Skip to content

Freedom of the present | ಈ ನಡುವಿನ ಬಿಡುವು

ಅಳಿಸಲಾಗದ ಅಕ್ಷರವ ಬರೆಯಲಾಗದು!

Menu
  • Privacy Policy
Menu

ಒಮ್ಮುಖ ಪಾರದರ್ಶಕತೆಯ ತಂತ್ರಜ್ಞಾನಾಧಾರಿತ ಪ್ರಭುತ್ವ

Posted on March 15, 2017 by Ismail

ಮಾಹಿತಿ ತಂತ್ರಜ್ಞಾನವನ್ನು ಆಡಳಿತಕ್ಕೆ ಬಳಸಿಕೊಳ್ಳುವ ಪರಿಕಲ್ಪನೆ ಹುಟ್ಟಿದಂದಿನಿಂದ ಇಂದಿನ ತನಕವೂ ಎಲ್ಲಾ ಸರ್ಕಾರಗಳ ಘೋಷಣೆಯೂ ಒಂದೇ– ‘ತಂತ್ರಜ್ಞಾನಾಧಾರಿತ ಪಾರದರ್ಶಕ ಆಡಳಿತ’. ಈ ಘೋಷಣೆಯೇನೋ ಕೇಳಲು ಹಿತವಾಗಿದೆ. ಈ ಹಿತಾನುಭವವನ್ನು ಬಳಸಿಕೊಂಡು ನಗದು ರಹಿತ ಆರ್ಥಿಕತೆ, ಪೌರರು ಪಡೆಯುವ ಎಲ್ಲಾ ಸೇವೆಗಳಿಗೂ ಅವರ ‘ಆಧಾರ್’ ಸಂಖ್ಯೆ ಜೋಡಿಸುವ ತಂತ್ರವನ್ನು ಸರ್ಕಾರಗಳು ಸದ್ದಿಲ್ಲದೆ ಜಾರಿಗೊಳಿಸುತ್ತಿವೆ. ಎಷ್ಟರ ಮಟ್ಟಿಗೆಂದರೆ ಇತ್ತೀಚೆಗೆ ಇದನ್ನು ಶಾಲಾ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟವನ್ನು ಪಡೆಯುವುದಕ್ಕೂ ‘ಆಧಾರ್’ ಸಂಖ್ಯೆಯನ್ನು ಕಡ್ಡಾಯಗೊಳಿಸಲಾಯಿತು. ದೊಡ್ಡದಾಗಿ  ಗದ್ದಲವೆದ್ದ ಮೇಲೆ ‘ಆಧಾರ್’ ಇಲ್ಲದವರಿಗೂ ಊಟ ಕೊಡುತ್ತೇವೆ ಅವರಿಗೊಂದು ಆಧಾರ್ ಸಂಖ್ಯೆಯನ್ನೂ ಕೊಡುತ್ತೇವೆ ಎಂದು ಸರ್ಕಾರ ಹೇಳಿತು.

