ಎನ್‌ಡಿಎ-2ಕ್ಕೂ ಹಜ್ ಸಬ್ಸಿಡಿ ಬೇಕು!

ಎರಡು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ಹಜ್ ಸಬ್ಸಿಡಿಯನ್ನು ಮುಂದಿನ ಹತ್ತು ವರ್ಷಗಳಲ್ಲಿ ಸಂಪೂರ್ಣವಾಗಿ ಇಲ್ಲವಾಗಿಸಬೇಕೆಂದು ಸಂದರ್ಭದಲ್ಲಿ ನಾನು ಬರೆದ ಲೇಖನ ಇಲ್ಲಿದೆ. ಇದು ಪ್ರಜಾವಾಣಿಯ ಅಂತರಾಳ ಪುಟದಲ್ಲಿ ಪ್ರಕಟವಾಗಿತ್ತು. ಇದೇ ಸೋಮವಾರ (23 ಜೂನ್ 2014) ವಾರ್ಷಿಕ ಹಜ್ ಸಮ್ಮೇಳನದಲ್ಲಿ ಸುಷ್ಮಾ ಸ್ವರಾಜ್ ಅವರು ‘ಸುಂದರವಾದ ಉರ್ದುವಿನಲ್ಲಿ’ ಆಡಿದ ಮಾತುಗಳ ವರದಿ ಓದಿದ ಮೇಲೆ ಈ ಲೇಖನವನ್ನು ಮತ್ತೆ ಪ್ರಕಟಿಸಬಹುದು ಅನ್ನಿಸಿತು.

ಆರ್ಥಿಕ ಉದಾರೀಕರಣದ ಯುಗ ಆರಂಭವಾದ ನಂತರದ ಕಾಲಘಟ್ಟದಲ್ಲಿ ಯಾವ ಸಬ್ಸಿಡಿಯನ್ನು ಹಿಂತೆಗೆದುಕೊಳ್ಳುವ ಪ್ರಸ್ತಾವಕ್ಕೂ ಸಿಗದೇ ಇರುವಷ್ಟು ಜನಬೆಂಬಲ ಹಜ್ ಸಬ್ಸಿಡಿ ಹಿಂತೆಗೆದುಕೊಳ್ಳಬೇಕು ಎನ್ನುವ ಸುಪ್ರೀಂ ಕೋರ್ಟ್ ತೀರ್ಪಿಗೆ ಸಿಕ್ಕಿದೆ. ಬಹುತೇಕ ಎಲ್ಲಾ ಮುಸ್ಲಿಂ ಸಂಘಟನೆಗಳೂ ಈ ತೀರ್ಪನ್ನು ಸ್ವಾಗತಿಸಿವೆ. ಹಜ್ ಸಬ್ಸಿಡಿ ವ್ಯವಹಾರದ ಸುತ್ತವೇ ತಮ್ಮ ರಾಜಕಾರಣವನ್ನು ರೂಪಿಸಿಕೊಂಡ ಮುಸ್ಲಿಂ ರಾಜಕಾರಣಿಗಳೂ ಆಶ್ಚರ್ಯ ಎಂಬಂತೆ ಈ ತೀರ್ಪನ್ನು ಸ್ವಾಗತಿಸುತ್ತಿದ್ದಾರೆ.

ಹಜ್ ಸಬ್ಸಿಡಿ ಹಿಂತೆಗೆತದ ಕುರಿತಂತೆ ಸಲ್ಮಾನ್ ಖುರ್ಷೀದ್ ಆಡಿದ ಮಾತುಗಳನ್ನು ತಾವೇ ನುಂಗಿಕೊಳ್ಳುವಂಥ ಪರಿಸ್ಥಿತಿಯನ್ನು ಕಾಂಗ್ರೆಸ್ ಸೃಷ್ಟಿಸಿತ್ತು ಎಂಬುದೂ ಕೂಡಾ ಇಲ್ಲಿ ನೆನಪಿಸಿಕೊಳ್ಳಬೇಕಾದ ವಿಚಾರ. ಹೀಗಿದ್ದರೂ ಕಳೆದ ನಾಲ್ಕು ದಶಕಗಳಿಂದ ಈ ಸಬ್ಸಿಡಿಯನ್ನು ಹಿಂತೆಗೆದುಕೊಳ್ಳಲು ಯಾವ ಸರ್ಕಾರವೂ ಯಾಕೆ ಮನಸ್ಸು ಮಾಡಲಿಲ್ಲ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭವೇನೂ ಅಲ್ಲ. ಇಡೀ ಹಜ್ ಸಬ್ಸಿಡಿಯ ವ್ಯವಹಾರವೇ ಅಷ್ಟು ಸಂಕೀರ್ಣವಾದುದು.

