್ನು ಕಡಿಮೆ ಮಾಡುವುದಕ್ಕೆ ಹೊಸ ತಂತ್ರಗಳನ್ನು ಹೆಣೆಯುತ್ತಿದ್ದವು. ಪ್ರೋತ್ಸಾಹ ಧನ ದೊರೆಯುವುದಕ್ಕೆ ಅಗತ್ಯವಿರುವ ಷರತ್ತುಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಇದರ ಜೊತೆಗೆ ಆ್ಯಪ್ ನಿರ್ವಹಿಸುವ ಕಂಪೆನಿಗಳು ಪಡೆಯುವ ಪಾಲಿನ ಪ್ರಮಾಣವೂ ಹೆಚ್ಚಿತು. ಬಿಕ್ಕಟ್ಟು ತೀವ್ರಗೊಳ್ಳುತ್ತಾ ಹೋದಾಗ ಪ್ರತಿಭಟನೆಗಳ ಸಂಖ್ಯೆ ಹೆಚ್ಚಿತು.
ಈ ಮೊದಲೂ ಆಗೀಗ ಓಲಾ ಮತ್ತು ಉಬರ್ ಚಾಲಕರು ಕಂಪೆನಿಯ ವಿರುದ್ಧ ಬೀದಿಗೆ ಇಳಿದಿದ್ದರು. ಈ ಬಾರಿ ಅವರು ಮುಷ್ಕರಕ್ಕೆ ಮುಂದಾಗುವ ಹೊತ್ತಿಗೆ ಬಿಕ್ಕಟ್ಟು ಉಲ್ಬಣಿಸಿತ್ತು. ಎಷ್ಟರ ಮಟ್ಟಿಗೆ ಎಂದರೆ ಸಾಲ ಮಾಡಿ ಕಾರು ಖರೀದಿಸಿ ಚಾಲನೆ ಮಾಡಿ ಲಕ್ಷ ಸಂಪಾದಿಸುವ ಕನಸು ಹೊತ್ತಿದ್ದವರಿಗೆ ತಿಂಗಳಿಗೆ ಇಪ್ಪತ್ತೈದು ಸಾವಿರ ಗಳಿಸುವುದೂ ಕಷ್ಟವಾಗುವ ಸ್ಥಿತಿ ಬಂದಿತ್ತು. ದೆಹಲಿ ಮತ್ತು ಬೆಂಗಳೂರುಗಳಲ್ಲಿ ಈಗ ಮುಷ್ಕರವೇನೋ ಕೊನೆಗೊಂಡಿದೆ. ನ್ಯಾಯಾಲಯ ತಮ್ಮ ಪರವಾಗಿದೆ ಎಂದು ಉಬರ್ ಹೇಳುತ್ತಿದೆ. ಕರ್ನಾಟಕ ಸರ್ಕಾರ ಚಾಲಕರು ಕಾರ್ಮಿಕ ಆಯುಕ್ತರ ಬಳಿ ದೂರು ದಾಖಲಿಸಲಿ ಎಂದು ಸಲಹೆ ನೀಡಿ ಸುಮ್ಮನಾಗಿದೆ. ಓಲಾ ಈ ತನಕ ಯಾವ ಅಧಿಕೃತ ಹೇಳಿಕೆಯನ್ನೂ ನೀಡಿಲ್ಲ.
ಒಂದು ವರ್ಷದ ಹಿಂದಷ್ಟೇ ಚಾಲಕರ ಕಣ್ಣಿಗೆ ತಮ್ಮ ಭವ್ಯ ಭವಿಷ್ಯದಂತೆ ಕಾಣಿಸುತ್ತಿದ್ದ ಈ ಕಂಪೆನಿಗಳು ಈಗ ಖಳನಾಯಕರಾಗಿ ಬದಲಾದದ್ದು ಹೇಗೆ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಹೊರಟರೆ ಬಹಳ ಸಂಕೀರ್ಣವಾದ ಚಿತ್ರಣವೊಂದು ನಮ್ಮೆದುರು ತೆರೆದುಕೊಳ್ಳುತ್ತದೆ. ಇದರಲ್ಲಿ ತಂತ್ರಜ್ಞಾನದ ಸಾಧನೆಗಳಿವೆ. ಇದನ್ನು ಲಾಭದಾಯಕ ಉದ್ಯಮವಾಗಿಸಲು ನಡೆಸಿದ ಪ್ರಯತ್ನಗಳಿವೆ. ಎಲ್ಲದಕ್ಕಿಂತ ಮುಖ್ಯವಾಗಿ ಹೊಸ ಕಾಲದ ಸಾಂಸ್ಥಿಕ ಹೂಡಿಕೆಗಳ ಹಿಂದಿನ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸುವ ಮಹತ್ವಾಕಾಂಕ್ಷೆಗಳಿವೆ.