ಪೌರರನ್ನು ಗುರುತಿಸುವುದಕ್ಕೆ ‘ಆಧಾರ್’ನಂಥ ವಿಶಿಷ್ಟ ಗುರುತು ಸಂಖ್ಯೆ ನೀಡುವುದು. ಎಲ್ಲಾ ಬಗೆಯ ಸೇವೆಗಳ ಸಂದರ್ಭದಲ್ಲಿಯೂ ಅದನ್ನು ಪಡೆಯುವವರ ಗುರುತಾಗಿ ಬಳಸಿಕೊಳ್ಳುವುದರಲ್ಲಿ ಮೇಲು ನೋಟಕ್ಕೆ ಯಾವ ಸಮಸ್ಯೆಯೂ ಕಾಣಿಸುವುದಿಲ್ಲ. ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹರಿಗೆ ನೇರವಾಗಿ ತಲುಪಿಸುವುದಕ್ಕೆ ಇದು ಅನುಕೂಲ ಕಲ್ಪಿಸುತ್ತದೆ. ಯಾರಿಗೆ ಯಾವ ಸವಲತ್ತು ನಿಜಕ್ಕೂ ಅಗತ್ಯವಿದೆ ಎಂಬುದನ್ನು ಅರಿಯುವುದಕ್ಕೆ ಸರ್ಕಾರಕ್ಕೂ ಸುಲಭವಾಗುತ್ತದೆ. ಇದರಿಂದ ಯೋಜನೆ ರೂಪಿಸುವುದು ಸುಲಭ. ಬ್ಯಾಂಕ್ ಖಾತೆ ತೆರೆಯುವುದರಿಂದ ಆರಂಭಿಸಿ ವಿಮಾನ ಹತ್ತುವ ತನಕದ ಅನೇಕ ಸಂದರ್ಭಗಳಲ್ಲಿ ವ್ಯಕ್ತಿಯ ಗುರುತು ತಿಳಿಯುವುದರಿಂದ ಸುರಕ್ಷೆಯನ್ನು ಖಾತರಿ ಪಡಿಸಬಹುದು. ಭದ್ರತೆಗೆ ಸಂಬಂಧಿಸಿದ ವಿಚಾರಗಳಲ್ಲಿಯೂ ಬೆರಳಚ್ಚು ಮತ್ತು ಕಣ್ಣಿನ ಪಾಪೆಯ ದಾಖಲೆಯಿರುವ ಒಂದು ದತ್ತಾಂಶ ಸಂಚಯ ಉಪಕಾರಿಯಾಗಿ ಕೆಲಸ ಮಾಡುತ್ತದೆ. ಉದಾಹರಣೆಗೆ ಅಪರಾಧ ನಡೆದ ಸ್ಥಳದಲ್ಲಿರುವ ಬೆರಳಚ್ಚುಗಳನ್ನು ಆಧಾರ್ ದತ್ತಸಂಚಯದೊಂದಿಗೆ ಹೋಲಿಸಿ ನೀಡಿದರೆ ಯಾರ ಬೆರಳಚ್ಚು ಅಲ್ಲಿತ್ತು ಎಂಬುದು ತಿಳಿದುಬಿಡುತ್ತದೆ. ಹೀಗೆ ವಿಶಿಷ್ಟ ಗುರುತು ಸಂಖ್ಯೆಯ ಉಪಯೋಗದ ದೊಡ್ಡ ಪಟ್ಟಿಯನ್ನೇ ತಯಾರಿಸಬಹುದು.

ಈ ಪಟ್ಟಿ ಹೇಳುವುದು ಎರಡು ಅಂಶಗಳನ್ನು. ಒಂದು: ಪ್ರಜೆಯ ಎಲ್ಲಾ ವ್ಯವಹಾರಗಳೂ ಪ್ರಭುತ್ವದ ಕಣ್ಣಿಗೆ ಸ್ಪಷ್ಟವಾಗಿ ಕಾಣುವಂತೆ ನಡೆಯಬೇಕು. ಎರಡು: ಈಗ ಲಭ್ಯವಿರುವ ತಂತ್ರಜ್ಞಾನ ಮತ್ತು ‘ಆಧಾರ್‌’ನಂಥ ವಿಶಿಷ್ಟ ಗುರುತು ಸಂಖ್ಯೆಯನ್ನು ಬಳಸಿಕೊಂಡು ಪ್ರಭುತ್ವ ತನ್ನ ಪ್ರಜೆಯ ವ್ಯವಹಾರಗಳ ಪಾರದರ್ಶಕತೆಯನ್ನು ಖಾತರಿ ಪಡಿಸಿಕೊಳ್ಳುತ್ತದೆ. ಈ ಎರಡೂ ಅಂಶಗಳನ್ನು ಪ್ರಜಾಪ್ರಭುತ್ವದ ಸಂದರ್ಭಕ್ಕೆ ಅನ್ವಯಿಸಿ ನೋಡಲು ಹೊರಟರೆ ಬಹಳ ಮುಖ್ಯವಾದ ಪ್ರಶ್ನೆಯೊಂದು ಉದ್ಭವಿಸುತ್ತದೆ. ಪ್ರಜೆ ತನ್ನ ಎಲ್ಲಾ ವ್ಯವಹಾರಗಳನ್ನು ಪಾರದರ್ಶಕವಾಗಿ ನಡೆಸುವ ಸಂದರ್ಭದಲ್ಲಿ ಪ್ರಭುತ್ವ ಕೂಡಾ ಅಷ್ಟೇ ಪಾರದರ್ಶಕವಾಗಿ ಇರಬೇಕಲ್ಲವೇ?

ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಹೊರಟರೆ ನಮಗೆ ನಿರಾಶೆಯಾಗುತ್ತದೆ. ಹೇಳಿಕೊಳ್ಳುವುದಕ್ಕೆ ಮಾಹಿತಿ ಹಕ್ಕು ಕಾಯ್ದೆಯೇನೋ (ಆರ್‌ಟಿಐ) ಇದೆ. ಇದನ್ನು ಬಳಸಿಕೊಂಡು ಪ್ರಜೆ ಮಾಹಿತಿ ಪಡೆಯಬೇಕೆಂದರೆ ನಡೆಸಬೇಕಾದ ಸರ್ಕಸ್ ಸಣ್ಣದೇನೂ ಅಲ್ಲ. ಸಾಮಾನ್ಯ ಪ್ರಜೆಯ ವಿಚಾರವನ್ನು ಬಿಟ್ಟು ಬಿಡೋಣ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಗುರುತಿಸಲಾಗುವ ಮಾಧ್ಯಮಗಳಿಗೇ ಆರ್‌ಟಿಐ ಬಳಸಿಕೊಂಡು ಮಾಹಿತಿ ಪಡೆಯುವುದು ಕಷ್ಟ. ನೋಟು ರದ್ದತಿಯ ನಂತರ ‘ಬ್ಲೂಮ್‌ಬರ್ಗ್ ನ್ಯೂಸ್’ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಕೆಲವು ಮಾಹಿತಿಗಳನ್ನು ಬಯಸಿತ್ತು. ಕೆಲವು ಮಾಹಿತಿಗಳನ್ನು ನಿರಾಕರಿಸಲಾಯಿತು. ಕೆಲವಕ್ಕೆ ಅಸ್ಪಷ್ಟ ಉತ್ತರ ಬಂತು. ಮಾಹಿತಿಯನ್ನು ನಿರಾಕರಿಸಲಾದ ಒಂದು ಪ್ರಶ್ನೆ ‘ನೋಟು ರದ್ದತಿ ಘೋಷಿಸುವ ಸಂದರ್ಭದಲ್ಲಿ ಬ್ಯಾಂಕುಗಳಲ್ಲಿ ಇದ್ದ ರದ್ದಾದ ನೋಟುಗಳ ಪ್ರಮಾಣ ಎಷ್ಟು?’. ಇದೊಂದು ಸಾಮಾನ್ಯ ಪ್ರಶ್ನೆ. ಒಟ್ಟು ಚಲಾವಣೆಯಲ್ಲಿದ್ದ ನೋಟುಗಳ ಸಂಖ್ಯೆಯನ್ನು ಸರ್ಕಾರವೇ ಹೇಳಿತ್ತು. ರದ್ದತಿಯ ಸಂದರ್ಭದಲ್ಲಿ ಬ್ಯಾಂಕುಗಳ ಕರೆನ್ಸಿ ಚೆಸ್ಟ್‌ನಲ್ಲಿ ಇದ್ದ ನೋಟುಗಳ ಸಂಖ್ಯೆಯನ್ನು ನೀಡುವುದಕ್ಕೆ ರಿಸರ್ವ್ ಬ್ಯಾಂಕ್‌ಗೆ ಯಾವ ಸಮಸ್ಯೆಯೂ ಇರಲಿಲ್ಲ. ಆದರೆ ರಿಸರ್ವ್ ಬ್ಯಾಂಕ್ ಈ ಮಾಹಿತಿಯನ್ನು ಬಹಿರಂಗಪಡಿಸುವವರ ಪ್ರಾಣಕ್ಕೆ ಅಪಾಯವಿದೆ ಎಂಬ ಕಾರಣ ನೀಡಿ ಮಾಹಿತಿಯನ್ನು ನಿರಾಕರಿಸಿತು. ಈ ಮಾಹಿತಿ ಯಾರದ್ದಾದರೂ ಜೀವಕ್ಕೆ ಎರವಾಗುವುದು ಹೇಗೆ ಎಂಬುದು ಯಾವ ತರ್ಕಕ್ಕೂ ಹೊಳೆಯದ ಸಂಗತಿ.

