Skip to content

Freedom of the present | ಈ ನಡುವಿನ ಬಿಡುವು

ಅಳಿಸಲಾಗದ ಅಕ್ಷರವ ಬರೆಯಲಾಗದು!

Menu
  • Privacy Policy
Menu

Category: ಒಂಟಿದನಿ (ಉದಯವಾಣಿ ಅಂಕಣ)

ಶಿಕ್ಷಣ ಸಚಿವರ ಪಠ್ಯ ಬದಲಾವಣೋತ್ಸಾಹ

Posted on October 21, 2008May 24, 2015 by Ismail

ಮನುಷ್ಯನನ್ನು ಪ್ರಾಣಿಗಳಿಂದ ಭಿನ್ನವಾಗಿಸುವ ಮುಖ್ಯ ಲಕ್ಷಣಗಳ ಲ್ಲೊಂದು ಭಾಷೆ. ಹಾಗಿದ್ದರೆ ಪ್ರಾಣಿಗಳಿಗೆ ಭಾಷೆ ಇಲ್ಲವೇ? ಅವುಗಳೂ ತಮ್ಮದೇ ಆದ ರೀತಿಯಲ್ಲಿ ಸದ್ದುಗಳನ್ನು ಸೃಷ್ಟಿಸುವ ಮೂಲಕ ಪರಸ್ಪರ ಸಂವಹನವನ್ನು ಸಾಧಿಸುತ್ತವೆಯಲ್ಲವೇ ಎಂಬ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಈ ಪ್ರಶ್ನೆಗಳು ಸರಿಯಾಗಿಯೇ ಇವೆ. ಆದರೆ ಇವು ಮನುಷ್ಯನ ಭಾಷೆಯ ವೈಶಿಷ್ಟ್ಯವನ್ನು ಅರಿಯದೇ ಇರುವುದರಿಂದ ಹುಟ್ಟಿರುವ ಪ್ರಶ್ನೆಗಳು.

ಪ್ರಾಣಿಗಳ ಭಾಷೆಯೆಂದರೆ ನಿರ್ದಿಷ್ಟ ಸಂಖ್ಯೆಯ ಸಂಜ್ಞೆಗಳು ಮಾತ್ರ. ಹಸಿವಾದಾಗ ಒಂದು ಸಂಜ್ಞೆ, ಶತ್ರುವನ್ನು ನೋಡಿದಾಗ ಮತ್ತೊಂದು ಸಂಜ್ಞೆ, ಮಿಲನಕ್ಕೆ ಅಣಿಯಾಗುವುದಕ್ಕೆ ಇನ್ನೊಂದು ಸಂಜ್ಞೆ ಹೀಗೆ. ಇದನ್ನು ಒಂದು ಸರಳ ಉದಾಹರಣೆಯ ಮೂಲಕ ವಿವರಿಸಬಹುದು. ಮನೆಯ ನಾಯಿ ಅದಕ್ಕೆ ಅಸಹಜ ಎನಿಸಿದ್ದನ್ನು ಕಂಡಾಗ ಬೊಗಳುತ್ತದೆ. ಈ ಬೊಗಳುವಿಕೆಯ ತೀವ್ರತೆಯನ್ನು ಅನುಸರಿಸಿ ಅದೆಷ್ಟು ಕೋಪಗೊಂಡಿದೆ ಯೆಂದು ಊಹಿಸಬಹುದಾದರೂ ಅದು ನಿರ್ದಿಷ್ಟವಾಗಿ ಏನನ್ನು ನೋಡಿದೆ ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ. ಲಂಗೂರ್‌ ಕೋತಿಗಳು ಕಾಡಿನಲ್ಲಿ ಹುಲಿ, ಚಿರತೆಯಂಥ ಪ್ರಾಣಿಗಳನ್ನು ಕಂಡಾಗ ಸದ್ದು ಮಾಡುತ್ತವೆ. ಈ ಸದ್ದನ್ನು ಕೇಳಿ ಅದು ಹುಲಿಯನ್ನು ನೋಡಿತೇ ಚಿರತೆಯನ್ನು ನೋಡಿತೇ ಎಂದು ನಿರ್ಧರಿಸಲಾಗದು.

ಮನುಷ್ಯನ ಭಾಷೆ ಹೀಗಲ್ಲ. ಅದು ಅನಂತ ಸಂಖ್ಯೆಯ ಅಭಿವ್ಯಕ್ತಿ ಗಳಿಗೆ ಅವಕಾಶವಿರುವ ಭಾಷೆ. ಈ ಕಾರಣದಿಂದಾಗಿಯೇ ಮನುಷ್ಯ ಪ್ರಾಣಿಗಳಿಗಿಂತ ಭಿನ್ನನಾಗುತ್ತಾನೆ. ಪ್ರಾಣಿಗಳ ಭಾಷೆ ಹುಟ್ಟಿಕೊಳ್ಳುವುದು ಅವುಗಳ ಮೆದುಳು ಬಳ್ಳಿಯಲ್ಲಿ. ಮನುಷ್ಯನ ಭಾಷೆ ಹುಟ್ಟಿಕೊಳ್ಳುವುದು ಅವನ ಮೆದುಳಿನ ಎಡ ಗೋಳಾರ್ಧದ ಮೇಲ್ಭಾಗದಲ್ಲಿ. ಮೆದುಳು ಬಳ್ಳಿಯಿಂದ ಉತ್ಪತ್ತಿಯಾಗುವ ಸಂದೇಶಗಳೆಲ್ಲವೂ ಭಾವನಾತ್ಮಕ ತುರ್ತಿನವು. ಈ ಕುರಿತಂತೆ ನಾವೆಲ್ಲರೂ ಹೈಸ್ಕೂಲ್‌ ಮಟ್ಟದ ಪಠ್ಯ ಪುಸ್ತಕಗಳಲ್ಲೇ ಓದಿರುತ್ತೇವೆ. ಪರಾವರ್ತಿತ ಪ್ರತಿಕ್ರಿಯೆಗಳು ಮೆದುಳು ಬಳ್ಳಿಯಿಂದಲೇ ಹುಟ್ಟಿಕೊಳ್ಳುತ್ತವೆ. ಉದಾಹರಣೆಗೆ ಬಿಸಿಯಾದ ಕೆಂಡವನ್ನು ಮುಟ್ಟಿದರೆ ತಕ್ಷಣ ಕೈಯನ್ನು ಹಿಂದಕ್ಕೆ ತೆಗೆದುಕೊಳ್ಳುವಂಥ ಪ್ರತಿಕ್ರಿಯೆಗಳಿವು. ಇಲ್ಲಿ ತರ್ಕ, ಕಾರಣಗಳಿಗೆ ಅವಕಾಶವಿಲ್ಲ. ಇವೆಲ್ಲಾ ತಕ್ಷಣದ ರಕ್ಷಣಾ ಕ್ರಿಯೆ ಗಳು. ಪ್ರಾಣಿಗಳ ಭಾಷೆ ಹುಟ್ಟಿಕೊಳ್ಳುವುದು ಇಂಥ ಕಾರಣಗಳಿಂದ.