ಸಬ್ಸಿಡಿ ಹಣವನ್ನು ಯಾವತ್ತೂ ನೇರವಾಗಿ ಯಾತ್ರಿಕರಿಗೆ ಕೊಡುತ್ತಿರಲಿಲ್ಲ. ಈ ಮೊತ್ತವನ್ನು ಹಜ್ ಯಾತ್ರಿಕರ ವಿಮಾನ ಯಾನ ವೆಚ್ಚ ದುಬಾರಿಯಾಗದಂತೆ ನೋಡಿಕೊಳ್ಳುವ ವ್ಯವಸ್ಥೆ ಎಂದು ಸರ್ಕಾರವೇ ಹೇಳಿಕೊಂಡಿತ್ತು. ವಿಮಾನ ಯಾನ ಕಂಪೆನಿಗೆ ಅಂದರೆ ಭಾರತೀಯ ಸಂದರ್ಭದಲ್ಲಿ ಏರ್ ಇಂಡಿಯಾಕ್ಕೆ ನೀಡಲಾಗುತ್ತಿತ್ತು. ಕಳೆದ ಮೂರು ವರ್ಷಗಳ ಸರಾಸರಿಯನ್ನು ತೆಗೆದುಕೊಂಡರೆ ವಾರ್ಷಿಕ 1.25 ಲಕ್ಷ ಯಾತ್ರಿಕರು ಹಜ್ ಸಮಿತಿಯ ಮೂಲಕ ಯಾತ್ರೆ ನಡೆಸಿದ್ದಾರೆ. ಇವರೆಲ್ಲರ ವಿಮಾನಯಾನ ಟಿಕೇಟುಗಳನ್ನೂ ಏರ್ ಇಂಡಿಯಾ ಖರೀದಿಸಿರುವುದರಿಂದ ಸಬ್ಸಿಡಿ ರೂಪದಲ್ಲಿ ಅದಕ್ಕೆ ಸರಾಸರಿ 600 ಕೋಟಿ ರೂಪಾಯಿಗಳಷ್ಟು ದೊಡ್ಡ ಮೊತ್ತ ದೊರೆತಿದೆ.

ಇದರಲ್ಲಿ ಸೇವಾ ತೆರಿಗೆ ಮತ್ತು ಯಾತ್ರಿಕರು ನೀಡುವ ವಿಮಾನ ಯಾನ ಶುಲ್ಕದ ಪಾಲು ಸೇರಿಲ್ಲ. ಅದನ್ನೂ ಸೇರಿಸಿಕೊಂಡರೆ ಒಟ್ಟು ಮೊತ್ತ ಇನ್ನೂ ಹೆಚ್ಚಾಗುತ್ತದೆ. ಪ್ರತಿ ಯಾತ್ರಿಕನೂ ಈಗ ವಿಮಾನ ಯಾನ ಶುಲ್ಕವೆಂದು 16 ಸಾವಿರ ರೂಪಾಯಿಗಳನ್ನು ಪಾವತಿಸುತ್ತಾರೆ. ಹಜ್ ದಿನಗಳಲ್ಲಿ ಏರ್ ಇಂಡಿಯಾ ಸಾಮಾನ್ಯ ಯಾತ್ರಿಕರಿಗೆ ಬೆಂಗಳೂರಿನಿಂದ ಜೆದ್ದಾಕ್ಕೆ ಹೋಗಿ ಹಿಂದಿರುಗುವ ಯಾತ್ರೆಗೆ ಸುಮಾರು 32,000 ರೂಪಾಯಿಗಳ ಶುಲ್ಕ ವಿಧಿಸುತ್ತದೆ.

ಇದೇ ಲೆಕ್ಕಾಚಾರವನ್ನು ಪರಿಗಣಿಸಿದರೂ 1.25 ಲಕ್ಷ ಯಾತ್ರಿಕರಿಗಾಗಿ ಸರ್ಕಾರ ನೀಡಬೇಕಾಗುವ ಸಬ್ಸಿಡಿಯ ಮೊತ್ತ ಸುಮಾರು 200 ಕೋಟಿ ರೂಪಾಯಿಗಳು. ಆದರೆ, ಅದರ ಮೂರು ಪಟ್ಟ ಹಣವನ್ನು ಯಾಕೆ ಸಬ್ಸಿಡಿಯಾಗಿ ನೀಡಲಾಗುತ್ತಿತ್ತು ಎಂಬ ಪ್ರಶ್ನೆಗೆ ಉತ್ತರ ದೊರೆಯುವುದಿಲ್ಲ.`ಹಜ್ ಯಾತ್ರಿಕರನ್ನು ಕರೆದೊಯ್ಯುವ ಮತ್ತು ಕರೆ ತರುವ ಪ್ರಕ್ರಿಯೆಯಲ್ಲಿ ಎರಡು ಖಾಲಿ ಪ್ರಯಾಣಗಳನ್ನು ನಡೆಸುವ ಅಗತ್ಯವಿರುವುದರಿಂದ ಈ ವೆಚ್ಚ ಹೆಚ್ಚಾಗುತ್ತದೆ’ ಎಂದು ಏರ್ ಇಂಡಿಯಾ ಸಮರ್ಥಿಸಿಕೊಳ್ಳುತ್ತದೆ. ಇದನ್ನು ಒಪ್ಪಿಕೊಳ್ಳೋಣವೆಂದರೆ ಮಹಾಲೇಖಪಾಲರೇ ಈ ಉತ್ತರವನ್ನು ಒಪ್ಪಲು ಸಿದ್ಧರಿಲ್ಲ.

ಏಕೆಂದರೆ ಇಂಥ ಖರ್ಚುಗಳಿಗೆಂದು 2002ರಿಂದ 2006ರ ಮಧ್ಯೆ 175 ಕೋಟಿ ರೂಪಾಯಿಗಳನ್ನು ಏರ್ ಇಂಡಿಯಾ ಪಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಮಹಾಲೇಖಪಾಲರ ವರದಿ `ಈ ಖರ್ಚುಗಳಿಗೆ ಸರಿಯಾದ ಸಮರ್ಥನೆಗಳು ಏರ್ ಇಂಡಿಯಾದ ಬಳಿ ಇಲ್ಲ. ಈ ಮೊತ್ತವನ್ನು ನೀಡಿರುವ ನಾಗರಿಕ ವಿಮಾನ ಯಾನ ಸಚಿವಾಲಯ ಕೂಡಾ ಈ ವಿಷಯದಲ್ಲಿ ಸರಿಯಾದ ಸಮರ್ಥನೆಗಳನ್ನು ನೀಡಿಲ್ಲ~ ಎಂದು ಅಭಿಪ್ರಾಯ ಪಟ್ಟಿದೆ. ಮೂರು ತಿಂಗಳಿಗೆ ಮೊದಲು ದೊಡ್ಡ ಸಂಖ್ಯೆಯ ಟಿಕೆಟ್‌ಗಳನ್ನು ಖರೀದಿಸಿದರೆ ಎಲ್ಲಾ ವಿಮಾನ ಯಾನ ಸಂಸ್ಥೆಗಳೂ ಕನಿಷ್ಠ ಸಾಮಾನ್ಯವಾಗಿ ವಿಧಿಸುವ ಶುಲ್ಕದ ಅರ್ಧದಷ್ಟು ಮೊತ್ತಕ್ಕೆ ಟಿಕೆಟ್‌ಗಳನ್ನು ಕೊಡುತ್ತವೆ. ಆದರೆ ಏರ್-ಇಂಡಿಯಾದ ವಿಷಯದಲ್ಲಿ ಇದು ಸಂಪೂರ್ಣ ಉಲ್ಟಾ.