ಪ್ರಧಾನ ಮಂತ್ರಿಯವರ ಶೈಕ್ಷಣಿಕ ಹಿನ್ನೆಲೆಗೆ ಸಂಬಂಧಿಸಿದ ಪ್ರಶ್ನೆಯನ್ನೂ ಬೇರೆ ಬೇರೆ ಕಾರಣಗಳನ್ನೊಡ್ಡಿ ನಿರಾಕರಿಸಲಾಯಿತು. ಜನಪ್ರಾತಿನಿಧ್ಯ ಕಾಯ್ದೆಯ ಅನ್ವಯ ಚುನಾವಣೆಗೆ ನಿಲ್ಲುವ ಪ್ರತಿಯೊಬ್ಬ ಅಭ್ಯರ್ಥಿಯೂ ತನ್ನ ಶೈಕ್ಷಣಿಕ ಹಿನ್ನೆಲೆಯನ್ನೂ ಮತದಾರರಿಗೆ ತಿಳಿಸುವುದು ಅಗತ್ಯ. ಅಷ್ಟೇಕೆ ಪ್ರಧಾನಿಯವರ ಪದವಿ ಪ್ರಮಾಣ ಪತ್ರವನ್ನು ಅವರು ಪ್ರತಿನಿಧಿಸುವ ಪಕ್ಷದ ನಾಯಕರು ಪತ್ರಿಕಾಗೋಷ್ಠಿಯಲ್ಲಿಯೂ ಪ್ರದರ್ಶಿಸಿದ್ದರು. ಆದರೆ ಇದೇ ಮಾಹಿತಿಯನ್ನು ಕೋರಿ ದೆಹಲಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಲಾಗಿದ್ದ ಆರ್‌ಟಿಐ ಅರ್ಜಿಯನ್ನು ತಿರಸ್ಕರಿಸಲಾಯಿತು. ಇವೆರಡೂ ಪ್ರಾತಿನಿಧಿಕವಾದ ಪ್ರಕರಣಗಳು. ಇವು ಸಾಕಷ್ಟು ಸುದ್ದಿಯನ್ನೂ ಮಾಡಿದ್ದವು. ಆದರೆ ಇಂಥ ಅನೇಕ ಪ್ರಕರಣಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಇವೆ ಎಂಬುದು ವಾಸ್ತವ.

ಮಾಹಿತಿ ಹಕ್ಕು ಕಾಯ್ದೆಯೇ ಕಡ್ಡಾಯಗೊಳಿಸಿರುವಂತೆ ಕೆಲವು ಮೂಲಭೂತ ಮಾಹಿತಿಗಳನ್ನು ಪ್ರತಿಯೊಂದು ಸರ್ಕಾರಿ ಕಚೇರಿಯೂ ಸ್ವಯಂ ಪ್ರೇರಿತವಾಗಿ ಸಾರ್ವಜನಿಕರಿಗೆ ಒದಗಿಸಬೇಕು. ಇಲ್ಲಿಯ ತನಕ ಯಾವ ಇಲಾಖೆಯೂ ಸಂಪೂರ್ಣ ಪ್ರಮಾಣದಲ್ಲಿ ಇದನ್ನು ಸಾಧಿಸಿಲ್ಲ. ಬಹುತೇಕ ಇಲಾಖೆಗಳು ತಮ್ಮ ಸಿಬ್ಬಂದಿಯ ಸಂಖ್ಯೆ ಅವರ ಸಂಬಳ, ಸಾರಿಗೆಯಂಥ ವಿಚಾರಗಳನ್ನೂ ತಮ್ಮ ವೆಬ್‌ಸೈಟುಗಳಲ್ಲಿ ಒದಗಿಸಿಲ್ಲ. ಒಟ್ಟಿನಲ್ಲಿ ಪ್ರಭುತ್ವ ತನ್ನ ಪ್ರಜೆಗಳ ವ್ಯವಹಾರಗಳು ಪಾರದರ್ಶಕವಾಗಿರಬೇಕು ಬಯಸುತ್ತಿದೆಯೇ ಹೊರತು ತನ್ನನ್ನು ಪಾರದರ್ಶಕವಾಗಿಟ್ಟುಕೊಳ್ಳುವುದರಲ್ಲಿ ಮಾತ್ರ ಮಡಿವಂತಿಕೆಯನ್ನೇ ಮುಂದುವರಿಸುತ್ತಿದೆ.