Read more

ನೀಚ ಬುದ್ಧಿಯ ಬಿಡು ನಾಲಿಗೆ

Posted on October 7, 2008May 24, 2015 by Ismail

`ದೊಡ್ಡ ಮರವೊಂದು ಉರುಳುವಾಗ ಸುತ್ತಲಿನ ಭೂಮಿ ಅದುರುತ್ತದೆ’ ಸಾಮಾನ್ಯ ಸಂದರ್ಭದಲ್ಲಿ ಒಂದು ನಾಣ್ನುಡಿಯಷ್ಟೇ ಆಗಬಹುದಾಗಿದ್ದ ಈ ಹೇಳಿಕೆಗೆ ಕ್ರೌರ್ಯವನ್ನು ಲೇಪಿಸಿದ್ದು ಭಾರತದ ಪ್ರಧಾನಿಯಾಗಿದ್ದ ರಾಜೀವ್‌ ಗಾಂಧಿ. ಇಂದಿರಾ ಹತ್ಯೆ ನಂತರ ದಿಲ್ಲಿಯಲ್ಲಿ ನಡೆದ ಸಿಕ್ಖರ ನರಮೇಧವನ್ನು ಸಮರ್ಥಿಸಿಕೊಳ್ಳಲು ರಾಜೀವ್‌ ಈ ನಾಣ್ನುಡಿ ಬಳಸಿಕೊಂಡಿದ್ದರು.

ಖ್ಯಾತ ಭೌತ ವಿಜ್ಞಾನಿ ಐಸಾಕ್‌ ನ್ಯೂಟನ್‌ ಪ್ರತಿಪಾದಿಸಿದ ಬಲ ವಿಜ್ಞಾನದ ಸಿದ್ಧಾಂತಗಳಲ್ಲಿ ಮೂರನೆಯದ್ದು `ಪ್ರತಿಯೊಂದು ಕ್ರಿಯೆಗೂ ಒಂದು ಸಮಾನ ಮತ್ತು ವಿರುದ್ಧ ದಿಕ್ಕಿನ ಪ್ರತಿಕ್ರಿಯೆ ಇರುತ್ತದೆ’. ಭೌತಶಾಸ್ತ್ರದ ಈ ಮಹತ್ವದ ಹೇಳಿಕೆ ಗುಜರಾತ್‌ನ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಗೋಧ್ರಾ ನಂತರದ ನರಮೇಧವನ್ನು ಸಮರ್ಥಿಸಿಕೊಳ್ಳುವ ಹೇಳಿಕೆಯಾಗಿಬಿಟ್ಟಿತು.ಬಲ ವಿಜ್ಞಾನದ ಇತಿಹಾಸದಲ್ಲಿ ಮಹತ್ತರವಾದ ಸ್ಥಾನವನ್ನು ಪಡೆದಿದ್ದ ಈ ಹೇಳಿಕೆ ಭಾರತದ ರಾಜಕೀಯ ಇತಿಹಾಸದಲ್ಲಿ ಒಂದು ಕ್ರೌರ್ಯಕ್ಕೆ ಸಂವಾದಿಯಾಗಿಬಿಟ್ಟಿತು.