ಸಾಮಾನ್ಯ ಸಂದರ್ಭದಲ್ಲಿ 32,000 ರೂಪಾಯಿಗಳನ್ನು ಪಡೆಯುವ ಅದು ಹಜ್‌ನ ಸಂದರ್ಭದಲ್ಲಿ ಲಕ್ಷಾಂತರ ಟಿಕೆಟ್‌ಗಳನ್ನು ಒಟ್ಟಿಗೇ ಖರೀದಿಸಿದರೂ ಸರಾಸರಿ 48,000 ರೂಪಾಯಿಗಳನ್ನು ಪಡೆಯುತ್ತದೆ. ಅಂದರೆ ಪ್ರತಿ ಯಾತ್ರಿಕನಿಗೆ ಸರ್ಕಾರ ಕನಿಷ್ಠ 32,000 ರೂಪಾಯಿಗಳಷ್ಟನ್ನು ಸಬ್ಸಿಡಿಯಾಗಿ ನೀಡುತ್ತದೆ. ಇದರ ಹೊರತಾಗಿ ಆ ಮೊತ್ತಕ್ಕೆ ಅನ್ವಯಿಸುವ ಸೇವಾ ಶುಲ್ಕ ಇತ್ಯಾದಿಗಳೆಲ್ಲಾ ಸೇರಿ ಪ್ರಯಾಣ ಶುಲ್ಕ 50,000 ರೂಪಾಯಿಗಳನ್ನು ಮೀರುತ್ತದೆ.

ಎಂಬತ್ತರ ದಶಕದ ಅಂತ್ಯದಲ್ಲಿ `ಹಿಂದುತ್ವ’ ರಾಜಕಾರಣ ಹಜ್ ಸಬ್ಸಿಡಿಯ ಕುರಿತು ಚರ್ಚೆ ಆರಂಭಿಸಿದ ಹೊತ್ತಿನಲ್ಲೇ ಅನೇಕ ಪ್ರಜ್ಞಾವಂತ ಮುಸ್ಲಿಮರೂ ಹಜ್ ಸಬ್ಸಿಡಿಯಲ್ಲ, ಅದೊಂದು `ಹಜ್ ಹಗರಣ~ ಎಂದು ಟೀಕಿಸಿ ಸಬ್ಸಿಡಿಯನ್ನು ರದ್ದು ಪಡಿಸಬೇಕೆಂದಿದ್ದರು. ಅಷ್ಟೇಕೆ ತೊಂಬತ್ತರ ದಶಕದಲ್ಲಿ ಪಿ.ವಿ. ನರಸಿಂಹರಾವ್ ಸರ್ಕಾರವಿರುವಾಗಲೇ ಇದನ್ನು ರದ್ದು ಪಡಿಸುವ ಕುರಿತಂತೆ ಚರ್ಚೆಗಳಾಗಿದ್ದವು.

ಈಗಿನಂತೆಯೇ ಆಗಲೂ ಅನೇಕ ಮುಸ್ಲಿಮ್ ಸಂಸದರು ಅದಕ್ಕೆ ಬೆಂಬಲವನ್ನೂ ಸೂಚಿಸಿದ್ದರು. ಆದರೂ ಪಿ.ವಿ. ನರಸಿಂಹರಾವ್ ಸರ್ಕಾರ ಈ ಕುರಿತಂತೆ ಒಂದು ನಿರ್ಧಾರವನ್ನು ಕೈಗೊಳ್ಳಲಿಲ್ಲ. ತಮಾಷೆಯೆಂದರೆ ಹಜ್ ಸಬ್ಸಿಡಿಯನ್ನು ಬಹುವಾಗಿ ವಿರೋಧಿಸುತ್ತಿದ್ದ ಬಿಜೆಪಿಯ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದಾಗಲೂ ಅದು ಹಜ್ ಸಬ್ಸಿಡಿಯನ್ನು ಹಿಂತೆಗೆದುಕೊಳ್ಳಲಿಲ್ಲ. ಬದಲಿಗೆ 2002ರಲ್ಲಿ 1954ರ ಹಜ್ ಸಮಿತಿ ಕಾಯ್ದೆಗೆ ತಿದ್ದುಪಡಿ ತಂದು ಸಬ್ಸಿಡಿಯನ್ನು ಮುಂದುವರಿಸಿತು.