ಪ್ರಭುತ್ವ ಮಾಹಿತಿಯನ್ನು ನಿರಾಕರಿಸುವುದಕ್ಕೆ ಹಲವು ಕಾರಣಗಳನ್ನು ಅದೇ ಸೃಷ್ಟಿಸಿಕೊಂಡಿದೆ. ಜೀವಕ್ಕೆ ಅಪಾಯ, ರಾಷ್ಟ್ರೀಯ ಭದ್ರತೆಗೆ ಅಪಾಯ ಮುಂತಾದುವು ಬಹಳ ದೊಡ್ಡ ಕಾರಣಗಳು. ಇನ್ನೂ ಸರಳವಾದ ತಂತ್ರವೊಂದನ್ನು ಅನೇಕ ಸರ್ಕಾರಿ ಕಚೇರಿಗಳು ಬಳಸುತ್ತವೆ ‘ಈ ಮಾಹಿತಿ ನಮ್ಮ ಕಚೇರಿಯಲ್ಲಿ ಇಲ್ಲ’. ಯಾವ ಕಚೇರಿಯಲ್ಲಿದೆ ಎಂದು ಹುಡುಕುವುದನ್ನೂ ಪ್ರಜೆಯ ಕೆಲಸವನ್ನಾಗಿಸುವ ತಂತ್ರವಿದು. ಇನ್ನು ತಂತ್ರಜ್ಞಾನದ ಬಳಕೆಯ ವಿಷಯದಲ್ಲಿಯೂ ಒಮ್ಮುಖ ಧೋರಣೆಯೊಂದಿದೆ. ಕೇಂದ್ರ ಸರ್ಕಾರದ ಇಲಾಖೆಗಳಿಗೆ ಆನ್‌ಲೈನ್‌ನಲ್ಲಿ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಬಹುದು. ಕರ್ನಾಟಕ ರಾಜ್ಯದಲ್ಲಿ ಅದಕ್ಕೂ ವ್ಯವಸ್ಥೆಯಿಲ್ಲ. ಒಂದು ವೇಳೆ ಹೀಗೊಂದು ಆನ್‌ಲೈನ್ ಅರ್ಜಿ ಸಲ್ಲಿಸಬೇಕೆಂದರೆ ಈ ಬಗೆಯ ಸೇವೆಯನ್ನು ನೀಡುವ ಖಾಸಗಿ ಪೋರ್ಟಲ್ ಒಂದಕ್ಕೆ ಹೋಗಬೇಕು. ಅವರು ಒದಗಿಸುವ ಸೇವೆಗಾಗಿ ಸಾಮಾನ್ಯ ಆರ್‌ಟಿಐ ಅರ್ಜಿಯ ಶುಲ್ಕದ ಹಲವು ಪಟ್ಟು ಹೆಚ್ಚು ಶುಲ್ಕವನ್ನೂ ಪಾವತಿಸಬೇಕು.