Read more

ಕರ್ನಾಟಕ ರಾಜಕಾರಣದ ದುರಂತ ನಾಯಕರು

Posted on October 4, 2008May 24, 2015 by Ismail

<p>
ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನ ಆರ್‌.ವಿ.ದೇಶಪಾಂಡೆಯವರಿಗೆ ದೊರೆತಿದೆ. ಪರಿಣಾಮವಾಗಿ ಸಿದ್ದರಾಮಯ್ಯ ಬೆಂಬಲಿಗರಿಗೆ ಸಿಟ್ಟು ಬಂದಿದೆ. ಈಗವರು `ಅಹಿಂದ'ದ ಮೂಲಕ ರಣಕಹಳೆ ಮೊಳಗಿಸಲಿದ್ದಾರೆ. ಸಿದ್ದರಾಮಯ್ಯನವರೂ ಇದಕ್ಕೆ ಓಗೊಟ್ಟು ಭಾವುಕರಾಗಿ ಮಾತನಾಡುತ್ತಾರೆ. ಇದು ಈ ಹಿಂದೆಯೂ ಸಂಭವಿಸಿತ್ತು. ಆಗ ಸಿದ್ದರಾಮಯ್ಯ ಸೆಕ್ಯುಲರ್‌ ಜನತಾದಳದಲ್ಲಿದ್ದರು. ಆಗ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿ ಹೋಗಿತ್ತೆಂಬ ಅಸಮಾಧಾನವಿತ್ತು. ಅಷ್ಟು ಸಾಲದೆಂಬಂತೆ ದೇವೇಗೌಡರ ಮಗ ಎಚ್‌.ಡಿ.ಕುಮಾರಸ್ವಾಮಿ ಸರಕಾರವನ್ನು ತಮ್ಮ ಅಂಕೆಯಲ್ಲಿಟ್ಟುಕೊಳ್ಳಲು ಬೇಕಾದ ಎಲ್ಲವನ್ನೂ ಮಾಡುತ್ತಿದ್ದರು. ಇದನ್ನು ಪ್ರತಿಭಟಿಸಲು ಸಿದ್ದರಾಮಯ್ಯ `ಅಹಿಂದ' ವೇದಿಕೆ ಬಳಸಿಕೊಂಡರು. ದೇವೇಗೌಡರು ಸಿದ್ದರಾಮಯ್ಯನವರಿಗಿದ್ದ ಉಪ ಮುಖ್ಯಮಂತ್ರಿ ಹುದ್ದೆಯನ್ನೂ ಕಿತ್ತುಕೊಂಡರು.
</p>
<p>
ಈಗ ಸಿದ್ದರಾಮಯ್ಯ ಕಾಂಗ್ರೆಸ್ಸಿನಲ್ಲಿದ್ದಾರೆ. ಸೆಕ್ಯುಲರ್‌ ಜನತಾದಳದಿಂದ ದೂರವಾದ ಹೊಸತರಲ್ಲಿ ಎಲ್ಲರಿಗೂ ಕೇಳಿಸುವಂತೆ `ಅಹಿಂದ' ಜಪ ಮಾಡುತ್ತಿದ್ದ ಸಿದ್ದರಾಮಯ್ಯನವರು ಕಾಂಗ್ರೆಸ್‌ಗೆ ಹತ್ತಿರವಾಗುತ್ತಾ ಹೋದಂತೆ `ಅಹಿಂದ' ಜಪದ ಧ್ವನಿಯನ್ನು ಮೆತ್ತಗಾಗಿಸಿ ಕೊನೆಗೊಮ್ಮೆ ಮೌನ ಜಪಕ್ಕೆ ಶರಣಾಗಿಬಿಟ್ಟರು. ಈಗ ಮತ್ತೆ `ಅಹಿಂದ' ಜಪದ ಧ್ವನಿಯನ್ನು ಸಿದ್ದರಾಮಯ್ಯ ತಾರಕಕ್ಕೆ ಏರಿಸಿದ್ದಾರೆ. ಇದನ್ನು ಕೇಳಿ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದವರೆಲ್ಲಾ ತಮ್ಮ ಕೈ ಹಿಡಿದು ಮೇಲೆತ್ತುತ್ತಾರೆ ಎಂಬ ಭಾವನೆ ಸಿದ್ಧರಾಮಯ್ಯನವರಿಗೂ ಅವರ ತಥಾಕಥಿತ ಬೆಂಬಲಿಗರಿಗೂ ಇರುವಂತೆ ಕಾಣಿಸುತ್ತದೆ.

Read more

ವಿರೋಧಿಗಳದ್ದೇ ‘ರಾಜ್ಯಭಾರ’ವಾದರೆ ಸರಕಾರವೇಕೆ?

Posted on September 23, 2008May 24, 2015 by Ismail

ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪನವನವರು ಅಧಿಕಾರ ಸ್ವೀಕರಿಸುವುದಕ್ಕೆ ಸರಿಯಾಗಿ ಹನ್ನೊಂದು ದಿನಗಳ ಮೊದಲು ಕರ್ನಾಟಕದಲ್ಲೊಂದು ಕಳ್ಳಭಟ್ಟಿ ದುರಂತ ಸಂಭವಿಸಿತು. ಕರ್ನಾಟಕದಲ್ಲೇ ನೂರಕ್ಕೂ ಹೆಚ್ಚು ಮಂದಿ ಬಲಿಯಾದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಯೋಜಿತ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಈ ಘಟನೆಯ ಹಿಂದೆ ತಮ್ಮ ವಿರೋಧಿಗಳ ಕೈವಾಡವನ್ನು ಸಂಶಯಿಸಿದ್ದರು. ಇದನ್ನವರು ಬೇರೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸಿದ್ದರು. ಇದಕ್ಕೆ ತಕ್ಕಂತೆ ಸಾರಾಯಿ ನಿಷೇಧವನ್ನು ತೀವ್ರ ಟೀಕೆಗೆ ಒಳಪಡಿಸಿದ್ದ ಕಾಂಗ್ರೆಸ್‌ ನಾಯಕರಾದ ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿಯವರಂಥ ಹೇಳಿಕೆಗಳೂ ಇದ್ದವು.

ಯಡಿಯೂರಪ್ಪನವರು ಅಧಿಕಾರ ಸ್ವೀಕರಿಸಿದ ಹತ್ತೇ ದಿನಗಳಲ್ಲಿ ಗೊಬ್ಬರ ಕೊರತೆಯಿಂದ ರೊಚ್ಚಿಗೆದ್ದು ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಗೋಲಿಬಾರ್‌ ನಡೆಯಿತು. ಗುಂಡು ತಗುಲಿದ ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಈ ಸಂದರ್ಭದಲ್ಲಿಯೂ ಯಡಿಯೂರಪ್ಪನವರು ಸಂಶಯಿಸಿದ್ದು ವಿರೋಧಿ ಗಳ ಕೈವಾಡವನ್ನೇ. ಇದಕ್ಕೆ ತಕ್ಕಂತೆ ಕೇಂದ್ರ ಸರಕಾರ ಗೊಬ್ಬರ ಬಿಡುಗಡೆ ಮಾಡಿರಲಿಲ್ಲ. ಗೊಬ್ಬರದ ಲಾರಿಗಳನ್ನೇ ಹಿಡಿದು ನಿಲ್ಲಿಸುವಷ್ಟರ ಮಟ್ಟಿಗೆ ಪ್ರತಿಭಟನೆಗಳು ತೀವ್ರಗೊಂಡಿದ್ದವು. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವಷ್ಟು ಹಿಂಸಾತ್ಮಕ ಪ್ರತಿಭಟನೆಗಳೂ ನಡೆಯುತ್ತಿದ್ದವು.