ಅಂಗೈಯಲ್ಲಿ ಹಿಡಿಯಬಹುದಾದ ಫೋನು ಕಂಪ್ಯೂಟರಿನ ಚಾತುರ್ಯವನ್ನು ತನ್ನೊಳಕ್ಕೆ ಆವಾಹಿಸಿಕೊಂಡಾಗ ಅದೊಂದು ಆವಿಷ್ಕಾರ ವಿಕ್ರಮವಾಗಿತ್ತು. ಆಮೇಲಿನದ್ದು ಈ ಅಂಗೈಯಲ್ಲಿ ಪ್ರಪಂಚವನ್ನು ತೋರಿಸುವ ಉದ್ಯಮದಲ್ಲಿ ಪಾಲು ಪಡೆಯಲು ನಡೆದ ಮೇಲಾಟ. ಗ್ರಾಹಕ ತಾನಿದ್ದಲ್ಲಿಗೇ ಟ್ಯಾಕ್ಸಿಯೊಂದನ್ನು ಕರೆಯಿಸಿಕೊಳ್ಳುವ ಸಾಧ್ಯತೆಯನ್ನು ಉಬರ್ ಬಳಸಿಕೊಂಡಿತು. ಇದನ್ನೇ ಅನುಸರಿಸಿ ಪ್ರಪಂಚದ ಬೇರೆ ಬೇರೇ ಕಡೆ ಇದೇ ಬಗೆಯ ಸೇವೆಗಳು ಹುಟ್ಟಿಕೊಂಡವು.
ಸಿಲಿಕಾನ್ ವ್ಯಾಲಿಯಲ್ಲಿ ಹುಟ್ಟಿದ್ದ ಉಬರ್ಗೆ ಪ್ರಪಂಚವೇ ತನ್ನ ಮಾರುಕಟ್ಟೆಯೆಂಬಂತೆ ಕಾಣಿಸಿತು. ಮೈಕ್ರೋಸಾಫ್ಟ್, ಗೂಗಲ್ ಮತ್ತು ಫೇಸ್ಬುಕ್ಗಳ ನೆಲದಲ್ಲಿ ಹುಟ್ಟಿದ ಕೂಸಿಗೆ ಈ ಮಹತ್ವಾಕಾಂಕ್ಷೆ ಸಹಜ. ಅದಕ್ಕೆ ನೀರೆರೆಯಲು ಮುಂದಾದದ್ದು ಸಾಂಸ್ಥಿಕ ಹೂಡಿಕೆದಾರರು. ಜಯಶಾಲಿ ಮಾರುಕಟ್ಟೆಯನ್ನು ಸಂಪೂರ್ಣ ವಶಪಡಿಸಿಕೊಳ್ಳುತ್ತಾನೆ (A winner takes all market) ಎಂಬ ತತ್ವವನ್ನು ನಂಬಿದ ಕಾರ್ಯಾಚರಣೆಯಿದು. ಗೂಗಲ್ ಮತ್ತು ಫೇಸ್ಬುಕ್ಗಳು ಸಾಧಿಸಿದ್ದೂ ಇದನ್ನೇ ತಾನೇ. ಟ್ಯಾಕ್ಸಿ ಆ್ಯಪ್ ಕ್ಷೇತ್ರದಲ್ಲಿ ಉಬರ್ ಮಾತ್ರ ಇರಲಿಲ್ಲ. ಅಮೆರಿಕವೂ ಸೇರಿದಂತೆ ಹಲವು ದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಲಿಫ್ಟ್, ಉಬರ್ನ ಭಾರತೀಯ ಅನುಕರಣೆಯಾದ ಓಲಾ ಎಲ್ಲವುಗಳ ಕನಸೂ ಇದುವೇ. ಗೆದ್ದು ಸಾರ್ವಭೌಮತ್ವವನ್ನು ಸ್ಥಾಪಿಸುವುದು.