ಹಜ್‌ಯಾತ್ರೆ ನಡೆಸುವ ಮುಸ್ಲಿಮರಿಗೆ ಬೇಡವಾದ, ಆದರೆ ಎಲ್ಲ ಆಡಳಿತಾರೂಢ ಪಕ್ಷಗಳಿಗೂ ಬೇಕಾದ ಈ ಸಬ್ಸಿಡಿಗೊಂದು ಅಂತ್ಯ ಹಾಡಲು ನ್ಯಾಯಾಲಯದ ಮಧ್ಯ ಪ್ರವೇಶ ಯಾಕೆ ಬೇಕಾಯಿತು ಎಂಬ ಪ್ರಶ್ನೆಗೆ ಉತ್ತರ ಹುಡುಕಿದರೆ ನಮ್ಮ ರಾಜಕೀಯ ಪಕ್ಷಗಳ ಓಲೈಕೆಯ ರಾಜಕಾರಣದ ಕೆಟ್ಟ ಮುಖವೊಂದು ಅನಾವರಣಗೊಳ್ಳುತ್ತದೆ. ಎಲ್ಲಾ ರಾಜಕೀಯ ಪಕ್ಷಗಳ ಮಟ್ಟಿಗೂ ಜನಪ್ರಿಯವಲ್ಲದ ನಿರ್ಧಾರಗಳು ಬೇಕಾಗಿಲ್ಲ. ಜನಪರ ನಿರ್ಧಾರಗಳೆಲ್ಲವೂ ಜನಪ್ರಿಯವಾಗಿರಬೇಕಿಲ್ಲ ಎಂಬ ತತ್ವದಲ್ಲಿಯೂ ಅವುಗಳಿಗೆ ನಂಬಿಕೆ ಇಲ್ಲ. ವಿದೇಶಾಂಗ ಸೇವೆಯಲ್ಲಿದ್ದ ಸೈಯ್ಯದ್ ಶಹಾಬುದ್ದೀನ್ ಒಂದು ದಶಕದ ಹಿಂದೆಯೇ ಹಜ್ ಸಬ್ಸಿಡಿ ವ್ಯವಹಾರದಲ್ಲಿ ಇರಬಹುದಾದ ಲಂಚದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.

ಸುಪ್ರೀಂ ಕೋರ್ಟ್ ಹಜ್ ಸಮಿತಿಯ ವ್ಯವಹಾರಗಳನ್ನೂ ಪರಿಶೀಲಿಸುವುದಾಗಿ ಹೇಳಿರುವುದರಿಂದ 2ಜಿ ಹಗರಣದಂಥ, ಹಲವು ಸರ್ಕಾರಗಳ ಪಾಲಿರುವ ಮತ್ತೊಂದು ಹಗರಣವೂ ನ್ಯಾಯಾಂಗದ ಮೂಲಕವೇ ಹೊರಬರಬಹುದೆಂದು ನಿರೀಕ್ಷಿಸಬಹುದು. ಸಬ್ಸಿಡಿ ರಹಿತ ಅಗ್ಗದ ಪ್ರಯಾಣ: ಹಜ್ ಸಬ್ಸಿಡಿಯನ್ನು ಹಿಂತೆಗೆದುಕೊಂಡಿದ್ದರಿಂದ ಹಜ್ ಪ್ರಯಾಣದ ವಿಮಾನ ಯಾನ ದರವೇನೂ ಹೆಚ್ಚಬೇಕಾಗಿಲ್ಲ. ಸಂಸತ್ತು ಅಂಗೀಕರಿಸಿದ ಕಾಯ್ದೆಯೊಂದರ ಮೂಲಕ ಸರ್ಕಾರಿ ಉಸ್ತುವಾರಿ ಸ್ವಾಯತ್ತ ಸಂಸ್ಥೆಯಾಗಿರುವ ಹಜ್ ಸಮಿತಿ ಮಲೇಶಿಯಾದ ತಾಬೂಂಗ್ ಹಜ್ ಸಂಘಟನೆಯ ಮಾದರಿಯನ್ನು ಅನುಸರಿಸಬಹುದು. ಅದಕ್ಕಿಂತಲೂ ಸುಲಭವಾದ ಮತ್ತೊಂದು ವಿಧಾನವೆಂದರೆ ಹಜ್ ಯಾತ್ರಿಕರನ್ನು ಕರೆದೊಯ್ಯುವ ಮತ್ತು ಕರೆತರುವ ಕ್ರಿಯೆಯನ್ನು ಏರ್ ಇಂಡಿಯಾದ ಏಕಸ್ವಾಮ್ಯಕ್ಕೆ ಬಿಡದೆ ಸ್ಪರ್ಧಾತ್ಮಕ ಟೆಂಡರ್‌ಗಳ ಮೂಲಕ ವಿಮಾನ ಯಾನ ಸೇವೆಯನ್ನು ಆರಿಸಿಕೊಳ್ಳುವುದು.

ಹಜ್ ಯಾತ್ರೆಗೆ ಅಗತ್ಯವಿರುವ ವಿಮಾನಗಳನ್ನು ಬಾಡಿಗೆಗೆ ಪಡೆಯುವುದರಿಂದ ವಾಸ್ತವದಲ್ಲಿ ಪ್ರಯಾಣ ದರ ಕಡಿಮೆಯಾಗಬೇಕು. ಹಜ್ ಯಾತ್ರಾ ಸಂಘಟನೆಯ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದ ಸೈಯದ್ ಶಹಾಬುದ್ದೀನ್ ಅವರ ಅಭಿಪ್ರಾಯದಲ್ಲಿ ಈ ಬಗೆಯ ವಿಶೇಷ ವಿಮಾನಗಳ ಪ್ರಯಾಣ ದರ ಒಟ್ಟಾರೆಯಾಗಿ ಸಾಮಾನ್ಯ ಪ್ರಯಾಣ ದರದ ಮೂರನೇ ಎರಡರಷ್ಟಿರುತ್ತದೆ.