ಸರಕಾರಕ್ಕೆ ನೂರು ದಿನ ತುಂಬಿದ ಕೆಲವೇ ದಿನಗಳಲ್ಲಿ ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ಕ್ರೈಸ್ತರ ಪ್ರಾರ್ಥನಾ ಮಂದಿರಗಳ ಮೇಲೆ ತಥಾಕಥಿತ `ಹಿಂದೂ ಪರ’ ಸಂಘಟನೆಗಳು ದಾಳಿ ನಡೆಸಿದವು. ದಾವಣಗೆರೆಯಲ್ಲಿ ಆರಂಭಗೊಂಡ ಈ ದಾಳಿಯ ಸರಣಿ ಮಂಗಳೂರಿಗೆ ತಲುಪುವ ಹೊತ್ತಿಗೆ ಪಡೆದುಕೊಂಡ ಸ್ವರೂಪವೇ ಬೇರೆ. ಅಲ್ಲಿಯ ತನಕವೂ `ನ್ಯೂ ಲೈಫ್‌ ಫೆಲೋಷಿಪ್‌’ ಎಂಬ ಕ್ರೈಸ್ತ ಧರ್ಮ ಪ್ರಸಾರದ ಸಂಘಟನೆಗೆ ಸೇರಿದ ಪ್ರಾರ್ಥನಾ ಮಂದಿರಗಳ ಮೇಲೆ ನಡೆಯುತ್ತಿದ್ದ ದಾಳಿಗಳು ಕೆಥೋಲಿಕ್‌ ಕ್ರೈಸ್ತರ ಚರ್ಚ್‌ಗಳಿಗೂ ವ್ಯಾಪಿಸಿದವು. ಶಿಲುಬೆಯನ್ನು ಮುರಿಯುವ, ಯೇಸುವಿನ ಪ್ರತಿಮೆಯನ್ನು ಭಗ್ನಗೊಳಿಸುವ, ಪರಮಪ್ರಸಾದವನ್ನು ನಾಶಪಡಿಸುವ, ಗರ್ಭಿಣಿಯ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೆ ಹೋದವು.
ಮಂಗಳೂರಿನಲ್ಲಿ ಕ್ರೈಸ್ತರು ಈ ದಾಳಿಗಳ ವಿರುದ್ಧ ಪ್ರತಿಭಟನೆ ಹಿಂಸಾತ್ಮಕ ಸ್ವರೂಪವನ್ನೂ ಪಡೆಯಿತು. ಈ ಹಿಂಸೆಗೆ ಪೊಲೀಸರೇ ಕಾರಣರು ಎಂಬ ವಾದ ಒಂದೆಡೆಗಿದ್ದರೆ ಪ್ರತಿಭಟನೆಕಾರರ ಹಿಂಸೆ ಪೊಲೀಸರನ್ನು ರೊಚ್ಚಿಗೆಬ್ಬಿಸಿತು ಎಂಬುದು ಮತ್ತೊಂದು ವಾದ. ದಕ್ಷಿಣ ಕನ್ನಡದ ಪೊಲೀಸರು ಕೋಮು ಸೂಕ್ಷ್ಮ ಪರಿಸ್ಥಿತಿಯನ್ನು ಈ ತನಕ ನಿರ್ವಹಿಸಿರುವುದನ್ನು ನೋಡಿದರೆ ತಪ್ಪು ಎರಡೂ ಕಡೆಯೂ ಇರಬಹು ದೆಂದು ಕಾಣಿಸುತ್ತದೆ. ಪರಿಸ್ಥಿತಿ ಹಿಂಸಾತ್ಮಕ ತಿರುವು ಪಡೆದುಕೊಳ್ಳುವ ವರೆಗೂ ಪೊಲೀಸರು ಸರಿಯಾದ ಕ್ರಮ ಕೈಗೊಳ್ಳುವುದಿಲ್ಲ ಎಂಬುದು ಈವರೆಗಿನ ಅನೇಕ ಉದಾಹರಣೆಗಳಿಂದ ಸಾಬೀತಾಗಿದೆ.

Read more

ದೇಶ ಸ್ಫೋಟಿಸುವಾಗ ಸೂಟ್‌ ಬದಲಾಯಿಸಿದವರು!

Posted on September 16, 2008May 24, 2015 by Ismail

`ರೋಮ್‌ ಹೊತ್ತಿ ಉರಿಯುತ್ತಿದ್ದಾಗ ದೊರೆ ನೀರೋ ಪಿಟೀಲು ನುಡಿಸುತ್ತಿದ್ದ’ ಸಂಗತಿ ನಮಗೆಲ್ಲಾ ಗೊತ್ತಿದೆ. ನೀರೋ ಪಿಟೀಲು ನುಡಿಸುತ್ತಿದ್ದನೇ ಇಲ್ಲವೇ ಎಂಬುದರ ಬಗ್ಗೆ ಅನೇಕ ಚರ್ಚೆಗಳಿವೆ. ಕಾರಣ ಆಗ ಪಿಟೀಲು ಎಂಬ ವಾದ್ಯವೇ ಇರಲಿಲ್ಲ. ನಮ್ಮ ಈಗಿನ ಗಿಟಾರ್‌ನ ಮೂಲ ರೂಪವಾಗಿದ್ದ Lyre  ವಾದ್ಯವನ್ನು ನೀರೋ ನುಡಿಸುತ್ತಿದ್ದ ಎಂದು ರೋಮಿನ ಇತಿಹಾಸಕಾರರಲ್ಲಿ ಒಬ್ಬನಾಗಿರುವ ಕ್ಯಾಸಿಯಸ್‌ ಹೇಳಿದ್ದಾನೆ. ನೀರೋ ಪಿಟೀಲು ನುಡಿಸುತ್ತಿದ್ದನೇ ಇಲ್ಲವೇ ಎಂಬುದರಷ್ಟೇ ಮುಖ್ಯವಾದ ಮತ್ತೊಂದು ಪ್ರಶ್ನೆ ರೋಮ್‌ಗೆ ಬೆಂಕಿ ಹತ್ತಿಕೊಂಡದ್ದು ಹೇಗೆ ಎಂಬುದು? ಇದಕ್ಕೆ ಸಂಬಂಧಿಸಿದಂತೆ ಹಲವು ಅಭಿಪ್ರಾಯಗಳಿವೆ. ಕೆಲವರು ಇದನ್ನು ಒಂದು ಆಕಸ್ಮಿಕ ಎಂದು ಹೇಳಿದ್ದಾರೆ. ಇನ್ನು ಕೆಲವರು ಕ್ರೈಸ್ತರು ಬೆಂಕಿ ಹಚ್ಚಿದರು ಎನ್ನುತ್ತಾರೆ. ನೀರೋನ ಕಾಲದ ದಾಖಲೆಗಳನ್ನು ಇಟ್ಟುಕೊಂಡು ಈ ಬೆಂಕಿಗೂ ನೀರೋನೇ ಕಾರಣನಾಗಿದ್ದನೆಂದು ಕ್ಯಾಸಿಯಸ್‌ನಂಥ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.

