`ರಸ್ತೆ’ ಎಂಬ ಪರಿಕಲ್ಪನೆ ತೀರಾ ಆಧುನಿಕವಾಗಿದ್ದರೂ ಅದನ್ನು ಹೋಲುವ ಪರಿಕಲ್ಪನೆಯೊಂದು ಎಲ್ಲ ಜೀವಿಗಳ ಬದುಕಿನಲ್ಲೂ ಇದೆ. ಪ್ರಾಣಿಗಳಂತೂ ನಿರ್ದಿಷ್ಟ ಜಾಡಿನಲ್ಲಿ (track) ತಮ್ಮ ಸಂಚಾರ ನಡೆಸುತ್ತವೆ. ಮನುಷ್ಯರೂ ಅಷ್ಟೇ, ಅವರ ಸಂಚಾರಕ್ಕೊಂದು ಕಾಲು ಹಾದಿ ಇದ್ದೇ ಇರುತ್ತದೆ.
Category: ಒಂಟಿದನಿ (ಉದಯವಾಣಿ ಅಂಕಣ)
ಜನ ವಿರೋಧಿ ಜನತಾ ದರ್ಶನ
ಕರ್ನಾಟಕದ ರಾಜ್ಯಪಾಲರ ಇತ್ತೀಚಿನ ಜನತಾದರ್ಶನದಲ್ಲಿ ಅವರು ಸ್ವೀಕರಿಸಿದ ಅರ್ಜಿಗಳ ಸಂಖ್ಯೆ 1200. ಇವು ಕೇವಲ ಎರಡೇ ಗಂಟೆಗಳಲ್ಲಿ ಸಂಗ್ರಹವಾದ ಅರ್ಜಿಗಳ ಸಂಖ್ಯೆ. ಈ ಅರ್ಜಿಗಳಲ್ಲಿ ದೂರದ ಗುಲ್ಬರ್ಗದಿಂದ ಮಗನ ಹೃದ್ರೋಗ ಚಿಕಿತ್ಸೆಗೆ ನೆರವು ಯಾಚಿಸಿ ಬಂದಿದ್ದ ಮಹಿಳೆಯಿಂದ ಆರಂಭಿಸಿ ವೃದ್ಧಾಪ್ಯ ವೇತನಕ್ಕಾಗಿ ತಾಲೂಕು ಕಚೇರಿಗೆ ಅಲೆದು ಸುಸ್ತಾಗಿ ಬೆಂಗಳೂರಿಗೆ ಬಂದ ವೃದ್ಧರಿದ್ದರು. ರಾಜ್ಯಪಾಲರು ಅರ್ಜಿ ಗಳನ್ನೆಲ್ಲಾ ಸ್ವೀಕರಿಸಿದರು. ಹೃದಯ ಚಿಕಿತ್ಸೆಗೆ ನೆರವು ಯಾಚಿಸಿದ್ದ 34 ಮಂದಿಗೆ ತಲಾ 25,000 ಸಾವಿರ ರೂಪಾಯಿಗಳ ಚೆಕ್ ವಿತರಿಸಿದರು. ಇವರಲ್ಲಿ ಕೆಲವರು ಸರಕಾರೀ ಸ್ವಾಮ್ಯದ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದರೆ ಇನ್ನು ಕೆಲವರು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯ ಲಿದ್ದಾರೆ. ಜನತಾದರ್ಶನದಲ್ಲಿ ಭಾಗವಹಿಸಿದ್ದ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ `ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿರುವವರಿಗೆ ನಮ್ಮ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು’.
ಕಷ್ಟದಲ್ಲಿರುವವರ ಅರ್ಜಿ ಸ್ವೀಕರಿಸಿ ಪರಿಹಾರ ನೀಡುವ ರಾಜ್ಯಪಾಲರ ದೊಡ್ಡ ಮನಸ್ಸನ್ನು ಕೊಂಡಾಡದೇ ಇರಲು ಸಾಧ್ಯವೇ? ಮಾಧ್ಯಮಗಳಲ್ಲೆಲ್ಲಾ 34 ಮಂದಿಗೆ ನೀಡಿದ 25,000 ರೂಪಾಯಿಗಳು ದೊಡ್ಡ ಸುದ್ದಿಯೇ ಆಯಿತು. ಮುಂದಿನ ಜನತಾದರ್ಶನದ ಹೊತ್ತಿಗೆ ಇದೇ ಬೇಡಿಕೆಯುಳ್ಳ ಮತ್ತಷ್ಟು ಮಂದಿ ರಾಜ್ಯಪಾಲರಿಗಾಗಿ ಕಾಯುತ್ತಾ ಸರದಿ ಸಾಲಿನಲ್ಲಿ ನಿಲ್ಲುವುದರಲ್ಲಿ ಸಂಶಯವಿಲ್ಲ. ದಯಾಳುವಾದ ರಾಜ್ಯಪಾಲರು ಅವರಿಗೂ ಒಂದಷ್ಟು ದುಡ್ಡನ್ನು ಹೊಂದಿಸಿ ಕೊಡಬಹುದು. ಅದೂ ಮಾಧ್ಯಮಗಳಲ್ಲಿ ಸುದ್ದಿಯಾಗಬಹುದು.