ಅಂದರೆ 32,000 ರೂಪಾಯಿಗಳಷ್ಟಿರುವ ಈ ಪ್ರಯಾಣದರ ಸುಮಾರು 21,000 ರೂಪಾಯಿಗಳಿಗೆ ಇಳಿಯುತ್ತದೆ. ಹಾಗೆಯೇ ಮೆಕ್ಕಾದಲ್ಲಿ ವಸತಿ ಇತ್ಯಾದಿಗಳಿಗಾಗಿ ರಿಯಲ್ ಎಸ್ಟೇಟ್ ಏಜೆಂಟರ ಮೂಲಕ ಹಜ್ ಸಮಿತಿ ವ್ಯವಹರಿಸುವ ಬದಲಿಗೆ ಸರ್ಕಾರದ ಮೂಲಕ ಸೌದಿ ಸರ್ಕಾರದೊಂದಿಗೆ ವ್ಯವಹರಿಸಿದರೆ ಈಗಿರುವ ಒಟ್ಟು ಹಜ್ ಯಾತ್ರೆಯ ಖರ್ಚು ಕಡಿಮೆಯಾಗುತ್ತದೆ. ಇಂಡೋನೇಷಿಯಾದಂಥ ದೇಶಗಳು ಈಗಾಗಲೇ ಇದನ್ನು ಮಾಡಿ ತೋರಿಸಿವೆ. ಆದರೆ ಹಜ್ ಸಮಿತಿ ಎಂಬುದು ರಾಜಕೀಯ ನೇಮಕಾತಿಗಳ ಮೂಲಕ ನಡೆಯುವ ವ್ಯವಸ್ಥೆಯಾಗಿರುವುದರಿಂದ ಇಲ್ಲಿ ವ್ಯಾವಹಾರಿಕ ಆಸಕ್ತಿಗಳಿಗಿಂತ ಆಡಳಿತಾರೂಢರ ಇಷ್ಟಾನಿಷ್ಟಗಳೇ ಮುಖ್ಯವಾಗುತ್ತಿವೆ. ಹಜ್ ಯಾತ್ರೆಯ ವಿಷಯವನ್ನು ಯಾತ್ರಿಕರಿಗೆ ಬಿಟ್ಟು ಕೊಟ್ಟು ಸರ್ಕಾರ ಕೇವಲ ವ್ಯವಸ್ಥೆ ಪಾರದರ್ಶಕವಾಗಿದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳುವುದಕ್ಕೆ ಸೀಮಿತವಾಗಿ ಉಳಿದರೆ ಹಜ್ ಯಾತ್ರೆ ಈಗಿನದ್ದಕ್ಕಿಂತ ಹೆಚ್ಚು ಅಗ್ಗವಾಗುವುದರಲ್ಲಿ ಸಂಶಯವಿಲ್ಲ.

ಉನ್ನತ ಶಿಕ್ಷಣ: ಸುಧಾರಣೆಗೆ ಮಂತ್ರದಂಡವಿಲ್ಲ

ಉನ್ನತ ಶಿಕ್ಷಣವೆಂದರೆ  ಜ್ಞಾನದ ಸೃಷ್ಟಿಗೆ ಬೇಕಾದ ತರಬೇತಿಯೇ, ಕೌಶಲ್ಯ ವೃದ್ಧಿಯೇ? ಈ ಪ್ರಶ್ನೆಗೆ ಭಾರತೀಯ ಸಂದರ್ಭದಲ್ಲಿ ಒಂದು ಸ್ಪಷ್ಟ ಉತ್ತರವಿಲ್ಲ. ಉನ್ನತ ಶಿಕ್ಷಣದ ವ್ಯಾಪ್ತಿಯಲ್ಲಿ ಬರುವ ತಾಂತ್ರಿಕ, ವೈದ್ಯಕೀಯ ಮತ್ತು ಮ್ಯಾನೇಜ್‌ಮೆಂಟ್ ಕೋರ್ಸ್‌ಗಳು ಕೌಶಲ್ಯ ವೃದ್ಧಿಯನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡಿವೆ. ಮಾನವಿಕ ವಿಭಾಗಗಳನ್ನು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಇನ್ನೂ ಜೀವಂತವಾಗಿಟ್ಟುಕೊಂಡಿರುವ ಸಾಮಾನ್ಯ ಪದವಿ ವಿಷಯಗಳಲ್ಲಿ ಇತ್ತ ಕೌಶಲ್ಯ ವೃದ್ಧಿಗೆ ಬೇಕಾದ ಅಂಶಗಳೂ ಇಲ್ಲ. ಅತ್ತ ಜ್ಞಾನದ ಸೃಷ್ಟಿಗೆ ಅಗತ್ಯವಿರುವ ಮೂಲಭೂತ ಪಠ್ಯಗಳ ಕಲಿಕೆಯೂ ಇಲ್ಲ.

ಇದೇನು ರಾತ್ರಿ ಬೆಳಗಾಗುವುದರೊಳಗೆ ಉದ್ಭವಿಸಿದ ಸಮಸ್ಯೆಯಲ್ಲ. ಇದಕ್ಕೆ ಅರವತ್ತು ವರ್ಷಗಳ ಇತಿಹಾಸವಿದೆ. ಬೆರಳೆಣಿಕೆಯ ‘ಉತ್ಕೃಷ್ಟತೆಯ ದ್ವೀಪ’ಗಳನ್ನು ಹೊರತು ಪಡಿಸಿದರೆ ನಮಗಿರುವುದು ಹಿಂದುಳಿಯುವಿಕೆಯ ಇತಿಹಾಸ ಮಾತ್ರ. ಅರವತ್ತು ಎಪ್ಪತ್ತರ ದಶಕದಲ್ಲಿ ದೇಶದ ಒಟ್ಟು ಸಂಶೋಧನೆಯ ಶೇಕಡಾ 50ಕ್ಕಿಂತಲೂ ಹೆಚ್ಚು ಪಾಲನ್ನು ನೀಡುತ್ತಿದ್ದ ವಿಶ್ವವಿದ್ಯಾಲಯಗಳೀಗ ಒಂದಂಕೆಯ ಪಾಲಿಗೆ ಸೀಮಿತಗೊಂಡಿವೆ. ಕಳೆದ ಅರವತ್ತು ವರ್ಷಗಳಲ್ಲಿ ಉತ್ಕೃಷ್ಟ ಸ್ಥಿತಿಯಿಂದ ಶೂನ್ಯದ ಮಟ್ಟಕ್ಕೆ ಇಳಿದ ವಿವಿಗಳ ಉದಾಹರಣೆ ಸಿಗುತ್ತದೆಯೇ ಹೊರತು ಶೂನ್ಯದ ಮಟ್ಟದಿಂದ ಉತ್ಕೃಷ್ಟತೆಗೇರಿದ ಒಂದೇ ಒಂದು ವಿವಿಯ ಉದಾಹರಣೆಯೂ ನಮ್ಮ ಮುಂದಿಲ್ಲ.