ನೀರೋ ಕಾಲದಲ್ಲಿ ಮನೆಗಳನ್ನು ಮರದಿಂದ ನಿರ್ಮಿಸಲಾಗುತ್ತಿತ್ತು. ಗೋಡೆಗಳೂ ಮರದದಿಂದಲೇ ರೂಪುಗೊಳ್ಳುತ್ತಿದ್ದವು. ಕ್ಯಾಸಿಯಸ್‌ ದಾಖಲಿಸಿರುವಂತೆ `ನಗರವನ್ನು ನಾಶಮಾಡುವ ಅಭೀಪ್ಸೆಯಿಂದ ಉತ್ತೇಜಿತನಾದ ನೀರೋ ಕುಡುಕರಂತೆ ನಟಿಸಿ ನಗರಕ್ಕೆ ಕೊಳ್ಳಿ ಇಡಲು ಜನರನ್ನು ಕಳುಹಿಸಿದ. ಪಾಲಾಟೈನ್‌ ಬೆಟ್ಟದ ಮೇಲಿದ್ದ ತನ್ನ ಅರಮನೆಯಲ್ಲಿ ಉರಿಯುವ ರೋಮ್‌ ಅನ್ನು ನೋಡುತ್ತಾ ನೀರೋ Lyre  ನುಡಿಸುತ್ತಾ ಹಾಡಿದ’.

Read more

ಭಯೋತ್ಪಾದನೆಯ ಮತ್ತೊಂದು ಮುಖ

Posted on September 7, 2008May 24, 2015 by Ismail

ಇತ್ತೀಚೆಗೆ ಬೆಂಗಳೂರು, ಅಹಮದಾಬಾದ್‌ಗಳಲ್ಲಿ ಸರಣಿ ಸ್ಫೋಟಗಳು ಸಂಭವಿಸಿದಾಗ ಅದಕ್ಕೆ ಸಂಬಂಧಿಸಿದಂತೆ ಬಂದ ಎರಡು ಮುಖ್ಯ ಪ್ರತಿಕ್ರಿಯೆಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿಲ್ಲ. ಮೊದಲನೆಯದ್ದು ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್‌ ಅವರದ್ದು. ಸ್ಫೋಟಗಳೆಲ್ಲವೂ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ ನಡೆಯುತ್ತಿದೆ. ಸಂಸತ್‌ನಲ್ಲಿ ನಡೆದ ವೋಟಿಗಾಗಿ ನೋಟು ಹಗರಣದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಕಾಂಗ್ರೆಸ್‌ ಈ ಸ್ಫೋಟಗಳನ್ನು ಸಂಘಟಸಿದ್ದಿರಬೇಕು ಎಂಬ ಅರ್ಥದಲ್ಲಿ ಅವರು ಮಾತನಾಡಿದ್ದರು. ಈ ಪ್ರತಿಕ್ರಿಯೆ ಹೊರಬಿದ್ದ ದಿನವೇ ಸಫ್ದರ್‌ ಹಷ್ಮಿ ಮೆಮೋರಿಯಲ್‌ ಟ್ರಸ್ಟ್‌ನ ಶಬ್ನಂ ಹಶ್ಮಿ `ಪ್ರಭುತ್ವ ತನ್ನ ಉಳಿದೆಲ್ಲಾ ಸೇವೆಗಳನ್ನೂ ಖಾಸಗೀಕರಿಸಿರುವುದರಿಂದ ಅದಕ್ಕೆ ಉಳಿದಿರುವುದು ಭದ್ರತೆಯ ಕೆಲಸ ಮಾತ್ರ. ಇದನ್ನು ಜನರಿಗೆ ಆಗಾಗ ನೆನಪು ಮಾಡಿ ಕೊಡದೇ ಹೋದರೆ ಪ್ರಭುತ್ವವೇ ಅಪ್ರಸ್ತುತವಾಗಿಬಿಡುವ ಸಾಧ್ಯತೆ ಇದೆ. ಸರಣಿ ಸ್ಫೋಟಗಳನ್ನು ಈ ಹಿನ್ನೆಲೆಯಲ್ಲೂ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ’ ಎಂದಿದ್ದರು.

ನಗರ ಮಧ್ಯೆ ದೊಡ್ಡ ಪಟಾಕಿ ಸಿಡಿದರೂ ಅದರ ಹಿಂದೆ ಇಸ್ಲಾಮಿಕ್‌ ಭಯೋತ್ಪಾದನೆಯಿದೆ ಎಂದು ಹೇಳುವುದು ಬಿಜೆಪಿಗೆ ಅಭ್ಯಾಸವಾಗಿ ಹೋಗಿದೆ. ಅಂತಹ ಪಕ್ಷದ ಪ್ರಮುಖ ನಾಯಕಿಯೊಬ್ಬರು ಬಾಂಬ್‌ ಸ್ಫೋಟದ ಹಿಂದೆ ಮತ್ತೊಂದು ರಾಜಕೀಯ ಪಕ್ಷದ ಕೈವಾಡದ ಬಗ್ಗೆ ಆರೋಪಿಸಿದ್ದು ಸ್ವಲ್ಪ ಮಟ್ಟಿಗೆ ವಿಚಿತ್ರವಾಗಿಯೂ ವಿಶಿಷ್ಟವಾಗಿಯೂ ಇದೆ. ಅಷ್ಟೇ ಅಲ್ಲ ಅವರು ಸ್ಫೋಟಗಳನ್ನು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷವೇ ಮಾಡಿಸಲು ಕಾರಣವಾದ ಅಂಶದ ಬಗ್ಗೆಯೂ ಹೇಳಿದ್ದರು. ಆದರೆ ಅದನ್ನು ಸ್ವತಃ ಬಿಜೆಪಿ ಸೇರಿದಂತೆ ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಮಾಧ್ಯಮಗಳೂ ಅಷ್ಟೇ. `ಸ್ಫೋಟಗಳ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಪಾಲಿಸಬೇಕಾದ ನೀತಿ ಸಂಹಿತೆ’ಯ ಬಗ್ಗೆಯಷ್ಟೇ ಮಾತನಾಡಿ ಸುಮ್ಮನಾಗಿಬಿಟ್ಟವು.

