ಎನ್‌ಡಿಟಿವಿ ಇಂಡಿಯಾ ವಾಹಿನಿ ‘ರಾಷ್ಟ್ರೀಯ ಭದ್ರತೆ’ಯನ್ನು ಅಪಾಯಕ್ಕೆ ಒಡ್ಡುವ ಸುದ್ದಿಯನ್ನು ಪ್ರಸಾರ ಮಾಡಿದ್ದಕ್ಕಾಗಿ ಒಂದು ದಿನ ಪ್ರಸಾರ ಸ್ಥಗಿತಗೊಳಿಸಬೇಕಾದ ಶಿಕ್ಷೆಗೆ ಗುರಿಯಾಗಿದೆ. ಅಂತರ ಸಚಿವಾಲಯ ಸಮಿತಿಯ ಈ ಆದೇಶ ಹೊರ ಬೀಳುವುದಕ್ಕೆ ಕೆಲವು ದಿನಗಳ ಹಿಂದಷ್ಟೇ ಅಮೆರಿಕದ ಬ್ರೂಕಿಂಗ್ ಇನ್ಸ್‌ಟಿಟ್ಯೂಟ್ ಒಂದು ವರದಿಯನ್ನು ಪ್ರಕಟಿಸಿತ್ತು. ‘ಎನ್‌ಡಿಟಿವಿ’ ಪ್ರಸಾರ ಸ್ಥಗಿತದಷ್ಟು ಸುದ್ದಿಯಾಗದ ಮತ್ತೊಂದು ವಿಚಾರವನ್ನು ಈ ವರದಿ ಬಯಲಿಗೆ ತಂದಿತ್ತು. ಅದರ ಪ್ರಕಾರ ‘ಕಾನೂನು–ಸುವ್ಯವಸ್ಥೆ’ಯ ಕಾರಣವನ್ನು ಮುಂದೊಡ್ಡಿ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸುವ ದೇಶಗಳಲ್ಲಿ ಭಾರತಕ್ಕೆ ಅಗ್ರಸ್ಥಾನ.

ಈ ವರದಿಯ ಪ್ರಕಾರ 2015ರ ಜುಲೈ 1ರಿಂದ 2016ರ ಜೂನ್ 30ರ ತನಕದ ಅವಧಿಯಲ್ಲಿ ಭಾರತದಲ್ಲಿ 22 ಬಾರಿ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಇಷ್ಟೇ ಪ್ರಮಾಣ­ದಲ್ಲಿ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತ­ಗೊಳಿಸಿದ ಮತ್ತೊಂದು ಸರ್ಕಾರವೆಂದರೆ ಯುದ್ಧಪೀಡಿತ ಇರಾಕ್! ಈ ಬಗೆಯಲ್ಲಿ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತ­ಗೊಳಿಸದ ಕಾರಣಕ್ಕಾಗಿ ನಷ್ಟವಾದ ಮೊತ್ತ 6,485 ಕೋಟಿ ರೂಪಾಯಿಗಳು.

ಬ್ರೂಕಿಂಗ್ ಇನ್ಸ್‌ಟಿಟ್ಯೂಟ್‌ನ ಆಡಳಿತ ಅಧ್ಯಯನ ವಿಭಾಗ ಸಿದ್ಧಪಡಿಸಿದ ಈ ವರದಿ ಮುಖ್ಯವಾಹಿನಿಯ ಮಾಧ್ಯಮ­ಗಳಲ್ಲಿ ಒಂದು ಪುಟ್ಟ ವರದಿಯಾಗಿಯಷ್ಟೇ ಕಾಣಿಸಿಕೊಂಡಿತು. ಈ ವರದಿಯಲ್ಲಿ ಪ್ರಸ್ತಾಪಿಸಲಾಗಿರುವ ಅಂದಾಜುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂಬುದನ್ನು ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ವರದಿ ಹೇಳಿತ್ತು. ಅದರ ಪ್ರಕಾರ 2015ರಿಂದ ಈಚೆಗೆ 11 ರಾಜ್ಯ ಸರ್ಕಾರಗಳು  37 ಬಾರಿ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಿವೆ. ಇವುಗಳಲ್ಲಿ 22 ಪ್ರಕರಣಗಳು 2016ರ ಒಂಬತ್ತು ತಿಂಗಳ ಅವಧಿಯಲ್ಲಿ ನಡೆದಿವೆ.