ಆನ್ಲೈನ್ ಮಾರುಕಟ್ಟೆ ತಾಣಗಳಲ್ಲಿ ಅಮೆಜಾನ್ಗೆ ಸಾಧ್ಯವಾದದ್ದು ತಮಗೂ ಆಗುತ್ತದೆ ಎಂಬ ಧೈರ್ಯ ಈ ಎಲ್ಲಾ ಕಂಪೆನಿಗಳದ್ದು. ಅಮೆಜಾನ್ ಮಾಡಿದಂತೆಯೂ ಇವು ಕೂಡಾ ಕಡಿಮೆ ಬೆಲೆಗೆ ಅತ್ಯುತ್ತಮವಾದುದನ್ನು ಒದಗಿಸಲು ಹೊರಟವು. ಅಮೆಜಾನ್ ಗ್ರಾಹಕರಿರುವಲ್ಲಿಗೇ ಅವರು ಬಯಸಿದ ಉತ್ಪನ್ನಗಳನ್ನು ತಲುಪಿಸಿದರೆ ಉಬರ್, ಓಲಾ ಮತ್ತು ಲಿಫ್ಟ್ ಗ್ರಾಹಕನ ಬಳಿಗೆ ಟ್ಯಾಕ್ಸಿಯನ್ನು ಒಯ್ದವು. ಅಮೆಜಾನ್ನ ಸೇವೆ ಮತ್ತು ಟ್ಯಾಕ್ಸಿ ಸೇವೆಗೆ ಇರುವ ಮೂಲಭೂತ ವ್ಯತ್ಯಾಸವನ್ನು ಈ ಕಂಪೆನಿಗಳು ಅರಿಯಲಿಲ್ಲ.
ಟ್ಯಾಕ್ಸಿ ಸೇವೆಯ ಅಮೆಜಾನ್ ಆಗಲು ಹೊರಟ ಈ ಕಂಪೆನಿಗಳಿಗೆ ಆ್ಯಪ್ ನಿರ್ವಹಣೆಯ ಹೊರತಾದ ಯಾವ ಬಂಡವಾಳದ ಅಗತ್ಯವೂ ಇರಲಿಲ್ಲ. ವಾಹನಗಳನ್ನು ಖರೀದಿಸಬೇಕಾಗಿಲ್ಲ, ಅವುಗಳನ್ನು ನಿರ್ವಹಿಸಬೇಕಾಗಿಲ್ಲ, ಚಾಲಕರ ಸವಲತ್ತುಗಳ ಹೊಣೆಯಿಲ್ಲ. ಗ್ರಾಹಕರಿಗೆ ಮತ್ತು ಚಾಲಕರಿಗೆ ನಡುವೆ ಸಂಪರ್ಕಕೊಂಡಿಯಾಗಿ ಕೆಲಸ ಮಾಡಿದರೆ ಸಾಕು. ಈ ಕೆಲಸವನ್ನು ಆ್ಯಪ್ ನಿರ್ವಹಿಸುತ್ತಿತ್ತು. ಬೇಡಿಕೆ ಮತ್ತು ಪೂರೈಕೆಯ ಪ್ರಮಾಣವನ್ನು ನೋಡಿಕೊಂಡು ಪ್ರಯಾಣ ದರವನ್ನು ನಿರ್ಧರಿಸುವ ಅಲ್ಗಾರಿದಂ ಕೂಡಾ ಸಿದ್ಧವಾಯಿತು. ಇದಕ್ಕೆ ಗ್ರಾಹಕರಿಂದ ಅಭೂತಪೂರ್ವವಾದ ಸ್ವಾಗತವೂ ದೊರೆಯಿತು.