ಪ್ರಭುತ್ವವೇನೋ ತಂತ್ರಜ್ಞಾನವನ್ನು ಬಳಸಿ ಪ್ರಜೆಯ ಪ್ರತಿಯೊಂದು ಚಲನವಲನವನ್ನೂ ಗಮನಿಸುವುದಕ್ಕೆ ಬೇಕಿರುವ ವ್ಯವಸ್ಥೆ ಮಾಡಿಕೊಂಡಿದೆ. ಆದರೆ ಪ್ರಭುತ್ವವನ್ನು ಆರಿಸುವ ಪ್ರಜೆಯ ಬಳಿ ಆ ಬಗೆಯ ಯಾವ ಪರಿಕರವೂ ಇಲ್ಲ. ಅಷ್ಟೇಕೆ ಪ್ರಭುತ್ವ ನಿರ್ದಿಷ್ಟ ಮಾಹಿತಿಯನ್ನು ಒಂದು ಕಾರಣವನ್ನು ಹೇಳಿ ನಿರಾಕರಿಸಬಹುದು. ಆದರೆ ಪ್ರಜೆಗೆ ಹೀಗೆ ತನ್ನ ವೈಯಕ್ತಿಕ ಮಾಹಿತಿಯನ್ನು ಪ್ರಭುತ್ವಕ್ಕೆ ನೀಡದೇ ಇರುವ ಯಾವ ಅವಕಾಶವೂ ಇಲ್ಲ. ತಂತ್ರಜ್ಞಾನಾಧಾರಿತ ಆಡಳಿತ ಒಡ್ಡುವ ಈ ಸವಾಲುಗಳನ್ನು ಎದುರಿಸುವುದಕ್ಕೆ ಪಕ್ವಗೊಂಡ ಪ್ರಜಾಪ್ರಭುತ್ವಗಳು ತಮ್ಮದೇ ಆದ ತಂತ್ರಗಳನ್ನು ರೂಪಿಸಿಕೊಂಡಿವೆ. ಅದರಲ್ಲೊಂದು ‘ವೈಯಕ್ತಿಕ ಮಾಹಿತಿಯ ರಕ್ಷಣೆಯ ಕಾಯ್ದೆ’. ‘ಆಧಾರ್’ ಪರಿಕಲ್ಪನೆಯ ಸಂದರ್ಭದಲ್ಲಿಯೇ ಇಂಥದ್ದೊಂದು ಕಾಯ್ದೆಯ ಕರಡು ಭಾರತದಲ್ಲಿಯೂ ಸಿದ್ಧವಾಗಿತ್ತು. ಗುರುತು ಸಂಖ್ಯೆಯನ್ನು ವಿವಿಧ ಸೇವೆಗಳಿಗೆ ವಿಸ್ತರಿಸುವುದಕ್ಕೆ ಉತ್ಸಾಹ ತೋರುತ್ತಿರುವ ಪ್ರಭುತ್ವ ಈ ಕಾಯ್ದೆಯನ್ನು ಜಾರಿಗೆ ತರುವುದಕ್ಕೆ ಮಾತ್ರ ಇನ್ನೂ ಸಿದ್ಧವಾಗಿಲ್ಲ.

ಒಟ್ಟರ್ಥದಲ್ಲಿ ಇದನ್ನು ಗ್ರಹಿಸಿದರೆ ಹಳೆಯ ಸಿದ್ಧಾಂತಗಳನ್ನೇ ಮತ್ತೆ ಒಪ್ಪ ಬೇಕಾಗುತ್ತದೆ. ಪ್ರಭುತ್ವ ಅದು ಯಾವ ಬಗೆಯದ್ದೇ ಆದರೂ ಸದಾ ಅಭದ್ರತೆಯಿಂದ ಬಳಲುತ್ತಿರುತ್ತದೆ. ಇದೇ ಕಾರಣದಿಂದ ಅದು ತನ್ನನ್ನು ಅಪಾರದರ್ಶಕವಾಗಿರಿಸಿಕೊಂಡು ಪ್ರಜೆಯ ಬದುಕು ಮಾತ್ರ ತನ್ನ ಕಣ್ಣೋಟದಲ್ಲಿಯೇ ನಡೆಯಬೇಕೆಂದು ಬಯಸುತ್ತಿರುತ್ತದೆ. ಉಕ್ಕಿನ ಕಪಾಟುಗಳಲ್ಲಿ ಕಡತಗಳನ್ನು ಭದ್ರವಾಗಿರಿಸುತ್ತಿದ್ದ ಕಾಲದಲ್ಲಿಯೂ ಪ್ರಭುತ್ವಕ್ಕೆ ಸಂಪೂರ್ಣ ಅಪಾರದರ್ಶಕತೆಯನ್ನು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಮಾಹಿತಿಯ ಸೋರಿಕೆಗಳ ಮೂಲಕವೇ ಪ್ರಜಾಪ್ರಭುತ್ವ ವಿಜೃಂಭಿಸಿಬಿಡುತ್ತಿತ್ತು. ಈಗ ಅದಕ್ಕೊಂದು ಹೊಸ ಸಾಧ್ಯತೆ ಸೇರಿಕೊಂಡಿದೆ. ಈಗಿನ ಮಾಹಿತಿ ಇರುವುದು ಡಿಜಿಟಲ್ ಸ್ವರೂಪದಲ್ಲಿ. ಒಂದು ಸರ್ವರ್‌ಗೆ ಕನ್ನ ಹಾಕಿದರೆ ಬಹಳ ರಹಸ್ಯವೆಂದು ಸರ್ಕಾರ ಭಾವಿಸಿದ್ದ ಮಾಹಿತಿ ವಿಶ್ವದ ಮೂಲೆ ಮೂಲೆಗೂ ಹರಡಿ ಹೋಗುತ್ತದೆ. ವಿಕಿಲೀಕ್ಸ್ ಮತ್ತು ಎಡ್ವರ್ಡ್ ಸ್ನೋಡೆನ್ ಪ್ರಕರಣಗಳು ಹೇಳುವುದು ಅದನ್ನೇ.