Read more

ಢಿಫ್ರೆಂಟ್ ಸಿನಿಮಾ ಮತ್ತು ಡಿಫ್ರೆಂಟ್ ಸರಕಾರ

Posted on September 1, 2008May 24, 2015 by Ismail

`ನೋಡಿ ಸಾರ್‌, ನಮ್ಮದು ಕಂಪ್ಲೀಟ್‌ ಡಿಫ್ರೆಂಟ್‌ ಸಿನಿಮಾ ಸಾರ್‌. ನಾವು ಇಡೀ ಕತೆಯನ್ನು ಡಿಫ್ರೆಂಟ್‌ ಆಗಿ ಪ್ರೆಸೆಂಟ್‌ ಮಾಡಿದ್ದೀವಿ. ತುಂಬಾನೆ ಡಿಫ್ರೆಂಟ್‌ ಕತೆ. ….ಅವ್ರ ಅಭಿಮಾನಿಗಳು ಎಂಜಾಯ್ ಮಾಡ್ತಾರೆ. ಯಂಗ್‌ಸ್ಟರ್ಸ್‌ಗೆ ಇಷ್ಟ ಆಗುತ್ತೆ. ಲೇಡೀಸ್‌ಗೂ ಇಷ್ಟ ಆಗುತ್ತೆ ಸಾರ್‌. ನೀವು ನೋಡ್ತಾ ಇರಿ ಸಾರ್‌. ಗ್ಯಾರಂಟಿ ಹಂಡ್ರೆಡ್‌ ಡೇಸ್‌.’

`ನಮ್ಮ ಪಕ್ಷ ಭಿನ್ನವಾದುದು. ಸಿದ್ಧಾಂತಗಳಿಗೆ ಬದ್ಧವಾದುದು. ಕಾಂಗ್ರೆಸ್ಸಿನ ಭ್ರಷ್ಟಾಚಾರ, ಜೆಡಿಎಸ್‌ನ ವಚನಭ್ರಷ್ಟತೆ ಸಂಸ್ಕೃತಿ ನಮ್ಮದಲ್ಲ. ನಮ್ಮದು ರಾಷ್ಟ್ರೀಯವಾದಿ ಪಕ್ಷ. ನಾವು ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ಪೂರ್ಣ ಅವಧಿಗೆ ಸ್ಥಿರ ಸರಕಾರವನ್ನು ನೀಡುತ್ತೇವೆ. ರೈತರಿಗೆ ಉಚಿತ ವಿದ್ಯುತ್‌ ನೀಡುತ್ತೇವೆ. ವಿದ್ಯುತ್‌ ಬಾಕಿಯನ್ನು ಮನ್ನಾ ಮಾಡುತ್ತೇವೆ. ಬಡತನ ರೇಖೆಗೆ ನಿಗದಿ ಪಡಿಸಿರುವ ಆದಾಯದ ಮಿತಿಯನ್ನು 11,800ರಿಂದ 30,000 ರೂಪಾಯಿಗಳಿಗೆ ಏರಿಸುತ್ತೇವೆ. ಕರ್ನಾಟಕದ ಎಲ್ಲ ಸಮಸ್ಯೆಗಳಿಗೂ ಬಿಜೆಪಿಯೇ ಪರಿಹಾರ’

ಮೇಲಿನ ಎರಡೂ ಹೇಳಿಕೆಗಳ ಮಧ್ಯೆ ಏನಾದರೂ ವ್ಯತ್ಯಾಸವಿದೆಯೇ? ಗಾಂಧಿನಗರಿಗರು ಹೇಳುವ ಕಂಪ್ಲೀಟ್‌ ಡಿಫ್ರೆಂಟ್‌ ಸಿನಿಮಾ ಎಂಬುದು ತಮಿಳಿನಿಂದಲೋ ತೆಲುಗಿನಿಂದಲೋ ಕದ್ದ ಸರಕನ್ನಷ್ಟೇ ಹೊಂದಿರುತ್ತದೆ. ಇದನ್ನು ಯಾರಾದರೂ ಪ್ರಶ್ನಿಸಿದರೆ ತಕ್ಷಣ ಗಾಂಧಿನಗರ ಉತ್ತರ ಕೊಡುತ್ತದೆ. `ಜಗತ್ತಿನಲ್ಲಿ ಇರುವುದೇ ಒಂಬತ್ತು ಕತೆಗಳು. ಅದನ್ನೇ ಡಿಫ್ರೆಂಟ್‌ ಆಗಿ ಹೇಳುವುದಷ್ಟೇ ನಮ್ಮ ಕೆಲಸ. ಹೊಸ ಕತೆ ಎಂಬುದೊಂದಿಲ್ಲ.’

Read more

ಮಳೆಯ ತಾರದ ಗುಡುಗು ಸಿಡಿಲು

Posted on August 12, 2008May 24, 2015 by Ismail
ಎನ್ ಸಂತೋಷ್ ಹೆಗ್ಡೆ/ Snathosh Hegde
ಮಂತ್ರಿಗಳು ಆಗೀಗ ಅಧಿಕಾರಿಗಳ ಬಗ್ಗೆ ಕಿಡಿಕಾರುವುದುಂಟು. ಸರಕಾರ ರೂಪಿಸಿರುವ ಯೋಜನೆಗಳನ್ನು ಜನರ ಬಳಿಗೆ ಕೊಂಡೊಯ್ಯದೇ ಇದ್ದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆಂದು ಗುಡುಗುವುದು ಮಾಧ್ಯಮಗಳಲ್ಲೂ ಸುದ್ದಿಯಾಗುತ್ತದೆ. ಈ ಗುಡುಗು ಸಿಡಿಲುಗಳೆಲ್ಲವೂ ಮಳೆಯಾಗದೆ ಮುಗಿದು ಹೋಗುವುದು ನಮ್ಮ ನಿತ್ಯದ ಜಂಜಡಗಳಲ್ಲಿ ಮರೆತೂ ಹೋಗುತ್ತವೆ. ಮಂತ್ರಿ ಮಹೋದಯರ ಈ ಗುಡುಗಾಟಕ್ಕೆ ಮಳೆ ತರಿಸುವ ಶಕ್ತಿಯೇ ಇಲ್ಲ ಎಂಬುದು ವಾಸ್ತವ. ಲೋಕಾಯುಕ್ತ ಸಂಸ್ಥೆಯನ್ನು ನಮ್ಮ ಸರಕಾರಗಳು ನಡೆಸಿಕೊಳ್ಳುತ್ತಿರುವುದನ್ನು ನೋಡಿದರೆ ಎಲ್ಲವೂ ಅರ್ಥವಾಗುತ್ತದೆ.