ಹೆಚ್ಚು ಹೆಚ್ಚು ಮಾರುಕಟ್ಟೆಗಳನ್ನು ವಶಪಡಿಸಿಕೊಂಡರೆ ಹೆಚ್ಚು ಲಾಭ ಎಂಬ ಲೆಕ್ಕಾಚಾರದೊಡನೆ ಈ ಕಂಪೆನಿಗಳು ಮುಂದುವರಿದವು. ಮಾರುಕಟ್ಟೆಯ ವಿಸ್ತರಣೆಗೆ ಸುಲಭವಾದ ಮಾರ್ಗವೆಂದರೆ ಈಗಾಗಲೇ ಮಾರುಕಟ್ಟೆಯಲ್ಲಿರುವ ಇತರ ಸೇವಾದಾತರಿಗಿಂತ ಕಡಿಮೆ ದರದಲ್ಲಿ ಅವರಿಗಿಂತ ಉತ್ತಮವಾದ ಸೇವೆಯನ್ನು ನೀಡುವುದು. ಈ ಗುರಿಯನ್ನು ಸಾಧಿಸುವುದಕ್ಕೆ ಹೆಚ್ಚು ಟ್ಯಾಕ್ಸಿಗಳು ಆ್ಯಪ್ನಲ್ಲಿ ನೋಂದಾಯಿಸಿಕೊಳ್ಳಬೇಕಾಗಿತ್ತು. ಇದಕ್ಕಾಗಿ ಪ್ರೋತ್ಸಾಹ ಧನದ ಯೋಜನೆಯನ್ನು ರೂಪಿಸಲಾಯಿತು. ಗ್ರಾಹಕರನ್ನು ಆಕರ್ಷಿಸುವುದಕ್ಕಾಗಿ ಪ್ರಯಾಣ ದರದಲ್ಲಿ ಭಾರೀ ಕಡಿತವನ್ನು ಘೋಷಿಸಲಾಯಿತು. ಈ ಎರಡೂ ಸಾಧ್ಯವಾಗುವುದಕ್ಕೆ ಭಾರೀ ಪ್ರಮಾಣದ ಹೂಡಿಕೆಯ ಅಗತ್ಯವಿತ್ತು. ಇದು ವೆಂಚರ್ ಕ್ಯಾಪಿಟಲಿಸ್ಟ್ಗಳೆಂಬ ಸಾಂಸ್ಥಿಕ ಹೂಡಿಕೆದಾರರಿಂದ ಹರಿದುಬಂತು.
ಕಳೆದ ವರ್ಷದ ಅಂತ್ಯದ ಹೊತ್ತಿಗೆ ಉಬರ್ ಪ್ರಯಾಣ ದರದ ಶೇಕಡಾ 40ರಷ್ಟನ್ನು ಮಾತ್ರ ಗ್ರಾಹಕರಿಂದ ಪಡೆಯುತ್ತಿತ್ತು. ಹೂಡಿಕೆದಾರರಿಂದ ಬಂದ ಹಣ ಕಡಿಮೆಯಾಗುತ್ತಾ ಹೋದಂತೆ ಅದನ್ನು ಹೆಚ್ಚಿಸಿಕೊಳ್ಳುವುದಕ್ಕೆ ಹೊಸ ಹೂಡಿಕೆದಾರರಲ್ಲಿ ಭರವಸೆಯನ್ನು ಬಿತ್ತುವ ತಂತ್ರಗಳನ್ನು ಹೆಣೆಯಲಾಯಿತು. ಮಾರುಕಟ್ಟೆ ಸಾರ್ವಭೌಮತ್ವ ಸಾಧಿಸಿದರೆ ಮತ್ತಿನದ್ದೆಲ್ಲಾ ಲಾಭವೇ ತಾನೇ ಎಂಬ ಭರವಸೆಯೊಂದಿಗೇ ಈ ತನಕದ ಹೂಡಿಕೆಗಳು ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳಿಗೆ ಬಂದಿವೆ.