ಗುಜರಾತ್‌ನಲ್ಲಿ ಗ್ರಾಮ ಸಹಾಯಕರ ನೇಮಕಾತಿ ಪರೀಕ್ಷೆಯ ಸಂದರ್ಭ­ದಲ್ಲಿಯೂ ಇಂಟರ್ನೆಟ್ ಸ್ಥಗಿತಗೊಳಿಸ­ಲಾಗಿತ್ತು. ಇನ್ನು ಪಾಟಿದಾರ್ ಸಮುದಾಯದ ಪ್ರತಿಭಟನೆ ಆಮೇಲೆ ದಲಿತರ ರ್‍ಯಾಲಿಗಳ ಸಂದರ್ಭದಲ್ಲಿ ಇದು ಮುಂದುವರೆಯಿತು. ಇದು ಮಧ್ಯಪ್ರದೇಶ, ರಾಜಸ್ತಾನ ಮತ್ತು ಕಾಶ್ಮೀರ­­ಗಳಲ್ಲಿಯೂ ಕಾಣಿಸಿಕೊಂಡಿತು. ಕರ್ನಾಟಕ, ತಮಿಳುನಾಡು, ಮಹಾ­ರಾಷ್ಟ್ರಗಳಲ್ಲಿಯೂ ಬೇರೆ ಬೇರೆ ಸಂದರ್ಭ­ಗಳಲ್ಲಿ ಇಂಟರ್ನೆಟ್ ಸೇವೆಯನ್ನು ಕೆಲವೇ ಪ್ರದೇಶಗಳಿಗೆ ಸೀಮಿತಗೊಳಿಸಿ ಸ್ಥಗಿತಗೊಳಿಸುವ ಕ್ರಿಯೆ ನಡೆದಿದೆ.

ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸುವುದಕ್ಕೆ ಸರ್ಕಾರಗಳು ನೀಡಿದ ಕಾರಣ ಒಂದೇ ‘ಕಾನೂನು ಮತ್ತು ಸುವ್ಯವಸ್ಥೆ’. ಎನ್‌ಡಿಟಿವಿ ಇಂಡಿಯಾಕ್ಕೆ ನೀಡಿರುವ ಪ್ರಸಾರ ಸ್ಥಗಿತದ ಶಿಕ್ಷೆಗೂ ನೀಡಿರುವ ಕಾರಣ ಕೂಡಾ ಹೆಚ್ಚು ಕಡಿಮೆ ಇದೇ ಬಗೆಯದ್ದು ‘ರಾಷ್ಟ್ರೀಯ ಭದ್ರತೆಗೆ ಕುತ್ತು’.

ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸುವುದಕ್ಕೆ ವಿವಿಧ ರಾಜ್ಯ ಸರ್ಕಾರಗಳು ನೀಡಿದ ಕಾರಣ ಮತ್ತು ಎನ್‌ಡಿಟಿವಿಗೆ ಶಿಕ್ಷೆ ವಿಧಿಸಬೇಕೆಂಬ ತೀರ್ಮಾನಕ್ಕೆ ಬರಲು ತಥಾಕಥಿತ ಅಂತರ್ ಸಚಿವಾಲಯ ಸಮಿತಿ ಆರಿಸಿಕೊಂಡ ಕಾರಣಗಳೆರಡನ್ನೂ ಮಾಧ್ಯಮ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಪರೀಕ್ಷಿಸಬೇಕಾದ ಅಗತ್ಯವಿದೆ. ಇಂಟರ್‌ನೆಟ್‌ ಸೇವೆಯೆಂಬುದು ನೀರಿನ ಸಂಪರ್ಕ ಅಥವಾ ವಿದ್ಯುತ್ ಸಂಪರ್ಕಕ್ಕೆ ಹೋಲಿಸಬಹುದಾದ ಸೇವೆಯಲ್ಲ. ವರ್ತ­ಮಾನದ ಸಂದರ್ಭದಲ್ಲಿ ಇದೊಂದು ಮಾಧ್ಯಮ ಮೂಲ ಸೌಕರ್ಯ. ಕಾನೂನು ಸುವ್ಯವಸ್ಥೆಯನ್ನು ಮುಂದಿಟ್ಟುಕೊಂಡು ಇಂಟರ್‌ನೆಟ್‌ ಸೇವೆಯನ್ನು ತಾತ್ಕಾಲಿಕ­ವಾಗಿ ತಡೆಯುವುದು ರಾಜ್ಯ ಸರ್ಕಾರಗಳಿಗೆ ಸಾಧ್ಯವಿದೆ ಎಂದಾದರೆ ಮುಂದೊಂದು ದಿನ ಪ್ರತಿಯೊಂದು ಪೊಲೀಸ್ ಠಾಣೆಯೂ ಇಂಟರ್‌ನೆಟ್‌ ಸೆನ್ಸಾರ್ ಮಂಡಳಿಯಾಗಿಬಿಡುವ ಅಪಾಯವಿದೆ.