Read more

ಮಂತ್ರಿಗಳೆಂಬ ಅಭಿನವ ಫರೋಅಗಳು

Posted on August 8, 2008May 24, 2015 by Ismail

ಇರಾನ್‌ನ ಖ್ಯಾತ ಚಿಂತಕ ಅಲೀ ಶರೀಅತಿ ಅವರು ತಮ್ಮ ಲೇಖನವೊಂದರಲ್ಲಿ ಈಜಿಪ್ಟ್‌ನ ಪಿರಾಮಿಡ್‌ಗಳನ್ನು ನೋಡಿದ ಅನುಭವವನ್ನು ಬರೆದಿದ್ದಾರೆ. ಪಿರಾಮಿಡ್‌ಗಳೆಂಬ ಅದ್ಭುತಗಳ ಬಗ್ಗೆ ಅಲ್ಲಿನ ಮಾರ್ಗದರ್ಶಿಯ ಮಾತುಗಳನ್ನು ತಮ್ಮದೇ ಶೈಲಿಯಲ್ಲಿ ದಾಖಲಿಸುತ್ತಾ ಹೋಗುವ ಅವರು ಪಿರಾಮಿಡ್‌ ನಿರ್ಮಾಣದ ಹಿಂದಿನ ಕ್ರೌರ್ಯವನ್ನು ವಿವರಿಸುತ್ತಾರೆ. ಕೈರೋದಲ್ಲಿರುವ ಆರು ದೊಡ್ಡ ಮತ್ತು ಮೂರು ಸಣ್ಣ ಪಿರಾಮಿಡ್‌ಗಳ ನಿರ್ಮಾಣಕ್ಕೆ ಬಳಕೆಯಾದದ್ದು ಸುಮಾರು ಎಂಟುನೂರು ದಶ ಲಕ್ಷ ಬೃಹತ್‌ ಗಾತ್ರದ ಕಲ್ಲುಗಳು. ಪಿರಾಮಿಡ್‌ಗಳನ್ನು ನಿರ್ಮಿಸಿದ ಸ್ಥಳದಿಂದ ಸುಮಾರು 980 ಮೈಲುಗಳ ದೂರದಿಂದ ಈ ಕಲ್ಲುಗಳನ್ನು ತರಲಾಯಿತು. ಪ್ರತಿಯೊಂದು ಕಲ್ಲು ಒಂದೂವರೆಯಿಂದ ಎರಡು ಟನ್‌ಗಳಷ್ಟು ಭಾರವಿದೆ. ಈಗಿನಂತೆ ಕಲ್ಲುಗಳನ್ನು ಎತ್ತಿಡಲು ಕ್ರೇನುಗಳಾಗಲೀ, ಸಾಗಿಸಲು ಯಾಂತ್ರೀಕೃತ ಟ್ರಕ್‌ಗಳಾಗಲೀ ಇಲ್ಲದ ಆ ದಿನಗಳಲ್ಲಿ ಗುಲಾಮರನ್ನು ಬಳಸಿಕೊಂಡೇ ಇವೆಲ್ಲವನ್ನೂ ಮಾಡಲಾಯಿತು.

ಕಲ್ಲುಗಳನ್ನು ತರುವ ಕೆಲಸದಲ್ಲೇ ಎಷ್ಟೋ ಮಂದಿ ಕಲ್ಲುಗಳಡಿಗೆ ಸಿಕ್ಕಿ ಮೃತಪಟ್ಟರು. ಕಲ್ಲುಗಳನ್ನು ಎತ್ತಿ ಇಟ್ಟು ಪಿರಾಮಿಡ್‌ ನಿರ್ಮಿಸುವ ಕ್ರಿಯೆಯಲ್ಲಿ ಸತ್ತವರು ಅದೆಷ್ಟು ಮಂದಿಯೋ. ಅವರನ್ನೆಲ್ಲಾ ಪಿರಾಮಿಡ್‌ಗಳ ಪಕ್ಕದಲ್ಲೇ ಇರುವ ಸಾಮೂಹಿಕ ಸಮಾಧಿಯಲ್ಲಿ ಹೂಳಲಾಯಿತು. ಪಿರಾಮಿಡ್‌ನ ಒಳಗಿರುವ ಮೃತ ಫರೋಅನ ಸೇವೆಗೆಂದು ಅವರನ್ನು ಪಿರಾಮಿಡ್‌ನ ಪಕ್ಕದಲ್ಲಿಯೇ ಸಮಾಧಿ ಮಾಡಲಾಯಿತಂತೆ. ಸತ್ತ ಮೇಲೂ ಅವರು ಜೀತ ವಿಮುಕ್ತರಾಗಲಿಲ್ಲ!