ಉಬರ್ ಮತ್ತು ಅದೇ ಬಗೆಯ ಕಂಪೆನಿಗಳ ಆರ್ಥಿಕ ಸದೃಢತೆಯ ಬಗ್ಗೆ ಒಡಕು ಮಾತುಗಳು ಕೇಳಿಬರತೊಡಗಿ ಒಂದು ವರ್ಷವೇ ಕಳೆಯಿತು. ಆದರೆ ಚೀನಾದಲ್ಲಿ ಮಾಡಿದ ಹೂಡಿಕೆ ಇದಕ್ಕೆ ಕಾರಣ ಎಂಬ ಸಬೂಬನ್ನು ಉಬರ್ ನೀಡುತ್ತಿದೆ. ಭಾರತದಂಥ ಹೊಸ ಮಾರುಕಟ್ಟೆಗಳಲ್ಲಿ ತನ್ನ ಶಕ್ತಿಯನ್ನು ವರ್ಧಿಸಿಕೊಳ್ಳುತ್ತಿರುವ ಭರವಸೆಗಳನ್ನು ಹೂಡಿಕೆದಾರರಿಗೆ ನೀಡುತ್ತಿದೆ. ಆದರೆ ಅದು ಈಗ ಸ್ವಲ್ಪ ಮಟ್ಟಿಗಾದರೂ ಹೂಡಿಕೆದಾರರಿಗೆ ಸಮಾಧಾನ ಹೇಳಲೇಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿದೆ.ಓಲಾದ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. ಅದರ ಪರಿಣಾಮ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಬಗೆಯಲ್ಲಿ ಗೋಚರಿಸುತ್ತಿದೆ.
ಆ್ಯಪ್ ಆಧಾರಿತ ಟ್ಯಾಕ್ಸಿಗಳ ವ್ಯವಹಾರ ಇದಕ್ಕಿಂತ ಭಿನ್ನವಾಗಿರಲು ಸಾಧ್ಯವೇ ಇರಲಿಲ್ಲ. ನಿರಂತವಾಗಿ ನಷ್ಟ ಮಾಡಿಕೊಂಡು ಸೇವೆಯನ್ನು ಒದಗಿಸುವುದಕ್ಕೆ ಯಾರಿಗೂ ಸಾಧ್ಯವಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಗ್ರಾಹಕ ಬಯಸಿದ ಉತ್ಪನ್ನಗಳನ್ನು ಅವರಿರುವಲ್ಲಿಗೆ ತಲುಪಿಸುವುದಕ್ಕೆ ಅಮೆಜಾನ್ ಮಾಡಿದ ಹೂಡಿಕೆ ಸಣ್ಣದೇನೂ ಅಲ್ಲ. ಖರೀದಿಯ ಪ್ರಮಾಣ ಹೆಚ್ಚಿದಷ್ಟೂ ಉತ್ಪನ್ನಗಳ ಬೆಲೆ ಕಡಿಮೆಯಾಗುತ್ತದೆ. ಆದರೆ ಟ್ಯಾಕ್ಸಿ ಸೇವೆ ಹಾಗಲ್ಲ. ಏಕೆಂದರೆ ಇಂಧನದ ದರ, ವಾಹನಗಳ ನಿರ್ವಹಣಾ ವೆಚ್ಚ ಇವುಗಳಲ್ಲಿ ಯಾವೊಂದೂ ಬಳಕೆಯ ಪ್ರಮಾಣದ ಜೊತೆಗೆ ಕಡಿಮೆಯಾಗುವುದಿಲ್ಲ. ಶತಮಾನದಷ್ಟು ಹಳೆಯದಾದ ಟ್ಯಾಕ್ಸಿ ಉದ್ಯಮದಲ್ಲಿ ಬದಲಾವಣೆಯೊಂದಕ್ಕೆ ಆಪ್ ಆಧಾರಿತ ಟ್ಯಾಕ್ಸಿಗಳು ಕಾರಣವಾದವು. ಆದರೆ ಈ ಪರಿವರ್ತನೆಯನ್ನು ಒಂದು ಸುಸ್ಥಿರ ಮಾದರಿಯನ್ನಾಗಿಸುವಲ್ಲಿ ಅವು ಸೋಲುತ್ತಿರುವಂತೆ ಕಾಣಿಸುತ್ತಿದೆ.