2006ರಲ್ಲಿ ಜ್ಞಾನ ಆಯೋಗ ನೀಡಿದ ವರದಿ, 2009ರಲ್ಲಿ ಯಶಪಾಲ್ ಸಮಿತಿ ನೀಡಿದ ವರದಿಗಳು ಭಾರತೀಯ ಉನ್ನತ ಶಿಕ್ಷಣದ ಈ ದುರವಸ್ಥೆಯ ಕಾರಣಗಳನ್ನು ಪಟ್ಟಿ ಮಾಡಿವೆ. ಉನ್ನತ ಶಿಕ್ಷಣ ಕ್ಷೇತ್ರವನ್ನು ಸುಧಾರಿಸಲು ಎರಡೂ ವರದಿಗಳು ಹಲವು ಸಲಹೆಗಳನ್ನು ನೀಡಿವೆ. ಸರ್ಕಾರ ಈ ಎಲ್ಲಾ ಸಲಹೆಗಳನ್ನು ಸಮಗ್ರವಾಗಿ ಗ್ರಹಿಸಿ ಒಂದು ಕಾರ್ಯಯೋಜನೆಯನ್ನು ರೂಪಿಸುವ ಬದಲಿಗೆ ಉನ್ನತ ಶಿಕ್ಷಣವನ್ನು ಸುಧಾರಿಸುವ ಮಂತ್ರದಂಡವೊಂದನ್ನು ಶೋಧಿಸಲು ಹೊರಟಿದೆ. ಅದರ ಭಾಗವಾಗಿ ಕಾಲೇಜುಗಳು ಮತ್ತು ವಿವಿಗಳ ಸಂಖ್ಯೆಯನ್ನು ಹೆಚ್ಚಿಸುವ, ಇಡೀ ಉನ್ನತ ಶಿಕ್ಷಣ ಕ್ಷೇತ್ರದ ಕೇಂದ್ರೀಕೃತ ನಿಯಂತ್ರಣಕ್ಕೆ ಅಗತ್ಯವಿರುವ ಕ್ರಮಗಳಿಗೆ ಮುಂದಾಗಿದೆ. ಇದರ ಭಾಗವಾಗಿ ಈಗ ಇರುವ 480 ವಿವಿಗಳು ಮತ್ತು 22,000 ಕಾಲೇಜುಗಳ ಜೊತೆಗೆ ಇನ್ನು ಹತ್ತು ವರ್ಷಗಳಲ್ಲಿ 800 ಹೊಸ ವಿವಿಗಳು ಮತ್ತು 35,000 ಕಾಲೇಜುಗಳನ್ನು ತೆರೆಯಲು ತೀರ್ಮಾನಿಸಲಾಗಿದೆ. ಜೊತೆಗೆ ಉನ್ನತ ಶಿಕ್ಷಣ ಕ್ಷೇತ್ರವನ್ನು ಕೇಂದ್ರೀಕೃತ ನಿಯಂತ್ರಣಕ್ಕಾಗಿ ಮಸೂದೆಯ ಕರಡೊಂದನ್ನು ಸಿದ್ಧಪಡಿಸಿದೆ.

ಕಾಲೇಜುಗಳು ಮತ್ತು ವಿವಿಗಳ  ಸಂಖ್ಯೆಯ ಹೆಚ್ಚಳಕ್ಕೆ ಸರ್ಕಾರ ನೀಡುತ್ತಿರುವ ಕಾರಣ ಉನ್ನತ ಶಿಕ್ಷಣದ ಅವಕಾಶಗಳನ್ನು ಹೆಚ್ಚಿಸುವುದು. ಈಗಿರುವ ಕಾಲೇಜುಗಳು ಮತ್ತು ವಿವಿಗಳು  ಉನ್ನತ ಶಿಕ್ಷಣದ ಅರ್ಹತೆ ಪಡೆದಿರುವ ಶೇಕಡಾ 12.4ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸುತ್ತಿದೆ. ಕಾಲೇಜುಗಳು ಮತ್ತು ವಿವಿಗಳ ಸಂಖ್ಯೆಯನ್ನು ಹೆಚ್ಚಿಸುವುದರ ಮೂಲಕ ಈ ಪ್ರಮಾಣವನ್ನು ಶೇಕಡಾ 40ಕ್ಕೆ ಏರಿಸಬಹುದೆಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಕಪಿಲ್ ಸಿಬಲ್ ಹೇಳುತ್ತಿದ್ದಾರೆ.