ಇನ್ನು ಎನ್‌ಡಿಟಿವಿ ಇಂಡಿಯಾ ವಾಹಿನಿಗೆ ನೀಡಿರುವ ಪ್ರಸಾರ ಸ್ಥಗಿತ ಶಿಕ್ಷೆಯನ್ನೂ ಇದೇ ಬಗೆಯಲ್ಲಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಪ್ರಸ್ತಾರ ಸ್ಥಗಿತದ ಆದೇಶದಲ್ಲಿ ಹೇಳಿರುವಂತೆ ಜನವರಿ ‘ನೇರ ಪ್ರಸಾರಕ್ಕೆ ಸಮೀಪವೆನಿಸುವ ವರದಿಗಾರಿಕೆ’ಯಲ್ಲಿ ‘ಪಠಾಣ್‌ಕೋಟ್ ವಾಯುನೆಲೆಯ ವಿವರಗಳನ್ನು ಬಹಿರಂಗ ಪಡಿಸಲಾಗಿದೆ’. ಈ ವರದಿಯಲ್ಲಿ ಬಳಸಲಾಗಿರುವ ಎಲ್ಲವೂ ಅಂತರ್ಜಾಲದಲ್ಲಿ ಲಭ್ಯವಿದ್ದ ಮಾಹಿತಿ ಮತ್ತು ಸೇನೆಯ ವಕ್ತಾರರು ಹೇಳಿದ ಮಾಹಿತಿಗಳಷ್ಟೇ. ಇಷ್ಟಕ್ಕೂ ಕಾರ್ಯಾಚರಣೆಯ ದೃಶ್ಯಗಳೇನೂ ಈ ವರದಿಯಲ್ಲಿಲ್ಲ.ಆದರೆ ಇದನ್ನು ಕೇಬಲ್ ಟಿ.ವಿ. ನಿಯಂತ್ರಣ ಕಾಯ್ದೆಯಲ್ಲಿ ಹೇಳ­ಲಾಗಿರುವ ಕಾರ್ಯಕ್ರಮ ಸಂಹಿತೆಯ ಉಲ್ಲಂಘನೆ ಎಂದು ಅಂತರ ಸಚಿ­ವಾಲಯ ಸಮಿತಿ ವ್ಯಾಖ್ಯಾನಿಸಿದೆ. ಈ ವಿಷಯವನ್ನು ಅಧಿಕಾರಿಗಳ ಸಮಿತಿ­ಯೊಂದು ನಿರ್ಧರಿಸುವುದು ಮುಖ್ಯ ಸಮಸ್ಯೆ. ನ್ಯಾಯಮೂರ್ತಿ ರವೀಂದ್ರನ್ ಅವರು ಅಧ್ಯಕ್ಷರಾಗಿರುವ ನ್ಯಾಷನಲ್ ಬ್ರಾಡ್‌ಕಾಸ್ಟರ್ಸ್ ಸ್ಟ್ಯಾಂಡರ್ಡ್ ಅತಾರಿಟಿಗೆ (ಎನ್‌ಬಿಎಸ್ಎ) ಸರ್ಕಾರ ದೂರು ಸಲ್ಲಿಸಬಹುದಿತ್ತು. ಈ ಸ್ವತಂತ್ರ ಸಂಸ್ಥೆ ತನಿಖೆ ನಡೆಸಿ ಸರ್ಕಾರದ ಆರೋಪ ನಿಜವೆಂದು ಈ ಸಂಸ್ಥೆ ಹೇಳಿದ್ದರೆ ಎನ್‌ಡಿಟಿವಿ ಶಿಕ್ಷೆಯನ್ನು ಅನು-ಭವಿಸಲೇಬೇಕಾಗುತ್ತಿತ್ತು.

