ಭಾರತ ಮತ್ತು ಅಮೆರಿಕದ ನಡುವಣ ಅಣು ಒಪ್ಪಂದ ದೇಶದ ವಿದ್ಯು್ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿಬಿಡುತ್ತದೆ. ಇದು ದೇಶಕ್ಕೆ ಒಳ್ಳೆಯದೆಂದು ಕಾಂಗ್ರೆ್ ಹೇಳುತ್ತಿದೆ. ಈ `ಒಳಿತಿನ’ ನಂಬಿಕೆಯನ್ನಿಟ್ಟುಕೊಂಡು ಅದು ಸಂಸತ್ತಿನಲ್ಲಿ ವಿಶ್ವಾಸ ಮತ ಕೋರುತ್ತಿದೆ. ಭಾರತ ಮತ್ತು ಅಮೆರಿಕದ ನಡುವಣ ನಾಗರಿಕ ಅಣು ಒಪ್ಪಂದವನ್ನು ವಿರೋಧಿಸುತ್ತಿರುವ ಬಿಜೆಪಿ ಮತ್ತು ಎಡ ಪಕ್ಷಗಳೆರಡೂ ಅಣು ವಿದ್ಯುತ್ ನ ಒಳಿತನ್ನು ಅಲ್ಲಗಳೆಯುತ್ತಿಲ್ಲ. ಬಿಜೆಪಿಯಂತೂ ಅಮೆರಿಕದ ಜತೆಗೆ ಭಾರತ ವ್ಯೂಹಾತ್ಮಕ ಸಂಬಂಧವನ್ನು ಇಟ್ಟುಕೊಳ್ಳಬೇಕೆಂದೂ ವಾದಿಸುತ್ತಿದೆ. ಆದರೆ ಈ ಎರಡೂ ಪಕ್ಷಗಳು ಅಣು ಒಪ್ಪಂದವನ್ನು ವಿರೋಧಿಸುತ್ತಿವೆ. ಅವುಗಳು ನೀಡುವ ಕಾರಣ ಈ ಒಪ್ಪಂದ ಭಾರತದ ಸಾರ್ವಭೌಮತೆಯನ್ನು ಕಿತ್ತುಕೊಳ್ಳುವಂತಿದೆ. ಮಾತ್ರವ ಭಾರತವನ್ನು ಅಮೆರಿಕದ ಕಿರಿಯ ಪಾಲುದಾರನಾಗಿಸುವಂಥ ಒಪ್ಪಂದವಿದು.
ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ಎಲ್ ಕೆ ಆಡ್ವಾಣಿಯವರಂತೂ ಅಣು ಒಪ್ಪಂದದ ಸುತ್ತ ಇರುವ ನಿಗೂಢತೆಯ ಬಗ್ಗೆ ಮಾತನಾಡಿದರು. ಒಪ್ಪಂದದ ಕರಡು, ಐಎಇಎ ಜತೆಗಿನ ಒಪ್ಪಂದ ಕರಡುಗಳನ್ನು ರಹಸ್ಯವಾಗಿಟ್ಟಿರುವುದನ್ನು ಪ್ರಶ್ನಿಸಿದರು. ಎಡ ಪಕ್ಷಗಳಂತೂ ಒಪ್ಪಂದದ ರಹಸ್ಯಾತ್ಮಕತೆಯ ಬಗ್ಗೆ ಆರಂಭದಿಂದಲೂ ಪ್ರಶ್ನೆಗಳನ್ನು ಎತ್ತುತ್ತಲೇ ಇವೆ. ಇದೇನು ಯುಪಿಎ ಸರಕಾರ ವಿಶೇಷವಾಗಿ ರೂಢಿಸಿಕೊಂಡ ರಹಸ್ಯಾತ್ಮಕತೆಯಲ್ಲ. ಅಣುಶಕ್ತಿಗೆ ಸಂಬಂಧಿಸಿದ ಎಲ್ಲವೂ ಭಾರತದಲ್ಲಿ ರಹಸ್ಯವೇ. ಇದಕ್ಕೆ ಅಗತ್ಯವಿರುವ ಕಾನೂನುಗಳನ್ನೂ ನಮ್ಮ ಸಂಸದರೇ ರೂಪಿಸಿ ಜಾರಿಗೆ ತಂದಿದ್ದಾರೆ.
ಈಗ ಅಣು ಒಪ್ಪಂದವನ್ನು ವಿರೋಧಿಸುತ್ತಿರುವ ಎಡ ಮತ್ತು ಬಲ ಪಕ್ಷಗಳಿಗೆ ಒಪ್ಪಂದದ ಕರಡುಗಳನ್ನು `ಕ್ಲಾಸಿಫೈಡ್’ ಎಂದು ಕರೆಯುತ್ತಿರುವುದು ಮಾತ್ರ ಒಂದು ಸಮಸ್ಯೆಯಂತೆ ತೋರುತ್ತಿದೆಯೇ ಹೊರತು ಅಣುಶಕ್ತಿಗೆ ಸಂಬಂಧಿಸಿದ ಖರ್ಚು ವೆಚ್ಚಗಳ ಬಗ್ಗೆ, ಅಣುಶಕ್ತಿ ರಿಯಾಕ್ಟರುಗಳ ಕಾರ್ಯನಿರ್ವಹಣೆಯ ಬಗ್ಗೆ, ವಿಕಿರಣ ಸೋರಿಕೆಗಳ ಬಗ್ಗೆ ಇಲ್ಲಿಯ ತನಕವೂ ಸಂಸತ್ತಿನಲ್ಲಿ ಚರ್ಚೆ ನಡೆದಿಲ್ಲ. ಮಾಧ್ಯಮಗಳು ಈ ವಿಷಯವನ್ನು ಕೆದಕಿದಾಗಲೆಲ್ಲಾ ಅಧಿಕೃತ ರಹಸ್ಯ ಕಾಯ್ದೆಯ ಬೆಂಬಲ ಪಡೆದು ಎಲ್ಲವನ್ನೂ ಮುಚ್ಚಿಡಲಾಗುತ್ತದೆ. ಅಣು ಒಪ್ಪಂದದ ಕುರಿತ ಬಿಸಿಯೇರಿದ ಚರ್ಚೆಗಳಲ್ಲಿ ಈ ವಿಷಯವನ್ನು ಯಾರೂ ಪ್ರಸ್ತಾಪಿಸಲಿಲ್ಲ.