ನೆರೆಯ ಚೀನಾದಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸುವ ಶೇಕಡಾ 15ರಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತಾರೆ. ಅಭಿವೃದ್ಧಿ ಹೊಂದಿದ ಯೂರೋಪ್ ಮತ್ತು ಅಮೆರಿಕದಲ್ಲಿ ಈ ಪ್ರಮಾಣ ಶೇಕಡಾ 50ರಷ್ಟಿದೆ. ಈ ಹೋಲಿಕೆಗಳನ್ನು ಮುಂದಿಟ್ಟುಕೊಂಡರೆ ಕಾಲೇಜುಗಳು ಮತ್ತು ವಿವಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಸರಿ. ಆದರೆ ಇದಕ್ಕೆ ಅನುಸರಿಸಬೇಕಾದ ಮಾರ್ಗ ಯಾವುದು? ಈ ಹೆಚ್ಚಳ ಭಾರತೀಯ ಉನ್ನತ ಶಿಕ್ಷಣ ಕ್ಷೇತ್ರ ಈಗ ಎದುರಿಸುತ್ತಿರುವ ಜ್ಞಾನ ಸೃಷ್ಟಿಯ ತರಬೇತಿ ಮತ್ತು ಕೌಶಲ್ಯ ವೃದ್ಧಿಯ ದ್ವಂದ್ವವನ್ನು ಹೇಗೆ ಪರಿಹರಿಸುತ್ತದೆ ಎಂಬ ಪ್ರಶ್ನೆಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರ ಚಿಂತನೆಗಳಲ್ಲಿ ಉತ್ತರ ಸಿಗುವುದಿಲ್ಲ.

ಉನ್ನತ ಶಿಕ್ಷಣದ ಅವಕಾಶಗಳನ್ನು ಹೆಚ್ಚಿಸುವ ಪ್ರಕ್ರಿಯೆಯಲ್ಲಿ ಅವಕಾಶವನ್ನು ನಿರೀಕ್ಷಿಸುತ್ತಿರುವವರು ಯಾರು ಮತ್ತು ಯಾವ ಬಗೆಯ ಅವಕಾಶಗಳ ನಿರೀಕ್ಷೆ ಅವರಿಗಿದೆ ಎಂಬುದನ್ನು ಸರ್ಕಾರ ಮರೆತಿರುವಂತೆ ಕಾಣಿಸುತ್ತಿದೆ. ನಮ್ಮಲ್ಲಿ  ಉನ್ನತ ಶಿಕ್ಷಣದ ಅವಕಾಶದ ಕೊರತೆಗೆ ಹಲವು ಮುಖಗಳಿವೆ. ಹಣವಿರುವವರು ತಮಗೆ ಬೇಕಿರುವ ಶಿಕ್ಷಣಕ್ಕಾಗಿ ಮ್ಯಾನೇಜ್‌ಮೆಂಟ್ ಸೀಟುಗಳನ್ನು ಪಡೆಯುತ್ತಾರೆ. ಇನ್ನೂ ಹೆಚ್ಚು ಹಣವಿರುವವರು ವಿದೇಶಗಳಿಗೆ ಹೋಗುತ್ತಾರೆ. ಮೆರಿಟ್ ಮಾರುಕಟ್ಟೆಯನ್ನು ಗೆಲ್ಲಬಲ್ಲವರಿಗೆ ಐಐಟಿ, ಐಐಎಂ, ಕೇಂದ್ರೀಯ ವಿಶ್ವವಿದ್ಯಾಲಯಗಳಿವೆ. ಈ ಎರಡನ್ನೂ ಸಾಧಿಸಲಾಗದ ಮಧ್ಯಮ ಮಟ್ಟದವರಿಗೆ ಏನೂ ಇಲ್ಲ. ಅವರಿಗಿರುವುದು ಹೆಚ್ಚುಕಡಿಮೆ ಅಪ್ರಸ್ತುತವಾಗಿರುವ ನಮ್ಮ ವಿಶ್ವವಿದ್ಯಾಲಯಗಳ ಉನ್ನತ ಶಿಕ್ಷಣ ಮಾತ್ರ! ಇದು ಜ್ಞಾನ ಸೃಷ್ಟಿಯ ತರಬೇತಿಯೂ ಅಲ್ಲ. ಕೌಶಲ್ಯ ವೃದ್ಧಿಯೂ ಅಲ್ಲ.

ಈ ವಿಷಯದಲ್ಲಿ ಚೀನಾದ ಉದಾಹರಣೆ ಹೆಚ್ಚು ಪ್ರಸ್ತುತವಾಗುತ್ತದೆ. ಇಲ್ಲಿರುವ ಒಟ್ಟು ವಿದ್ಯಾರ್ಥಿಗಳಲ್ಲಿ ಶೇಕಡಾ 15ರಷ್ಟು ಮಂದಿ ಅಂದರೆ ಭಾರತಕ್ಕಿಂತ ಶೇಕಡಾ 2.6ರಷ್ಟು ಹೆಚ್ಚು ವಿದ್ಯಾಥಿಗಳು ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಾರೆ. ಆದರೆ ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಅವರ ಪಾಲು ಭಾರತಕ್ಕಿಂತ ಬಹಳ ದೊಡ್ಡದು. ಚೀನಾ ಉನ್ನತ ಶಿಕ್ಷಣವನ್ನು ಕೌಶಲ್ಯ ವೃದ್ಧಿಯ ಕ್ಷೇತ್ರದಿಂದ ಹೊರಗಿಟ್ಟು ಜ್ಞಾನ ಸೃಷ್ಟಿಯ ಅಗತ್ಯಕ್ಕೆ ಬೇಕಿರುವ ತರಬೇತಿಯ ಕ್ಷೇತ್ರವನ್ನಾಗಿ ಬೆಳೆಸಿದೆ. ಪರಿಣಾಮವಾಗಿ ವೃತ್ತಿ ಕೌಶಲ್ಯವನ್ನಷ್ಟೇ ನಿರೀಕ್ಷಿಸುವವರಿಗೆ ಬೇಕಿರುವ ಶಿಕ್ಷಣ ಕ್ಷೇತ್ರವೂ ಅಲ್ಲಿ ಬೆಳೆದಿದೆ. ಪರಿಣಾಮವಾಗಿ ಜ್ಞಾನಾಧಾರಿತ ಮಾರುಕಟ್ಟೆ ಮತ್ತು ಕೌಶಲ್ಯಾಧಾರಿತ ಉತ್ಪಾದನಾ ಕ್ಷೇತ್ರಗಳೆರಡರ ಮಧ್ಯೆ ಒಂದು ಸಮತೋಲನ ಸಾಧ್ಯವಾಗಿದೆ. ಉನ್ನತ ಶಿಕ್ಷಣದ ಸುಧಾರಣೆಗೆ ಹೊರಟಿರುವ ಕೇಂದ್ರ ಸರ್ಕಾರ ಈ ಬಗೆಯ ಸಮತೋಲನದ ಬಗ್ಗೆ ಏನನ್ನೂ ಹೇಳುತ್ತಿಲ್ಲ. ಬದಲಿಗೆ ಈಗಿನ ಸ್ಥಿತಿಯನ್ನೇ ಮತ್ತಷ್ಟು ವಿಸ್ತರಿಸುವ ದಾರಿಯಲ್ಲಿ ಸಾಗುತ್ತಿದೆ.