ಸುದ್ದಿ ಪ್ರಸಾರಕರ ಮಟ್ಟಿಗೆ ಇಂಥದ್ದೊಂದು ತೋರಿಕೆಯ ವ್ಯವಸ್ಥೆ­ಯಾದರೂ ಇದೆ. ಇಂಟರ್ನೆಟ್ ಸೇವೆಗೆ ಸಂಬಂಧಿಸಿದಂತೆ ಇಂಥ ಯಾವ ವ್ಯವಸ್ಥೆಯೂ ಇಲ್ಲ. ಕಾನೂನು–ಸುವ್ಯವಸ್ಥೆಯ ನೆಪದಲ್ಲಿ ಯಾವ ಸರ್ಕಾರ ಬೇಕಾದರೂ ಈ ಬಗೆಯ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬಹುದಾದ ಸ್ಥಿತಿ ಇದೆ. ಈ ಬಗೆಯ ಅಸ್ಪಷ್ಟತೆಯ ಹಿಂದೆ ತಂತ್ರಜ್ಞಾನದ ಬೆಳವಣಿಗೆಗೆ ವೇಗಕ್ಕೆ ಹೊಂದಿಕೊಳ್ಳದ ನೀತಿ ನಿರೂಪಣಾ ವ್ಯವಸ್ಥೆ ಇಲ್ಲದಿರುವುದನ್ನು ಕಾರಣವಾಗಿ ಹೇಳ­ಲಾಗುತ್ತಿತ್ತು. ಆದರೆ ಕಳೆದ ಒಂದು ದಶಕದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಹೊಸ ತಂತ್ರಜ್ಞಾನ ಒದಗಿಸಿ­ಕೊಡುತ್ತಿರುವ ಅಭಿವ್ಯಕ್ತಿಯ ಅವಕಾಶ­ಗಳನ್ನು ಪ್ರಭುತ್ವ ಸಹಿಸಿಕೊಳ್ಳುತ್ತಿಲ್ಲ ಎಂಬುದು ಸ್ಪಷ್ಟ.

ಯುಪಿಎ ಸರ್ಕಾರದ ಕಾಲದಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯೊಳಕ್ಕೆ ‘66ಎ’ಯಂಥ ಅಸ್ಪಷ್ಟ ವ್ಯಾಖ್ಯಾನವಿರುವ ನಿಯಮವೊಂದನ್ನು ಸೇರಿಸಿ ಪತ್ರಿಕೆಯಲ್ಲಿ ಪ್ರಕಟ­ವಾದುದನ್ನು ಸಾಮಾಜಿಕ ಜಾಲ­ತಾಣಗಳಲ್ಲಿ ಪ್ರಕಟಿಸಿದರೂ ಬಂಧಿಸಬಹುದಾದ ಸ್ಥಿತಿಯನ್ನು ತಂದಿಟ್ಟಿತ್ತು. ಕೇಬಲ್ ಟಿ.ವಿ. ನಿಯಂತ್ರಣ ಕಾಯ್ದೆಯೊಳಕ್ಕೆ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯ ಸುದ್ದಿ ಪ್ರಸಾರಕ್ಕೆ ಸಂಬಂಧಿಸಿದ ನಿಯಮವೊಂದನ್ನು 2015ರಲ್ಲಿ ಎನ್‌ಡಿಎ ತೂರಿಸಿದೆ. ಇದನ್ನು ಬಳಸಿಕೊಂಡು ಯಾವುದೇ ವಾಹಿನಿಯ ಪ್ರಸಾರವನ್ನು ನಿರ್ಧಿಷ್ಟ ಅವಧಿಗೆ ತಡೆಯಬಹುದಾದ ಸಾಧ್ಯತೆಯೊಂದನ್ನು ಸೃಷ್ಟಿಸಿಕೊಂಡಿದೆ. ಹಿಂದೆ ಯುಪಿಎ ಮಾಡಿದ್ದಾಗಲೀ 2015ರಲ್ಲಿ ಎನ್‌ಡಿಎ ಮಾಡಿದ್ದಾಗಲೀ ನೀತಿ ನಿರೂಪಣಾ ಕ್ರಿಯೆಯ ಗೊಂದಲವನ್ನು ಸೂಚಿಸುವುದಕ್ಕಿಂತ ಹೆಚ್ಚಾಗಿ ಮಾಧ್ಯಮವನ್ನು ನಿಯಂತ್ರಿಸುವ ದುರುದ್ದೇಶವನ್ನು ಹೇಳುತ್ತಿದೆ.

‘66ಎ’ಯ ದುಷ್ಪರಿಣಾಮ ಸುಪ್ರೀಂ ಕೋರ್ಟ್‌ನ ಮಧ್ಯಪ್ರವೇಶದಿಂದ ಸ್ವಲ್ಪ ಮಟ್ಟಿಗೆ ನಿವಾರಣೆಯಾಗಿದೆ. ಕೇಬಲ್ ಟಿ.ವಿ. ನಿಯಂತ್ರಣ ಕಾನೂನಿನ ಸಮಸ್ಯೆಯನ್ನೂ ಸುಪ್ರೀಂ ಕೋರ್ಟ್ ಪರಿಹರಿಸುತ್ತದೆ ಎಂಬ ಭರವಸೆಯಷ್ಟೇ ಈಗಿರುವುದು.

]]>