Read more

‘ಮುಂಡನ ಮಾಡಿಸಿಕೊಂಡ ಬದುಕು’

Posted on July 30, 2008May 24, 2015 by Ismail

ಯುಪಿಎ ಸರಕಾರ ವಿಶ್ವಾಸ ಮತ ಯಾಚಿಸಲು ಕರೆದಿದ್ದ ಅಧಿವೇಶನದ ಎರಡನೆಯ ದಿನ ಮತದಾನ ನಡೆಯುವ ಸ್ವಲ್ಪ ಹೊತ್ತಿಗೆ ಮೊದಲು ಮೂವರು ಬಿಜೆಪಿ ಸಂಸದರು ನೋಟಿನ ಕಟ್ಟುಗಳನ್ನು ಲೋಕಸಭೆಯಲ್ಲಿ ಪ್ರದರ್ಶಿಸಿದರು. ಮತದಾನದಲ್ಲಿ ಪಾಲ್ಗೊಳ್ಳದಂತೆ ತಡೆಯಲು ಈ ಹಣದ ಆಮಿಷವನ್ನೊಡ್ಡಲಾಗಿತ್ತು ಎಂದು ಆರೋಪಿಸಿದರು. ದೇಶದ ಮೂಲೆ ಮೂಲೆಗಳಲ್ಲಿರುವವರೆಲ್ಲಾ ಟಿ.ವಿ.ಯಲ್ಲಿ ಈ ದೃಶ್ಯವನ್ನು ಕಂಡರು. ಸ್ಪೀಕರ್‌ ಸೋಮನಾಥ ಚಟರ್ಜಿ ಈ ಸಂಗತಿಯ ಕುರಿತ ತನಿಖೆಯ ಭರವಸೆಯನ್ನೂ ನೀಡಿದರು. ಯುಪಿಎ ವಿಶ್ವಾಸ ಮತವನ್ನು ಸಾಬೀತು ಪಡಿಸುವಲ್ಲಿ ಯಶಸ್ವಿಯಾಯಿತು.

ಈ ಎಲ್ಲಾ ಘಟನಾವಳಿಗಳ ನಂತರ ಎಲ್ಲಾ ಪಕ್ಷಗಳ ಮುಖಂಡರಂತೆ ಸಿಪಿಐ (ಎಂ)ನ ಕಾರ್ಯದರ್ಶಿ ಪ್ರಕಾಶ್‌ ಕಾರಟ್‌ ಕೂಡಾ ಮಾಧ್ಯಮಗಳ ಜತೆ ಮಾತನಾಡಿದರು. ಅವರು ಹೇಳಿದ ಒಂದು ಮಾತು ಹೀಗೆ `ನಮ್ಮ ಮಿತ್ರ ಪಕ್ಷಗಳ ಹಲವು ಸದಸ್ಯರಿಗೆ ಲಂಚದ ಆಮಿಷವನ್ನೊಡ್ಡಲಾಗಿತ್ತು. ಆದರೆ ನಮ್ಮ ಪಕ್ಷದ ಸದಸ್ಯರಿಗೆ ಮಾತ್ರ ಇಂಥ ಆಮಿಷಗಳಿರಲಿಲ್ಲ. ಕಾರಣ ನಮ್ಮ ಪಕ್ಷದ ಸದಸ್ಯರನ್ನು ಖರೀದಿಸಲು ಸಾಧ್ಯವಿಲ್ಲ ಎಂಬುದು ಅವರಿಗೂ ಗೊತ್ತಿತ್ತು’. ಈ ಹೇಳಿಕೆಯನ್ನು ಅಹಂಕಾರದ ಹೇಳಿಕೆ ಎಂದು ಕೇಡರ್‌ಗಳಿಲ್ಲದ ಪಕ್ಷದ ನಾಯಕರು ಹೇಳಬಹುದಾದರೂ ಇದು ವಾಸ್ತವ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಇಂಥ ಬದ್ಧತೆಗಳು ಅಗತ್ಯ ಎಂಬುದರಲ್ಲಿಯೂ ಸಂಶಯವಿಲ್ಲ. ತನ್ನ ಸದಸ್ಯರನ್ನು ಯಾರೂ ಖರೀದಿಸಲು ಸಾಧ್ಯವಿಲ್ಲ ಎಂಬ ನಂಬಿಕೆ ಇರುವ ಪಕ್ಷವೊಂದು ತನ್ನ ಹಿರಿಯ ಸದಸ್ಯನೊಬ್ಬ ಅಂತಃಸ್ಸಾಕ್ಷಿಗೂ, ದೇಶದ ಸಂವಿಧಾನಕ್ಕೂ ಬದ್ಧತೆಯನ್ನು ತೋರಿಸಿದಾಗ ಏಕೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬುದು ಮಾತ್ರ ಆಶ್ಚರ್ಯದ ವಿಷಯ.

Read more

Posts navigation

  • Previous
  • 1
  • 2
  • 3
  • 4
  • Next
September 2023
M T W T F S S
 123
45678910
11121314151617
18192021222324
252627282930  
« Dec    
  • December 2017
  • November 2017
  • March 2017
  • February 2017
  • January 2017
  • June 2014
  • March 2010
  • June 2009
  • May 2009
  • April 2009
  • March 2009
  • February 2009
  • January 2009
  • October 2008
  • September 2008
  • August 2008
  • July 2008
  • May 2008
  • April 2008
  • March 2008
  • February 2008
  • January 2008
  • December 2007
  • November 2007
  • September 2007
  • August 2007
  • July 2007
  • April 2007
  • January 2007
  • December 2006
  • October 2006
  • September 2006
  • May 2006
  • ಪ್ರಜೆಗಳನ್ನು ಬೆತ್ತಲಾಗಿಸುವ ಅಪಾರದರ್ಶಕ ಪ್ರಭುತ್ವ
  • ಇಂಟರ್‌ನೆಟ್ ಇಲ್ಲದ ಡಿಜಿಟಲ್ ಆರ್ಥಿಕತೆ!
  • ನೋಟು ರದ್ದತಿಯಲ್ಲಿ ಕಂಡ ಡಿಜಿಟಲ್ ಡಿವೈಡ್
  • ಮಾಧ್ಯಮ ನಿಯಂತ್ರಣದ ‘ಭದ್ರತಾ’ ತಂತ್ರಗಳು
  • ಒಮ್ಮುಖ ಪಾರದರ್ಶಕತೆಯ ತಂತ್ರಜ್ಞಾನಾಧಾರಿತ ಪ್ರಭುತ್ವ
  • ಇ-ಹೊತ್ತು ಅಂಕಣ
  • ಒಂಟಿದನಿ (ಉದಯವಾಣಿ ಅಂಕಣ)
  • ಟಿಪ್ಪಣಿ
  • ಪ್ರಜಾವಾಣಿ
  • ಬಿಡಿ ಬರಹಗಳು
  • Privacy Policy
© 2023 Freedom of the present | ಈ ನಡುವಿನ ಬಿಡುವು | Powered by Superbs Personal Blog theme