ನಮ್ಮ ಶಿಕ್ಷಣ ನೀತಿಯನ್ನು ರೂಪಿಸುವ ಕ್ರಿಯೆಯಲ್ಲಿ ಯಾವತ್ತೂ ಕಾಡುವ ಸಮಸ್ಯೆಯೆಂದರೆ ‘ಸಂಭವನೀಯ ದುರ್ಬಳಕೆಯನ್ನು ತಡೆಯಲು ಬೇಕಾದ ಕ್ರಮ’ದ ಹೆಸರಿನಲ್ಲಿ ನುಸುಳುವ ಆಡಳಿತಶಾಹಿ ಮನೋಭಾವ. ಹೊಸ ಕರಡು ಮಸೂದೆಯಲ್ಲೂ ಇದು ವ್ಯಾಪಕವಾಗಿ ನುಸುಳಿದೆ. ರಾಜ್ಯ ಸರ್ಕಾರಗಳ ಅಧೀನದಲ್ಲಿರುವ ವಿವಿಗಳ ನೇಮಕಾತಿಗಳನ್ನೂ ಹೊಸ ರಾಷ್ಟ್ರೀಯ ಆಯೋಗದ ಪರಿಧಿಗೇ ತರುವುದೂ ಸೇರಿದಂತೆ ಅನೇಕ ಅಂಶಗಳು ಈ ಮಸೂದೆಯಲ್ಲಿದೆ.

ಇದು ಕೇಂದ್ರ-ರಾಜ್ಯ ಸಂಬಂಧಗಳ ಕುರಿತಂತೆ ಒಂದು ವಿವಾದವನ್ನು ಹುಟ್ಟು ಹಾಕುವ ಮಟ್ಟದಲ್ಲಿವೆ. ಇದೇ ವೇಳೆ ಶೈಕ್ಷಣಿಕ ಗುಣಮಟ್ಟವನ್ನು ಖಾತರಿ ಪಡಿಸಿಕೊಳ್ಳುವ ಕ್ರಮಗಳ ಕುರಿತಂತೆ ಮಸೂದೆ ಯಾವುದೇ ಸ್ಪಷ್ಟ ನೀತಿಗಳನ್ನು ಹೊಂದಿಲ್ಲ.

ಉನ್ನತ ಶಿಕ್ಷಣದ ಸುಧಾರಣೆಗಾಗಿ ಸರ್ಕಾರ ಬಳಸಲು ಹೊರಟಿರುವ ಮಂತ್ರದಂಡದಿಂದ ಮತ್ತಷ್ಟು ವಿಶ್ವವಿದ್ಯಾಲಯಗಳು ಮತ್ತು ಅಂಥದ್ದೇ  ಹೊಸ ಕಾಲೇಜುಗಳ ಸ್ಥಾಪನೆಯಲ್ಲಿ ಅಂತ್ಯವಾಗುವಂತಿದೆ. ಇವುಗಳಲ್ಲಿ ಖಾಸಗಿ ಮತ್ತು ವಿದೇಶಿ ವಿವಿಗಳ ಪಾಲೇ ಹೆಚ್ಚಿರುವುದರಿಂದ ಅವಕಾಶದ ಸಮಸ್ಯೆಯನ್ನೇನು ಬಗೆಹರಿಸುವಂತೆ ಕಾಣಿಸುವುದಿಲ್ಲ. ಇನ್ನು ಕೇಂದ್ರೀಕೃತ ನಿಯಂತ್ರಣ ವ್ಯವಸ್ಥೆ ಜ್ಞಾನ ಸೃಷ್ಟಿ ಮತ್ತು ಕೌಶಲ್ಯ ವೃದ್ಧಿಯ ಗೊಂದಲವನ್ನು ಪರಿಹರಿಸದೇ ಇರುವುದರಿಂದ ಈಗಿರುವ ಸಮಸ್ಯೆಯನ್ನು ಮತ್ತಷ್ಟು ದೊಡ್ಡದೂ ಸಂಕೀರ್ಣವೂ ಆಗುವಂತೆ ಮಾಡಬಹುದಷ್ಟೇ

(ಪ್ರಜಾವಾಣಿ ಪತ್ರಿಕೆಯ ಅಂತರಾಳ ಪುಟದಲ್ಲಿ ಪ್ರಕಟವಾದ ಲೇಖನ)