ಈ ಮಾರುಕಟ್ಟೆ ಸಾರ್ವಭೌಮತ್ವದ ಹೋರಾಟದ ಸುಳಿಯಲ್ಲಿ ನಲುಗುತ್ತಿರುವ ಚಾಲಕರದ್ದು ವಿಚಿತ್ರ ಸ್ಥಿತಿ. ಸದ್ಯದ ಸ್ಥಿತಿಯಲ್ಲಿ ಅವರು ಬಯಸುತ್ತಿರುವುದು ಹಳೆಯ ‘ಪ್ರೋತ್ಸಾಹ ಧನ’ದ ದಿನಗಳನ್ನು. ಗ್ರಾಹಕರೂ ಅಷ್ಟೇ. ಹಳೆಯ ಕಡಿಮೆ ದರಗಳನ್ನೇ. ಈ ಎರಡೂ ಉಳಿಯಬೇಕೆಂದರೆ ಈ ಹೋರಾಟ ನಿರಂತರವಾಗಿ ಮುಂದುವರೆಯಬೇಕು. ಆದರೆ ಯಾವುದೇ ಮಾರುಕಟ್ಟೆ ಆಧಾರಿತ ಆರ್ಥಿಕತೆ ಇದಕ್ಕೆ ಅವಕಾಶ ನೀಡುವುದಿಲ್ಲ. ಈಗ ಕಣ್ಣೆದುರು ಕಾಣಿಸುವ ಏಕೈಕ ಯಶಸ್ವೀ ಉದಾಹರಣೆಯೆಂದರೆ ಅಮೆರಿಕ ಟೆಕ್ಸಾಸ್ನ ಆಸ್ಟಿನ್ ನಗರದ ಉಬರ್ ವಿರೋಧಿ ಚಾಲಕರ ಸಹಕಾರೀ ಪ್ರಯತ್ನ ಮಾತ್ರ.
ಇಲ್ಲಿನ ಟ್ಯಾಕ್ಸಿ ಚಾಲಕರು ನಗರಾಡಳಿತ ರೂಪಿಸಿದ ನಿಯಮಗಳನ್ನು ಪಾಲಿಸದೆಯೇ ಕಾರ್ಯನಿರ್ವಹಿಸುತ್ತಿದ್ದ ಉಬರ್ ಮತ್ತು ಲಿಫ್ಟ್ಗಳ ವಿರುದ್ಧ ದೊಡ್ಡ ಹೋರಾಟ ನಡೆಸಿದರು. ನಗರಾಡಳಿತವನ್ನು ಮಣಿಸುವುದಕ್ಕೆ ಉಬರ್ ಮತ್ತು ಲಿಫ್ಟ್ಗಳಿಗೆ ಸಾಧ್ಯವಾಗಲಿಲ್ಲ. ಅವರು ತಮ್ಮ ಸೇವೆಯನ್ನು ಸ್ಥಗಿತಗೊಳಿಸಿ ಹೊರ ನಡೆದರು. ಆಮೇಲೆ ಹುಟ್ಟಿಕೊಂಡದ್ದು ಚಾಲಕರ ಸಹಕಾರಿ ಆ್ಯಪ್. ಅದೀಗ ಅಮೆರಿಕದ ಮೂರನೇ ದೊಡ್ಡ ಸಹಕಾರ ಸಂಘ.
ಭಾರತದಲ್ಲೂ ಇಂಥದ್ದೊಂದು ಪ್ರಯತ್ನ ನಡೆದಿತ್ತು. ಆ್ಯಪ್ ಆಧಾರಿತ ಟ್ಯಾಕ್ಸಿಗಳ ಸ್ಪರ್ಧೆಯನ್ನು ಎದುರಿಸಲು ಮುಂಬೈಯ ಮೀಟರ್ ಟ್ಯಾಕ್ಸಿಗಳು ತಮ್ಮದೇ ಆ್ಯಪ್ ರೂಪಿಸಿಕೊಂಡು ಪರ್ಯಾಯವನ್ನು ಹುಡುಕುವ ಪ್ರಯತ್ನ ಮಾಡಿದವು. ‘9211’ ಎಂಬ ಹೆಸರಿನ ಈ ಆ್ಯಪ್ ಬಳಸಲು ಗ್ರಾಹಕರು ಉತ್ಸಾಹ ತೋರಲಿಲ್ಲ. ಇದನ್ನು ಜನಪ್ರಿಯಗೊಳಿಸಲು ಬೇಕಾದ ಹೂಡಿಕೆಯನ್ನು ಮಾಡಲು ಚಾಲಕರಿಗೂ ಆಗಲಿಲ್ಲ. ಈಗಿನ ಬಿಕ್ಕಟ್ಟು ಮತ್ತೊಂದು ಪರ್ಯಾಯಕ್ಕೆ ಕಾರಣವಾಗಬಹುದೇ ಎಂಬುದನ್ನು ಕಾಲವಷ್ಟೇ ಹೇಳಬೇಕು.
]]>