ಪ್ರಭುತ್ವಗಳು ಬಯಸುವ ಏಕಮುಖೀ ಪಾರದರ್ಶಕತೆ ‘ಹ್ಯಾಕ್ಟಿವಿಸಂ’ ಎಂಬ ಹೊಸ ಬಗೆಯ ಹೋರಾಟದ ಹಾದಿಯನ್ನು ತೆರೆದಿದೆ ಎಂಬುದು ವಾಸ್ತವ. ಆದರೆ ಈ ಬಗೆಯ ಹೋರಾಟಗಳನ್ನು ಸರಳವಾಗಿ ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಎರಡಲಗಿನ ಕತ್ತಿ. ವಿವಿಧ ಸರ್ವರ್‌ಗಳಿಗೆ ಕನ್ನ ಹಾಕುವ ಸಾಧ್ಯತೆ ಪ್ರಭುತ್ವದ ಕಪಿಮುಷ್ಠಿಯಿಂದ ಮಾಹಿತಿಯನ್ನು ಹೊರತೆಗೆಯಲು ಸಹಾಯ ಮಾಡುವಂತೆಯೇ ಸಾಮಾನ್ಯ ಪ್ರಜೆಯ ಬ್ಯಾಂಕ್ ಖಾತೆಯ ಹಣವನ್ನು ಖಾಲಿ ಮಾಡುವುದಕ್ಕೂ ಬಳಕೆಯಾಗುತ್ತದೆ ಎಂಬುದನ್ನು ನಾವು ಮರೆಯುವಂತಿಲ್ಲ.

]]>

Leave a Reply Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

March 2017
M T W T F S S
 12345
6789101112
13141516171819
20212223242526
2728293031  
« Feb   Nov »
  • December 2017
  • November 2017
  • March 2017
  • February 2017
  • January 2017
  • June 2014
  • March 2010
  • June 2009
  • May 2009
  • April 2009
  • March 2009
  • February 2009
  • January 2009
  • October 2008
  • September 2008
  • August 2008
  • July 2008
  • May 2008
  • April 2008
  • March 2008
  • February 2008
  • January 2008
  • December 2007
  • November 2007
  • September 2007
  • August 2007
  • July 2007
  • April 2007
  • January 2007
  • December 2006
  • October 2006
  • September 2006
  • May 2006
  • ಪ್ರಜೆಗಳನ್ನು ಬೆತ್ತಲಾಗಿಸುವ ಅಪಾರದರ್ಶಕ ಪ್ರಭುತ್ವ
  • ಇಂಟರ್‌ನೆಟ್ ಇಲ್ಲದ ಡಿಜಿಟಲ್ ಆರ್ಥಿಕತೆ!
  • ನೋಟು ರದ್ದತಿಯಲ್ಲಿ ಕಂಡ ಡಿಜಿಟಲ್ ಡಿವೈಡ್
  • ಮಾಧ್ಯಮ ನಿಯಂತ್ರಣದ ‘ಭದ್ರತಾ’ ತಂತ್ರಗಳು
  • ಒಮ್ಮುಖ ಪಾರದರ್ಶಕತೆಯ ತಂತ್ರಜ್ಞಾನಾಧಾರಿತ ಪ್ರಭುತ್ವ
  • ಇ-ಹೊತ್ತು ಅಂಕಣ
  • ಒಂಟಿದನಿ (ಉದಯವಾಣಿ ಅಂಕಣ)
  • ಟಿಪ್ಪಣಿ
  • ಪ್ರಜಾವಾಣಿ
  • ಬಿಡಿ ಬರಹಗಳು
  • Privacy Policy
© 2023 Freedom of the present | ಈ ನಡುವಿನ ಬಿಡುವು | Powered by Superbs Personal Blog theme